ʻಇನ್ನಿಲ್ಲʼವಾದ ಅಮೂರ್ತ ವಾಸ್ತವಗಳ ದೃಶ್ಯರೂಪಕ ನಿರ್ದೇಶಕ ವಸಂತ ಮೊಕಾಶಿ

ತೊಂಭತ್ತು ವರ್ಷಗಳ ಕನ್ನಡ ಚಿತ್ರರಂಗದ ಮೈಲುಗಲ್ಲಿನಂಥ ʻಗಂಗವ್ವ ಗಂಗಾಮಾಯಿʼ ಚಿತ್ರವನ್ನು ನಿರ್ದೇಶಿಸಿ , ಕನ್ನಡ ಸಿನಿಮಾ ಲೋಕದಲ್ಲಿ ತಮಗೊಂದು ತಮ್ಮದೇ ಆದ ಸ್ಥಾನ ಕಲ್ಪಿಸಿಕೊಂಡಿದ್ದ ವಸಂತ ಮೊಕಾಶಿ ಮತ್ತೆ ಬಾರದ ಲೋಕಕ್ಕೆ ತೆರಳಿದ್ದಾರೆ.

Update: 2024-07-08 10:01 GMT

ಕನ್ನಡ ಚಿತ್ರರಂಗ ಕಂಡ ಸೂಕ್ಷ್ಮ ಸಂವೇದಿ ಮನಸ್ಸುಗಳಲ್ಲಿ ಒಂದಾದ ವಸಂತ ಮೊಕಾಶಿ ಎಂಬ ಪ್ರತಿಭೆ, ಹೇಳದೇ ಕೇಳದೇ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ವಿದಾಯ ಹೇಳಿದೆ. ಹೀಗೆ ಹೇಳುವಾಗ ಒಂದು ರೀತಿಯ ಖಿನ್ನತೆ ಆವರಿಸುತ್ತದೆ. ಏಕೆಂದರೆ ಕನ್ನಡದಲ್ಲಿ ಉತ್ತಮ ಚಿತ್ರಗಳೇ ಬರುತ್ತಿಲ್ಲ ಎಂದು ಆರೋಪಿಸುತ್ತಿರುವ ಇಂದಿನ ಸಂದರ್ಭದಲ್ಲಿ ʼಒಂದಾನೊಂದು ಕಾಲದಲ್ಲಿʼ ಉತ್ತಮ ಚಿತ್ರಗಳು ನಿರ್ಮಾಣವಾಗುತ್ತಿದ್ದಾಗಲೂ, ಅದನ್ನು ಕನ್ನಡದ ಸೂಕ್ಷ್ಮ ಮನಸ್ಸುಗಳು ಹೇಗೆ ನಡೆಸಿಕೊಂಡವು ಎಂಬ ಸಂಗತಿಯೂ ನೆನಪಾಗುತ್ತದೆ.

ವಸಂತ ಮೊಕಾಶಿ ತಾವು ನಿರ್ದೇಶಿಸಿದ ʻಗಂಗವ್ವ ಗಂಗಾಮಾಯಿ ʼಚಿತ್ರ ಸಿದ್ಧವಾಗಿ, ಕಾದಂಬರಿ ಆಧಾರಿತ ಶ್ರೇಷ್ಠ ಚಿತ್ರವೆಂಬ ಪುರಸ್ಕಾರ ಲಭಿಸಿ, ಚಿತ್ರ ವಿಮರ್ಶಕರಿಂದ ಮೆಚ್ಚಿಗೆ ಗಳಿಸಿ, ಚಿತ್ರ ಪ್ರದರ್ಶನಕ್ಕೆ ಅವಕಾಶವಾಗಲಿಲ್ಲ ಎಂಬ ʼಶೋಚನೀಯʼ ಸಂಗತಿ ಈ ಸಂದರ್ಭದಲ್ಲಿ ನೆನಪಾಗುತ್ತಿದೆ.

ಮೂರನೇ ʻಅವ್ವʼ-ಗಂಗವ್ವ

ವಸಂತ ಮೊಕಾಶಿ, ಕನ್ನಡ ಸಾಂಸ್ಕೃತಿಕ ಲೋಕ ಅತ್ಯಂತ ಗೌರವದಿಂದ ಕಣ್ಣೆತ್ತಿ ನೋಡುವ ಸಾಹಿತಿ ಶಂಕರ ಮೊಕಾಶಿ ಪುಣೇಕರ ಅವರ ಮಗ. ಶಂಕರ ಮೊಕಾಶಿ ಪುಣೇಕರ ಅವರ ʻಗಂಗವ್ವ ಗಂಗಾಮಾಯಿʼ ಕನ್ನಡ ಸಾಹಿತ್ಯ ಲೋಕದ ಅಪೂರ್ವ ಕೃತಿಗಳಲ್ಲೊಂದು. ನಿಸ್ಸಂದೇಹವಾಗಿ ಕನ್ನಡದ ಶ್ರೇಷ್ಠ ಪಠ್ಯಗಳಲ್ಲೊಂದು. ಕನ್ನಡ ಸಾಹಿತ್ಯ, ಸಿನಿಮಾಗಳ ಸ್ತ್ರೀ ಪಾತ್ರ ಗಳ ಬಗ್ಗೆ ಸಂವಾದ ನಡೆಸುವ ಪ್ರಯತ್ನವೇನಾದರೂ ನಡೆದರೆ, ಅಕ್ಷರ ಮತ್ತು ದೃಶ್ಯಗಳಲ್ಲಿ ಹೆಣ್ಣನ್ನು ಪರಿಭಾವಿಸುವ ನಿರ್ದಿಷ್ಟ ವಿನ್ಯಾಸಗಳನ್ನು ಕುರಿತು ಚಿಂತಿಸಿದರೆ , ಸಮಕಾಲೀನ ಒತ್ತಡಗಳನ್ನೆಲ್ಲ ಮೆಟ್ಟಿ ನಿಲ್ಲುವ ಸ್ತ್ರೀ ಪಾತ್ರಗಳು ಏನನ್ನು ಪ್ರತಿನಿಧಿಸುತ್ತವೆ? ಎಂಬುದನ್ನು ಗಮನಿಸಿದರೆ ನೆನಪಾಗುವ ಕೃತಿ –ʻಗಂಗವ್ವ ಗಂಗಾಮಾಯಿʼ.

ತಮ್ಮ ಚೊಚ್ಚಲ ಪ್ರಯತ್ನಕ್ಕೆ ತಮ್ಮ ತಂದೆಯ ಕೃತಿಯನ್ನೇ ಆಯ್ಕೆ ಮಾಡಿಕೊಂಡವರು ವಸಂತ ಮೊಕಾಶಿ. ಅವರು ತೋಂಭತ್ನಾಲ್ಕರಲ್ಲಿ ʻಗಂಗವ್ವ ಗಂಗಾಮಾಯಿʼ ಆಗುವ ಅಪೂರ್ವ ಕಥನಕ್ಕೆ ದೃಶ್ಯ ರೂಪ ಕೊಟ್ಟರು. ಸಾಹಿತ್ಯದ ದೃಷ್ಟಿಯಿಂದ ನೋಡಿದರೆ, ನಮಗೆ ಮೂರು ತಾಯಂದಿರುವ ಭಾವನೆ ಮೂಡುತ್ತದೆ. ಒಂದು; ಲಂಕೇಶರ ʼಅವ್ವʼ, ಇನ್ನೊಂದು ದೇವನೂರರ ʻಸಾಕವ್ವʼ, ಮೂರನೇಯ ಮತ್ತೊಂದು ʼಗಂಗವ್ವʼ.

ಗಟ್ಟಿ ತಾಯ್ತನದ ಚಿತ್ರಣ

ಇಂಥಹ ಗಂಗವ್ವನ ಕಥನವನ್ನು ʼಗಂಗವ್ವ ಗಂಗಾಮಾಯಿʼಯಾಗಿಸುವ ಪ್ರಯತ್ನ ಮಾಡಿದವರು ವಸಂತ ಮೊಕಾಶಿ. ತಾಯ್ತನವನ್ನು ಕುರಿತ ಎಲ್ಲ ಬಗೆಯ ರೊಮ್ಯಾಂಟಿಕ್‌ ನಿರೂಪಣೆಗಳನ್ನು ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸುತ್ತಲೇ, ತಾಯ್ತನ ಮತ್ತು ಹೆಣ್ಣಿನ ಶಕ್ತಿಯನ್ನು ದೃಶ್ಯಗಳ ಮೂಲಕ ಕಟ್ಟಿಕೊಡುವ ಶಕ್ತ ಪ್ರಯತ್ನ ಮಾಡಿದವರು ವಸಂತ ಮೊಕಾಶಿ.

ಸಾಮಾನ್ಯವಾಗಿ ಯಾವುದೇ ಸಾಹಿತ್ಯ ಕೃತಿಯನ್ನು ದೃಶ್ಯೀಕರಿಸಿದಾಗ, ಕೃತಿಯ ನಿಜದನಿಯನ್ನು ಧ್ವನಿಸುವುದು ಒಬ್ಬ ಸೃಜನಶೀಲ ದೃಶ್ಯಮಾಂತ್ರಿಕನಿಗೆ ಮಾತ್ರ ಸಾಧ್ಯ. ಆ ದೃಷ್ಟಿಯಲ್ಲಿ ʼಗಂಗವ್ವ ಗಂಗಾಮಾಯಿʼ ಕೃತಿಯ ಧ್ವನಿಯನ್ನು ಹಿಡಿದಿಡಲು ಸಾಧ್ಯವಾಗದಿದ್ದರೂ, ಕೆಲವು metaphor ಗಳ ಮೂಲಕ ಅದನ್ನು ಶಕ್ತವಾಗಿ ಕಟ್ಟಿದ ಈ ಪ್ರಯತ್ನ ಇಂದಿಗೂ, ತೊಂಭತ್ತು ವರ್ಷದ ಕನ್ನಡ ಸಿನಿಮಾ ಇತಿಹಾಸದಲ್ಲಿ ಒಂದು ಮೈಲಿಗಲ್ಲು ಎಂದರೆ ತಪ್ಪಾಗಲಾರದು. ಇದು ಇನ್ನೊಂದು ಅರ್ಥದಲ್ಲಿMaking of a Mother ಎನ್ನಬಹುದು. ಅದೂ ಕೂಡ, ಗಂಗವ್ವನ ಪಾತ್ರವನ್ನು ಸ್ಥಾಪಿತ ನಿಲುವೊಂದರ ಅಗೋಚರ ನೆಲೆಯನ್ನು ಮುರಿಯುವ ಯತ್ನ ಎಂದು ಮೂವತ್ತು ವರ್ಷದ ನಂತರವೂ ಅನ್ನಿಸುತ್ತದೆ.

ಮರಾಠಿ ಚಿತ್ರರಂಗದ ಮೇರು ಪ್ರತಿಭೆಯಂಥ ನಟಿ ಸುಲಭಾ ದೇಶಪಾಂಡೆ ಗಂಗವ್ವನ ಪಾತ್ರಕ್ಕೆ ಜೀವ ತುಂಬಿದ ರೀತಿ, ಅವರಿಗೆ ಹೆಗಲು ನೀಡಿದ ಅನಂತ್‌ ನಾಗ್‌ ತಮ್ಮ ವೃತ್ತಿ ಜೀವನದ ಅತ್ಯುತ್ತಮ ಪಾತ್ರವೆನ್ನಿಸುವಂತೆ ಅಭಿನಯಿಸಿದ್ದು ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ.

ವಸಂತ ಮೊಕಾಶಿಗೆ ಗಟ್ಟಿಯಾದ ದೃಶ್ಯ ಸಂವೇದನೆ ಇತ್ತು. ಅವರು ಸರಳ ರೇಖೆಯಂಥ ಕಥನವನ್ನು ಸೃಷ್ಟಿಸುತ್ತಲೇ ಇರಲಿಲ್ಲ. ಅವರು ಅಮೂರ್ತ ವಾಸ್ತವಗಳಿಗೆ ದೃಶ್ಯ ಕಟ್ಟುವಿಕೆಯ ಮೂಲಕ ಜೀವ ತುಂಬುತ್ತಿದ್ದರು ಎಂದು ವಸಂತ ಮೊಕಾಶಿ ಅವರ ದೃಶ್ಯ ನೋಟವನ್ನು ಕುರಿತು ಖ್ಯಾತ ಚಿಂತಕ ಮನು ಚಕ್ರವರ್ತಿ ಅವರು ಹೇಳಿರುವ ಮಾತುಗಳು ಅಕ್ಷರಷಃ ಸತ್ಯ.

Accident ಚಿತ್ರಕಥೆಯ ಕರ್ತೃ

ವಸಂತ ಮೊಕಾಶಿ ʻಗಂಗವ್ವ ಗಂಗಾಮಾಯಿʼ ಅಂಥ ಚಿತ್ರ ನೀಡಿದರೂ, ಅವರು ಕನ್ನಡ ಚಿತ್ರರಂಗಕ್ಕೆ ಹೆಚ್ಚು ಪರಿಚಯವಾಗಿದ್ದು, ಶಂಕರ್‌ ನಾಗ್‌ ನಿರ್ದೇಶನದ Accident ಚಿತ್ರದ ಮೂಲಕ. ಒಂದು ರೀತಿಯಲ್ಲಿ ಶಂಕರ್‌ ನಾಗ್‌ Accident ಚಿತ್ರ ನಿರ್ಮಿಸಲು-ನಿರ್ದೇಶಿಸಲು ವಸಂತ ಮೋಕಾಶಿ ಅವರ ಚಿತ್ರಕಥೆಯೇ ಕಾರಣ ಎಂಬುದು ಸಾರ್ವತ್ರಿಕ ಸತ್ಯ. ಇದಕ್ಕೆ ಕಾರಣ, ಈ ಚಿತ್ರ ಸತ್ಯ ಘಟನೆಯೊಂದನ್ನು ಆಧರಿಸಿದ್ದು. ಎಂಭತ್ತರ ದಶಕದಲ್ಲಿ ಪ್ರಭಾವಿಗಳು ಚಲಾಯಿಸುತ್ತಿದ್ದ ಐಷಾರಾಮಿ ಕಾರಿಗೆ ಸಿಕ್ಕು ಮುಂಬೈ ಮಹಾನಗರದಲ್ಲಿ ನಾಲ್ಕು ಮಂದಿ ಕೂಲಿ ಕಾರ್ಮಿಕರು ಸಾವನ್ನಪ್ಪಿದ್ದು.

ವಸಂತ ಮೊಕಾಶಿ ಬರೆದ ಈ ಅಪಘಾತ ಕಥೆಯು ನಗರದ ಪ್ರಭಾವಿ ವ್ಯಕ್ತಿಗಳ ಇಬ್ಬರು ಮಕ್ಕಳ ಕಥೆಯಾಗಿದೆ - ಪ್ರಬಲ ರಾಜಕಾರಣಿಯ ಮಗ ಮತ್ತು ಇನ್ನೊಬ್ಬ ಅವನ ಸ್ನೇಹಿತ, ಅವರ ತಾಯಿ ಜಾಹೀರಾತು ನಡೆಸುತ್ತಾರೆ. ಸಂಸ್ಥೆ. ಒಂದು ರಾತ್ರಿ ಅಮಲೇರಿದ ರಾತ್ರಿ ಅವರು ಪಾದಚಾರಿ ಮಾರ್ಗದ ನಿವಾಸಿಗಳ ಮೇಲೆ ತಮ್ಮ ಅದ್ದೂರಿ ಕಾರನ್ನು ಓಡಿಸುತ್ತಾರೆ, ಅವರಲ್ಲಿ ಒಬ್ಬರನ್ನು ಹೊರತುಪಡಿಸಿ ಉಳಿದೆಲ್ಲರನ್ನು ಕೊಂದು, ನಂತರ ದೃಶ್ಯದಿಂದ ಪಲಾಯನ ಮಾಡುತ್ತಾರೆ. ಮುಂದಿನದು ಎರಡು ಪೋಷಕ ವ್ಯಕ್ತಿಗಳಿಂದ ವಿಸ್ತಾರವಾದ ಮುಚ್ಚಿಡುವಿಕೆಯಾಗಿದೆ.

ಎಂಭತ್ನಾಲ್ಕರಲ್ಲಿ ಬಿಡುಗಡೆಯಾದ ಪ್ರಬಲ ರಾಜಕಾರಣಿ ಧರ್ಮಾಧಿಕಾರಿ (ಅನಂತ್‌ ನಾಗ್)‌ ಅವರ ಮಗ ದೀಪಕ್‌ (ಅಶೋಕ್‌ ಮಂದಣ್ಣ) ಮಾದಕ ದ್ರವ್ಯ ಸೇವಿಸಿ ಉನ್ಮತ್ತನಾಗಿ ಪಾದಚಾರಿ ಮಾರ್ಗದಲ್ಲಿ ಮಲಗಿದ್ದ, ಒಂದು ಇಡೀ ಕೂಲಿ ಕಾರ್ಮಿಕರ ಕುಟುಂಬದವರ ಮೇಲೆ ಕಾರು ಹತ್ತಿಸುತ್ತಾನೆ. ಚಾಲಕನನ್ನು ಗುರುತಿಸಿದ ಕುಟುಂಬದ ರಾಮಣ್ಣ (ಟಿ ಎಸ್.‌ ನಾಗಾಭರಣ) ಹೊರತು ಪಡಿಸಿ, ಎಲ್ಲರೂ, ಸತ್ತು ಹೋಗುತ್ತಾರೆ. ಆ ಹೊತ್ತಿನಲ್ಲಿ ದೀಪಕ್‌ ಜೊತೆಯಲ್ಲಿ ಅವನ ಸ್ನೇಹಿತ ರಾಹುಲ್‌ (ಶ್ರೀನಿವಾಸ ಪ್ರಭು), ಇರುತ್ತಾನೆ. ಈತ ಪ್ರಖ್ಯಾತ ಜಾಹಿರಾತು ಕಂಪನಿಯ ಮುಖ್ಯಸ್ಥೆ ಮಾಯಾರಾಣಿ (ಅರುಂಧತಿ ನಾಗ್‌) ಅವರ ಮಗ. ಈ ಪ್ರಕರಣವನ್ನು ಪತ್ರಕರ್ತ ರವಿ ( ಶಂಕರ್‌ ನಾಗ್)‌ ವರದಿ ಮಾಡಿ, ಈ ಪ್ರಕರಣವನ್ನು ಬಯಲಿಗೆಳೆಯುವ ಪ್ರಯತ್ನ ಮಾಡುತ್ತಾನೆ. ಅವನಿಗೆ ಬೆಂಬಲವಾಗಿ ಪೊಲೀಸ್‌ ಅಧಿಕಾರಿ ರಾವ್‌ (ರಮೇಶ್‌ ಭಟ್)‌ ನಿಲ್ಲುತ್ತಾರೆ. ಆದರೆ ಅವರಿಬ್ಬರೂ ಅಸಹಾಯಕರಾದಾಗ, ಪತ್ರಕರ್ತ ರವಿ ಅಂತಿಮವಾಗಿ ಸಹಜ ನ್ಯಾಯಕ್ಕಾಗಿ ಪಿಸ್ತೂಲು ಕೈಗೆತ್ತಿಕೊಳ್ಳುತ್ತಾನೆ. ಕೊನೆಗೆ ನ್ಯಾಯ ತನ್ನ ರೀತಿಯಲ್ಲಿಯೇ ಗೆಲ್ಲುತ್ತದೆ. ಈ ಚಿತ್ರ ಬಿಡುಗಡೆಯಾದಾಗ ಪ್ರಧಾನಿ ಇಂದಿರಾ ಗಾಂಧಿ ಅವರು ತಮ್ಮ ರಕ್ಷಣಾ ಸಿಬ್ಬಂದಿಯ ಗುಂಡಿಗೆ ಬಲಿಯಾದ ಕಾರಣ, ಚಿತ್ರದ ಅಂತ್ಯವನ್ನು ಬದಲಾಯಿಸಲಾಯಿತು ಎಂದು ವಸಂತ ಮೊಕಾಶಿ ಹೇಳಿದ ನೆನಪು.

ಅವಧೇಶ್ವರಿಯ ಭಾಗ ʻನಿಯೋಗʼ

ವಸಂತ ಮೊಕಾಶಿ ಅವರ ಗೆಳೆಯರು ಹೇಳುವಂತೆ, ಅವರ ಪ್ರತಿಭೆಗೆ ಸಿಗಬೇಕಾದ ಗೌರವ ಮತ್ತು ಅವಕಾಶಗಳು ವಸಂತ ಮೊಕಾಶಿ ಅವರಿಗೆ ಸಿಕ್ಕಲೇ ಇಲ್ಲ. ಹಾಗಾಗಿ ಅವರು ಇತ್ತೀಚಿನ ದಿನಗಳಲ್ಲಿ ಖಿನ್ನತೆಗೆ ಒಳಗಾಗಿದ್ದರು. “ಸುಮಾರು ಹತ್ತು ವರ್ಷದ ಹಿಂದೆ ಅವರು ʻನಿಯೋಗʼ ಎಂಬ ಚಿತ್ರವನ್ನು ನಿರ್ದೇಶಿಸಲು ಎಲ್ಲ ಪ್ರಯತ್ನಗಳನ್ನು ನಡೆಸಿದ್ದರು. ಅವರ ತಂದೆ ಶಂಕರ ಮೊಕಾಶಿ ಪುಣೇಕರ ಅವರ ʼ ಅವಧೇಶ್ವರಿʼ ಕಾದಂಬರಿಯ ಒಂದು ಭಾಗವನ್ನು ಆಧರಿಸಿದ ಕಥೆ ಅದು. ಅದರ ಬಗ್ಗೆ ತಮ್ಮ ಆತ್ಮೀಯರೊಂದಿಗೆ ಚರ್ಚಿಸುತ್ತಿದ್ದರು. ಆದರೆ ಆ ಚಿತ್ರ ನಿರ್ಮಾಣಕ್ಕೆ ತಗಲುವ ವೆಚ್ಚವನ್ನು ಭರಿಸಲು ಯಾವ ನಿರ್ಮಾಪಕರೂ ಮುಂದೆ ಬಾರದ ಕಾರಣ ಅವರು ಆ ಪ್ರಯತ್ನವನ್ನು ಕೈಬಿಟ್ಟರು” ಎಂದು ಚಲನಚಿತ್ರ ನಿರ್ದೇಶಕ ಮತ್ತು ಬರಹಗಾರ ಪ್ರಕಾಶ್‌ ಬಾಬು ಹೇಳಿದರು.

“ಇದೇ ರೀತಿ ವಿಭಿನ್ನವಾದ ಪತ್ತೆದಾರಿ ಕಥೆಯೊಂದನ್ನು ಸಿದ್ಧಪಡಿಸಿಕೊಂಡಿದ್ದರು. ಅದನ್ನು ಚಿತ್ರ ಮಾಡಲು ಪ್ರಯತ್ನಿಸಿದರು. ಆದರೆ ಅದೂ ಕೂಡ ಸಾಧ್ಯವಾಗಲಿಲ್ಲ. ಈ ನಡುವೆ ಒಂದು ಕಿರುಚಿತ್ರವನ್ನು ನಿರ್ಮಿಸಿದ್ದರು. ಇಡೀ ಚಿತ್ರವನ್ನು ಬೆಳದಿಂಗಳಲ್ಲಿ ಚಿತ್ರೀಕರಿಸಿದ್ದರು. ಅದರಲ್ಲಿ ಕೊರಿಯೋಗ್ರಫಿಯ ಹೊಸ ಪ್ರಯತ್ನಗಳನ್ನು ಕೂಡ ಮಾಡಿದ್ದರು” ಎಂದು ಪ್ರಕಾಶ್‌ ಬಾಬು ನೆನಪಿಸಿಕೊಳ್ಳುತ್ತಾರೆ.

ಪ್ರತಿಭೆಗೆ ಸರಿಯಾದ ಅವಕಾಶ ಸಿಗದ ಖಿನ್ನತೆ ಅವರನ್ನು ಕಾಡುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಅವರು ಸೊರಗಿಹೋಗಿದ್ದರು. ಹತಾಶೆಯ ಸ್ಥಿತಿಯಲ್ಲಿಯೇ ವಸಂತ ಮೊಕಾಶಿ ಅವರನ್ನು, ಅವರ ಚಿಂತನಾ ಕ್ರಮವನ್ನು ಪ್ರೀತಿಸುವ ಬಹುಮಂದಿಯನ್ನು ಅನಾಥರಾಗಿಸಿ ದೂರವಾಗಿದ್ದಾರೆ.

Tags:    

Similar News