LIVE Internal Reservation | ಸರ್ಕಾರಕ್ಕೆ ಒಳ ಮೀಸಲಾತಿ ವರದಿ ಸಲ್ಲಿಕೆ; ಕುತೂಹಲ ಮೂಡಿಸಿದ ವರದಿಯ ಶಿಫಾರಸು
x
ಸಾಂದರ್ಭಿಕ‌ ಚಿತ್ರ

Internal Reservation | ಸರ್ಕಾರಕ್ಕೆ ಒಳ ಮೀಸಲಾತಿ ವರದಿ ಸಲ್ಲಿಕೆ; ಕುತೂಹಲ ಮೂಡಿಸಿದ ವರದಿಯ ಶಿಫಾರಸು

60 ದಿನದಲ್ಲಿ ಮುಗಿಯಬೇಕಿದ್ದ ಸಮೀಕ್ಷೆಯು ಸರಿಯಾದ ರೀತಿಯಲ್ಲಿ ಪ್ರಗತಿ ಕಾಣದೇ ಆರು ಬಾರಿ ಅವಧಿ ವಿಸ್ತರಣೆಗೊಂಡಿತ್ತು. ಜೂ.30 ರಂದು ಸಮೀಕ್ಷೆ ಪೂರ್ಣಗೊಂಡಿತ್ತು.


ಪರಿಶಿಷ್ಟ ಜಾತಿಯ 101 ಜಾತಿಗಳಿಗೆ ಒಳ ಮೀಸಲಾತಿ ಹಂಚಿಕೆ ಸಂಬಂಧ ಸಮೀಕ್ಷೆ ನಡೆಸಿರುವ ನಿವೃತ್ತ‌ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಅವರು ಇಂದು(ಸೋಮವಾರ) ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ.

ಇಂದು ಬೆಳಿಗ್ಗೆ 11 ಕ್ಕೆ ವಿಧಾನಸೌಧದಲ್ಲಿ ಮುಖ್ಯಮಂತ್ರಿ ‌ಸಿದ್ದರಾಮಯ್ಯ ಅವರಿಗೆ ಒಳ ಮೀಸಲಾತಿ ಸಮೀಕ್ಷೆಯ ವರದಿ ಸಲ್ಲಿಸಲಿದ್ದಾರೆ. ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳಾದ ಎಚ್.ಎನ್ . ನಾಗಮೋಹನ್ ದಾಸ್ ನೇತೃತ್ವದಲ್ಲಿ ರಾಜ್ಯ ಸರ್ಕಾರ 2024 ನವೆಂಬರ್ 14 ರಂದು ಏಕಸದಸ್ಯ ಆಯೋಗ ರಚಿಸಿತ್ತು.

60 ದಿನದಲ್ಲಿ ಮುಗಿಯಬೇಕಿದ್ದ ಸಮೀಕ್ಷೆಯು ಸರಿಯಾದ ರೀತಿಯಲ್ಲಿ ಪ್ರಗತಿ ಕಾಣದೇ ಆರು ಬಾರಿ ಅವಧಿ ವಿಸ್ತರಣೆಗೊಂಡಿತ್ತು.

ಒಳ ಮೀಸಲಾತಿ ಸಮೀಕ್ಷೆಯಲ್ಲಿ ಆದ ಗೊಂದಲ, ಬೆಂಗಳೂರಿನಲ್ಲಿ ಕಡಿಮೆ ಸಮೀಕ್ಷೆ, ಸುಮಾರು 8 ಲಕ್ಷ ಜನರು ಜಾತಿ ಸೂಚಕ ಪದವನ್ನೇ ಬರೆಸಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಆಯೋಗ ನೀಡುವ ಸಮೀಕ್ಷಾ ವರದಿ ಅತ್ಯಂತ ಕುತೂಹಲ ಮೂಡಿಸಿದೆ.

ಶನಿವಾರವಷ್ಟೇ ಗೃಹ ಸಚಿವ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ನಡೆದ ದಲಿತ ಸಚಿವರು ಹಾಗೂ ಶಾಸಕರ ಸಭೆಯಲ್ಲಿ ಒಳ ಮೀಸಲಾತಿ ವರದಿಯನ್ನು ಯಾವುದೇ ತಕರಾರುಗಳು ಇಲ್ಲದಂತೆ ಒಪ್ಪಿಕೊಳ್ಳಲು ಒಮ್ಮತದ ನಿರ್ಧಾರ ಕೈಗೊಳ್ಳಲಾಗಿತ್ತು. ಜಾತಿಗಳ ನಡುವೆ ಯಾವುದೇ ವ್ಯತ್ಯಾಸಗಳು ಬಂದರೂ ಅದನ್ನು ಪರಿಗಣಿಸದೇ ವರದಿ ಜಾರಿಗೆ ಎಲ್ಲರೂ ಬೆಂಬಲಿಸಬೇಕು ಎಂಬ ಅಭಿಪ್ರಾಯಕ್ಕೆ ಬರಲಾಗಿತ್ತು.

ಮೇ 5ರಿಂದ ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಕುಟುಂಬಗಳ ಮನೆ ಮನೆ ಸಮೀಕ್ಷೆ ಆರಂಭಗೊಂಡಿತ್ತು. 2025ರ ವೇಳೆಗೆ ಪರಿಶಿಷ್ಟ ಜಾತಿಯವರ ಜನಸಂಖ್ಯೆ ಅಂದಾಜಿಸಿ (1.16 ಕೋಟಿ) ಹೋಲಿಸಿದಾಗ ಜೂನ್ 27ರವರೆಗೆ ಇಡೀ ರಾಜ್ಯದಲ್ಲಿ ಸಮೀಕ್ಷೆಯಲ್ಲಿ ಶೇ. 91ರಷ್ಟು ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇಕಡಾ 51ರಷ್ಟು ಪ್ರಗತಿ ಆಗಿತ್ತು.‌ಜೂ.30 ಕ್ಕೆ‌ ಸಮೀಕ್ಷೆ ಅವಧಿ ಪೂರ್ಣಗೊಂಡಿತ್ತು.

12 ಜಿಲ್ಲೆಗಳಲ್ಲಿ ಶೇ 100 ಮತ್ತು ಅದಕ್ಕಿಂತ ಹೆಚ್ಚು ಜನರು ಸಮೀಕ್ಷೆಯಲ್ಲಿ ಭಾಗಿಯಾಗಿದ್ದರು. ಈ ಪೈಕಿ, ಹಾವೇರಿ ಜಿಲ್ಲೆಯಲ್ಲಿ ಅತೀ ಹೆಚ್ಚು ಶೇ 111ರಷ್ಟು ಜನರು ಮಾಹಿತಿ ನೀಡಿದ್ದಾರೆ. ಒಂಬತ್ತು ಜಿಲ್ಲೆಗಳಲ್ಲಿ ಶೇ 95ರಿಂದ ಶೇ 99ರಷ್ಟು, ಏಳು ಜಿಲ್ಲೆಗಳಲ್ಲಿ ಶೇ 90ರಿಂದ ಶೇ 94ರಷ್ಟು ಜನರು ನೋಂದಾಯಿಸಿಕೊಂಡಿದ್ದಾರೆ. ದಕ್ಷಿಣ ಕನ್ನಡದಲ್ಲಿ ಶೇ 89, ರಾಮನಗರದಲ್ಲಿ ಶೇ 86, ಬೆಂಗಳೂರು ನಗರ ಜಿಲ್ಲೆ (ಬಿಬಿಎಂಪಿ ಹೊರತುಪಡಿಸಿ) ಶೇ 80ರಷ್ಟು ಜನರು ಸಮೀಕ್ಷೆಯಲ್ಲಿ ಭಾಗವಹಿಸಿ ಮಾಹಿತಿ ನೀಡಿದ್ದಾರೆ ಎಂದು ಆಯೋಗ ಹೇಳಿತ್ತು.

Live Updates

  • 4 Aug 2025 11:04 AM IST

    ಈಡೇರಲಿದೆಯೇ ದಶಕಗಳ ಕನಸು

    ಹಲವು ದಶಕಗಳಿಂದ ಮೀಸಲಾತಿ ಜಾರಿಯಲ್ಲಿದ್ದರೂ ಕೆಲ ಸಮುದಾಯಗಳಿಗೆ ಮೀಸಲಾತಿ ಸೌಲಭ್ಯ ಪೂರ್ಣ ಪ್ರಮಾಣದಲ್ಲಿ ಸಿಗಲಿಲ್ಲ. ಈ ನಿಟ್ಟಿನಲ್ಲಿ ಒಳ ಮೀಸಲಾತಿಯನ್ನು ಜಾರಿಗೊಳಿಸುವ ಮೂಲಕ ಎಲ್ಲಾ ಶೋಷಿತ ಸಮುದಾಯಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹಂಚಿಕೆ ಮಾಡುವುದಾಗಿದೆ.

    ಎಸ್ ಸಿ ಸಮುದಾಯದಲ್ಲಿ ಕೆಲವು ಉಪ ಜಾತಿಗಳು ರಾಜಕೀಯ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿವೆ. ಆ ಸಮುದಾಯಗಳಿಗೆ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ. ಮೀಸಲಾತಿಯಿಂದ ವಂಚಿತವಾಗಿರುವ ಈ ಸಮುದಾಯಗಳಿಗ ನ್ಯಾಯ ಒದಗಿಸಿಕೊಡುವುದು ಒಳಮೀಸಲಾತಿ ಜಾರಿಯ ಉದ್ದೇಶವಾಗಿದೆ.

Read More
Next Story