WOMEN'S DAY SPECIAL | ಹಳ್ಳಿ ಮಕ್ಕಳಿಗೆ ಅರಿವಿನ ಕಂದೀಲು ಹಿಡಿದ ಬ್ಯಾರಿ ಹುಡುಗಿಯರು

ಹಳ್ಳಿಗಾಡಿನ ಬಡ ಮಕ್ಕಳಿಗಾಗಿ ಕಾಲೇಜು ಸ್ಥಾಪಿಸಿ ಉಚಿತ ಶಿಕ್ಷಣ ನೀಡುತ್ತಿರುವ ಇಬ್ಬರು ಯುವ ಸಾಧಕಿಯರ ಕಥೆ ಇದು. ಇವರು ಸ್ಥಾಪಿಸಿರುವ ಸಂಸ್ಥೆಯ ಉಳಿವಿಗೆ ಸರ್ಕಾರದ, ದಾನಿಗಳ ನೆರವಿನ ಅಗತ್ಯ ಇದೆ.;

Update: 2024-03-08 03:00 GMT
ಸಮೀರಾ ಮತ್ತು ಫೌಝಿಯಾ

ಕೋಮು ವೈಷಮ್ಯದ ಸುದ್ದಿಗಳಿಂದಾಗಿಯೇ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುವ ಕರಾವಳಿಯಲ್ಲಿ ಬ್ಯಾರಿ (ಮುಸ್ಲಿಂ) ಸಮುದಾಯದ ಎರಡು ಹೆಣ್ಣುಮಕ್ಕಳು ಎಲ್ಲಾ ವರ್ಗದ ಬಡ ಮಕ್ಕಳ ಶಿಕ್ಷಣಕ್ಕಾಗಿ ಕಾಲೇಜು ಸ್ಥಾಪಿಸಿ ಶಿಕ್ಷಣ ಕ್ರಾಂತಿಯನ್ನೇ ಮಾಡಿದ್ದಾರೆ. ತಮ್ಮ ಸಂಸ್ಥೆಯ ಉಳಿವಿಗಾಗಿ ಈ ಹೆಣ್ಣುಮಕ್ಕಳು ಸ್ಥಳೀಯ ಪಟ್ಟಭಧ್ರರೊಂದಿಗೆ, ರಾಜಕೀಯ ಮುಖಂಡರೊಂದಿಗೆ, ಆರ್ಥಿಕ ಸವಾಲುಗಳ ಎದುರು ಬಡಿದಾಡಿದ ಕತೆಯನ್ನು ಕೇಳಿದರೆ 19 ನೇ ಶತಮಾನದಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಹೋರಾಡಿದ ಫಾತಿಮಾ ಶೇಕ್-ಸಾವಿತ್ರಿ ಭಾಯಿ ಫುಲೆ ಅವರ ಚಿತ್ರ ಕಣ್ಣ ಮುಂದೆ ಬರದೇ ಇರದು.

ಪ್ರಾಣ ಸ್ನೇಹಿತೆಯರಾದ ಫೌಝಿಯಾ ಮತ್ತು ಸಮೀರಾ ಈ ಕಾಲೇಜು ಶುರು ಮಾಡಿರುವ ಗಟ್ಟಿಗಿತ್ತಿಯರು. ಫೌಝಿಯಾ ಮಂಗಳೂರು ವಿವಿಯಿಂದ ಕನ್ನಡ ಸ್ನಾತಕೋತ್ತರ ಮತ್ತು ತುಮಕೂರು ವಿವಿಯಿಂದ ಬಿಎಡ್‌ ಪದವಿ ಪಡೆದಿದ್ದರೆ, ಮಂಗಳೂರು ವಿವಿಯಿಂದ ರಾಜ್ಯಶಾಸ್ತ್ರ ವಿಭಾಗದಲ್ಲಿ ವಿವಿಗೆ ಎರಡನೇ ರ್ಯಾಂಕನ್ನು ಸಮೀರಾ ಪಡೆದಿದ್ದಾರೆ.

ಕಾಲೇಜು ಬೋಧಕ ವರ್ಗದೊಂದಿಗೆ ಸಮೀರಾ ಮತ್ತು ಫೌಝಿಯಾ

ದಕ್ಷಿಣ ಕನ್ನಡದ ಕಡಬ ತಾಲೂಕಿನಲ್ಲಿರುವ ಪುಟ್ಟ ಹಳ್ಳಿಯೊಂದರಲ್ಲಿ AIMS ಹೆಸರಿನ ಕಾಲೇಜು ಶುರು ಮಾಡುವಾಗ ಇವರ ಕಣ್ಣೆದುರಲ್ಲಿ ಬೆಟ್ಟದಷ್ಟು ಕನಸಿತ್ತು. ಶಿಕ್ಷಣಕ್ಕಾಗಿ ತಾವು ಅನುಭವಿಸಿದ ಕಡುಕಷ್ಟ ಮುಂದಿನ ಮಕ್ಕಳಿಗೆ ಇರಬಾರದು ಎಂಬ ನೆಲೆಯಲ್ಲಿ ಶುರು ಮಾಡಿರುವ ಈ ಕಾಲೇಜಿಗೆ ನಿರಂತರ ಆದಾಯ ಇಲ್ಲ, ಸ್ವಂತದ್ದೊಂದು ಕಟ್ಟಡವೂ ಇಲ್ಲ. ಆದರೆ, ಬಡ ಮಕ್ಕಳಿಗೆ ಉನ್ನತ ಶಿಕ್ಷಣ ಕೈಗೆಟುಕದ ಕನಸಾಗಿ ಉಳಿಯಬಾರದು ಎಂಬ ಇವರ ನಿಲುವಿನಲ್ಲಿ ಯಾವ ಬದಲಾವಣೆಯೂ ಇಲ್ಲ. ಬಡ ಮಕ್ಕಳಿಗೆ ಉಚಿತ ಶಿಕ್ಷಣದ ಗ್ಯಾರಂಟಿ ನೀಡಿರುವ ಈ ಯುವತಿಯರ ಸಾಧನೆ ಅಸಾಮಾನ್ಯ.

ಫೌಝಿಯಾ ಮತ್ತು ಸಮೀರಾ ಅವರು ಬಡತನ, ಹಳ್ಳಿಗಾಡಿನ ಮುಸ್ಲಿಂ ಮಹಿಳೆಯರಿಗೆ ಕಲಿಯಲು ಆಗ ಇದ್ದ ವ್ಯತಿರಿಕ್ತ ವಾತಾವರಣದಲ್ಲಿ ಕಷ್ಟಪಟ್ಟು ಶಿಕ್ಷಣ ಪಡೆಯಬೇಕಾದರೆ ಅವರು ಎದುರಿಸಿದ್ದ ಸವಾಲುಗಳು ಅಷ್ಟಿಷ್ಟೇನಲ್ಲ. ಆದರೆ, ಇದ್ಯಾವುದೂ ಅವರನ್ನು ಎದೆಗುಂದಿಸಲಿಲ್ಲ. ದೂರದ ಹಾಸ್ಟೆಲಿನಲ್ಲಿ ಇದ್ದು ಕಲಿಯುತ್ತಿರುವ ಹೊತ್ತಿನಲ್ಲೇ ತಮ್ಮ ಹಳ್ಳಿಯ ಮಕ್ಕಳಿಗೆ ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳಿಗೆ ತಮ್ಮ ಹಳ್ಳಿಯಲ್ಲೇ ಪದವಿ ಶಿಕ್ಷಣ ದೊರೆಯುವಂತೆ ಮಾಡಬೇಕೆಂಬ ಅದಮ್ಯ ಕನಸಿನೊಂದಿಗೆ ಕಡಬದಲ್ಲಿ ಅವರು ಸಂಸ್ಥೆಯನ್ನು ಪ್ರಾರಂಭಿಸಿದರು.

 ಆರಂಭದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಡ್ರಾಪೌಟ್‌ ಮಕ್ಕಳಿಗೆ ಕೋಚಿಂಗ್‌ ನೀಡಿ, ಅವರ ಮುಂದಿನ ಶಿಕ್ಷಣದ ಹಾದಿಯನ್ನು ಸುಗಮಗೊಳಿಸುವ ಪ್ರಯತ್ನದೊಂದಿಗೆ ಮುಂದಡಿಯಿಟ್ಟ ಫೌಝಿಯಾ-ಸಮೀರಾ ಇಂದು ಮಂಗಳೂರು ವಿವಿ ಅಫಿಲಿಯೇಶನ್‌ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಪದವಿ ಕಾಲೇಜನ್ನು ನಡೆಸುತ್ತಿದ್ದಾರೆ.

ಕೋಮು ರಾಜಕಾರಣದ ಕರಾಳ ನೆರಳು

ಕರಾವಳಿಯಂತಹ ಜಿಲ್ಲೆಯ ಒಂದು ಪುಟ್ಟ ಹಳ್ಳಿಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಇಬ್ಬರು ಅವಿವಾಹಿತ ಹೆಣ್ಣು ಮಕ್ಕಳು ಶಿಕ್ಷಣ ಸಂಸ್ಥೆ ಕಟ್ಟುವುದು ಸುಲಭವೇನೂ ಆಗಿರಲಿಲ್ಲ ಎನ್ನುವುದಕ್ಕೆ ಇವರಿಬ್ಬರ ಹೋರಾಟದ ಬದುಕು ಸಾಕ್ಷಿ. ಅಪನಂಬಿಕೆಯ ಕರಿನೆರಳು ಸಂಸ್ಥೆ ಕಟ್ಟಿದ ಹೆಣ್ಣುಮಕ್ಕಳ ಮೇಲೂ ಬಿದ್ದಿದ್ದು, ಅದರ ಭೀಕರ ಪರಿಣಾಮಗಳನ್ನು ಅವರನ್ನು ಮುಂದಿನ ದಿನಗಳಲ್ಲಿ ಎದುರಿಸಬೇಕಾಯಿತು. ಸಂಸ್ಥೆಯನ್ನು, ಅದರಲ್ಲಿ ಕಲಿಯುವ ಮಕ್ಕಳನ್ನು ರಾಜಕೀಯ ಲಾಭಕ್ಕೋಸ್ಕರ ಬಳಕೆಯಾಗದಂತೆ ನೋಡಿಕೊಂಡದ್ದರ ಫಲವನ್ನು ಇವರು ನಂತರದ ದಿನಗಳಲ್ಲಿ ಅನುಭವಿಸುವಂತಾಗಿತ್ತು.

ಸಂಸ್ಥೆ ಆರಂಭಿಸುವಾಗ ಉತ್ತಮ ಸಹಕಾರ ನೀಡಿದ್ದ ವ್ಯಕ್ತಿಯೇ ನಂತರ ತಮ್ಮ ವಿರುದ್ಧ ತಿರುಗಿ ಬೀಳುವಂತೆ ಮಾಡಿದ ವಿರೋಧಿಗಳ ಷಡ್ಯಂತ್ರವನ್ನು ಸಂಸ್ಥೆಯ ಎಂಡಿಯೂ ಆಗಿರುವ ಮರಿಯಂ ಫೌಝಿಯಾ ಬಿ.ಎಸ್ ಅವರು ʼದಿ ಫೆಡರಲ್‌ ಕರ್ನಾಟಕʼದೊಂದಿಗೆ ವಿವರಿಸುವಾಗ ಗದ್ಗದಿತರಾದರು.

 

ಸೆಕ್ಯುಲರ್‌ ಶಿಕ್ಷಣದಡಿಯಲ್ಲಿ ಎಲ್ಲಾ ವರ್ಗದ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕೆಂಬ ಕನಸು ಹೊಂದಿದ್ದ ಈ ಹೆಣ್ಣು ಮಕ್ಕಳು ಎರಡೂ ಕಡೆಯ ಸಂಕುಚಿತ ಮನಸ್ಸಿನ ಜನರ ವಿರೋಧವನ್ನೇ ಎದುರು ಹಾಕಿಕೊಳ್ಳಬೇಕಾಗಿ ಬಂದಿತ್ತು. ಸಂಸ್ಥೆಗೆ ಬಾಡಿಗೆ ಕಟ್ಟಡ ಕೂಡಾ ಸಿಗಬಾರದೆಂಬ ಷಡ್ಯಂತ್ರವನ್ನು ಮಾಡುತ್ತಲೇ ಬಂದ ವಿರೋಧಿಗಳು, ಸಂಸ್ಥೆ ಬಗ್ಗೆ ಇನ್ನಿಲ್ಲದ ಅಪಪ್ರಚಾರವನ್ನು ಮಾಡಿ, ಸಂಸ್ಥೆ ಮುಚ್ಚಿ ಹೋಗಬೇಕೆಂದು ಪ್ರಯತ್ನ ಪಟ್ಟರಾದರೂ ದಶಕಗಳ ಕಾಲ ಹೇಗೋ ಏಗಿಕೊಂಡು ನಾವು ಬಂದಿದ್ದೇವೆ ಎನ್ನುತ್ತಾರೆ ಫೌಝಿಯಾ.

“ಸಂಸ್ಥೆಯನ್ನು ನಡೆಸಿಕೊಂಡು ಬಂದ ಈ ಸಣ್ಣ ಅವಧಿಯಲ್ಲೇ ಒಂದು ಬದುಕಿಗಾಗುವಷ್ಟು ಅನುಭವಗಳನ್ನು, ಅವಮಾನಗಳನ್ನು ನಾವು ನೋಡಿದೆವು. ಪೊಲೀಸ್‌ ಕೇಸ್‌, ಸ್ಥಳೀಯ ಸಂಘಟನೆ-ಅದರ ನಾಯಕರ ಕ್ಷುಲ್ಲಕ ರಾಜಕಾರಣ ಎಲ್ಲವೂ ನಮ್ಮನ್ನು ಇನ್ನಷ್ಟು ಗಟ್ಟಿಗೊಳಿಸುತ್ತಾ ಬಂದಿದೆ. ಅವಿವಾಹಿತ ಹೆಣ್ಣುಮಕ್ಕಳಾದ ನಮಗೆ ಇದೆಲ್ಲವನ್ನೂ ಎದುರಿಸುವ ಧೈರ್ಯ ಮತ್ತು ಸಂಕಲ್ಪ ಎಲ್ಲಿಂದ ಬಂತೋ ತಿಳಿಯದು. ಆದರೂ ನಮ್ಮ ಕನಸು ಸ್ಪಷ್ಟವಾಗಿತ್ತು. ಅಂಕ ಹಾಗೂ ಆರ್ಥಿಕ ಕಾರಣದಿಂದ ಕಾಲೇಜು ಮೊಟಕುಗೊಳಿಸುವ ಮಕ್ಕಳಿಗೆ ಶಿಕ್ಷಣದ ಬಾಗಿಲನ್ನು ತೆರೆದಿಡುವ ನಮ್ಮ ಕನಸು ಇದೆಲ್ಲದರೊಂದಿಗೆ ಹೋರಾಡುವಂತಹ ಕಿಚ್ಚನ್ನು ನಮ್ಮೊಳಗೆ ಹೊತ್ತಿಸಿತು ಎಂದು ಫೌಝಿಯಾ ಹೇಳಿದರು.

ದಾನಿಗಳನ್ನು ಸಂಪರ್ಕಿಸಿದರೆ, ಅದು ಬೇರೆಯದ್ದೇ ಕತೆ. 2011 ರಲ್ಲಿ ಸ್ನಾತಕೋತ್ತರ ವಿದ್ಯಾರ್ಥಿನಿಯರಾಗಿದ್ದ ಫೌಝಿಯಾ ಮತ್ತು ಸಮೀರಾ ಅವರು ತಮ್ಮ ಯೌವನದ ಆರಂಭದಲ್ಲೇ ಈ ಯೋಜನೆಗೆ ಕೈ ಹಾಕಿದ್ದರು. ಸಂಸ್ಥೆಗೆ ದಾನಿಗಳನ್ನು ಸಂಪರ್ಕಿಸಿದರೆ, ಅವರಲ್ಲಿ ಕೆಲವರು ಆಶ್ವಾಸನೆಯನ್ನು ನೀಡಿ ಸಾಗಹಾಕಿದರೆ, ಇನ್ನೂ ಕೆಲವರು ಇವರ ಯೋಚನೆಗಳಿಗೆ ಆದ್ಯತೆ ನೀಡದೆ ಇವರ ದೇಹವನ್ನು ಬಯಸಿದರು ಎಂದು ಫೌಝಿಯಾ ತಾವು ಎದುರಿಸಿದ ಸವಾಲುಗಳನ್ನು ವಿವರಿಸುತ್ತಾರೆ.

ಅಂತಹವರಿಗೆ ಸೊಪ್ಪು ಹಾಕದೆ, ಸಣ್ಣಪುಟ್ಟ ದಾನಿಗಳ ಸಹಾಯದಿಂದ ನಾವು ಸಂಸ್ಥೆಯನ್ನು ನಡೆಸುತ್ತಾ ಬಂದಿದ್ದೇವೆ. ಬಡ ಮಕ್ಕಳಿಗಾಗಿ ಸೇವೆ ನೀಡುವ ನಮಗೆ ಬಡವರ ದಾನವೂ ದೊಡ್ಡ ಪ್ರಯೋಜನಕಾರಿಯಾಗುತ್ತದೆ ಎಂದು ಹೇಳುವ ಫೌಝಿಯಾ, ಒಬ್ಬೊಬ್ಬರು ನೂರು ರೂ.ಗಳಂತೆ ಕೊಟ್ಟರೂ ಸ್ವಾಭಿಮಾನದಿಂದ ಸಂಸ್ಥೆಯನ್ನು ನಡೆಸಬಹುದು ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಈ ಕಾಲೇಜಿನ ವಿದ್ಯಾರ್ಥಿಗಳ ಸಂಖ್ಯೆ ಸದ್ಯ 100 ರ ಆಜುಬಾಜಾಗಿದ್ದರೆ, ಬಿಎ ಮತ್ತು ಬಿಕಾಂ ಪದವಿಗಳು ಇರುವ ಈ ಕಾಲೇಜಿಗೆ ಒಟ್ಟಾರೆ 18 ಸ್ಟಾಫ್‌ಗಳು ಇದ್ದಾರೆ. ಹೆಚ್ಚಿನ ಮಕ್ಕಳು ಈ ಪ್ರದೇಶದಲ್ಲಿ ಉನ್ನತ ಶಿಕ್ಷಣದಿಂದ ವಂಚಿತರಾಗಿದ್ದಾರೆ. ದೂರದ ಪ್ರದೇಶದಲ್ಲಿ ಇರುವ ಕಾಲೇಜಿಗೆ ಕಳುಹಿಸಲು ಅನುಕೂಲ ಇರುವವರು ಕಳುಹಿಸುತ್ತಾರೆ. ಉಳಿದವರು ಶಿಕ್ಷಣದ ಕನಸು ಕೈಬಿಟ್ಟು ಮನೆಯಲ್ಲೇ ಕೂರಬೇಕಾಗುತ್ತದೆ. ಅಂತಹ ಮಕ್ಕಳನ್ನು ಹುಡುಕಿ ನಾವು ನಮ್ಮ ಸಂಸ್ಥೆಯಲ್ಲಿ ಸೇರಿಸಿಕೊಂಡೆವು. ಸದ್ಯ, ಕಟ್ಟಡದ ಅನಾನುಕೂಲತೆಯಿಂದಾಗಿ ಇನ್ನಷ್ಟು ಮಕ್ಕಳನ್ನು ಸೇರಿಸಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಸಂಸ್ಥೆಗೆ ಸ್ವಂತದ್ದೊಂದು ಕಟ್ಟಡವಾದರೆ, ಇನ್ನೂ ಹೆಚ್ಚಿನ ಮಕ್ಕಳನ್ನು ಸೇರಿಸಿಕೊಳ್ಳುತ್ತೇವೆ. ಕೆಲವು ಮಕ್ಕಳನ್ನು ಸೇರಿಸಿಕೊಳ್ಳಲಾಗದೆ ಮರಳಿ ಕಳುಹಿಸಿದ್ದೇವೆ. ನಮ್ಮ ಅನಾನುಕೂಲತೆಯಿಂದ ನಮ್ಮ ಕಣ್ಣೆದುರಲ್ಲೇ ಬಡ ಮಕ್ಕಳು ಶಿಕ್ಷಣ ವಂಚಿತರಾಗುವುದು ನೋಡುವಾಗ ಕರುಳು ಚುರುಕೆನ್ನುತ್ತದೆ. ಅದಲ್ಲದೆ, ಮಂಗಳೂರು ವಿವಿ ಅಫಿಲಿಯೇಶನ್‌ನನ್ನು ತಪ್ಪಿಸಲು ಕೂಡಾ ಕೆಲವು ಖಾಸಗಿ ಸಂಸ್ಥೆಯವರು ಪ್ರಯತ್ನ ಪಟ್ಟರು. ಆದರೆ, ಮಂಗಳೂರು ವಿವಿಯಲ್ಲಿರುವ ಸಹೃದಯ ಅಧಿಕಾರಿಗಳ ಸಹಾಯದಿಂದ ನಮ್ಮ ಸಂಸ್ಥೆ ಇನ್ನೂ ಕಾರ್ಯಾಚರಿಸುತ್ತಿದೆ ಎಂದು ಫೌಝಿಯಾ ಹೇಳಿದರು.

ಶಿಕ್ಷಣದಿಂದ ಮುಸ್ಲಿಂ ಹೆಣ್ಣುಮಕ್ಕಳು ಮಾತ್ರವಲ್ಲ, ಆರ್ಥಿಕವಾಗಿ ದುರ್ಬಲವಾಗಿರುವ, ನಗರಗಳಿಂದ ದೂರವಿರುವ ಎಲ್ಲಾ ವರ್ಗದ ಬಡ ಕುಟುಂಬದ ವಿದ್ಯಾರ್ಥಿಗಳೂ ವಂಚಿತರಾಗುತ್ತಿದ್ದಾರೆ. ಕೇವಲ ಒಂದು ವರ್ಗದ ಮಕ್ಕಳನ್ನು ಮಾತ್ರ ಗುರಿಯಾಗಿಸಿಕೊಂಡಿದ್ದರೆ ಇಷ್ಟೊಂದು ಸವಾಲುಗಳನ್ನು ನಾವು ಎದುರಿಸಬೇಕಿರಲಿಲ್ಲ, ನಮಗೆ ಎಲ್ಲಾ ಮಕ್ಕಳಿಗೂ ಶಿಕ್ಷಣ ನೀಡಬೇಕೆಂಬ ಗುರಿಯಿದೆ ಎಂದು ಅವರು ಹೇಳುತ್ತಾರೆ.

 ಆದರೆ, ಇಷ್ಟೆಲ್ಲಾ ಆದರೂ ಅವರಿಗೆ ಕಿರುಕುಳ ನೀಡಿದವರ ಮೇಲಾಗಲೀ, ಅವರ ಸಂಸ್ಥೆ ಮುಚ್ಚಿಸಲು ಷಡ್ಯಂತ್ರ ಮಾಡಿದವರ ಮೇಲಾಗಲೀ ಫೌಝಿಯಾ ಮತ್ತು ಸಮೀರಾರಿಗೆ ದ್ವೇಷವೇನೂ ಇಲ್ಲ. “ಅವರ ಮೇಲೆ ಜಿದ್ದಿಗೆ ಬಿದ್ದರೆ ನಮ್ಮ ಉದ್ದೇಶ ಪೂರ್ತಿಯಾಗುವುದಿಲ್ಲ. ನಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ದೇವರ ಸಹಾಯವೊಂದು ಯಾವತ್ತೂ ಇತ್ತು. ಇನ್ನೇನು ಸಂಸ್ಥೆ ಮುಚ್ಚಿಯೇ ಹೋಗಬೇಕು ಅನ್ನುವಂತಹ ಹೊತ್ತಿನಲ್ಲಿ ಪವಾಡದಂತಹ ಘಟನೆಯೇನಾದರೂ ನಡೆದು ನಮ್ಮ ಸಂಸ್ಥೆ ಉಳಿದುಕೊಳ್ಳುತ್ತಾ ಬಂದಿದೆ” ಎಂದು ಹೇಳುವ ಫೌಝಿಯಾ, ʼನಾವು ಹಾಕಿದ ಪ್ರಯತ್ನಕ್ಕೆ ಇಂದು ಸಂಸ್ಥೆ ಯಾವುದೋ ಎತ್ತರಕ್ಕೆ ಬೆಳೆಯಬೇಕಿತ್ತು. ನಮ್ಮ ಹೆಚ್ಚಿನ ಹೋರಾಟಗಳು ಇಂತಹ ಷಡ್ಯಂತ್ರಗಳ ವಿರುದ್ಧ ಸಂಸ್ಥೆಯನ್ನು ಉಳಿಸಿಕೊಳ್ಳುವುದರಲ್ಲೇ ಕಳೆಯಿತುʼ ಎಂದೂ ವಿಷಾದವನ್ನು ವ್ಯಕ್ತಪಡಿಸುತ್ತಾರೆ.

ʼಅನುಕೂಲಸ್ಥ ಮನೆಗಳಿಂದ ಮಕ್ಕಳು ದೂರದಲ್ಲಿರುವ, ಖಾಸಗಿ ಸಂಸ್ಥೆಗಳಿಗೆ ಹೋಗಿ ಶಿಕ್ಷಣ ಪಡೆಯಲು ಯೋಗ್ಯರಿದ್ದಾರೆ. ನಮ್ಮ ಗುರಿ ಇಲ್ಲಿನ ಬಡ ಮಕ್ಕಳು. ನಮ್ಮ ಸಂಸ್ಥೆಗೆ ಬಡತನದಲ್ಲಿರುವ ಪೋಷಕರ ಮಕ್ಕಳೇ ಕಲಿಯಲು ಬರುತ್ತಿರುವುದರಿಂದ ಈಗ ಅವರ ಕೊಟ್ಟಷ್ಟೇ ಫೀಜು, ಕೆಲವರಿಗೆ ಅದನ್ನೂ ಕೊಡಲು ಸಾಧ್ಯವಾಗುವುದಿಲ್ಲ, ಚಾರಿಟಿಯಾಗಿ ಕೆಲಸ ಮಾಡುವ ನಾವು ಅವರಿಂದ ಫೀಸನ್ನು ಕೇಳುವುದೂ ಇಲ್ಲ. ವಿದ್ಯಾರ್ಥಿಗಳಿಂದ ಯಾವುದೇ ಶುಲ್ಕ ಪಡೆಯದೇ 9 ವರ್ಷಗಳ ಕಾಲ ಸಂಸ್ಥೆಯನ್ನು ನಡೆಸಿದ್ದೇವೆʼ ಎಂದು ʼದಿ ಫೆಡೆರಲ್‌ ಕರ್ನಾಟಕʼ ಜೊತೆ ಕಾಲೇಜಿನ ಪ್ರಾಂಶುಪಾಲೆ ಸಮೀರಾ ಅವರು ವಿವರಿಸಿದರು.

“ಹೆಣ್ಣು ಮಕ್ಕಳು ಮಾತ್ರವಲ್ಲದೆ, ಬಡತನದ ಕಾರಣದಿಂದ ಶಿಕ್ಷಣದಿಂದ ವಂಚಿತರಾಗುವ ಗಂಡುಮಕ್ಕಳಿಗೂ ಕೂಡಾ ನಮ್ಮ ಸಂಸ್ಥೆಯ ಸೇವೆ ತೆರೆದಿರತ್ತದೆ. ಎಲ್ಲಾ ಸಮುದಾಯದ ಬಡ ಮಕ್ಕಳು ಕಲಿಯಬೇಕೆನ್ನುವುದು ನಮ್ಮ ಕನಸು” ಎನ್ನುತ್ತಾರೆ ಅವರು.

 “ಇಂತಹ ಮಕ್ಕಳಿಂದ ಫೀಸನ್ನು ಭರಿಸಲಾಗುವುದಿಲ್ಲ. ಚಾರಿಟಿ ಮತ್ತು ಡೊನೇಷನ್‌ ಆಧಾರದಲ್ಲಿ ಸಂಸ್ಥೆಯ ವೆಚ್ಚವನ್ನು ಭರಿಸುತ್ತಿದ್ದೇವೆ. ನಮಗೆ ಒಂದು ಕಟ್ಟಡವಿದ್ದರೆ ಬಾಡಿಗೆ ವೆಚ್ಚವೂ ಕಡಿತವಾಗಲಿದೆ. ನಮಗೂ ಹೆಚ್ಚಿನ ಮಕ್ಕಳಿಗೆ, ಹೆಚ್ಚಿನ ಕೋರ್ಸ್‌ ಕಲಿಸುವ ಅವಕಾಶವೂ ಸಿಗಬಹುದು” ಎಂದು ಸಮೀರಾ ಆಶಾವಾದ ವ್ಯಕ್ತಪಡಿಸುತ್ತಾರೆ.

ಕಾಲೇಜಿಗೆ ಬೇಕಾದ ಸೂಕ್ತ ಮೂಲಭೂತ ವ್ಯವಸ್ಥೆ, ಕಟ್ಟಡ, ಕ್ರೀಡಾಂಗಣ, ಸುಸಜ್ಜಿತ ಲ್ಯಾಬ್‌ ಮೊದಲಾದವುಗಳನ್ನು ನಿರ್ಮಿಸುವ ಕನಸನ್ನು ಈ ಯುವ ಸಾಧಕಿಯರು ಹೊಂದಿದ್ದಾದರೂ ಇವರ ಕನಸಿಗೆ ಜೊತೆಗೂಡುವ ʼಕೈʼಗಳ ಕೊರತೆ ಇದೆ. ಜನ ಪ್ರತಿನಿಧಿಗಳು ಹಲವಾರು ಬಾರಿ ನಮ್ಮ ಬೇಡಿಕೆಗಳನ್ನು ಕೇಳಿದ್ದರಾದರೂ, ಅವರ ಬ್ಯುಸಿಯಲ್ಲಿ ಅವರು ಮರೆತುಹೋಗುತ್ತಾರೆ. ಅವರ ಹಿಂದೆ ಅಲೆದಾಡಲು ನಮ್ಮಿಂದ ಸಾಧ್ಯವೂ ಇಲ್ಲ ಎಂದು ಸಮೀರಾ ಹೇಳುತ್ತಾರೆ.

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಿಂದ ಡ್ರಾಪ್‌ಔಟ್‌ ಆದ ಮಕ್ಕಳಿಗೆ ಕೋಚಿಂಗ್‌ ನೀಡುವುದು ಮಾತ್ರವಲ್ಲದೆ, ಸ್ಪೋಕನ್‌ ಇಂಗ್ಲೀಷ್‌, ಟೈಲರಿಂಗ್‌, ಕಂಪ್ಯೂಟರ್‌ ಕ್ಲಾಸ್‌, ಡ್ರೈವಿಂಗ್‌ ಕ್ಲಾಸ್‌ ಮೊದಲಾದ ಸೇವೆಗಳನ್ನೂ ಇವರ ಸಂಸ್ಥೆ ಆರಂಭಿಕ ಕಾಲದಲ್ಲಿ ನೀಡುತ್ತಿತ್ತು. ಸದ್ಯ, ಕಾಲೇಜು ಕಟ್ಟಡಕ್ಕೆ ಜಮೀನನ್ನು ಖರೀದಿಸಲಾಗಿದ್ದು, ಕಟ್ಟಡ ನಿರ್ಮಾಣಕ್ಕೆ ಬೇಕಾದ ಮೊತ್ತದ ಕೊರತೆಯಿದೆ. ಈ ಕಟ್ಟಡವನ್ನು ನಿರ್ಮಿಸದಿದ್ದರೆ, ಇವರ ಕನಸು ಮಾತ್ರವಲ್ಲದೆ ಸದ್ಯ ಇರುವ ನೂರಕ್ಕೂ ಅಧಿಕ ಮಕ್ಕಳ ಭವಿಷ್ಯ ಸೇರಿದಂತೆ, ಈ ಸಂಸ್ಥೆಯ ಸೇವೆ ಅಗತ್ಯ ಇರುವ ಸಾವಿರಾರು ಮಕ್ಕಳ ಭವಿಷ್ಯ ಅತಂತ್ರವಾಗಲಿದೆ.

ಕಾಲೇಜು ಕಟ್ಟಡ ನಿರ್ಮಾಣಕ್ಕಾಗಿ ಖರೀದಿಸಿರುವ ಜಮೀನು

ʼಒಗ್ಗಟ್ಟು-ಶಿಸ್ತು-ನಂಬಿಕೆʼ ಎಂಬ ಧ್ಯೇಯವಾಕ್ಯದೊಂದಿಗೆ ಕಾರ್ಯ ನಿರ್ವಹಿಸುವ ಏಮ್ಸ್‌ ಫಸ್ಟ್‌ ಗ್ರೇಡ್‌ ಕಾಲೇಜಿನ ಮೂಲಕ ಭಾರತದ ಜಾತ್ಯಾತೀತ ಪರಂಪರೆ, ಸೌಹಾರ್ದಯುತ ಸಮಾಜವನ್ನು ಮುಂದುವರೆಸುವ ಕಲ್ಪನೆಯೂ ಈ ಇಬ್ಬರು ಸಾಧಕಿಯರಿಗಿದೆ. ಹಾಗಾಗಿಯೇ, ಎಲ್ಲಾ ಸಮುದಾಯದ ಮಕ್ಕಳೂ ಇಲ್ಲಿ ಓದಬೇಕು, ಪರಸ್ಪರ ಒಡನಾಡಬೇಕು ಎಂಬ ಆಶಯದೊಂದಿಗೆ ವಿದ್ಯಾದಾನದ ಕೈಂಕರ್ಯದಲ್ಲಿ ತೊಡಗಿಕೊಂಡಿದ್ದು, ತಮ್ಮ ಸಂಸ್ಥೆಯ ಮೂಲಕ ಇನ್ನಷ್ಟು ಬಡ ವಿದ್ಯಾರ್ಥಿಗಳ ಬದುಕಲ್ಲಿ ಅರಿವಿನ ಕಂದೀಲು ಉರಿಸಲು ದಾನಿಗಳ ನಿರೀಕ್ಷೆಯಲ್ಲಿದ್ದಾರೆ.

(ಸಂಸ್ಥೆಗೆ ಇನ್ನಷ್ಟು ತೊಂದರೆ ಆಗಬಾರದೆಂಬ ಉದ್ದೇಶದಿಂದ ನಿರ್ದಿಷ್ಟ ಘಟನೆ ಮತ್ತು ವ್ಯಕ್ತಿಗಳ ಹೆಸರನ್ನು ಇಲ್ಲಿ ಉಲ್ಲೇಖಿಸಲಾಗಿಲ್ಲ. ಈ ಹೆಣ್ಣುಮಕ್ಕಳ ಪ್ರಯತ್ನಕ್ಕೆ ಕೈಲಾದಷ್ಟು ಸಹಾಯ ಮಾಡುವವರು ಇಲ್ಲಿ ನೀಡಲಾಗಿರುವ ವಿವರಗಳನ್ನು ಸಂಪರ್ಕಿಸಬಹುದು)

 

 

Tags:    

Similar News