
ಸಾಂದರ್ಭಿಕ ಚಿತ್ರ
ಸಣ್ಣ ವ್ಯಾಪರಿಗಳಿಗೆ ಜಿಎಸ್‌ಟಿ ನೋಟಿಸ್, ಬಿಜೆಪಿಯಿಂದ ಸಹಾಯವಾಣಿ ಬಿಡುಗಡೆ
ಕಾಂಡಿಮೆಂಟ್ಸ್, ಕಾಫಿ-ಟೀ ಅಂಗಡಿ ವ್ಯಾಪಾರಿಗಳಿಗೆ ಜಿಎಸ್‌ಟಿ ನೋಟಿಸ್ ಜಾರಿ ಮಾಡಿದ್ದು ಮಾಲೀಕರಲ್ಲಿ ಭಯ ಹಾಗೂ ಗೊಂದಲದ ವಾತಾವರಣ ಸೃಷ್ಠಿಯಾಗಿರುವುದರಿಂದ ನಿಮ್ಮೊಂದಿಗೆ ನಾವಿದ್ದೇವೆ ಎಂದು ರಾಜ್ಯ ಬಿಜೆಪಿ ತಿಳಿಸಿದೆ.
ಜಿಎಸ್‌ಟಿ ನೋಂದಾಯಿಸದೆ ಯುಪಿಐ ಮೂಲಕ 40 ಲಕ್ಷ ರೂ. ಗಿಂತ ಹೆಚ್ಚು ಹಣ ವರ್ಗಾವಣೆ ಮಾಡಿರುವ ಬೆಂಗಳೂರಿನ ಸಣ್ಣ ವ್ಯಾಪಾರಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ನೀಡಿದ್ದು ದಂಡ ಪಾವತಿಸುವಂತೆ ಸೂಚಿಸಿದೆ. ಈ ವಿಚಾರ ಇದೀಗ ರಾಜಕೀಯ ತಿರುವು ಪಡೆದಿದ್ದು ನೋಟಿಸ್ ಪಡೆದಿರುವ ಮಾಲೀಕರ ಹಿತರಕ್ಷಣೆಗಾಗಿ ಬಿಜೆಪಿ ಸಹಾಯವಾಣಿ ಬಿಡುಗಡೆ ಮಾಡಿದೆ.
ಬೇಕರಿ, ಕಾಂಡಿಮೆಂಟ್ಸ್, ಕಾಫಿ-ಟೀ ಅಂಗಡಿಗಳು, ಹೂವಿನ ವ್ಯಾಪಾರಿಗಳಿಗೆ ನೋಟಿಸ್ ಜಾರಿ ಮಾಡಿರುವುದರಿಂದ ಮಾಲೀಕರಲ್ಲಿ ಭಯ ಹಾಗೂ ಗೊಂದಲದ ವಾತಾವರಣ ಸೃಷ್ಟಿಯಾಗಿದ್ದು, ನಿಮ್ಮೊಂದಿಗೆ ನಾವಿದ್ದೇವೆ ಎಂದು ರಾಜ್ಯ ಬಿಜೆಪಿ ತಿಳಿಸಿದೆ.
ರಾಜ್ಯದಲ್ಲಿ ಅಭಿವೃದ್ಧಿ ಕೆಲಸವಾಗುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕರೇ ಬಹಿರಂಗವಾಗಿ ತಿಳಿಸಿದ್ದಾರೆ. ಸರ್ಕಾರದ ಬೊಕ್ಕಸ ಬರಿದಾಗಿರುವುದರಿಂದ ಆದಾಯ ಕ್ರೂಢೀಕರಣ ಮಾಡಲು ವಾಣಿಜ್ಯ ತೆರಿಗೆ ಇಲಾಖೆ ಮೂಲಕ ಸಣ್ಣ ವ್ಯಾಪಾರಿಗಳಿಗೆ ನೋಟಿಸ್ ನೀಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪ ಮಾಡಿದ್ದಾರೆ.
ಸಣ್ಣ ವ್ಯಾಪಾರಿಗಳಿಗೆ ನೋಟಿಸ್ ನೀಡಿದನ್ನು ವಿರೋಧಿಸಿ ಇತ್ತೀಚೆಗೆ ಅಂಗಡಿ ಮಾಲೀಕರು ಸಭೆ ನಡೆಸಿದ್ದರು. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ವಾಣಿಜ್ಯ ತೆರಿಗೆ ಇಲಾಖೆ ನೀಡಿರುವ ನೋಟಿಸ್ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಅಂಗಡಿಗಳನ್ನು ಬಂದ್ ಮಾಡಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಹೋರಾಟ ನಡೆಸಲಾಗುವುದು ಎಂದು ತಿಳಿಸಿದ್ದರು.
ವಾಣಿಜ್ಯ ತೆರಿಗೆ ಇಲಾಖೆಯಿಂದ ಸ್ಪಷ್ಟನೆ
ಹಲವಾರು ಮಂದಿ ಜಿಎಸ್‌ಟಿ ನೋಂದಣಿ ಮಾಡಿಕೊಳ್ಳದೆ ಯುಪಿಐ ಮೂಲಕವೇ ಮಿತಿ ಮೀರಿ ಲಕ್ಷಾಂತರ ರೂಪಾಯಿ ಸ್ವೀಕರಿಸಿರುವುದು ಪರಿಶೀಲನೆ ವೇಳೆ ಕಂಡು ಬಂದಿದೆ. ಸ್ವೀಕರಿಸಿರುವ ಮೊತ್ತದ ಕುರಿತು ವ್ಯಾಪಾರಿಗಳು ಸೂಕ್ತ ವಿವರಣೆ ನೀಡಿದಲ್ಲಿ ಜಿಎಸ್‌ಟಿ ಮೊತ್ತ ಕಡಿಮೆಯಾಗಲಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ತಿಳಿಸಿದೆ.