Part-2: 'ಬಿ' ಖಾತಾ; ʼಅಕ್ರಮ-ಸಕ್ರಮʼಕ್ಕಿನ್ನೂ ಕೂಡಿಬಂದಿಲ್ಲ ಕಾಲ! ರಿಯಲ್‌ ಎಸ್ಟೇಟ್‌ ಕನಸು ಹುಸಿ?

'ಬಿ' ಖಾತಾ ಆಸ್ತಿಗಳನ್ನು 'ಎ' ಖಾತೆಗೆ ಪರಿವರ್ತಿಸುವ ಮೂಲಕ ಸ್ಥಗಿತಗೊಂಡಿದ್ದ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಹೊಸ ಶಕ್ತಿ ತುಂಬುವ ಸರ್ಕಾರದ ನಿರೀಕ್ಷೆ ಆರಂಭದಲ್ಲೇ ಹುಸಿಯಾಗುವ ಲಕ್ಷಣಗಳು ಗೋಚರಿಸುತ್ತಿವೆ.

Update: 2025-12-10 02:30 GMT
Click the Play button to listen to article

ಕೋವಿಡ್ ನಂತರದ ಆರ್ಥಿಕ ಸಂಕಷ್ಟಗಳು ಮತ್ತು ಐಟಿ ವಲಯದ ಏರಿಳಿತಗಳಿಂದಾಗಿ ಕಳೆಗುಂದಿದ್ದ ಬೆಂಗಳೂರಿನ ರಿಯಲ್ ಎಸ್ಟೇಟ್ ಮಾರುಕಟ್ಟೆಗೆ ಮರುಜೀವ ನೀಡುವ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗೆ ಗ್ರಹಣ ಹಿಡಿದಂತಿದೆ. 'ಬಿ' ಖಾತಾ ಆಸ್ತಿಗಳನ್ನು 'ಎ' ಖಾತೆಗೆ ಪರಿವರ್ತಿಸುವ ಮೂಲಕ ಸ್ಥಗಿತಗೊಂಡಿದ್ದ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಹೊಸ ಶಕ್ತಿ  ತುಂಬುವ ಸರ್ಕಾರದ ನಿರೀಕ್ಷೆ ಆರಂಭದಲ್ಲೇ ಹುಸಿಯಾಗುವ ಲಕ್ಷಣಗಳು ಗೋಚರಿಸುತ್ತಿವೆ.

ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ 100 ದಿನಗಳ ಬೃಹತ್ ಅಭಿಯಾನ ಹಮ್ಮಿಕೊಳ್ಳಲಾಗಿದ್ದರೂ, ಸಾರ್ವಜನಿಕರಿಂದ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆ ತೀರಾ ಮಂದಗತಿಯಲ್ಲಿದೆ. ಆರಂಭಿಕವಾಗಿ ಸಿಕ್ಕ ಭಾರಿ ಪ್ರಚಾರ ಅರ್ಜಿ ಸಲ್ಲಿಕೆಯ ಹಂತಕ್ಕೆ ಬರುವಾಗ ಮಾಯವಾಗಿದೆ. ಆನ್‌ಲೈನ್ ಪೋರ್ಟಲ್ ತೆರೆದಿದ್ದರೂ, ನಿರೀಕ್ಷಿತ ಸಂಖ್ಯೆಯಲ್ಲಿ ಜನರು ನೋಂದಣಿ ಮಾಡಿಕೊಳ್ಳಲು ಉತ್ಸಾಹ ತೋರುತ್ತಿಲ್ಲ.

ಕಳೆದ ಕೆಲ ವರ್ಷಗಳಿಂದ ಕಾನೂನು ತೊಡಕುಗಳು, 'ಬಿ' ಖಾತಾ ಗೊಂದಲಗಳಿಂದಾಗಿ ಮಧ್ಯಮ ವರ್ಗದವರ ಆಸ್ತಿ ಖರೀದಿ ಮತ್ತು ಮಾರಾಟ ಪ್ರಕ್ರಿಯೆ ಬಹುತೇಕ ಸ್ತಬ್ಧವಾಗಿತ್ತು. ಬ್ಯಾಂಕ್ ಸಾಲ ದೊರೆಯದ ಕಾರಣ ರಿಯಲ್ ಎಸ್ಟೇಟ್ ಮಾರುಕಟ್ಟೆ ಕುಸಿತ ಕಂಡಿತ್ತು. ಈ ಹಿನ್ನೆಲೆಯಲ್ಲಿ, ಕಂದಾಯ ನಿವೇಶನಗಳಿಗೆ ಅಧಿಕೃತ 'ಎ' ಖಾತಾ ಮುದ್ರೆ ಒತ್ತುವ ಅಭಿಯಾನವನ್ನು ಸರ್ಕಾರ ಘೋಷಿಸಿತ್ತು. ಇದು ಕೇವಲ ಕಂದಾಯ ಸಂಗ್ರಹವಷ್ಟೇ ಅಲ್ಲದೆ, ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಚೈತನ್ಯ ತುಂಬುವ 'ಪ್ರಬಲ ಅಸ್ತ್ರ' ಎಂದೇ ಬಿಂಬಿತವಾಗಿತ್ತು. ಈ ಯೋಜನೆಯಿಂದ ಆಸ್ತಿ ಮೌಲ್ಯವರ್ಧನೆಯಾಗಿ, ಬ್ಯಾಂಕಿಂಗ್ ವಲಯದ ನೆರವು ಹರಿದುಬಂದು ಆರ್ಥಿಕತೆ ಚುರುಕಾಗುತ್ತದೆ ಎಂಬುದು ಸರ್ಕಾರದ ಲೆಕ್ಕಾಚಾರವಾಗಿತ್ತು. ಆದರೆ ಇದೆಲ್ಲಾ ಹುಸಿಯಾಗುವ ಲಕ್ಷಣಗಳು ಕಂಡು ಬರುತ್ತಿವೆ. ಹೆಚ್ಚಿನ ಜನತೆ ಆಸಕ್ತಿ ತೋರಲು ಹಿಂದೇಟು ಹಾಕುತ್ತಿದ್ದಾರೆ. ಬಿ ಖಾತಾದಿಂದ ಎ ಖಾತೆಗೆ ವರ್ಗಾಯಿಸುವುದು ಕ್ಲಿಷ್ಟಕರವಾಗಿರುವ ಕಾರಣ ಆಸಕ್ತಿ ತೋರುತ್ತಿಲ್ಲ ಎಂಬ ಮಾತುಗಳು ಕೇಳಿಬಂದಿವೆ.

ಅದರಲ್ಲಿಯೂ ಕೇಂದ್ರ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ, ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಎನ್ನುವುದೇ ಬೋಗಸ್. ದುಡ್ಡು ಹೊಡೆಯುವುದಕ್ಕೆ ಮಾಡಿರುವ ಸುಲಿಗೆ ಕಾರ್ಯಕ್ರಮ ಇದಾಗಿದೆ. ಯಾರೂ ಖಾತಾ ಬದಲಾವಣೆ ಮಾಡಿಸಿಕೊಳ್ಳಲು ಹಣ ಕಟ್ಟಬೇಡಿ. ಎರಡು ವರ್ಷಗಳಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಕಡಿಮೆ ದರದಲ್ಲಿ ಖಾತೆ ಮಾಡಿಕೊಡುತ್ತೇವೆ. ಕಾಂಗ್ರೆಸ್ ಸರ್ಕಾರ ಹಗಲು ದರೋಡೆ ಮಾಡುತ್ತಿದೆ. ಜನರನ್ನು ಸುಲಿಗೆ ಸರಕನ್ನಾಗಿ ಮಾಡಿಕೊಂಡಿದೆ. ಬೆಂಗಳೂರು ಜನರಿಗೆ ನಾನು ಹೇಳಲು ಬಯಸುತ್ತೇನೆ. ಯಾವುದೇ ಕಾರಣಕ್ಕೂ ಒಂದು ನಯಾಪೈಸೆ ಕಟ್ಟಬೇಡಿ. ಯಾವುದೇ ಕಾರಣಕ್ಕೂ ಎರಡು ವರ್ಷ ಖಾತೆ ಮಾಡಿಸಿಕೊಳ್ಳಬೇಡಿ. ಇವರ ಮಾತಿಗೆ ಮರುಳಾಗಬೇಡಿ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯು ಸಹ ಬೆಂಗಳೂರಿನ ಜನತೆಯ ಮೇಲೆ ಪರಿಣಾಮ ಬೀರಿದ್ದು, ಖಾತಾ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಲಾಗಿದೆ. 

ರಿಯಲ್‌ ಎಸ್ಟೇಟ್‌ಗೆ ಉತ್ತೇಜನದ ತಂತ್ರಗಾರಿಕೆ

'ಬಿ' ಖಾತಾ ಆಸ್ತಿಗಳನ್ನು 'ಎ' ಖಾತೆಗೆ ಪರಿವರ್ತಿಸುವ ಸರ್ಕಾರದ  ಅಭಿಯಾನವು ಕೇವಲ ತೆರಿಗೆ ಸಂಗ್ರಹಣೆಗಷ್ಟೇ ಸೀಮಿತವಾಗಿಲ್ಲ. ಇದು ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಮರುಜೀವ ನೀಡುವ ಮತ್ತು ಉತ್ತೇಜನ ನೀಡುವ ಪ್ರಮುಖ ತಂತ್ರಗಾರಿಕೆಯಾಗಿದೆ.  ಸರ್ಕಾರ ಜಾರಿಗೆ ತಂದಿರುವ 'ಎ' ಖಾತಾ ಅಭಿಯಾನವು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಹೊಸ ಇಂಧನ ತುಂಬುವ ಪ್ರಬಲ ಅಸ್ತ್ರವಾಗಿದೆ. ಬ್ಯಾಂಕಿಂಗ್ ವಲಯದ ಬೆಂಬಲ ಮತ್ತು ಮಧ್ಯಮ ವರ್ಗದ ಖರೀದಿಗೆ ಉತ್ತೇಜನ ನೀಡಲಾಗುತ್ತದೆ ಎಂದು ಹೇಳಲಾಗಿದೆ. 

ರಿಯಲ್ ಎಸ್ಟೇಟ್ ಕ್ಷೇತ್ರದ ಬೆನ್ನೆಲುಬು ಬ್ಯಾಂಕ್ ಸಾಲಗಳು 

'ಬಿ' ಖಾತಾ ಆಸ್ತಿಗಳಿಗೆ ಎಸ್‌ಬಿಐ, ಕೆನರಾ ಬ್ಯಾಂಕ್‌ನಂತಹ ಪ್ರಮುಖ ಸರ್ಕಾರಿ ಸ್ವಾಮ್ಯದ  ಬ್ಯಾಂಕ್‌ಗಳು ಸಾಲ ನೀಡುತ್ತಿಲ್ಲ. ಜನಸಾಮಾನ್ಯರು ಹೆಚ್ಚಿನ ಬಡ್ಡಿ ದರದಲ್ಲಿ ಸಹಕಾರಿ ಬ್ಯಾಂಕ್ ಅಥವಾ ಖಾಸಗಿ ಬ್ಯಾಂಕ್‌ಗಳ  ಬಳಿ ಸಾಲ ಪಡೆಯಬೇಕಿತ್ತು. ಇದು ಆಸ್ತಿ ಖರೀದಿಗೆ ದೊಡ್ಡ ತಡೆಯಾಗಿತ್ತು. ರಿಯಲ್ ಎಸ್ಟೇಟ್ ವ್ಯವಹಾರ ಕುಸಿಯಲು ಪ್ರಮುಖ ಕಾರಣ 'ಬಿ' ಖಾತಾ ಆಸ್ತಿಗಳಿಗೆ ರಾಷ್ಟ್ರೀಕೃತ ಬ್ಯಾಂಕುಗಳು ಸಾಲ ನೀಡದಿರುವುದಾಗಿದೆ. ಯಾವಾಗ ಆಸ್ತಿ ಅಧಿಕೃತವಾಗಿ 'ಎ' ಖಾತೆಗೆ ಬದಲಾಗುತ್ತದೆಯೋ, ಆಗ ರಾಷ್ಟ್ರೀಕೃತ ಬ್ಯಾಂಕ್‌ಗಳು ಸುಲಭವಾಗಿ ಮತ್ತು ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುತ್ತವೆ. ಇದರಿಂದ ಮಧ್ಯಮ ವರ್ಗದ ಜನರ "ಕೊಳ್ಳುವ ಶಕ್ತಿ" ಹೆಚ್ಚಾಗುತ್ತದೆ. ಹೆಚ್ಚು ಜನರು ಮಾರುಕಟ್ಟೆಗೆ ಬರುವುದರಿಂದ ರಿಯಲ್ ಎಸ್ಟೇಟ್ ವಹಿವಾಟು ಗಣನೀಯವಾಗಿ ಏರಿಕೆಯಾಗುತ್ತದೆ. 

ಸ್ಥಗಿತಗೊಂಡಿದ್ದ ಆಸ್ತಿಗಳ ಮಾರಾಟ ಆರಂಭ

ಬೆಂಗಳೂರಿನ ಸುತ್ತಮುತ್ತ ಸಾವಿರಾರು ಲೇಔಟ್‌ಗಳಲ್ಲಿ 'ಬಿ' ಖಾತಾ ಎಂಬ ಕಾರಣಕ್ಕಾಗಿಯೇ ಲಕ್ಷಾಂತರ ನಿವೇಶನಗಳು ಮಾರಾಟವಾಗದೆ ಉಳಿದಿವೆ. ಎ ಖಾತಾ ಆಗುವುದರಿಂದ ಡೆವಲಪರ್‌ಗಳು ಮತ್ತು ಬಿಲ್ಡರ್‌ಗಳು ಈ ನಿವೇಶನಗಳನ್ನು ಅಧಿಕೃತಗೊಳಿಸಿಕೊಂಡು ಮಾರಾಟ ಮಾಡಲು ದಾರಿ ಸುಗಮವಾಗಿದೆ. ಇದು ಡೆವಲಪರ್‌ಗಳಿಗೆ ದೊಡ್ಡ ಆರ್ಥಿಕ ಚೇತರಿಕೆ ನೀಡಲಿದೆ. ಸಣ್ಣ ಹೂಡಿಕೆದಾರರ ಕೋಟ್ಯಂತರ ರೂ. ಇಂತಹ ಜಮೀನುಗಳಲ್ಲಿ ಸಿಲುಕಿಕೊಂಡಿದೆ. ಸರ್ಕಾರದ ಈ ಯೋಜನೆಯಿಂದ ಈ "ಮೃತ ಪ್ರಾಯ"ವಾಗಿದ್ದ ಆಸ್ತಿಗಳು ಈಗ "ಜೀವಂತ ಮಾರುಕಟ್ಟೆ ಸರಕು"ಗಳಾಗಿ ಬದಲಾಗುತ್ತವೆ. ಡೆವಲಪರ್‌ಗಳು ತಮ್ಮ ಹಳೆಯ ಸ್ಟಾಕ್ ಖಾಲಿ ಮಾಡಿ, ಹೊಸ ಯೋಜನೆಗಳನ್ನು ಆರಂಭಿಸಲು ಇದು ಬಂಡವಾಳ ಒದಗಿಸುತ್ತದೆ.

ಆಸ್ತಿ ಮೌಲ್ಯವರ್ಧನೆ 

'ಬಿ' ಖಾತಾ ಆಸ್ತಿಗಿಂತ 'ಎ' ಖಾತಾ ಆಸ್ತಿಯ ಮಾರುಕಟ್ಟೆ ಮೌಲ್ಯ ಶೇ.20 -30 ರಷ್ಟು ಹೆಚ್ಚಾಗಲಿದೆ.  ಹೂಡಿಕೆದಾರರಿಗೆ ತಮ್ಮ ಆಸ್ತಿಯ ಬೆಲೆ ಹೆಚ್ಚಳವಾಗುವ ಖಾತ್ರಿ ಸಿಗುತ್ತದೆ. ಇದು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಲು ಜನರನ್ನು ಪ್ರೇರೇಪಿಸುತ್ತದೆ. ಇದು ಕೇವಲ ಜಮೀನು ಮಾರಾಟದ ವಿಷಯವಲ್ಲ, ನಿರ್ಮಾಣ ಕ್ಷೇತ್ರಕ್ಕೂ ಸಂಬಂಧಿಸಿದೆ.  'ಎ' ಖಾತಾ ಸಿಕ್ಕರೆ ಮಾತ್ರ ಅಧಿಕೃತವಾಗಿ ಕಟ್ಟಡ ನಕ್ಷೆ ಸಿಗುತ್ತದೆ. ನಕ್ಷೆ ಸಿಕ್ಕರೆ ಮಾತ್ರ ಜನರು ಮನೆ ಕಟ್ಟಲು ಧೈರ್ಯ ಮಾಡುತ್ತಾರೆ. ಯಾವಾಗ ಮನೆ ಕಟ್ಟುವ ಚಟುವಟಿಕೆಗಳು ಗರಿಗೆದರುತ್ತವೆಯೋ, ಆಗ ಸಿಮೆಂಟ್, ಕಬ್ಬಿಣ , ಬಣ್ಣ, ಎಲೆಕ್ಟ್ರಿಕಲ್, ಪ್ಲಂಬಿಂಗ್ ಮತ್ತು ಕಾರ್ಮಿಕ ವಲಯಗಳಲ್ಲಿ ಭಾರಿ ಬೇಡಿಕೆ ಸೃಷ್ಟಿಯಾಗುತ್ತದೆ. ಹೀಗಾಗಿ, ಈ ಒಂದು ನಿರ್ಧಾರವು ಇಡೀ ಆರ್ಥಿಕ ಚಕ್ರಕ್ಕೆ ಚಾಲನೆ ನೀಡುತ್ತದೆ ಎಂದು ಹೇಳಲಾಗಿದೆ. 

ಎನ್‌ಆರ್‌ಐ ಹೂಡಿಕೆಗೆ ಉತ್ತೇಜನ

ವಿದೇಶದಲ್ಲಿರುವ ಕನ್ನಡಿಗರು ಅಥವಾ ಭಾರತೀಯರು ಬೆಂಗಳೂರಿನಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ಆದರೆ 'ಬಿ' ಖಾತಾ ಅಥವಾ ಕಾನೂನು ತೊಡಕುಗಳ ಭಯದಿಂದ ಹಿಂದೇಟು ಹಾಕುತ್ತಾರೆ. ಡಿಜಿಟಲೀಕರಣಗೊಂಡ 'ಎ' ಖಾತಾ ವ್ಯವಸ್ಥೆಯು ಪಾರದರ್ಶಕತೆ ತರುವುದರಿಂದ, ಎನ್‌ಆರ್‌ಐ ಹೂಡಿಕೆದಾರರ ವಿಶ್ವಾಸ ಹೆಚ್ಚುತ್ತದೆ. ವಿದೇಶಿ ಹೂಡಿಕೆ ಹರಿದು ಬಂದರೆ ಪ್ರೀಮಿಯಂ ರಿಯಲ್ ಎಸ್ಟೇಟ್ ವಲಯವೂ ಬೆಳೆಯುತ್ತದೆ. ಅಲ್ಲದೇ,ಸರ್ಕಾರಕ್ಕೆ ಎರಡು ರೀತಿಯಲ್ಲಿ ಆದಾಯ ಬರುತ್ತದೆ.ಅಭಿವೃದ್ಧಿ ಶುಲ್ಕ ಮತ್ತು ನೋಂದಣಿ ಶುಲ್ಕ ಮೂಲಕ ಹಣ ಸಂಗ್ರಹವಾಗಲಿದೆ. ಆಸ್ತಿಗಳು 'ಎ' ಖಾತೆಯಾಗಿ, ಮಾರಾಟ ಪ್ರಕ್ರಿಯೆ ಚುರುಕುಗೊಂಡರೆ, ಸಬ್-ರಿಜಿಸ್ಟ್ರಾರ್ ಕಚೇರಿಗಳಲ್ಲಿ ಆಸ್ತಿ ನೋಂದಣಿ ಹೆಚ್ಚಾಗುತ್ತದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಿರಂತರ ಆದಾಯ ಹರಿದು ಬರುತ್ತದೆ ಎಂಬ ಲೆಕ್ಕಾಚಾರ ಸರ್ಕಾರದ್ದಾಗಿದೆ. 

'ಬಿ' ಖಾತಾ ಪರಿವರ್ತನೆಗೆ ಜನರ ನಿರಾಸಕ್ತಿ

ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಂದಾಯ ನಿವೇಶನಗಳಿಗೆ ಅಥವಾ 'ಬಿ' ಖಾತಾ ಆಸ್ತಿಗಳಿಗೆ 'ಎ' ಖಾತಾ ಭಾಗ್ಯ ನೀಡುವ ಸರ್ಕಾರದ ಯೋಜನೆಗೆ ಆರಂಭಿಕವಾಗಿ ಭಾರಿ ಪ್ರಚಾರ ಸಿಕ್ಕಿದ್ದರೂ, ಅರ್ಜಿ ಸಲ್ಲಿಕೆಯಲ್ಲಿ ಜನರ ಪ್ರತಿಕ್ರಿಯೆ ತೀರಾ ಮಂದಗತಿಯಲ್ಲಿದೆ. 100 ದಿನಗಳ ಅಭಿಯಾನ ಎಂದು ಸರ್ಕಾರ ಘೋಷಿಸಿದ್ದರೂ, ಸಾರ್ವಜನಿಕರು ಉತ್ಸಾಹ ತೋರುತ್ತಿಲ್ಲ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮೂಲಗಳ ಪ್ರಕಾರ ಒಂದೂವರೆ ಸಾವಿರದಷ್ಟು ಮಾತ್ರ ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎನ್ನಲಾಗಿದೆ. ಇದಕ್ಕೆ ಹಲವು ಕಾರಣಗಳಿವೆ ಎಂದು ಹೇಳಲಾಗಿದೆ. 

ದುಬಾರಿ ಅಭಿವೃದ್ಧಿ ಶುಲ್ಕ 

ಜನರ ನಿರಾಸಕ್ತಿಗೆ ಅತಿದೊಡ್ಡ ಮತ್ತು ಪ್ರಮುಖ ಕಾರಣವೆಂದರೆ ಶುಲ್ಕದ ಮೊತ್ತ. ಸರ್ಕಾರವು ಪ್ರಸ್ತುತ ಇರುವ ಮಾರ್ಗಸೂಚಿ ದರದ ನಿರ್ದಿಷ್ಟ ಶೇಕಡಾವಾರು ಹಣವನ್ನು (ಸಾಮಾನ್ಯವಾಗಿ ಶೇ. 5-6ರಷ್ಟು) ಅಭಿವೃದ್ಧಿ ಶುಲ್ಕವನ್ನಾಗಿ ನಿಗದಿಪಡಿಸಿದೆ. ಬೆಂಗಳೂರಿನಲ್ಲಿ ಇತ್ತೀಚೆಗೆ ಮಾರ್ಗಸೂಚಿ ದರಗಳನ್ನು ಏರಿಕೆ ಮಾಡಲಾಗಿದೆ. ಒಂದು ನಿವೇಶನದ ಮಾರ್ಗಸೂಚಿ ಬೆಲೆ 50 ಲಕ್ಷ ರೂ. ಇದ್ದರೆ, ಮಾಲೀಕರು ಬರೋಬ್ಬರಿ 2.5 ರಿಂದ 3 ಲಕ್ಷ ರೂ. ಕಟ್ಟಬೇಕಾಗುತ್ತದೆ. ಮಧ್ಯಮ ವರ್ಗದ ಜನರಿಗೆ, ಈಗಾಗಲೇ ಸಾಲ ಮಾಡಿ ನಿವೇಶನ ಕೊಂಡವರಿಗೆ ಈ ಮೊತ್ತವನ್ನು ಒಂದೇ ಬಾರಿಗೆ ಪಾವತಿಸುವುದು ದೊಡ್ಡ ಆರ್ಥಿಕ ಹೊರೆಯಾಗಿದೆ. ಹೀಗಾಗಿ ಶುಲ್ಕ ಇಳಿಕೆಯಾಗಬಹುದು ಎಂಬ ನಿರೀಕ್ಷೆಯಲ್ಲಿ ಕಾದು ನೋಡುವ ತಂತ್ರಕ್ಕೆ ಜನರು ಮೊರೆಹೋಗಿದ್ದಾರೆ.

"ನಿವೇಶನಕ್ಕೆ ಮಾತ್ರ ಖಾತಾ" ಎಂಬ ಗೊಂದಲ

ಈ ಯೋಜನೆಯಡಿ ಕೇವಲ ಖಾಲಿ ನಿವೇಶನಕ್ಕೆ ಮಾತ್ರ 'ಎ' ಖಾತಾ ನೀಡಲಾಗುತ್ತದೆ. ಅಲ್ಲಿ ನಿರ್ಮಿಸಿರುವ ಕಟ್ಟಡಕ್ಕಲ್ಲ ಎಂದು ಸರ್ಕಾರ ಹೇಳಿದೆ. ಈಗಾಗಲೇ ಮನೆ ಕಟ್ಟಿಕೊಂಡಿರುವವರು, ನಮ್ಮ ಕಟ್ಟಡಕ್ಕೆ ನಕ್ಷೆ ಮಂಜೂರಾತಿ ಸಿಗುವುದಿಲ್ಲ ಮತ್ತು ಕಟ್ಟಡದ ಉಲ್ಲಂಘನೆಗಳನ್ನು ಸಕ್ರಮ ಮಾಡುವುದಿಲ್ಲ ಎಂದ ಮೇಲೆ, ಲಕ್ಷಾಂತರ ರೂ. ಶುಲ್ಕ ಕಟ್ಟಿ ಬರೀ ನೆಲಕ್ಕೆ  ಖಾತಾ ಪಡೆದು ಏನು ಪ್ರಯೋಜನ? ಎಂಬುದು ಜನರ ಪ್ರಶ್ನೆಯಾಗಿದೆ. ಕಟ್ಟಡ ಸಕ್ರಮ (ಅಕ್ರಮ-ಸಕ್ರಮ) ಯೋಜನೆ ಜಾರಿಯಾದರೆ ಮಾತ್ರ ಸಂಪೂರ್ಣ ಪ್ರಯೋಜನ ಸಿಗುತ್ತದೆ ಎಂಬುದು ಬಹುತೇಕ ಆಸ್ತಿ ಮಾಲೀಕರ ವಾದವಾಗಿದೆ.

ಸುಪ್ರೀಂ ಕೋರ್ಟ್‌ನಲ್ಲಿರುವ 'ಅಕ್ರಮ-ಸಕ್ರಮ' ಪ್ರಕರಣ

ಕಟ್ಟಡಗಳ ಸಕ್ರಮಕ್ಕೆ ಸಂಬಂಧಿಸಿದ 'ಅಕ್ರಮ-ಸಕ್ರಮ' ಯೋಜನೆ ಕುರಿತ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಇನ್ನೂ ಇತ್ಯರ್ಥವಾಗಿಲ್ಲ. ಈಗಿನ ಹೊಸ ಯೋಜನೆಯು ('ಬಿ' ಖಾತಾದಿಂದ 'ಎ' ಖಾತಾ) ಕಾನೂನಾತ್ಮಕವಾಗಿ ಎಷ್ಟರಮಟ್ಟಿಗೆ ಊರ್ಜಿತವಾಗುತ್ತದೆ ಎಂಬ ಸಣ್ಣ ಭಯ ಜನರಲ್ಲಿ ಇದೆ. ನ್ಯಾಯಾಲಯದ ಅಂತಿಮ ತೀರ್ಪು ಬರುವವರೆಗೂ ದೊಡ್ಡ ಮೊತ್ತದ ಹಣ ಹೂಡಿಕೆ ಮಾಡಲು ಜನ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. 

ಅಭಿವೃದ್ಧಿ ಶುಲ್ಕವನ್ನು ತರ್ಕಬದ್ಧವಾಗಿ ಕಡಿಮೆ ಮಾಡಬೇಕು. ಶುಲ್ಕವನ್ನು ಕಂತುಗಳಲ್ಲಿ ಪಾವತಿಸಲು ಅವಕಾಶ ನೀಡಬೇಕು. ಕಟ್ಟಡಗಳ ಸಕ್ರಮದ ಬಗ್ಗೆಯೂ ಸ್ಪಷ್ಟ ಭರವಸೆ ಅಥವಾ ಮಾರ್ಗಸೂಚಿಯನ್ನು ನೀಡದಿದ್ದರೆ, ಈ ಯೋಜನೆಯು ಕೇವಲ ಕಾಗದದ ಮೇಲಷ್ಟೇ ಉಳಿಯುವ ಸಾಧ್ಯತೆಯಿದೆ ಎಂಬ ಕಾರಣಕ್ಕಾಗಿ ಜನತೆ ಬಿ ಖಾತೆಯಿಂದ ಎ ಖಾತೆಗೆ ಅರ್ಜಿಗಳನ್ನು ಹಾಕಲು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಲಾಗಿದೆ. 

ಇ-ಖಾತಾ ಸಮಸ್ಯೆಗಳೇ ಬಗೆಹರಿದಿಲ್ಲ

ಬಿ ಖಾತಾದಿಂದ ಎ ಖಾತಾ ಮಾಡುವ ಸರ್ಕಾರದ ತೀರ್ಮಾನ ಕುರಿತು ದ ಫೆಡರಲ್‌ ಕರ್ನಾಟಕ ಜತೆ ಮಾತನಾಡಿದ ಕ್ರೆಡೆಲ್‌ನ ಮಾಜಿ ರಾಜ್ಯ ಉಪಾಧ್ಯಕ್ಷ ಮುರಳೀಧರ್‌ ಮಾತನಾಡಿ, ರಾಜ್ಯ ಸರ್ಕಾರವು ಮೊದಲು ಇ-ಖಾತಾ ಸಮಸ್ಯೆಯನ್ನು ಬಗೆಹರಿಸಬೇಕು. ಅದೇ ಬಹಳಷ್ಟು ಸಮಸ್ಯೆ ಇದೆ. ಆ ಸಮಸ್ಯೆ ಬಗೆಹರಿಯದ ಹೊರತು ಎ ಖಾತಾ ಸಮಸ್ಯೆ ಬಗೆಹರಿಯುವುದಿಲ್ಲ. ಬಿ ಖಾತಾದಿಂದ ಎ ಖಾತಾ ಮಾಡುವುದರಿಂದ ರಿಯಲ್‌ ಎಸ್ಟೇಟ್‌ಗೆ ಅನುಕೂಲಕರವಾಗಲಿದೆ. ಆದರೆ, ಮೂಲ ಸಮಸ್ಯೆಯನ್ನು ಮೊದಲು ಬಗೆಹರಿಸುವ ಬಗ್ಗೆ ಸರ್ಕಾರ ಗಮನಹರಿಸಬೇಕು. ಈ ಬಗ್ಗೆ ಕಂದಾಯ ಸಚಿವರನ್ನು ಭೇಟಿಯಾಗಿ ಚರ್ಚೆ ನಡೆಸಲಾಗಿದೆ. ಪಂಚಾಯಿತಿ ಮಟ್ಟದಲ್ಲಿಯೂ ಖಾತಾ ಸಮಸ್ಯೆಗಳಿವೆ. ಕಾಗದದಲ್ಲಿ ಉಲ್ಲೇಖ ಮಾಡಿದಂತೆ ವಾಸ್ತವವಾಗಿ ಸಮಸ್ಯೆಗಳು ಬಗೆಹರಿಯುವುದಿಲ್ಲ ಎಂದು ಹೇಳಿದರು. 

Tags:    

Similar News