ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ | ʼಸಜ್ಜನʼರ ಸಮರದಲ್ಲಿ ಗೆಲುವು ಯಾರಿಗೆ?

ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಈ ಚುನಾವಣೆಯನ್ನು ಬಿಲ್ಲವ ಮತ್ತು ಬಂಟ ಸಮುದಾಯಗಳ ಪ್ರತಿಷ್ಠೆಯ ಪ್ರಶ್ನೆಯಾಗಿಯೂ ನೋಡಲಾಗುತ್ತಿದೆ.;

Update: 2024-04-21 01:40 GMT

ಕರಾವಳಿಯ ನಾಲ್ಕು, ಮಲೆನಾಡಿನ ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಳೆದ ಕೆಲವು ದಶಕಗಳಿಂದ ಬಿಜೆಪಿಯದ್ದೇ ಮೇಲುಗೈ. 2008 ರಲ್ಲಿ ಲೋಕಸಭಾ ಕ್ಷೇತ್ರಗಳ ಮರುವಿಂಗಡನೆ ಬಳಿಕ 2012 ರಲ್ಲಿ ನಡೆದ ಉಪಚುನಾವಣೆಯಲ್ಲಿ ಒಂದು ಬಾರಿ ಕಾಂಗ್ರೆಸ್‌ ಅಭ್ಯರ್ಥಿ ಗೆಲುವಾಗಿದೆ ಬಿಟ್ಟರೆ, ಉಳಿದಂತೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದೆ.

ಈ ಬಾರಿ ಬಿಜೆಪಿ, ವಿಧಾನ ಪರಿಷತ್‌ ವಿಪಕ್ಷ ನಾಯಕ ಶ್ರೀನಿವಾಸ್‌ ಕೋಟಾ ಅವರನ್ನು ಕಣಕ್ಕಿಳಿಸಿದರೆ, ಕಾಂಗ್ರೆಸ್‌, ಮಾಜಿ ಸಂಸದ ಜಯಪ್ರಕಾಶ್‌ ಹೆಗ್ಡೆ ಅವರನ್ನು ಕಣಕ್ಕಿಳಿಸಿದೆ. ಈ ಇಬ್ಬರಿಗೂ ಇರುವ ಸಭ್ಯ ಮತ್ತು ಸರಳ ರಾಜಕಾರಣಿಗಳು ಎಂಬ ಹೆಗ್ಗಳಿಕೆಯ ಕಾರಣಕ್ಕೆ ಕಣ ಈಗ ʼಸಜ್ಜನರ ನಡುವಿನ ಕದನʼ ಕಣವಾಗಿದೆ.

ಕಳೆದೊಂದು ದಶಕದಂತೆ ಈ ಬಾರಿಯೂ ಬಿಜೆಪಿ ಮೋದಿ ವರ್ಚಸ್ಸು ಮತ್ತು ಹಿಂದುತ್ವದ ಬಲದ ಆಧಾರದ ಮೇಲೆ ಜನರ ಮುಂದೆ ಹೋದರೆ, ಕಾಂಗ್ರೆಸ್‌ ತನ್ನ ಸರ್ಕಾರದ ಗ್ಯಾರಂಟಿಗಳು ʼಕೈʼ ಹಿಡಿಯುವ ನಿರೀಕ್ಷೆಯಲ್ಲಿದೆ. ಪಕ್ಕದ ದಕ್ಷಿಣಕನ್ನಡ ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ ನಡುವಿನ ಹೋರಾಟ ಅಲ್ಲಿನ ಎರಡು ಪ್ರಮುಖ ಜಾತಿಗಳಾದ ಬಿಲ್ಲವ-ಬಂಟ ಜಾತಿಗಳ ನಡುವಿನ ಹಣಾಹಣಿಯಾಗಿ ಪರಿವರ್ತನೆಯಾಗಿದ್ದು, ಉಡುಪಿ-ಚಿಕ್ಕಮಗಳೂರು ಕ್ಷೇತ್ರವೂ ಇದಕ್ಕೆ ಹೊರತಲ್ಲ. ದಕ್ಷಿಣಕನ್ನಡದಲ್ಲಿ ಬಿಲ್ಲವ ಅಭ್ಯರ್ಥಿಯನ್ನು ಕಾಂಗ್ರೆಸ್‌ ಕಣಕ್ಕಿಳಿಸಿದರೆ, ಬಂಟ ಅಭ್ಯರ್ಥಿಯನ್ನು ಬಿಜೆಪಿ ಕಣಕ್ಕಿಳಿಸಿದೆ. ಉಡುಪಿ-ಚಿಕ್ಕಮಗಳೂರಿನಲ್ಲಿ ಆ ಸಮೀಕರಣ ಅದಲುಬದಲಾಗಿದ್ದು, ಬಂಟ ಅಭ್ಯರ್ಥಿಯನ್ನು ಕಾಂಗ್ರೆಸ್‌, ಬಿಲ್ಲವ ಅಭ್ಯರ್ಥಿಯನ್ನು ಬಿಜೆಪಿ ಕಣಕ್ಕಿಳಿಸಿದೆ.

ಬಿಲ್ಲವ ಸಂಘಟನೆಗಳು ಬಹಿರಂಗವಾಗಿಯೇ ಪಕ್ಷ ಮೀರಿ ಬಿಲ್ಲವ ಸಮುದಾಯದ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಕರೆ ನೀಡಿದ್ದು, ಈ ಬೆಳವಣಿಗೆಯಿಂದ ಬಂಟರೂ ತಮ್ಮ ಸಮುದಾಯದ ಅಭ್ಯರ್ಥಿಗಳ ಪರ ಒಲವು ವ್ಯಕ್ತಪಡಿಸುತ್ತಿದ್ದಾರೆ. ಈ ಎರಡು ಜಾತಿಗಳ ಅಭ್ಯರ್ಥಿಗಳ ಮುಖಾಮುಖಿಯು ದಕ್ಷಿಣಕನ್ನಡ ಕ್ಷೇತ್ರದಂತೆ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಫಲಿತಾಂಶದ ಫಲಿತಾಂಶಕ್ಕೂ ರೋಚಕತೆ ತಂದಿದೆ.

2023 ರ ವಿಧಾನಸಭೆ ಚುನಾವಣೆಯಲ್ಲಿ ಉಡುಪಿಯ ನಾಲ್ಕು ಕ್ಷೇತ್ರಗಳಲ್ಲೂ ಬಿಜೆಪಿ ಗೆದ್ದಿವೆ. ಚಿಕ್ಕಮಗಳೂರಿನ ನಾಲ್ಕು ಕ್ಷೇತ್ರಗಳು ಕಾಂಗ್ರೆಸ್‌ ಪಾಲಾಗಿದೆ. ಹಾಗಾಗಿ, ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್‌ ಪ್ರಾಬಲ್ಯ ಸಮಬಲದಲ್ಲಿದೆ. ಉಭಯ ಪಕ್ಷಗಳ ಅಭ್ಯರ್ಥಿಗಳೂ ʼಸಜ್ಜನʼರೆಂದು ಗುರುತಿಸಿಕೊಂಡವರು, ಕಳಂಕರಹಿತರು. ಹಾಗಾಗಿ, ಈ ಬಾರಿಯದ್ದು ಭಾರೀ ಪೈಪೋಟಿಯ ಸ್ಪರ್ಧೆಯಾಗಲಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.

ಬಿಜೆಪಿಯ ಎಚ್ಚರಿಕೆ ಹೆಜ್ಜೆ

ಕಳೆದ ಎರಡು ಬಾರಿ (2014 & 2019) ಸಂಸದೆಯಾಗಿ ಕ್ಷೇತ್ರದಿಂದ ಆಯ್ಕೆಯಾಗಿರುವ ಶೋಭಾ ಕರಂದ್ಲಾಜೆ ಬಗ್ಗೆ ಸ್ಥಳೀಯ ಬಿಜೆಪಿಗರಲ್ಲಿ ಇದ್ದ ಅಸಮಾಧಾನವನ್ನು ಗಮನಿಸಿ, ಬಿಜೆಪಿ ಅವರಿಗೆ ಬೆಂಗಳೂರು ಉತ್ತರದಿಂದ ಟಿಕೆಟ್‌ ನೀಡಿ, ಸ್ಥಳೀಯರೂ, ಸಜ್ಜನರೂ ಆಗಿ ಗುರುತಿಸಿರುವ ವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಟಿಕೆಟ್‌ ನೀಡಿ ಸ್ಥಳೀಯರ ಅಸಮಾಧಾನ ಶಮನಗೊಳಿಸಿದೆ.

ಟಿಕೆಟ್‌ ಗೆ ಪ್ರಬಲ ಪೈಪೋಟಿ ನಡೆಸಿದ್ದ ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಅವರನ್ನು ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಬಂಡಾಯ ಶಮನಕ್ಕೆ ಬಿಜೆಪಿ ಪ್ರಯತ್ನಿಸಿದೆ. ಮಧ್ವರಾಜ್‌ ಅವರನ್ನು ಎದುರು ಹಾಕಿಕೊಂಡರೆ, ಈ ಕ್ಷೇತ್ರದಲ್ಲಿ ನಿರ್ಣಾಯಕವಾಗಿರುವ ಮೊಗವೀರ ಮತದಾರರನ್ನು ಬಿಜೆಪಿ ಕಳೆದುಕೊಳ್ಳಬೇಕಾಗುತ್ತದೆ. ಹಾಗಾಗಿಯೇ, ಮಧ್ವರಾಜ್‌ ಅವರಿಗೆ ಚುನಾವಣಾ ಪ್ರಚಾರ ಸಮಿತಿಯ ಹೊಣೆ ನೀಡಿ ಅಸಮಾಧಾನ ಹೋಗಲಾಡಿಸಲು ಬಿಜೆಪಿ ಯತ್ನಿಸಿದೆ.

ಬಿಜೆಪಿಯ ಬಲ

ನರೇಂದ್ರ ಮೋದಿ ವರ್ಚಸ್ಸು, ಹಿಂದುತ್ವವನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸುತ್ತಿರುವ ಬಿಜೆಪಿಗೆ ಈ ಕ್ಷೇತ್ರದಲ್ಲಿ ಜೆಡಿಎಸ್‌ ಜೊತೆಗಿನ ಮೈತ್ರಿ ಪ್ಲಸ್‌ ಪಾಯಿಂಟ್‌ ಆಗುವ ಸಾಧ್ಯತೆ ಇದೆ. ಅದನ್ನು ಬಿಟ್ಟರೆ, ಮೋದಿ ಮತ್ತು ಹಿಂದುತ್ವವೇ ಬಿಜೆಪಿಗೆ ಪ್ರಬಲ ಅಸ್ತ್ರ. ಮೈತ್ರಿಯಿಂದಾಗಿ ಕ್ಷೇತ್ರದಲ್ಲಿನ ಒಕ್ಕಲಿಗ ಮತಗಳು ಸುಲಭವಾಗಿ ಬಿಜೆಪಿಗೆ ಕ್ರೋಡೀಕರಣಗೊಳ್ಳಲಿವೆ. ಕಳೆದ, ವಿಧಾನಸಭೆ ಚುನಾವಣೆ ವೇಳೆ ಚಿಕ್ಕಮಗಳೂರಿನಲ್ಲಿ ಸಿ.ಟಿ ರವಿ ವಿರುದ್ಧ ಲಿಂಗಾಯತ ಮತದಾರರಲ್ಲಿ ಉಂಟಾಗಿದ್ದ ಅಸಮಾಧಾನದಿಂದ ಅವರು ಸೋಲನುಭವಿಸಬೇಕಾಗಿತ್ತು. ಆದರೆ, ಈ ಬಾರಿ, ಲಿಂಗಾಯಿತರು ಬಿಜೆಪಿ ಜೊತೆಗೆ ನಿಲ್ಲುವ ಸಾಧ್ಯತೆ ದಟ್ಟವಾಗಿದೆ. ಕುರುಬ ಸಮುದಾಯ ಮತ್ತು ಸ್ವಲ್ಪ ಪ್ರಮಾಣದ ಬಂಟ ಮತಗಳು ಕಾಂಗ್ರೆಸ್‌ ನ ಬಂಟ ಅಭ್ಯರ್ಥಿ ಜಯಪ್ರಕಾಶ್‌ ಹೆಗ್ಡೆ ಪರ ಬೀಳಬಹುದು ಎಂದು ಅಂದಾಜಿಸಲಾಗಿದೆ.

ನಾಲ್ಕು ಬಾರಿ ವಿಧಾನ ಪರಿಷತ್‌ ಸದಸ್ಯ, ಸಚಿವರಾಗಿ ಸೇವೆ, ವಿಧಾನಪರಿಷತ್‌ ವಿಪಕ್ಷ ನಾಯಕನಾಗಿ ಸೇವೆ ಸಲ್ಲಿಸುತ್ತಿರುವ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಪೂಜಾರಿ ಅವರಿಗೆ, ʼಸಜ್ಜನʼ ಎಂಬ ಟ್ಯಾಗ್‌ ಲೈನ್‌ ಕೂಡ ಚುನಾವಣಾ ಕಣದಲ್ಲಿ ಸದ್ದು ಮಾಡುತ್ತಿದೆ.

ಕಾಂಗ್ರೆಸ್‌ ಬಲ

ಇತ್ತೀಚಿನ ವರ್ಷಗಳಲ್ಲಿ ಸತತ ಬಿಜೆಪಿಯನ್ನೇ ಗೆಲ್ಲಿಸಿಕೊಂಡು ಬಂದಿರುವ ಕ್ಷೇತ್ರದ ಜನತೆ ಈ ಬಾರಿ ಅಧಿಕಾರ ಬದಲಾಯಿಸಲು ಮನಸು ಮಾಡಿದರೆ, ಕಾಂಗ್ರೆಸ್‌ ಗೆ ವರವಾಗಲಿದೆ. ದಕ್ಷಿಣ ಕನ್ನಡದಲ್ಲಿ ಬಿಲ್ಲವ vs ಬಂಟ ರಾಜಕಾರಣದ ಪರಿಣಾಮ ಪಕ್ಕದ ಕ್ಷೇತ್ರದ ಮೇಲೂ ಪರಿಣಾಮ ಬೀರುತ್ತಿದೆ. ಬಿಲ್ಲವ ಸಂಘಟನೆಗಳ ಜಾತಿ ಆಧಾರಿತ ಚಟುವಟಿಕೆಗಳನ್ನು ಗಮನಸಿರುವ ಬಂಟ ಸಮುದಾಯ ತಮ್ಮ ಕ್ಷೇತ್ರದಲ್ಲಿ ಬಂಟ ಅಭ್ಯರ್ಥಿಯನ್ನೇ ಬೆಂಬಲಿಸುವ ನಿರೀಕ್ಷೆ ಇದೆ. ಹಾಗಾಗಿ, ಬಿಜೆಪಿಗೆ ನಿಷ್ಠೆಯಿಂದಿರುವ ಬಂಟರ ಮತಗಳು ಅಲ್ಪ ಪ್ರಮಾಣದಲ್ಲಿ ಏರು ಪೇರಾದರೂ, ಸಂದರ್ಭವನ್ನು ತನಗೆ ಅನುಕೂಲಕರವಾಗಿ ಬಳಸಿಕೊಳ್ಳಲು ಕಾಂಗ್ರೆಸ್‌ ಯೋಜಿಸುತ್ತಿದೆ.

ಅದನ್ನು ಬಿಟ್ಟರೆ, ಕಾಂಗ್ರೆಸ್‌ ಗ್ಯಾರೆಂಟಿಗಳನ್ನು ಮುಂದಿಟ್ಟು ಜನರೆದುರು ನಿಲ್ಲುತ್ತಿದೆ. ವಿಪಕ್ಷ ನಾಯಕರ ವಿರುದ್ಧದ ಸೇಡಿನ ರಾಜಕಾರಣ, ತನಿಖಾ ಸಂಸ್ಥೆಗಳ ದುರುಪಯೋಗ, ಎಲೆಕ್ಟಾರಲ್‌ ಬಾಂಡ್‌ ಹಗರಣ ಮೊದಲಾದವುಗಳನ್ನು ಹಿಡಿದು ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್‌ ದಾಳಿ ನಡೆಸುತ್ತಿದೆಯಾದರೂ, ಹಿಂದುತ್ವ ಆಳವಾಗಿ ಬೇರು ಬಿಟ್ಟಿರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ನ ಈ ದಾಳಗಳು ಫಲಿತಾಂಶ ನಿರ್ಣಯಿಸುವ ನಿರ್ಣಾಯಕ ಅಂಶಗಳಾಗುತ್ತಿಲ್ಲ.

ಕಾಂಗ್ರೆಸ್‌ ಅಭ್ಯರ್ಥಿ ಜಯಪ್ರಕಾಶ್‌ ಹೆಗ್ಡೆ ಅವರಿಗೆ ಕ್ಷೇತ್ರದಲ್ಲಿ ಇರುವ ಉತ್ತಮ ಜನ ಸಂಪರ್ಕ, ಎರಡು ಬಾರಿ ಸಚಿವರಾಗಿ ಕೆಲಸ ಮಾಡಿದ ಅನುಭವ, ವೈಯಕ್ತಿಕ ವರ್ಚಸ್ಸು ವರವಾಗಲಿದೆ. 2012ರ ಉಪಚುನಾವಣೆಯಲ್ಲಿ ಹೆಗ್ಡೆ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿ ಉತ್ತಮ ಕೆಲಸ ಮಾಡಿರುವುದು ಅವರಿಗೆ ಪ್ಲಸ್. ಈ ಸದಭಿಪ್ರಾಯವನ್ನು ಮತಗಳಾಗಿ ಪರಿವರ್ತಿಸಿ, ತನ್ನ ಅಭ್ಯರ್ಥಿಯನ್ನು ಗೆಲ್ಲಿಸುವಲ್ಲಿ ಕಾಂಗ್ರೆಸ್‌ ಪ್ರಯತ್ನ ಫಲ ಕೊಡಲಿದೆಯೇ? ಅಥವಾ ತನ್ನ ಭದ್ರಕೋಟೆಯನ್ನು ಉಳಿಸಿಕೊಳ್ಳುವಲ್ಲಿ ಬಿಜೆಪಿ ಯಶಸ್ಸು ಕಾಣಲಿದೆಯೇ ಎಂದು ಕಾದು ನೋಡಬೇಕಿದೆ.

Tags:    

Similar News