ಟಾಕ್ಸಿಕ್’ ಆಗಮನಕ್ಕೆ ಕೌಂಟ್‌ಡೌನ್ ಶುರು; ಯಶ್ ಹೊಸ ಅವತಾರಕ್ಕೆ ಫ್ಯಾನ್ಸ್ ಫಿದಾ!
ಯಶ್ ಅವರ ಹೊಸದೊಂದು ಖಡಕ್ ಲುಕ್ ಅನ್ನು ಕೂಡ ಚಿತ್ರತಂಡ ಅನಾವರಣಗೊಳಿಸಿದೆ. "100 ದಿನಗಳಲ್ಲಿ ಕಾಲ್ಪನಿಕ ಕಥೆ ತೆರೆದುಕೊಳ್ಳುತ್ತದೆ" ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಳ್ಳುವ ಮೂಲಕ ಅಭಿಮಾನಿಗಳ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ.
ಟಾಕ್ಸಿಕ್ ಚಿತ್ರದಲ್ಲಿ ನಟ ಯಶ್
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್' (Toxic) ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಚಿತ್ರತಂಡ ಬಿಡುಗಡೆ ಮಾಡಿರುವ ಹೊಸ ಅಪ್‌ಡೇಟ್ ಪ್ರಕಾರ, ಸಿನಿಮಾ ತೆರೆಕಾಣಲು ಇನ್ನು ಕೇವಲ 100 ದಿನಗಳು ಬಾಕಿ ಉಳಿದಿವೆ. ಈ ಮೂಲಕ ಚಿತ್ರದ ಬಿಡುಗಡೆ ದಿನಾಂಕದ ಬಗ್ಗೆ ಹರಿದಾಡುತ್ತಿದ್ದ ಎಲ್ಲಾ ಊಹಾಪೋಹಗಳಿಗೆ ತೆರೆ ಬಿದ್ದಿದ್ದು, 2026ರ ಮಾರ್ಚ್ 19ರಂದು 'ಟಾಕ್ಸಿಕ್' ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ ಎಂದು ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ಅಧಿಕೃತಪಡಿಸಿದೆ.
ಬಿಡುಗಡೆ ದಿನಾಂಕದ ಘೋಷಣೆಯೊಂದಿಗೆ ಯಶ್ ಅವರ ಹೊಸದೊಂದು ಖಡಕ್ ಲುಕ್ ಅನ್ನು ಕೂಡ ಚಿತ್ರತಂಡ ಅನಾವರಣಗೊಳಿಸಿದೆ. "100 ದಿನಗಳಲ್ಲಿ ಕಾಲ್ಪನಿಕ ಕಥೆ ತೆರೆದುಕೊಳ್ಳುತ್ತದೆ" ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಳ್ಳುವ ಮೂಲಕ ಅಭಿಮಾನಿಗಳ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ. ಇನ್ನು, ಚಿತ್ರದ ಸಂಗೀತ ನಿರ್ದೇಶನದ ಬಗ್ಗೆ ಇದ್ದ ಕುತೂಹಲಕ್ಕೂ ತೆರೆಬಿದ್ದಿದ್ದು, ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಅವರೇ ಈ ಚಿತ್ರಕ್ಕೂ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ ಎಂದು ಚಿತ್ರತಂಡ ಖಚಿತಪಡಿಸಿದೆ.
ಖ್ಯಾತ ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸುತ್ತಿವೆ. ವಿಶೇಷವೆಂದರೆ, ಸ್ವತಃ ಯಶ್ ಅವರೇ ಈ ಚಿತ್ರದ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಗಳನ್ನು ಬರೆದಿರುವುದು ಸಿನಿಮಾದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಣಗೊಳ್ಳುತ್ತಿರುವ ಈ ಚಿತ್ರ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುವ ಭರವಸೆ ಮೂಡಿಸಿದೆ.