ಸುವರ್ಣಸೌಧ ಮುತ್ತಿಗೆಗೆ ಯತ್ನಿಸಿದ ವಿಜಯೇಂದ್ರ, ಸಿ.ಟಿ. ರವಿ ಸೇರಿ ಹಲವರು ಪೊಲೀಸ್ ವಶಕ್ಕೆ
ಬೆಳಗಾವಿಯ ಮಾಲಿನಿ ಸಿಟಿ ಮೈದಾನದಲ್ಲಿ ಜಮಾಯಿಸಿದ ಬೃಹತ್ ಪ್ರತಿಭಟನಾಕಾರರ ಗುಂಪನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ನಾಯಕರು, ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ರಾಜ್ಯದ ರೈತರ ಸಂಕಷ್ಟಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಆರೋಪಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿಗಳನ್ನು ಖಂಡಿಸಿ ಬಿಜೆಪಿ ನಾಯಕರು ಇಂದು (ಮಂಗಳವಾರ) ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಸಾವಿರಾರು ರೈತರೊಂದಿಗೆ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಿ.ಟಿ. ರವಿ ಸೇರಿದಂತೆ ಪ್ರಮುಖ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಳಗಾವಿಯ ಮಾಲಿನಿ ಸಿಟಿ ಮೈದಾನದಲ್ಲಿ ಜಮಾಯಿಸಿದ ಬೃಹತ್ ಪ್ರತಿಭಟನಾಕಾರರ ಗುಂಪನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ನಾಯಕರು, ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ರಾಜ್ಯದ ರೈತರ ಸಂಕಷ್ಟಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಆರೋಪಿಸಿದರು. ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮತ್ತು ಹಲವು ಶಾಸಕರು, ಎಂಎಲ್‌ಸಿಗಳು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಸುವರ್ಣಸೌಧ ಮುತ್ತಿಗೆಗೆ ಯತ್ನ
ಮಾಲಿನಿ ಸಿಟಿ ಮೈದಾನದಿಂದ ಸುವರ್ಣಸೌಧದತ್ತ ಮೆರವಣಿಗೆ ಹೊರಟ ಪ್ರತಿಭಟನಾಕಾರರನ್ನು ಹಲಗಾ ಗ್ರಾಮದ ಬಳಿ ಪೊಲೀಸರು ಬ್ಯಾರಿಕೇಡ್ ಹಾಕಿ ತಡೆದರು. ಈ ವೇಳೆ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ತೀವ್ರ ತಳ್ಳಾಟ, ನೂಕಾಟ ನಡೆಯಿತು. ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಟ್ಟ ಪೊಲೀಸರು, ಅಂತಿಮವಾಗಿ ಬಿ.ವೈ. ವಿಜಯೇಂದ್ರ, ಸಿ.ಟಿ. ರವಿ ಸೇರಿದಂತೆ ಹಲವು ನಾಯಕರನ್ನು ವಶಕ್ಕೆ ಪಡೆದರು.
ಸರ್ಕಾರದ ವೈಫಲ್ಯಗಳ ವಿರುದ್ಧ ಘೋಷಣೆ
ರಾಜ್ಯದಲ್ಲಿನ ಬರಗಾಲ, ಬೆಳೆ ನಷ್ಟ ಪರಿಹಾರ, ವಕ್ಫ್ ಆಸ್ತಿ ವಿವಾದ ಸೇರಿದಂತೆ ರೈತರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸುವ ಫಲಕಗಳನ್ನು ಹಿಡಿದು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ವಿಪಕ್ಷಗಳು ರೈತರ ಪರವಾಗಿ ಬೀದಿಗಿಳಿದು ಹೋರಾಟ ನಡೆಸುವ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಲು ಮುಂದಾಗಿವೆ.