
ಡಿಕೆಶಿಯ RSS ಗೀತೆ ವಿವಾದ ; ಮುಗಿದ ಅಧ್ಯಾಯ, ಚರ್ಚೆ ಬೇಡ- ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಖಡಕ್ ಸೂಚನೆ
ಡಿಕೆಶಿ ತಮ್ಮ ಹೇಳಿಕೆಗೆ ಕ್ಷಮೆ ಕೇಳಿದ್ದಾರೆ. ಹಾಗಾಗಿ ಆ ವಿಷಯ ಮುಗಿದಿದೆ. ಮುಗಿದು ಹೋದ ವಿಷಯವನ್ನು ಮತ್ತೆ ಚರ್ಚಿಸಲು ಹೋಗುವುದಿಲ್ಲ. ಅದೇ ರೀತಿ ಪಕ್ಷದಲ್ಲಿ ಯಾರೂ ಕೂಡ ಮಾತನಾಡಬಾರದು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ʼನಮಸ್ತೆ ಸದಾ ವತ್ಸಲೇ ಮಾತೃಭೂಮೇʼ ಎಂದು ಹೇಳಿದ್ದ ಡಿ.ಕೆ.ಶಿವಕುಮಾರ್ ವಿಚಾರ ಇದೀಗ ಮುಗಿದ ಅಧ್ಯಾಯ, ಅದರ ಬಗ್ಗೆ ಯಾರೂ ಕೂಡ ಚರ್ಚಿಸಬಾರದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಪಕ್ಷದ ನಾಯಕರಿಗೆ ಸೂಚಿಸಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಹಾಗೆ ಹೇಳಬಾರದಿತ್ತು, ಆದರೆ, ಹೇಳಿದ್ದಾರೆ. ತಮ್ಮ ಹೇಳಿಕೆಗೆ ಕ್ಷಮೆಯನ್ನೂ ಕೇಳಿದ್ದಾರೆ. ಹಾಗಾಗಿ ಆ ವಿಷಯ ಮುಗಿದಿದೆ. ಮುಗಿದು ಹೋದ ವಿಷಯವನ್ನು ಮತ್ತೆ ಚರ್ಚಿಸಲು ಹೋಗುವುದಿಲ್ಲ. ಅದೇ ರೀತಿ ಪಕ್ಷದಲ್ಲಿ ಯಾರೂ ಕೂಡ ಮಾತನಾಡಬಾರದು ಎಂದು ಹೇಳಿದ್ದಾರೆ.
ಧರ್ಮಸ್ಥಳ ಪ್ರಕರಣ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಅದೂ ಕೂಡ ಮುಗಿದು ಹೋದ ವಿಷಯ, ಅದರ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ.
ವಿಧಾನಸಭೆಯಲ್ಲಿ ಡಿ.ಕೆ. ಶಿವಕುಮಾರ್ ಅವರು ಮಾತಿನ ಮಧ್ಯೆ ಆರ್‌ಎಸ್‌ಎಸ್ ಗೀತೆಯನ್ನು ಹೇಳುವ ಮೂಲಕ ಸ್ವಪಕ್ಷಿಯರಿಗೆ ಮುಜುಗರ ತಂದಿದ್ದರು. ಡಿಕೆಶಿ ಹೇಳಿಕೆಯನ್ನು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಸಚಿವ ಪ್ರಿಯಾಂಕ್ ಖರ್ಗೆ, ಮಾಜಿ ಸಚಿವ ಕೆ.ಎನ್. ರಾಜಣ್ಣ ಸೇರಿ ಹಲವು ಟೀಕಿಸಿದ್ದರು. ಅಲ್ಲದೇ ಹೈಕಮಾಂಡ್‌ಗೆ ದೂರು ನೀಡಿದ್ದರು.
ತಮ್ಮ ಹೇಳಿಕೆ ತೀವ್ರ ವಿವಾದದ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ಡಿ.ಕೆ. ಶಿವಕುಮಾರ್ ಕ್ಷಮೆಯಾಚಿಸಿದ್ದರು. ಡಿ.ಕೆ.ಶಿವಕುಮಾರ್ ಕ್ಷಮೆ ಕೋರಿದ್ದನ್ನು ತರಾಟೆಗೆ ತೆಗೆದುಕೊಂಡಿದ್ದ ಬಿಜೆಪಿ ನಾಯಕರು ಕಾಂಗ್ರೆಸ್ ನಿಲುವನ್ನು ಪ್ರಶ್ನಿಸಿದ್ದರು.