ಮೈಸೂರಿನಲ್ಲಿ ಸೆರೆ ಸಿಕ್ಕಿದ್ದ ನಾಲ್ಕು ಹುಲಿ ಮರಿಗಳು ನಿಗೂಢ ಸಾವು
ಕೆಲವು ದಿನಗಳ ಹಿಂದೆ ಮೈಸೂರಿನಲ್ಲಿ ಸೆರೆ ಸಿಕ್ಕಿದ್ದ ಹುಲಿ ಮರಿಗಳು ಇದೀಗ ನಿಗೂಢವಾಗಿ ಸಾವನ್ನಪ್ಪಿವೆ. ತಾಯಿ ಹುಲಿಯಿಂದ ದೂರವಿದ್ದ ಹುಲಿಮರಿಗಳು ನಿತ್ರಾಣಗೊಂಡು ಅಸುನೀಗಿವೆ ಎನ್ನಲಾಗಿದೆ.
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಗೌಡನಕಟ್ಟೆ ಗ್ರಾಮದಲ್ಲಿ ನವೆಂಬರ್ 29 ರಂದು ತಾಯಿಯೊಂದಿಗೆ ಸೆರೆ ಸಿಕ್ಕಿದ್ದ ನಾಲ್ಕು ಹುಲಿ ಮರಿಗಳು ಆಹಾರ ಸೇವಿಸದೆ ಅಸ್ವಸ್ಥಗೊಂಡು ಮೃತಪಟ್ಟಿವೆ. ಈ ಮರಿಗಳ ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ಪಶುವೈದ್ಯರು ಮೃತ ಹುಲಿ ಮರಿಗಳ ಮರಣೋತ್ತರ ಪರೀಕ್ಷೆಯನ್ನು ನಡೆಸಿದ್ದು, ನಿಖರ ವರದಿ ಹೊರಬೀಳಬೇಕಿದೆ.
ನವೆಂಬರ್ 28ರಂದು ಈ ನಾಲ್ಕು ಮರಿಗಳ ಜೊತೆಗೆ ತಾಯಿ ಹುಲಿಯು ಕಾಣಿಸಿಕೊಂಡಿತ್ತು. ನವೆಂಬರ್ 29 ಮತ್ತು 30ರಂದು ಗೌಡನಕಟ್ಟೆಯ ಪ್ರಕಾಶ್ ಅವರ ಜೋಳದ ಹೊಲದ ಬಳಿ ಕಾಣಿಸಿಕೊಂಡಿದ್ದ ಹುಲಿ ಮರಿಗಳನ್ನು ಸ್ಥಳೀಯರು ಮತ್ತು ಅರಣ್ಯ ಸಿಬ್ಬಂದಿ ಪತ್ತೆ ಮಾಡಿದ್ದರು. ಮಧ್ಯರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ ತಾಯಿ ಹುಲಿಯನ್ನು ಸೆರೆ ಹಿಡಿದು ಪುನರ್ವಸತಿ ಕೇಂದ್ರಕ್ಕೆ ರವಾನಿಸಲಾಗಿತ್ತು.
ತಾಯಿ ಹುಲಿ ಸೆರೆ ಸಿಕ್ಕಿದ ಬಳಿಕ ಸುಮಾರು ಎರಡು ದಿನಗಳ ಕಾಲ ತಾಯಿಯಿಂದ ದೂರವಿದ್ದ ಹುಲಿಮರಿಗಳು, ಆಹಾರವಿಲ್ಲದೆ, ಜನರ ಕಿರುಚಾಟ ಮತ್ತು ಓಡಾಟದಿಂದ ಗಾಬರಿಗೊಂಡು ನಿತ್ರಾಣಗೊಂಡಿದ್ದವು. ನಂತರ ಈ ಮರಿಗಳನ್ನು ಸಹ ಕೂರ್ಗಳ್ಳಿ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಅವು ಗಾಬರಿಯಿಂದ ಮತ್ತು ಆಹಾರ ಸೇವಿಸದೆ ಅಸ್ವಸ್ಥಗೊಂಡ ಕಾರಣ ಕಳೆದ ನಾಲ್ಕು ದಿನಗಳ ಒಳಗೆ ಒಂದರ ನಂತರ ಒಂದು ಮರಿಗಳು ಪ್ರಾಣ ಕಳೆದುಕೊಂಡಿವೆ ಎಂದು ವರದಿಯಾಗಿದೆ.
ಪಶುವೈದ್ಯರು ನಾಲ್ಕೂ ಹುಲಿ ಮರಿಗಳ ಮರಣೋತ್ತರ ಪರೀಕ್ಷೆ ನಡೆಸುತ್ತಿದ್ದು, ಮರಿಗಳ ಸಾವಿಗೆ ನಿಖರ ಕಾರಣ ಇನ್ನಷ್ಟೇ ಸ್ಪಷ್ಟವಾಗಬೇಕಿದೆ. ಸದ್ಯಕ್ಕೆ ತಾಯಿ ಹುಲಿ ಮಾತ್ರ ಆರೋಗ್ಯವಾಗಿರುವುದಾಗಿ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ ಕರ್ನಾಟಕದಲ್ಲಿ, ವಿಶೇಷವಾಗಿ ಮಲೆ ಮಹದೇಶ್ವರ ಬೆಟ್ಟ ಮತ್ತು ಮೈಸೂರು ಭಾಗಗಳಲ್ಲಿ ಹುಲಿಗಳ ಸಾವು ಹೆಚ್ಚಾಗಿದೆ. ಆಹಾರ ಅರಸಿ ಲಗ್ಗೆ ಇಡುವ ಪ್ರಾಣಿಗಳು ಜನರ ಮೇಲೆ, ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿವೆ. ಮಾನವ ಮತ್ತು ಪ್ರಕೃತಿ ನಡುವಿನ ಸಂಘರ್ಷ ಇಂದು ನಿನ್ನೆಯದ್ಧಲ್ಲ. ಇದು ವನ್ಯಜೀವಿ ಸಂರಕ್ಷಣೆಗೆ ದೊಡ್ಡ ಸವಾಲಾಗಿದೆ.
ಇತ್ತೀಚೆಗೆ ನಡೆದ ಹುಲಿಗಳ ಸಾವು ಪ್ರಕರಣ
- ಮಲೆ ಮಹದೇಶ್ವರ ಬೆಟ್ಟ: ವಿಷ ಹಾಕಿದ ಹಸುವಿನ ಮಾಂಸ ತಿಂದಿದ್ದರಿಂದ ತಾಯಿ ಹುಲಿ ಮತ್ತು ನಾಲ್ಕು ಮರಿಗಳು ಸೇರಿದಂತೆ ಐದು ಹುಲಿಗಳು ಅಸುನೀಗಿದವು. ಇದೇ ಪ್ರದೇಶದಲ್ಲಿ ಇತ್ತೀಚೆಗೆ ಇನ್ನೊಂದು ಹುಲಿಯ ಅರ್ಧ ದೇಹ ಪತ್ತೆಯಾಗಿದ್ದು, ಪ್ರಾಣಿಗಳ ಬೇಟೆ ಶಂಕೆ ವ್ಯಕ್ತವಾಗಿದೆ.
- ಮೈಸೂರು ಜಿಲ್ಲೆ: ಹುಣಸೂರು ತಾಲೂಕಿನ ಗೌಡನಕಟ್ಟೆ ಬಳಿ ಸೆರೆ ಸಿಕ್ಕಿದ್ದ ತಾಯಿ ಹುಲಿಯ ನಾಲ್ಕು ಮರಿಗಳು ಆಹಾರವಿಲ್ಲದೆ ಮತ್ತು ಆಘಾತದಿಂದ ಸಾವನ್ನಪ್ಪಿವೆ.
- ಇತರ ಪ್ರದೇಶಗಳು: ನಾಗರಹೊಳೆ, ಬಂಡೀಪುರ, ಕಾವೇರಿ ವನ್ಯಧಾಮಗಳಲ್ಲೂ ಹುಲಿಗಳು ವಿವಿಧ ಕಾರಣಗಳಿಂದ ಮೃತಪಟ್ಟಿವೆ.
ಸರಣಿ ಸಾವುಗಳಿಗೆ ಕಾರಣಗಳು
- ವಿಷವುಣಿಸಿ ಹತ್ಯೆ: ಹಸುಗಳನ್ನು ಕೊಂದ ಹುಲಿಗಳಿಗೆ ಪ್ರತಿಯಾಗಿ ವಿಷದ ಮಾಂಸವನ್ನು ಹಾಕಿ ಕೊಲ್ಲುವುದು.
- ಸೆರೆ ಹಿಡಿಯುವ ಸಂದರ್ಭದಲ್ಲಿ ಯಡವಟ್ಟು: ಮರಿಗಳು ತಾಯಿಯಿಂದ ಬೇರ್ಪಟ್ಟು, ಜನರ ಕಿರುಚಾಟದಿಂದ ಗಾಬರಿಯಾಗಿ, ಆಹಾರವಿಲ್ಲದೆ ಬಳಲುತ್ತಿರುವುದು.
- ಅಸಹಜ ಸಾವು: ಕಾರಣಗಳು ಸ್ಪಷ್ಟವಾಗಿಲ್ಲದಿದ್ದರೂ, ಅರಣ್ಯ ಇಲಾಖೆ ತನಿಖೆ ನಡೆಸುತ್ತಿದೆ.
ಪರಿಣಾಮ:
- ಹುಲಿಗಳ ಸಾವು ವನ್ಯಜೀವಿ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.
- ಅರಣ್ಯ ಇಲಾಖೆ ತನಿಖೆ ಕೈಗೊಂಡಿದ್ದು, ಉನ್ನತ ಮಟ್ಟದ ತನಿಖಾ ತಂಡಗಳನ್ನು ರಚಿಸಿದೆ.