ಅಧಿವೇಶನದಲ್ಲಿ ಪ್ರತಿಧ್ವನಿಸಿದ ಬೆಳಗಾವಿ ವಿಭಜನೆಯ ಕೂಗು; ಜನರ ಅಭಿಪ್ರಾಯ ಆಧರಿಸಿ ಜಿಲ್ಲೆ ವಿಭಜನೆ

ಬೆಳಗಾವಿಯನ್ನು ಬೆಳಗಾವಿ, ಚಿಕ್ಕೋಡಿ ಹಾಗೂ ಗೋಕಾಕ್ ಜಿಲ್ಲೆಗಳಾಗಿ ಘೋಷಿಸುವ ಮುನ್ನ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಕ್ರಮ ಕೈಗೊಳ್ಳುವುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

Update: 2025-12-10 08:33 GMT

ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಜಿಲ್ಲಾ ವಿಭಜನೆಯ ಮಾತುಗಳು ಮತ್ತೆ ಮುನ್ನೆಲೆಗೆ ಬಂದಿವೆ.

ಜಿಲ್ಲೆಯನ್ನು ಎರಡು ಅಥವಾ ಮೂರು ಜಿಲ್ಲೆಗಳಾಗಿ ವಿಭಜಿಸುವಂತೆ ಬಿಜೆಪಿ ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ. ಶಾಸಕರಾದ ಶಶಿಕಲಾ ಜೊಲ್ಲೆ, ಬಾಲಚಂದ್ರ ಜಾರಕಿಹೊಳಿ ಹಾಗೂ ಐಹೊಳೆ ದುರ್ಯೋಧನ ಮಹಾಲಿಂಗಪ್ಪ ಅವರು ಸದನದಲ್ಲಿ ದನಿಯೆತ್ತಿದ್ದು, ಆಡಳಿತಾತ್ಮಕ ದೃಷ್ಟಿಯಿಂದ ಬೆಳಗಾವಿ ಜಿಲ್ಲೆಯ ವಿಭಜನೆ ಮಾಡುವಂತೆ ಒತ್ತಾಯಿಸಿದ್ದಾರೆ. ಸದಸ್ಯರ ಆಗ್ರಹಕ್ಕೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿರುವುದು ಪ್ರತ್ಯೇಕ ಜಿಲ್ಲಾ ಹೋರಾಟಗಾರರಲ್ಲಿ ಸಂಭ್ರಮ ಹೆಚ್ಚಿಸಿದೆ.

ಕಂದಾಯ ಸಚಿವರು ಹೇಳಿದ್ದೇನು?

ಬೆಳಗಾವಿಯನ್ನು ಬೆಳಗಾವಿ, ಚಿಕ್ಕೋಡಿ ಹಾಗೂ ಗೋಕಾಕ್ ಜಿಲ್ಲೆಗಳಾಗಿ ಘೋಷಿಸುವ ಮುನ್ನ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಕ್ರಮ ಕೈಗೊಳ್ಳುವುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

ವಿಧಾನಸಭೆ ಕಲಾಪದಲ್ಲಿ ಶಾಸಕ ಐಹೊಳೆ ದುರ್ಯೋಧನ ಮಹಾಲಿಂಗಪ್ಪ ಅವರು ಸರ್ಕಾರದ ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ಸಚಿವರು, ದೊಡ್ಡ ಜಿಲ್ಲೆಯನ್ನು ಆಡಳಿತಾತ್ಮಕವಾಗಿ ನಿರ್ವಹಣೆ ಮಾಡುವುದು ಕಷ್ಟ. ಇದರಿಂದ ಜನಪರ ಆಡಳಿತ ಕಷ್ಟಸಾಧ್ಯ ಎಂಬುದು ಸರ್ಕಾರಕ್ಕೂ ಗೊತ್ತಿದೆ. ಬೆಳಗಾವಿ ಜಿಲ್ಲೆಯನ್ನು ಎರಡು ಅಥವಾ ಮೂರು ಪ್ರತ್ಯೇಕ ಜಿಲ್ಲೆಗಳನ್ನಾಗಿ ಮಾಡಬೇಕೆಂಬ ಒತ್ತಾಯವಿದೆ. ಇದನ್ನು ಸೂಕ್ಷ್ಮವಾಗಿ ನಿರ್ವಹಿಸಬೇಕಿದೆ. ಸಮಯ ನೋಡಿಕೊಂಡು ಎಲ್ಲರ ಅಭಿಪ್ರಾಯ ಪಡೆದು ಸಿಎಂ ಜತೆ ಚರ್ಚಿಸಲಾಗುವುದು ಎಂದು ಹೇಳಿದ್ದಾರೆ.

ಭೌಗೋಳಿಕವಾಗಿ ಅತಿ ದೊಡ್ಡ ಜಿಲ್ಲೆ

ಬೆಳಗಾವಿಯು ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿದೆ. ಅಥಣಿಯಿಂದ ಬೆಳಗಾವಿಗೆ ಬರಲು ಮೂರೂವರ ತಾಸು (134ಕಿ.ಮೀ.) ಪ್ರಯಾಣಿಸಬೇಕು. ರಾಯಭಾಗ, ನಿಪ್ಪಾಣಿಯಿಂದ ಬೆಳಗಾವಿಗೆ ತೆರಳಲು 91 ಕಿ.ಮೀ ಕ್ರಮಿಸಬೇಕು. ಯಾವುದಾದರೂ ಕೆಲಸ ಕಾರ್ಯಗಳಿಗೆ ಬಂದು ಹೋಗಲು ಇಡೀ ದಿನ ಕಳೆದು ಹೋಗಲಿದೆ.

ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಿಸಿ, ವರ್ಷಕ್ಕೊಂದು ಬಾರಿ ಅಧಿವೇಶನ ನಡೆಸಿದರೂ ಆಡಳಿತಾತ್ಮಕ ಅಡೆತಡೆಗಳು ಬಗೆಹರಿದಿಲ್ಲ. ಹಾಗಾಗಿ, ಜಿಲ್ಲೆ ವಿಭಜನೆ ಅನಿವಾರ್ಯ ಎಂಬುದು ರಾಜಕಾರಣಿಗಳು ಹಾಗೂ ಪ್ರತ್ಯೇಕ ಜಿಲ್ಲಾ ಹೋರಾಟ ಸಮಿತಿಯವರ ಆಗ್ರಹವಾಗಿದೆ.

ಆದರೆ, ಜಿಲ್ಲೆ ವಿಭಜನೆಗೆ ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿವೆ. ದಶಕಗಳಿಂದ ಕಗ್ಗಂಟಾಗಿ ಪರಿಣಮಿಸಿರುವ ಗಡಿ ವಿವಾದವನ್ನು ಮೊದಲು ಇತ್ಯರ್ಥಪಡಿಸಬೇಕು. ನಂತರ ಜಿಲ್ಲೆ ವಿಭಜನೆ ಮಾಡಬೇಕು ಎಂಬುದು ಸಂಘಟನೆಗಳ ಅಭಿಪ್ರಾಯವಾಗಿದೆ. ಒಂದೊಮ್ಮೆ ಜಿಲ್ಲೆಯ ವಿಭಜನೆಗೆ ಸರ್ಕಾರ ಮುಂದಾದರೆ ಮಹಾರಾಷ್ಟ್ರ ತಕರಾರು ತೆಗೆಯುವ ಸಾಧ್ಯತೆ ಇದೆ. ಹಾಗಾಗಿ ಗಡಿ ವಿವಾದ ಇತ್ಯರ್ಥ ಮಾಡಿಕೊಂಡು ವಿಭಜನೆ ಮಾಡುವುದು ಸೂಕ್ತ ಎಂದು ಹೇಳುತ್ತಾರೆ.

ಬೆಳಗಾವಿ ವಿಭಜನೆ ಅಗತ್ಯವೆಷ್ಟು?

ಬೆಳಗಾವಿಯು ಒಟ್ಟು 14 ತಾಲೂಕು, 506 ಗ್ರಾಮ ಪಂಚಾಯಿತಿ ಸೇರಿ 54 ಲಕ್ಷ ಜನಸಂಖ್ಯೆ 300 ಕಿ.ಮೀ ಭೌಗೋಳಿಕ ವಿಸ್ತಾರ ಹೊಂದಿದೆ. ಸರ್ಕಾರದ ವಿವಿಧ ಯೋಜನೆ ತಲುಪುವಲ್ಲಿ ವಿಳಂಬ, ಸಂಪನ್ಮೂಲ ಹಂಚಿಕೆಯಲ್ಲಿ ಅಸಮತೋಲನ, ಭಾಷಾ ವೈವಿಧ್ಯತೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಜಿಲ್ಲೆ ವಿಭಜನ ಅಗತ್ಯವಾಗಿದೆ.

ಬೆಳಗಾವಿ ನಗರ, ಗೋಕಾಕ್, ಅಥಣಿ, ಚಿಕ್ಕೋಡಿ ತಾಲೂಕುಗಳ ನಡುವೆ ಅಭಿವೃದ್ಧಿಯ ಅಸಮಾನತ ಹೆಚ್ಚಿದ ಹಾಗಾಗಿ, ಬೆಳಗಾವಿ ಜಿಲ್ಲೆಯನ್ನು ಮೂರು ಜಿಲ್ಲೆಗಳಾಗಿ ವಿಂಗಡಿಸಬೇಕು ಎಂಬ ಪ್ರಸ್ತಾವವಿದೆ. ಬೆಳಗಾವಿ, ಹುಕ್ಕೇರಿ, ಖಾನಾಪುರ, ಸವದತ್ತಿ ಹಾಗೂ ರಾಮದುರ್ಗ ಒಳಗೊಂಡ ಬೆಳಗಾವಿ ಜಿಲ್ಲೆ ಚಿಕ್ಕೋಡಿ, ನಿಪ್ಪಾಣಿ, ಅಥಣಿ, ಗೋಕಾಕ್, ರಾಯಭಾಗ ಒಳಗೊಂಡ ಚಿಕ್ಕೋಡಿ ಜಿಲ್ಲೆ, ಬೈಲಹೊಂಗಲ, ಕಿತ್ತೂರು, ಕಾಗವಾಡ, ಹಿರೇಬಾಗವಾಡಿ ಒಳಗೊಂಡ ಬೈಲಹೊಂಗಲ ಜಿಲ್ಲೆ ರಚಿಸಬೇಕೆಂಬುದು ಪ್ರಸ್ತಾಪಿಸಲಾಗಿದೆ.

ಜಿಲ್ಲಾ ಹೋರಾಟದ ಇತಿಹಾಸ

1996 ರಲ್ಲಿ ದಿವಂಗತ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ಬೆಳಗಾವಿ ವಿಭಜನೆ ಪ್ರಕ್ರಿಯೆ ಆರಂಭಿಸಿದ್ದರು. ಆದರೆ, ಅಶೋಕ್ ಚಂದರಗಿ ನೇತೃತ್ವದಲ್ಲಿ ಜಿಲ್ಲೆಯ ವಿಭಜನ ವಿರೋಧಿಸಿ ತೀವು ಹೋರಾಟ ನಡೆಸಿದ ಹಿನ್ನೆಲೆಯಲ್ಲಿ ಪ್ರಕ್ರಿಯೆ ಕೈ ಬಿಡಲಾಗಿತ್ತು. ಗಡಿ ವಿವಾದ ಬಗೆಹರಿಯುವವರೆಗೂ ಜಿಲ್ಲೆ ವಿಭಜಿಸದಂತೆ ಪಟ್ಟು ಹಿಡಿಯಲಾಗಿತ್ತು. ತಿಂಗಳುಗಟ್ಟಲೇ ಉಪವಾಸ ಸತ್ಯಾಗ್ರಹ ನಡೆಸಿದ್ದರಿಂದ ಪ್ರಸ್ತಾವ ಕೈ ಬಿಡಲಾಗಿತ್ತು.

ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಗಾಗಿ ಸಂಪದಾನ ಸ್ವಾಮೀಜಿ ನೇತೃತ್ವದಲ್ಲಿ 2024ರಲ್ಲಿ ಚಿಕ್ಕೋಡಿ ಉಪ ವಿಭಾಗಾಧಿಕಾರಿ ಕಚೇರಿ ಎದುರು ಹೋರಾಟ ನಡೆಸಲಾಗಿತ್ತು. ಡಿಸೆಂಬರ್ 2024 ರಲ್ಲಿ ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ಚಿಕ್ಕೋಡಿ ಮತ್ತು ಗೋಕಾಕ್ ಎಂಬ ಹೊಸ ಜಿಲ್ಲೆಗಳ ರಚನೆಯನ್ನು ಸರ್ಕಾರ ಘೋಷಿಸುವ ನಿರೀಕ್ಷೆ ಇತ್ತು. ಮಠಾಧೀಶರು, ನಾಗರಿಕ ಮುಖಂಡರು ಮತ್ತು ಸ್ಥಳೀಯ ಸಂಸ್ಥೆಗಳು ವಿಭಜನೆಗೆ ಒತ್ತಾಯಿಸಿ ಮನವಿ ಸಲ್ಲಿಸಿದ್ದವು. 1997 ರಲ್ಲಿ ವಾಸುದೇವ್ ರಾವ್, ಹುಂಡೇಕರ್ ಮತ್ತು ಪಿ.ಸಿ.ಗದ್ದಿಗೌಡರ್ ಸಮಿತಿಗಳು ಚಿಕ್ಕೋಡಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ರೂಪಿಸಲು ಶಿಫಾರಸು ಮಾಡಿದ್ದವು.

Tags:    

Similar News