ನೋಂದಣಿಗೆ ಗ್ರಹಣ; ತಂತ್ರಾಂಶ ಸಮಸ್ಯೆ ನೆಪದಲ್ಲಿ ವಿಳಂಬ, ಆಸ್ತಿ ಮಾಲೀಕರು ಹೈರಾಣು

ಬೆಂಗಳೂರಿನಲ್ಲಿ ಡಿ.4 ರಿಂದ ನೋಂದಣಿ ಸ್ಥಗಿತಗೊಂಡಿದೆ. ಇ-ಖಾತೆ ಆಗಿ ನೋಂದಣಿಗೆ ದಿನಾಂಕ ನಿಗದಿ ಮಾಡಿದ್ದರೂ ಸರ್ವರ್ ಸಮಸ್ಯೆಯ ನೆಪ ಹೇಳಿ ವಿಳಂಬ ಮಾಡಲಾಗುತ್ತಿದೆ. ಸ್ವಾಧೀನಾನುಭವ ಪತ್ರ ಪಡೆದಿರುವ ಅನೇಕರು ಸಾಕಷ್ಟು ವರ್ಷಗಳಿಂದ ನೋಂದಣಿ ಮಾಡಿಸಿಕೊಳ್ಳಲು ಆಗುತ್ತಿಲ್ಲ.

Update: 2025-12-10 15:27 GMT

ರಾಜ್ಯಾದ್ಯಂತ ಮುದ್ರಾಂಕ ಹಾಗೂ ನೋಂದಣಿ ಸಮಸ್ಯೆಯಿಂದಾಗಿ ಆಸ್ತಿ ಮಾಲೀಕರು ಪರದಾಡುವಂತಾಗಿದೆ. ಪೋಡಿ ದುರಸ್ತಿಯ ಕಾರಣದಿಂದ ಪಂಚಾಯ್ತಿ ಸ್ವತ್ತುಗಳ ನೋಂದಣಿಯು ಕಳೆದೊಂದು ವಾರದಿಂದ ಸ್ಥಗಿತಗೊಂಡಿವೆ. ನಗರ ಪ್ರದೇಶದಲ್ಲಿ ತಂತ್ರಾಂಶಗಳ ಲೋಪದಿಂದಾಗಿ ಸ್ವತ್ತುಗಳ ನೋಂದಣಿ ಡಿ.4 ರಿಂದ ನಿಂತಿದೆ. ಮುದ್ರಾಂಕ ಹಾಗೂ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಪ್ರತಿ ನಿತ್ಯ ಸರ್ವರ್ ಡೌನ್ ನೆಪ ಹೇಳಿ ಆಸ್ತಿಗಳ ನೋಂದಣಿ ಪ್ರಕ್ರಿಯೆ ವಿಳಂಬ ಮಾಡುತ್ತಿರುವ ಆರೋಪಗಳು ಕೇಳಿ ಬಂದಿವೆ.

ಗ್ರಾಮೀಣ ಪ್ರದೇಶದಲ್ಲಿ ಸರ್ವೇ ದಾಖಲೆಗಳ ಡಿಜಿಟಲೀಕರಣ ಹಾಗೂ ಪೋಡಿ ದುರಸ್ತಿಯಿಂದಾಗಿ ನೋಂದಣಿ ನಿಲ್ಲಿಸಲಾಗಿದೆ. ಹಳೆಯ ಸರ್ವೇ ದಾಖಲೆಗಳಲ್ಲಿ ಯಾರದೋ ಸ್ವತ್ತಿನ ಮೇಲೆ ಇನ್ಯಾರದ್ದೋ ಆರ್ಟಿಸಿ ನಂಬರ್ ಕೂರಿಸಲಾಗುತ್ತಿತ್ತು. ರಿಯಲ್ ಎಸ್ಟೇಟ್ ಉದ್ಯಮಿಗಳು ಹಾಗೂ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಕಂದಾಯ ಇಲಾಖೆ ಪ್ರತಿಯೊಂದು ಸ್ವತ್ತನ್ನು ಪೋಡಿ ದುರಸ್ತಿ ಮಾಡಿಸಿ, ಮ್ಯುಟೇಷನ್ ಬಂದ ಮೇಲೆ ನೋಂದಣಿಗೆ ತೆಗೆದುಕೊಳ್ಳಲು ತೀರ್ಮಾನಿಸಿ, ನೋಂದಣಿ ನಿಲ್ಲಿಸಿದೆ.

ಕಳೆದೊಂದು ವಾರದಿಂದ ಪಂಚಾಯ್ತಿ ಸ್ವತ್ತುಗಳ ನೋಂದಣಿ ಸ್ಥಗಿತವಾಗಿದೆ. ಮುಂದಿನ ವಾರ ಪೋಡಿ ಸಮಸ್ಯೆ ಬಗೆಹರಿಯುವ ಸಾಧ್ಯತೆ ಇದ್ದು, ನೋಂದಣಿ ಆರಂಭವಾಗಲಿದೆ ಎನ್ನಲಾಗಿದೆ. ಇನ್ನು ನಗರ ಪ್ರದೇಶದಲ್ಲೂ ಆಸ್ತಿ ನೋಂದಣಿ ತಂತ್ರಾಂಶಗಳು ಒಂದಕ್ಕೊಂದು ಪೂರಕವಾಗಿರುವುದರಿಂದ ಸಮಸ್ಯೆ ಕಾಣಿಸಿಕೊಂಡಿದೆ. ಹಾಗಾಗಿ ಸರ್ವರ್ ಡೌನ್ ನೆಪ ಹೇಳಿ ನೋಂದಣಿ ಕಾರ್ಯಗಳನ್ನು ಮುಂದೂಡಲಾಗಿದೆ.

ಬೆಂಗಳೂರಿನಲ್ಲಿ ಡಿ.4 ರಿಂದ ನೋಂದಣಿ ಸ್ಥಗಿತಗೊಂಡಿದೆ. ಇ-ಖಾತೆ ಆಗಿ ನೋಂದಣಿಗೆ ದಿನಾಂಕ ನಿಗದಿ ಮಾಡಿದ್ದರೂ ಸರ್ವರ್ ಸಮಸ್ಯೆಯ ನೆಪ ಹೇಳಿ ವಿಳಂಬ ಮಾಡಲಾಗುತ್ತಿದೆ. ಸ್ವಾಧೀನಾನುಭವ ಪತ್ರ ಪಡೆದಿರುವ ಅನೇಕರು ಸಾಕಷ್ಟು ವರ್ಷಗಳಿಂದ ನೋಂದಣಿ ಮಾಡಿಸಿಕೊಳ್ಳಲು ಆಗುತ್ತಿಲ್ಲ. ಒಂದಿಲ್ಲೊಂದು ಕಾರಣ ನೀಡಿ ಮುಂದಕ್ಕೆ ಹಾಕಲಾಗುತ್ತಿದೆ. ಈ ಮಧ್ಯೆ ಮುದ್ರಾಂಕ ಶುಲ್ಕ ಹೆಚ್ಚಿಸುತ್ತಿರುವುದರಿಂದ ಆಸ್ತಿ ಮಾಲೀಕರಿಗೆ ಹೊರೆಯಾಗುತ್ತಿದೆ. ಸರ್ಕಾರವು ತಂತ್ರಾಂಶವನ್ನು ವ್ಯವಸ್ಥಿತವಾಗಿ ಮಾಡದಿರುವುದೇ ಇದಕ್ಕೆಲ್ಲಾ ಕಾರಣ. ಆಸ್ತಿ ನೋಂದಣಿ ಹೆಸರಲ್ಲಿ ಲಾಭ ಮಾಡಲು ವ್ಯವಸ್ಥೆಯನ್ನೇ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದು ಆಸ್ತಿ ಮಾಲೀಕರೊಬ್ಬರು ʼದ ಫೆಡರಲ್ ಕರ್ನಾಟಕʼದ ಬಳಿ ಅಳಲು ತೋಡಿಕೊಂಡರು.

ಕಳೆದ ಆಗಸ್ಟ್ ತಿಂಗಳಲ್ಲಿ ಮನೆ, ಫ್ಲಾಟ್ ಅಥವಾ ಜಮೀನು ಖರೀದಿಯ ನೋಂದಣಿ ಶುಲ್ಕವನ್ನು ಸರ್ಕಾರವು ಶೇ. 1ರಿಂದ ಶೇ. 2ಕ್ಕೆ ಹೆಚ್ಚಿಸಿತ್ತು. ಅದೇ ರೀತಿ ಮುದ್ರಾಂಕ ಶುಲ್ಕ ಶೇ 5 ಮತ್ತು ಇತರೆ ಸೆಸ್, ಸರ್‌ಚಾರ್ಜ್‌ಗಳೊಂದಿಗೆ ಒಟ್ಟು ಸರ್ಕಾರಿ ಶುಲ್ಕಗಳು ಶೇ 7.5 ರಿಂದ 7.6ರವರೆಗೆ ಏರಿಕೆಯಾಗಿದ್ದವು.

ಈ ಹಿಂದೆ 75 ಲಕ್ಷ ಮೌಲ್ಯದ ಫ್ಲಾಟ್ ಖರೀದಿಸಿದರೆ ನೋಂದಣಿ ಶುಲ್ಕ 75 ಸಾವಿರ ಆಗುತ್ತಿತ್ತು. ಪರಿಷ್ಕೃತ ಶುಲ್ಕಗಳಿಂದಾಗಿ ಇದೇ ಮೌಲ್ಯದ ಫ್ಲಾಟ್‌ ಖರೀದಿದಾರರು 1.5 ಲಕ್ಷ ನೋಂದಣಿ ಶುಲ್ಕ ಪಾವತಿಸಬೇಕಾಗಿತ್ತು.

Tags:    

Similar News