ಐಪಿಎಲ್ ಹರಾಜಿನಲ್ಲಿ ಕೋಟಿಗಳ ಮೇಲಾಟ: ಜಾಹೀರಾತು ಆದಾಯ ಮಾತ್ರ ಕಷ್ಟ ಕಷ್ಟ
ಐಪಿಎಲ್ ಪಂದ್ಯಗಳಿಗೆ ಬರುತ್ತಿದ್ದ ಜಾಹೀರಾತು ಆದಾಯದಲ್ಲಿ ನಿರಂತರ ಕುಸಿತ ಉಂಟಾಗುತ್ತಿದೆಯೇ? ಒಂದು ವರದಿಯ ಪ್ರಕಾರ ಹೌದು. 2023ರಿಂದಲೇ ಲೀಗ್ ಮೌಲ್ಯವು 16,400 ಕೋಟಿ ರೂಪಾಯಿಗಳಷ್ಟು ಕುಸಿತ ಕಂಡಿದೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL) ಮಿನಿ ಹರಾಜು ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ, ಎಂದಿನಂತೆ ಕೋಟಿಗಟ್ಟಲೆ ಹಣ ಪ್ರವಾಹದಂತೆ ಹರಿಯಿತು. ಫ್ರಾಂಚೈಸಿಗಳಂತೂ ಆಕ್ರಮಣಕಾರಿಯಾಗಿ ಬಿಡ್ ಮಾಡಿದವು, ಭಾರಿ ಮೊತ್ತದ ಒಪ್ಪಂದಗಳ ಬಗ್ಗೆ ಹೆಡ್-ಲೈನ್-ಗಳು ಸಂಭ್ರಮಿಸಿದವು ಮತ್ತು ಕ್ರಿಕೆಟ್ನ ಈ 'ಹಣದ ಯಂತ್ರ' ನಿಲುಗಡೆಯಿಲ್ಲದ್ದು ಎಂಬ ಹಳೆಯ ನಂಬಿಕೆಯನ್ನು ಈ ವೈಭವವು ಮತ್ತೊಮ್ಮೆ ಪುಷ್ಟೀಕರಿಸಿತು.
ಐಪಿಎಲ್ ನಲ್ಲಿ ಮೇಲ್ನೋಟಕ್ಕೆ ಎಲ್ಲವೂ ಎಂದಿನಂತೆ ಬಿಡುಬೀಸಾಗಿ ನಡೆಯುತ್ತಿರುವಂತೆ ಗೋಚರಿಸುತ್ತಿದೆ. ಆದರೆ ಹರಾಜಿನ ಈ ಅಬ್ಬರ ಗೌಜು-ಗದ್ದಲದ ಅಡಿಯಲ್ಲಿ ಅತ್ಯಂತ ಕಠಿಣವಾದೊಂದು ಪ್ರಶ್ನೆ ಅಡಗಿದೆ: ಒಂದು ವೇಳೆ ಕ್ರೀಡೆಗಾಗಿ ವ್ಯಯಿಸುತ್ತಿರುವ ಹಣಕ್ಕೆ ತಕ್ಕಂತೆ ಆಟದ ನಿಜವಾದ ಮೌಲ್ಯವು ವೃದ್ಧಿಯಾಗದೇ ಹೋದರೆ ಮುಂದೇನು?
ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ಅದರ ಒಟ್ಟಾರೆ ಬ್ರ್ಯಾಂಡ್ ಮೌಲ್ಯದಲ್ಲಿ ಕುಸಿತ ಉಂಟಾಗಿದೆ ಎಂಬ ವರದಿ ಬಂದಿದೆ. ಈ ಮೂಲಕ ಕಳೆದ ಒಂದು ದಶಕದಿಂದ ನಿರಂತರವಾಗಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಬೆಳವಣಿಗೆಯ ಹಾದಿಗೆ ಬ್ರೇಕ್ ಬಿದ್ದಿದೆ. ಇದು ಲೀಗ್ನ ತಕ್ಷಣದ ಜನಪ್ರಿಯತೆಯನ್ನೇನೂ ಕುಗ್ಗಿಸುವುದಿಲ್ಲ ಎಂಬುದು ನಿಜ, ಆದರೆ ಕ್ರಿಕೆಟ್ನ ವಾಣಿಜ್ಯ ಮೌಲ್ಯವು ಯಾವಾಗಲೂ ಮೇಲ್ಮುಖವಾಗಿಯೇ ಸಾಗುತ್ತದೆ ಎಂಬ ಸಾಮಾನ್ಯ ನಂಬಿಕೆಯನ್ನು ಇದು ಸುಳ್ಳಾಗಿ ಮಾಡಿದೆ ಎಂಬುದು ಸತ್ಯ.
ಮೌಲ್ಯದ ಇಳಿಮುಖದ ಹಾದಿ
ಡಿ&ಪಿ ಅಡ್ವೈಸರಿ ವರದಿಯ ಪ್ರಕಾರ, ಐಪಿಎಲ್ ಲೀಗ್‌ನ ಮೌಲ್ಯವು 2023ರಲ್ಲಿ ಸುಮಾರು 92,500 ಕೋಟಿ ರೂಪಾಯಿ ಇತ್ತು. ಅದು 2024ರಲ್ಲಿ 82,700 ಕೋಟಿ ರೂಪಾಯಿಗಳಿಗೆ ಕುಸಿದಿತ್ತು. ಅಷ್ಟೇ ಅಲ್ಲದೆ, 2025ರಲ್ಲಿ ಇದು ಅಂದಾಜು 76,100 ಕೋಟಿ ರೂಪಾಯಿಗಳಿಗೆ ಮತ್ತಷ್ಟು ಇಳಿಕೆಯಾಗಿದೆ. ಅಂದರೆ ಕೇವಲ ಎರಡು ಋತುಗಳಲ್ಲಿ ಸುಮಾರು 16,400 ಕೋಟಿ ರೂಪಾಯಿಗಳಷ್ಟು ಕುಸಿತ ಕಂಡಿದೆ. ಇದು ನಿಜಕ್ಕೂ ಬಹಳ ದೊಡ್ಡ ಕುಸಿತ ಎಂದೇ ಪರಿಗಣಿಸಲಾಗಿದೆ. ಡಾಲರ್ ಲೆಕ್ಕದಲ್ಲಿ ಹೇಳುವುದಾದರೆ, ಈ ಮೌಲ್ಯವು 2023ರಲ್ಲಿ ಸುಮಾರು 11.2 ಶತಕೋಟಿ ಅಮೆರಿಕನ್ ಡಾಲರ್ ನಿಂದ 202ರಲ್ಲಿ ಅಂದಾಜು 8.8 ಶತಕೋಟಿ ಡಾಲರ್-ಗೆ ಕುಸಿದಿದೆ!
ಇದೇ ಸಂದರ್ಭದಲ್ಲಿ, ಐಸಿಸಿ (ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ) ಮಾಧ್ಯಮ ಹಕ್ಕುಗಳ ಒಪ್ಪಂದದ ಬಗ್ಗೆ ಜಿಯೋಸ್ಟಾರ್ ವ್ಯಕ್ತಪಡಿಸಿರುವ ಅಸಮಾಧಾನಕ್ಕೂ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಅದರಲ್ಲೂ ಈ ಬೆಳವಣಿಗೆ ನಡೆಯುತ್ತಿರುವ ಸಮಯ ಕೂಡ ಆತಂಕಕಾರಿ. ಇದು ಸಾಮಾನ್ಯ ಅವಧಿಯ ಮರುಸಂಧಾನ ಅಥವಾ ಸುದೀರ್ಘ ಕಾಲದ ನಂತರ ನಡೆಯುತ್ತಿರುವ ಕರಾರು ವಿಮರ್ಶೆಯಲ್ಲ; ಬದಲಿಗೆ ಐತಿಹಾಸಿಕವಾಗಿ ಲಾಭದ ಭರವಸೆ ನೀಡುವ ಏಕೈಕ ಮಾರುಕಟ್ಟೆಯಾದ ಭಾರತದಲ್ಲೇ ಟಿ20 ವಿಶ್ವಕಪ್ ಆರಂಭಕ್ಕೆ ಕೇವಲ ಆರು ವಾರಗಳ ಮೊದಲು ಈ ಬೆಳವಣಿಗೆ ನಡೆಯುತ್ತಿದೆ. ವಿಶ್ವದ ಶ್ರೀಮಂತ ಕ್ರಿಕೆಟ್ ಆರ್ಥಿಕತೆಯ ಅತಿದೊಡ್ಡ ಪ್ರಸಾರ ಸಂಸ್ಥೆಯೇ ತನ್ನ ಬದ್ಧತೆಗಳ ಬಗ್ಗೆ ಮರುಚಿಂತನೆ ನಡೆಸಲು ಮುಂದಾದಾಗ, ಅದು ಕೇವಲ ದಿನನಿತ್ಯದ ವ್ಯಾಪಾರ ಹೊಂದಾಣಿಕೆಯಾಗಿ ಮಾತ್ರ ಉಳಿಯುವುದಿಲ್ಲ ಎಂಬುದನ್ನು ಮನಗಾಣಬೇಕು. ಅದು ಒಂದು ಗಂಭೀರ ಮುನ್ಸೂಚನೆ ಎಂದು ಹೇಳುವುದು ಕೂಡ ಅಷ್ಟೇ ಸಮಂಜಸವಾದುದು.
ಹಕ್ಕುಗಳ ಶುಲ್ಕ ಮತ್ತು ನೈಜ ಆದಾಯ
ಈ ಸಮಸ್ಯೆಯ ಕೇಂದ್ರಬಿಂದುವಿನಲ್ಲಿ, ಪ್ರಸಾರ ಹಕ್ಕುಗಳ ಶುಲ್ಕ ಮತ್ತು ನೈಜ ಆದಾಯದ ನಡುವೆ ಉಂಟಾಗಿರುವ ದೊಡ್ಡ ಅಂತರ ಅಡಗಿದೆ. ಭಾರತದ ಐಸಿಸಿ ಮಾಧ್ಯಮ ಹಕ್ಕುಗಳ ಮೌಲ್ಯವು ವರ್ಷಕ್ಕೆ 3,000 ಕೋಟಿ ರೂಪಾಯಿಗಳಿಗೂ ಅಧಿಕ. ಕ್ರಿಕೆಟ್ ಪ್ರೇಕ್ಷಕರ ಸಂಖ್ಯೆ ಮತ್ತು ಅದರಿಂದ ಬರುವ ಆದಾಯವು ನಿರಂತರವಾಗಿ ಹೆಚ್ಚುತ್ತಲೇ ಇರುತ್ತದೆ ಎಂಬ ಊಹೆಯ ಮೇಲೆ ಈ ಮೌಲ್ಯವನ್ನು ನಿರ್ಧರಿಸಲಾಗಿದೆ.
ಆದರೆ ವರದಿಗಳ ಪ್ರಕಾರ, ಕ್ರಿಕೆಟ್ ಪ್ರಸಾರದಿಂದ ಬರುವ ಜಾಹೀರಾತು ಆದಾಯವು ಸ್ಥಗಿತಗೊಂಡಿದೆ. ಪ್ರಸಾರ ಹಕ್ಕುಗಳ ವೆಚ್ಚವು ಅತ್ಯಂತ ಕ್ಷಿಪ್ರಗತಿಯಲ್ಲಿ ಏರಿಕೆ ಕಾಣುತ್ತಿದ್ದರೂ, ಅದಕ್ಕೆ ತಕ್ಕಂತೆ ಜಾಹೀರಾತುಗಳಿಂದ ಬರುವ ಆದಾಯದಲ್ಲಿ ಏರಿಕೆ ಕಾಣುತ್ತಿಲ್ಲ. ಕ್ರಿಕೆಟ್ ಎಂದ ಮೇಲೆ ಪ್ರೇಕ್ಷಕರು ಇದ್ದೇ ಇರುತ್ತಾರೆ ಮತ್ತು ಅದರಿಂದ ಜಾಹೀರಾತು ಖರ್ಚು ಕೂಡ ನಿಶ್ಚಿತವಾಗಿ ಬಂದೇ ಬರುತ್ತದೆ ಎಂಬ ಸಾಂಪ್ರದಾಯಿಕ ತರ್ಕವು ಈಗ ಮೊದಲಿನಷ್ಟು ಖಚಿತವಾಗಿ ಉಳಿದಿಲ್ಲ.
ಬೆಟ್ಟಿಂಗ್ ಆ್ಯಪ್-ಗಳ ಕಡಿವಾಣ ತಂದ ಬಿಕ್ಕಟ್ಟು
ಈ ಒತ್ತಡಕ್ಕೆ ಬಹುಮುಖ್ಯ ಕಾರಣವೆಂದರೆ ಇದು ಕೇವಲ ಒಂದು ತಾತ್ಕಾಲಿಕ ಮಾರುಕಟ್ಟೆ ಬದಲಾವಣೆಯಲ್ಲ, ಬದಲಿಗೆ ಮೂಲಭೂತವಾದ ರಚನಾತ್ಮಕ ಬದಲಾವಣೆ. ಬೆಟ್ಟಿಂಗ್ ಮತ್ತು ಗೇಮಿಂಗ್ ಆ್ಯಪ್-ಗಳ ಮೇಲಿನ ನಿರ್ಬಂಧವು ಕ್ರೀಡಾ ಪ್ರಸಾರ ವಲಯದ ಒಂದು ಪ್ರಮುಖ ಜಾಹೀರಾತು ಆಧಾರಸ್ತಂಭವನ್ನೇ ಕುಸಿಯುವಂತೆ ಮಾಡಿದೆ. ಕಳೆದ ಅನೇಕ ವರ್ಷಗಳಿಂದ ಈ ವೇದಿಕೆಗಳು ಕ್ರಿಕೆಟ್ ಪಂದ್ಯಗಳ ಸಮಯದಲ್ಲಿ ಹಣವನ್ನು ನೀರಿನಂತೆ ಖರ್ಚು ಮಾಡುತ್ತಿದ್ದವು, ಇದರಿಂದಾಗಿ ಪ್ರಸಾರಕರು ಭಾರಿ ಮೊತ್ತದ ಪ್ರಸಾರ ಹಕ್ಕುಗಳ ಖರೀದಿಯನ್ನು ಸಮರ್ಥಿಸಿಕೊಳ್ಳುತ್ತಿದ್ದರು. ಈಗ ಆ ಆದಾಯದ ಮೂಲವು ಗಣನೀಯವಾಗಿ ಕಡಿಮೆಯಾಗಿದೆ. ಹಾಗಾಗಿ ಚಾನೆಲ್‌ಗಳು ಒಂದು ಕಠಿಣ ಸತ್ಯವನ್ನು ಎದುರಿಸುವಂತಾಗಿದೆ: ಪ್ರೀಮಿಯಂ ಕ್ರಿಕೆಟ್ ಕಂಟೆಂಟ್ ಪಡೆದುಕೊಳ್ಳುವುದು ದಿನದಿಂದ ದಿನಕ್ಕೆ ದುಬಾರಿಯಾಗುತ್ತಿದೆ, ಆದರೆ ಅದಕ್ಕೆ ತಕ್ಕಂತೆ ಅದರಿಂದ ಸುಲಭವಾಗಿ ಆದಾಯ ಗಳಿಸುವುದು ಸಾಧ್ಯವಾಗುತ್ತಿಲ್ಲ.
ಇಂತಹುದೊಂದು ಕ್ಷಣವು ಹೆಚ್ಚು ಮಹತ್ವ ಪಡೆಯಲು ಕಾರಣವೇನೆಂದರೆ, ಈಗ ಈ ಆರ್ಥಿಕ ಒತ್ತಡವು ಐಪಿಎಲ್‌ನಲ್ಲಿಯೂ ಸ್ಪಷ್ಟವಾಗಿ ಗೋಚರಿಸುತ್ತಿದೆ. ಐಪಿಎಲ್ ಆರಂಭವಾದಾಗಿನಿಂದ ಇದೇ ಮೊದಲ ಬಾರಿಗೆ, ಲೀಗ್‌ನ ಒಟ್ಟಾರೆ ಬ್ರ್ಯಾಂಡ್ ಮೌಲ್ಯ ಲಗಾಟಿ ಹೊಡೆದಿದೆ; ಈ ಮೂಲಕ ದಶಕದ ಸುದೀರ್ಘ ಪ್ರಗತಿ ಪಥಕ್ಕೆ ಬ್ರೇಕ್ ಬಿದ್ದಂತಾಗಿದೆ. ಇದರರ್ಥ ಐಪಿಎಲ್ ಸಂಕಷ್ಟದಲ್ಲಿದೆ ಎಂದಲ್ಲ, ಇದು ಇಂದಿಗೂ ಕ್ರಿಕೆಟ್ ಜಗತ್ತಿನ ಅತ್ಯಂತ ಶಕ್ತಿಶಾಲಿ ವಾಣಿಜ್ಯ ಆಸ್ತಿ ಎಂಬುದೇನೋ ನಿಜ. ಆದರೆ, ಇದರ ಮೌಲ್ಯಮಾಪನವು ಈಗ ಒಂದು ಗರಿಷ್ಠ ಮಿತಿಯನ್ನು ತಲುಪಿರಬಹುದು ಎಂಬ ಮುನ್ಸೂಚನೆ ಈ ಬೆಳವಣಿಗೆಯಿಂದ ವ್ಯಕ್ತವಾಗುತ್ತಿದೆ. ಸ್ವತಃ ಐಪಿಎಲ್ ಮೌಲ್ಯವೇ ಸ್ಥಗಿತಗೊಳ್ಳುವ ಲಕ್ಷಣಗಳನ್ನು ತೋರಿಸಿದಾಗ, 'ಅನಂತ ಬೆಳವಣಿಗೆ'ಯ ಬಗ್ಗೆ ನಾವಿಟ್ಟುಕೊಂಡಿದ್ದ ಹಳೆಯ ನಂಬಿಕೆಗಳನ್ನು ಮರುಪರಿಶೀಲಿಸುವುದು ಅನಿವಾರ್ಯವಾದೀತು.
ಉಳಿದೀತೇ ಈ ಹಣಕಾಸು ಮಾದರಿ?
ಐಸಿಸಿ ಒಪ್ಪಂದದ ಬದ್ಧತೆಗಳಿಂದ ಹಿಂದೆ ಸರಿಯಲು ಅಥವಾ ಅದನ್ನು ಮರುಪರಿಶೀಲಿಸಲು ಜಿಯೋಸ್ಟಾರ್ ನಡೆಸುತ್ತಿರುವ ಪ್ರಯತ್ನವು ಕೇವಲ ಒಂದು ಕಾರ್ಪೊರೇಟ್ ತಂತ್ರ ಮಾತ್ರವಲ್ಲ; ಬದಲಾಗಿ ಇದು ಮಾರುಕಟ್ಟೆಯ ಕಠಿಣ ವಾಸ್ತವದ ಸ್ಪಷ್ಟ ಬಿಂಬ. ಪ್ರಸಾರಕರು ಈಗ ಎರಡು ಕಡೆಯಿಂದ ಒತ್ತಡಕ್ಕೆ ಸಿಲುಕಿದ್ದಾರೆ: ಒಂದು ಕಡೆ ಗಗನಕ್ಕೇರುತ್ತಿರುವ ಪ್ರಸಾರ ಹಕ್ಕುಗಳ ಶುಲ್ಕ, ಮತ್ತೊಂದು ಕಡೆ ಕುಸಿಯುತ್ತಿರುವ ಅಥವಾ ಸ್ಥಗಿತಗೊಂಡಿರುವ ಜಾಹೀರಾತು ಆದಾಯ.
ಹಾಗಾಗಿ ಈಗ ಪ್ರಶ್ನೆ ಇರುವುದು “ಕ್ರಿಕೆಟ್ ಜನಪ್ರಿಯ ಹೌದೋ ಅಥವಾ ಅಲ್ಲವೋ?” ಎಂಬುದಲ್ಲ (ಅದು ಜನಪ್ರಿಯವಾಗಿದೆ ಎಂಬುದು ಸ್ಪಷ್ಟ), ಬದಲಾಗಿ “ಮಂದಗತಿಯಲ್ಲಿರುವ ಜಾಗತಿಕ ಅರ್ಥ ವ್ಯವಸ್ಥೆಯಲ್ಲಿ ಕ್ರಿಕೆಟ್ನ ಈಗಿನ ಹಣಕಾಸು ಮಾದರಿಯು ದೀರ್ಘಕಾಲ ಉಳಿಯಬಲ್ಲದೇ?" ಎನ್ನುವುದೇ ನಿಜವಾದ ಪ್ರಶ್ನೆ.
ಇದು ಅನಿವಾರ್ಯವಾಗಿ ಕ್ರಿಕೆಟ್ ವಲಯದಲ್ಲಿ ಗಹನ ಚರ್ಚೆಯನ್ನು ಹುಟ್ಟುಹಾಕಿದೆ. ಕ್ರಿಕೆಟ್ ಅತಿಯಾದ ವೇಳಾಪಟ್ಟಿಗಳಿಂದ ಬಳಲುತ್ತಿದೆಯೇ? ಕ್ರಿಕೆಟ್ ಕ್ಯಾಲೆಂಡರ್ ಎಷ್ಟು ಒತ್ತಡದಿಂದ ಕೂಡಿದೆಯೆಂದರೆ, ಪ್ರತ್ಯೇಕ ಪಂದ್ಯಾವಳಿಗಳು ತಮ್ಮ ಪ್ರೀಮಿಯಂ ಮೌಲ್ಯವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿವೆ. ಕಳೆದ ಒಂದು ದಶಕದಲ್ಲಿ ಕ್ರಿಕೆಟ್ ನಿರಂತರವಾಗಿ ವಿಸ್ತಾರವಾಗುತ್ತ ಸಾಗಿದೆ. ದ್ವಿಪಕ್ಷೀಯ ಸರಣಿಗಳು, ಫ್ರಾಂಚೈಸಿ ಲೀಗ್ಗಳು, ವಿವಿಧ ಮಾದರಿಯ ಪ್ರವಾಸ ಮತ್ತು ಜಾಗತಿಕ ಟೂರ್ನಮೆಂಟ್ಗಳು ಒಂದರ ಮೇಲೊಂದರಂತೆ ಪೈಪೋಟಿಗೆ ಬಿದ್ದವರಂತೆ ನಡೆಯುತ್ತಿವೆ. ಇದರ ಜೊತೆಗೆ, ಮಹಿಳಾ ಕ್ರಿಕೆಟ್ ಕೂಡ ವೇಗವಾಗಿ ಬೆಳೆಯುತ್ತಿದ್ದು, ಕ್ರಿಕೆಟ್ನ 'ಅತಿಯಾದ ಪ್ರಮಾಣ' ಎಂಬ ಭಾವನೆಯನ್ನು ಸೃಷ್ಟಿಸುತ್ತಿದೆ. ಪಂದ್ಯಗಳ ಸಂಖ್ಯೆ ಹೆಚ್ಚಾಗಿದ್ದರೂ, ಮೌಲ್ಯವನ್ನು ನಿರ್ಧರಿಸುವ 'ಅಪರೂಪದ ಸಂಗತಿ' ಸದ್ದಿಲ್ಲದೆ ಸವಕಳಿಯಾಗಿದೆ.
ಅಪಾಯದ ಮರುಲೆಕ್ಕಾಚಾರ ಶುರು
ಈ ಹಿನ್ನೆಲೆಯಲ್ಲಿ ನಡೆಯುತ್ತಿರುವ ಐಪಿಎಲ್ ಮಿನಿ ಹರಾಜು ಪ್ರಕ್ರಿಯೆ ಇವೆಲ್ಲಕ್ಕೆ ಒಂದು ಸಾಂಕೇತಿಕ ವಿದ್ಯಮಾನದಂತೆ ಭಾಸವಾಗುತ್ತಿದೆ. ಲೀಗ್‌ನ ಆಕರ್ಷಣಾ ಶಕ್ತಿಯ ಮೇಲೆ ನಂಬಿಕೆ ಇಟ್ಟಿರುವ ಫ್ರಾಂಚೈಸಿಗಳು ಹಣವನ್ನು ಖರ್ಚು ಮಾಡುವ ಕೆಲಸವನ್ನು ಮುಂದುವರಿಸಿವೆ; ಆದರೆ ಅವುಗಳ ಸುತ್ತಲಿರುವ ವಿಶಾಲ ಆರ್ಥಿಕ ವ್ಯವಸ್ತೆ ಮಾತ್ರ ದಿನದಿಂದ ದಿನಕ್ಕೆ ದುರ್ಬಲಗೊಳ್ಳುತ್ತಿರುವಂತೆ ಕಾಣುತ್ತಿದೆ. ಆಡಳಿತ ಮಂಡಳಿಗಳೇನೋ ಆತ್ಮವಿಶ್ವಾಸದಿಂದ ಬೀಗುತ್ತಿವೆ ಮತ್ತು ಈ ಭವ್ಯ ಪ್ರದರ್ಶನ ಎಂದಿನಂತೆ ಎಗ್ಗಿಲ್ಲದೆ ಸಾಗುತ್ತಿದೆ. ಆದರೆ ಮೇಲ್ನೋಟಕ್ಕೆ ಎಲ್ಲವೂ ಸರಿಯಾಗಿ ಕಂಡರೂ, ಪ್ರಸಾರಕರು ಈ ಹಿಂದೆ ಎಂದೂ ಮಾಡದ ರೀತಿಯಲ್ಲಿ ವ್ಯವಹಾರದ ಅಪಾಯಗಳ ಮರುಲೆಕ್ಕಾಚಾರ ಹಾಕುತ್ತಿದ್ದಾರೆ.
ಈ ವಿದ್ಯಮಾನವು ಕ್ರಿಕೆಟ್ ಜಗತ್ತು ಹೊಂದಿರುವ ಅವಲಂಬನೆ ಎಷ್ಟು ದುರ್ಬಲ ಎಂಬ ಅಂಶವನ್ನು ಕೂಡ ಮುನ್ನೆಲೆಗೆ ತಂದಿದೆ. ಕ್ರಿಕೆಟ್ ಸಂಪೂರ್ಣವಾಗಿ ಭಾರತೀಯ ಮಾರುಕಟ್ಟೆಯನ್ನು ಅತಿಯಾಗಿ ಅವಲಂಬಿಸಿಕೊಂಡಿದೆ ಎಂಬ ವಿಷಯ ಎಲ್ಲರಿಗೂ ತಿಳಿದಿದೆ. ಐಸಿಸಿ ಮತ್ತು ಅನೇಕ ದೇಶಗಳ ಕ್ರಿಕೆಟ್ ಮಂಡಳಿಗಳಿಗೆ ಭಾರತವು ಕೇವಲ ಒಂದು ಪಾಲುದಾರನಲ್ಲ, ಬದಲಾಗಿ ವಾಣಿಜ್ಯದ ಬೆನ್ನೆಲು. ಈ ಅವಲಂಬನೆಯಿಂದ ಕ್ರಿಕೆಟ್ ಜಾಗತಿಕವಾಗಿ ಬೆಳೆಯಲು ಸಹಾಯ ಮಾಡಿರಬಹುದು ನಿಜ, ಆದರೆ ಇದು ಒಂದು ರೀತಿಯ ಅಸುರಕ್ಷಿತ ಸ್ಥಿತಿಯನ್ನೂ ಸೃಷ್ಟಿಸಿದೆ.
ಭಾರತದ ಪ್ರಸಾರ ವ್ಯವಸ್ಥೆಯಲ್ಲಿ ಸ್ವಲ್ಪ ಒತ್ತಡ ಕಂಡುಬಂದರೂ ಕೂಡ, ಅದರ ಸಮಸ್ಯೆಗಳು ಉಲ್ಬಣಗೊಂಡು ಜಗತ್ತಿನಾದ್ಯಂತ ಪ್ರತಿಧ್ವನಿಸುತ್ತವೆ. ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಸಣ್ಣ ಕ್ರಿಕೆಟ್ ಮಂಡಳಿಗಳಿಗೆ, ಈ ಮಾರುಕಟ್ಟೆಯ ಪಿರಮಿಡ್ಡಿನ ಮೇಲ್ಭಾಗದಲ್ಲಿ ಏರುಪೇರಾದರೆ ಆ ಆಘಾತವನ್ನು ತಡೆದುಕೊಳ್ಳುವ ಶಕ್ತಿಯಿಲ್ಲ.
ಜಿಯೋ ಸನ್ನಿವೇಶವು ಜಾಗತಿಕವಾಗಿ ಗಮನ ಸೆಳೆಯಲು ಇದೇ ಪ್ರಮುಖ ಕಾರಣ. ಇದು ಕೇವಲ ಒಬ್ಬ ಪ್ರಸಾರಕ ಹಿಂದೆ ಸರಿಯುತ್ತಿರುವ ಪ್ರಶ್ನೆಯಲ್ಲ; ಬದಲಾಗಿ, ಕ್ರಿಕೆಟ್ನ ಆರ್ಥಿಕತೆಯನ್ನು ನಿರಂತರವಾಗಿ ಸುಸ್ಥಿತಿಯಲ್ಲಿಟ್ಟಿರುವ ಏಕೈಕ ಮಾರುಕಟ್ಟೆಯಲ್ಲಿ ಒಂದು ವೇಳೆ ಈ 'ಹಣದ ಹರಿವಿನ ಗತಿ’ ಮಂದವಾದರೆ ಅಥವಾ ಸ್ಥಗಿತಗೊಂಡರೆ ಏನಾಗಬಹುದು ಎಂಬ ಆತಂಕದ ಪ್ರಶ್ನೆಯನ್ನು ಎತ್ತಿದೆ. ಗ್ರಾಹಕರ ವೆಚ್ಚಗಳು ಕಡಿಮೆಯಾಗುತ್ತಿರುವ ಮತ್ತು ಜಾಹೀರಾತುದಾರರು ಹೆಚ್ಚು ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿರುವ ಇಂದಿನ ಜಗತ್ತಿನಲ್ಲಿ, ಕ್ರಿಕೆಟ್ ಇನ್ನು ಮುಂದೆ ವಿಶಾಲವಾದ ಆರ್ಥಿಕ ಏರುಪೇರುಗಳಿಂದ ತನಗೆ ಯಾವುದೇ ರೀತಿಯಲ್ಲಿ ಹೊಡೆತ ಬೀಳುವುದಿಲ್ಲ ಎಂದು ಭಾವಿಸಲು ಸಾಧ್ಯವಿಲ್ಲ.
ನಿರ್ಣಾಯಕ ಕಾಲದ ತಿರುವಿನಲ್ಲಿ...
ಹಾಗಂತ ಇವೆಲ್ಲ ಬೆಳವಣಿಗೆಗಳಿಂದ ಕ್ರೀಡೆಯು ತಕ್ಷಣವೇ ಕುಸಿದುಬೀಳುತ್ತದೆ ಎಂದೇನೂ ಅಲ್ಲ. ಕ್ರಿಕೆಟ್ ಇಂದಿಗೂ ಅಪಾರ ಜನಪ್ರಿಯತೆಯನ್ನು ಉಳಿಸಿಕೊಂಡಿದೆ ಮತ್ತು ಪ್ರಮುಖ ಪಂದ್ಯಾವಳಿಗಳು ವೀಕ್ಷಕರನ್ನು ಸೆಳೆಯುತ್ತಲೇ ಇರುತ್ತವೆ. ಆದರೆ, ಈ ಹಿಂದೆ ಯಾವಾಗಲೂ ಏರುತ್ತಲೇ ಇತ್ತು ಎಂಬ ಕಾರಣಕ್ಕಾಗಿ ಪ್ರಸಾರ ಹಕ್ಕುಗಳ ಶುಲ್ಕವು ಯಾವುದೇ ಅಡೆತಡೆಯಿಲ್ಲದೆ ಹೆಚ್ಚಾಗುತ್ತಿದ್ದ ಆ ಕಾಲಘಟ್ಟವು ಈಗ ತನ್ನ ಮಿತಿಯನ್ನು ತಲುಪಿರಬಹುದು ಎಂಬುದನ್ನು ಇದು ಸೂಚಿಸುತ್ತದೆ. ಕ್ರಿಕೆಟ್ ಈಗ ಒಂದು ನಿರ್ಣಾಯಕ ಘಟ್ಟವನ್ನು ತಲುಪುತ್ತಿದ್ದು, ಇಲ್ಲಿ ಕೇವಲ ಬೆಳವಣಿಗೆಯ ಪ್ರಮಾಣವಷ್ಟೇ ಅಲ್ಲದೆ, ಅದರ ಸುಸ್ಥಿರತೆಯೂ ಅಷ್ಟೇ ಪ್ರಾಮುಖ್ಯತೆಯನ್ನು ಪಡೆಯುತ್ತದೆ.
ಕೇವಲ ಆತಂಕಕ್ಕೆ ಒಳಗಾಗುವುದರಿಂದ ಮಾತ್ರ ನಾವು ಯಾವುದಾದರೂ ಪಾಠ ಕಲಿಯಲು ಸಾಧ್ಯವಿಲ್ಲ. ಬದಲಾಗಿ ವಿವೇಕದಿಂದ ವರ್ತಿಸುವುದರಿಂದ ಆ ಸ್ಥಿತಿಯನ್ನು ದಾಟಬಹುದು. ಐಸಿಸಿ ಮತ್ತು ಬಿಸಿಸಿಐ ಮಂಡಳಿಗಳಿಗೆ ಈ ಕ್ಷಣವು ತಮ್ಮ ಆದ್ಯತೆಗಳನ್ನು ಮರುಪರಿಶೀಲಿಸಲು ಒಂದು ಉತ್ತಮ ಅವಕಾಶ ಕಲ್ಪಿಸಿದೆ. ಅವರು ಕೇವಲ ವ್ಯಾಪ್ತಿಯ ವಿಸ್ತರಣೆಯಷ್ಟೇ ಅಲ್ಲದೆ, ಅದರ ಮೌಲ್ಯದ ಕಡೆಗೂ ಗಮನಹರಿಸಿ ಎರಡರ ನಡುವೆ ಸಮತೋಲನ ಕಾಯ್ದುಕೊಳ್ಳುವ ಸವಾಲನ್ನು ಎದುರಿಸಬೇಕಿದೆ. ಭಾರತದ ಆಚೆಗೂ ಮಾರುಕಟ್ಟೆಗಳನ್ನು ಬಲಪಡಿಸುವ ಮತ್ತು ಕ್ರಿಕೆಟ್‌ನ ಬೆಳವಣಿಗೆಯು ಕೇವಲ ಏಕಮುಖವಾಗಿರದೆ ಎಲ್ಲರಿಗೂ ಲಭ್ಯವಾಗುವಂತೆ ಮಾಡುವ ಅಗತ್ಯವಿದೆ. ಯಾವುದೇ ಕ್ರೀಡೆಯು ಕೇವಲ ಒಂದು ಆದಾಯದ ಎಂಜಿನ್ ಮೇಲೆ ಅತಿಯಾಗಿ ಅವಲಂಬಿತವಾಗಿದ್ದರೆ, ಆ ಎಂಜಿನ್ ಎಷ್ಟೇ ಶಕ್ತಿಶಾಲಿಯಾಗಿದ್ದರೂ ಅದರಲ್ಲಿ ಸ್ವಲ್ಪ ತಾಂತ್ರಿಕ ತೊಂದರೆ ಕಾಣಿಸಿಕೊಂಡಾಗ ಇಡೀ ಕ್ರೀಡೆಯ ಬೆಳವಣಿಗೆಯೇ ಕುಂಠಿತವಾಗುವ ಅಪಾಯವಿರುತ್ತದೆ.
ಟಿ20 ವಿಶ್ವಕಪ್ ಸನಿಹದಲ್ಲಿ ಇರುವಂತೆ, ಈ ಕ್ರೀಡಾ ವೈಭವಕ್ಕೇನು ಚ್ಯುತಿ ಉಂಟಾಗುವುದಿಲ್ಲ. ಅದು ಎಂದಿನಂತೆ ಮುಂದುವರಿಯುತ್ತದೆ. ಆದರೆ ತೆರೆಯ ಮರೆಯಲ್ಲೀಗ, ಕ್ರಿಕೆಟ್ ಆಡಳಿತಗಾರರು ಮತ್ತು ಪ್ರಸಾರಕರು ಕಳೆದ ಹಲವು ವರ್ಷಗಳಲ್ಲಿ ಕೇಳದಂತಹ ಅತ್ಯಂತ ಕಠಿಣ ಪ್ರಶ್ನೆಗಳನ್ನು ಎದುರಿಸುತ್ತಿದ್ದಾರೆ. ಕ್ರಿಕೆಟ್ ವ್ಯವಹಾರವು ನಿಜವಾಗಿಯೂ ಬೆಳೆಯುತ್ತಿದೆಯೇ? ಅಥವಾ ಹಿಂದಿನ ಆರ್ಥಿಕ ಕಾಲಘಟ್ಟದಲ್ಲಿ ನಿರ್ಮಾಣವಾದ ವೇಗವನ್ನು ನಂಬಿ ಅದು ಸಾಗುತ್ತಿದೆಯೇ? ಬಹಳ ಕಾಲದ ನಂತರ, ಮೊದಲ ಬಾರಿಗೆ ಈ ಪ್ರಶ್ನೆಗೆ ಉತ್ತರ ಪಡೆಯುವುದು ಅಷ್ಟು ಸುಲಭವೇನೂ ಅಲ್ಲ.