ಉತ್ತರ ಕರ್ನಾಟಕದ ನಾಯಕರಿಗೇ ಸದನದಲ್ಲಿ ಆದ್ಯತೆ: ಇಂದು ಸಂಜೆ ಬಿಜೆಪಿ ಶಾಸಕಾಂಗ ಪಕ್ಷದ ಮಹತ್ವದ ಸಭೆ

ಉತ್ತರ ಕರ್ನಾಟಕದ ಶಾಸಕರನ್ನು ಹೊರತುಪಡಿಸಿ ಉಳಿದವರು ಈ ವಿಷಯಗಳ ಬಗ್ಗೆ ಹೆಚ್ಚು ಚರ್ಚೆ ಮಾಡದಂತೆ ಸೂಚನೆ ನೀಡುವ ಸಾಧ್ಯತೆಯಿದ್ದು, ಆ ಮೂಲಕ ಸ್ಥಳೀಯ ನಾಯಕರಿಗೆ ಹೆಚ್ಚಿನ ಅವಕಾಶ ಕಲ್ಪಿಸುವುದು ಪಕ್ಷದ ಉದ್ದೇಶವಾಗಿದೆ.

Update: 2025-12-09 10:35 GMT
ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ
Click the Play button to listen to article

ಚಳಿಗಾಲದ ಅಧಿವೇಶನದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ನಿಟ್ಟಿನಲ್ಲಿ ರಣತಂತ್ರ ರೂಪಿಸಲು ಬಿಜೆಪಿ ಮುಂದಾಗಿದ್ದು, ಇಂದು ಸಂಜೆ ನಗರದ ಖಾಸಗಿ ಹೋಟೆಲ್ ಒಂದರಲ್ಲಿ ಮಹತ್ವದ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹಾಗೂ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ನಡೆಯಲಿರುವ ಈ ಸಭೆಯಲ್ಲಿ ಉಭಯ ಸದನಗಳಲ್ಲಿ ಚರ್ಚಿಸಬೇಕಾದ ವಿಷಯಗಳ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ.

ಉತ್ತರ ಕರ್ನಾಟಕದ ಶಾಸಕರಿಗೆ ಆದ್ಯತೆ

ಈ ಬಾರಿಯ ಸಭೆಯಲ್ಲಿ ಉತ್ತರ ಕರ್ನಾಟಕದ ವಿಷಯಗಳಿಗೆ ಹೆಚ್ಚಿನ ಒತ್ತು ನೀಡಲು ನಿರ್ಧರಿಸಲಾಗಿದ್ದು, ಸದನದಲ್ಲಿ ಆ ಭಾಗದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಉತ್ತರ ಕರ್ನಾಟಕ ಭಾಗದ ಶಾಸಕರಿಗೆ ಮೊದಲ ಆದ್ಯತೆ ನೀಡುವ ಮಹತ್ವದ ನಿರ್ಧಾರವನ್ನು ಬಿಜೆಪಿ ಕೈಗೊಳ್ಳಲಿದೆ ಎಂದು ತಿಳಿದುಬಂದಿದೆ. ಉತ್ತರ ಕರ್ನಾಟಕದ ಶಾಸಕರನ್ನು ಹೊರತುಪಡಿಸಿ ಉಳಿದವರು ಈ ವಿಷಯಗಳ ಬಗ್ಗೆ ಹೆಚ್ಚು ಚರ್ಚೆ ಮಾಡದಂತೆ ಸೂಚನೆ ನೀಡುವ ಸಾಧ್ಯತೆಯಿದ್ದು, ಆ ಮೂಲಕ ಸ್ಥಳೀಯ ನಾಯಕರಿಗೆ ಹೆಚ್ಚಿನ ಅವಕಾಶ ಕಲ್ಪಿಸುವುದು ಪಕ್ಷದ ಉದ್ದೇಶವಾಗಿದೆ.

ನೆರೆ ಪರಿಹಾರ ವಿತರಣೆಯಲ್ಲಿನ ವಿಳಂಬ, ಕಬ್ಬು ಬೆಳೆಗಾರರ ಸಮಸ್ಯೆಗಳು, ಮೆಕ್ಕೆಜೋಳ ಮತ್ತು ಭತ್ತ ಖರೀದಿ ಪ್ರಕ್ರಿಯೆಯಲ್ಲಿನ ಗೊಂದಲಗಳು ಹಾಗೂ ತುಂಗಭದ್ರಾ ಜಲಾಶಯದ ಗೇಟ್ ದುರಸ್ತಿ ಸೇರಿದಂತೆ ಹಲವು ಜ್ವಲಂತ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಮುಗಿಬೀಳಲು ಬಿಜೆಪಿ ಸಿದ್ಧತೆ ನಡೆಸಿದೆ.

ರೈತಪರ ಹೋರಾಟಕ್ಕೆ ಚಿಂತನೆ

ಈಗಾಗಲೇ ರಾಜ್ಯ ಸರ್ಕಾರ ಕಬ್ಬು ಬೆಲೆ ನಿಗದಿ ಹಾಗೂ ಮೆಕ್ಕೆಜೋಳ ಖರೀದಿಗೆ ಐವತ್ತು ಕ್ವಿಂಟಾಲ್ ಮಿತಿ ಹೇರುವಂತಹ ಕೆಲವು ನಿರ್ಣಯಗಳನ್ನು ಕೈಗೊಂಡಿದ್ದರೂ, ಅದರಲ್ಲಿರುವ ರೈತ ವಿರೋಧಿ ಅಂಶಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಭೆಯಲ್ಲಿ ಚರ್ಚಿಸಲಾಗುತ್ತದೆ. ಇವುಗಳ ಜೊತೆಗೆ, ಅಧಿವೇಶನದಲ್ಲಿ ಮಂಡನೆಯಾಗುವ ಸಾಧ್ಯತೆಯಿರುವ ದ್ವೇಷ ಭಾಷಣ ನಿಯಂತ್ರಣ ಮಸೂದೆ ಹಾಗೂ ಗೋಹತ್ಯೆ ನಿಷೇಧ ಕಾಯ್ದೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಪಕ್ಷದ ನಿಲುವು ಏನಾಗಿರಬೇಕು ಎಂಬುದರ ಕುರಿತು ಕೂಡ ನಾಯಕರು ಸಮಾಲೋಚನೆ ನಡೆಸಿ ಅಂತಿಮ ತೀರ್ಮಾನಕ್ಕೆ ಬರಲಿದ್ದಾರೆ. ಒಟ್ಟಾರೆಯಾಗಿ, ಸರ್ಕಾರವನ್ನು ಯಾವೆಲ್ಲಾ ಆಯಾಮಗಳಿಂದ ಕಟ್ಟಿಹಾಕಬಹುದು ಎಂಬ ಬಗ್ಗೆ ಇಂದಿನ ಸಭೆಯಲ್ಲಿ ಸಂಪೂರ್ಣ ನೀಲನಕ್ಷೆ ಸಿದ್ಧವಾಗಲಿದೆ.

Tags:    

Similar News