ಕಾಂಗ್ರೆಸ್‌ನಲ್ಲಿ ಮತ್ತೆ ಮೊಳಗಿದ 'ದಲಿತ ಸಿಎಂ' ಕೂಗು: ಸಿದ್ದರಾಮಯ್ಯ ಆಪ್ತನಿಂದಲೇ ಬೇಡಿಕೆ

ಮೊದಲ ಆದ್ಯತೆಯಾಗಿ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಐದು ವರ್ಷಗಳ ಕಾಲ ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಎಂಬುದು ಶಾಸಕ ನಾರಾಯಣಸ್ವಾಮಿ ಅವರು ಆಗ್ರಹಿಸಿದ್ದಾರೆ.

Update: 2025-12-09 10:46 GMT

ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ

Click the Play button to listen to article

ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿರುವ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ವಿಶೇಷವೆಂದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಶಾಸಕರೊಬ್ಬರೇ ಇದೀಗ "ಒಂದು ವೇಳೆ ಸಿಎಂ ಬದಲಾವಣೆಯಾದರೆ, ದಲಿತರಿಗೆ ಪಟ್ಟ ಕಟ್ಟಬೇಕು," ಎಂದು ಬಹಿರಂಗವಾಗಿ ಹೇಳಿಕೆ ನೀಡಿರುವುದು ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ.

'ದ ಫೆಡರಲ್ ಕರ್ನಾಟಕ'ದೊಂದಿಗೆ ಮಾತನಾಡಿದ ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ, ನಾಯಕತ್ವ ಬದಲಾವಣೆ ವಿಚಾರವಾಗಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಆಗಿರಲಿ

ಮೊದಲ ಆದ್ಯತೆಯಾಗಿ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಐದು ವರ್ಷಗಳ ಕಾಲ ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಎಂಬುದು ಶಾಸಕ ನಾರಾಯಣಸ್ವಾಮಿ ಅವರ ಆಗ್ರಹ. "ಕಾಂಗ್ರೆಸ್ ಪಕ್ಷದ ಒಳತಿಗಾಗಿ ಮತ್ತು ರಾಜ್ಯದ ಹಿತದೃಷ್ಟಿಯಿಂದ ಸಿದ್ದರಾಮಯ್ಯ ಅವರೇ 5 ವರ್ಷ ಪೂರೈಸುವುದು ಸೂಕ್ತ," ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಬದಲಾವಣೆ ಅನಿವಾರ್ಯವಾದರೆ 'ದಲಿತ ಸಿಎಂ' ಆಗಲಿ

ಮುಂದುವರಿದು ಮಾತನಾಡಿದ ಅವರು, "ಒಂದು ವೇಳೆ ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡಲೇಬೇಕಾದ ಸನ್ನಿವೇಶ ಎದುರಾದರೆ, ಮುಂದಿನ ಮುಖ್ಯಮಂತ್ರಿ ದಲಿತ ಸಮುದಾಯದವರೇ ಆಗಬೇಕು," ಎಂದು ಪಟ್ಟು ಹಿಡಿದಿದ್ದಾರೆ.

ಇದಕ್ಕೆ ಕಾರಣವನ್ನೂ ನೀಡಿರುವ ಅವರು, "ದಲಿತ ಸಮುದಾಯವು ಕಾಂಗ್ರೆಸ್ ಪಕ್ಷದಿಂದ ಸ್ವಲ್ಪ ಸ್ವಲ್ಪವೇ ದೂರ ಸರಿಯುತ್ತಿರುವ ಆತಂಕವಿದೆ. ಈ ಸಮುದಾಯದ ವಿಶ್ವಾಸವನ್ನು ಮರಳಿ ಗಳಿಸಲು ಮತ್ತು ಪಕ್ಷವನ್ನು ಬಲಪಡಿಸಲು ದಲಿತ ನಾಯಕರಿಗೆ ಸಿಎಂ ಸ್ಥಾನ ನೀಡುವುದು ಅನಿವಾರ್ಯ," ಎಂದು ಪ್ರತಿಪಾದಿಸಿದ್ದಾರೆ.

Full View

ಖರ್ಗೆ, ಪರಮೇಶ್ವರ್, ಜಾರಕಿಹೊಳಿ ಹೆಸರು ಪ್ರಸ್ತಾಪ

ದಲಿತ ಸಿಎಂ ಸ್ಥಾನಕ್ಕೆ ಅರ್ಹರಾಗಿರುವ ನಾಯಕರ ಪಟ್ಟಿಯನ್ನೂ ಅವರು ಮುಂದಿಟ್ಟಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅಥವಾ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಮುಖ್ಯಮಂತ್ರಿ ಮಾಡಬಹುದು ಎಂದು ಸಲಹೆ ನೀಡಿದ್ದಾರೆ.

ಹೈಕಮಾಂಡ್‌ಗೆ ಎಚ್ಚರಿಕೆ

ನಾಯಕತ್ವ ಬದಲಾವಣೆ ಪ್ರಕ್ರಿಯೆಯ ಬಗ್ಗೆಯೂ ಹೈಕಮಾಂಡ್‌ಗೆ ಪರೋಕ್ಷ ಎಚ್ಚರಿಕೆ ರವಾನಿಸಿರುವ ನಾರಾಯಣಸ್ವಾಮಿ, "ಮುಖ್ಯಮಂತ್ರಿ ಬದಲಾವಣೆ ಮಾಡುವುದಿದ್ದರೆ ಕಡ್ಡಾಯವಾಗಿ ಶಾಸಕರ ಅಭಿಪ್ರಾಯ ಪಡೆಯಲೇಬೇಕು. ಶಾಸಕರ ಅಭಿಪ್ರಾಯ ಪಡೆಯದೇ ಏಕಾಏಕಿ ತೀರ್ಮಾನ ಮಾಡಿದರೆ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದಲ್ಲಿ ಉಳಿಗಾಲವಿರುವುದಿಲ್ಲ," ಎಂದು ಎಚ್ಚರಿಸಿದ್ದಾರೆ.

ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಸಿಎಂ ಎಂದು ಬಿಂಬಿಸುವ ಪೋಸ್ಟ್ ವೈರಲ್ ಆದ ಬೆನ್ನಲ್ಲೇ, ಸಿದ್ದರಾಮಯ್ಯ ಬಣದಿಂದ 'ದಲಿತ ಸಿಎಂ' ಅಸ್ತ್ರ ಪ್ರಯೋಗವಾಗಿರುವುದು ಕಾಂಗ್ರೆಸ್ ಆಂತರಿಕ ಕಚ್ಚಾಟವನ್ನು ಜಗಜ್ಜಾಹೀರು ಮಾಡಿದೆ.

ರಾಜಣ್ಣ-ಯತ್ನಾಳ್-ರಮೇಶ್ ಜಾರಕಿಹೊಳಿ ಭೇಟಿ!

ರಾಜಕೀಯ ಕಡುವೈರಿಗಳೂ ಒಂದೇ ವೇದಿಕೆಯಲ್ಲಿ ಸೇರಿದಾಗ ಅಥವಾ ಗುಪ್ತವಾಗಿ ಮಾತುಕತೆ ನಡೆಸಿದಾಗ ಹುಟ್ಟಿಕೊಳ್ಳುವ ಕುತೂಹಲವೇ ಬೇರೆ. ಅಂತಹದೊಂದು ಸನ್ನಿವೇಶಕ್ಕೆ ಇಂದು ಬೆಳಗಾವಿಯ ಸುವರ್ಣ ವಿಧಾನಸೌಧ ಸಾಕ್ಷಿಯಾಯಿತು.

ಸಹಕಾರ ಸಚಿವ ಹಾಗೂ ಕಾಂಗ್ರೆಸ್ ನಾಯಕ ಕೆ.ಎನ್. ರಾಜಣ್ಣ ಅವರೊಂದಿಗೆ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಮತ್ತು ಇತ್ತೀಚೆಗೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಿಂದ ಹೊರಗುಳಿದು ಬಂಡಾಯದ ಬಾವುಟ ಹಾರಿಸಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರು ಒಟ್ಟಾಗಿ ಕಾಣಿಸಿಕೊಂಡು ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ವಿಧಾನಸಭೆಯ ಕಲಾಪದ ಭೋಜನ ವಿರಾಮದ ವೇಳೆ ಈ ನಾಯಕರು ವಿಧಾನಸಭೆಯ ಮೊಗಸಾಲೆಯಲ್ಲಿ ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಸಂಸದ ಬಿ.ವಿ. ನಾಯಕ್ ಕೂಡ ಉಪಸ್ಥಿತರಿದ್ದರು.

Tags:    

Similar News