ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ | ಮೋದಿ ವರ್ಚಸ್ಸಿನೆದರು ಕಾಂಗ್ರೆಸ್‌ ಗ್ಯಾರಂಟಿಗಳ ಮೇಲೆ ಸೂರ್ಯನಿಗೆ ಸೌಮ್ಯ ಸವಾಲು

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ, ಉಳಿದ ಬೆಂಗಳೂರಿನ ಎರಡು ಕ್ಷೇತ್ರಗಳಂತೆ(ಉತ್ತರ ಮತ್ತು ಕೇಂದ್ರ) ನಗರೀಕೃತ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿದೆ. ಎಲ್ಲರಿಗೂ ತಿಳಿದಿರುವಂತೆ, ಅಭ್ಯರ್ಥಿಗಳು ಭೇಟಿಮಾಡಿದ ಮಂದಿ ಚುನಾವಣೆಯ ದಿನ ಮತಗಟ್ಟೆಗೆ ಬಂದು ಮತ ಚಲಾಯಿಸುವರೆಂಬ ನಂಬಿಕೆ ಅಭ್ಯರ್ಥಿಗಳಿಗೂ ಇಲ್ಲ. ಆದರೂ ಮಾಡುವ ಪ್ರಯತ್ನ ಮಾಡಲೇಬೇಕಲ್ಲವೇ? ಎಂದು ಮುಖದ ಮೇಲೆ ಕೃತಕ ನಗೆಯನ್ನು ಅಂಟಿಸಿಕೊಂಡು, ಮನೆ ಮನೆ ಸುತ್ತುವ ಅನಿವಾರ್ಯ ಅಭ್ಯರ್ಥಿಗಳಿಗೆದುರಾಗಿದೆ. ಈ ಕಷ್ಟ ಅವರಿಗೆ ಇನ್ನು ಕೇವಲ ಮೂರು ದಿನ ಮಾತ್ರ.;

Update: 2024-04-22 01:40 GMT

ಕರ್ನಾಟಕದ ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ಇನ್ನು ಕೇವಲ ನಾಲ್ಕು ದಿನಗಳಷ್ಟೇ ಬಾಕಿ ಉಳಿದಿರುವಾಗ, ಬೆಂಗಳೂರು ದಕ್ಷಿಣ ಕ್ಷೇತ್ರದ ಚುನಾವಣಾ ಕಣ ಕಾವೇರುತ್ತಿದೆ. ಪ್ರಧಾನಿ ಮೋದಿ ಅವರ ಅಲೆ, ಅಥವಾ ಅವರ ವರ್ಚಸ್ಸು, ಅವರ ʼಮೋದಿಕಿ ಗ್ಯಾರಂಟಿʼ, ಹಿಂದುತ್ವ ಸಂಗತಿಗಳಿಗೆದುರಾಗಿ, ಕಾಂಗ್ರೆಸ್ ನ ಗ್ಯಾರಂಟಿ, ಮಹಿಳಾ ಸಂವೇದನೆ, ಪ್ರಾದೇಶಿಕತೆ, ಕರ್ನಾಟಕಕ್ಕೆ ಕೇಂದ್ರದಿಂದ ಆಗಿರುವ, ಆಗುತ್ತಿರುವ ಅನ್ಯಾಯ, ಕನ್ನಡತನ, ಹಾಗೂ ಜಾತಿ ಸಮೀಕರಣಗಳ ನಡುವೆ ಮತದಾರ ಆಯ್ಕೆ ಮಾಡಿಕೊಳ್ಳಬೇಕಿದೆ.

ಚುನಾವಣೆಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳು; ಕಾಂಗ್ರೆಸ್‌ ಮತ್ತು ಬಿಜೆಪಿ-ಜೆಡಿಎಸ್‌ ಮೈತ್ರಿಕೂಟ ʼಸಾಂಪ್ರದಾಯಿಕʼ ಚುನಾವಣಾ ಪ್ರಚಾರ ಮಾದರಿಗಳಾದʼ ಸಮಾವೇಶ, ರೋಡ್‌ ಷೋ, ಉದ್ಯಾನವನಗಳಲ್ಲಿ ಮುಂಜಾನೆಯ ವಾಯುಸಂಚಾರಕ್ಕೆ ಬರುವವರ ಭೇಟಿ, ಹೋಟೆಲ್ ಗಳಲ್ಲಿ ಕಾಫಿ ಕುಡಿಯುವವರೊಂದಿಗೆ ಚರ್ಚೆ, ಮತದಾರರ ಮಕ್ಕಳ ಕುಶಲೋಪಚಾರ ವಿಚಾರಣೆ…. ಹೀಗೆ ಹತ್ತು ಹಲವು ನಾಟಕಗಳ ಮೂಲಕ ಮತದಾರರನ್ನು ತಮ್ಮತ್ತ ಸೆಳೆದುಕೊಳ್ಳಲು ಪ್ರಯತ್ನಿಸುತ್ತಿವೆ. ಹಾಗಾಗಿ ಈ ಕ್ಷೇತ್ರದಲ್ಲಿ ಚುನಾವಣೆ ನಡೆಯುತ್ತಿದೆ ಎಂಬ ಭಾವನೆ ಮೂಡಲು ಸಾಧ್ಯವಾಗಿದೆ. ಈ ಮಾದರಿಗಳು ಮೇಲ್ನೋಟದ ಪ್ರಚಾರ ತಂತ್ರವಾದರೆ, ಉಳಿದಂತೆ, ಚುನಾವಣೆಯನ್ನು ಗೆಲ್ಲುವ ಕುಟಿಲೋಪಾಯಗಳನ್ನು ಉಭಯ ಪಕ್ಷಗಳು ತಮ್ಮ ತಮ್ಮ ಕೈಲಾದಷ್ಟು ಹೆಣೆಯುತ್ತಿವೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ, ಉಳಿದ ಬೆಂಗಳೂರಿನ ಎರಡು ಕ್ಷೇತ್ರಗಳಂತೆ(ಉತ್ತರ ಮತ್ತು ಕೇಂದ್ರ) ನಗರೀಕೃತ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿದೆ. ಎಲ್ಲರಿಗೂ ತಿಳಿದಿರುವಂತೆ, ಅಭ್ಯರ್ಥಿಗಳು ಭೇಟಿಮಾಡಿದ ಮಂದಿ ಚುನಾವಣೆಯ ದಿನ ಮತಗಟ್ಟೆಗೆ ಬಂದು ಮತ ಚಲಾಯಿಸುವರೆಂಬ ನಂಬಿಕೆ ಅಭ್ಯರ್ಥಿಗಳಿಗೂ ಇಲ್ಲ. ಆದರೂ ಮಾಡುವ ಪ್ರಯತ್ನ ಮಾಡಲೇಬೇಕಲ್ಲವೇ? ಎಂದು ಮುಖದ ಮೇಲೆ ಕೃತಕ ನಗೆಯನ್ನು ಅಂಟಿಸಿಕೊಂಡು, ಮನೆ ಮನೆ ಸುತ್ತುವ ಅನಿವಾರ್ಯ ಅಭ್ಯರ್ಥಿಗಳಿಗೆದುರಾಗಿದೆ. ಈ ಕಷ್ಟ ಅವರಿಗೆ ಇನ್ನು ಕೇವಲ ಮೂರು ದಿನ ಮಾತ್ರ.

ಬಿಜೆಪಿ ಅಭ್ಯರ್ಥಿಯಾಗಿರುವ ತೇಜಸ್ವಿ ಸೂರ್ಯ ತಮ್ಮ ವಾಕ್ಚಾತರ್ಯಕ್ಕೆ ಹೆಸರಾದವರು. ಮೋದಿ ಹಾಗೂ ಸಂಘ ಪರಿವಾರದ ಹಿಂದುತ್ವದ ವಿಚಾರಗಳನ್ನು ಮೈಗೂಡಿಸಿಕೊಂಡು ಪ್ರಭಾವಶಾಲಿಯಾಗಿ ಸಂಘ ಪರಿವಾರದವರಿಗೆ, ಹಿಂದುತ್ವವಾದಿಗಳಿಗೆ ಮುಟ್ಟಿಸಬಲ್ಲವರು. ತಮ್ಮ 28 ನೇ ವಯಸ್ಸಿನಲ್ಲಿ ಲೋಕಸಭೆ ಪ್ರವೇಶಿಸಿದವರು. ಜೊತೆಯಲ್ಲಿ ಭಾರತೀಯ ಜನತಾ ಯುವ ಮೋರ್ಛಾದ ರಾಷ್ಟ್ರೀಯ ಅಧ್ಯಕ್ಷರು. ವೃತ್ತಿಯಿಂದ ವಕೀಲರು. ತಮ್ಮದೊಂದು ಲಾ ಫರ್ಮ್‌ ಅನ್ನು ಲಾಭದಾಯಕವಾಗಿ ನಡೆಸುತ್ತಿರುವವರು.

ಬೆಂಗಳೂರು ದಕ್ಷಿಣ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ, ಪ್ರಭಾವಿ ರಾಜಕಾರಣಿ ಹಾಗೂ ಕರ್ನಾಟಕದಲ್ಲಿ ಬಿಜೆಪಿ ನೆಲೆಕಂಡುಕೊಳ್ಳಲು ಕಾರಣರಾದ ಕೆಲವರ ಪೈಕಿ ಒಬ್ಬರಾದ ಅನಂತ್ ಕುಮಾರ್‌ ಅವರ ಹಠಾತ್‌ ನಿಧನದಿಂದ ತೆರವಾದ ಸ್ಥಾನವನ್ನು ತುಂಬಿದ ʼಅದೃಷ್ಟವಂತʼ ವ್ಯಕ್ತಿ. ಈ ಕ್ಷೇತ್ರದಲ್ಲಿ ಚಿರಪರಿಚಿತರಾಗಿರುವ ಹಾಗೂ ತಮ್ಮ ಸಾಮಾಜಿಕ ಕಾಳಜಿಗಳಿಂದ ಮನೆಮಾತಾಗಿರುವ ಅನಂತ್‌ ಕುಮಾರ್‌ ಅವರ ಪತ್ನಿ ತೇಜಸ್ವಿನಿ ಅನಂತ್‌ ಕುಮಾರ್‌ ಅವರ ಬದಲಿಗೆ ೨೦೧೯ರಲ್ಲಿ ಟಿಕೇಟ್‌ ಗಿಟ್ಟಿಸಿಕೊಂಡು ಚುನಾವಣಾ ಕಣಕ್ಕೆ ಇಳಿದಾಗ ಎಲ್ಲರೂ ಹುಬ್ಬು ಮೇಲೇರಿಸಿದ್ದರು. ಇದರಿಂದ ಸೂರ್ಯ ಆಗಲೇ ವಿವಾದಕ್ಕೊಳಗಾಗಿದ್ದರು.

ಆದರೂ ಅವರು ಸಂಘ ಪರಿವಾರದ ಬೆಂಬಲದಿಂದ, ಮೋದಿ ಅವರ ವರ್ಚಸ್ಸಿನಿಂದ ʼವಿಜಯಸೂರ್ಯʼ ರಾದದ್ದು ಇಂದು ಇತಿಹಾಸ. ಇವೆಲ್ಲ ನಡೆದು ಐದು ವರ್ಷಗಳೇ ಕಳೆದಿದೆ. ಕಾವೇರಿಯಲ್ಲಿ ಸಾಕಷ್ಟು ನೀರು, ವೃಷಭಾವತಿಯಲ್ಲಿ ಅಷ್ಟೇ ಪ್ರಮಾಣದ ಕೊಳಚೆ ನೀರು ಹರಿದಿದೆ. ತಮ್ಮ ಐದು ವರ್ಷಗಳ ಸಾಧನೆ, ಕ್ಷೇತ್ರಕ್ಕೆ ನೀಡಿರುವ ʼಕಾಣಿಕೆʼ, ಮೋದಿ ಅವರ ʼಭಾವಿಸಲಾದʼ ವರ್ಚಸ್ಸು ಮುಂತಾದ ಸಂಗತಿಗಳ ಆಧಾರದ ಮೇಲೆ ಅವರು ಮತ್ತೆ ಮತಯಾಚನೆ ಮಾಡುತ್ತಿದ್ದಾರೆ. ಮೋದಿ ಅವರ ನೀಲಿ ಕಣ್ಣಿನ ಹುಡುಗ ಎಂದೆನ್ನಿಸಿಕೊಂಡಿರುವ, ಹಾಗೂ ಹಾಗೆಂದ ತನ್ನನ್ನು ತಾನು ನಂಬಿಸಿಕೊಂಡಿರುವ, ಎಲ್ಲರನ್ನೂ ನಂಬಿಸಿರುವ ಸೂರ್ಯ ಅವರಿಗೆ ಈ ಗೆಲುವು ತೀರಾ ಅನಿವಾರ್ಯ ಎನ್ನುವುದು ಈ ಬಾರಿ ಅವರು ಪಕ್ಷದ ಟಿಕೆಟ್‌ ಪಡೆಯಲು ನಡೆಸಿದ ಹೋರಾಟವೇ ಸೂಚಿಸುತ್ತದೆ.

ಬೆಂಗಳೂರು ದಕ್ಷಿಣ ಕ್ಷೇತ್ರ ಅಸ್ತಿತ್ವಕ್ಕೆ ಬಂದದ್ದು, 1977ರಲ್ಲಿ. ದೇಶ ತುರ್ತುಸ್ಥಿತಿಯಿಂದ ಬಿಡುಗಡೆಗೊಂಡಾಗ. “ಈಗ ಮತ್ತದೇ ರೀತಿಯ ಅಘೋಷಿತ ತುರ್ತು ಸ್ಥಿತಿಯ ಸಂದರ್ಭದಲ್ಲಿ ಚುನಾವಣೆ ಎದುರಾಗಿದೆ. ಆಗಿನ ತುರ್ತುಸ್ಥಿತಿಯು ನೇರವಾಗಿತ್ತು. ಈಗಿನ ತುರ್ತು ಸ್ಥಿತಿ ʼ ಅದೃಶ್ಯʼ ಸ್ವರೂಪದಲ್ಲಿದೆ ಅಷ್ಟೇ ವ್ಯತ್ಯಾಸ” ಎನ್ನುವ ಹೆಸರು ಬಹಿರಂಗಗೊಳಿಸಲು ಬಯಸದ ಕನ್ನಡದ ಲೇಖಕರೊಬ್ಬರ ಮಾತು ಈ ಸಂದರ್ಭದಲ್ಲಿ ಅರ್ಥಪೂರ್ಣ.

ಲೋಕಸಭೆ ಸ್ಪೀಕರ್‌ ಆಗಿದ್ದ ಜಸ್ಟೀಸ್‌ ಕೆ. ಎಸ್. ‌ ಹೆಗ್ಡೆ, ಟಿ ಆರ್‌ ಶಾಮಣ್ಣ, ವಿ ಎಸ್‌ ಕೃಷ್ಣಯ್ಯರ್‌, ಆರ್‌ ಗುಂಡೂರಾವ್‌, ಖ್ಯಾತ ಅರ್ಥಶಾಸ್ತ್ರಜ್ಞ ವೆಂಟಕಗಿರಿಗೌಡ, ಕೇಂದ್ರದಲ್ಲಿ ಪ್ರಭಾವಶಾಲಿ ಸಚಿವಾರಾಗಿದ್ದ ಅನಂತ್‌ ಕುಮಾರ್‌ ಅವರು ಪ್ರತಿನಿಧಿಸಿದ ಕ್ಷೇತ್ರವಿದು. ಅನಂತ್‌ ಕುಮಾರ್‌ ಸತತವಾಗಿ ಆರು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

ಈ ಕ್ಷೇತ್ರದ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಸೌಮ್ಯ ರೆಡ್ಡಿ ಅವರು ಹಿರಿಯ ಸಚಿವ ರಾಮಲಿಂಗಾ ರೆಡ್ಡಿ ಅವರ ಮಗಳು. ಸೌಮ್ಯ ರೆಡ್ಡಿ ಅವರು ಪ್ರಸಕ್ತ ಅಖಿಲ ಭಾರತ ಮಹಿಳಾ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿಯಾಗಿದ್ದು, ನ್ಯೂಯಾರ್ಕ್‌ ಇನ್ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ಕಲಿತವರು.

2018 ರಿಂದ 2023ರವರೆಗೆ ವಿಧಾನ ಸಭೆಯಲ್ಲಿ ಜಯನಗರ ವಿಧಾನ ಕ್ಷೇತ್ರವನ್ನು ಪ್ರತಿನಿಧಿಸಿದವರು. ೨೦೨೩ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ತೀರಾ ಅಲ್ಪ ಮತಗಳ ಅಂತರದಿಂದ ಸೋಲನ್ನಪ್ಪಿದವರು. ಜಯನಗರ ಕ್ಷೇತ್ರದಲ್ಲಿ ಸಾಕಷ್ಟು ಪ್ರಭಾವಶಾಲಿ ರಾಜಕಾರಣಿಯಾಗಿರುವ ಇವರು ಬಿಜೆಪಿಯ ತೇಜಸ್ವಿ ಸೂರ್ಯ ಅವರನ್ನು ಎದುರಿಸಿ ಕಣಕ್ಕಿಳಿದಿದ್ದಾರೆ.

ಹಾಗೆ ನೋಡಿದರೆ, ಸೌಮ್ಯರೆಡ್ಡಿ ಈ ಕ್ಷೇತ್ರಕ್ಕೆ ಹೊಸಬರೇನಲ್ಲ. ಇವರ ತಂದೆ ಹಾಗೂ ಪ್ರಸಕ್ತ ಕಾಂಗ್ರೆಸ್‌ ಸರ್ಕಾರದಲ್ಲಿ ಸಾರಿಗೆ ಸಚಿವಾಗಿರುವ ರಾಮಲಿಂಗಾರೆಡ್ಡಿ ಅವರು ಒಂದರ್ಥದಲ್ಲಿ, ಈ ಭಾಗದ ಕಾಂಗ್ರೆಸ್‌ ಪಿತಾಮಹ. ಜನರೇ ಮಾತನಾಡಿಕೊಳ್ಳುವಂತೆ. ಅವರನ್ನು ವಿರೋಧಿಸುವ ಕಾಂಗ್ರೆಸ್‌ ಕಾರ್ಯಕರ್ತ ಒಬ್ಬನೂ ಇಲ್ಲ. ಅಷ್ಟು ಜನಾನುರಾಗಿ ಅವರು. ಹಾಗೆ ನೋಡಿದರೆ ಬೇರೆ ಪಕ್ಷಗಳಲ್ಲಿಯೂ ಅವರ ವಿರೋಧಿಗಳಿಲ್ಲ. ಇವೆಲ್ಲ ಇದ್ದೂ ಅವರ ಪುತ್ರಿ ಸೌಮ್ಯ ರೆಡ್ಡಿ ಕಳೆದ ವಿಧಾನ ಸಭೆಯಲ್ಲಿ ಕೇವಲ 19 ಮತಗಳ ಅಂತರದಿಂದ ಸೋತಿದ್ದು ತಾಂತ್ರಿಕ ಕಾರಣಗಳಿಂದ ಎಂದೇ ಜನರ ಭಾವನೆ. ʻನನ್ನ ಮಗಳು ವಿಧಾನ ಸಭಾ ಚುನಾವಣೆಯಲ್ಲಿ ಹೆಚ್ಚುಕಡಿಮೆ ಗೆದ್ದಿದ್ದರು. ಆದರೆ ತಿರಸ್ಕೃತ ಮತಗಳ ಲೆಕ್ಕಾಚಾರದಲ್ಲಿ ಹೆಚ್ಚು ಕಡಿಮೆಯಾಯಿತು. ಆ ವಿವಾದ ಈಗ ಕೋರ್ಟ್‌ ಮೆಟ್ಟಿಲೇರಿದೆ” ಅದರ ಬಗ್ಗೆ ನಾನು ಹೆಚ್ಚು ಮಾತನಾಡಲಾರೆ” ಎನ್ನುತ್ತಾರೆ ಸಚಿವ ರಾಮಲಿಂಗಾ ರೆಡ್ಡಿ.

ಬಿಜೆಪಿ ಭದ್ರಕೋಟೆ

ಬೆಂಗಳೂರು ದಕ್ಷಿಣ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ ೨೩,೪೧, ೭೫೯. ಈ ಕ್ಷೇತ್ರದಲ್ಲಿ ಕಳೆದ ಬಾರಿ ದಾಖಲೆಯ ಕಡಿಮೆ ಮತದಾನ ಅಂದರೆ ಪ್ರತಿಶತ ೫೩.೭ ನಡೆದಿತ್ತು. ಈ ಕ್ಷೇತ್ರದ ವ್ಯಾಪ್ತಿಗೆ ಬರುವ ವಿಧಾನಸಭಾ ಕ್ಷೇತ್ರಗಳೆಂದರೆ; ಗೋವಿಂದರಾಜನಗರ, ವಿಜಯನಗರ, ಚಿಕ್ಕಪೇಟೆ, ಬಸವನಗುಡಿ, ಪದ್ಮನಾಭನಗರ, ಬೊಮ್ಮನಹಳ್ಳಿ, ಜಯನಗರ, ಬಿಟಿಎಂ ಲೇಔಟ್. ‌ ಈ ಪೈಕಿ ಮೂರು ಕ್ಷೇತ್ರಗಳನ್ನು ಕಾಂಗ್ರೆಸ್‌ ಹಿಡಿದಿಟ್ಟುಕೊಂಡಿದ್ದರೆ, ಉಳಿದ ಐದು ಕ್ಷೇತ್ರಗಳು ಬಿಜೆಪಿಯ ಮುಷ್ಠಿಯಲ್ಲಿವೆ.

ಅಭಿವೃದ್ಧಿ ಜಪ, ಮೋದಿ ನಾಮಬಲ, ತೇಜಸ್ವಿ ಸೂರ್ಯ ಅವರ ಬಲ. ಒಮ್ಮೆ ಜಯನಗರದ ಶಾಸಕರಾಗಿದ್ದ ಸೌಮ್ಯ ರೆಡ್ಡಿ, ಶಾಸಕಿಯಾಗಿ ಮಾಡಿದ ಅಭಿವೃದ್ಧಿ ಕಾರ್ಯಗಳು, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನಗಳ ಆಧಾರದ ಮೇಲೆ ಮತಯಾಚಿಸುತ್ತಿದ್ದಾರೆ. ಯುವ ಮತದಾರರನ್ನು ಕಾಂಗ್ರೆಸ್‌ನತ್ತ ಸೆಳೆಯುವ ಕೆಲಸದಲ್ಲಿ ಮಗ್ನರಾಗಿದ್ದಾರೆ. ಆದರೆ ಈ ಕ್ಷೇತ್ರದ ವಿಶಿಷ್ಟತೆಯೆಂದರೆ, ಕಳೆದ ಎಂಟು ಚುನಾವಣೆಗಳಿಂದ ಇದು ಬಿಜೆಪಿಗೆ ಒಲವು ತೋರಿರುವುದು. ಹಾಗಾಗಿ ಈ ಕ್ಷೇತ್ರವನ್ನು ಬಿಜೆಪಿಯ ಭದ್ರ ಕೋಟೆಯೆಂದೇ ಭಾವಿಸಬಹುದು.

“ಈ ಕ್ಷೇತ್ರವನ್ನು ನಾವು ಒಂಭತ್ತನೇ ಬಾರಿಯೂ ಗೆಲ್ಲುತ್ತೇವೆ” ಎಂದು ಜಯನಗರದ ಶಾಸಕ ಕೆ. ಸಿ. ರಾಮಮೂರ್ತಿ ದೃಢವಾಗಿ ಹೇಳುತ್ತಾರೆ. ಆದರೆ ಈ ಪ್ರದೇಶದ ಜನರಿಗೊಂದು ಅಸಮಾಧಾನವಿದೆ. ತೇಜಸ್ವಿ ಸೂರ್ಯ ಜನರ ಕೈಗೆ ಸಿಕ್ಕುವುದಿಲ್ಲ. “ಸೂರ್ಯ ಜನರ ಕಷ್ಟ ಸುಖ ಕೇಳುವುದಿಲ್ಲ. ಆದರೆ ಒಳ್ಳೆ ಹುಡುಗ ಮತ್ತು ನಾಯಕ” ಎನ್ನುತ್ತಾರೆ, ಬಸವನಗುಡಿಯ ನಾಗರಾಜರಾವ್. ‌

ಒಮ್ಮೆ ಶಾಸಕಿಯಾಗಿ ಕೆಲಸ ಮಾಡಿರುವುದು, ರಾಮಲಿಂಗಾರೆಡ್ಡಿ ಅವರ ಪ್ರಭಾವಳಿ, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದ ಪ್ರಭಾವ, ಆಕೆ ಪ್ರತಿಪಾದಿಸುವ ಕಾಂಗ್ರೆಸ್‌ ಪಕ್ಷದ ಪ್ರಜಾಪ್ರಭುತ್ವದ ಮೌಲ್ಯಗಳು. ಸೌಮ್ಯರೆಡ್ಡಿ ಅವರಿಗೆ ಕಷ್ಟವಾಗುವ ಸಂಗತಿಗಳೆಂದರೆ, ಕೊನೆಯ ಹಂತದಲ್ಲಿ ಅಭ್ಯರ್ಥಿಯಾಗಿ ಆಯ್ಕೆಯಾದದ್ದು ಹಾಗೂ ಕ್ಷೇತ್ರದ ಮೇಲೆ ಬಿಜೆಪಿಯ ಹಿಡಿತ ಗಟ್ಟಿಯಾಗಿರುವುದು. ಕಳೆದ ಬಾರಿ ಈ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಬಿ. ಕೆ. ಹರಿಪ್ರಸಾದ್‌ ೪,೦೮, ೦೩೭ ಮತಗಳಿಸಿ, ೩, ೩೧, ೧೯೨ ಮತಗಳ ಅಂತರದಿಂದ ತೇಜಸ್ವಿ ಸೂರ್ಯ ಅವರೆದುರು ಶರಣಾಗಿದ್ದರು.

“ಸೌಮ್ಯರೆಡ್ಡಿಗೆ ಜನರು ಆಶೀರ್ವಾದ ಮಾಡಿದರೆ ಸೌಮ್ಯ ಎರಡು ದಾಖಲೆ ಮಾಡುತ್ತಾರೆ. ಮೊದಲನೇಯದು ಒಂಭತ್ತನೇ ಬಾರಿ ಕ್ಷೇತ್ರದ ಮೇಲಿನ ಬಿಜೆಪಿಯ ಸಾರ್ವಭೌಮತ್ವವನ್ನು ಕೊನೆಗೊಳಿಸುವುದು ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರವನ್ನು ಪ್ರತಿನಿಧಿಸುವ ಮೊದಲ ಮಹಿಳಾ ಶಾಸಕಿಯಾಗುವುದು” ಎನ್ನುತ್ತಾರೆ ರಾಮಲಿಂಗಾರೆಡ್ಡಿ. ಕಳೆದ ೭೩ ವರ್ಷಗಳಲ್ಲಿ ನಡೆದ ೧೭ ಲೋಕಸಭಾ ಚುನಾವಣೆಗಳಲ್ಲಿ ಒಬ್ಬೇಒಬ್ಬ ಮಹಿಳಾ ಅಭ್ಯರ್ಥಿ ಕೂಡ ಇದುವರೆಗೆ ಆಯ್ಕೆಯಾಗಿಲ್ಲ ಎನ್ನುವುದು ಈ ಕ್ಷೇತ್ರದ ವಿಶೇಷ.

ಹಾಗೊಮ್ಮೆ ಆಯ್ಕೆಯಾದರೆ, ಸೌಮ್ಯ ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಏನು ಕೊಡುಗೆ ನೀಡುತ್ತಾರೆ? ಆಕೆ ಹೇಳುವುದು ಈ ರೀತಿ: “ನಾನು ಸಂಸದೆಯಾಗಿ ಆಯ್ಕೆಯಾದರೆ, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಯಾವ ಯಾವ ಯೋಜನೆಗಳನ್ನು ಜಾರಿಗೊಳಿಸಬೇಕು ಎಂಬುದರ ಹಸಿರು ನಕಾಶೆಯನ್ನು ಸಿದ್ಧಪಡಿಸಿಕೊಂಡಿದ್ದೇನೆ. ಸಂಸದೆಯಾದರೆ, ಬೆಂಗಳೂರು ಉದ್ಯಾನ ನಗರಿ ಎಂಬುದು ನಿಜವೆಂಬುದನ್ನು ರುಜುವಾತು ಮಾಡುತ್ತೇನೆ. ಹಸಿರು ಬೆಂಗಳೂರು ದಕ್ಷಿಣವನ್ನು ಕಟ್ಟಲು ಕಟಿಬದ್ಧವಾಗಿದ್ದೇನೆ. ಈ ಕ್ಷೇತ್ರದಲ್ಲಿ ಗೆಲ್ಲುವ ಎಲ್ಲ ಭರವಸೆ ನನಗಿದೆ”.

ತಮಗೆ ಆಡಳಿತ ವಿರೋಧಿ ಅಲೆಯ ಬಾಧೆ ಇಲ್ಲ ಎಂದು ಸಮರ್ಥಿಸಿಕೊಳ್ಳುವ ತೇಜಸ್ವಿ ಸೂರ್ಯ; ಬಾಕಿ ಉಳಿದಿರುವ ಎರಡನೇ ಹಂತದ ಮೆಟ್ರೋ, ೨ ಎ ಮತ್ತು ೨ ಬಿಗೆ ಅನುಮತಿ ಪಡೆಯುವುದು, ನೇರಳೇ ಮೆಟ್ರೋ ಮಾರ್ಗವನ್ನು ಪೂರ್ಣಗೊಳಿಸುವುದು, ಸಬರ್ಬನ್‌ ರೈಲ್ವೆ ಯೋಜನೆಯ ಕಾಮಗಾರಿಯನ್ನು ಪೂರ್ಣಗೊಳಿಸುವುದು, ರಿಂಗ್‌ ರೋಡ್ ಕೆಲಸ ಅಂತಿಮಗೊಳಿಸುವುದೇ ಮುಖ್ಯವಾದ ಕೆಲಸಗಳ ಮೇಲೆ ನಾನು ಕೆಲಸ ಮಾಡುತ್ತೇನೆ ಎನ್ನುತ್ತಾರೆ. ಮೋದಿ ಅಲೆಯಲ್ಲಿ ತಮಗೆ ಜಯ ನಿಶ್ಚಿತ ಎಂದು ಯಾವುದೇ ಅನುಮಾನವಿಲ್ಲದೆ ಹೇಳುತ್ತಾರೆ. “ಮೋದಿ ಗ್ಯಾರಂಟಿಯಲ್ಲಿ ಜನರಿಗೆ ನಂಬಿಕೆ ಇದೆ” ಎಂದು ಮುಗುಳ್ನಗುತ್ತಾರೆ.

Tags:    

Similar News