ಕನ್ನಡ ಅಸ್ಮಿತೆಗೆ ಹೊಸ ಕೊಡುಗೆ ಸಹಸ್ರಮಾನದ ಕನ್ನಡ ಶಾಸನಗಳು
ಕನ್ನಡದ ಶಾಸನಗಳ ಮರು ಅಧ್ಯಯನ, ಕನ್ನಡ ಸಾಹಿತ್ಯದ ರಚನೆಯನ್ನು ಪುನರ್ ರಚಿಸಲು ಆಕರವಾಗಬಲ್ಲ ಗ್ರಂಥಗಳ ಸಂಪುಟವಿದು.;
ಕನ್ನಡದ ಶಾಸನಗಳ ಮರು ಅಧ್ಯಯನ, ಕನ್ನಡ ಸಾಹಿತ್ಯದ ರಚನೆಯನ್ನು ಪುನರ್ ರಚಿಸಲು ಆಕರವಾಗಬಲ್ಲ ಗ್ರಂಥಗಳ ಸಂಪುಟವಿದು. ಮಾತ್ರವಲ್ಲ. ಕನ್ನಡ, ಸಂಸ್ಕೃತ ಪ್ರಾಕೃತ ಪದಗಳು ಯಾವ ಯಾವ ಕಾಲಘಟ್ಟದಲ್ಲಿ ಬಳಕೆಯಾದವೆಂಬುದನ್ನು ಗುರುತಿಸಲು ಕೂಡ ಈ ಗ್ರಂಥಗಳು ಅತ್ಯುಪಯುಕ್ತ. ವಿಶ್ವವಿದ್ಯಾಲಯಗಳೋ, ಸಂಶೋಧನಾ ಸಂಸ್ಥೆಗಳೋ ಮಾಡಬೇಕಿರುವ ಈ ಕೆಲಸವನ್ನು ಖ್ಯಾತ ವಿದ್ವಾಂಸ, ಭಾಷಾ ಶಾಸ್ತ್ರಜ್ಞ, ಶಾಸನಗಳ ಮೇಲೆ ಅಧಿಕೃತವಾಗಿ ಮಾತನಾಡಬಲ್ಲ ಪಾಚಿಡಿತ್ಯ ಹೊಂದಿದ್ದ ಷ ಶೆಟ್ಟರ್ ಅವರು ಏಕಾಂಗಿಯಾಗಿ ದುಡಿದು ಕನ್ನಡಕ್ಕೆ ಅರ್ಪಿಸಿ ನಮ್ಮಿಂದ ಇಂದು ಕಣ್ಮರೆಯಾಗಿದ್ದಾರೆ. ಈ ಗ್ರಂಥ ಸಂಪುಟಗಳನ್ನು ’ಅಭಿನವ’ದ ನ. ರವಿಕುಮಾರ್ ಅವರು ಪ್ರಕಟಿಸಿದ್ದಾರೆ. ಈ ಸಂಪುಟಗಳಿಗೆ ಷ. ಶೆಟ್ಟರ್ ಅವರು ಬರೆದ ಮುನ್ನುಡಿ ಇಲ್ಲಿದೆ.
̲
ಹತ್ತೊಂಬತ್ತನೆಯ ಶತಮಾನದ ಕೊನೆಯ ದಶಕದಿಂದ ಈವರೆಗೂ ಪ್ರಕಟವಾಗಿರುವ ಹಳಗನ್ನಡ ಶಾಸನಗಳೆಲ್ಲವನ್ನೂ ಸಂಗ್ರಹಿಸಿ ಮತ್ತೊಂದು ವಿಧಾನದಲ್ಲಿ ಸಂಪಾದಿಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.
ಆರಂಭಕಾಲದ ಕದಂಬರು, ಕೊಲಾಳ ಹಾಗೂ ತಲಕಾಡಿನ ಗಂಗರು, ಬಾದಾಮಿ ಚಾಲುಕ್ಯರು ಮತ್ತು ಮಾನ್ಯಖೇಟದ ರಾಷ್ಟ್ರಕೂಟರಲ್ಲದೆ ಇವರ ಸಾಮಂತರೂ ಸಮಕಾಲೀನರೂ ಕ್ರಿ.ಶ. ಸು. ನಾಲ್ಕರಿಂದ ಹತ್ತನೆಯ ಶತಮಾನದವರೆಗೆ ಬರೆಸಿದ ಶಾಸನಗಳ ಲಿಪಿ ಮತ್ತು ಭಾಷೆಯನ್ನು ಈ ’ಹಳಗನ್ನಡ’ ಪದವು ಪ್ರತಿನಿಧಿಸುವುದು. ಒಂದು ಜನಾಂಗ ಭಾಷೆಯಾಗಿ ನಾಲ್ಕನೆಯ ಶತಮಾನಕ್ಕಿಂತ ಬಹುಕಾಲ ಮುಂಚೆಯೇ ಹಳಗನ್ನಡವು ಕೆಳದಖ್ಖಣದಲ್ಲಿ ಪ್ರಚಾರದಲ್ಲಿತ್ತು,
ಆದರೆ ಅದನ್ನು ಬರೆಯಲು ವಿಶಿಷ್ಟ ಲಿಪಿ ಇರಲಿಲ್ಲ. ಇದಕ್ಕಿಂತ ಪೂರ್ವದ ಇಲ್ಲಿಯ ಬರಹಗಳೆಲ್ಲವೂ ಮೌರ್ಯ ಅರಸ ಅಶೋಕನು ಕ್ರಿ.ಪೂ. ಮೂರನೆಯ ಶತಮಾನದಲ್ಲಿ ಪರಿಚಯಿಸಿದ ಬ್ರಾಹ್ಮೀಲಿಪಿ ಮತ್ತು ಪ್ರಾಕೃತ ಭಾಷೆಗಳಲ್ಲಿರುವವು.
ಕಿ.ಶ. ಮೂರನೆಯ ಶತಮಾನದಲ್ಲಿ ಸಂಸ್ಕೃತ ಭಾಷೆಯು ಕೆಳದಖ್ಖಣವನ್ನು ಪ್ರವೇಶಿಸಿ, ಪ್ರಾಕೃತದಂತೆ ಶಾಸನ ಭಾಷೆಯಾಗತೊಡಗಿತು. ಆದರೆ ಇದಕ್ಕೆ ತನ್ನದೇ ಆದ ಲಿಪಿ ಇರದ ಕಾರಣ ಈ ಭಾಷಾ ಬರಹಗಳೆಲ್ಲವೂ ಆರಂಭದಲ್ಲಿ ಬ್ರಾಹ್ಮೀಲಿಪಿಯನ್ನು, ಆನಂತರ ಕಾಲದಲ್ಲಿ ದಕ್ಷಿಣದ ಲಿಪಿಗಳನ್ನು, ಅವಲಂಬಿಸಬೇಕಾಯಿತು. ಕ್ರಿ.ಶ. ಎಂಟನೆಯ ಶತಮಾನದವರೆಗೂ ಇಲ್ಲಿ ಬರೆಸಿದ ಸಂಸ್ಕೃತ ಶಾಸನಗಳೆಲ್ಲವೂ ಹಳಗನ್ನಡ ಲಿಪಿಯಲ್ಲಿವೆ. ಈ ಶತಮಾನದಲ್ಲಿ ನಾಗರೀ ಲಿಪಿಯು ಪ್ರವೇಶಮಾಡಿ ಸಂಸ್ಕೃತ ಭಾಷಾ ಬರಹಗಳನ್ನು ಹಂಚಿಕೊಳ್ಳಲಾರಂಭಿಸಿತು. ಆದರೂ ಇಲ್ಲಿಯ ಬಹುತೇಕ ಸಂಸ್ಕೃತ ಶಾಸನಗಳನ್ನು ಶತಮಾನಗಳುದ್ದಕ್ಕೂ ಬರೆಸಿದ್ದು ಕನ್ನಡ ಲಿಪಿಗಳಲ್ಲಿಯೇ.
ಮೊದಲ ಸಹಸ್ರಮಾನದಲ್ಲಿ ಬರೆಸಿದ ಹಳಗನ್ನಡ ಶಾಸನಗಳ ಸಂಖ್ಯಾ ಪ್ರಮಾಣವನ್ನಿನ್ನೂ ಇತ್ಯರ್ಥಗೊಳಿಸಬೇಕಾಗಿದೆ. ಆದರೆ ಇವುಗಳಲ್ಲಿ ಹೆಚ್ಚಿನವು ಕನ್ನಡಲಿಪಿ ಮತ್ತು ಭಾಷೆಯಲ್ಲಿದ್ದವೆಂಬುದರ ಬಗ್ಗೆ ಸಂಶಯವಿಲ್ಲ. ಬ್ರಾಹ್ಮೀಲಿಪಿ ಮತ್ತು ಪ್ರಾಕೃತ ನುಡಿಗಟ್ಟುಗಳು ಮಾತ್ರ ಶಾಸನ ಮಾಧ್ಯಮಗಳಾಗಿದ್ದ ಕ್ರಿ.ಪೂ. ಮೂರನೆಯ ಶತಮಾನದಿಂದ ಕ್ರಿ.ಶ. ಮೂರನೆಯ ಶತಮಾನದ ಕಾಲಾವಧಿಯಲ್ಲಿ ಇಲ್ಲಿ ಬರೆಸಿದ ಸುಮಾರು ೪೦೦ ಶಿಲಾಶಾಸನಗಳು ಈಗ ಉಳಿದುಕೊಂಡಿವೆ. ನಾಲ್ಕನೆಯ ಶತಮಾನದಿಂದ ಹತ್ತನೆಯ ಶತಮಾನದ ಕೊನೆಯವರೆಗೆ ಸಂಸ್ಕೃತ ಭಾಷೆ ಮತ್ತು ಹಳಗನ್ನಡ ಲಿಪಿಯಲ್ಲಿ (ಇಲ್ಲವೇ ಕನ್ನಡ ಮತ್ತು ಸಂಸ್ಕೃತ ದ್ವಿಭಾಷೆಗಳಲ್ಲಿ) ಬರೆಸಿದ ತಾಮ್ರಪಟ ಮತ್ತು ಶಿಲಾ ಶಾಸನಗಳಲ್ಲಿ ಸುಮಾರು ೫೦೦ ಉಳಿದುಕೊಂಡಿವೆ. ಸರಿಸುಮಾರು ಇದೇ ಕಾಲಾವಧಿಯಲ್ಲಿ ಹಳಗನ್ನಡ ಲಿಪಿ ಮತ್ತು ಭಾಷೆಯಲ್ಲಿ ಬರೆಸಿದ ೨೦೦೦ ಹೆಚ್ಚು
ಸಂಖ್ಯೆಯ ಶಿಲಾಶಾಸನಗಳೂ ತಾಮ್ರಪಟಗಳೂ ಈವರೆಗೂ ಲಭ್ಯವಾಗಿವೆ. ೨೦೦೦ ಹಳಗನ್ನಡ ಶಾಸನಗಳನ್ನು ಸಂಪಾದಿಸಿ, ಮತ್ತೊಮ್ಮೆ ಪ್ರಕಟಿಸುವುದು, ಈ ಅಧ್ಯಯನದ ಉದ್ದೇಶವಾಗಿದೆ. ಈ ಶಾಸನಗಳನ್ನು ಹಿಂದೊಮ್ಮೆ ಪ್ರಕಟಿಸಿದ್ದ ಮಾಧ್ಯಮಗಳು ಈಗ ಲುಪ್ತವಾಗಿರುವುದರಿಂದ, ಈ ಪುನಃಪ್ರಕಟಣೆಯ ಅವಶ್ಯಕತೆ ಉಂಟಾಗಿದೆ.
ಇನ್ನೊಂದು ಕಾರಣವೆಂದರೆ ಮೊದಲ ಸಹಸ್ರಮಾನದ ಭಾಷಾ ಇತಿಹಾಸದಲ್ಲಿ ಇವು ಗಳಿಸಿಕೊಂಡಿರುವ ಮಹತ್ವ. ಹಳಗನ್ನಡ ಲಿಪಿ ಮತ್ತು ಭಾಷೆಯಲ್ಲಿ ಬರೆಸಿದ ಶಾಸನಗಳ ಸಂಖ್ಯೆಯನ್ನು ಸರಿಗಟ್ಟುವ ಮತ್ತೊಂದು ದೇಸೀ ಭಾಷಾನಿದರ್ಶನವು ನಾಡಿನ ಯಾವ ಭಾಗದಲ್ಲಿಯೂ ಈವರೆಗೆ ಕಂಡುಬಂದಿಲ್ಲ.
ಶಾಸನ ಚರಿತ್ರೆಯಲ್ಲಿ ತಮಿಳರು ಪ್ರಥಮ ಸ್ಥಾನದಲ್ಲಿರುವುದು ಈಗಾಗಲೇ ಗೊತ್ತಿರುವ ವಿಷಯ, ಆದರೆ ಇತ್ತೀಚಿಗೆ ತಿಳಿದುಬಂದಿರುವಂತೆ, ಅವರು ಈ ಎತ್ತರಕ್ಕೇರಿದ್ದು ಮೊದಲ ಸಹಸ್ರಮಾನದಲ್ಲಲ್ಲ, ಎರಡನೆಯ ಸಹಸ್ರಮಾನದಲ್ಲಿ. ಇದಕ್ಕೆ ಕಾರಣರಾದವರು ತಂಜಾವೂರು ಮತ್ತು ಮಧುರೈ ರಾಜವಂಶಸ್ಥರು, ಇವರ ಸಾಮಂತರು ಹಾಗೂ ಸಮಕಾಲೀನರು.
ಇದು ಏನೇ ಇರಲಿ, ಹಳಗನ್ನಡ ಲಿಪಿ ಮತ್ತು ಭಾಷೆಯಲ್ಲಿ ಬರೆಸಿದ ಶಾಸನ ಪ್ರಮಾಣವನ್ನು ನಾವಿಲ್ಲಿ ನಿರ್ಧರಿಸಿರುವಂತೆ, ತಮಿಳುಲಿಪಿ ಮತ್ತು ಭಾಷೆಯಲ್ಲಿ ಬರೆಸಿದ ಶಾಸನ ಪ್ರಮಾಣವು ನಿರ್ಧಾರವಾಗುವವರೆಗೂ ಈ ಬಗ್ಗೆ ನಿರ್ದುಷ್ಟವಾಗಿ ಏನನ್ನೂ ಹೇಳಲಾಗದು. ಕಳೆದ ಶತಮಾನದಲ್ಲಿ ಬೆಳಕು ಕಂಡ ಶಾಸನಗಳು ಅವನ್ನು ಪ್ರಕಟ ಮಾಡಿದ ಸಂಸ್ಥೆಗಳು ಮತ್ತು ಸಂಪಾದಕರು ರೂಪಿಸಿಕೊಂಡಿದ್ದ ನಿಯಮಾವಳಿಗಳು ಭಿನ್ನಭಿನ್ನವಾಗಿದ್ದುದರಿಂದ ಅವುಗಳ ಸಂಪಾದನಾ ವಿಧಾನಗಳಲ್ಲಿ ಸಮಾನತೆಯ ಕೊರತೆ ಇರುವುದನ್ನು ಕಾಣುವೆವು.
ಉದಾಹರಣೆಗೆ ’ದಿ ಇಂಡಿಯನ್ ಆಂಟಿಕ್ವೆರಿ’, ’ಎಪಿಗ್ರಾಫಿಯಾ ಇಂಡಿಕಾ’, ’ಸೌತ್ ಇಂಡಿಯನ್ ಇನ್ಸ್‌ಕ್ರಿಪ್ಷನ್ಸ್’, ’ಎಪಿಗ್ರಾಫಿಯಾ ಕರ್ನಾಟಿಕ’ ಮುಂತಾದ ಶಾಸನ ಪ್ರಕಟನೆಯ ವಿಧಾನಗಳನ್ನು ಅವಲೋಕಿಸಿದರೆ, ಅವುಗಳಲ್ಲಿರುವ ವೈವಿಧ್ಯತೆಗಳು ಎದ್ದುಕಾಣುವವು. ಇದನ್ನು ಸರಿಪಡಿಸಿ, ಒಂದೇ ಬಗೆಯಲ್ಲಿ ಶಾಸನಗಳನ್ನು ಪ್ರಕಟಿಸಲು, ನಾವಿಲ್ಲಿ ಈ ಕ್ರಮಗಳನ್ನು ಅನುಸರಿಸಿರುವೆವು:
೧. ಮೂಲ ಪ್ರಕಟನೆಯಲ್ಲಿ ಕೊಟ್ಟಿರುವ ಶಾಸನ ಪಠ್ಯವನ್ನು ಯಥಾವತ್ತಾಗಿ ಮರುಕಳಿಸಿದ್ದು, ಇದರಲ್ಲಿ ಯಾವ ಬಗೆಯ ಸಂಪಾದಕೀಯ ಬದಲಾವಣೆಗಳನ್ನು ಮಾಡಲಾಗಿಲ್ಲ. ಇಲ್ಲಿ ಮಾಡಿರುವ ಒಂದೇ ಒಂದು ಬದಲಾವಣೆಯೆಂದರೆ, ಹಿಂದಿನ ಪ್ರಕಟಣೆಯಲ್ಲಿ ಹಳಗನ್ನಡ ಪಠ್ಯವನ್ನು ಕನ್ನಡ ಲಿಪಿಯಲ್ಲಿ ಕೊಡದೆ ಇಂಗ್ಲಿಷ್ ಲಿಪಿಯಲ್ಲಿ (ಟ್ರಾನ್ಸ್‌ಕ್ರಿಪ್ಟ್) ಕೊಟ್ಟಿದ್ದರೆ, ಅದನ್ನು ಮೂಲಭಾಷೆಗೆ ಮರುಕಳಿಸಿರುವುದು.
೨. ಶಾಸನಗಳನ್ನು ಕಾಲಾನುಕ್ರಮದಲ್ಲಿ ಹೊಂದಿಸಿ, ಅವಕ್ಕೆ ಹೊಸ ಸಂಖ್ಯೆಯನ್ನು ಇಲ್ಲಿ ಕೊಡಲಾಗಿದೆ. ಆದರೆ ಇದರೊಡನೆ ಅವು ಮೊದಲು ಪ್ರಕಟವಾದ ಗ್ರಂಥಗಳ ಹೆಸರನ್ನೂ ಮತ್ತು ಸಂಖ್ಯೆಯನ್ನೂ ಸೂಚಿಸಲಾಗಿದೆ.
೩. ಶಾಸನಕ್ಕೆ ಸಂಬಂಧಿಸಿದ ಮುಖ್ಯ ವಿವರಗಳನ್ನು ಮೊದಲು ಶಿರೋಭಾಗದಲ್ಲಿ ಒದಗಿಸಿ ನಂತರ ಪಠ್ಯವನ್ನು ಪರಿಚಯಿಸಲಾಗಿದೆ. ಸ್ಥೂಲವಾಗಿ ’ಸೌತ್ ಇಂಡಿಯನ್ ಇನ್ಸ್‌ಕ್ರಿಪ್ಷನ್ಸ್’ ಸಂಪುಟಗಳಲ್ಲಿ ಅನುಸರಿಸಿದ ವಿಧಾನವನ್ನು ಇದು ಹೋಲುವುದು. ಇದರೊಡನೆ ಅಲ್ಲಲ್ಲಿ ಕೆಲವು ಹೆಚ್ಚಿನ ವಿವರಗಳನ್ನು ಸೇರಿಸಿ ಮಾಹಿತಿಯನ್ನು ವಿಸ್ತರಿಸಿರುವುದುಂಟು.
ಶಿರೋಭಾಗದಲ್ಲಿ ಒದಗಿರುವ ಮುಖ್ಯ ಮಾಹಿತಿಗಳೆಂದರೆ - ಶಾಸನವನ್ನು ಬರೆಸಿದ ಮೂಲ ಉದ್ದೇಶ; ಬರೆದಿರುವುದು ತಾಮ್ರಪಟದ ಮೇಲೋ ಶಿಲೆಯ ಮೇಲೋ ಎಂಬ ಮಾಹಿತಿ; ಅದು ಈಗಿರುವ ಸ್ಥಳ, ಗ್ರಾಮ, ತಾಲ್ಲೂಕು ಮತ್ತು ಜಿಲ್ಲೆಯ ಹೆಸರುಗಳು; ಈ ಮೊದಲು ಅದನ್ನು ಪ್ರಕಟಿಸಿದ ಗ್ರಂಥದ ಹೆಸರು; ಆಳುವ ಅರಸ ಮತ್ತು ಅವನ ವಂಶದ ಹೆಸರು; ಮತ್ತು, ಅದನ್ನು ಬರೆಸಿದ ದಿನಾಂಕ.
೪. ಶಾಸನ ಪಠ್ಯವನ್ನು ಮೊದಲು ಪ್ರಕಟಿಸಿದಂತೆ ಇಲ್ಲಿಯೂ ಆಧುನಿಕ ಕನ್ನಡ ಲಿಪಿಯಲ್ಲಿ ಪ್ರಕಟಿಸಲಾಗಿದೆ, ಆದರೆ ಕೆಲವು ಶಾಸನಗಳಿಗೆ ಮಾತ್ರ ಅಲ್ಲಿ ಒದಗಿಸಲಾಗಿದ್ದ ಪ್ರತಿಕೃತಿಯನ್ನಾಗಲೀ ಛಾಯಾ ಚಿತ್ರವನ್ನಾಗಲೀ ಇಲ್ಲಿ ಒದಗಿಸಿಲ್ಲ. ಶಾಸನವು ದ್ವಿಭಾಷಾ ಅಥವಾ ತ್ರಿಭಾಷಾ ಬರಹಗಳಲ್ಲಿದ್ದರೆ, ಹಳಗನ್ನಡದ ಭಾಗವನ್ನು ಮಾತ್ರ ಆಯ್ದುಕೊಡಲಾಗಿದೆ, ಇನ್ನುಳಿದ ಭಾಷೆಗಳಲ್ಲಿರುವ ಪಠ್ಯಭಾಗವನ್ನಲ್ಲ.
೫. ಹಳಗನ್ನಡ ಪಠ್ಯದಲ್ಲಿರುವ ಪದಗಳನ್ನೂ ವಾಕ್ಯಗಳನ್ನೂ ಗುರುತಿಸಿ, ವಿಭಜಿಸಿ, ಓದನ್ನು ಸರಳಗೊಳಿಸಲಾಗಿದೆ. ಉಸಿರುತಾಣಗಳನ್ನಾಗಲೀ ವಿರಾಮ ಚಿಹ್ನೆಗಳನ್ನಾಗಲೀ ಸೂಚಿಸದೆ ಬರೆಯುತ್ತಿದ್ದ ಹಳಗನ್ನಡ ಪಠ್ಯದಲ್ಲಿ ಇವನ್ನು ಗುರುತಿಸಿ, ಪದ ಮತ್ತು, ವಾಕ್ಯಗಳ ನಡುವೆ ಅಂತರವನ್ನು ತಂದುಕೊಂಡು, ಪಠ್ಯವನ್ನಿಲ್ಲಿ ಪ್ರಕಟಿಸಲಾಗಿದೆ.
೬. ಪಠ್ಯದಲ್ಲಿ ಬಳಕೆಯಾಗಿರುವ ಪ್ರತಿ ಹಳಗನ್ನಡ ಪದಕ್ಕೆ ಆಧುನಿಕ ಕನ್ನಡದಲ್ಲಿ ಅರ್ಥವನ್ನು ಒದಗಿಸಲಾಗಿದೆ. ಅದರ ವಿಶೇಷತೆಯನ್ನು ತಿಳಿಸಲು ಒಮ್ಮೊಮ್ಮೆ ಇನ್ನೂ ಹೆಚ್ಚಿನ ವಿವರಗಳನ್ನೂ ಕೊಡಲಾಗಿದೆ.
೭. ಹಳಗನ್ನಡ ಪಠ್ಯದ ಪೂರ್ಣ ಭಾಷಾಂತರವನ್ನು ಆಧುನಿಕ ಕನ್ನಡದಲ್ಲಿ ಕೊಡಲಾಗಿದೆ.
೮. ಪ್ರತಿಯೊಂದು ಸಂಪುಟದ ಕೊನೆಯಲ್ಲಿ ಆ ಸಂಪುಟದಲ್ಲಿ ಬಳಕೆಯಾಗಿರುವ ಪದಗಳ ಸಮಗ್ರ ಪರಿವಿಡಿಯನ್ನು ಕೊಟ್ಟು, ಅವುಗಳ ಬೇರು ಯಾವ ಯಾವ (ಪ್ರಾಕೃತ, ಸಂಸ್ಕೃತ, ಕನ್ನಡ ಮುಂ.) ಭಾಷೆಗಳಲ್ಲಿವೆ ಎಂಬುದನ್ನು ತಿಳಿಸಲು ಪ್ರಯತ್ನಿಸಲಾಗಿದೆ.
ಈ ವಿಧಾನವು ಕಳೆದ ಶತಮಾನದಲ್ಲಿ ಅನುಸರಿಸಿದ ವಿಧಾನಗಳಿಗಿಂತ ಹೆಚ್ಚು ಉಪಯುಕ್ತವಾಗಿರುವುದೆನಿಸಿದರೆ, ಇದರ ಶ್ರೇಯಸ್ಸು ನಮಗೆ ಮಾತ್ರ ದಕ್ಕುವುದಿಲ್ಲ, ಏಕೆಂದರೆ ಅಂದಿನ ಸಂಪಾದಕರು ಅನುಸರಿಸಿದ್ದ ವಿಧಾನಗಳಲ್ಲಿಯ ಉತ್ತಮ ಗುಣಗಳನ್ನು ಒಗ್ಗೂಡಿಕೊಂಡೇ ಈ ವಿಧಾನವನ್ನು ಸಿದ್ಧಪಡಿಸಿರುವುದು. ಬಹುಶಃ ನಮ್ಮಿಂದ ಸಂದ ಚಿಕ್ಕ ಕೊಡುಗೆ ಎಂದರೆ, ಅದನ್ನು ಸ್ವಲ್ಪಮಟ್ಟಿಗೆ ವಿಸ್ತರಿಸಿ ಹೆಚ್ಚಿನ ಮಾಹಿತಿಯನ್ನು ಸೇರಿಸಿರುವುದು. ಪದ ಮತ್ತು ವಾಕ್ಯ ವಿಭಜನಾ ಪ್ರಕ್ರಿಯೆಯು ಹೊಸದೆನಿಸಿದರೂ ಅದು ಈ ಪೂರ್ವದಲ್ಲಿ ಅನುಷ್ಠಾನದಲ್ಲಿರಲಿಲ್ಲವೆಂದು ಅರ್ಥವಲ್ಲ.
ಈವರೆಗೂ ಇಂಗ್ಲಿಷ್ ಟ್ರಾನ್ಸ್‌ಕ್ರಿಪ್ಟ್ ಭಾಗದಲ್ಲಿ ಮಾತ್ರ ಕಾಣಲಾಗುತ್ತಿದ್ದ ಪದಚ್ಛೇದ ಪ್ರಕ್ರಿಯೆಯನ್ನು ಈಗ ಹಳಗನ್ನಡ ಬರಹಕ್ಕೂ ವಿಸ್ತರಿಸಿ, ಹಳಗನ್ನಡ ಓದನ್ನು ಸ್ಪಲ್ಪ ಸುಲಭಗೊಳಿಸಲಾಗಿದೆ. ಈವರೆಗೂ ಕೆಲವು ಹಳಗನ್ನಡ ಕಾವ್ಯಗಳಿಗೆ ಸೀಮಿತವಾಗಿದ್ದ ಈ ಪ್ರಯೋಗವನ್ನು ಈಗ ಶಾಸನಕ್ಷೇತ್ರಕ್ಕೆ ವಿಸ್ತರಿಸಿದ್ದು ಮಾತ್ರ ಹೊಸತು. ಹಳಗನ್ನಡ ಕಾವ್ಯಾಸಕ್ತರು, ಶಾಸನ ಹಾಗೂ ನಿಘಂಟುತಜ್ಞರು ಮತ್ತು ಭಾಷಾ ಇತಿಹಾಸಕಾರರು ಇದನ್ನು ಸ್ವಾಗತಿಸುವರೆಂದು ಭಾವಿಸುವೆ. ಇದು ಏನೇ ಇರಲಿ, ಹಳಗನ್ನಡ ಪಠ್ಯದಲ್ಲಿ ಬೆಸೆದುಕೊಂಡಿರುವ ಪದಗಳನ್ನೂ ವಾಕ್ಯಗಳನ್ನೂ ಎಲ್ಲರಿಗೂ ತೃಪ್ತಿತರುವಂತೆ ಪ್ರತ್ಯೇಕಿಸುವುದು ಸುಲಭ ಸಾಧ್ಯವಲ್ಲ; ಕಾರಣ, ಇದರ ಬಗ್ಗೆ ಬರಬಹುದಾದ ಟೀಕೆಗಳನ್ನೂ ಸಲಹೆಗಳನ್ನೂ ಸ್ವಾಗತಿಸಲೇಬೇಕಾಗುವುದು. ಹಳಗನ್ನಡ ಪಠ್ಯದ ಭಾಷಾಂತರವೂ ಇದೇ ಬಗೆಯದಾಗಿದ್ದು, ಇದರ ಬಗ್ಗೆಯೂ ಮುಂದೆ ಬರಬಹುದಾದ ಟೀಕೆ ಟಿಪ್ಪಣಿಗಳನ್ನು ಎದುರಿಸಲೇಬೇಕಾಗುವ ಅರಿವು ನನಗಿದೆ.
ಕೆಲವು ಕಾವ್ಯಗಳಲ್ಲಿ ಮಾತ್ರ ಮಾಡಲಾಗಿದ್ದ ಪ್ರಯೋಗಗಳನ್ನು ಮಾದರಿಯಾಗಿಸಿಕೊಂಡು ಶಾಸನ ಪಠ್ಯಗಳನ್ನು ಆಧುನಿಕ ಕನ್ನಡಕ್ಕೆ ಭಾಷಾಂತರಿಸಲು ನಾನಿಲ್ಲಿ ಪ್ರಯತ್ನಿಸಿರುವೆ. ಇದು ಎಷ್ಟೇ ಅತೃಪ್ತಿಕರವಾಗಿದ್ದರೂ ಹಳಗನ್ನಡ ಪಠ್ಯವನ್ನು ನೇರವಾಗಿ ಓದಲಾರದವರಿಗೆ ಸ್ವಲ್ಪಮಟ್ಟಿಗೆ ಸಹಾಯಕವಾಗಬಹುದೆಂಬ ನೆಮ್ಮದಿಯನ್ನು ನನಗೆ ತಂದುಕೊಟ್ಟಿದೆ. ಯಾವ ಭಾಷಾಂತರವೂ ಮೂಲಭಾಷೆಯ ಬರವಣಿಗೆಗೆ ಸಮಾನವಾಗಲಾರದೆಂಬ ಮಾತು ಇಲ್ಲಿಯೂ ಪ್ರಸ್ತುತ. ಆದರೆ ಇಂತಹ ಪ್ರಯತ್ನವೊಂದನ್ನು ಶಾಸನಾಧ್ಯಯನದಲ್ಲಿ ಮೊದಲ ಬಾರಿಗೆ ಮಾಡಿದ ತೃಪ್ತಿಯು ನನ್ನದಾಗಿದೆ.
ಭಾಷಾಂತರದ ಗುಣಮಟ್ಟ ಎಷ್ಟೇ ಪ್ರಶ್ನಾರ್ಹವಾಗಿರಲಿ, ಭಾಷಾಗಡಿಗಳನ್ನು ದಾಟಲು, ಅಜ್ಞಾತದ ಕ್ಷೇತ್ರಗಳಲ್ಲಿ ಹರಡಲು, ಭಾಷಾಂತರಗಳು ಅನಿವಾರ್ಯವಲ್ಲವೇ. ಇದಕ್ಕಿಂತ ಹೆಚ್ಚಿನ ತೃಪ್ತಿ ತಂದಿರುವ ವಿಷಯವೆಂದರೆ ಪ್ರತಿ ಸಂಪುಟದಲ್ಲಿಒದಗಿಸಿರುವ ಸಮಗ್ರ ಪದಪರಿವಿಡಿ. ಸಂಪುಟವೊಂದರಲ್ಲಿ ಬಳಕೆಗೆ ಬಂದಿರುವ ಹಳಗನ್ನಡ ಪದಗಳೆಲ್ಲವನ್ನೂ ಅದರಲ್ಲಿ ಕಾಣಬಹುದಾಗಿದೆ. ಇದನ್ನು ಒಮ್ಮೆ ಅವಲೋಕಿಸಿದರೆ ಸಾಕು, ಹಳಗನ್ನಡದ ಶಬ್ದ ಸಂಪತ್ತೆಲ್ಲವೂ ತೆರೆದುಕೊಳ್ಳುವುದು; ಅಷ್ಟು ಮಾತ್ರವಲ್ಲ ಯಾವ ಪದವು ಯಾವ ಕಾಲ ಮತ್ತು ಸಂದರ್ಭಗಳಲ್ಲಿ ಮೊದಲು ಬಳಕೆಗೆ ಬಂತು, ಮುಂದೆ ಹೇಗೆ ಮುಂದುವರಿಯಿತು ಎಂಬುದನ್ನೂ ತಿಳಿಸಿಕೊಡುವುದು. ಉದಾಹರಣೆಗೆ, ಮೊದಲ ಸಂಪುಟದ ಪದ ಪರಿವಿಡಿಯಿಂದ, ಕ್ರಿ.ಶ. ಸು.೩೫೭(?)ರಿಂದ ಸು. ೭೮೦ರವರೆಗಿನ ಕಾಲಾವಧಿಯಲ್ಲಿ ಶಾಸನಕಾರರು ಪ್ರಯೋಗ ಮಾಡಿದ ಸಮಸ್ತ ಹಳಗನ್ನಡ ಪದಗಳನ್ನು ಪರಿಚಯಿಸಿಕೊಳ್ಳಬಹುದಾಗಿದೆ. ಇವುಗಳಲ್ಲಿ ಯಾವ ಪದಗಳು ಕಾಲಾನಂತರದ ಬರವಣಿಗೆಯಲ್ಲಿ ಮುಂದುವರಿದವು, ಯಾವುವು ಮುಂದುವರಿಯಲಿಲ್ಲ ಎಂಬುದನ್ನು ತಿಳಿದುಕೊಳ್ಳಲು ಮುಂದಿನ ಸಂಪುಟಗಳಲ್ಲಿರುವ ಪರಿವಿಡಿಗಳೊಡನೆ ಹೋಲಿಸಿ ನೋಡಿದರಾಯಿತು. ಪದ ಪರಿವಿಡಿಗಾಗಿಯೇ ಮೀಸಲಾಗಿರುವ ಕೊನೆಯ ಸಂಪುಟದಿಂದ ಮೊದಲ ಸಹಸ್ರಮಾನದಲ್ಲಿ ಬಳಸಿದ ಸಮಗ್ರ ಪದಗಳನ್ನಲ್ಲದೆ ಅವು ಬಳಕೆಯಾಗಿದ್ದ ವಿಧಾನ ಮತ್ತು ಸಂದರ್ಭಗಳನ್ನೂ ತಿಳಿದುಕೊಳ್ಳಬಹುದಾಗಿದೆ. ಕನ್ನಡ ಬರವಣಿಗೆಯ ಆರಂಭದಲ್ಲಿ ಹಂತ ಹಂತವಾಗಿ ಬಳಕೆಗೆ ಬಂದಿದ್ದ ಈ ಶಬ್ದಭಂಡಾರದ ಮಹತ್ವವನ್ನು ಪ್ರತ್ಯೇಕವಾಗಿ ವಿವರಿಸಬೇಕಿಲ್ಲವೆನಿಸುವುದು.ಕೆಲವು ನಿಷ್ಕ್ರಿಯಾ ಕಂದಕಗಳನ್ನು ಹೊರತುಪಡಿಸಿ, ದಶಕಗಳ ಕಾಲಶೋಧಿಸಿ ಸಂಗ್ರಹಿಸಿದ ಈ ಶಾಸನಗಳು ೨೦೨೦ ಸಂಖ್ಯೆಯನ್ನು ದಾಟಿದ ನಂತರ ಮುಂದುವರಿಸಿದ ಕಾರ್ಯದಿಂದ ಅತ್ಯಲ್ಪ ಫಲ ದೊರೆಯಲಾರಂಭಿಸಿದಾಗ, ಇದಕ್ಕೆ ಅರ್ಧವಿರಾಮ ಕೊಟ್ಟು ನಿಲ್ಲಿಸಬೇಕಾಯಿತು.
ಆಗ ಈ ಸಂಗ್ರಹವನ್ನು ನಾಡಿನಖ್ಯಾತ ಪಂಡಿತರೊಂದಿಗೆ ಹಂಚಿಕೊಳ್ಳಬೇಕೆಂಬ ಯೋಚನೆ ಬಂದುದರಿಂದ, ಇದರ ನಲವತ್ತು ನಕಲುಗಳನ್ನು ಸಿದ್ಧಪಡಿಸಿ, ಅವರಿಗೆ ರವಾನಿಸಿ, ಈ ಸಂಪುಟಗಳನ್ನುಆಧಾರವಾಗಿಸಿಕೊಂಡು ತಮ್ಮ ತಮ್ಮ ಕ್ಷೇತ್ರಕ್ಕೆ ಸಂಬಂಧಪಟ್ಟ ಲೇಖನಗಳನ್ನು ಬರೆಯಲು ಕೋರಿಕೊಂಡೆನು. ಇದರ ಫಲಿತಾಂಶವೆಂದರೆ ಒಂದು ಕಾರ್ಯಾಗಾರದಲ್ಲಿ ಮಂಡಿಸಿದ ಸುಮಾರು ೩೫ ಪ್ರಬಂಧಗಳ ಚರ್ಚೆ ಮತ್ತು ಅವುಗಳನ್ನೊಳಗೊಂಡ ಒಂದು ಬೃಹತ್ ಗ್ರಂಥ. ಬೆಂಗಳೂರಿನ ಅಭಿನವ ೨೦೧೭ರಲ್ಲಿ ಹೊರತಂದ ೪೮೧ ಪುಟಗಳ ಈ ಗ್ರಂಥದ ಶೀರ್ಷಿಕೆ ’ಹಳಗನ್ನಡ: ಭಾಷೆ, ಭಾಷಾಬಾಂಧವ್ಯ ಮತ್ತು ಭಾಷಾ ವಿಕಾಸ’, ಎಂದು. ಈ ಸಂಪುಟದ ಲೇಖಕ-ಸಂಪಾದಕನಾಗುವ ಸೌಭಾಗ್ಯ ನಮಗೆ ಲಭಿಸಿತ್ತು. ಇದೇ ಕಾಲಾವಧಿಯಲ್ಲಿ ಈ ಸಂಪುಟಗಳನ್ನೇ ಆಧಾರವಾಗಿಸಿಕೊಂಡು ಇನ್ನೊಂದು ಗ್ರಂಥವನ್ನು ನಾನು ಸಿದ್ಧಪಡಿಸಿದೆ. ’ಭಾಷಾ’ ಸಂಪುಟವು ಪ್ರಕಟಗೊಳ್ಳುವುದಕ್ಕಿಂತ ಮೂರು ವರ್ಷ ಮುಂಚೆಯೇ (೨೦೧೪) ಈ ಸಂಪುಟವು ’ಹಳಗನ್ನಡ: ಲಿಪಿ, ಲಿಪಿಕಾರ ಮತ್ತು ಲಿಪಿವ್ಯವಸಾಯ’ ಎಂಬ ಶೀರ್ಷಿಕೆಯಡಿ, ಇದೇ ಪ್ರಕಾಶಕರಿಂದ ಪ್ರಕಟಗೊಂಡು, ವರ್ಷದೊಳಗಾಗಿ ಮರುಮುದ್ರಣವನ್ನೂ ಕಂಡಿತು. ಈ ಎರಡು ಸಂಪುಟಗಳಲ್ಲಿ ಚರ್ಚೆಯಾಗಿರುವುದಕ್ಕಿಂತ ಹೆಚ್ಚು ವಿವರಗಳನ್ನೊಳಗೊಂಡ ಹಾಗೂ ಹೆಚ್ಚು ವಿದ್ವತ್ಪೂರ್ಣವಾದ ಇನ್ನೊಂದು ಮುನ್ನುಡಿಯನ್ನು ಬರೆಯುವ ಸಾಮರ್ಥ್ಯ ನಮ್ಮಲ್ಲಿಲ್ಲ. ಈ ಕಾರಣ, ಅವನ್ನೇ ಎಂಟು ಸಂಪುಟಗಳ ಮುನ್ನುಡಿಯನ್ನಾಗಿಸಿಕೊಳ್ಳಬೇಕೆಂದು ಓದುಗರಲ್ಲಿ ಅರಿಕೆ ಮಾಡಿಕೊಳ್ಳುವೆ.
- ಷ. ಶೆಟ್ಟರ್