ಫೆಡರಲ್ ಸಮೀಕ್ಷೆ | ಕರ್ನಾಟಕದಲ್ಲಿ ಬಿಜೆಪಿಗೆ ಮತದಾರರ ಒಲವು; ಒಡಿಶಾದಲ್ಲಿ ಬಿಜೆಡಿಗೆ ಆಘಾತ

ಫೆಡರಲ್-ಪುತಿಯತಲೈಮುರೈ-ಆಪ್ಟ್ 2024 ರ ಚುನಾವಣಾ ಪೂರ್ವ ಸಮೀಕ್ಷೆ ಪ್ರತಿಪಕ್ಷ ಆಡಳಿತವಿರುವ ಕರ್ನಾಟಕ ಮತ್ತು ಒಡಿಶಾ ರಾಜ್ಯಗಳಲ್ಲಿ ಕಾಂಗ್ರೆಸ್‌ ಹರ್ಷಚಿತ್ತವಾಗುವಂಥ ವಾತಾವರಣವಿರುವಂತೆ ತೋರುತ್ತಿಲ್ಲ ಎಂಬ ಸಂಗತಿಯನ್ನು ಹೊರಗೆಡವಿದೆ.;

Update: 2024-02-21 13:55 GMT

ಬಿಜೆಪಿಗೆ ಅನಿರೀಕ್ಷಿತ ನಿರೀಕ್ಷೆ

ಫೆಡರಲ್-ಪುತಿಯತಲೈಮುರೈ-ಆಪ್ಟ್ 2024 ರ ಚುನಾವಣಾ ಪೂರ್ವ ಸಮೀಕ್ಷೆ ಫಲಿತಾಂಶಗಳ ಪ್ರಕಾರ ಬಿಜೆಪಿ ಅನಿರೀಕ್ಷಿತವನ್ನು ನಿರೀಕ್ಷಿಸಬಹುದು ಎನ್ನಿಸುತ್ತಿದೆ. ಅಂದರೆ, ಬಿಜೆಪಿ ತಾನು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಮತಗಳಿಕೆಯ ಸಾಧ್ಯತೆಗಳು ದಟ್ಟವಾಗಿದೆ.

ಕೆಲವೇ ತಿಂಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಬಹುಮತಗಳಿಸಿ ಅಧಿಕಾರ ಸೂತ್ರ ಹಿಡಿದ ಕಾಂಗ್ರೆಸ್‌ ಪಕ್ಷ ಬಿಜೆಪಿಯ ಮುಂದೆ ಮಂಕಾಗುವ ಸಾಧ್ಯತೆಗಳು ಕಂಡುಬರುತ್ತಿದೆ. ಹಾಗಾಗಿಯೇ ಬಿಜೆಪಿ ಅನಿರೀಕ್ಷಿತವನ್ನು ನಿರೀಕ್ಷಿಸಬಹುದೆನ್ನಬಹುದು. ಇದೇ ರೀತಿ ನವೀನ್‌ ಪಟ್ನಾಯಕ್‌ ನೇತೃತ್ವದ ಬಿಜು ಜನತಾದಳ (ಬಿಜೆಡಿ) ಸ್ಥಿತಿ ಕರ್ನಾಟಕ್ಕಿಂತ ಭಿನ್ನವಾಗಿರುವಂತೆ ತೋರುವುದಿಲ್ಲ.

ಫೆಡರಲ್-ಪುತಿಯತಲೈಮುರೈ-ಆಪ್ಟ್ 2024ರ ಚುನಾವಣಾ ಪೂರ್ವ ಸಮೀಕ್ಷೆಯು ಕರ್ನಾಟಕದಲ್ಲಿ ಬಿಜೆಪಿ ಮತ್ತೆ ತನ್ನ ಅಧಿಪತ್ಯ ಸ್ಥಾಪಿಸುವ ಸಾಧ್ಯತೆಗಳು ದಟ್ಟವಾಗಿದ್ದು, ಬರಲಿರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಲೋಕಸಭಾ ಸ್ಥಾನಗಳಲ್ಲಿ 26 ಸ್ಥಾನಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಸಾಧ್ಯತೆಗಳನ್ನು ಮತದಾರರು ಸೂಚಿಸಿದ್ದಾರೆ. ಹಾಗೆಯೇ ಒಡಿಶಾದ 21 ಸ್ಥಾನಗಳ ಪೈಕಿ 20 ಸ್ಥಾನಗಳು ಬಿಜೆಪಿಯ ಪಾಲಾಗಲಿದ್ದು, ಉಳಿದ ಒಂದು ಸ್ಥಾನ ಮಾತ್ರ ಬಿಜೆಡಿ ಗಳಿಸಲಿದೆ. ಇದು ಬಿಜೆಡಿಯ ಕನಿಷ್ಠ ಸಾಧನೆಯಾಗಿದ್ದು, ನವೀನ್‌ ಪಟ್ನಾಯಕ್ ಗೆ ಮುಖಭಂಗವೆಂದು ಭಾವಿಸಬಹುದು. ಹೀಗೆಂದು ಸಮೀಕ್ಷೆಯಲ್ಲಿ ಮತದಾರರು ಹೇಳುತ್ತಿದ್ದಾರೆ.

ಕರ್ನಾಟಕ: ಇತಿಹಾಸ ಪುನರಾವರ್ತನೆ?

ಕರ್ನಾಟಕ ರಾಜಕೀಯ ಇತಿಹಾಸದ ಪುಟಗಳನ್ನು ಹಿಂದಕ್ಕೆ ತಿರುಗಿಸಿದರೆ, ಫೆಡರಲ್ ಸಮೀಕ್ಷೆಯು ಆಶ್ಚರ್ಯವನ್ನೇನೂ ಉಂಟುಮಾಡುವುದಿಲ್ಲ. ಇದಕ್ಕೆ ಕಾರಣವೂ ಇದೆ. ಲೋಕಸಭೆ ಮತ್ತು ವಿಧಾನ ಸಭೆಗೆ ತನ್ನ ಪ್ರತಿನಿಧಿಗಳನ್ನು ಆಯ್ಕೆ ಮಾಡುವಾಗ ಕರ್ನಾಟಕದ ಮತದಾರರಿಗೆ ಬೇರೆ ಬೇರೆಯದೇ ಆದ ಆದ್ಯತೆಗಳಿರುವುದು ಈಗಾಗಲೇ ಸ್ಪಷ್ಟವಾಗಿದೆ. ಹಾಗಾಗೇ, ಕಳೆದ 2019 ಕ್ಕೆ ಹೋಲಿಸಿದರೆ ತನ್ನ ಗಳಿಕೆಯ ಸ್ಥಾನವನ್ನು 25ರಿಂದ 26ಕ್ಕೇರಿಸಿಕೊಂಡಿದೆ. ಬಿಜೆಪಿ ತನ್ನ ಮತಗಳನ್ನು ಶೇ.51.67 ರಿಂದ 57.27 ಕ್ಕೆ ಹೆಚ್ಚಿಸಲಿದೆ ಎಂದು ಸಮೀಕ್ಷೆ ಹೇಳುತ್ತದೆ, ಇದು ಶೇಕಡಾ 6 ರಷ್ಟು ಹೆಚ್ಚಾಗುತ್ತದೆ. ವಾಸ್ತವವಾಗಿ, 2009 ರಿಂದ ಸಂಸತ್ತಿನ ಚುನಾವಣೆಯಲ್ಲಿ ಬಿಜೆಪಿ ತನ್ನ ಮತಗಳ ಪ್ರಮಾಣವನ್ನು ಹೆಚ್ಚಿಸಿಕೊಳ್ಳುತ್ತಲೇ ಬಂದಿದೆ.


135 ಸ್ಥಾನಗಳನ್ನು ಗಳಿಸಿ ಅತ್ಯುತ್ತಮ ಸಾಧನೆ ಮಾಡಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್‌ ನ ಮತಗಳಿಕೆಯ ಪ್ರಮಾಣ ಶೇಕಡಾ 4 (32.11 ರಿಂದ 28.45) ರಷ್ಟು ಕಡಿಮೆಯಾಗಲಿದೆ ಮತ್ತು ಕೇವಲ ಎರಡು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. 2019 ರಲ್ಲಿ ಕಾಂಗ್ರೆಸ್ ಕೇವಲ ಒಂದು ಸ್ಥಾನವನ್ನು ಗಳಿಸಿತ್ತು.


ಸಮೀಕ್ಷೆಯು ಕನಿಷ್ಠ 68 ಪ್ರತಿಶತದಷ್ಟು ಜನರು ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಬೇಕೆಂದು ಬಯಸುತ್ತಾರೆ ಎಂದು ಹೇಳುತ್ತದೆ, 35 ಪ್ರತಿಶತದಷ್ಟು ಜನರು ರಾಹುಲ್ ಗಾಂಧಿ ದೇಶದ ಪ್ರಧಾನಿಯಾಗಲಿ ಎಂದು ಸೂಚಿಸಿದ್ದಾರೆ.

ಫೆಡರಲ್ ಸಮೀಕ್ಷೆಯ ಪ್ರಕಾರ, ದಯನೀಯ ಸ್ಥಿತಿಯಲ್ಲಿರುವುದು ಮಾಜಿ ಪ್ರಧಾನಿ ಎಚ್.‌ ಡಿ. ದೇವೇಗೌಡರ ನೇತೃತ್ವದ ಜೆಡಿಎಸ್ ಪಕ್ಷ.‌ ಜೆಡಿಎಸ್‌ ಮತಗಳಿಕೆಯ ಪ್ರಮಾಣ ಹಿಂದಿನ ಚುನಾವಣೆಗೆ ಹೋಲಿಸಿದರೆ ಶೇ 9.74 ರಿಂದ 1 ಕ್ಕೆ ಇಳಿದಿದೆ. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡರೂ, ಒಂದೇ ಒಂದು ಸ್ಥಾನವನ್ನು ಗೆಲ್ಲುವುದು ಜೆಡಿಎಸ್‌ ಗೆ ಸಾಧ್ಯವಿಲ್ಲ ಎಂದು ಮತದಾರರು ಸೂಚಿಸುತ್ತಿರುವಂತೆ ತೋರುತ್ತದೆ.



ಒಡಿಶಾ: ಬಿಜೆಡಿಯ ಹಂಸಗೀತೆ?

ಒಂದು ರೀತಿಯಲ್ಲಿ, ಒಡಿಶಾದಲ್ಲಿ ಲೋಕಸಭೆ ಚುನಾವಣೆಯಲ್ಲಿ ಯಾರು ಗೆದ್ದರೂ ಪರವಾಗಿಲ್ಲ, ಏಕೆಂದರೆ ಕೇಂದ್ರದಲ್ಲಿ ಎನ್ ಡಿಎ ಮತ್ತೆ ಅಧಿಕಾರಕ್ಕೆ ಬಂದರೆ, ಬಿಜೆಡಿ ಹೆಚ್ಚಾಗಿ ಬಿಜೆಪಿಯ ಪರವಾಗಿ ನಿಲ್ಲುತ್ತದೆ ಎಂದು ನಿರೀಕ್ಷಿಸಲಾಗಿದೆ. ಅಲ್ಲದೆ, ಬಿಜೆಡಿ ಇತ್ತೀಚೆಗೆ ಬಿಜೆಪಿಗೆ ರಾಜ್ಯಸಭಾ ಸ್ಥಾನವನ್ನು ಗೆಲ್ಲಲು ಸಹಾಯ ಮಾಡಿತು (ರೈಲ್ವೆ ಸಚಿವೆ ಆಶಿವಿನಿ ವೈಷ್ಣವ್).

ಆದರೆ ಬಿಜೆಪಿ ಮತ್ತು ಬಿಜೆಡಿ ತೀವ್ರ ಪ್ರತಿಸ್ಪರ್ಧಿಗಳಾಗಿರುವ ರಾಜ್ಯ ಮಟ್ಟದಲ್ಲಿ ಇದು ಬೇರೆಯದೇ ಕಥನವನ್ನು ತೆರೆದಿಡುತ್ತಿದೆ. ಆದಾಗ್ಯೂ, ಫೆಡರಲ್ ಸಮೀಕ್ಷೆಯು ಬಿಜೆಪಿ, ಬಿಜೆಡಿ ನೆಲೆಗಟ್ಟನ್ನು ಅಲ್ಲಾಡಿಸುತ್ತಿರುವ ಭಾವನೆ ಮೂಡುತ್ತಿದೆ. ಕೇವಲ ಒಂದು ಸ್ಥಾನವನ್ನು ಹೊರತುಪಡಿಸಿ ಎಲ್ಲಾ ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಡಿಯನ್ನು ಮೂಲೆಗುಂಪು ಮಾಡಿದೆ. ಅಂದರೆ 21 ರಲ್ಲಿ 20. ಬಿಜೆಪಿಗೆ ದೊರೆತರೆ, ಬಿಜೆಡಿ ಒಂದು ಸ್ಥಾನದಿಂದ ಸಮಾಧಾನ ಮಾಡಿಕೊಳ್ಳಬೇಕಿದೆ.




ಮತ ಹಂಚಿಕೆಯ ಕಥೆಯು ಸಹ ಭಿನ್ನವಾಗಿಲ್ಲ, ಬಿಜೆಡಿ ಮತಗಳಿಕೆಯ ಪ್ರಮಾಣದಲ್ಲಿ ದೊಡ್ಡ ಕುಸಿತ ಕಂಡಿದೆ ಎಂಬುದನ್ನು ಸಮೀಕ್ಷೆ ಸೂಚಿಸುತ್ತದೆ.

ಬಿಜೆಪಿಯ ಮತ ಹಂಚಿಕೆಯು ಕನಿಷ್ಠ 16 ಪ್ರತಿಶತದಷ್ಟು ಹೆಚ್ಚಾಗಲಿದೆ ಎಂದು ಸಮೀಕ್ಷೆ ಹೇಳುತ್ತದೆ, ಆದರೆ ಬಿಜೆಡಿ 23 ಪ್ರತಿಶತದಷ್ಟು (42.80 ರಿಂದ 19.35 ಕ್ಕೆ) ಕುಸಿಯುವ ನಿರೀಕ್ಷೆಯಿದೆ.

ಒಟ್ಟಾರೆಯಾಗಿ ಕಾಂಗ್ರೆಸ್‌ ಒಡಿಶಾದಲ್ಲಿ ಲೋಕಸಭಾ ಚುನಾವಣೆಯ ಅಖಾಡದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಶೇ 10ರಷ್ಟು ಮತಗಳನ್ನು ಗಳಿಸಿದರೂ ಒಂದೇ ಒಂದು ಸ್ಥಾನವನ್ನೂ ಗೆದ್ದುಕೊಳ್ಳುವ ಸಾಧ್ಯತೆ ಕಂಡುಬರುತ್ತಿಲ್ಲ. ಇದು ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಮತದಾರರ ಮನದಾಳ. 2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಒಂದು ಸ್ಥಾನವನ್ನು ಗೆದ್ದುಕೊಂಡಿತ್ತು ಎಂಬುದನ್ನು ಮರೆಯಲು ಸಾಧ್ಯವಿಲ್ಲ.

ಹಿಂದಿನ ಸಮೀಕ್ಷೆ-ಸಂಬಂಧಿತ ಲೇಖನ ಓದಲು ಇಲ್ಲಿ ಕ್ಲಿಕ್ ಮಾಡಿ.

Tags:    

Similar News