ರೈತನ ಮೇಲೆ ಮಲ್ಲಿಕಾರ್ಜುನ ಖರ್ಗೆ ಸಿಡಿಮಿಡಿ; ಸಚಿವ ಹೆಚ್‌.ಡಿ. ಕುಮಾರಸ್ವಾಮಿ ಟೀಕೆ

"ನಷ್ಟ ಭರಿಸುವ ಶಕ್ತಿ ನಿಮಗಿರುತ್ತದೆ. ರೈತನಿಗೆ ಆ ಶಕ್ತಿ ಇರಬೇಕಲ್ಲವೇ? ನೀವು ರಾಜ್ಯಸಭೆ ಪ್ರತಿಪಕ್ಷ ನಾಯಕರು ಹಾಗೂ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷರು. ಇದೆಲ್ಲವನ್ನೂ ಮರೆತು ಮಾತನಾಡಿದ್ದೀರಿ! ಇದು ತಮಗೆ ಭೂಷಣವಲ್ಲ" ಎಂದು ಹೆಚ್‌ಡಿಕೆ ಟೀಕಿಸಿದ್ದಾರೆ.;

Update: 2025-09-08 05:56 GMT

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ

Click the Play button to listen to article

ಬೆಳೆ ನಷ್ಟವಾಗಿರುವ ಕುರಿತು ದುಃಖ ತೋಡಿಕೊಳ್ಳಲು ಬಂದ ರೈತನ ಮೇಲೆ ದರ್ಪ ತೋರಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವರ್ತನೆಗೆ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

"ದುಃಖ ಹೇಳಿಕೊಳ್ಳಲು ಬಂದ ರೈತನ ಮೇಲೆ ಈ ಪರಿಯ ದರ್ಪ ಅಗತ್ಯವಿರಲಿಲ್ಲ. ನೀವೂ ತೊಗರಿ ರೈತರೇ ಆಗಿರಬಹುದು. ಆದರೆ, 40 ಎಕರೆಯಲ್ಲಿ ಬೆಳೆಯುವ ತಮಗೂ, ಎರಡು ಎಕರೆಯಲ್ಲಿ ಬೆಳೆಯುವ ಬಡ ರೈತನಿಗೂ ಹೋಲಿಕೆಯೇ? ಎಂದು ಮಲ್ಲಿಕಾರ್ಜುನ ಖರ್ಗೆ ನಡೆಯನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಟೀಕಿಸಿದ್ದಾರೆ.

ರೈತರ ಬಗ್ಗೆ ನಿಮ್ಮ ನಡವಳಿಕೆ ಕಂಡು ಬಹಳ ಬೇಸರವಾಯಿತು. ನಿಮ್ಮಂತಹ ಹಿರಿಯರಿಂದ ಇಂಥ ವರ್ತನೆ ಖಂಡಿತ ನಿರೀಕ್ಷೆ ಮಾಡಿರಲಿಲ್ಲ. ಕಷ್ಟದಲ್ಲಿರುವ ರೈತರು ನಿಮ್ಮಂಥವರ ಬಳಿ ಬಂದು ದುಃಖ ತೋಡಿಕೊಳ್ಳದೇ ಇನ್ಯಾರ ಬಳಿ ಹೋಗಿ ಹೇಳಿಕೊಳ್ಳಬೇಕು ಎಂದು ಪ್ರಶ್ನಿಸಿದ್ದಾರೆ.

ನಷ್ಟವನ್ನು ಭರಿಸುವ ಶಕ್ತಿ ನಿಮಗಿರುತ್ತದೆ, ರೈತನಿಗೆ ಆ ಶಕ್ತಿ ಇರಬೇಕಲ್ಲವೇ? ನೀವು ರಾಜ್ಯಸಭೆ ಪ್ರತಿಪಕ್ಷ ನಾಯಕರು ಹಾಗೂ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷರು. ಇದೆಲ್ಲವನ್ನೂ ತಾವು ಮರೆತು ಮಾತನಾಡಿದ್ದೀರಿ!, ಇದು ತಮಗೆ ಭೂಷಣವಲ್ಲ. "ನಿನ್ನದು 4 ಎಕ್ರೆ ಹಾಳಾಗಿದೆ. ನನ್ನದು 40 ಎಕ್ರೆ ಹಾಳಾಗಿದೆ. ಪ್ರಚಾರಕ್ಕಾಗಿ ತೊಗರಿ ತೆಗೆದುಕೊಂಡು ಬಂದ್ದಿದ್ದೀಯ? ತೊಗರಿ ಅಷ್ಟೆ ಅಲ್ಲ; ಉದ್ದು, ಹೆಸರು ಕೂಡ ಹಾಳಾಗಿರುವುದು ನನಗೆ ಗೊತ್ತಿದೆ. ಆರು ಹಡೆದವಳ ಮುಂದೆ ಮೂರು ಹಡೆದವಳು ಹೇಳಿದಂತಾಯಿತು" ಎಂಬ ಮಾತು ಶೋಭೆ ತರುವಂತದಲ್ಲ ಎಂದಿದ್ದಾರೆ.

ರೈತನನ್ನು ಅಪಮಾನಿಸಿದ್ದೀರಿ. ಜತೆಗೆ, ತಾಯಿಯನ್ನು ಅಪಮಾನಿಸಿದ್ದೀರಿ! ಇದು ಸರಿಯಲ್ಲ.ಕೊನೇ ಪಕ್ಷ ಆ ವ್ಯಕ್ತಿಗೆ ಸಾಂತ್ವನ ಹೇಳಿ, ಆತನ ಕಣ್ಣೀರು ಒರೆಸಬಹುದಿತ್ತು. ನಿಮ್ಮ ನಡವಳಿಕೆ ಅಖಿಲ ಭಾರತ ಕಾಂಗ್ರೆಸ್‌ ಪಕ್ಷದ ಪರಂಪರಾಗತ ದರ್ಪ, ಅಹಂಗೆ ಸಾಕ್ಷಿಯಾಗಿದೆ ಎಂದು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

Tags:    

Similar News