ಬೀದಿ ನಾಯಿಗಳ ಹಾವಳಿ: ಕರ್ತವ್ಯ ಲೋಪ ಎಸಗಿದರೆ ನಿರ್ದಾಕ್ಷಿಣ್ಯ ಕ್ರಮಕ್ಕೆ ಲೋಕಾಯುಕ್ತರು ಸೂಚನೆ
ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕುವ ಸಂಬಂಧ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಸಭೆ ನಡೆಸಿದರು. ಅಧಿಕಾರಿಗಳು ಪ್ರಾಣಿ ಜನನ ನಿಯಂತ್ರಣ' ಮತ್ತು 'ರೇಬೀಸ್ ವಿರೋಧಿ ಲಸಿಕೆ' ಅಭಿಯಾನ ಬಗ್ಗೆ ವಿಸ್ತೃತ ವರದಿ ಸಲ್ಲಿಸಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೊಳಪಡುವ ಐದು ಪಾಲಿಕೆಗಳ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿಯನ್ನು ಗಂಭೀರವಾಗಿ ಪರಿಗಣಿಸಿರುವ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್, ಕರ್ತವ್ಯ ಲೋಪ ಎಸಗಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕುವ ಸಂಬಂಧ ಐದು ಪಾಲಿಕೆ ವ್ಯಾಪ್ತಿಯ ಅಧಿಕಾರಿಗಳ ಜತೆ ಸಭೆ ನಡೆಸಿದರು. ಸಭೆಯಲ್ಲಿ ಅಧಿಕಾರಿಗಳು 2022 ರಿಂದ 2025ರ ಅಕ್ಟೋಬರ್ ವರೆಗಿನ 'ಪ್ರಾಣಿ ಜನನ ನಿಯಂತ್ರಣ' ಮತ್ತು 'ರೇಬೀಸ್ ವಿರೋಧಿ ಲಸಿಕೆ' ಅಭಿಯಾನದ ಬಗ್ಗೆ ವಿಸ್ತೃತ ವರದಿಯನ್ನು ಸಲ್ಲಿಸಿದರು. ಈ ವೇಳೆ ಜನರನ್ನು ಕಚ್ಚುವ ಪ್ರವೃತ್ತಿ ಬೆಳೆಸಿಕೊಂಡಿರುವ ಅಥವಾ ಆಕ್ರಮಣಕಾರಿಯಾಗಿ ವರ್ತಿಸುತ್ತಿರುವ ಒಟ್ಟು 139 ನಾಯಿಗಳನ್ನು ಪ್ರತ್ಯೇಕಿಸಿ, ಅವುಗಳನ್ನು ಶೆಲ್ಟರ್‌ಗಳಲ್ಲಿ ಇರಿಸಲಾಗಿದೆ. ಈ ಕ್ರಮವು ಸುಪ್ರೀಂ ಕೋರ್ಟ್ ಆದೇಶದ ಪಾಲನೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಉತ್ತರ ಪಾಲಿಕೆಯ ಪಶುಸಂಗೋಪನೆಯ ಸಹಾಯಕ ನಿರ್ದೇಶಕರು ಕಳೆದ ಮೂರು ತಿಂಗಳಲ್ಲಿ 44 ನಾಯಿ ಕಚ್ಚಿದ ಪ್ರಕ್ರಣಗಳು ವರದಿಯಾಗಿರುತ್ತದೆ ಎಂಬ ಮಾಹಿತಿ ಒದಗಿಸಿದರು. ಇವುಗಳ ಪೈಕಿ ರೇಬಿಸ್‌ನಿಂದ ತೊಂದರೆಗೊಳಗಾದ ಯಾವುದೇ ಪ್ರಕರಣಗಳು ಇರುವುದಿಲ್ಲ. ವೀರೇಶ್ ಎಂಬ ವ್ಯಕ್ತಿಗೆ ಅನೇಕ ಕಡೆ ನಾಯಿ ಕಚ್ಚಿದ್ದರಿಂದ, ಆತನಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಒದಗಿಸಿದ್ದು, ಪ್ರಸ್ತುತ ವ್ಯಕ್ತಿಯು ಸಂಪೂರ್ಣ ಗುಣಮುಖರಾಗಿದ್ದಾರೆ. ನಾಯಿ ಕಚ್ಚಿದ ಪ್ರಕರಣಗಳಲ್ಲಿ ಚಿಕಿತ್ಸೆಗೆ ವ್ಯಯಿಸಿರುವ ಆಸ್ಪತ್ರೆಯ ವೆಚ್ಚವನ್ನು ಪಾಲಿಕೆಯಿಂದ ಹಿಂತಿರುಗಿಸಲು ಕ್ರಮ ಕೈಗೊಳ್ಳುತ್ತಿರುವುದಾಗಿ ಮಾಹಿತಿ ನೀಡಿದರು.
ದಕ್ಷಿಣ ಪಾಲಿಕೆಯ ಪಶುಸಂಗೋಪನೆಯ ಸಹಾಯಕ ನಿರ್ದೇಶಕರು, ಸುಪ್ರೀಂಕೋರ್ಟ್ ಆದೇಶದಂತೆ. ಶೆಲ್ಟರ್ ಹೋಂಗಳನ್ನು ಗುರುತಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಬಿಂಗಾಪುರದಲ್ಲಿ ಒಂದು ಶೆಲ್ಟರ್ ನಿರ್ಮಾಣ ಹಂತದಲ್ಲಿದೆ. ಕಳೆದ ಮೂರು ತಿಂಗಳಲ್ಲಿ 68 ನಾಯಿ ಕಚ್ಚಿದ ಪ್ರಕರಣಗಳು ವರದಿಯಾಗಿದ್ದು, ಯಾವುದೇ ಗಂಭೀರ ಸ್ವರೂಪದ್ದಲ್ಲ. ದಕ್ಷಿಣ ಪಾಲಿಕೆಯ ವಲಯ-2ರ ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕರು ಕಳೆದ ಮೂರು ತಿಂಗಳಲ್ಲಿ 26 ನಾಯಿ ಕಚ್ಚಿದ ಪ್ರಕರಣಗಳು ವರದಿಯಾಗಿದೆ ಎಂದು ತಿಳಿಸಿದರು. ಈ ನಾಯಿಗಳ ಪೈಕಿ 4 ನಾಯಿಗಳನ್ನು ಪ್ರತ್ಯೇಕಿಸಿ ಶೆಲ್ಟರ್‌ನಲ್ಲಿ ಇಡಲಾಗಿದೆ. ಪಶ್ಚಿಮ ಪಾಲಿಕೆಯ ವಲಯ-1ರಲ್ಲಿ 32 ಪ್ರಕರಣಗಳು ಹಾಗೂ ವಲಯ-2ರಲ್ಲಿ 31 ನಾಯಿ ಕಚ್ಚಿದ ಪ್ರಕರಣಗಳು ವರದಿಯಾಗಿವೆ.
ಕೇಂದ್ರ ಪಾಲಿಕೆಯಲ್ಲಿ 32 ನಾಯಿ ಕಚ್ಚಿದ ಪ್ರಕರಣಗಳು ದಾಖಲಾಗಿಔೆ. ಅವುಗಳಲ್ಲಿ ಯಾವುದೇ ಗಂಭೀರ ಸ್ವರೂಪದ ಪ್ರಕರಣಗಳು ಇಲ್ಲ. ಶೆಲ್ಟರ್ ಹೋಂಗಳನ್ನು ನಿರ್ಮಿಸಲು ಮೂರು ಸ್ಥಳಗಳನ್ನು ಗುರುತಿಸಿರುವ ಅಂಶವನ್ನು ಅಧಿಕಾರಿಗಳು ಲೋಕಾಯುಕ್ತರಿಗೆ ತಿಳಿಸಿದರು. ಪೂರ್ವ ಪಾಲಿಕೆ ವ್ಯಾಪ್ತಿಯಲ್ಲಿ 41 ನಾಯಿ ಕಚ್ಚಿದ ಪ್ರಕರಣಗಳು ದಾಖಲಾಗಿವೆ. ಈ ನಾಯಿಗಳ ಪೈಕಿ ಶೆಲ್ಟರ್ ಹೋಂನಲ್ಲಿ ಇರಿಸಲಾಗಿದ್ದ ಎರಡು ನಾಯಿಗಳು ಮೃತಪಟ್ಟಿವೆ ಎಂಬುದನ್ನು ತಿಳಿಸಿದರು.