ಆರ್‌ಟಒಗಳಲ್ಲಿ ತಂತ್ರಜ್ಞಾನವನ್ನೂ ಮೀರಿದ ಮಧ್ಯವರ್ತಿಗಳ ಮಾಫಿಯಾ: ಕ್ರಮಕ್ಕೆ ಮುಂದಾದ ಸರ್ಕಾರ
ಸಾರ್ವಜನಿಕರಿಗೆ ತೊಂದರೆಯಾಗುವಂತೆ ಮಧ್ಯವರ್ತಿಗಳಿಗೆ ಅವಕಾಶ ನೀಡಿದರೆ, ಆರ್‌ಟಿಓ ಕಚೇರಿಗಳ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಶಿಸ್ತುಕ್ರಮಕ್ಕೆ ಗುರಿಪಡಿಸಲಾಗುವುದು ಎಂದು ರಾಮಲಿಂಗಾರೆಡ್ಡಿ ಎಚ್ಚರಿಕೆ ನೀಡಿದ್ದಾರೆ.
ಸಾರಿಗೆ ಇಲಾಖೆಯ ಕಚೇರಿಗಳಲ್ಲಿ 52 ಆನ್‌ಲೈನ್ ಸಾರಿಗೆ ಸೇವೆಗಳನ್ನು ನೀಡಲಾಗುತ್ತಿದೆಯಾದರೂ, ಮಧ್ಯವರ್ತಿಗಳ ಹಾವಳಿ ಮಾತ್ರ ಇನ್ನೂ ತಪ್ಪಿಲ್ಲ. ಸಾರ್ವಜನಿಕರ ಅನುಕೂಲಕ್ಕಾಗಿ ತಂದಿರುವ ಈ ಯೋಜನೆಗಳಿಗೆ ಅಡ್ಡಬರುತ್ತಿರುವ ಈ 'ಮಧ್ಯವರ್ತಿಗಳ ಮಾಫಿಯಾ'ವು, ತಂತ್ರಜ್ಞಾನವನ್ನೂ ಮೀರಿ ಬೆಳೆದು ಕಮಿಷನ್ ವ್ಯವಹಾರಕ್ಕೆ ಮುಂದಾಗಿದೆ.
ಇದನ್ನು ಸರ್ಕಾರ ಕೂಡ ಪರೋಕ್ಷವಾಗಿ ಒಪ್ಪಿಕೊಂಡಿದೆ. ಇದೀಗ ಸರ್ಕಾರವೇ ಈ ಮಧ್ಯವರ್ತಿಗಳ ಹಾವಳಿ ತಡೆಗಟ್ಟಲು ಕಠಿಣ ಕ್ರಮಕ್ಕೆ ಮುಂದಾಗಿದೆ.
ಸಾರ್ವಜನಿಕರಿಗೆ ತೊಂದರೆಯಾಗುವಂತೆ ಮಧ್ಯವರ್ತಿಗಳಿಗೆ ಅವಕಾಶ ನೀಡಿದರೆ, ಆರ್‌ಟಿಓ ಕಚೇರಿಗಳ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಶಿಸ್ತುಕ್ರಮಕ್ಕೆ ಗುರಿಪಡಿಸಲಾಗುವುದು ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಎಚ್ಚರಿಕೆ ನೀಡಿದ್ದಾರೆ.
ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕಚೇರಿಗಳಲ್ಲಿ ಶಿಸ್ತು ಮತ್ತು ಪಾರದರ್ಶಕತೆ ತರಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಚೇರಿಯಲ್ಲಿ ಸ್ವೀಕರಿಸುವ ಎಲ್ಲಾ ಅರ್ಜಿಗಳು ಮತ್ತು ಸ್ವೀಕೃತಿಗಳನ್ನು ನಿಗದಿಪಡಿಸಿದ ನಮೂನೆಯಲ್ಲಿ ಕಡ್ಡಾಯವಾಗಿ ನಮೂದಿಸಬೇಕೆಂದು ಸೂಚಿಸಲಾಗಿದೆ.
"ಅಧೀಕ್ಷಕರು ಪ್ರತಿ ವಾರಕ್ಕೊಮ್ಮೆ ದಾಖಲೆಗಳನ್ನು ಪರಿಶೀಲಿಸುವುದು ಹಾಗೂ ತಿಂಗಳಿಗೊಮ್ಮೆ ತಪಾಸಣೆ ನಡೆಸಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುವಂತೆ ಸಾರಿಗೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಯಾವುದೇ ಕಚೇರಿಯಲ್ಲಿ ಮಧ್ಯವರ್ತಿಗಳು ಕಂಡುಬಂದರೆ, ಆಯಾ ಕಚೇರಿಯ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ನಿಯಮಾನುಸಾರ ಶಿಸ್ತುಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದ್ದೇವೆ," ಎಂದು ಅವರು ತಿಳಿಸಿದರು.
ಸಾರ್ವಜನಿಕರು ಮಧ್ಯವರ್ತಿಗಳನ್ನು ಸಂಪರ್ಕಿಸದೇ ನೇರವಾಗಿ ಕಛೇರಿಯ ಅಧಿಕಾರಿ, ಸಿಬ್ಬಂದಿಯವರನ್ನು ಭೇಟಿ ಮಾಡಿ ತಮ್ಮ ಕೆಲಸ ಮಾಡಿಸಿಕೊಳ್ಳಬೇಕು ಎಂದು ಆರ್‌ಟಿಒ ಕಚೇರಿಗಳ ಆವರಣದಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಈ ಸೂಚನಾ ಫಲಕಗಳಲ್ಲಿ ಲೋಕಾಯುಕ್ತರವರ ಕಚೇರಿ ವಿಳಾಸ ಮತ್ತು ದೂರವಾಣಿ ಸಂಖ್ಯೆಗಳ ಮಾಹಿತಿಯನ್ನೂ ಸಹ ಪ್ರದರ್ಶಿಸಲಾಗಿದೆ. 2021ರ ನವೆಂಬರ್ 1ರಿಂದ ಸಾರಿಗೆ ಇಲಾಖೆಯು 52 ಸೇವೆಗಳನ್ನು ಆನ್‌ಲೈನ್ ಮೂಲಕ ಒದಗಿಸುತ್ತಿದ್ದು, ಮಧ್ಯವರ್ತಿಗಳ ಹಾವಳಿಯನ್ನು ನಿಯಂತ್ರಿಸಲು ಕ್ರಮವಹಿಸಲಾಗುತ್ತಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಆನ್‌ಲೈನ್ ಸೇವೆ ಇದ್ದರೂ ಮಧ್ಯವರ್ತಿಗಳ ಹಾವಳಿ
ಸಾರಿಗೆ ಇಲಾಖೆಯಲ್ಲಿ ಮಧ್ಯವರ್ತಿಗಳ ಹಾವಳಿಯನ್ನು ತಡೆಯಲು ಸರ್ಕಾರವು ಆನ್‌ಲೈನ್ ಸೇವೆಗಳನ್ನು (ಸಾರಥಿ-4, ವಾಹನ್-4 ತಂತ್ರಾಂಶಗಳು) ಜಾರಿಗೆ ತಂದಿದ್ದರೂ, ಈ ತಂತ್ರಾಂಶಗಳು ಸಹ ಕೆಲವೊಮ್ಮೆ ಮಧ್ಯವರ್ತಿಗಳ ಜೇಬು ತುಂಬಿಸಲು ಸಾಧನವಾಗಿವೆ. ಅನೇಕ ಸಂದರ್ಭಗಳಲ್ಲಿ, ಸಾರ್ವಜನಿಕರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಸಹ ಮಧ್ಯವರ್ತಿಗಳನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ಉಂಟಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.
ಕೆಲವು ಆರ್‌ಟಿಒ ಕಚೇರಿಗಳಲ್ಲಿ ಸಿಬ್ಬಂದಿಯ ಕೊರತೆ ಮತ್ತು ಸರ್ವರ್ ಸಮಸ್ಯೆಯಂತಹ ತಾಂತ್ರಿಕ ಕಾರಣಗಳ ನೆಪದಿಂದ ಸಾರ್ವಜನಿಕರಿಗೆ ನೇರವಾಗಿ ಕೆಲಸ ಮಾಡಿಸಿಕೊಳ್ಳಲು ಕಷ್ಟವಾಗುತ್ತದೆ. ಇದರ ಪರಿಣಾಮವಾಗಿ, ತುರ್ತಾಗಿ ಕೆಲಸವಾಗಬೇಕಾದವರು ಕಚೇರಿಗಳ ಹೊರಗೆ ಇರುವ ಏಜೆಂಟರುಗಳಿಗೆ ಕಮಿಷನ್ ನೀಡಿ ಕೆಲಸ ಮಾಡಿಸಿಕೊಳ್ಳುತ್ತಾರೆ ಎಂಬ ದೂರು ಕೇಳಿಬರುತ್ತಿದೆ.
ಅಲ್ಲದೆ, ಕೆಲವು ಏಜೆಂಟರುಗಳು ಅಧಿಕಾರಿಗಳೊಂದಿಗೆ ಶಾಮೀಲಾಗಿ ಭ್ರಷ್ಟಾಚಾರದಲ್ಲಿ ತೊಡಗಿರುವುದರ ಕುರಿತು ಕೂಡ ವರದಿಗಳು ಪ್ರಕಟವಾಗಿವೆ. ಲಂಚ ಮತ್ತು ಭ್ರಷ್ಟಾಚಾರವನ್ನು ತಡೆಯಲು ಸರ್ಕಾರ ಕಠಿಣ ಕ್ರಮಗಳನ್ನು ಘೋಷಿಸಿದ್ದರೂ, ಹಲವೆಡೆ ಮಧ್ಯವರ್ತಿಗಳ ಹಾವಳಿ ಸಂಪೂರ್ಣವಾಗಿ ನಿಂತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಸಾರಥಿ, ವಾಹನ್ ತಂತ್ರಾಂಶ
ಆರ್‌ಟಿಒ ಇಲಾಖೆ ಸಾರ್ವಜನಿಕ ಸೇವೆಯನ್ನು ಸರಳವಾಗಿಸುವ ನಿಟ್ಟಿನಲ್ಲಿ ಹಾಗೂ ಮಧ್ಯವರ್ತಿಗಳ ಹಾವಳಿ ತಡೆಗೆ 'ಸಾರಥಿ', 'ವಾಹನ್' ಎಂಬ ವಿನೂತನ ತಂತ್ರಾಂಶಗಳನ್ನು ಅಭಿವೃದ್ಧಿ ಪಡಿಸಿದೆ. ಈ ಮೂಲಕ ಸಾರ್ವಜನಿಕರು ನೇರವಾಗಿ ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಿ, ಎಲ್‌ಎಲ್‌ಆರ್, ಡಿಎಲ್ ಮತ್ತಿತರೆ ಸೇವೆ ಪಡೆಯಬಹುದಾಗಿದೆ.