THE FEDERAL REVIEW | ನಿಗಿನಿಗಿ ಕಥೆಯ ಮಲೆನಾಡಿನ ಕಾಂತಾರ ʼಕೆರೆಬೇಟೆʼ

ಮಲೆನಾಡಿನ ಬೆಟ್ಟಗುಡ್ಡಗಳ ದಟ್ಟ ಹಸಿರಿನ ನಡುವಿನ ಕೆರೆಗಳಲ್ಲಿ ಕೆರೆಬೇಟೆಯ ಕೇಕೆ ಮೊಳಗುತ್ತಿರುವಾಗಲೇ ಬೆಂಗಳೂರಿನ ಗಾಂಧಿನಗರದಲ್ಲೂ ʼಕೆರೆಬೇಟೆʼ ಸದ್ದು ಮಾಡುತ್ತಿದೆ. ಕಥೆ, ಮೇಕಿಂಗ್, ನಟನೆ ಮತ್ತು ನೇಟಿವಿಟಿಯ ಕಾರಣಕ್ಕೆ ಸಾಕಷ್ಟು ಚರ್ಚೆಯಾಗುತ್ತಿರುವ ʼಕೆರೆಬೇಟೆʼ ಸಿನಿಮಾ ನಿಜಕ್ಕೂ ವಿಶೇಷವೆನಿಸಿರುವುದು ಯಾಕೆ? ಮುಂದೆ ಓದಿ...

Update: 2024-03-28 01:20 GMT

ಈ ಬಾರಿ ಭೀಕರ ಬರ. ಮಲೆನಾಡಿನ ಜೀವನಾಡಿಗಳಾದ ಕೆರೆಕಟ್ಟೆಗಳು ಬತ್ತಿವೆ. ಕೆರೆ ನೀರು ತಗ್ಗಿದ ಬೆನ್ನಲ್ಲೇ ಮಲೆನಾಡಿನ ಉದ್ದಗಲಕ್ಕೆ ಕೆರೆಬೇಟೆ ಹಂಗಾಮ ಶುರುವಾಗಿದೆ. ಮೀನು ಹಿಡಿಯುವ ಕೂಣಿ(ಬಿದಿರಿನ ಮಂಕರಿಯಂತಹ ಸಲಕರಣೆ), ಬಲೆ ಬಳಸಿ ನೂರಾರು ಮಂದಿ ಏಕಕಾಲಕ್ಕೆ ಕೆರೆಗೆ ಇಳಿದು ಮೀನುಗಳನ್ನು ಜಾಲಾಡುವ ಸಾಮೂಹಿಕ ಬೇಟೆಯಾದ ಕೆರೆಬೇಟೆ ಈಗ ಮಲೆನಾಡಿನಲ್ಲಿ ಸುದ್ದಿಯಾಗುತ್ತಿದೆ.

ವಿಶೇಷವೆಂದರೆ, ಮಲೆನಾಡಿನ ಬೆಟ್ಟಗುಡ್ಡಗಳ ದಟ್ಟ ಹಸಿರಿನ ನಡುವಿನ ಕೆರೆಗಳಲ್ಲಿ ಕೆರೆಬೇಟೆಯ ಕೇಕೆ ಮೊಳಗುತ್ತಿರುವಾಗಲೇ ಬೆಂಗಳೂರಿನ ಗಾಂಧಿನಗರದಲ್ಲೂ ʼಕೆರೆಬೇಟೆʼ ಸದ್ದು ಮಾಡುತ್ತಿದೆ. ಕಥೆ, ಮೇಕಿಂಗ್, ನಟನೆ ಮತ್ತು ನೇಟಿವಿಟಿಯ ಕಾರಣಕ್ಕೆ ಸಾಕಷ್ಟು ಚರ್ಚೆಯಾಗುತ್ತಿರುವ ʼಕೆರೆಬೇಟೆʼ ಸಿನಿಮಾ ನಿಜಕ್ಕೂ ವಿಶೇಷವೆನಿಸಿರುವುದು ಯಾಕೆ? ಕನ್ನಡದ ಸಿನಿಮಾ ಆಗಿ ಅದು ಹೇಗೆ ಇತರೆಲ್ಲಾ ಸಿನಿಮಾಗಳಿಗಿಂತ ಭಿನ್ನ? ಬಿಡುಗಡೆಯಾದ ಎರಡು ವಾರದ ಬಳಿಕವೂ ಚಾಲ್ತಿಯಲ್ಲಿರುವ ಈ ಹೊಸಬರ ಸಿನಿಮಾದಲ್ಲಿ ಅಂತಹದ್ದೇನಿದೆ? ಎಂಬ ಕುತೂಹಲದಲ್ಲಿ ಈ ಸಿನಿಮಾವನ್ನು ನೋಡಿದ ಬಳಿಕ ಹೇಳಲೇಬೇಕಿಸಿದ್ದು ಇಲ್ಲಿದೆ…

ಮೂಗಿನ ತುದಿಯಲ್ಲೇ ಕೋಪವಿರುವ ಪಕ್ಕಾ ಮಲೆನಾಡಿನ ʼರೆಬೆಲ್ʼ ಹುಡುಗ ಹುಲಿಮನೆ ನಾಗ(ಗೌರಿಶಂಕರ್)ನ ಮುಗ್ಧ ಬಂಡಾಯ, ಪ್ರೀತಿ, ಛಲ, ನ್ಯಾಯದ ಪರ ಬಡಿದಾಡುವ, ಅನ್ಯಾಯವನ್ನು ಹತ್ತಿಕ್ಕುವ ಮುಂಗೋಪಿ ಬುದ್ಧಿಯ ದುಃಸ್ಸಾಹಸಗಳ ಸುತ್ತ ಸಿನಿಮಾವನ್ನು ಹೆಣೆಯಲಾಗಿದೆ. ಸಿನಿಮಾದುದ್ದಕ್ಕೂ ಕೆರೆಬೇಟೆ ಹಿನ್ನೆಲೆಯಂತೆ ಹಾಸುಹೊಕ್ಕಾಗಿದೆ. ಬಡತನ ಮತ್ತು ಅದನ್ನು ಮೀರುವ ನಾಯಕನ ಹೋರಾಟದ ಜೊತೆಗೆ ಆತನನ್ನು ಬೇರೆಯದೇ ದಿಕ್ಕಿಗೆ ತಿರುಗಿಸುವ ಪ್ರೀತಿ-ಪ್ರೇಮದ ಸುಳಿ ಚಿತ್ರದ ತಿರುಳು.

ಮಲೆನಾಡಿನ ಕಾಡು, ಕಾಡ ನಡುವಿನ ಬದುಕಿನ ನಿಗಿನಿಗಿ ಕಥೆಯನ್ನು ಅದರ ಎಲ್ಲಾ ವಿವರಗಳೊಂದಿಗೆ, ಅಲ್ಲಿನ ನೆಲದ ಭಾಷೆಯೊಂದಿಗೆ ಅಷ್ಟೇ ನಿಗಿನಿಗಿ ಎನಿಸುವ ಪಾತ್ರಗಳ ಮೂಲಕ ಪ್ರೇಕ್ಷಕನ ಎದೆಗೆ ನಾಟುವಂತೆ ಹೇಳಿರುವುದು ಈ ಚಿತ್ರವನ್ನು ಉಳಿದ ಸಿನಿಮಾಗಳಿಗಿಂತ ಭಿನ್ನವಾಗಿಸಿದೆ. ಆ ದೃಷ್ಟಿಯಲ್ಲಿ ಇದು ಮಲೆನಾಡಿನ ʼಕಾಂತಾರʼ. ಕಾಂತಾರದ ಮಲೋಡ್ರಾಮಾ(ಅತಿ ನಾಟಕೀಯತೆ)ಯನ್ನು ಹೊರತುಪಡಿಸಿದರೆ, ʼಕೆರೆಬೇಟೆʼ ಸಿನಿಮಾ ಹೆಚ್ಚು ಅಥೆಂಟಿಕ್ ಆದ ಮಲೆನಾಡಿನ ಬದುಕನ್ನು ಅದರ ಎಲ್ಲಾ ಸಾಂಸ್ಕೃತಿಕ, ಸಾಮಾಜಿಕ ಆಯಾಮಗಳೊಂದಿಗೆ ಒಂದು ಗಟ್ಟಿ ಕಥೆಯೊಳಗೆ ತಂದಿದೆ. ಅಂತಹ ಗಟ್ಟಿ ಕಥೆಯನ್ನು ಅಷ್ಟೇ ಸಹಜವಾಗಿ ಕಟ್ಟಿಕೊಡಲಾಗಿದೆ.

ಹಾಗೇ, ಭಾಷೆ, ಆಚರಣೆ, ಪರಿಸರ ಮುಂತಾದ ʼನೇಟಿವಿಟಿʼ ಹಿಡಿಯುವ ಭರದಲ್ಲಿ ಕಥೆ ಜೊಳ್ಳಾಗದಂತೆ, ಕಳೆದುಹೋಗದಂತೆ ಎಚ್ಚರ ವಹಿಸಿರುವುದು ನಿರ್ದೇಶಕರ(ರಾಜ್ ಗುರು ಬಿ) ಹೆಗ್ಗಳಿಕೆ. ಸ್ವತಂತ್ರ ನಿರ್ದೇಶಕರಾಗಿ ರಾಜ್ ಗುರು ಅವರ ಮೊದಲ ಚಿತ್ರ ಇದಾದರೂ, ಎಲ್ಲಿಯೂ ಅವರು ಹದ ತಪ್ಪಿಲ್ಲ, ಮುಗ್ಗರಿಸಿಲ್ಲ. ಚಿತ್ರದ ಪ್ರತಿ ಫ್ರೇಮಿನಲ್ಲೂ ಪಕ್ಕಾ ವೃತ್ತಿಪರತೆ ಮೆರೆದಿದ್ದಾರೆ. ರಾಜ್ ಗುರು ಅವರ ಆ ವೃತ್ತಿಪರತೆಗೆ ಛಾಯಾಗ್ರಹಣ(ಕೀರ್ತನ್ ಪೂಜಾರಿ), ಕಥೆ, ಚಿತ್ರಕಥೆ, ಸಂಭಾಷಣೆ(ರಾಜ್ ಗುರು- ಗೌರಿಶಂಕರ್), ಹಿನ್ನೆಲೆ ಸಂಗೀತ(ಗಗನ್ ಬದೇರಿಯಾ) ಮತ್ತು ಸಂಕಲನ(ಎಡಿಟಿಂಗ್-ಜ್ಞಾನೇಶ್ ಬಿ ಮಠದ್) ಕೂಡ ಅಷ್ಟೇ ಸೂಕ್ತವಾಗಿ ಒದಗಿಬಂದಿವೆ.


ಹಾಗೇ, ನಾಯಕ ನಟ ಗೌರಿಶಂಕರ್ ಎಸ್ ಆರ್‌ ಜಿ, ನಾಯಕಿ ಬಿಂದು ಶಿವರಾಮ್, ಗೋಪಾಲ್ ದೇಶಪಾಂಡೆ, ಹರಿಣಿ, ಸಂಪತ್ ಮೈತ್ರೇಯ ಮತ್ತಿತರು ತಮ್ಮ ಸಹಜ ನಟನೆಯ ಮೂಲಕ ಚಿತ್ರಕ್ಕೆ ಜೀವ ತುಂಬಿದ್ದಾರೆ. ಹುಲಿಮನೆ ನಾಗನ ಪಾತ್ರವನ್ನೇ ಅವಾಹಿಸಿಕೊಂಡಂತೆ ನಟಿಸಿರುವ ಗೌರಿಶಂಕರ್, ಇಡೀ ಚಿತ್ರದುದ್ಧಕ್ಕೂ ನಿಗಿನಿಗಿ ಕೆಂಡಂತೆ ಕಾಣಿಸಿಕೊಂಡಿದ್ದಾರೆ. ನೆಗೆಟೀವ್ ಶೇಡ್ ಇರುವ ಪಾತ್ರವನ್ನು ಅವರು ನಿಭಾಯಿಸಿರುವ ರೀತಿ, ಅವರೊಳಗೊಬ್ಬ ಪಳಗಿದ ನಟನಿದ್ದಾನೆ ಎಂಬುದಕ್ಕೆ ಸಾಕ್ಷಿ. ಹಾಗೇ ಮೊದಲ ಪ್ರಯತ್ನದಲ್ಲೇ ಬಿಂದು ಶಿವರಾಮ್ ಕೂಡ ಅದ್ಭುತ ಅಭಿಯನ ನೀಡಿದ್ದಾರೆ. ಅಲ್ಲದೆ, ಗೋಪಾಲ್ ದೇಶಪಾಂಡೆ, ಸಂಪತ್ ಮತ್ತು ಹರಿಣಿ ಅವರ ನಟನೆ ಕೂಡ ಚಿತ್ರದ ಪ್ಲಸ್ ಪಾಯಿಂಟ್.

ಹಾಗೇ ಮಲೆನಾಡಿನ ಸುಂದರ ಪರಿಸರದೊಂದಿಗೆ ಕೆರೆಬೇಟೆ, ಅಂಟಿಗೆಪಿಂಟಿಗೆ, ಕಾಯಿಜೂಜು, ಮರ ಕೊಯ್ಯುವ ದಡೆ, ಕತ್ತಲ ಕಾಡು, ಹತ್ತುಮೀನು ಶಿಕಾರಿ ಮುಂತಾದ ರೀತಿ- ರಿವಾಜುಗಳನ್ನು ಅರ್ಥಪೂರ್ಣವಾಗಿ ಸೆರೆ ಹಿಡಿಯುವಲ್ಲಿ ಛಾಯಾಗ್ರಾಹಕ ಕೀರ್ತನ್ ಪೂಜಾರಿ ಅಚ್ಚುಕಟ್ಟುತನ ತೋರಿದ್ದಾರೆ. ಮಲೆನಾಡಿನ ತುಣುಕೊಂದನ್ನು ಅಚಾನಕ್ಕಾಗಿ ಎತ್ತಿತಂದು ಥಿಯೇಟರಿನಲ್ಲಿ ಇಟ್ಟಂತಿದೆ ಅವರ ಆ ಅಚ್ಚುಕಟ್ಟುತನ. ಹಾಗಾಗೇ ಇಡೀ ಸಿನಿಮಾ ಮಲೆನಾಡಿನ ಬದುಕಿಗೆ ಹಿಡಿದ ಕನ್ನಡಿಯಂತಿದೆ.

ಹಾಗಂತ ಚಿತ್ರದಲ್ಲಿ ಕೊರತೆಗಳೇ ಇಲ್ಲವೆಂದೇನಲ್ಲ. ನಾಯಕ ನಟ ಗೌರಿಶಂಕರ್ ಸಹಜ ದೃಶ್ಯಾವಳಿಗಳಂತೆಯೇ ಫೈಟ್ ದೃಶ್ಯಗಳಲ್ಲೂ ಸಹಜವಾಗಿ ಕಾಣುತ್ತಾರೆ. ಆದರೆ, ಡಾನ್ಸ್ ಮಾಡುವಾಗ(ಕೋರಿಯಾಗ್ರಫಿ- ಕಂಬಿ ರಾಜು) ಕೆಲವು ಭಂಗಿಗಳಲ್ಲಿ ಅವರು ತೀರಾ ಕೃತಕ ಎನಿಸುತ್ತಾರೆ. ಹಾಗೇ ಸಂಭಾಷಣೆಯಲ್ಲಿ ಪದೇಪದೆ ಬರುವ ಬೈಗುಳು ಮಲೆನಾಡಿಗರಿಗೂ ಚೂರು ಕಿರಿಕಿರಿ ಎನಿಸುತ್ತವೆ.

ಬಹಳ ಮುಖ್ಯವಾಗಿ, ಸಮೃದ್ಧ ಕೆರೆಗಳಲ್ಲಿ ಸಹಜವಾಗಿ ಮನಸೋಇಚ್ಛೆ ಆಡಿಕೊಂಡಿರುವ ಮೀನುಗಳಿಗೆ ಗೊತ್ತೇ ಆಗದಂತೆ ದಿಢೀರನೇ ನಡೆಯುವ ಕೆರೆಬೇಟೆಯ ಕೂಣಿಯ ದಾಳಿಯೇ ಉರುಳಾಗುತ್ತದೆ. ಮುಗ್ಧತೆ ಮತ್ತು ಅಂತರ್ಗತ ರೆಬೆಲ್ ಗುಣಗಳೊಂದಿಗೆ ಬದುಕು ಕಟ್ಟಿಕೊಳ್ಳಲು ಸೆಣೆಸಾಡುವ ವ್ಯಕ್ತಿಗೆ ಮಲೆನಾಡಿನ ರಮ್ಯ ಪರಿಸರದ ನಡುವೆ ಹಾಸುಹೊಕ್ಕಾಗಿರುವ ಜಾತಿ ವ್ಯವಸ್ಥೆ ಎಂಬುದೇ ಕೂಣಿಯಾಗಿ ಉರುಳು ಬಿಗಿಯುತ್ತದೆ! ಇದು, ಕೆರೆಬೇಟೆಯ ಮರ್ಮ! ಆದರೆ, ಚಿತ್ರದುದ್ದಕ್ಕೂ ಈ ಕೆರೆಬೇಟೆ ಹಿನ್ನೆಲೆಯಾಗಿ ಬಂದರೂ, ಅದು ಇಡೀ ಸಿನಿಮಾದ ದೃಶ್ಯ ರೂಪಕವಾಗಿ ನಿಲ್ಲುವ ಬದಲು ಒಂದು ದೃಶ್ಯಾವಳಿಯಾಗಿ ಮಾತ್ರ ಬಂದುಹೋಗುತ್ತದೆ.

ಹಾಗೇ, ಸಿನಿಮಾದ ಕ್ಲೈಮ್ಯಾಕ್ಸ್‌ವರೆಗೆ ರೋಚಕತೆ ಮತ್ತು ಕುತೂಹಲಕಾರಿ ತಿರುವುಗಳ ಮೂಲಕ ಸಾಗುವ ಕಥೆ, ಕ್ಲೈಮ್ಯಾಕ್ಸ್‌ನಲ್ಲಿ ದೊಡ್ಡ ಮಟ್ಟದ ರೋಚಕತೆ ಕಳೆದುಕೊಂಡು ಮುಗಿದುಹೋಗುತ್ತದೆ. ಕ್ಲೈಮ್ಯಾಕ್ಸ್‌ನ ಕೊನೆಯಲ್ಲಿ ಬರಬೇಕಿದ್ದ ಹುಲಿಮನೆ ನಾಗನ ಅಂತ್ಯದ ದೃಶ್ಯ, ತುಸು ಮುಂಚೆಯೇ ಬಂದುಬಿಡುವುದರಿಂದ, ಪ್ರೇಕ್ಷಕ ಸೀಟಿನಿಂದ ಏಳುವ ಹೊತ್ತಿಗೆ ಕಥೆಯ ರೋಚಕತೆ ಇಳಿಮುಖವಾಗಿಬಿಡುತ್ತದೆ. ಕೆರೆಬೇಟೆಯ ದೃಶ್ಯರೂಪಕವನ್ನು ಕಟ್ಟುವ ಮತ್ತು ಸಿನಿಮಾದ ಕ್ಲೈಮ್ಯಾಕ್ಸ್‌ ಇನ್ನಷ್ಟು ರೋಚಕಗೊಳಿಸಬಹುದಾಗಿದ್ದ ಎರಡು ಅವಕಾಶಗಳ ವಿಷಯದಲ್ಲಿ ಅದು ನಿರ್ದೇಶನದ ಮಿತಿಯೋ, ಅಥವಾ ಉದ್ದೇಶಪೂರ್ವಕವಾಗಿ ಅಂತಹ ಪ್ರಯತ್ನ ಮಾಡಿಲ್ಲವೋ? ಗೊತ್ತಿಲ್ಲ.

ಬಹುಶಃ ಆ ಎರಡು ಅವಕಾಶಗಳನ್ನು ಬಳಸಿಕೊಂಡಿದ್ದರೆ ʼಕೆರೆಬೇಟೆʼ ಸಿನಿಮಾದ ಆಯಾಮ ಬೇರೆಯದೇ ವಿಸ್ತಾರ ಪಡೆಯುತ್ತಿತ್ತು!


ಚಿತ್ರ: ಕೆರೆಬೇಟೆ | ನಿರ್ದೇಶನ: ರಾಜ್ ಗುರು ಬಿ | ನಿರ್ಮಾಣ: ಜೈಶಂಕರ್ ಪಟೇಲ್ | ಛಾಯಾಗ್ರಹಣ: ಕೀರ್ತನ್ ಪೂಜಾರಿ | ತಾರಾಗಣ: ಗೌರಿಶಂಕರ್ ಎಸ್ ಆರ್ ಜಿ, ಬಿಂದು ಶಿವರಾಮ್, ಗೋಪಾಲ್ ದೇಶಪಾಂಡೆ, ಹರಿಣಿ, ಸಂಪತ್ ಮೈತ್ರೇಯ

Tags:    

Similar News