Internal Reservation | ಆ.7 ರಂದು ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ವರದಿ ಮಂಡನೆ; ಸಿಎಂ

2025 ಮೇ 5 ರಿಂದ ಜುಲೈ 6 ರವರೆಗೆ ಸಮಗ್ರ ಸಮೀಕ್ಷೆ ನಡೆಸಲಾಗಿದೆ. ಪರಿಶಿಷ್ಟ ಜಾತಿಯ 27,24,768 ಕುಟುಂಬಗಳು ಮತ್ತು 1,07,01,982 ಜನರು ಸಮೀಕ್ಷೆಯಲ್ಲಿ ಭಾಗಿಯಾಗಿದ್ದಾರೆ.;

Update: 2025-08-04 02:14 GMT
ಸಾಂದರ್ಭಿಕ‌ ಚಿತ್ರ

ಪರಿಶಿಷ್ಟ ಜಾತಿಯ 101 ಜಾತಿಗಳಿಗೆ ಒಳ ಮೀಸಲಾತಿ ಹಂಚಿಕೆ ಸಂಬಂಧ ಸಮೀಕ್ಷೆ ನಡೆಸಿರುವ ನಿವೃತ್ತ‌ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಅವರು ಇಂದು(ಸೋಮವಾರ)  ಸರ್ಕಾರಕ್ಕೆ ವರದಿ ಸಲ್ಲಿಸಿದರು. 

ಬೆಳಿಗ್ಗೆ 11 ಕ್ಕೆ ವಿಧಾನಸೌಧದಲ್ಲಿ ಮುಖ್ಯಮಂತ್ರಿ ‌ಸಿದ್ದರಾಮಯ್ಯ ಅವರಿಗೆ ಒಳ ಮೀಸಲಾತಿ ಸಮೀಕ್ಷೆಯ ವರದಿಯನ್ನು ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಹಮೋಹನ್‌ ದಾಸ್‌ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಡಾ. ಜಿ. ಪರಮೇಶ್ವರ್‌, ಎಚ್‌.ಸಿ. ಮಹದೇವಪ್ಪ, ಕೆ.ಎಚ್‌.ಮುನಿಯಪ್ಪ, ಪ್ರಿಯಾಂಕ್‌ ಖರ್ಗೆ, ಶಿವರಾಜ ತಂಗಡಗಿ, ಮಾಜಿ ಸಚಿವ ಎಚ್‌.ಆಂಜನೇಯ, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಇದ್ದರು.

ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳಾದ ಎಚ್.ಎನ್ . ನಾಗಮೋಹನ್ ದಾಸ್ ನೇತೃತ್ವದಲ್ಲಿ ರಾಜ್ಯ ಸರ್ಕಾರ 2024 ನವೆಂಬರ್ 14 ರಂದು ಏಕಸದಸ್ಯ ಆಯೋಗ ರಚಿಸಿತ್ತು.

1766 ಪುಟಗಳ ವರದಿ ಸಲ್ಲಿಕೆ

ಒಳ ಮೀಸಲಾತಿ ವರದಿಯು ಜಾತಿಗಳ ದತ್ತಾಂಶ ಮತ್ತು ಅನುಬಂಧಗಳು ಒಟ್ಟು ಸೇರಿ 1766 ಪುಟಗಳು ಮತ್ತು ಆರು ಶಿಫಾರಸ್ಸುಗಳನ್ನು ಒಳಗೊಂಡಿದೆ.

ಸಮೀಕ್ಷೆಯಲ್ಲಿ ಸಂಗ್ರಹಿಸಿದ ಮತ್ತು ಸರ್ಕಾರದ ಸಂಸ್ಥೆಗಳಿಂದ ಸಂಗ್ರಹಿಸಿದ ದತ್ತಾಂಶ ವಿಶ್ಲೇಷಿಸಿ, ಸುಪ್ರೀಂಕೋರ್ಟ್‌ ಸೂಚನೆಯಂತೆ ಪರಿಶಿಷ್ಟ ಜಾತಿಯ ಒಳಜಾತಿಗಳನ್ನು ವರ್ಗೀಕರಿಸಿ ಲಭ್ಯವಿರುವ ಮೀಸಲಾತಿ ಹಂಚಲಾಗಿದೆ ಎಂದು ಆಯೋಗದ ಅಧ್ಯಕ್ಷರಾದ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ ದಾಸ್ ವರು ತಿಳಿಸಿದ್ದಾರೆ. ಸಮೀಕ್ಷೆಗಾಗಿ ನಾಗಮೋಹನ್‌ ದಾಸ್‌ ಅವರು ಯಾವುದೇ ಸಂಭಾವನೆ ಅಥವಾ ಗೌರವಧನ ಪಡೆಯಲಿಲ್ಲ.

2025 ಮೇ 5 ರಿಂದ ಜುಲೈ 6 ರವರೆಗೆ ಸಮಗ್ರ ಸಮೀಕ್ಷೆ ನಡೆಸಲಾಗಿದೆ. ಪರಿಶಿಷ್ಟ ಜಾತಿಯ 27,24,768 ಕುಟುಂಬಗಳು ಮತ್ತು 1,07,01,982 ಜನರು ಸಮೀಕ್ಷೆಯಲ್ಲಿ ಭಾಗಿಯಾಗಿದ್ದಾರೆ. ಒಳಜಾತಿಗಳ ವರ್ಗೀಕರಣಕ್ಕೆ ಸುಪ್ರೀಂಕೋರ್ಟ್‌ ವಿಧಿಸಿದ ಮಾನದಂಡಗಳಾದ ಶೈಕ್ಷಣಿಕ ಹಿಂದುಳಿದಿರುವಿಕೆ, ಸರ್ಕಾರಿ ಉದ್ಯೋಗದಲ್ಲಿ ಅಗತ್ಯ ಪ್ರಾತಿನಿಧ್ಯದ ಕೊರತೆ, ಸಾಮಾಜಿಕ ಹಿಂದುಳಿದಿರುವಿಕೆಯನ್ನು ಪರಿಗಣಿಸಿ ಸಮೀಕ್ಷೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

ಒಳ ಮೀಸಲಾತಿ ಸಮೀಕ್ಷೆಯಲ್ಲಿ ಆದ ಗೊಂದಲ, ಬೆಂಗಳೂರಿನಲ್ಲಿ ಕಡಿಮೆ ಸಮೀಕ್ಷೆ, ಸುಮಾರು 8 ಲಕ್ಷ ಜನರು ಜಾತಿ ಸೂಚಕ ಪದವನ್ನೇ ಬರೆಸಿದ್ದರೂ ಆಯೋಗದ ಸಮೀಕ್ಷಾ ವರದಿ ಈಗ ಕುತೂಹಲ ಮೂಡಿಸಿದೆ.

ಶನಿವಾರವಷ್ಟೇ ಗೃಹ ಸಚಿವ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ನಡೆದ ದಲಿತ ಸಚಿವರು ಹಾಗೂ ಶಾಸಕರ ಸಭೆಯಲ್ಲಿ ಒಳ ಮೀಸಲಾತಿ ವರದಿಯನ್ನು ಯಾವುದೇ ತಕರಾರುಗಳು ಇಲ್ಲದಂತೆ ಒಪ್ಪಿಕೊಳ್ಳಲು ಒಮ್ಮತದ ನಿರ್ಧಾರ ಕೈಗೊಳ್ಳಲಾಗಿತ್ತು. ಜಾತಿಗಳ ನಡುವೆ ಯಾವುದೇ ವ್ಯತ್ಯಾಸಗಳು ಬಂದರೂ ಅದನ್ನು ಪರಿಗಣಿಸದೇ ವರದಿ ಜಾರಿಗೆ ಎಲ್ಲರೂ ಬೆಂಬಲಿಸಬೇಕು ಎಂಬ ಅಭಿಪ್ರಾಯಕ್ಕೆ ಬರಲಾಗಿತ್ತು.

ಮೇ 5ರಿಂದ ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಕುಟುಂಬಗಳ ಮನೆ ಮನೆ ಸಮೀಕ್ಷೆ ಆರಂಭಗೊಂಡಿತ್ತು. 2025ರ ವೇಳೆಗೆ ಪರಿಶಿಷ್ಟ ಜಾತಿಯವರ ಜನಸಂಖ್ಯೆ ಅಂದಾಜಿಸಿ (1.16 ಕೋಟಿ) ಹೋಲಿಸಿದಾಗ ಜೂನ್ 27ರವರೆಗೆ ಇಡೀ ರಾಜ್ಯದಲ್ಲಿ ಸಮೀಕ್ಷೆಯಲ್ಲಿ ಶೇ. 91ರಷ್ಟು ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇಕಡಾ 51ರಷ್ಟು ಪ್ರಗತಿ ಆಗಿತ್ತು.‌ಜೂ.30 ಕ್ಕೆ‌ ಸಮೀಕ್ಷೆ ಅವಧಿ ಪೂರ್ಣಗೊಂಡಿತ್ತು.

12 ಜಿಲ್ಲೆಗಳಲ್ಲಿ ಶೇ 100 ಮತ್ತು ಅದಕ್ಕಿಂತ ಹೆಚ್ಚು ಜನರು ಸಮೀಕ್ಷೆಯಲ್ಲಿ ಭಾಗಿಯಾಗಿದ್ದರು. ಈ ಪೈಕಿ, ಹಾವೇರಿ ಜಿಲ್ಲೆಯಲ್ಲಿ ಅತೀ ಹೆಚ್ಚು ಶೇ 111ರಷ್ಟು ಜನರು ಮಾಹಿತಿ ನೀಡಿದ್ದಾರೆ. ಒಂಬತ್ತು ಜಿಲ್ಲೆಗಳಲ್ಲಿ ಶೇ 95ರಿಂದ ಶೇ 99ರಷ್ಟು, ಏಳು ಜಿಲ್ಲೆಗಳಲ್ಲಿ ಶೇ 90ರಿಂದ ಶೇ 94ರಷ್ಟು ಜನರು ನೋಂದಾಯಿಸಿಕೊಂಡಿದ್ದಾರೆ. ದಕ್ಷಿಣ ಕನ್ನಡದಲ್ಲಿ ಶೇ 89, ರಾಮನಗರದಲ್ಲಿ ಶೇ 86, ಬೆಂಗಳೂರು ನಗರ ಜಿಲ್ಲೆ (ಬಿಬಿಎಂಪಿ ಹೊರತುಪಡಿಸಿ) ಶೇ 80ರಷ್ಟು ಜನರು ಸಮೀಕ್ಷೆಯಲ್ಲಿ ಭಾಗವಹಿಸಿ ಮಾಹಿತಿ ನೀಡಿದ್ದಾರೆ ಎಂದು ಆಯೋಗ ಹೇಳಿತ್ತು.

Live Updates
2025-08-04 08:23 GMT

ಆ.7ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ನಿವೃತ್ತ ನ್ಯಾ. ನಾಹಮೋಹನ್‌ ದಾಸ್‌ ಸಲ್ಲಿಸಿರುವ ಒಳ ಮೀಸಲಾತಿ ವರದಿಯನ್ನು ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ವರದಿಯಲ್ಲಿ ಪ್ರಮುಖವಾಗಿ ಆರು ಶಿಫಾರಸುಗಳನ್ನು ಮಾಡಿದ್ದು, ಅಂದಿನ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು. ಪರಿಶಿಷ್ಟ ಜಾತಿಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವರದಿ ಜಾರಿ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.



 


2025-08-04 07:45 GMT

ನಿವೃತ್ತ ನ್ಯಾ. ಎಚ್‌.ಎನ್‌.ನಾಗಮೋಹನ್‌ ದಾಸ್‌ ನೇತೃತ್ವದ ಆಯೋಗ ಸಲ್ಲಿಸಿರುವ ಒಳ ಮೀಸಲಾತಿ ಸಮೀಕ್ಷೆಯ ವರದಿ ಜಾರಿ ಮಾಡಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಹೇಳಿದರು.

ವಿಧಾನ ಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವರದಿಯ ಶಿಫಾರಸು ಆಧರಿಸಿ ನೇಮಕಾತಿ, ಬಡ್ತಿ ನೀಡಲಾಗುವುದು ಎಂದ ಪರಮೇಶ್ವರ್ ಹೇಳಿದರು.

 

2025-08-04 07:41 GMT

ರಾಜ್ಯದಲ್ಲಿ ಒಳ ಮೀಸಲಾತಿ ಸಮೀಕ್ಷೆ ನಡೆಸಿ ರಾಜ್ಯ ಸರ್ಕಾರಕ್ಕೆ ವರದಿ ನೀಡಲಾಗಿದೆ. ಈಗ ವರದಿ ಸರ್ಕಾರದ ಆಸ್ತಿ, ಅದನ್ನು ಒಪ್ಪುವುದು, ಬಿಡುವುದು ಸರ್ಕಾರಕ್ಕೆ ಬಿಟ್ಟಿರುವ ವಿಚಾರ ಎಂಉ ನಿವೃತ್ತ ನ್ಯಾ. ಎಚ್‌.ಎನ್‌. ನಾಗಮೋಹನ್‌ ದಾಸ್‌ ಹೇಳಿದರು.

ಬೆಂಗಳೂರಿನ ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 2025 ಮಾರ್ಚ್ 25ರಂದು ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳಿಗೆ ನಿಖರ ದತ್ತಾಂಶಗಳ ಕೊರತೆ ಇದೆ ಎಂದು ವರದಿ ಸಲ್ಲಿಸಲು ಸೂಚಿಸಿತ್ತು. ಸುಮಾರು 60 ದಿನಗಳ ಕಾಲ ಸಮೀಕ್ಷೆ ನಡೆಸಿದೆವು. ಮೊದಲ ಬಾರಿಗೆ ಮೊಬೈಲ್ ಆ್ಯಪ್ ಬಳಸಿ ಸಮೀಕ್ಷೆ ಮಾಡಲಾಗಿದೆ ಎಂದು ಹೇಳಿದರು. 

ಸಮೀಕ್ಷೆಯಲ್ಲಿ 1.7 ಕೋಟಿ ಜನರು ಸಮೀಕ್ಷೆಯಲ್ಲಿ ಭಾಗಿಯಾಗಿದ್ದರು. ದತ್ತಾಂಶಗಳನ್ನೊಳಗೊಂಡ 1766 ಪುಟಗಳ ವರದಿ ಸರ್ಕಾರಕ್ಕೆ ಸಲ್ಲಿಸಿದ್ದೇವೆ ಎಂದು ಹೇಳಿದರು.

 

2025-08-04 07:03 GMT

ಒಳ ಮೀಸಲಾತಿ ವರದಿ ಜಾರಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ವರದಿಯ ಶಿಫಾರಸ್ಸುಗಳ ಕುರಿತಂತೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು.  ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿ ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಕಲ್ಪಿಸಲು ಉಪ ಪಂಗಡಗಳ ಅಂಕಿ-ಅಂಶಗಳ ಸಮೀಕ್ಷೆಗಾಗಿ ರಾಜ್ಯ ಸರ್ಕಾರ ಆಯೋಗ ರಚಿಸಿತ್ತು. ಆಯೋಗದ ಅಧ್ಯಕ್ಷರಾದ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ್‌ ದಾಸ್‌ ಅವರ ಸೋಮವಾರ  ಸರ್ಕಾರಕ್ಕೆ ವರದಿ ಸಲ್ಲಿಸಿದರು.



 


 


 


 


2025-08-04 06:54 GMT

ಒಳ ಮೀಸಲಾತಿ ಸಮೀಕ್ಷೆ ಮತ್ತು ಸರ್ಕಾರದ ಸಂಸ್ಥೆಗಳಿಂದ ಸಂಗ್ರಹಿಸಿದ ದತ್ತಾಂಶವನ್ನು ವಿಶ್ಲೇಷಿಸಿ, ಸುಪ್ರೀಂಕೋರ್ಟ್‌ ಸೂಚನೆಯಂತೆ ಪರಿಶಿಷ್ಟ ಜಾತಿಯ ಒಳಜಾತಿಗಳನ್ನು ವರ್ಗೀಕರಿಸಿ ಲಭ್ಯವಿರುವ ಮೀಸಲಾತಿಯನ್ನು ಹಂಚಲಾಗಿದೆ. ವರದಿಯು ಸಮೀಕ್ಷೆಯ ದತ್ತಾಂಶ ಮತ್ತು ಅನುಬಂಧಗಳು ಸೇರಿ ಸುಮಾರು 1766 ಪುಟಗಳಷ್ಟಿದೆ. ಆರು ಶಿಫಾರಸುಗಳನ್ನು ಒಳಗೊಂಡಿದೆ. 

 

2025-08-04 05:34 GMT

ಹಲವು ದಶಕಗಳಿಂದ ಮೀಸಲಾತಿ ಜಾರಿಯಲ್ಲಿದ್ದರೂ ಕೆಲ ಸಮುದಾಯಗಳಿಗೆ ಮೀಸಲಾತಿ ಸೌಲಭ್ಯ ಪೂರ್ಣ ಪ್ರಮಾಣದಲ್ಲಿ ಸಿಗಲಿಲ್ಲ. ಈ ನಿಟ್ಟಿನಲ್ಲಿ ಒಳ ಮೀಸಲಾತಿಯನ್ನು ಜಾರಿಗೊಳಿಸುವ ಮೂಲಕ ಎಲ್ಲಾ ಶೋಷಿತ ಸಮುದಾಯಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹಂಚಿಕೆ ಮಾಡುವುದಾಗಿದೆ.

ಎಸ್ ಸಿ ಸಮುದಾಯದಲ್ಲಿ ಕೆಲವು ಉಪ ಜಾತಿಗಳು ರಾಜಕೀಯ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿವೆ. ಆ ಸಮುದಾಯಗಳಿಗೆ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ. ಮೀಸಲಾತಿಯಿಂದ ವಂಚಿತವಾಗಿರುವ ಈ ಸಮುದಾಯಗಳಿಗ ನ್ಯಾಯ ಒದಗಿಸಿಕೊಡುವುದು ಒಳಮೀಸಲಾತಿ ಜಾರಿಯ ಉದ್ದೇಶವಾಗಿದೆ.

Tags:    

Similar News