ಧರ್ಮಸ್ಥಳ ಪ್ರಕರಣ| ನಗರ ನಕ್ಸಲರ ಪಿತೂರಿ; ಷಡ್ಯಂತ್ರದ ಹಿಂದಿರುವ ತಿಮಿಂಗಿಲ ಪತ್ತೆಗೆ ಬಿಜೆಪಿ ಆಗ್ರಹ

ಇಷ್ಟು ದಿನ ಧಾರ್ಮಿಕ ಕ್ಷೇತ್ರಗಳ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದವರು ಈಗ ಗ್ರಾಮಾಂತರ ಪ್ರದೇಶದ ಮಾರಮ್ಮ, ಆಂಜನೇಯ ಸೇರಿ ಎಲ್ಲಾ ದೇವರನ್ನು ತರುತ್ತಿದ್ದಾರೆ. ಸದನದಲ್ಲಿ ಈ ಕುರಿತು ಚರ್ಚೆ ನಡೆಸಲಾಗುವುದು ಎಂದು ಆರ್‌. ಅಶೋಕ್‌ ತಿಳಿಸಿದರು.

Update: 2025-12-10 07:21 GMT
ಸಾಂದರ್ಭಿಕ ಚಿತ್ರ
Click the Play button to listen to article

ಧರ್ಮಸ್ಥಳದಲ್ಲಿ ನೂರಾರು ಅಸಹಜ ಸಾವುಗಳ ಕುರಿತು ಆರೋಪ ಮಾಡಿರುವವರಲ್ಲಿ ಆರು ಜನರ ಷಡ್ಯಂತ್ರ ಅಡಗಿದೆ. ಆರು ಜನರ ಹಿಂದಿರುವ ತಿಮಿಂಗಿಲದ ಕುರಿತು ಎಸ್‌ಐಟಿ ತನಿಖೆ ನಡೆಸಬೇಕು ಎಂದು ವಿಪಕ್ಷ ನಾಯಕ ಆರ್‌. ಅಶೋಕ್‌ ಆಗ್ರಹಿಸಿದರು.

ಬೆಳಗಾವಿ ಸುವರ್ಣಸೌಧದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣದಲ್ಲಿ ನಗರ ನಕ್ಸಲರ ಕೈವಾಡವಿದೆ ಎಂದು ಬಿಜೆಪಿ ಮೊದಲಿನಿಂದಲೂ ಹೇಳುತ್ತಿದೆ. ಷಡ್ಯಂತ್ರ ಮಾಡುತ್ತಿರುವವರಿಗೆ ಹಣ ಸಹಾಯ ಮಾಡಿದ್ದು ಯಾರು, ಅವರ ಹಿಂದಿರುವ ತಿಮಿಂಗಿಲ ಯಾವುದು ಎಂಬುದನ್ನು ಎಸ್‌ಐಟಿ ಅಧಿಕಾರಿಗಳು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. 

ಶಬರಿಮಲೆ, ಶನಿ ಸಿಂಗಾಪುರ, ಧರ್ಮಸ್ಥಳದಂತಹ ಧಾರ್ಮಿಕ ಕ್ಷೇತ್ರಗಳ ವಿರುದ್ಧ ಷಡ್ಯಂತ್ರ ನಡೆಸಲಾಗಿದೆ. ಇದೀಗ ಗ್ರಾಮಾಂತರ ಪ್ರದೇಶದಲ್ಲಿ ಮಾರಮ್ಮ, ಆಂಜನೇಯ ಸೇರಿದಂತೆ ಎಲ್ಲಾ ದೇವರನ್ನು ತರುತ್ತಿದ್ದಾರೆ. ಸದನದಲ್ಲಿ ಈ ಕುರಿತು ಚರ್ಚೆ ನಡೆಸಲಾಗುವುದು ಎಂದರು.

ವಾಕ್‌ ಸ್ವಾತಂತ್ರ್ಯಕ್ಕೆ ಕಡಿವಾಣ 

ರಾಜ್ಯ ಸರ್ಕಾರ ದ್ವೇಷ ಭಾಷಣ ಕುರಿತು ಅಧಿವೇಶನದಲ್ಲಿ ವಿಧೇಯಕ ಮಂಡಿಸಲು ಸಿದ್ಧತೆ ನಡೆಸಿದೆ. ವಾಕ್ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವ ಉದ್ದೇಶ ಹೊಂದಿದೆ. ಇದೊಂದು ದೊಡ್ಡ ಪಿತೂರಿ. ತಪ್ಪು ಮಾಡಿದವರಿಗೆ, ಅವಾಚ್ಯ ಶಬ್ದ ಬಳಕೆಗೆ ಈಗಾಗಲೇ ಕಾನೂನು ಇದ್ದು, ಹೊಸ ವಿಧೇಯಕ ಅವಶ್ಯಕತೆ ಇಲ್ಲ ಎಂದು ಅಶೋಕ್‌ ಹೇಳಿದರು.

ಗ್ಯಾರಂಟಿಗೆ ಸ್ವಪಕ್ಷೀಯರಿಂದಲೇ ವಿರೋಧ

ರಾಜ್ಯ ಸರ್ಕಾರ ನೀಡುತ್ತಿರುವ ಪಂಚ ಗ್ಯಾರಂಟಿ ಯೋಜನೆಗಳಿಗೆ ಕಾಂಗ್ರೆಸ್‌ ಶಾಸಕಾಂಗ ಸಭೆಯಲ್ಲಿ ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗಿದೆ. ಇಷ್ಟು ದಿನ ಬಿಜೆಪಿಯವರನ್ನು ಗ್ಯಾರಂಟಿ ವಿರೋಧಿಗಳು ಎನ್ನತ್ತಿದ್ದರು. ಈಗ ಕಾಂಗ್ರೆಸ್ ಶಾಸಕರೇ ತಮ್ಮ ಕ್ಷೇತ್ರಗಳಿಗೆ ಅನುದಾನ ನೀಡಿ, ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಎಂದು ಕೇಳುತ್ತಿದ್ಧಾರೆ. ಕಾಂಗ್ರೆಸ್‌ಗೆ ಚುನಾವಣೆ ಗೆಲ್ಲಲಷ್ಟೇ ಗ್ಯಾರಂಟಿ ಬೇಕಾಗಿತ್ತು ಎಂದು ಲೇವಡಿ ಮಾಡಿದರು.

ರಾಜ್ಯ ಸರ್ಕಾರ ನಿಷ್ಕ್ರಿಯ

ಉತ್ತರ ಕರ್ನಾಟಕ ಭಾಗದ ಎಲ್ಲಾ ರಸ್ತೆಗಳು ಹಾಳಾಗಿವೆ. ಕಾಂಗ್ರೆಸ್ ಸರ್ಕಾರ ಮುಂದಿನ ದಿನಗಳಲ್ಲಾದರೂ ಅಭಿವೃದ್ಧಿ ಕೆಲಸ ಮಾಡುತ್ತಾರೆ ಎಂದುಕೊಂಡಿದ್ದೇನೆ. ವಿವಿಧ ಇಲಾಖೆಗಳಲ್ಲಿ ಶೇ 63 ಭ್ರಷ್ಟಾಚಾರ ಇದೆ ಎಂಬ ಆರೋಪ ರಾಜ್ಯ ಸರ್ಕಾರದ ಮೇಲಿದೆ. ಅಧಿಕಾರಿಗಳು ಜನಸಾಮಾನ್ಯರನ್ನು ಲೂಟಿ ಮಾಡುತ್ತಿದ್ದಾರೆ. ಸರ್ಕಾರ ನಿಷ್ಕ್ರಿಯವಾಗಿದೆ ಎಂದು ಗುತ್ತಿಗೆದಾರರು, ಲೋಕಾಯುಕ್ತರು ಹಾಗೂ ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ ಎಂದು ತಿಳಿಸಿದರು.

ಗೃಹ ಸಚಿವರ ಭೇಟಿಯಾದ ಪ್ರಣವ್ ಮೊಹಂತಿ

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಧರ್ಮಸ್ಥಳ ಪ್ರಕರಣದ ಬಗ್ಗೆ ತನಿಖೆ ನಡೆಸಿರುವ ಎಸ್‌ಐಟಿ ತಂಡದ ಮುಖ್ಯಸ್ಥ, ಹಿರಿಯ ಐಪಿಎಸ್‌ ಅಧಿಕಾರಿ ಪ್ರಣವ್ ಮೊಹಂತಿ ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಅವರನ್ನು ಭೇಟಿಯಾಗಿ ಹಲವು ಮಹತ್ವದ ಮಾತುಕತೆ ನಡೆಸಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಪ್ರಣಬ್‌ ಮೊಹಾಂತಿ ಅವರು ತನಿಖೆ ಪ್ರಗತಿಯಲ್ಲಿದೆ. ಇನ್ನೂ ಪೂರ್ಣಗೊಂಡಿಲ್ಲ. ಯಾವುದೇ ಸುಳ್ಳು ಸುದ್ದಿಗಳನ್ನು ನಂಬಬಾರದು ಎಂದು ಹೇಳಿದ್ದರು. ಧರ್ಮಸ್ಥಳ ಪ್ರಕರಣದ ಎಸ್‌ಐಟಿ ವರದಿ ಬಗ್ಗೆ ಭಾರೀ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಗೃಹ ಸಚಿವರ ಭೇಟಿ, ವಿರೋಧ ಪಕ್ಷಗಳ ಹೇಳಿಕೆ  ಮಹತ್ವ ಪಡೆದುಕೊಂಡಿದೆ. 

Tags:    

Similar News