ರಾಜ್ಯದಲ್ಲಿ ಇನ್ನೂ 37.48 ಲಕ್ಷ ಮಂದಿ ವಸತಿ ರಹಿತರು!

ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ವಸತಿ ಹಾಗೂ ನಿವೇಶನ ರಹಿತರ ಸಮೀಕ್ಷೆ ಹಾಗೂ 2017ರಲ್ಲಿ ಪ್ರಧಾನ ಮಂತ್ರಿ ಆವಾಸ್ (ನಗರ) ಯೋಜನೆಯಡಿ ನಗರ ಪ್ರದೇಶದಲ್ಲಿ ವಸತಿ ಮತ್ತು ನಿವೇಶನ ರಹಿತರ ಸಮೀಕ್ಷೆಯನ್ನು ಕೈಗೊಳ್ಳಲಾಗಿದೆ.

Update: 2025-12-10 14:02 GMT
ಸಾಂದರ್ಭಿಕ ಚಿತ್ರ
Click the Play button to listen to article

ಎಲ್ಲರಿಗೂ ಸೂರು ಒದಗಿಸಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದರೂ ರಾಜ್ಯದಲ್ಲಿ 37.48 ಲಕ್ಷ ಮಂದಿ ವಸತಿರಹಿತರಿದ್ದಾರೆ!

ಈ  ಆಘಾತಕಾರಿ ಮಾಹಿತಿಯನ್ನು ವಸತಿ ಸಚಿವ ಜಮೀರ್ ಅಹಮದ್ ಖಾನ್ ವಿಧಾನಪರಿಷತ್‌ನಲ್ಲಿ ತಿಳಿಸಿದ್ದಾರೆ.

ಬುಧವಾರ(ಡಿ.10) ಎಂಎಲ್‌ಸಿ ಕೆ. ಶಿವಕುಮಾರ್‌ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ 2018ರಲ್ಲಿ ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ವಸತಿ ಹಾಗೂ ನಿವೇಶನ ರಹಿತರ ಸಮೀಕ್ಷೆ ಹಾಗೂ 2017ರಲ್ಲಿ ಪ್ರಧಾನ ಮಂತ್ರಿ ಆವಾಸ್ (ನಗರ) ಯೋಜನೆಯಡಿ ನಗರ ಪ್ರದೇಶದಲ್ಲಿ ವಸತಿ ಮತ್ತು ನಿವೇಶನ ರಹಿತರ ಸಮೀಕ್ಷೆಯನ್ನು ಕೈಗೊಳ್ಳಲಾಗಿದ್ದು, ಈ ಸಮೀಕ್ಷೆ ಯ ಪ್ರಕಾರ ರಾಜ್ಯದಲ್ಲಿ ಒಟ್ಟು 37,48,766 ವಸತಿ ರಹಿತರು ಕಂಡು ಬಂದಿದ್ದು, ಇದರಲ್ಲಿ 17,31,633 ನಿವೇಶನ ರಹಿತರು ಮತ್ತು 20,17,133 ವಸತಿ ರಹಿತರು ಇದ್ದಾರೆ ಎಂದು ಮಾಹಿತಿ ನೀಡಿದರು.

2024 ಹಾಗೂ2025ನೇ ಸಾಲಿನಲ್ಲಿ ವಿವಿಧ ವಸತಿ ಯೋಜನೆಗಳಡಿ ಒಟ್ಟು 7,38,881 ಮನೆಗಳ ಗುರಿ ನೀಡಿದ್ದು, ಇವುಗಳಲ್ಲಿ 3,27,747 ಅನುಮೋದನೆಗೊಂಡಿರುತ್ತವೆ. 4,11,134 ಮನೆಗಳು ಅನುಮೋದನೆಗೆ ಬಾಕಿಯಿವೆ. ರಾಜ್ಯದಲ್ಲಿ ಮನೆ ನಿರ್ಮಾಣಕ್ಕೆ ನೀಡುತ್ತಿರುವ ಅನುದಾನವನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ 4 ಲಕ್ಷ ರೂ. ಮತ್ತು ಸಾಮಾನ್ಯ ವರ್ಗದವರಿಗೆ 3.5 ಲಕ್ಷ ರೂ. ಹೆಚ್ಚಳ ಮಾಡುವ ಚಿಂತನೆ ಇದೆ ಎಂದು ತಿಳಿಸಿದರು.

ಬಸವ ವಸತಿ ಯೋಜನೆ ಸಹಾಯಧನ ಹೆಚ್ಚಳಕ್ಕೆ ಚಿಂತನೆ

ಬಸವ ವಸತಿ ಯೋಜನೆಗೆ ಈಗ ನೀಡುತ್ತಿರುವ ಸಹಾಯಧನವು ಯಾವುದಕ್ಕೂ ಸಾಕಾಗುತ್ತಿಲ್ಲ ಎನ್ನುವ ದೂರುಗಳು ಕೇಳಿ ಬರುತ್ತಲೇ ಇವೆ. ಇದು ಸರ್ಕಾರದ ಗಮನಕ್ಕೆ ಬಂದಿದ್ದು, ಆಯ್ಕೆಯಾದ ಫಲಾನುಭವಿಗಳಿಗೆ ಕನಿಷ್ಠ 3 ರಿಂದ 4 ಲಕ್ಷ ರೂ. ವರೆಗಾದರೂ ಸಹಾಯಧನ ಕೊಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ.

ಪರಿಷತ್‍ನಲ್ಲಿ   ಪ್ರದೀಪ್ ಶೆಟ್ಟರ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಗ್ರಾಮೀಣ ಪ್ರದೇಶಗಳಲ್ಲಿ ಮನೆ ನಿರ್ಮಾಣ ಮಾಡಲು ಬೇಕಾಗುವ ಕಚ್ಚಾ ವಸ್ತುಗಳ ಬೆಲೆ ದುಬಾರಿಯಾಗಿದ್ದು, ಆದ್ದರಿಂದ ವಿವಿಧ ವಸತಿ ಯೋಜನೆಗಳಡಿ ಫಲಾನುಭವಿಗಳಿಗೆ ಈಗ ನೀಡಲಾಗುತ್ತಿರುವ ಸಹಾಯಧನ ಹೆಚ್ಚಿಸುವ ಪ್ರಸ್ತಾವನೆಯು ಪರಿಶೀಲನೆಯಲ್ಲಿದೆ. ಈ ಸಹಾಯಧನ ಹೆಚ್ಚಳ ಸಂಬಂಧ ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದು, ಈ ಬಗ್ಗೆ ಬರುವ ಬಜೆಟ್‍ನಲ್ಲಿ ಪರಿಗಣಿಸುವ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದ್ದಾರೆ ಎಂದರು.

ಕೇಂದ್ರ ಅನುದಾನ ಇನ್ನೂ ಬಾಕಿ!

ಪ್ರಸ್ತುತ ಕೇಂದ್ರ ಸರ್ಕಾರದ ವಸತಿ ಯೋಜನೆಗಳನ್ನು ಹೊರತುಪಡಿಸಿ ಉಳಿದ ಯಾವುದೇ ವಸತಿ ಯೋಜನೆಗಳಡಿ ಅನುದಾನ ಬಿಡುಗಡೆ ಮಾಡಲು ಬಾಕಿ ಇರುವುದಿಲ್ಲ. 2024 ಹಾಗೂ 26ನೇ ಸಾಲಿನಲ್ಲಿ ರಾಜ್ಯದಲ್ಲಿ ವಿವಿಧ ವಸತಿ ಯೋಜನೆಗಳಡಿ ಅಕ್ಟೋಬರ್ 2025ರ ಅಂತ್ಯಕ್ಕೆ 1324.26 ಕೋಟಿ ರೂ. ಅನುದಾನವನ್ನು ಅರ್ಹ ಫಲಾನುಭವಿಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ಜಮೀರ್ ತಿಳಿಸಿದರು.

ಅಲ್ಪಸಂಖ್ಯಾತರ ವಸತಿ ನಿಲಯಗಳಿಗೆ ಮೂಲಭೂತ ಸೌಕರ್ಯ

ರಾಜ್ಯದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ ಒಟ್ಟು 405 ವಸತಿ ನಿಲಯಗಳ ಪೈಕಿ ಅಗತ್ಯವಿರುವ ವಸತಿ ನಿಲಯಗಳಿಗೆ ಮಂಚ, ಹೊದಿಕೆ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಕ್ಕೆ ಟೆಂಡರ್ ಕರೆಯಲಾಗಿದೆ. ವಸತಿ ನಿಲಯಗಳಲ್ಲಿ ಸಿಬ್ಬಂದಿ ಕೊರತೆ ಇರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಲ್ಪಸಂಖ್ಯಾತರ ನಿರ್ದೇಶನಾಲಯದ ವೃಂದ ಮತ್ತು ನೇಮಕಾತಿ ನಿಯಮಗಳು 2011ರ ಸಮಗ್ರ ಪರಿಷ್ಕರಣೆಯ ಪುಸ್ತಾವನೆಯು ಪರಿಶೀಲನೆಯಲ್ಲಿದ್ದು, ಈ ನಿಯಮಗಳು ಪರಿಷ್ಕರಣೆ ಆದ ನಂತರದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಗತ್ಯ ಕ್ರಮವಹಿಸಲಾಗುವುದು ಎಂದರು.

ಪ್ರಸ್ತುತ ವಿದ್ಯಾರ್ಥಿನಿಲಯಗಳ ಸುಗಮ ಕಾರ್ಯನಿರ್ವಹಣೆಗಾಗಿ ಹಾಗೂ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಶೈಕ್ಷಣಿಕ ಹಿತದೃಷ್ಟಿಯಿಂದ ಖಾಲಿ ಇರುವ ನಿಲಯಪಾಲಕರ ಹುದ್ದೆಗಳಿಗೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಹೆಚ್ಚುವರಿ ಪ್ರಭಾರದ ವ್ಯವ್ಯಸ್ಥೆಯನ್ನು ತಾತ್ಕಾಲಿಕವಾಗಿ ಮಾಡಲಾಗಿದೆ ಎಂದು ತಿಳಿಸಿದರು.

Similar News