
ಸಾಂದರ್ಭಿಕ ಚಿತ್ರ
ಜಿಎಸ್‌ಟಿ ನೋಟಿಸ್ ಬರೆ: ವ್ಯಾಪಾರಿಗಳಿಂದ 'ನೋ ಯುಪಿಐ' ಪ್ರತಿಭಟನೆ, ಗ್ರಾಹಕರಿಗೆ ನಗದು ಸಂಕಷ್ಟ
ಮಾರುಕಟ್ಟೆಗೆ ಯುಪಿಐ ನಂಬಿಕೊಂಡು ಬಂದ ಗ್ರಾಹಕರು ಬೇರೆ ಬೇರೆ ಅಂಗಡಿಗಳಿಗೆ ಹೋಗಬೇಕಾಯಿತು. ಕಾರ್ಡ್ ತಂದವರು ಎಟಿಎಂನಲ್ಲಿ ಹಣ ಡ್ರಾ ಮಾಡಿ ನಂತರ ವ್ಯಾಪಾರ ಮಾಡುವಂತಾಯಿತು.
ವಾಣಿಜ್ಯ ತೆರಿಗೆ ಇಲಾಖೆ ಜಾರಿಗೊಳಿಸಿರುವ ಜಿಎಸ್‌ಟಿ ನೋಟಿಸ್‌ಗಳನ್ನು ವಿರೋಧಿಸಿ ನಗರದ ಸಣ್ಣ ವ್ಯಾಪಾರಿಗಳು ಅಭಿನವ ಪ್ರತಿಭಟನೆಗೆ ಮುಂದಾಗಿದ್ದಾರೆ. ಫೋನ್ ಪೇ, ಪೇಟಿಎಂನಂತಹ ಯುಪಿಐ ಪಾವತಿಗಳನ್ನು ಸ್ಥಗಿತಗೊಳಿಸಿ, 'ಕೇವಲ ನಗದು' ವ್ಯವಹಾರಕ್ಕೆ ಮೊರೆ ಹೋಗಿದ್ದಾರೆ. ಸರ್ಕಾರದ ಈ ಕ್ರಮವನ್ನು ಹಿಂಪಡೆಯುವವರೆಗೂ ಡಿಜಿಟಲ್ ಪಾವತಿ ಸ್ವೀಕರಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದು, ಯುಪಿಐ ಅನ್ನೇ ನಂಬಿ ಮಾರುಕಟ್ಟೆಗೆ ಬರುವ ಗ್ರಾಹಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹೋರಾಟಕ್ಕೆ ಕಾರಣವೇನು?
ಜಿಎಸ್‌ಟಿ ನೋಂದಣಿ ಮಾಡಿಕೊಳ್ಳದೆ, ವರ್ಷದಲ್ಲಿ ₹40 ಲಕ್ಷಕ್ಕೂ ಅಧಿಕ ವಹಿವಾಟು ನಡೆಸಿರುವ ಸಾವಿರಾರು ಸಣ್ಣ ವ್ಯಾಪಾರಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ. ಹೂವಿನ ವ್ಯಾಪಾರಿಗಳು, ಬೇಕರಿ, ಕಾಂಡಿಮೆಂಟ್ಸ್ ಮಾಲೀಕರು ಸೇರಿದಂತೆ ಹಲವರಿಗೆ ನೋಟಿಸ್ ತಲುಪಿದೆ. ಹಿಂದಿನ ವರ್ಷಗಳ ಒಟ್ಟು ವಹಿವಾಟಿನ ಮೇಲೆ ಶೇ.1ರಷ್ಟು ದಂಡ ಪಾವತಿಸಿ, ತಕ್ಷಣ ಜಿಎಸ್‌ಟಿ ನೋಂದಣಿ ಮಾಡಿಕೊಳ್ಳುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ.
ವ್ಯಾಪಾರಿಗಳ ಆಕ್ರೋಶ, ಹೋರಾಟದ ಹಾದಿ
ಈ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ವ್ಯಾಪಾರಿಗಳು, 'ಕಳೆದ ಕೆಲ ವರ್ಷಗಳಿಂದ ವ್ಯಾಪಾರದಲ್ಲಿ ಲಾಭಾಂಶವೇ ಇಲ್ಲ. ಇಂತಹ ಸಂದರ್ಭದಲ್ಲಿ ದಂಡ ಪಾವತಿಸುವುದು ಅಸಾಧ್ಯ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೋಟಿಸ್ ಹಿಂಪಡೆಯುವಂತೆ ಆಗ್ರಹಿಸಿ ಹೋರಾಟ ತೀವ್ರಗೊಳಿಸಲು ನಿರ್ಧರಿಸಿದ್ದು, ಜು. 23 ಮತ್ತು 24ರಂದು ಬೇಕರಿ ಮತ್ತು ಕಾಂಡಿಮೆಂಟ್ಸ್‌ಗಳಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಸ್ಥಗಿತಗೊಳಿಸಿ ಕಪ್ಪುಪಟ್ಟಿ ಧರಿಸಿ ಪ್ರತಿಭಟಿಸಲಿದ್ದಾರೆ. ಜು. 25ರಂದು ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ರಾಜಕೀಯ ತಿರುವು
ಈ ಮಧ್ಯೆ, ವ್ಯಾಪಾರಿಗಳ ಈ ಹೋರಾಟ ರಾಜಕೀಯ ತಿರುವು ಪಡೆದುಕೊಂಡಿದೆ. ರಾಜ್ಯ ಬಿಜೆಪಿ, ವರ್ತಕರಿಗೆ ಬೆಂಬಲ ಘೋಷಿಸಿದ್ದು, ಅವರಲ್ಲಿನ ಗೊಂದಲ ನಿವಾರಿಸಲು 'ಸಹಾಯವಾಣಿ'ಯನ್ನು ಆರಂಭಿಸಿದೆ. ಇದು ಬಡ ವ್ಯಾಪಾರಿಗಳ ಮೇಲೆ ಸರ್ಕಾರ ನಡೆಸುತ್ತಿರುವ ದಬ್ಬಾಳಿಕೆ ಎಂದು ಬಿಜೆಪಿ ಆರೋಪಿಸಿದೆ.