ಕರ್ನಾಟಕದ ʻಪಾದಯಾತ್ರಾʼ ಪುರಾಣ | ಬಿಜೆಪಿಯ ಮೈಸೂರು ಪಾದಯಾತ್ರೆಗೆ ಸ್ವಪಕ್ಷೀಯರಿಂದಲೇ ಅಡ್ಡಗಾಲು

ವಿರೋಧ ಪಕ್ಷಗಳು ಆಗಸ್ಟ್‌ 3 ರಂದು ನಡೆಸಲು ಉದ್ದೇಶಿಸಿರುವ ಬೆಂಗಳೂರು-ಮೈಸೂರು ಪಾದಯಾತ್ರೆ, ಬಿಜೆಪಿಗೆ ಲಾಭ ತಂದುಕೊಡುವ ಬದಲು, ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುವ ಸಾಧ್ಯತೆ ಇದೆ. ಪಾದಯಾತ್ರೆಗೆ ಪಕ್ಷದ ಹಿರಿಯರಿಂದಲೇ ಪ್ರತಿರೋಧ ವ್ಯಕ್ತವಾಗುತ್ತಿದೆ. ವಾಲ್ಮೀಕಿ ಹಗರಣವನ್ನು ಕೈಗೆತ್ತಿಕೊಂಡು, ಕೂಡಲ ಸಂಗಮದಿಂದ ಬಳ್ಳಾರಿಗೆ ಪಾದಯಾತ್ರೆ ನಡೆಸಲು, ಯತ್ನಾಳ್‌, ರಮೇಶ್‌ ಜಾರಕಿಹೊಳಿ ಹಾಗೂ ಬಿ. ಶ್ರೀರಾಮುಲು ಸಜ್ಜಾಗುತ್ತಿದ್ದಾರೆ. ಈ ಬೆಳವಣಿಗೆಯನ್ನು ಪಕ್ಷದೊಳಗಿನ ಭಿನ್ನಾಭಿಪ್ರಾಯ ಎಂದು ನೋಡುವ ಬದಲು, ಇದು ವಿಜಯೇಂದ್ರ ಮತ್ತು ಅರ್.‌ ಅಶೋಕ್‌ ಅವರ ಹೊಂದಾಣಿಕೆ ರಾಜಕಾರಣದ ವಿರುದ್ಧದ ಧ್ವನಿ ಎಂದು ಗಮನಿಸುವುದು ಸರಿಯಾಗಬಹುದು.;

Update: 2024-07-31 02:00 GMT

ಕರ್ನಾಟಕ ರಾಜ್ಯ ಸರ್ಕಾರದ ವಿರುದ್ಧ ಕೇಳಿ ಬಂದಿರುವ MUDA (ಮೂಡಾ) ಮತ್ತು ವಾಲ್ಮೀಕಿ ನಿಗಮದ ಹಣ ವರ್ಗಾವಣೆ ಹಗರಣದ ವಿರುದ್ಧ ವಿರೋಧ ಪಕ್ಷಗಳು ಆಗಸ್ಟ್‌ 3 ರಿಂದ ಹಮ್ಮಿಕೊಂಡಿರುವ ಪಾದಯಾತ್ರೆ ಬಿಜೆಪಿ ಪಕ್ಷದ ಆಂತರಿಕ ಸಮಸ್ಯೆಗಳಿಂದಾಗಿ ಮೊದಲ ಹೆಜ್ಜೆ ಇಡುವ ಮುನ್ನವೇ ವಿಘ್ನ ಎದುರಾದಂತಾಗಿದೆ. ಪಾದಯಾತ್ರೆಯ ಬಗ್ಗೆ ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ್‌ ಯತ್ನಾಳ್‌ ಒಂದು ಬಗೆಯಲ್ಲಿ ಆರೋಪಗಳನ್ನು ಮಾಡುತ್ತಿದ್ದರೆ, ಮತ್ತೊರ್ವ ಅತೃಪ್ತ ಶಾಸಕ ರಮೇಶ್‌ ಜಾರಕಿಹೊಳಿ ಪರ್ಯಾಯ ಪಾದಯಾತ್ರೆಯ ಘೋಷಣೆ ಮಾಡಿಬಿಟ್ಟಿದ್ದಾರೆ.

ಕರ್ನಾಟಕ ಪ್ರಕೃತಿ ವಿಕೋಪಕ್ಕೆ ಒಳಗಾಗಿ ನಲುಗಿ ಹೋಗುತ್ತಿರುವ ಸಂದರ್ಭದಲ್ಲಿ ರಾಜಕೀಯ ಉದೇಶಕ್ಕಾಗಿ ಪಾದಯಾತ್ರೆಗಳನ್ನು ನಡೆಸುವುದು ಕರ್ನಾಟಕದ ರಾಜಕಾರಣಕ್ಕೇನೂ ಹೊಸದಲ್ಲ. ಈಗ ರಾಜ್ಯದ ಜನರು ಅತಿವೃಷ್ಟಿಯಿಂದಾಗಿ ಪ್ರವಾಹ ಪರಿಸ್ಥಿತಿಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿ, ಅವರ ಸಂಕಷ್ಟಕ್ಕೆ ಸ್ಪಂದಿಸದೆ, ರಾಜಕಾರಣಕ್ಕಾಗಿ ವಿರೋಧ ಪಕ್ಷಗಳು ಪಾದಯಾತ್ರೆ ನಡೆಸುತ್ತಿರುವ ಉದ್ದೇಶವನ್ನೇ ಜನರು ಪ್ರಶ್ನಿಸುತ್ತಿದ್ದಾರೆ. ಈತ ಇಂಥ ಪಾದಯಾತ್ರೆಯ ಅಗತ್ಯವಿದೆಯೇ? ಎಂದು ಪ್ರಶ್ನಿಸುತ್ತಿದ್ದಾರೆ.

ಬಳ್ಳಾರಿ ಗಣಿದಣಿಗಳ ವಿರುದ್ಧ ಪಾದಯಾತ್ರೆ

ಜುಲೈ 2010ರಲ್ಲಿ ಅಕ್ರಮ ಗಣಿಗಾರಿಕೆಯನ್ನು ವಿರೋಧಿಸಿ, ಸಿದ್ದರಾಮಯ್ಯ 320 ಕಿಮೀ ದೂರದಷ್ಟು ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದರು. ಬಿಜೆಪಿಯಲ್ಲಿದ್ದು, ಪಕ್ಷದಿಂದ ದೂರವಾಗಿ ಮತ್ತೆ ಬಿಜೆಪಿಗೆ ಮರಳಿರುವ ಗಣಿ-ದಣಿ ಜನಾರ್ದನ ರೆಡ್ಡಿ ಅವರು ವಿಧಾನ ಸಭೆಯಲ್ಲಿ ಬಳ್ಳಾರಿ ʻರಿಪಬ್ಲಿಕ್‌ʼ ಕಾಲಿಡಿ ನೋಡೋಣ ಎಂದು ಗಣಿದಣಿಗಾದ ಶ್ರೀರಾಮುಲು, ಜನಾರ್ದನ ರೆಡ್ಡಿ ಅವರು ಹಾಕಿದ ಸವಾಲನ್ನು ತೊಡೆತಟ್ಟಿ ಸ್ವೀಕರಿಸಿದ ಸಿದ್ದರಾಮಯ್ಯ, ತಮ್ಮ ಮಂಡಿ ನೋವನ್ನು ಲೆಕ್ಕಿಸದೆ, 320 ಕಿಮೀ ನಡೆದು ಗಣಿದಣಿಗಳನ್ನು ಅವರ ಭದ್ರ ಕೋಟೆಯಲ್ಲಿಯೇ ಎದುರಿಸಿ, 2013ರಲ್ಲಿ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತಂದದ್ದು ಈಗ ಇತಿಹಾಸ. ಆಗ ಈ ಪಾದಯಾತ್ರೆಯನ್ನು ಪಕ್ಷದೊಳಗಿನ ತಮ್ಮ ಸ್ಥಾನವನ್ನು ಬಲ ಪಡಿಸಿಕೊಳ್ಳುವ ಸಿದ್ದರಾಮಯ್ಯನವರ ಯತ್ನ ಎಂದೇ ಬಣ್ಣಿಸಲಾಗಿತ್ತು.

ಮೇಕೆದಾಟು ಪಾದಯಾತ್ರೆ

ಹೀಗೆ ಮತ್ತೊಂದು ಪಾದಯಾತ್ರೆಯನ್ನು ಸಂಘಟಿಸಿದ್ದು ಕೂಡ ಕಾಂಗ್ರೆಸ್‌ ಪಕ್ಷವೇ. 2022ರ ಮೇ ತಿಂಗಳಲ್ಲಿ ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್‌ ಪಕ್ಷ ಪಾದಯಾತ್ರೆಯನ್ನು ಹಮ್ಮಿಕೊಂಡಿತ್ತು. ಇದೇ ವೇಳೆ ಕಾಂಗ್ರೆಸ್‌ ಜನವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಅರೋಪಿಸಿ ಆಡಳಿತರೂಢ ಬಿಜೆಪಿ, ಬೆಂಗಳೂರು ಹೊರತುಪಡಿಸಿ ರಾಜ್ಯಾದ್ಯಂತ ಹೋರಾಟಕ್ಕೆ ಸಜ್ಜಾಗಿತ್ತು. ಇದರೊಂದಿಗೆ ರಾಜ್ಯದ ಎರಡೂ ರಾಷ್ಟ್ರೀಯ ಪಕ್ಷಗಳು ಪರಸ್ಪರ ಕಾದಾಟಕ್ಕೆ ಇಳಿದಂತಾಗಿತ್ತು. ಈ ಪಾದಯಾತ್ರೆಯನ್ನು ಎರಡು ಹಂತಗಳಲ್ಲಿ ಮಾಡಬೇಕಾದ ಅಗತ್ಯ ಕಾಂಗ್ರೆಸ್‌ಗೆ ಅಂದು ಎದುರಾಗಿತ್ತು. ಮೇಕೆದಾಟು ಮೊದಲ ಹಂತದ ಪಾದಯಾತ್ರೆ ಸಂಗಮದಿಂದ ರಾಮನಗರದವರೆಗೆ ನಾಲ್ಕು ದಿನಗಳ ಕಾಲ ನಡೆದಿತ್ತು. ಅದು ಕೋವಿಡ್‌ 19 ರ ಅವಧಿಯಾಗಿದ್ದು, ಇಂಥ ಯಾತ್ರೆಯಿಂದ ಕಾಯಿಲೆ ಮತ್ತಷ್ಟ ಹರಡುವ ಭೀತಿಯ ಹಿನ್ನೆಲೆಯಲ್ಲಿ ನ್ಯಾಯಾಲಯ ಪಾದಯಾತ್ರೆಯನ್ನು ನಿಲ್ಲಿಸುಂತೆ ಕಾಂಗ್ರೆಸ್‌ ಪಕ್ಷಕ್ಕೆ ಸೂಚಿಸಿತ್ತು. ಆಗ ನಿಲ್ಲಿಸಿದ ಪಾದಯಾತ್ರೆಯನ್ನು ಕೋವಿಡ್‌ ಮಾರಿಯ ಪ್ರತಾಪ ಕಡಿಮೆಯಾದ ನಂತರ ಮೇ ತಿಂಗಳಲ್ಲಿ ಮತ್ತೆ ಕಾಂಗ್ರೆಸ್‌ ಪಕ್ಷ ಕೈಗೆತ್ತಿಕೊಂಡಿತ್ತು. ಬೆಂಗಳೂರು ನಗರಕ್ಕೆ ನೀರು ಒದಗಿಸಬಹುದಾದ ಮೇಕೆದಾಟು ಯೋಜನೆ ಜಾರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ವಿಳಂಬ ಮಾಡುತ್ತಿವೆ ಎನ್ನುವುದು ಕಾಂಗ್ರೆಸ್‌ ವಾದವಾಗಿತ್ತು.

ಯಾತ್ರೆಯ ಉದ್ದೇಶವೇ ಪ್ರಶ್ನಾರ್ಹ

“ಈ ಎರಡೂ ಪಾದಯಾತ್ರೆಗಳೂ ಜನಹಿತಕ್ಕೆ ಸಂಬಂಧಿಸಿದ್ದು. ಆದರೆ, ವಿರೋಧಿ, ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳು ನಡೆಸುತ್ತಿರುವ ಪಾದಯಾತ್ರೆ ʼಸ್ವಪಕ್ಷʼ ಹಿತಕ್ಕೆ ಸಂಬಂಧಿಸಿದ್ದು. ನಿಜ. ವಿರೋಧ ಪಕ್ಷಗಳು ಭ್ರಷ್ಟಾಚಾರ ಪ್ರಕರಣಗಳನ್ನು ಮುಂದಿಟ್ಟುಕೊಂಡು ಪಾದಯಾತ್ರೆಯನ್ನು ಹಮ್ಮಿಕೊಂಡಿದೆ. ಆದರೆ. ಈ ಎರಡೂ ಪ್ರಕರಣಗಳನ್ನು ತನಿಖೆಗೆ ಒಪ್ಪಿಸಲಾಗಿದೆ. ವಾಲ್ಮೀಕಿ ಪ್ರಕರಣದಲ್ಲಂತೂ, ಕೇಂದ್ರದ ತನಿಖಾ ಸಂಸ್ಥೆಗಳೇ ತನಿಖೆ ನಡೆಸುತ್ತಿದೆ. ಬಿಜೆಪಿ ಪಕ್ಷದ್ದೇ ನೂರಾರು ಭ್ರಷ್ಟಾಚಾರದ ಪ್ರಕರಣವನ್ನು ಈಗಾಗಲೇ ಕಾಂಗ್ರೆಸ್‌ ಪಕ್ಷ ಮುಂದಿಟ್ಟಿದೆ. ಇಷ್ಟಾದರೂ, ರಾಜಕಾರಣಕ್ಕಾಗಿ, ರಾಜಕೀಯ ಅಸ್ತಿತ್ವಕ್ಕಾಗಿ ಬಿಜೆಪಿ ಪಾದಯಾತ್ರೆ ಮಾಡುತ್ತಿದೆ. ಅದು ಯಾವ ಸಂದರ್ಭದಲ್ಲಿ? ರಾಜ್ಯ ಪ್ರಕೃತಿ ವಿಕೋಪದಿಂದ ನರಳುತ್ತಿರುವಾಗ. ಈಗ ಈ ಯಾತ್ರೆಯ ಪುರುಷಾರ್ಥವಾದರೂ ಏನು? “ಎಂದು ರಾಜಕೀಯ ವಿಶ್ಲೇಷಕರು ಪ್ರಶ್ನಿಸುತ್ತಿದ್ದಾರೆ.

ಮೂಡಾ ಹಗರಣ ಹಾಗೂ ವಾಲ್ಮೀಕಿ ನಿಗಮದಲ್ಲಾದ ಅಕ್ರಮಗಳ ಹಗರಣವನ್ನು ಖಂಡಿಸಿ, ಬಿಜೆಪಿ-ಜೆಡಿಎಸ್‌ ಪಕ್ಷಗಳು ಆಗಸ್ಟ್‌ 3ರಿಂದ ಬೆಂಗಳೂರಿನಿಂದ ಮೈಸೂರಿನವರೆಗೂ ಪಾದಯಾತ್ರೆಯನ್ನು ಹಮ್ಮಿಕೊಂಡಿದೆ. ವಿರೋಧ ಪಕ್ಷದ ನಾಯಕ ಆರ್.‌ ಅಶೋಕ್‌ ಮತ್ತು ಬಿಜೆಪಿಯ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಈ ಪಾದಯಾತ್ರೆ ನಡೆಯಲಿದೆ. ಆದರೆ ವಿರೋಧ ಪಕ್ಷಗಳ ಪಾದಯಾತ್ರೆಗೆ ಆರಂಭಿಕ ಹಂತದಲ್ಲಿಯೇ ವಿಘ್ನಗಳು ಎದುರಾಗಿವೆ. ಅದರಲ್ಲೂ, ಆಡಳಿತ ಪಕ್ಷದಿಂದ ಪಾದಯಾತ್ರೆಗೆ ಅಡ್ಡಿಯಾಗುವ ಬದಲು ಸ್ವಪಕ್ಷೀಯರೇ, ಈ ಪಾದಯಾತ್ರೆಗೆ ಅಡ್ಡಗಾಲು ಹಾಕುತ್ತಿದ್ದಾರೆ.

ಪಾದಯಾತ್ರಾ ಪ್ರಹಸನ

ಈ ಪಾದಯಾತ್ರೆಗೆ ಬಿಜೆಪಿಯ ಇಬ್ಬರು ಹಿರಿಯ ನಾಯಕರು ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಪೈಕಿ, ಬಿಜೆಪಿ ಶಾಸಕ, ವಿವಾದಾತ್ಮಕ ನಾಯಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಪಾದಯಾತ್ರೆಯ ಮೂಲ ಉದ್ದೇಶವನ್ನೇ ಪ್ರಶ್ನೆ ಮಾಡಿದ್ದಾರೆ. ಪಕ್ಷದೊಳಗಿನ ಯಡಿಯೂರಪ್ಪ ವಿರೋಧಿ ಗುಂಪನ್ನು ಮಣಿಸಿ, ಪಾದಯಾತ್ರೆಯನ್ನು ಯಶಸ್ವಿಗೊಳಿಸುವುದು ಈ ಇಬ್ಬರು ʻಯುವʼ ನಾಯಕರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಈ ಕುರಿತು ಹಿರಿಯರೊಂದಿಗೆ, ಭಿನ್ನಾಭಿಪ್ರಾಯಿಗಳೊಂದಿಗೆ ಎಷ್ಟೇ ಮಾತುಕತೆ ನಡೆಸಿದರೂ, ಅದು ಫಲ ನೀಡುವಂತೆ ಕಾಣುತ್ತಿಲ್ಲ. ಯತ್ನಾಳ್‌ ನೀಡಿರುವ ಮತ್ತೊಂದು ಹೇಳಿಕೆ, ಕಾಂಗ್ರೆಸ್‌ ಪಕ್ಷಕ್ಕೆ, ವಿಶೇಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಧನಾತ್ಮಕವಾಗಿ (positive) ಆಗಿ ನೆರವಾಗುವ ಸಾಧ್ಯತೆಗಳಿವೆ. “ಈ ಪಾದಯಾತ್ರೆಗೆ ಪರೋಕ್ಷವಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಆಶೀರ್ವಾದವಿದೆ. ವಿರೋಧಪಕ್ಷಗಳು ಪಾದಯಾತ್ರೆ ನಡೆಸಿ, ಅದರಿಂದ ಸಿದ್ದರಾಮಯ್ಯನವರ ವರ್ಚಸ್ಸು ಕುಸಿದಲ್ಲಿ, ತಮಗೆ ರಾಜಕೀಯ ಲಾಭವಾಗಬಹುದೆಂದು, ತಾವು ಎರಡನೇ ಅವಧಿಗೆ ಮುಖ್ಯಮಂತ್ರಿಯಾಗುವ ಸಾಧ್ಯತೆ ಹೆಚ್ಚುತ್ತದೆ ಎಂದು ಶಿವಕುಮಾರ್‌, ವಿರೋಧ ಪಕ್ಷಗಳಿಗೆ ಪಾದಯಾತ್ರೆ ನಡೆಸುವಂತೆ ಕುಮ್ಮಕ್ಕು ನೀಡುತ್ತಿದ್ದಾರೆ” ಎಂದು ಯತ್ನಾಳ್‌ ಹೊಸ ವಿವಾದವೊಂದನ್ನು ಸೃಷ್ಟಿಸಿದ್ದಾರೆ.

“ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ವಿಧಾನ ಮಂಡಲದ ಕಲಾಪದಲ್ಲಿಯೇ ವಿರೋಧ ಪಕ್ಷದ ನಾಯಕ ಆರ್.‌ ಅಶೋಕ್‌ ಅವರ ಪಕ್ಷದ ನಿಷ್ಠೆ ಮತ್ತು ನಿಯತ್ತನ್ನು ಪ್ರಶ್ನಿಸಿ ಇತ್ತೀಚೆಗೆ ಗೊಂದಲ ಸೃಷ್ಟಿ ಮಾಡಿದ್ದರು. “ಇವರದೆಲ್ಲ ಹೊಂದಾಣಿಕೆಯ ರಾಜಕಾರಣ” ಎಂದು ಕಿಡಿ ಕಾರಿದ್ದರು. ಬಿಜೆಪಿ ನಡೆಸಲು ಮುಂದಾಗಿರುವ ಪಾದಯಾತ್ರೆಯ ಬಗ್ಗೆ ಯತ್ನಾಳ್ ಕೂಡಾ ಲೇವಡಿ ಮಾಡಿದ್ದರು. ಇದು ಪಾದಯಾತ್ರೆಯಲ್ಲ, ಆ ಹೆಸರಿನಲ್ಲಿ ನಡೆಯುವ ದೊಡ್ಡ ನಾಟಕ ಎಂದು ಜರಿದಿದ್ದರು. ಯತ್ನಾಳ್‌ ನಂತರ ಮಾಜಿ ಸಚಿವ ಅರವಿಂದ ನಿಂಬಾವಳಿ ಕೂಡ ಪಕ್ಷದ ನಾಯಕರ ನಡುವೆ ಸಾಮರಸ್ಯದ ಕೊರತೆ ಕಾಡುತ್ತಿದೆ. ವಿರೋಧ ಪಕ್ಷವಾಗಿ ಬಿಜೆಪಿ ಸಂಪೂರ್ಣವಾಗಿ ವಿಫಲವಾಗಿದೆ ಎಂದಿರುವುದು, ಪಕ್ಷಕ್ಕೆ ಸಾಕಷ್ಟು ಮುಜುಗರವನ್ನುಂಟು ಮಾಡಿ, ಇಡೀ ಪಾದಯಾತ್ರೆ ಒಂದು ರಾಜಕೀಯ ಪ್ರಹಸನವಾಗಿ ಜನರಿಗೆ ಕಾಣಲು ಆರಂಭವಾಗಿದೆ”, ಎಂದು ಹೆಸರು ಬಹಿರಂಗ ಪಡಿಸಲು ಬಯಸದ ಬಿಜೆಪಿಯ ಹಿರಿಯ ನಾಯಕರೇ ಹೇಳಿದ್ದಾರೆ.

ಕೂಡಲ ಸಂಗಮ-ಬಳ್ಳಾರಿ ಪಾದಯಾತ್ರೆ

ಈ ನಡುವೆ ವಿವಾದಾತ್ಮಕ ಶಾಸಕ, ರಮೇಶ್‌ ಜಾರಕಿಹೊಳಿ ಕೂಡ "ನನ್ನದೇನಿದ್ದರೂ, ಹೈಕಮಾಂಡ್‌ ಮಟ್ಟದ ರಾಜಕಾರಣ. ನಾನು ಮತ್ತು ಯತ್ನಾಳ್‌ ಇನ್ನೊಂದು ಪಾದಯಾತ್ರೆ ನಡೆಸುತ್ತೇವೆ. ಅದರ ಬಗ್ಗೆ ಈಗಾಗಲೇ ಮಾತುಕತೆ ನಡೆದಿದೆ ಎಂದು ಮತ್ತಷ್ಟ ವಿವಾದವನ್ನು ಸೃಷ್ಟಿ ಮಾಡಿದ್ದಾರೆ. ಇದು ಕೂಡಲ ಸಂಗಮದಿಂದ ಬಳ್ಳಾರಿ ವರೆಗಿನ ಪಾದಯಾತ್ರೆ ಎಂದು ಸುಳಿವು ಬಿಟ್ಟುಕೊಟ್ಟಿದ್ದಾರೆ.

ಮುಡಾ ಪ್ರಕರಣಕ್ಕಿಂತ ಮುಖ್ಯವಾದದ್ದು ವಾಲ್ಮೀಕಿ ಪ್ರಕರಣ. ಅದಕ್ಕೆ ಸಂಬಂಧಿಸಿದಂತೆ ಕೂಡಲ ಸಂಗಮ - ಬಳ್ಳಾರಿ ಪಾದಯಾತ್ರೆ ಆಗಬೇಕಿದೆ. ನಮ್ಮದೇನಿದ್ದರೂ, ದೆಹಲಿ ಮಟ್ಟದಲ್ಲಿ ಮಾತುಕತೆ, ರಾಜ್ಯಾಧ್ಯಕ್ಷರ ಮಾತು ನಮಗೆ ಅನ್ವಯವಾಗುವುದಿಲ್ಲ. ಪರಿಶಿಷ್ಟರ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದ ಹಣವನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ. ನಮ್ಮದು ರಾಜ್ಯದಲ್ಲಿ ನಾಲ್ಕನೇ ಅತಿದೊಡ್ಡ ಸಮುದಾಯ ಎಂದು ರಮೇಶ್ ಜಾರಕಿಹೊಳಿ ತಮ್ಮ ಕೂಡಲ ಸಂಗಮ-ಬಳ್ಳಾರಿ ಪಾದಯಾತ್ರೆಯ ಮಹತ್ವವನ್ನು ಎತ್ತಿ ಹಿಡಿದಿದ್ದಾರೆ.

“ಮುಡಾ ಹಗರಣ ಎನ್ನುವುದು ಕೆಲವು ಪ್ರದೇಶಕ್ಕೆ ಮಾತ್ರ ಸೀಮಿತವಾಗಿರುವುದು. ಆದರೆ, ಪರಿಶಿಷ್ಟರ ನಿಧಿ ದುರ್ಬಳಕೆ ಇಡೀ ರಾಜ್ಯಕ್ಕೆ ಸಂಬಂಧಿಸಿದ್ದು. ಹಾಗಾಗಿ, ಮೈಸೂರು ಪಾದಯಾತ್ರೆಗೆ ಮುನ್ನ ಕೂಡಲ ಸಂಗಮ - ಬಳ್ಳಾರಿ ಯಾತ್ರೆ ನಡೆಯಬೇಕು. ನಾವು ನಡೆಸಲು ಉದ್ದೇಶಿಸಿರುವ ಪಾದಯಾತ್ರೆಗೆ ಬಿಜೆಪಿಯ ನಾಯಕರು ಸಾಥ್ ನೀಡಲಿದ್ದಾರೆ” ಎಂದು ರಮೇಶ್ ಜಾರಕಿಹೊಳಿ ಸಮರ್ಥಿಸಿಕೊಂಡಿದ್ದಾರೆ. ಜಾರಕಿಹೊಳಿ - ಯತ್ನಾಳ್ ನಡೆಸಲು ಉದ್ದೇಶಿಸಿರುವ ಪಾದಯಾತ್ರೆಯ ರೂಪುರೇಷೆ ಸಿದ್ದಗೊಳ್ಳುತ್ತಿದೆ ಎಂದು ಖುದ್ದು ಜಾರಕಿಹೊಳಿ ಅವರೇ ಹೇಳುತ್ತಿದ್ದಾರೆ. ಆದರೆ, ಈ ವಿಚಾರಕ್ಕೆ ಸಂಬಂಧಿಸಿದಂತೆ, ವಿಜಯೇಂದ್ರ ಅಥವಾ ಅಶೋಕ್ ಇದುವರೆಗೆ ಚಕಾರವೆತ್ತಿಲ್ಲ ಎನ್ನುವುದು ಗಮನಿಸಬೇಕಾದ ಸಂಗತಿ.

ಮೂಡಾ ಪಾದಯಾತ್ರೆಯಲ್ಲಿ ರಮೇಶ್‌ ಜಾರಕಿಹೊಳಿ, ಬಸವನಗೌಡ ಪಾಟೀಲ್‌ ಯತ್ನಾಳ್‌, ಬಿ. ಶ್ರೀರಾಮುಲು ಅವರು ಪಾಲ್ಗೊಳ್ಳುವುದು ಅನುಮಾನ ಎನ್ನುವ ಮಾತುಗಳು ಬಿಜೆಪಿ ವಲಯದಲ್ಲಿಯೇ ಕೇಳಿ ಬರುತ್ತಿದೆ. “ಮೂಡಾ ಯಾತ್ರೆಗೆ ಸಂಬಂಧಿಸಿದಂತೆ, ಅಶೋಕ್‌ ಮತ್ತು ವಿಜಯೇಂದ್ರ ಪಕ್ಷದ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಹಾಗಾಗಿ ಕೂಡಲ ಸಂಗಮದಿಂದ ಬಳ್ಳಾರಿಗೆ ಪಾದಯಾತ್ರೆ ನಡೆಸುವುದು ನಮಗೆ ಅನಿವಾರ್ಯವಾಗಿದೆ” ಎಂದು ರಮೇಶ್‌ ಜಾರಕಿಹೊಳಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ವಿಜಯೇಂದ್ರ ದುರ್ಬಲ ರಾಜ್ಯಾಧ್ಯಕ್ಷ

ವಿಜಯೇಂದ್ರ ಕಳೆದ ನವೆಂಬರ್‌ನಲ್ಲಿ ಪಕ್ಷದ ರಾಜ್ಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗಿನಿಂದಲೂ, ಯಡಿಯೂರಪ್ಪ ಮತ್ತು ಪಕ್ಷದ ಒಂದಷ್ಟು ಹಿರಿಯರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಪಕ್ಷದ ಇದುವರೆಗಿನ ರಾಜ್ಯ ಅಧ್ಯಕ್ಷರಿಗೆ ಹೋಲಿಸಿದರೆ ವಿಜಯೇಂದ್ರ ಅತ್ಯಂತ ದುರ್ಬಲ ಅಧ್ಯಕ್ಷ ಎನ್ನುವುದು ಪಕ್ಷದೊಳಗಿನ ಮಾತು. ಹಾಗಾಗಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿ ಸಿ.ಟಿ ರವಿ ಹಾಗೂ ರವಿಕುಮಾರ್‌ ಅವರನ್ನು ವಿಜಯೇಂದ್ರ ಪಸ್ತಾಪಿಸಿದ್ದರೂ, ಹೈಮಾಂಡ್‌ ಅದಕ್ಕೆ ಬೆಲೆ ನೀಡದೆ, ಚಲವಾದಿ ನಾರಾಯಣಸ್ವಾಮಿಯವನ್ನು ಆಯ್ಕೆ ಮಾಡಿದ್ದೇ ಇದಕ್ಕೆ ನಿದರ್ಶನ ಎನ್ನುವುದು ಪಕ್ಷದ ಹಿರಿಯ ನಾಯಕರ ಅಭಿಪ್ರಾಯ. ಈ ನಡುವೆ ಎಚ್‌ ಡಿ ಕುಮಾರಸ್ವಾಮಿ ವಿರೋಧ ಪಕ್ಷದಲ್ಲಿ ಪ್ರಬಲರಾಗಿ ಎಲ್ಲವನ್ನೂ ನಿಯಂತ್ರಿಸುತ್ತಿರುವುದು. ಬಿಜೆಪಿಯ ಹಿರಿಯ ನಾಯಕರಿಗೆ ನುಂಗಲಾರದ ತುತ್ತಾಗಿದೆ. ಬಿಜೆಪಿ ನಾಯಕರಿಗಿಂತಲೂ, ಮಿತ್ರ ಪಕ್ಷವಾಗಿ ಚುನಾವಣೆಯಲ್ಲಿ ಗೆದ್ದು ಬೀಗುತ್ತಿರುವ ಕುಮಾರಸ್ವಾಮಿ ಅವರಿಗೆ ದಕ್ಕುತ್ತಿರುವ ಪಾಶಸ್ತ್ಯ ರಾಜ್ಯದ ಹಿರಿಯ ನಾಯಕರಿಗೆ ಇರುಸುಮುರುಸು ಉಂಟು ಮಾಡುತ್ತಿದೆ.

ಪಕ್ಷ ತೆಗೆದುಕೊಂಡಿರುವ ಈ ಪಾದಯಾತ್ರೆಯ ತೀರ್ಮಾನದ ಬಗ್ಗೆ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣ ಸ್ವಾಮಿ ಅವರಿಗೇ ಅಸಮಾಧಾನವಿದೆ. “ಪ್ರಬಲ ಹಾಗೂ ಪ್ರಮುಖ ವಿರೋಧ ಪಕ್ಷವಾಗಿ ಬಿಜೆಪಿ ರಾಜ್ಯದ ಅತಿವೃಷ್ಟಿ ಸಮಸ್ಯೆಗೆ ಸ್ಪಂದಿಸಿ, ರಾಜ್ಯ ಸರ್ಕಾರದ ವೈಫಲ್ಯವನ್ನು ಎತ್ತಿ ಹಿಡಿಯಬೇಕಿತ್ತು. ಆದರೆ ಅವರು ಮೂಡಾ ಪ್ರಕರಣವನ್ನು ಕೈಗೆತ್ತಿಕೊಂಡು ಪಾದಯಾತ್ರೆ ನಡೆಸಲು ಹೊರಟಿರುವುದು ಅನೇಕ ಹಿರಿಯ ನಾಯಕರಿಗೆ ಅಸಮಾಧಾನವಾಗಿದೆ” ಎಂದು ಅವರು ಹೇಳಿದ್ದಾರೆ.

ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ಮತ್ತು ನಾಯಕರಿಗೆ ಇಲ್ಲೊಂದು ಪ್ರಶ್ನೆ ಕಾಡುತ್ತಿದೆ. ಕೂಡಲ ಸಂಗಮ - ಬಳ್ಳಾರಿ ಪಾದಯಾತ್ರೆಯ ಬಗ್ಗೆ ರಾಜ್ಯಾಧ್ಯಕ್ಷರು, ವಿಪಕ್ಷದ ನಾಯಕರಿಗೆ ಗೊತ್ತಿದೆಯೋ ಇಲ್ಲವೋ? ದಿನಾಂಕ ಇನ್ನೂ ಅಂತಿಮವಾಗಿದೆಯೋ ಇಲ್ಲವೋ? ಈ ಎಲ್ಲ ಸಮಸ್ಯೆಗಳ ಹಿನ್ನೆಲೆಯಲ್ಲಿ ಗಮನಿಸಿದರೆ, ಬೆಂಗಳೂರು-ಮೈಸೂರಿನ ಆಗಸ್ಟ್‌ 3ರ ಪಾದಯಾತ್ರೆ ಬಗ್ಗೆ ಬಿಜೆಪಿ ನಾಯಕಲ್ಲಿ ಒಗ್ಗಟ್ಟಿಲ್ಲ ಎನ್ನುವ ಸ್ಪಷ್ಟ ಸಂದೇಶವಂತೂ ರವಾನೆಯಾಗಿದೆ..

Tags:    

Similar News