Namma Metro| 11 ಅಂತಸ್ತಿನಷ್ಟು ಎತ್ತರದ ಮೆಟ್ರೋ ನಿಲ್ದಾಣ! ದೇಶದಲ್ಲೇ ಮೊದಲು!
ನಮ್ಮ ಮೆಟ್ರೋ ಯೋಜನೆ 3ರ ಅಡಿಯಲ್ಲಿ ನಿರ್ಮಾಣವಾಗಲಿರುವ ಎರಡು ಮೆಟ್ರೋ ನಿಲ್ದಾಣಗಳು ದೇಶದ ಅತಿ ಎತ್ತರದ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಜಯದೇವ ಆಸ್ಪತ್ರೆ ನಿಲ್ದಾಣಕ್ಕಿಂತಲೂ ಎತ್ತರವಾಗಿರಲಿವೆ.
ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆ ರಾಷ್ಟ್ರದಲ್ಲಿ ಹೊಸ ದಾಖಲೆ ಸೃಷ್ಟಿಸಲು ಸಿದ್ಧವಾಗಿದೆ. ತುಮಕೂರು ರಸ್ತೆಯಲ್ಲಿ ನಿರ್ಮಾಣವಾಗಲಿರುವ ʼಡಬಲ್ ಡೆಕ್ಕರ್ʼ ಮೆಟ್ರೋ ನಿಲ್ದಾಣವು ಬರೋಬ್ಬರಿ 33 ಮೀಟರ್ ಎತ್ತರದಲ್ಲಿ ತಲೆಎತ್ತಲಿದೆ. ಇದು ಸರಿಸುಮಾರು 10 ರಿಂದ 11 ಅಂತಸ್ತಿನ ಕಟ್ಟಡದ ಎತ್ತರಕ್ಕೆ ಸಮನಾಗಿರುತ್ತದೆ!
ಬೆಂಗಳೂರು ಎದುರಿಸುತ್ತಿರುವ ಅತಿದೊಡ್ಡ ಸವಾಲೆಂದರೆ ಸಂಚಾರ ದಟ್ಟಣೆ. ಈ ಸಮಸ್ಯೆಗೆ ದೀರ್ಘಕಾಲೀನ ಪರಿಹಾರವಾಗಿ ರೂಪುಗೊಂಡಿರುವ 'ನಮ್ಮ ಮೆಟ್ರೋ' ಯೋಜನೆ ಇದಾಗಿದೆ!
ಬಿಎಂಆರ್‌ಸಿಎಲ್ ತನ್ನ ಮಹತ್ವಾಕಾಂಕ್ಷೆಯ 3ನೇ ಹಂತದ ಯೋಜನೆಯನ್ನು ಅನುಷ್ಠಾನಗೊಳಿಸಲು ಸಜ್ಜಾಗಿದ್ದು, ಇದು ಕೇವಲ ಸಾರಿಗೆ ಜಾಲದ ವಿಸ್ತರಣೆಯಲ್ಲದೇ, ಸಿವಿಲ್ ಎಂಜಿನಿಯರಿಂಗ್ ಲೋಕದ ವಿಸ್ಮಯವಾಗಿಯೂ ಹೊರಹೊಮ್ಮಲಿದೆ. ನಮ್ಮ ಮೆಟ್ರೋ ಯೋಜನೆ 3 ರ ಅಡಿಯಲ್ಲಿ ನಿರ್ಮಾಣವಾಗಲಿರುವ ಎರಡು ಮೆಟ್ರೋ ನಿಲ್ದಾಣಗಳು, ದೇಶದ ಅತಿ ಎತ್ತರದ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರಿನಲ್ಲೇ ಇರುವ ಜಯದೇವ ಆಸ್ಪತ್ರೆ ನಿಲ್ದಾಣಕ್ಕಿಂತಲೂ ಎತ್ತರವಾಗಿರಲಿವೆ.
ಪ್ರಸ್ತುತ, ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಜಯದೇವ ಆಸ್ಪತ್ರೆ ಮೆಟ್ರೋ ನಿಲ್ದಾಣವು 29 ಮೀಟರ್ ಎತ್ತರದಲ್ಲಿದ್ದು, ದೇಶದ ಅತಿ ಎತ್ತರದ ಮೆಟ್ರೋ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ರಸ್ತೆ, ಮೇಲ್ಸೇತುವೆ ಮತ್ತು ಮೆಟ್ರೋ ಮಾರ್ಗಗಳನ್ನು ಒಳಗೊಂಡ ಸಂಕೀರ್ಣ ರಚನೆಯಾಗಿದೆ. ಆದರೆ, ಅಭಿವೃದ್ಧಿ ಎಂಬುದು ನಿರಂತರ ಪ್ರಕ್ರಿಯೆ ಎನ್ನುವಂತೆ, 3ನೇ ಹಂತದ ಯೋಜನೆಯು ಈ ದಾಖಲೆಯನ್ನು ಮುರಿಯಲು ಸಿದ್ಧವಾಗಿದೆ. ಬಿಎಂಆರ್‌ಸಿಎಲ್ ಪ್ರಕಾರ, ತುಮಕೂರು ರಸ್ತೆಯಲ್ಲಿ ನಿರ್ಮಾಣವಾಗಲಿರುವ ಗೊರಗುಂಟೆಪಾಳ್ಯ ನಿಲ್ದಾಣವು ಬರೋಬ್ಬರಿ 33 ಮೀಟರ್ ಎತ್ತರದಲ್ಲಿ ತಲೆಎತ್ತಲಿದೆ. ಇದು ಸರಿಸುಮಾರು 10 ರಿಂದ 11 ಅಂತಸ್ತಿನ ಕಟ್ಟಡದ ಎತ್ತರಕ್ಕೆ ಸಮನಾಗಿರುತ್ತದೆ. ಇದರ ಜತೆಗೆ ಮೈಸೂರು ರಸ್ತೆ ನಿಲ್ದಾಣ ಕೂಡ ಇದೇ ಮಾದರಿಯಲ್ಲಿ ಅತ್ಯಂತ ಎತ್ತರದಲ್ಲಿ ನಿರ್ಮಾಣವಾಗಲಿದೆ. ಜಯದೇವ ನಿಲ್ದಾಣಕ್ಕಿಂತ ಸುಮಾರು 3 ರಿಂದ 4 ಮೀಟರ್ ಹೆಚ್ಚು ಎತ್ತರದಲ್ಲಿ ರೈಲು ಚಲಿಸಲಿದೆ. ಈ ಎರಡು ನಿಲ್ದಾಣಗಳು ದೇಶದ ಮೆಟ್ರೋ ಇತಿಹಾಸದಲ್ಲೇ ಹೊಸ ಮೈಲಿಗಲ್ಲಾಗಲಿವೆ.
3ನೇ ಹಂತದ ಯೋಜನೆಯ ಸಮಗ್ರ ನೋಟ (ಕಿತ್ತಳೆ ಮತ್ತು ಬೂದು ಮಾರ್ಗ)
ನಮ್ಮ ಮೆಟ್ರೋ 3ನೇ ಹಂತವು ಪ್ರಮುಖವಾಗಿ ಎರಡು ಕಾರಿಡಾರ್‌ಗಳನ್ನು ಒಳಗೊಂಡಿದೆ. ಕಿತ್ತಳೆ (ಆರೆಂಜ್) ಮಾರ್ಗ ಮತ್ತು ಗ್ರೇ (ಬೂದು) ಮಾರ್ಗಗಳು ಮೂರನೇ ಹಂತದ ಕಾರಿಡಾರ್‌ಗಳಾಗಿವೆ. ಆರೆಂಜ್ ಮಾರ್ಗವು ಜೆ.ಪಿ. ನಗರ 4ನೇ ಹಂತದಿಂದ ಕೆಂಪಾಪುರದವರೆಗೆ (ಹೊರ ವರ್ತುಲ ರಸ್ತೆ ಪಶ್ಚಿಮ ಭಾಗ)ಇರಲಿದೆ. ಇದರ ಒಟ್ಟು ಉದ್ದ 32.3 ಕಿಲೋಮೀಟರ್. ಇದು ನಗರದ ಪಶ್ಚಿಮ ಭಾಗದ ಪ್ರಮುಖ ಪ್ರದೇಶಗಳನ್ನು ಸಂಪರ್ಕಿಸುತ್ತದೆ. ಇನ್ನು ಬೂದು ಮಾರ್ಗವು ಹೊಸಹಳ್ಳಿಯಿಂದ ಮಾಗಡಿ ರಸ್ತೆ ಮೂಲಕ ಕಡಬಗೆರೆವರೆಗೆ ಇರಲಿದೆ. ಇದರ ಉದ್ದ 12.15 ಕಿಲೋಮೀಟರ್ ಆಗಿದೆ. ಯೋಜನೆಯ ಅತ್ಯಂತ ವಿಶೇಷ ಅಂಶವೆಂದರೆ 'ಡಬಲ್ ಡೆಕ್ಕರ್ ಫ್ಲೈಓವರ್' ಮಾದರಿಯಾಗಿರುತ್ತದೆ. ಒಟ್ಟು 37.151 ಕಿಲೋಮೀಟರ್ ಉದ್ದದ ಮಾರ್ಗದಲ್ಲಿ ಮೆಟ್ರೋ ರೈಲು ಮತ್ತು ರಸ್ತೆ ಮೇಲ್ಸೇತುವೆ ಒಂದೇ ಪಿಲ್ಲರ್ ಮೇಲೆ ನಿರ್ಮಾಣವಾಗಲಿವೆ. ಕೆಳಗೆ ವಾಹನಗಳು, ಅದರ ಮೇಲೆ ಮೇಲ್ಸೇತುವೆ ಮತ್ತು ಎಲ್ಲಕ್ಕಿಂತ ಮೇಲೆ ಮೆಟ್ರೋ ರೈಲು - ಹೀಗೆ ಮೂರು ಹಂತದ ಸಂಚಾರ ವ್ಯವಸ್ಥೆ ರೂಪುಗೊಳ್ಳಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ನಿಲ್ದಾಣಗಳು ಇಷ್ಟು ಎತ್ತರದಲ್ಲಿರಲು ಕಾರಣ
ಸಾಮಾನ್ಯವಾಗಿ ಮೆಟ್ರೋ ನಿಲ್ದಾಣಗಳು 12 ರಿಂದ 15 ಮೀಟರ್ ಎತ್ತರದಲ್ಲಿರುತ್ತವೆ. ಆದರೆ ಗೊರಗುಂಟೆಪಾಳ್ಯ ಮತ್ತು ಮೈಸೂರು ರಸ್ತೆ ನಿಲ್ದಾಣಗಳು ದುಪ್ಪಟ್ಟು ಎತ್ತರದಲ್ಲಿರಲು ಪ್ರಮುಖ ಕಾರಣ 'ಡಬಲ್ ಡೆಕ್ಕರ್ ಫ್ಲೈಓವರ್-ಮೆಟ್ರೋ' ಮಾದರಿಯಾಗಿದೆ.
ಬೆಂಗಳೂರಿನಂತಹ ಕಿಷ್ಕಿಂದೆಯಾದ ನಗರದಲ್ಲಿ ಪ್ರತ್ಯೇಕವಾಗಿ ಮೆಟ್ರೋ ಪಿಲ್ಲರ್ ಮತ್ತು ರಸ್ತೆ ಮೇಲ್ಸೇತುವೆ ಪಿಲ್ಲರ್ ಹಾಕುವುದು ಅಸಾಧ್ಯದ ಮಾತು. ಹೀಗಾಗಿ, ಒಂದೇ ಪಿಲ್ಲರ್ ಮೇಲೆ ರಸ್ತೆ ಮತ್ತು ಮೆಟ್ರೋ ಎರಡನ್ನೂ ನಿರ್ಮಿಸುವುದು ಅನಿವಾರ್ಯ ಮತ್ತು ಜಾಣತನದ ನಡೆಯಾಗಿದೆ. ಮೊದಲ ಹಂತದಲ್ಲಿಈಗಿರುವ ಸಾಮಾನ್ಯ ರಸ್ತೆಯಾಗಿದ್ದು, ವಾಹನ ಸಂಚಾರಕ್ಕೆ ಮುಕ್ತವಾಗಿರುತ್ತದೆ.
ಎರಡನೇ ಹಂತದಲ್ಲಿ ನೆಲಮಟ್ಟದಿಂದ ಸುಮಾರು 10-15 ಮೀಟರ್ ಎತ್ತರದಲ್ಲಿ ವಾಹನಗಳ ಸಂಚಾರಕ್ಕಾಗಿ ಮೇಲ್ಸೇತುವೆ ನಿರ್ಮಾಣವಾಗುತ್ತದೆ. ಮೂರನೇ ಹಂತದಲ್ಲಿ ಮೇಲ್ಸೇತುವೆಯ ಮೇಲೆ ಮೆಟ್ರೋ ನಿಲ್ದಾಣದ ಟಿಕೆಟ್ ಕೌಂಟರ್ ಮತ್ತು ಪ್ರಯಾಣಿಕರ ಓಡಾಟದ ಸ್ಥಳವಿರುತ್ತದೆ. ನಾಲ್ಕನೇ ಹಂತವು ಸುಮಾರು 33 ಮೀಟರ್ ಎತ್ತರದಲ್ಲಿ ಮೆಟ್ರೋ ರೈಲು ಬಂದು ನಿಲ್ಲುವ ಪ್ಲಾಟ್‌ಫಾರ್ಮ್ ಇರುತ್ತದೆ.
ಸವಾಲುಗಳು ಮತ್ತು ಎಂಜಿನಿಯರಿಂಗ್ ಕೌಶಲ್ಯ
33 ಮೀಟರ್ ಎತ್ತರದಲ್ಲಿ ನಿಲ್ದಾಣ ನಿರ್ಮಿಸುವುದು ಸುಲಭದ ಮಾತಲ್ಲ. ಇದು ಹಲವು ಸವಾಲುಗಳನ್ನು ಒಳಗೊಂಡಿರುತ್ತದೆ. ಇಷ್ಟು ಎತ್ತರದಲ್ಲಿ ಗಾಳಿಯ ವೇಗ ಮತ್ತು ಒತ್ತಡ ಹೆಚ್ಚಿರುತ್ತದೆ. ರೈಲು ಚಲಿಸುವಾಗ ಉಂಟಾಗುವ ಕಂಪನ ಮತ್ತು ಗಾಳಿಯ ಒತ್ತಡವನ್ನು ತಡೆದುಕೊಳ್ಳುವಂತೆ ಪಿಲ್ಲರ್‌ಗಳನ್ನು ವಿನ್ಯಾಸಗೊಳಿಸಬೇಕಾಗುತ್ತದೆ. ಬೃಹತ್ ಕಾಂಕ್ರೀಟ್ ಗರ್ಡರ್‌ಗಳನ್ನು 33 ಮೀಟರ್ ಎತ್ತರಕ್ಕೆ ಎತ್ತಿ ಜೋಡಿಸುವುದು ಸಾಹಸದ ಕೆಲಸ. ಇದಕ್ಕೆ ಅತ್ಯಾಧುನಿಕ ಕ್ರೇನ್‌ಗಳು ಮತ್ತು ತಂತ್ರಜ್ಞಾನದ ಅಗತ್ಯವಿದೆ. ಪ್ರಯಾಣಿಕರು ಇಷ್ಟು ಎತ್ತರಕ್ಕೆ ತಲುಪಲು ಎಸ್ಕಲೇಟರ್‌ಗಳು ಮತ್ತು ಲಿಫ್ಟ್‌ಗಳ ವ್ಯವಸ್ಥೆಯನ್ನು ಸಮರ್ಪಕವಾಗಿ ಕಲ್ಪಿಸಬೇಕಾಗುತ್ತದೆ. ಬೆಂಕಿ ಅವಘಡಗಳಂತಹ ತುರ್ತು ಸಂದರ್ಭಗಳಲ್ಲಿ ಸ್ಥಳಾಂತರ ಮಾಡುವುದು ಸವಾಲಾಗಿರುತ್ತದೆ.
ಮೈಸೂರು ರಸ್ತೆ ಮತ್ತು ತುಮಕೂರು ರಸ್ತೆಗಳು ಬೆಂಗಳೂರಿನ ಅತಿ ಹೆಚ್ಚು ದಟ್ಟಣೆಯ ರಸ್ತೆಗಳು. ಡಬಲ್ ಡೆಕ್ಕರ್ ಫ್ಲೈಓವರ್ ಮತ್ತು ಮೆಟ್ರೋ ಬರುವುದರಿಂದ, ಸಾರ್ವಜನಿಕ ಸಾರಿಗೆ ಮತ್ತು ಖಾಸಗಿ ವಾಹನಗಳೆರಡಕ್ಕೂ ಪ್ರತ್ಯೇಕ ಮಾರ್ಗ ಸಿಗಲಿದ್ದು, ಟ್ರಾಫಿಕ್ ಜಾಮ್ ಸಮಸ್ಯೆ ಗಣನೀಯವಾಗಿ ಕಡಿಮೆಯಾಗಲಿದೆ. ಮೆಟ್ರೋ ಸಂಪರ್ಕ ಮತ್ತು ಅತ್ಯಾಧುನಿಕ ಮೂಲಸೌಕರ್ಯದಿಂದಾಗಿ ಪಶ್ಚಿಮ ಬೆಂಗಳೂರು ಮತ್ತು ಮಾಗಡಿ ರಸ್ತೆ ಭಾಗಗಳಲ್ಲಿ ರಿಯಲ್ ಎಸ್ಟೇಟ್ ಮೌಲ್ಯ ಹೆಚ್ಚಾಗಲಿದೆ. ಆಕಾಶದೆತ್ತರಕ್ಕೆ ನಿಲ್ಲುವ ಈ ನಿಲ್ದಾಣಗಳು ಮತ್ತು ಡಬಲ್ ಡೆಕ್ಕರ್ ಮೇಲ್ಸೇತುವೆಗಳು ಬೆಂಗಳೂರಿನ ಆಧುನಿಕತೆಯ ಸಂಕೇತಗಳಾಗಿ ಬದಲಾಗಲಿವೆ.
ಗೊರಗುಂಟೆಪಾಳ್ಯ: ಒಂದು ಮಹತ್ವದ ಜಂಕ್ಷನ್
ತುಮಕೂರು ರಸ್ತೆಯಲ್ಲಿರುವ ಗೊರಗುಂಟೆಪಾಳ್ಯವು ಉತ್ತರ ಕರ್ನಾಟಕ ಮತ್ತು ಬೆಂಗಳೂರಿನ ನಡುವಿನ ಹೆಬ್ಬಾಗಿಲು. ಇಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಬಿಎಂಆರ್‌ಸಿಎಲ್ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿವೆ. ಈಗಾಗಲೇ ಇರುವ ಮೇಲ್ಸೇತುವೆ ಮತ್ತು ಹೊಸದಾಗಿ ನಿರ್ಮಾಣವಾಗುವ ಮೇಲ್ಸೇತುವೆಗಳ ಸಂಯೋಜನೆಯಿಂದಾಗಿ ಇಲ್ಲಿ ಸಂಕೀರ್ಣತೆ ಹೆಚ್ಚಿದೆ. ಇಲ್ಲಿ ಮೆಟ್ರೋ ನಿಲ್ದಾಣವು ಅತಿ ಎತ್ತರದಲ್ಲಿ ನಿರ್ಮಾಣವಾಗುವುದರಿಂದ, ಕೆಳಗೆ ವಾಹನಗಳ ಸುಗಮ ಸಂಚಾರಕ್ಕೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳಬಹುದು. ಭವಿಷ್ಯದಲ್ಲಿ ತುಮಕೂರು ರಸ್ತೆಯಲ್ಲಿ ಹೆಚ್ಚಾಗುವ ವಾಹನ ದಟ್ಟಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಎತ್ತರವನ್ನು ನಿರ್ಧರಿಸಲಾಗಿದೆ.
ನಗರದ ಪೂರ್ವ ಭಾಗದಲ್ಲಿ ನಿರ್ಮಾಣವಾಗುತ್ತಿರುವ 'ಬ್ಲೂ ಲೈನ್' (ಸಿಲ್ಕ್ ಬೋರ್ಡ್ - ಕೆ.ಆರ್. ಪುರಂ - ಹೆಬ್ಬಾಳ) ಮತ್ತು ಪಶ್ಚಿಮ ಭಾಗದ ಈ 'ಆರೆಂಜ್ ಮಾರ್ಗ' (ಹೆಬ್ಬಾಳ/ಕೆಂಪಾಪುರ - ಜೆ.ಪಿ. ನಗರ) ಒಂದಕ್ಕೊಂದು ಜೋಡಣೆಯಾಗುತ್ತವೆ. ಇದರಿಂದಾಗಿ ಬೆಂಗಳೂರಿನ ಸಂಪೂರ್ಣ ವರ್ತುಲ ರಸ್ತೆಯ ಸುತ್ತಲೂ ಮೆಟ್ರೋ ಸಂಪರ್ಕ ಏರ್ಪಡುತ್ತದೆ. ಪ್ರಯಾಣಿಕರು ನಗರದ ಕೇಂದ್ರ ಭಾಗವನ್ನು (ಮೆಜೆಸ್ಟಿಕ್) ಪ್ರವೇಶಿಸದೆಯೇ ನಗರದ ಒಂದು ತುದಿಯಿಂದ ಮತ್ತೊಂದು ತುದಿಗೆ ವರ್ತುಲ ಆಕಾರದಲ್ಲಿ ಸಂಚರಿಸಬಹುದು.
ಅತಿ ಹೆಚ್ಚು 'ಇಂಟರ್‌ಚೇಂಜ್' ನಿಲ್ದಾಣಗಳು
ಬೇರೆ ಯಾವುದೇ ಮಾರ್ಗಗಳಿಗೆ ಹೋಲಿಸಿದರೆ, ಆರೆಂಜ್ ಮಾರ್ಗವು ಅತಿ ಹೆಚ್ಚು ಇತರೆ ಮೆಟ್ರೋ ಮಾರ್ಗಗಳನ್ನು ಸಂಪರ್ಕಿಸುವ ಮಾರ್ಗವಾಗಿದೆ. ಸುಮಾರು 6 ಕಡೆಗಳಲ್ಲಿ ಪ್ರಯಾಣಿಕರು ಮಾರ್ಗ ಬದಲಾಯಿಸಬಹುದಾಗಿದೆ. ಜೆ.ಪಿ. ನಗರ 4ನೇ ಹಂತದಲ್ಲಿ ಗುಲಾಬಿ ಮಾರ್ಗ (ಕಾಳೇನ ಅಗ್ರಹಾರ - ನಾಗವಾರ) ದೊಂದಿಗೆ ಸಂಪರ್ಕ ಸಾಧಿಸಲಿದ್ದು, ಜೆ.ಪಿ. ನಗರ ನಿಲ್ದಾಣವು ಹಸಿರು ಮಾರ್ಗ (ಸಿಲ್ಕ್ ಇನ್ಸ್ಟಿಟ್ಯೂಟ್ - ನಾಗಸಂದ್ರ) ದೊಂದಿಗೆ ಸಂಪರ್ಕ ಕಲ್ಪಿಸಲಿದೆ. ಮೈಸೂರು ರಸ್ತೆ ನಿಲ್ದಾಣ ವು ನೇರಳೆ ಮಾರ್ಗ (ಚಲ್ಲಘಟ್ಟ - ವೈಟ್‌ಫೀಲ್ಡ್) ದೊಂದಿಗೆ ಸಂಪರ್ಕ ಸಾಧಿಸಲಿದೆ. ಪೀಣ್ಯ ನಿಲ್ದಾಣವು ಹಸಿರು ಮಾರ್ಗದೊಂದಿಗೆ ಸಂಪರ್ಕ, ಸುಮ್ಮನಹಳ್ಳಿ ನಿಲ್ದಾಣವು ಮಾಗಡಿ ರಸ್ತೆ ಮಾರ್ಗದೊಂದಿಗೆ ಸಂಪರ್ಕ ಮತ್ತು ಹೆಬ್ಬಾಳ/ಕೆಂಪಾಪುರ ನಿಲ್ದಾಣವು ನೀಲಿ ಮಾರ್ಗ (ಏರ್‌ಪೋರ್ಟ್ ಮಾರ್ಗ) ನೊಂದಿಗೆ ಸಂಪರ್ಕ ಸಾಧಿಸಲಿದೆ.
ಜನತೆಗೆ ಅನುಕೂಲವಾಗುವ ಕಿತ್ತಳೆ ಮಾರ್ಗ
ಸ್ಥಳಾವಕಾಶದ ಕೊರತೆ ಮತ್ತು ಟ್ರಾಫಿಕ್ ಸಮಸ್ಯೆ ನಿವಾರಿಸಲು ಈ ಮಾರ್ಗದ ಕೆಲವು ಭಾಗಗಳಲ್ಲಿ 'ಡಬಲ್ ಡೆಕ್ಕರ್' ಮಾದರಿಯ ನಿರ್ಮಾಣವನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಒಂದೇ ಪಿಲ್ಲರ್ ಮೇಲೆ ಕೆಳ ಹಂತದಲ್ಲಿ ವಾಹನಗಳ ಸಂಚಾರಕ್ಕೆ ರಸ್ತೆ ಮತ್ತು ಮೇಲಿನ ಹಂತದಲ್ಲಿ ಮೆಟ್ರೋ ರೈಲು ಚಲಿಸುತ್ತದೆ. ವಿಶೇಷವಾಗಿ ಕನಕಪುರ ರಸ್ತೆ ಕ್ರಾಸಿಂಗ್, ಸಾರಕ್ಕಿ ಮತ್ತು ಇತರೆ ಪ್ರಮುಖ ಜಂಕ್ಷನ್‌ಗಳಲ್ಲಿ ಈ ವ್ಯವಸ್ಥೆ ಬರಲಿದ್ದು, ಇದು ರಸ್ತೆ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.
ಕಿತ್ತಳೆ ಮಾರ್ಗ ಮಾರ್ಗವು ಹೆಬ್ಬಾಳವನ್ನು ತಲುಪುವುದರಿಂದ, ಹೆಬ್ಬಾಳವು ಭವಿಷ್ಯದ ಅತಿದೊಡ್ಡ ಸಾರಿಗೆ ಕೇಂದ್ರವಾಗಿ ಬದಲಾಗಲಿದೆ. ಇಲ್ಲಿ ಕಿತ್ತಳೆ ಮಾರ್ಗ ಮೆಟ್ರೋ, ನೀಲಿ ಮಾರ್ಗ ಮೆಟ್ರೋ (ಏರ್‌ಪೋರ್ಟ್), ಉಪನಗರ ರೈಲು ಮತ್ತು ಬಿಎಂಟಿಸಿ ಬಸ್ ನಿಲ್ದಾಣಗಳು ಒಂದೇ ಕಡೆ ಕೂಡಲಿವೆ. ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶಗಳಲ್ಲಿ ಒಂದಾದ ಪೀಣ್ಯಕ್ಕೆ ನಗರದ ದಕ್ಷಿಣ ಭಾಗಗಳಿಂದ (ಜಯನಗರ, ಬನಶಂಕರಿ ಕಡೆಯಿಂದ) ನೇರ ಸಂಪರ್ಕವಿರಲಿಲ್ಲ. ಕಿತ್ತಳೆ ಮಾರ್ಗವು ಪೀಣ್ಯದ ಮೂಲಕ ಹಾದು ಹೋಗುವುದರಿಂದ ಲಕ್ಷಾಂತರ ಕಾರ್ಮಿಕರಿಗೆ ಮತ್ತು ಉದ್ಯೋಗಿಗಳಿಗೆ ಅನುಕೂಲವಾಗಲಿದೆ.
ಗ್ರೇ (ಬೂದು) ಮಾರ್ಗದ ವಿಶೇಷತೆಗಳು
ಬೆಂಗಳೂರಿನ ಪಶ್ಚಿಮ ಭಾಗದ ಉಪನಗರಗಳು ವೇಗವಾಗಿ ಬೆಳೆಯುತ್ತಿದ್ದು, ಮಾಗಡಿ ರಸ್ತೆಯಲ್ಲಿನ ವಾಹನ ದಟ್ಟಣೆ ಮಿತಿಮೀರಿದೆ. ಇದನ್ನು ನಿಯಂತ್ರಿಸಲು ಮತ್ತು ನಗರದ ಕೇಂದ್ರ ಭಾಗದೊಂದಿಗೆ ಪಶ್ಚಿಮದ ಅಂಚನ್ನು ಸಂಪರ್ಕಿಸಲು ಬಿಎಂಆರ್‌ಸಿಎಲ್ 3ನೇ ಹಂತದಲ್ಲಿ ಬಳಕೆಯಲ್ಲಿ ಸಿಲ್ವರ್ ಲೈನ್ ಎಂದು ಚಾಲ್ತಿಯಲ್ಲಿರುವ ಆದರೆ, ಅಧಿಕೃತವಾಗಿ ಗ್ರೇ ಲೈನ್ (ಬೂದು ಮಾರ್ಗ) ಅನ್ನು ರೂಪಿಸಿದೆ. ಇದು ಹೊಸಹಳ್ಳಿಯಿಂದ ಪ್ರಾರಂಭವಾಗಿ ಮಾಗಡಿ ರಸ್ತೆಯುದ್ದಕ್ಕೂ ನೇರವಾಗಿ ಚಲಿಸಿ ಕಡಬಗೆರೆಯಲ್ಲಿ ಅಂತ್ಯಗೊಳ್ಳುತ್ತದೆ.
ಈ ಮಾರ್ಗವು ಎರಡು ಕಡೆಗಳಲ್ಲಿ ಇತರ ಮೆಟ್ರೋ ಲೈನ್‌ಗಳೊಂದಿಗೆ ಸಂಪರ್ಕ ಸಾಧಿಸುತ್ತದೆ. ಹೊಸಹಳ್ಳಿ ನಿಲ್ದಾಣದಲ್ಲಿ ನೇರಳೆ ಮಾರ್ಗದೊಂದಿಗೆ (ಬೈಯಪ್ಪನಹಳ್ಳಿ - ಕೆಂಗೇರಿ/ಚಲ್ಲಘಟ್ಟ) ಸಂಪರ್ಕವಿರುತ್ತದೆ. ಪ್ರಯಾಣಿಕರು ಕಡಬಗೆರೆಯಿಂದ ನೇರವಾಗಿ ಮೆಜೆಸ್ಟಿಕ್, ಇಂದಿರಾನಗರ ಅಥವಾ ವೈಟ್‌ಫೀಲ್ಡ್‌ಗೆ ಸುಲಭವಾಗಿ ತಲುಪಬಹುದು. ಸುಮ್ಮನಹಳ್ಳಿ ಕ್ರಾಸ್‌ನಲ್ಲಿ ಉದ್ದೇಶಿತ ಕಿತ್ತಳೆ ಮಾರ್ಗದೊಂದಿಗೆ (ಜೆ.ಪಿ. ನಗರ - ಕೆಂಪಾಪುರ) ಸಂಪರ್ಕವಿರುತ್ತದೆ. ಇದರಿಂದ ಪ್ರಯಾಣಿಕರು ಮೈಸೂರು ರಸ್ತೆ, ಪೀಣ್ಯ ಅಥವಾ ಹೆಬ್ಬಾಳ ಕಡೆಗೆ ಹೋಗಲು ಅನುಕೂಲವಾಗುತ್ತದೆ. ಈ ಮಾರ್ಗದ ನಿರ್ವಹಣೆಗಾಗಿ ಕಡಬಗೆರೆ ಅಥವಾ ಮಾಚೋಹಳ್ಳಿ ಬಳಿ ಪ್ರತ್ಯೇಕವಾದ ಮೆಟ್ರೋ ಡಿಪೋ ಒಂದನ್ನು ನಿರ್ಮಿಸಲು ಯೋಜಿಸಲಾಗಿದೆ. ಇದು ರೈಲುಗಳ ನಿರ್ವಹಣೆ ಮತ್ತು ರಾತ್ರಿ ತಂಗುದಾಣಕ್ಕೆ ಬಳಕೆಯಾಗಲಿದೆ. ಅತ್ಯಂತ ಕಿರಿದಾದ ಮತ್ತು ಸದಾ ಟ್ರಾಫಿಕ್ ನಿಂದ ಕೂಡಿರುವ ಸುಂಕದಕಟ್ಟೆ ಮತ್ತು ಬ್ಯಾಡರಹಳ್ಳಿ ಭಾಗದ ಮಾಗಡಿ ರಸ್ತೆಗೆ ಈ ಮೆಟ್ರೋ ಜೀವನಾಡಿಯಾಗಲಿದೆ.
ಬೂದು ಮಾರ್ಗದ ನಿಲ್ದಾಣಗಳು
ಒಟ್ಟು ಉದ್ದ 12.5 ಕಿ.ಮೀ ಆಗಿದ್ದು, 9 ನಿಲ್ದಾಣಗಳನ್ನು ಹೊಂದಿವೆ. ಹೊಸಹಳ್ಳಿ, ಕೆ.ಎಚ್.ಬಿ. ಕಾಲೋನಿ, ವಿನಾಯಕ ಲೇಔಟ್, ಸುಮ್ಮನಹಳ್ಳಿ ಕ್ರಾಸ್, ಸುಂಕದಕಟ್ಟೆ, ಹೆರೋಹಳ್ಳಿ, ಬ್ಯಾಡರಹಳ್ಳಿ, ಕಾಮತ್ ಲೇಔಟ್, ಕಡಬಗೆರೆ ನಿಲ್ದಾಣಗಳನ್ನು ಹೊಂದಿರಲಿವೆ.
ಇಷ್ಟು ದಿನ ಮೆಟ್ರೋ ಸಂಪರ್ಕದಿಂದ ವಂಚಿತವಾಗಿದ್ದ ಬ್ಯಾಡರಹಳ್ಳಿ, ಅಂಜನಾ ನಗರ, ಮತ್ತು ಕಡಬಗೆರೆಯಂತಹ ಪ್ರದೇಶಗಳಿಗೆ ಇದು ವರದಾನವಾಗಲಿದೆ. ರಿಯಲ್ ಎಸ್ಟೇಟ್ ಉದ್ಯಮ ಮತ್ತು ವಾಣಿಜ್ಯ ಚಟುವಟಿಕೆಗಳು ಈ ಭಾಗದಲ್ಲಿ ಗಣನೀಯವಾಗಿ ಏರಿಕೆಯಾಗಲಿವೆ. ಪ್ರಸ್ತುತ ಕಡಬಗೆರೆಯಿಂದ ಮೆಜೆಸ್ಟಿಕ್ ತಲುಪಲು ಬಸ್ಸಿನಲ್ಲಿ ಕನಿಷ್ಠ 1 ರಿಂದ 1.5 ಗಂಟೆ ಬೇಕಾಗುತ್ತದೆ. ಬೂದು ಮಾರ್ಗ ಪೂರ್ಣಗೊಂಡರೆ, ಹೊಸಹಳ್ಳಿಯಲ್ಲಿ ಇಂಟರ್‌ಚೇಂಜ್ ಮಾಡಿಕೊಂಡು ಕೇವಲ 30-35 ನಿಮಿಷಗಳಲ್ಲಿ ಮೆಜೆಸ್ಟಿಕ್ ತಲುಪಬಹುದು. ಈ ಮಾರ್ಗವು ನೈಸ್ ರಸ್ತೆ ದಾಟಿ ಕಡಬಗೆರೆವರೆಗೂ ಹೋಗುವುದರಿಂದ, ಬೆಂಗಳೂರಿನ ಗ್ರಾಮಾಂತರ ಭಾಗದ ಜನರಿಗೂ ನಗರ ಪ್ರವೇಶಿಸಲು ಇದು ಹೆಬ್ಬಾಗಿಲಾಗಿ ಕಾರ್ಯನಿರ್ವಹಿಸುತ್ತದೆ. ಮಾಚೋಹಳ್ಳಿ ಕೈಗಾರಿಕಾ ಪ್ರದೇಶದ ಕಾರ್ಮಿಕರಿಗೂ ಇದು ಅನುಕೂಲಕರವಾಗಿರಲಿದೆ.
ನಮ್ಮ ಮೆಟ್ರೋ 3ನೇ ಹಂತದ ಯೋಜನೆಯು ಕೇವಲ ಒಂದು ಸಾರಿಗೆ ಯೋಜನೆಯಲ್ಲ, ಬದಲಿಗೆ ಇದೊಂದು ಎಂಜಿನಿಯರಿಂಗ್ ಅದ್ಭುತವಾಗಿ ರೂಪುಗೊಳ್ಳುತ್ತಿದೆ. ಜಯದೇವ ನಿಲ್ದಾಣದ ಯಶಸ್ಸಿನ ನಂತರ, ಗೊರಗುಂಟೆಪಾಳ್ಯ ಮತ್ತು ಮೈಸೂರು ರಸ್ತೆ ನಿಲ್ದಾಣಗಳು 33 ಮೀಟರ್ ಎತ್ತರಕ್ಕೆ ಏರುತ್ತಿರುವುದು ದೇಶದ ಮೂಲಸೌಕರ್ಯ ವಲಯದಲ್ಲಿ ಬೆಂಗಳೂರಿನ ಸ್ಥಾನವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ. ನಿರ್ಮಾಣದ ಹಂತದಲ್ಲಿ ಸಾರ್ವಜನಿಕರಿಗೆ ಸ್ವಲ್ಪಮಟ್ಟಿನ ತೊಂದರೆಯಾಗಬಹುದಾದರೂ, ಭವಿಷ್ಯದ ದೃಷ್ಟಿಯಿಂದ ಇದೊಂದು ಅನಿವಾರ್ಯ ಮತ್ತು ಅತ್ಯಗತ್ಯ ಯೋಜನೆಯಾಗಿದೆ. 2028-29ರ ವೇಳೆಗೆ ಈ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ಸಿಲಿಕಾನ್ ಸಿಟಿಯ ಚಿತ್ರಣವೇ ಬದಲಾಗಲಿದೆ.