ಉತ್ತರ ಕರ್ನಾಟಕದ ನಿರ್ಲಕ್ಷ್ಯ : ಅಭಿವೃದ್ಧಿ ಕುರಿತು ಶ್ವೇತಪತ್ರ ಹೊರಡಿಸಲು ಪ್ರತಿಪಕ್ಷ ಆಗ್ರಹ
ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸರ್ಕಾರ ಕೂಡಲೇ ಈ ಭಾಗದ ಅಭಿವೃದ್ಧಿಯ ಕುರಿತು ‘ಶ್ವೇತಪತ್ರ’ ಹೊರಡಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ.
ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿರುವ ಪ್ರತಿಪಕ್ಷ , ಸರ್ಕಾರ ಕೂಡಲೇ ಈ ಭಾಗದ ಅಭಿವೃದ್ಧಿಯ ಕುರಿತು ‘ಶ್ವೇತಪತ್ರ’ ಹೊರಡಿಸಬೇಕು ಎಂದು ಸದನದಲ್ಲಿ ಒತ್ತಾಯಿಸಿದೆ.
ಬೆಳಗಾವಿ ಅಧಿವೇಶನದಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಅರ್. ಅಶೋಕ್, ಪ್ರವಾಹ ಪರಿಹಾರ, ರೈತರ ಸಮಸ್ಯೆ ಮತ್ತು ಅನುದಾನ ಬಳಕೆಯಲ್ಲಿನ ತಾರತಮ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.
ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರಮುಖವಾಗಿ ಪ್ರವಾಹ ಪರಿಹಾರ ವಿಳಂಬದ ಆರೋಪ ಮಾಡಿದ ಅಶೋಕ್, ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರವಾಹ ಬಂದ ಒಂದೆರಡು ತಿಂಗಳಲ್ಲೇ ಪರಿಹಾರ ನೀಡಲಾಗಿತ್ತು. ಆದರೆ, ಕಾಂಗ್ರೆಸ್ ಸರ್ಕಾರ 2013-16ರ ಅವಧಿಯಲ್ಲಿ ಪರಿಹಾರ ನೀಡಲು 7 ರಿಂದ 9 ತಿಂಗಳು ತೆಗೆದುಕೊಂಡಿತ್ತು. ಈಗಲೂ ಅದೇ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಅಂಕಿಅಂಶ ಸಮೇತ ವಿವರಿಸಿದರು.
ಪ್ರವಾಹದ ಸಂದರ್ಭದಲ್ಲಿ ಜನರು ಗಂಜಿ ಕೇಂದ್ರದಲ್ಲಿರುತ್ತಾರೆ. ಆಗ ಸರ್ಕಾರ ಕೂಡಲೇ ಪರಿಹಾರ ನೀಡಬೇಕು. ಕಾಂಗ್ರೆಸ್ ಸರ್ಕಾರದಲ್ಲಿ, 2013-2014 ರ ಜುಲೈನಲ್ಲಿ 9 ತಿಂಗಳಾದ ನಂತರ, 2014-15 ರಲ್ಲಿ 8 ತಿಂಗಳ ನಂತರ, 2015-16 ರಲ್ಲಿ 7 ತಿಂಗಳ ನಂತರ ಪರಿಹಾರ ನೀಡಲಾಗಿದೆ. ಬಿಜೆಪಿ ಸರ್ಕಾರದಲ್ಲಿ 2019-20 ರ ಆಗಸ್ಟ್ ಪ್ರವಾಹದ ನಂತರ ಎರಡೇ ತಿಂಗಳಲ್ಲಿ ಪ್ರವಾಹ ನೀಡಲಾಗಿದೆ. 2022 ರ ಪ್ರವಾಹದಲ್ಲಿ ಎರಡು ತಿಂಗಳಲ್ಲಿ, 2021-22 ರ ಪ್ರವಾಹದಲ್ಲಿ ಎರಡು ತಿಂಗಳಲ್ಲಿ, 2023 ರ ಪ್ರವಾಹದಲ್ಲಿ ಒಂದೇ ತಿಂಗಳಲ್ಲಿ ಪ್ರವಾಹ ನೀಡಲಾಗಿತ್ತು ಎಂದು ಮಾಹಿತಿ ನೀಡಿದರು.
ಮನೆ ಕಳೆದುಕೊಂಡ ಸಂತ್ರಸ್ತರಿಗೆ ಎನ್‌ಡಿಆರ್‌ಎಫ್ ನಿಯಮದಂತೆ ಸಿಗುವ 95 ಸಾವಿರ ರೂ. ಜತೆಗೆ ಬಿಜೆಪಿ ಸರ್ಕಾರ ರಾಜ್ಯದ ಬೊಕ್ಕಸದಿಂದ 4 ಲಕ್ಷ ರೂ. ಸೇರಿಸಿ ಒಟ್ಟು 5 ಲಕ್ಷ ರೂ. ನೀಡುತ್ತಿತ್ತು. ಆದರೆ, ಪ್ರಸ್ತುತ ಸರ್ಕಾರ ಕೇವಲ ಕೇಂದ್ರದ ಪಾಲನ್ನು ಮಾತ್ರ ನೀಡುತ್ತಿದ್ದು, ಇದರಲ್ಲಿ ಮನೆ ಕಟ್ಟಲು ಸಾಧ್ಯವಿಲ್ಲ ಎಂದು ಟೀಕಿಸಿದರು. ಬಿಜೆಪಿ ಸರ್ಕಾರದಿಂದ 6,651.15 ಕೋಟಿ ರೂ. ಬೆಳೆ ಹಾನಿ ಪರಿಹಾರವನ್ನು 51.95 ಲಕ್ಷ ರೈತರ ಬ್ಯಾಂಕ್ ಖಾತೆಗೆ ಹಾಕಲಾಗಿತ್ತು. ಕಾಂಗ್ರೆಸ್ ಸರ್ಕಾರ ಡಿಬಿಟಿ ಬದಲು ಫ್ರೂಟ್ ತಂತ್ರಾಂಶ ತಂದು ನಾಲ್ಕು ತಿಂಗಳು ವಿಳಂಬ ಮಾಡಿದೆ. ಈಗ ಪರಿಹಾರ ನೀಡಲು ತಡವಾಗುತ್ತಿದೆ ಎಂದರು.
ವೈಮಾನಿಕ ಸಮೀಕ್ಷೆ ಎಂಬ ಕಣ್ಣೊರೆಸುವ ತಂತ್ರ
ಉತ್ತರ ಕರ್ನಾಟಕದ ಪ್ರವಾಹ ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ಮುಖ್ಯಮಂತ್ರಿಗಳು ಎಡವಿದ್ದಾರೆ ಎಂದು ಅಶೋಕ್ ಕಿಡಿಕಾರಿದರು. 117ಕ್ಕೂ ಹೆಚ್ಚು ಹಳ್ಳಿಗಳು ಜಲಾವೃತವಾಗಿ, ಸಾವಿರಾರು ಮನೆಗಳಿಗೆ ಹಾನಿಯಾಗಿದೆ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಕಾರಿನಲ್ಲಿ ಸಂಚರಿಸಿ ಸಂತ್ರಸ್ತರ ಅಹವಾಲು ಕೇಳಬೇಕಿತ್ತು. ಆದರೆ, ಅವರು ವೈಮಾನಿಕ ಸಮೀಕ್ಷೆ ನಡೆಸಿ ಸುಮ್ಮನಾದರು. ಅಧಿಕಾರಿಗಳು ಹಳ್ಳಿಗಳಿಗೆ ಭೇಟಿ ನೀಡದೆ, ಎಲ್ಲವೂ ಸರಿಯಿದೆ ಎಂದು ಸುಳ್ಳು ವರದಿ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
2014-2022 ರವರೆಗೆ ನರೇಂದ್ರ ಮೋದಿ ಸರ್ಕಾರ 11,603 ಕೋಟಿ ರೂ. ಪರಿಹಾರ ನೀಡಿದ್ದರೆ, ಮನಮೋಹನ್ ಸಿಂಗ್ ಸರ್ಕಾರ 3,233 ಕೋಟಿ ರೂ. ನೀಡಿತ್ತು. ಅಂದ್ರೆ ನಾಲ್ಕು ಪಟ್ಟು ಅಧಿಕಾರ ಪರಿಹಾರ ದೊರೆತಿದೆ. ಹಿಂದಿನ ಬಿಜೆಪಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಕೂಡಲೇ ಪರಿಹಾರ ನೀಡಲಿ ಎಂದು ಕೇಳಿರಲಿಲ್ಲ. ರಾಜ್ಯದ ಖಜಾನೆಯಿಂದಲೇ ಮೊದಲು ಹಣ ನೀಡಲಾಗಿತ್ತು. ಕೇಂದ್ರ ಸರ್ಕಾರಕ್ಕಾಗಿ ಕಾಯಬಾರದು ಎಂಬುದು ನನ್ನ ಅಭಿಪ್ರಾಯ. ಅದೇ ರೀತಿ ಈಗಲೂ ಕಾಂಗ್ರೆಸ್ ಸರ್ಕಾರ ಖಜಾನೆಯಿಂದ ಹಣ ತೆಗೆದು ನೀಡಲಿ ಎಂದು ಆಗ್ರಹಿಸಿದರು.
ತುಂಗಭದ್ರಾ ಜಲಾಶಯದ ಗೇಟ್ ದುರಂತದಿಂದ ನೀರು ಪಲಾಯನವಾಗಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಎರಡು ಬೆಳೆ ನಷ್ಟ ಅನುಭವಿಸಿದ ರೈತರಿಗೆ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಬೇಕು. ಅಲ್ಲದೆ, ಕಬ್ಬು ಬೆಳೆಗಾರರು ತೂಕದ ಯಂತ್ರಗಳಲ್ಲಿ ಮೋಸ ಹೋಗುತ್ತಿದ್ದು, ಸಕ್ಕರೆ ಕಾರ್ಖಾನೆಗಳ ಲಾಬಿಗೆ ಸರ್ಕಾರ ಮಣಿದಂತಿದೆ. ರೈತರ ಆತ್ಮಹತ್ಯೆಗಳು ನಡೆದರೂ ಸಚಿವರು ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಸರ್ಕಾರದ ಸಂವೇದನಾಶೂನ್ಯತೆಯನ್ನು ಪ್ರಶ್ನಿಸಿದರು.
ಅನುದಾನ ಕಡಿತ ಮತ್ತು ಅಭಿವೃದ್ಧಿ ಕುಂಠಿತ
ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಳ ಮತ್ತು ಇತರ ಯೋಜನೆಗಳಿಗೆ ಹಣ ಹೊಂದಿಸಲು, ಇತರೆ ಇಲಾಖೆಗಳ ಅನುದಾನದಲ್ಲಿ ಶೇ.20ರಷ್ಟು ಕಡಿತ ಮಾಡಲು ಅಥವಾ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲು ಆರ್ಥಿಕ ಇಲಾಖೆ ಸಲಹೆ ನೀಡಿದೆ ಎಂಬ ವಿಚಾರವನ್ನು ಅಶೋಕ್ ಪ್ರಸ್ತಾಪಿಸಿದರು. ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ ಸೇರಿದಂತೆ ಪ್ರಮುಖ ಇಲಾಖೆಗಳಿಗೆ ಬಿಡುಗಡೆಯಾದ ಅನುದಾನದಲ್ಲಿ ಕೇವಲ ಶೇ.14 ರಿಂದ 19 ರಷ್ಟು ಮಾತ್ರ ಬಳಕೆಯಾಗಿದೆ. ಹಣಕಾಸಿನ ಶಿಸ್ತು ಹದಗೆಟ್ಟಿದ್ದು, ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ ಎಂದು ದೂರಿದರು
ಕಲಬುರ್ಗಿ, ಬೀದರ್, ವಿಜಯಪುರ, ಯಾದಗಿರಿ ಮೊದಲಾದ ಜಿಲ್ಲೆಗಳಲ್ಲಿ 117 ಕ್ಕೂ ಅಧಿಕ ಹಳ್ಳಿಗಳು ಜಲಾವೃತವಾಗಿದೆ. 20,000 ಕ್ಕೂ ಹೆಚ್ಚು ಮನೆಗಳಿಗೆ ಹಾನಿ, 14.58 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆ ಹಾನಿಯಾಗಿದೆ. 2,890 ಶಾಲೆಗಳಿಗೆ ಹಾನಿಯಾಗಿದೆ. ಮೈಸೂರಿನಲ್ಲಿ ದಸರಾ ಆಚರಿಸುತ್ತಿದ್ದರೆ, ಉತ್ತರ ಕರ್ನಾಟಕದ ಜನರು ನೀರಿನಲ್ಲಿದ್ದರು. ನಾವೆಲ್ಲರೂ ಕಾರಿನಲ್ಲಿ ಹೋಗಿ ಭೇಟಿ ಮಾಡಿದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ವೈಮಾನಿಕ ಸಮೀಕ್ಷೆ ಮಾಡಿದರು. ಅದರ ಬದಲು ಕಾರಿನಲ್ಲೇ ಬಂದು ಜನರನ್ನು ಭೇಟಿ ಮಾಡಬಹುದಿತ್ತು. ಎಲ್ಲವೂ ಸರಿ ಇದೆ ಎಂದೇ ಐಎಎಸ್ ಅಧಿಕಾರಿಗಳು ಹೇಳುತ್ತಾರೆ. ಮುಖ್ಯಮಂತ್ರಿ ಪ್ರತಿ ಹಳ್ಳಿಗೆ ಹೋಗಬೇಕಿತ್ತು. ಅಧಿಕಾರಿಗಳು ಕೂಡ ಸಮೀಕ್ಷೆಗಾಗಿ ಗ್ರಾಮಗಳಿಗೆ ಬಂದಿಲ್ಲ. ಅನೇಕ ಕಡೆ ಪ್ರವಾಹ ಬಂದಿಲ್ಲ ಎಂದು ತಪ್ಪು ವರದಿ ನೀಡಿದ್ದಾರೆ ಎಂದರು.
ಸಂಸದ ಬಸವರಾಜ ಬೊಮ್ಮಾಯಿ ಈ ಕುರಿತು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಯಾವೆಲ್ಲ ಹಳ್ಳಿಗಳಲ್ಲಿ ಪ್ರವಾಹ ಆಗಿದೆ ಎಂದು ತಿಳಿಸಿದ್ದರೂ ಅವರಿಗೆ ಕಂದಾಯ ಇಲಾಖೆಯಿಂದ ಉತ್ತರ ನೀಡಿಲ್ಲ. ರೈತರನ್ನು ಕೈ ಬಿಟ್ಟು ಸರ್ಕಾರ ಅನ್ಯಾಯ ಮಾಡುತ್ತಿದೆ. ಆದ್ದರಿಂದ ಸರ್ಕಾರ ಮತ್ತೊಮ್ಮೆ ಸಮೀಕ್ಷೆ ಮಾಡಲಿ ಎಂದು ಒತ್ತಾಯಿಸಿದರು.
ಕಲ್ಯಾಣ ಕರ್ನಾಟಕದ ಶೋಚನೀಯ ಸ್ಥಿತಿ
ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆ ಹದಗೆಟ್ಟಿದೆ. 53 ಪದವಿ ಕಾಲೇಜುಗಳಲ್ಲಿ ಮತ್ತು 5 ಮೊರಾರ್ಜಿ ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿರುವುದು ಆತಂಕಕಾರಿ. ಅಪೌಷ್ಟಿಕತೆ ತಾಂಡವವಾಡುತ್ತಿದ್ದು, ತಲಾದಾಯದಲ್ಲಿ ಬೆಂಗಳೂರಿಗೂ ಕಲಬುರ್ಗಿಗೂ ಭಾರೀ ವ್ಯತ್ಯಾಸವಿದೆ ಎಂದು ಪ್ರಾದೇಶಿಕ ಅಸಮಾನತೆಯನ್ನು ಎತ್ತಿ ತೋರಿಸಿದರು.
ಉತ್ತರ ಕರ್ನಾಕದ ಸಮಸ್ಯೆಗಳ ಬಗ್ಗೆ ಡಾ.ನಂಜುಂಡಪ್ಪ ವರದಿಯಲ್ಲಿ ಉಲ್ಲೇಖಿಸಲಾಗಿದೆ. 6 ತಿಂಗಳಲ್ಲಿ ವರದಿ ನೀಡುತ್ತೇನೆಂದು ಕಳೆದ ಬಾರಿ ಸದನದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಪ್ರೊ.ಗೋವಿಂದರಾವ್ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಿ 12 ತಿಂಗಳಾದರೂ ವರದಿ ಬಂದಿಲ್ಲ. ಕೆಕೆಆರ್‌ಡಿಬಿ ಅನುದಾನದಡಿ ಜಿಲ್ಲಾ ತಾಲೂಕು ಆಸ್ಪತ್ರೆ, ಪಿಎಚ್‌ಸಿ, ಸಿಎಚ್‌ಸಿ ನಿರ್ಮಿಸಲು 900 ಕೋಟಿ ರೂ. ನೀಡಲಾಗುವುದು ಎಂದು ಹೇಳಿದ್ದರು. ಇದರ ಪ್ರಗತಿ ಎಲ್ಲಿಗೆ ಬಂದಿದೆ? ಕೈಗಾರಿಕಾ ಉತ್ತೇಜನದ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಆದರೆ 216 ಕಾರ್ಖಾನೆಗಳು ಇನ್ನೂ ಸ್ಥಾಪನೆಯ ಹಂತದಲ್ಲೇ ಇವೆ. ವಾಣಿಜ್ಯ ಕೈಗಾರಿಕಾ ಇಲಾಖೆಯಡಿ 221 ಕಾರ್ಖಾನೆಗಳು ಕೂಡ ಇದೇ ಸ್ಥಿತಿಯಲ್ಲಿವೆ. ಹತ್ತಿ ಕಾರ್ಖಾನೆ ಅಭಿವೃದ್ಧಿ, ಪ್ರವಾಸೋದ್ಯಮ ಅಭಿವೃದ್ಧಿ, ಆಲಮಟ್ಟಿ ಜಲಾಶಯವನ್ನು 224 ಮೀಟರ್‌ಗೆ ಎತ್ತರಿಸಲು 73,603 ಎಕರೆ ಭೂ ಸ್ವಾಧೀನ ಮೊದಲಾದ ಕ್ರಮಗಳ ಬಗ್ಗೆ ಹೇಳಲಾಗಿದೆ. ಆದರೆ ಇವ್ಯಾವುದೂ ಅನುಷ್ಠಾನವಾಗಿಲ್ಲ ಎಂದರು.
ನಾಯಕತ್ವದ ಗೊಂದಲ ಮತ್ತು ವಿಶೇಷ ಬೇಡಿಕೆ
ಸರ್ಕಾರದಲ್ಲಿ ಯಾರು ಮುಖ್ಯಮಂತ್ರಿ ಎಂಬ ಗೊಂದಲ ಶಾಸಕರಲ್ಲೇ ಇದೆ ಎಂದು ವ್ಯಂಗ್ಯವಾಡಿದ ಅಶೋಕ್, ಆಡಳಿತ ಯಂತ್ರ ಕುಸಿದಿದೆ ಎಂದರು. ಒಬ್ಬ ರಾಜ ಒಂದು ಹೆಜ್ಜೆ ಮುಂದೆ ಇಟ್ಟರೆ ಸೈನಿಕರು ಎರಡು ಹೆಜ್ಜೆ ಮುಂದಿಡುತ್ತಾರೆ. ಆದರೆ ಇಲ್ಲಿ ನಾಯಕತ್ವವೇ ಇಲ್ಲ. ಒಬ್ಬ ಶಾಸಕ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಎಂದು ಹೇಳುತ್ತಾರೆ. ಇಲ್ಲಿ ನಾಯಕತ್ವದ ಬಗ್ಗೆ ಗೊಂದಲವಿದೆ. ಹಾದಿ ಬೀದಿಯಲ್ಲಿ ನಾನೇ ಸಿಎಂ ಎಂದು ಹೇಳುವುದು ಮುಖ್ಯಮಂತ್ರಿ ಹುದ್ದೆಗೆ ಶೋಭೆ ತರುವುದಿಲ್ಲ. ಸರಿಯಾಗಿ ಕುಳಿತು ಯಾರು ಸಿಎಂ ಎಂದು ತೀರ್ಮಾನಿಸಿ ಎಂದರು.
ಮಂಗಳಮುಖಿಯರಿಗೆ ಮೀಸಲಾತಿ ನೀಡಿ
ಮಂಗಳಮುಖಿಯರು ರಸ್ತೆ ಸಿಗ್ನಲ್‌ಗಳಲ್ಲಿ ನಿಲ್ಲುತ್ತಾರೆ. ಸಮಾಜದಲ್ಲಿ ಕೀಳಾಗಿ ಕಾಣಲ್ಪಡುವ ಮಂಗಳಮುಖಿಯರಿಗೆ ಗೌರವದ ಬದುಕು ಕಲ್ಪಿಸಲು ಸರ್ಕಾರಿ ಸೌಲಭ್ಯಗಳಲ್ಲಿ ಶೇ.0.5 ರಷ್ಟು ಮೀಸಲಾತಿ ನೀಡಬೇಕೆಂಬ ಒತ್ತಾಯವನ್ನೂ ಮಾಡಿದರು.