
ತುಮಕೂರಿನಲ್ಲಿ ಕಾಂಗ್ರೆಸ್ ಭವನಕ್ಕೆ ಭೂಮಿ ಮಂಜೂರು; ಸಿಎಂ, ಸಚಿವರು ಸೇರಿ ಹಲವರ ವಿರುದ್ಧ ಇಡಿಗೆ ದೂರು
ಮರಳೂರು ದಿಣ್ಣೆಯಲ್ಲಿರುವ ಸರ್ವೆ ನಂಬರ್ 87/1 ಮತ್ತು 87/2 ರಲ್ಲಿನ ಎರಡು ಎಕರೆ ಜಮೀನನ್ನು ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಪರಭಾರೆ ಮಾಡಲಾಗಿದೆ. ಈ ಜಾಗದ ಮಾರುಕಟ್ಟೆ ಮೌಲ್ಯ ಸುಮಾರು 25 ಕೋಟಿ ರೂ. ಇದ್ದರೂ ಕೇವಲ 17 ಲಕ್ಷ ರೂ.ಗಳಿಗೆ ಪರಭಾರೆ ಮಾಡಲಾಗಿದೆ.
ತುಮಕೂರಿನಲ್ಲಿ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಎರಡು ಎಕರೆ ಭೂಮಿ ಮಂಜೂರು ಮಾಡಿರುವುದು ತೀವ್ರ ವಿವಾದಕ್ಕೀಡಾಗಿದೆ. ಭೂಮಿ ಹಂಚಿಕೆಯಲ್ಲಿ ನಿಯಮ ಉಲ್ಲಂಘನೆ ಆರೋಪದ ಮೇಲೆ ಸಾಮಾಜಿಕ ಹೋರಾಟಗಾರ ಬಸವರಾಜು ಎಂಬುವರು ಸಿಎಂ ಸಿದ್ದರಾಮಯ್ಯ ಸೇರಿ ಸಚಿವರು, ಅಧಿಕಾರಿಗಳ ವಿರುದ್ಧ ಇಡಿಗೆ (ಜಾರಿ ನಿರ್ದೇಶನಾಲಯ) ದೂರು ಸಲ್ಲಿಸಿದ್ದಾರೆ.
ತುಮಕೂರಿನ ಮರಳೂರು ದಿಣ್ಣೆಯಲ್ಲಿರುವ ಸರ್ವೆ ನಂಬರ್ 87/1 ಮತ್ತು 87/2 ರಲ್ಲಿನ ಎರಡು ಎಕರೆ ಜಮೀನನ್ನು ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಪರಭಾರೆ ಮಾಡಲಾಗಿದೆ. ಈ ಜಾಗದ ಮಾರುಕಟ್ಟೆ ಮೌಲ್ಯ ಸುಮಾರು 25 ಕೋಟಿ ರೂ. ಇದ್ದರೂ ಕೇವಲ 17 ಲಕ್ಷ ರೂ.ಗಳಿಗೆ ಪರಭಾರೆ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ದೂರಿನಲ್ಲಿ ಯಾರೆಲ್ಲಾ ಇದ್ದಾರೆ?
ಸಾಮಾಜಿಕ ಕಾರ್ಯಕರ್ತ ಬಸವರಾಜು ಎಂಬುವರು ಇಡಿಗೆ ಸಲ್ಲಿಸಿರುವ ದೂರಿನಲ್ಲಿ ಸಿಎಂ ಸಿದ್ದರಾಮಯ್ಯ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಗೃಹ ಸಚಿವ ಡಾ.ಜಿ. ಪರಮೇಶ್ವರ್, ತುಮಕೂರು ಮಹಾನಗರ ಪಾಲಿಕೆ ಆಯುಕ್ತೆ ಅಶ್ವಿಜಾ ಹಾಗೂ ಉಪ ನೋಂದಣಾಧಿಕಾರಿ ನಂಜೇಶ್ ವಿರುದ್ಧ ಆರೋಪ ಹೊರಿಸಲಾಗಿದೆ.
ನೋಂದಣಿ ಮೌಲ್ಯವನ್ನು ಅಪಮೌಲ್ಯಗೊಳಿಸಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟ ಮಾಡಿದ್ದು, ಇವರ ವಿರುದ್ಧ ತನಿಖೆ ನಡೆಸುವಂತೆ ದೂರುದಾರರು ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಭವನಗಳಿಗೆ ಜಾಗ ಪಡೆಯಲು ಸಂಪುಟ ಒಪ್ಪಿಗೆ
ರಾಜ್ಯ ಸರ್ಕಾರ ಇತ್ತೀಚೆಗಷ್ಟೇ ಕಾಂಗ್ರೆಸ್ ಭವನಗಳಿಗೆ ವಿವಿಧ ಜಿಲ್ಲೆಗಳಲ್ಲಿ ಜಾಗ ಪಡೆಯುವ ಬಗ್ಗೆ ಪ್ರಸ್ತಾಪಿಸಿ ಅನುಮೋದನೆ ಪಡೆದಿತ್ತು. ಕೊಪ್ಪಳ, ಬಾದಾಮಿ ಮತ್ತು ಪುತ್ತೂರಿನಲ್ಲಿ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಅನುಮತಿ ನೀಡಿತ್ತು. ಕೊಪ್ಪಳದಲ್ಲಿ12 ಎಕರೆ 28 ಗುಂಟೆ ವಿಸ್ತೀರ್ಣದ ಬಡಾವಣೆಯಲ್ಲಿ 3749 ಚ.ಮೀ. ಜಾಗ, ಬಾದಾಮಿಯಲ್ಲಿ 613 ಚ.ಮೀ. ನಾಗರಿಕ ಸೌಲಭ್ಯ ನಿವೇಶನ, ದಕ್ಷಿಣ ಕನ್ನಡದ ಜಿಲ್ಲೆಯ ಪುತ್ತೂರಿನ ಕಸಬಾ ಗ್ರಾಮದಲ್ಲಿ 8 ಸೆಂಟ್ ಜಾಗ ಪಡೆಯಲು ನಿರ್ಣಯ ಕೈಗೊಂಡಿತ್ತು.
ರಾಜಕೀಯ ಕೋಲಾಹಲ ಸೃಷ್ಟಿಸಿದ ವಿವಾದ
ತುಮಕೂರು ಸೇರಿದಂತೆ ರಾಜ್ಯದ ಹಲವೆಡೆ ಕಾಂಗ್ರೆಸ್ ಭವನಗಳಿಗೆ ಭೂಮಿ ಹಾಗೂ ನಿವೇಶನ ಪಡೆಯುವ ವಿಚಾರ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿತ್ತು. ಇತ್ತೀಚೆಗೆ ನಡೆದ ಮಳೆಗಾಲದ ಅಧಿವೇಶನದಲ್ಲಿ ಬಿಜೆಪಿ ಶಾಸಕ ಸುರೇಶ್ ಗೌಡ ಅವರು, ತುಮಕೂರಿನಲ್ಲಿ ಕಾಂಗ್ರೆಸ್‌ಗೆ ಜಾಗ ನೀಡಿರುವ ವಿಚಾರದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.
ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅತ್ಯಂತ ಬೆಲೆಬಾಳುವ ಸ್ವತ್ತನ್ನು ಕಾಂಗ್ರೆಸ್ ಕಚೇರಿಗೆ ಪರಭಾರೆ ಮಾಡಿರುವುದರಲ್ಲಿ ದೊಡ್ಡ ಅಕ್ರಮ ನಡೆದಿದೆ. ಸ್ವತ್ತಿನ ಪರಾಭಾರೆ ವಿರೋಧಿಸಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಕೋರ್ಟ್ ಮೆಟ್ಟಿಲೇರಿದ ಪ್ರಕರಣ
ತುಮಕೂರಿನ ಮರಳೂರು ದಿಣ್ಣೆಯ ವಿವಾದಿತ ಜಾಗಕ್ಕೆ ಸಂಬಂಧಿಸಿದ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದೆ. ಈ ನಡುವೆ ಪರಭಾರೆ ಮಾಡಿರುವುದು ಕಾನೂನು ಬಾಹಿರ ಎಂದು ದೂರುದಾರ ಬಸವರಾಜು ಆರೋಪಿಸಿದ್ದಾರೆ.
ಜಾಗದ ಮೌಲ್ಯಮಾಪನವನ್ನು ಉದ್ದೇಶಪೂರ್ವಕವಾಗಿ ಕಡಿಮೆ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಲಾಭದಾಯಕ ರೀತಿಯಲ್ಲಿ ಹಸ್ತಾಂತರಿಸಲಾಗಿದೆ ಎಂದು ದೂರಿದ್ದಾರೆ.