ದ್ವೇಷ ಭಾಷಣ ಮಾಡಿದರೆ 10 ವರ್ಷಗಳವರೆಗೆ ಸಜೆ, 1 ಲಕ್ಷ ರೂ. ದಂಡ !
ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ವಿರುದ್ಧ ಹಗೆತನ, ದ್ವೇಷ, ಕೆಡುಕಿನ ಭಾವನೆ ಮೂಡಿಸಲು ಯತ್ನಿಸಿದರೆ ಕನಿಷ್ಠ ಒಂದು ವರ್ಷಕ್ಕೆ ಕಡಿಮೆ ಇಲ್ಲದಂತೆ ಏಳು ವರ್ಷದವರೆಗೆ ಕಾರಾಗೃಹ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.
ದ್ವೇಷ ಭಾಷಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಬುಧವಾರ ಬೆಳಗಾವಿ ಅಧಿವೇಶನದಲ್ಲಿ ದ್ವೇಷ ಅಪರಾಧಗಳ (ಪ್ರತಿಬಂಧಕ) ಅಧಿನಿಯಮ ಮಂಡನೆ ಮಾಡಿದೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ವಿಧೇಯಕ ಮಂಡನೆ ಮಾಡಿದರು.
ಬಿಜೆಪಿ ಸದಸ್ಯರು ದ್ವೇಷ ಭಾಷಣ ಪ್ರತಿಬಂಧಕ ವಿಧೇಯಕಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸದನದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ವಿರುದ್ಧ ಹಗೆತನ, ದ್ವೇಷ, ಕೆಡುಕಿನ ಭಾವನೆ ಮೂಡಿಸಲು ಯತ್ನಿಸಿದರೆ ಕನಿಷ್ಠ ಒಂದು ವರ್ಷಕ್ಕೆ ಕಡಿಮೆ ಇಲ್ಲದಂತೆ ಏಳು ವರ್ಷದವರೆಗೆ ಕಾರಾಗೃಹ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಅಪರಾಧವು ಪುನರಾವರ್ತನೆಯಾದರೆ ಎರಡು ವರ್ಷಗಳಿಗೆ ಕಡಿಮೆ ಇಲ್ಲದಂತೆ ಹತ್ತು ವರ್ಷದವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಲು ಅವಕಾಶ ನೀಡಲಿದೆ.
ಯಾವುದೇ ಮಾಧ್ಯಮದ ಮೂಲಕ ದ್ವೇಷ ಉತ್ತೇಜಿಸುವುದು ಅಥವಾ ಪ್ರಚಾರ ಮಾಡುವುದಕ್ಕೆ ಮಸೂದೆಯಡಿ ನಿರ್ಬಂಧ ಹೇರಲಾಗಿದೆ. ದ್ವೇಷ ಅಪರಾಧದಿಂದ ಸಂತ್ರಸ್ತರಿಗೆ ಉಂಟಾದ ಹಾನಿಯನ್ನು ಮೌಲ್ಯೀಕರಿಸಿ ನ್ಯಾಯಾಲಯವು ಪರಿಹಾರಕ್ಕೆ ಸೂಚಿಸಲಿದೆ. ಈ ಅಧಿನಿಯಮದಡಿ ದ್ವೇಷ ಅಪರಾಧವು ಜಾಮೀನು ರಹಿತವಾಗಿರಲಿದೆ. ಪ್ರಥಮ ದರ್ಜೆ ನ್ಯಾಯಿಕ ಮ್ಯಾಜಿಸ್ಟ್ರೇಟ್ ಮೂಲಕ ವಿಚಾರಣೆಗೆ ಒಳಪಡಿಸಬಹುದಾಗಿದೆ.
ಸಾಮರಸ್ಯ ಕಾಪಾಡುವ ಉದ್ದೇಶ
ದ್ವೇಷ ಅಪರಾಧಗಳ ಪ್ರತಿಬಂಧಕ ಮಸೂದೆಯು ಸಾಮಾಜಿಕ ಸಾಮರಸ್ಯ ಕಾಪಾಡುವ ಮತ್ತು ದ್ವೇಷ ಹರಡುವಿಕೆ ತಡೆಯಲು ಸಹಕಾರಿಯಾಗಿದೆ. ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಈ ಕಾನೂನು ಅನ್ವಯವಾಗಲಿದೆ. ಸಂಘಟನೆಗಳ ಮುಖಂಡರು, ರಾಜಕೀಯ ನಾಯಕರು ಮತ್ತು ಪ್ರತಿಯೊಬ್ಬ ವ್ಯಕ್ತಿಯು ವೇದಿಕೆ ಕಾರ್ಯಕ್ರಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮಾತನಾಡುವಾಗ ಜಾಗರೂಕತೆ ವಹಿಸಲು ಎಚ್ಚರಿಕೆ ರವಾನಿಸಿದೆ.
ಅಪರಾಧವು ವ್ಯಕ್ತಿಯ ಅರಿವಿಗೆ ಬಾರದೇ ನಡೆದಿದ್ದರೆ ಅಥವಾ ಅಪರಾಧ ತಡೆಯಲು ಅಗತ್ಯ ಜಾಗರೂಕತೆ ವಹಿಸಿರುವುದನ್ನು ಸಾಬೀತುಪಡಿಸಿದಲ್ಲಿ ದಂಡನೆಯಿಂದ ವಿನಾಯ್ತಿ ನೀಡಲಾಗುತ್ತದೆ. ಇನ್ನು ಯಾವುದೇ ರೀತಿಯ ಮಾಧ್ಯಮದಲ್ಲಿ ದ್ವೇಷದ ವಿಷಯ ತೆಗೆದು ಹಾಕುವ ಅಧಿಕಾರವನ್ನು ಸಂಬಂಧಿತ ಅಧಿಕಾರಿಗೆ ನೀಡಲಾಗಿರುತ್ತದೆ.
ದ್ವೇಷ ಭಾಷಣದ ಪರಿಭಾಷೆ ಏನು?
ಯಾವುದೇ ಭಾವನಾತ್ಮಕ, ಮಾನಸಿಕ, ದೈಹಿಕ, ಸಾಮಾಜಿಕ ಅಥವಾ ಆರ್ಥಿಕ ಹಾನಿ ಮಾಡುವುದು ಪ್ರಚಾರ ಹಾಗೂ ಮಾತುಗಳು ದ್ವೇಷ ಭಾಷಣಗಳಾಗಿರಲಿವೆ. ಸಾಮರಸ್ಯ, ವ್ಯಕ್ತಿತ್ವ, ಸಮಾಜಕ್ಕೆ ಧಕ್ಕೆ ತರುವ ದತ್ತಾಂಶ ಸಂದೇಶ, ಪಠ್ಯ, ಚಿತ್ರಗಳು, ಧ್ವನಿ ಹಾಗೂ ಸಂಕೇತಗಳ ಮೂಲಕ ತೇಜೋವಧೆ ನಿರ್ಬಂಧಿಸಲಾಗಿದೆ.
ಕಂಪ್ಯೂಟರ್ ಪ್ರೋಗ್ರಾಂಗಳು, ಸಾಫ್ಟ್‌ವೇರ್, ಡಾಟಾ ಬೇಸ್ ಸಂಸ್ಥೆಗಳು ಹಾಗೂ ಮೈಕ್ರೋ ಫಿಲ್ಮ್ ಸೇರಿ ಯಾವುದೇ ಮಾಧ್ಯಮದ ಮೂಲಕ ದ್ವೇಷ ಹರಡುವಂತಿಲ್ಲ.
ದ್ವೇಷ ಭಾಷಣ ಕುರಿತು ಅಪರಾಧವು ಈಗಿನ ಭಾರತೀಯ ನ್ಯಾಯಸಂಹಿತೆಯ ಸೆಕ್ಷನ್ 153ಎ, ಸೆಕ್ಷನ್ 295ಎ, ಸೆಕ್ಷನ್ 505 ಅನ್ನು ಬಳಸಲಾಗುವುದು.