ತಮಿಳು ನಾಡಿನಲ್ಲಿ ಕಲಿಯಲಾಗದ ಹಿಂದಿ: ಎಲ್ಲಿ ತಪ್ಪಿತು ಕೇಂದ್ರ ಸಚಿವ ಮುರುಗನ್ ಲೆಕ್ಕಾಚಾರ?

ಕೇಂದ್ರ ಸಚಿವ ಎಲ್ ಮುರುಗನ್ ಅವರ ವಾದದ ಹೊರತಾಗಿಯೂ ತಮಿಳು ನಾಡು ದಕ್ಷಿಣ ಭಾರತ್ ಹಿಂದಿ ಪ್ರಚಾರ ಸಭಾದ ಮೂಲಕ, ವಲಸೆ ಮತ್ತು ಪಾಪ್ ಸಂಸ್ಕೃತಿಯ ಮೂಲಕ ಹಿಂದಿಯನ್ನು ಅಪ್ಪಿಕೊಂಡು ಒಂದು ಶತಮಾನವೇ ಕಳೆದಿದೆ.

Update: 2025-12-09 00:30 GMT
ತಮಿಳುನಾಡಿನಲ್ಲಿ ಹಿಂದಿ ವಿರೋಧಿ ಚಳವಳಿ ಮುನ್ನಡೆಸಿದವರು ರಾಜಕೀಯದಿಂದ ಪ್ರಭಾವಿತರಾಗಿರಬಹುದು. ಅವರು ತಪ್ಪು ಮಾಡಿರಬಹುದು, ಕೆಲವೊಮ್ಮೆ ಅವರು ಸುಳ್ಳಗಳನ್ನೂ ಹೇಳಿರಬಹುದು. ಆದರೆ ಒಂದು ವೇಳೆ ಆ ಪ್ರತಿಭಟನೆಗಳು ನಡೆಯದೇ ಇದ್ದಿದ್ದರೆ, ಹಿಂದಿಯನ್ನು ದೇಶದ ಮೇಲೆ ಬಲವಂತವಾಗಿ ಹೇರಲಾಗುತ್ತಿತ್ತು ಎಂಬುದನ್ನು ಅಲ್ಲಗಳೆಯಲಾಗದು.

1986ರಲ್ಲಿ ನಾನು ಮೊದಲ ಬಾರಿಗೆ ಚೆನ್ನೈಗೆ ಭೇಟಿ ನೀಡಿದಾಗ ಕೆಲವು ಮಂದಿ ಗೆಳೆಯರು ನಗರದ ಒಂದು ಕಾಲದ ಕುಖ್ಯಾತ ಬರ್ಮಾ ಬಜಾರ್-ಗೆ ಭೇಟಿ ನೀಡುವಂತೆ ಒತ್ತಾಯಿಸಿದರು. ಅರೆ ಸಮಾಜವಾದಿ ಭಾರತದಲ್ಲಿ ಲಭ್ಯವಿಲ್ಲದೇ ಇರುವ ವಿದೇಶಿ ನಿರ್ಮಿತ ಎಲೆಕ್ಟ್ರಾನಿಕ್ ಸರಕುಗಳು, ಸುಗಂಧ ದ್ರವ್ಯಗಳು ಮತ್ತು ಇನ್ನೂ ಹೆಚ್ಚಿನ ಸರಕುಗಳನ್ನು ಕೊಳ್ಳುವವರ ಪಾಲಿಗೆ ಅದು ಸ್ವರ್ಗದಂತಿತ್ತು.

ಆ ಸಂದರ್ಭದಲ್ಲಿ ಅಂಗಡಿಯವರು ಹಿಂದಿ ಭಾಷೆಯಲ್ಲಿ ಪ್ರಾವೀಣ್ಯ ಹೊಂದಿದವರಂತೆ ಮಾತನಾಡುತ್ತಿದ್ದ ರೀತಿಯನ್ನು ಕೇಳಿ ಅಚ್ಚರಿ ಎನಿಸಿತು. ಅಷ್ಟಕ್ಕೂ ಅವರು ಹಿಂದಿಯನ್ನು ಹೇಗೆ ಕಲಿತಿದ್ದಾರೆ ಎಂಬುದನ್ನು ತಮಿಳಿನಲ್ಲಿ ಮಧ್ಯಪ್ರವೇಶಿ ಕೇಳಿದಾಗ ಒಬ್ಬರು ತಕ್ಷಣವೇ ಹೇಳಿದ ಮಾತು ಮಾರ್ಮಿಕವಾಗಿತ್ತು; “ಸರ್, ನಮಗೆ ಹಣ ಗಳಿಸಲು ಸಹಾಯ ಮಾಡುವ ಭಾಷೆಯನ್ನು ಮಾತನಾಡುತ್ತೇವೆ!”

1960ರ ದಶಕದಲ್ಲಿ ಮ್ಯಾನ್ಮಾರ್-ನಿಂದ ಪಲಾಯನ ಮಾಡಿ ಹೊಸ ಜೀವನಕ್ಕೆ ಅಡಿಯಿಟ್ಟ ಬರ್ಮಾ ಬಜಾರ್-ನ ವ್ಯಾಪಾರಿಗಳು ತಮ್ಮ ಉದ್ಯಮಶೀಲತೆಯ ಭಾಗವಾಗಿ ತೋರಿಸಿದ ಉತ್ಸಾಹದ ಫಲವಾಗಿ ಹಿಂದಿಯನ್ನು ಸ್ವೀಕರಿಸಿರಬಹುದು. ಆದರೆ ಅದಕ್ಕೂ ಮೊದಲೇ 1920ರ ದಶಕದಿಂದಲೇ ದೆಹಲಿ, ಮುಂಬೈ ಮತ್ತು ಉತ್ತರ ಭಾರತದ ಇತರ ನಗರಗಳನ್ನು ತಮ್ಮ ನೆಲೆಯನ್ನಾಗಿ ಮಾಡಿಕೊಂಡ ಲಕ್ಷಾಂತರ ಉತ್ಸಾಹಿ ತಮಿಳರು ಕೂಡ ಹಿಂದಿಯನ್ನು ಕಲಿತರು ಎಂಬುದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ.

ಗಾಂಧಿ ಆರಂಭಿಸಿದ ಪ್ರಚಾರ ಸಭಾ

ಬ್ರಿಟಿಷರು ಭಾರತವನ್ನು ಆಳುತ್ತಿದ್ದ ಸಮಯದಿಂದ ಆರಂಭಿಸಿ 1947ರ ಸ್ವಾತಂತ್ರ್ಯಾನಂತರದ ದಿನಗಳಿಂದಲೂ ತಮಿಳುರ ರಾಷ್ಟ್ರದ ರಾಜಧಾನಿಯನ್ನು ತಮ್ಮ ಕನಿಷ್ಠ ಹಿಂದಿ ಜ್ಞಾನದೊಂದಿಗೆ ತಮ್ಮ ನೆಲೆಯನ್ನಾಗಿ ಮಾಡಿಕೊಂಡರು. ಅದಕ್ಕೆ ಮುಖ್ಯ ಕಾರಣ 1918ರಲ್ಲಿ ಮಹತ್ಮಾ ಗಾಂಧಿ ಅವರು ಮದ್ರಾಸಿನಲ್ಲಿ ಸ್ಥಾಪಿಸಿದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ.

ಆ ವರ್ಷದ ಜೂನ್ ತಿಂಗಳಲ್ಲಿ ಆ್ಯನಿ ಬೆಸೆಂಟ್ ಅವರು ಉದ್ಘಾಟಿಸಿದ ಪ್ರವರ್ತಕ ಸಂಸ್ಥೆಯಿಂದ 1919ರಲ್ಲಿ 80 ಮಂದಿ ವಿದ್ಯಾರ್ಥಿಗಳು ಹಿಂದಿ ಕಲಿತು ಹೊರಬಂದರು. ಅಲ್ಲಿಂದೀಚೆಗೆ ದಕ್ಷಿಣ ಭಾರತದಿಂದ ಸಾವಿರಾರು ಮಂದಿ ವಿದ್ಯಾರ್ಥಿಗಳು ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಿಂದ ಪದವಿಯನ್ನು ಪಡೆದಿದ್ದಾರೆ.

ಈಗ ದಿವಂಗತರಾಗಿರುವ ನನ್ನ ಪಾಲಕರು 1948ರಲ್ಲಿ ದೆಹಲಿಗೆ ಬಂದಾಗ ಹಿಂದಿ ಮಾತನಾಡಲು ಕಲಿತಿದ್ದರೆ ಅದಕ್ಕೆ ಮುಖ್ಯ ಕಾರಣ ಹಿಂದಿ ಪ್ರಚಾರ ಸಭಾ. ಹಿಂದಿಯನ್ನು ಮಾತನಾಡದೇ ಇರುವ ದಕ್ಷಿಣ ಭಾರತದಲ್ಲಿ ಆ ಭಾಷೆಯನ್ನು ಪ್ರಚಾರ ಮಾಡುವುದು ಮಹತ್ಮಾ ಗಾಂಧಿಯವರ ಉದ್ದೇಶವಾಗಿತ್ತು.

ಈ ಮಾತು ಸಾವಿರಾರು ಮಂದಿ ಇತರ ತಮಿಳರಿಗೂ ನಿಜವಾಗಿತ್ತು. ಸ್ವಾತಂತ್ರ್ಯ ಗಳಿಸಿದ ಬಳಿಕ ಉತ್ತರ ಭಾರತಕ್ಕೆ ವಲಸೆ ಹೋಗುವವರ ಸಂಖ್ಯೆ ಹೆಚ್ಚಾಯಿತು. ಯಾಕೆಂದರೆ ಬೆಳವಣಿಗೆ ಕಾಣುತ್ತಿದ್ದ ಸರ್ಕಾರಿ ನೌಕರಶಾಹಿಗೆ ಶೀಘ್ರಲಿಪಿ ಟೈಪಿಂಗ್ ಮತ್ತು ಇಂಗ್ಲಿಷ್ ಜ್ಞಾನ ಇರುವವರ ಅಗತ್ಯವಿತ್ತು.

ಪ್ರತಿಭಟನೆಯೂ ಹಿಂದಿ ಸಿನೆಮಾ ಪ್ರಭಾವವೂ

1960ರ ದಶಕದಲ್ಲಿ ದ್ರಾವಿಡ ರಾಜಕೀಯ ಬಣಗಳಿಂದ ವ್ಯಾಪಕ ಮಟ್ಟದ ಹಿಂದಿ ವಿರೋಧಿ ಚಳವಳಿ ಮೊದಲ್ಗೊಂಡಿತು. ಆದರೆ ಅದರ ತೀವ್ರತೆ ಕಡಿಮೆಯಾದ ಬಳಿಕ ಹಿಂದಿ ಚಿತ್ರರಂಗವು ಪೂರ್ವ ನಿಯೋಜಿತವಾಗಿ ದೊಡ್ಡ ಪ್ರಮಾಣದಲ್ಲಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಪ್ರಚಾರ ಮಾಡಿತು. ಅದು ಹಿಂದಿ ಪ್ರಚಾರ ಸಭಾಗಿಂತಲೂ ಹೆಚ್ಚಿನದಾಗಿತ್ತು.

1991ರಲ್ಲಿ ಭಾರತವು ತನ್ನ ಅರ್ಥ ವ್ಯವಸ್ಥೆಯನ್ನು ಅಭೂತಪೂರ್ವವಾದ ರೀತಿಯಲ್ಲಿ ಉದಾರೀಕರಣದತ್ತ ಕೊಂಡೊಯ್ಯಲು ಕೈಗೊಂಡ ನಿರ್ಧಾರದ ಫಲವಾಗಿ ಭಾರತದ ನಾನಾ ಭಾಗಗಳ ಖಾಸಗಿ ವಲಯದಲ್ಲಿ ಉದ್ಯೋಗಗಳು ಹೆಚ್ಚಾದವು. ಹಿಂದಿಯನ್ನು ಕಲಿತುಕೊಳ್ಳುವುದು ಭಾರತದ ಇತರ ಭಾಗಗಳಲ್ಲಿ ಒಂದು ಆಸ್ತಿಯಾಗುತ್ತದೆ ಎಂಬುದು ಸ್ಪಷ್ಟವಾಗುತ್ತ ಹೋದ ಹಾಗೆ ಭಾಷೆಯನ್ನು ಕಲಿಯಲು ಸಹಜವಾಗಿ ಪ್ರೋತ್ಸಾಹ ದೊರೆಯಿತು.

ಅಚ್ಚರಿ ತಂದ ಸಚಿವರ ಹೇಳಿಕೆ

ವಾರಾಣಸಿಯಲ್ಲಿ ನಡೆದ ಕಾಶಿ ತಮಿಳು ಸಂಗಮದಲ್ಲಿ ಭಾರತೀಯ ಜನತಾ ಪಕ್ಷದ ಕೇಂದ್ರ ಸಚಿವ ಎಲ್. ಮುರುಗನ್ ಅವರು ಮಾತನಾಡಿ, ರಾಜ್ಯದ ದ್ರಾವಿಡ ಪರಂಪರೆಯ ಕಾರಣದಿಂದಾಗಿ ತಮಿಳುನಾಡಿನಲ್ಲಿ ಹಿಂದಿ ಕಲಿಯಲು ತಮಗೆ ಸಾಧ್ಯವಾಗಲಿಲ್ಲ ಎಂದು ಹೇಳಿಕೊಂಡಿದ್ದನ್ನು ಕೇಳಿ ನನಗೆ ಆಶ್ಚರ್ಯವಾಯಿತು. ಇದು ರಾಜಕೀಯ ಲಾಭಕ್ಕಾಗಿ ಮಾಡಿದ ಹೇಳಿಕೆಯೇ ಹೊರತು ಸತ್ಯಾಂಶಗಳನ್ನು ಆಧರಿಸಿದ್ದಲ್ಲ. ಈಗ ತಮಗೆ ತಿಳಿದಿರುವ ಹಿಂದಿಯೆಲ್ಲವೂ ದೆಹಲಿಗೆ ಬಂದ ಮೇಲೆ ಕಲಿತಿದ್ದಾಗಿದೆ ಎಂದು ಅವರು ಹೇಳಿಕೊಂಡರು.

“ಹಿಂದಿ ಕಲಿಯುವ ಅವಕಾಶದಿಂದ ನಾನು ಯಾಕೆ ವಂಚಿತನಾಗಿದ್ದೇನೆ?’ ಎಂದು ಸ್ವಯಂ-ನೀತಿವಂತ ಧ್ವನಿಯಲ್ಲಿ ಹೇಳಿದ ಅವರು, 'ನಾನು ಹಿಂದಿ ಕಲಿಯುತ್ತೇನೆ, ಅದು ನನ್ನ ಹಕ್ಕು. ಆದರೆ ಅಲ್ಲಿ (ತಮಿಳುನಾಡಿನಲ್ಲಿ) ಅವಕಾಶಗಳಿಲ್ಲ,' ಎಂದರು.

ಮುರುಗನ್ ಅವರು ಆಡಿದ ಈ ಮಾತುಗಳು, ಭಾಷಾ ವಿವಾದದ ಬಗ್ಗೆ ಹರಡಲಾಗುವ ಸುಳ್ಳುಗಳಿಗೆ, ವಿಶೇಷವಾಗಿ ಎಂದಿಗೂ ಕೊನೆಗೊಳ್ಳದ ಹಿಂದಿ-ವಿರುದ್ಧ-ತಮಿಳು ವಿವಾದಕ್ಕೆ ಒಂದು ಪರಿಪೂರ್ಣ ಉದಾಹರಣೆಯಾಗಿವೆ.

ಮುರುಗನ್ ಅವರು ಜನಸಿದ್ದು 1977ರ ಮೇ ತಿಂಗಳಲ್ಲಿ. ಆ ಹೊತ್ತಿಗಾಗಲೇ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದವರು ಸುಮಾರು 60 ಸುದೀರ್ಘ ವರ್ಷಗಳ ಕಾಲ ಲಕ್ಷಾಂತರ ದಕ್ಷಿಣ ಭಾರತೀಯರಿಗೆ, ಅವರಲ್ಲೂ ಹೆಚ್ಚಿನ ಸಂಖ್ಯೆಯ ತಮಿಳರಿಗೆ, ಹಿಂದಿಯನ್ನು ಕಲಿಸಿದ್ದರು.

ಕಲಿಯಲು ವಿಪುಲ ಅವಕಾಶವಿತ್ತು

ತಮಿಳು, ತೆಲುಗು ಮತ್ತು ಇಂಗ್ಲಿಷ್ನಲ್ಲಿ ನಿರರ್ಗಳವಾಗಿ ಮಾತನಾಡಬಲ್ಲ ಮುರುಗನ್ ಅವರು ನಿಜವಾಗಿಯೂ ಆಸಕ್ತಿ ತೋರಿದ್ದರೆ, ಚೆನ್ನೈನಲ್ಲಿ ಸುಲಭವಾಗಿ ಹಿಂದಿ ಅಭ್ಯಾಸ ಮಾಡಿಕೊಳ್ಳಬಹುದಿತ್ತು. ಮತ್ತು ಅವರು ತಮಿಳು ಸಂಕುಚಿತವಾದಿ ಅಲ್ಲದ ಕಾರಣ ತಮಿಳುನಾಡಿನ ಇತರ ಅನೇಕರಂತೆ, ಹಿಂದಿ ಚಲನಚಿತ್ರಗಳನ್ನು ನೋಡುವ ಮೂಲಕವೂ ತಮ್ಮ ಹಿಂದಿ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದಿತ್ತು.

ತಮಿಳುನಾಡಿನ ಸರ್ಕಾರಿ ಶಾಲೆಗಳು ಕೆಲವು ಕಾಲ ಹಿಂದಿ ಕಲಿಸಿರಬಹುದು ಅಥವಾ ಕಲಿಸದೇ ಇರಬಹುದು, ಆದರೆ ಇದರಿಂದ ಲಕ್ಷಾಂತರ ಜನರು ಹಿಂದಿ ಕಲಿಯುವುದನ್ನೇನೂ ತಡೆಯಲು ಸಾಧ್ಯವಾಗಲಿಲ್ಲ. ಅಷ್ಟಕ್ಕೂ ಭಾರತದಾದ್ಯಂತ ಇರುವ ಶಾಲೆಗಳು ವಾಸ್ತುಶಿಲ್ಪ, ಪತ್ರಿಕೋದ್ಯಮ ಅಥವಾ ನಾಗರಿಕ ವಿಮಾನಯಾನದಂತಹ ಅನೇಕ ವಿಷಯಗಳನ್ನು ಕಲಿಸುವುದಿಲ್ಲ, ಆದರೆ ಇದು ಜನರು ಈ ವೃತ್ತಿಗಳನ್ನು ಆಕರ್ಷಕವಾಗಿ ಮಾಡುವುದನ್ನು ತಡೆಯುವುದಿಲ್ಲ.

ಹಿಂದಿಗೆ ಹೆಚ್ಚಿದ ಆಕರ್ಷಣೆ

ತಮಿಳುನಾಡಿನ ಕಟ್ಟಾ ಮೂಲಭೂತವಾದಿ ದ್ರಾವಿಡ ರಾಜಕಾರಣಿಗಳ ಒಂದು ವರ್ಗವು ಹಿಂದಿಯೊಂದಿಗೆ ಯಾವುದೇ ಸಂಬಂಧವನ್ನು ಬಯಸದೇ ಇರಬಹುದು. ಅದು ಅವರ ಹಕ್ಕು. ಕೆಲವರು ದೇವರಲ್ಲಿ ನಂಬಿಕೆ ಇಡದೇ ಇರಬಹುದು. ಅದೂ ಅವರ ವಿಶೇಷ ಹಕ್ಕು. ಆದರೆ, ಉಳಿದ ರಾಜ್ಯಗಳಿಗೆ ಹೋಲಿಸಿದರೆ ತಮಿಳುನಾಡಿನಲ್ಲಿ ಹಿಂದಿ ಪ್ರಾವೀಣ್ಯತೆ ಪಡೆದವರ ಸಂಖ್ಯೆ ಕಡಿಮೆ ಇರಬಹುದಾದರೂ, ಹಿಂದಿಗೆ ರಾಜ್ಯದಲ್ಲಿ ಹೆಚ್ಚು ಹೆಚ್ಚು ಆಕರ್ಷಣೆ ಸಿಗುತ್ತಿದೆ ಎಂಬುದು ಮಾತ್ರ ಸತ್ಯ.

ಇನ್ನೊಂದು ಬಹುಮುಖ್ಯ ಕಾರಣವೆಂದರೆ ಎರಡೂ ಕಡೆಗಳಿಂದ ಆಗುತ್ತಿರುವ ವಲಸೆ. ತಮಿಳರು ತಮಿಳುನಾಡಿನ ಹೊರಗೆ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಾರೆ, ಹಿಂದಿ ಮಾತನಾಡುವ ರಾಜ್ಯಗಳು ಮತ್ತು ಈಶಾನ್ಯ ರಾಜ್ಯಗಳಿಂದ ಬಂದ ತಮಿಳರು ಅಲ್ಲದವರು ಕೂಡ ರಾಜ್ಯದಲ್ಲಿ ಸಣ್ಣ, ಮಧ್ಯಮ ಮತ್ತು ದೊಡ್ಡ ವ್ಯವಹಾರಗಳನ್ನು ಸ್ಥಾಪಿಸುವುದರ ಜೊತೆಗೆ ಉದ್ಯೋಗವನ್ನು ಕಂಡುಕೊಳ್ಳುತ್ತಿರುತ್ತಾರೆ. ಇಂತಹ ಎಲ್ಲಾ ಸಂದರ್ಭಗಳಲ್ಲಿಯೂ, ಹಿಂದಿಯ ಕನಿಷ್ಠ ಜ್ಞಾನವು ಅತ್ಯಗತ್ಯ. ಹಿಂದಿಯ ಪ್ರಾವೀಣ್ಯತೆ ಇಲ್ಲದಿದ್ದರೂ, ಅದರ ಕೆಲಸ ನಿರ್ವಹಿಸುವ ಜ್ಞಾನವಿದ್ದರೆ ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ.

ತಮಿಳುನಾಡಿನಲ್ಲಿ ಹಿಂದಿ ಚಲನಚಿತ್ರಗಳ ಮೇಲಿರುವ ಪ್ರೀತಿ ಹೆಚ್ಚುತ್ತಿರುವಂತೆಯೇ ಹಿಂದಿ ಮಾತನಾಡುವ ಪ್ರದೇಶಗಳಲ್ಲಿ ದಕ್ಷಿಣ ಭಾರತದ ಚಲನಚಿತ್ರಗಳಿಗಾಗಿ ಹಸಿವು ಹೆಚ್ಚುತ್ತಿದೆ. ಇದಕ್ಕಾಗಿ ನಾವು ಉಪಶೀರ್ಷಿಕೆಗಳು (subtitles) ಅಥವಾ ಡಬ್ಬಿಂಗ್ನ ಬಳಕೆಗೆ ಥ್ಯಾಂಕ್ಸ್ ಹೇಳಲೇಬೇಕು.

ಆಕ್ಷೇಪಣೆ ಯಾವುದಕ್ಕೆ?

ತಮಿಳುನಾಡಿನಲ್ಲಿ ಹಿಂದಿ ಭಾಷೆಗೆ ಇರುವ ನಿಜವಾದ ಆಕ್ಷೇಪಣೆಯು ಕೇವಲ ಹಿಂದಿಯ ಬಗೆಗಲ್ಲ, ಆದರೆ ಅದನ್ನು ಇತರ ಭಾಷೆ ಮಾತನಾಡುವವರ ಮೇಲೆ ಬಲವಂತವಾಗಿ ಹೇರುವುದಕ್ಕೆ ಸಂಬಂಧಿಸಿದ್ದಾಗಿದೆ. ಈ ಭಯವು ಕಲ್ಪಿತವಾದುದಲ್ಲ.

ದೆಹಲಿಯಲ್ಲಿ ಹುಟ್ಟಿ ಬೆಳೆದ ಕಾರಣ, ನನಗೆ ಮಾತನಾಡುವ ಹಿಂದಿಯ ಮೇಲೆ ಸಂಪೂರ್ಣ ಹಿಡಿತವಿದೆ. ನಾನು ಯಾವುದೇ ಅಡೆತಡೆಗಳಿಲ್ಲದೆ ಗಂಟೆಗಟ್ಟಳೆ ಭಾಷೆಯನ್ನು ಮಾತನಾಡಬಲ್ಲೆ. ನಿಜಕ್ಕೂ, ನಾನು ಹಿಂದಿಯನ್ನು ಪ್ರೀತಿಸುತ್ತೇನೆ. ಆದರೆ, ಅಧಿಕಾರಿಗಳು ಹಿಂದಿಯನ್ನು ಹೇರಲು ಪ್ರಯತ್ನಿಸುವ ನಿದರ್ಶನಗಳನ್ನು ಕಂಡಾಗ ಬೇಸರವಾಗುತ್ತದೆ. ಆದ್ದರಿಂದ, ತಮಿಳುನಾಡಿನ ಭಾವನೆಗಳನ್ನು ನಾನು ಚೆನ್ನಾಗಿ ಊಹಿಸಬಲ್ಲೆ.

ತಮಿಳುನಾಡಿನಲ್ಲಿ ಹಿಂದಿ ವಿರೋಧಿ ಚಳವಳಿ ಮುನ್ನಡೆಸಿದವರು ರಾಜಕೀಯದಿಂದ ಪ್ರಭಾವಿತರಾಗಿರಬಹುದು. ಅವರು ತಪ್ಪುಗಳನ್ನು ಮಾಡಿರಬಹುದು ಮತ್ತು/ಅಥವಾ ಮಿತಿಮೀರಿದ ವರ್ತನೆಗಳಲ್ಲಿಯೂ ತೊಡಗಿರಬಹುದು. ಕೆಲವೊಮ್ಮೆ ಅವರು ಸುಳ್ಳಗಳನ್ನೂ ಹೇಳಿರಬಹುದು. ಆದರೆ ಒಂದು ವೇಳೆ ಆ ಪ್ರತಿಭಟನೆಗಳು ನಡೆಯದೇ ಇದ್ದಿದ್ದರೆ, ಹಿಂದಿಯನ್ನು ದೇಶದ ಮೇಲೆ ಬಲವಂತವಾಗಿ ಹೇರಲಾಗುತ್ತಿತ್ತು ಮತ್ತು ಅದು ದುರಂತದ ಪರಿಣಾಮಗಳನ್ನು ಉಂಟುಮಾಡುತ್ತಿತ್ತು ಎಂದು ನಾನು ದೃಢವಾಗಿ ನಂಬುತ್ತೇನೆ.

ಹಿಂದಿ ಹುಚ್ಚು ಅಭಿಮಾನಿಗಳು

ಕೇವಲ ಸಣ್ಣ ಅವಕಾಶ ಸಿಕ್ಕರೂ ಹಿಂದಿ ಭಾಷಾಭಿಮಾನಿಗಳು ತಮ್ಮ ನಿಜ ಸ್ವರೂಪವನ್ನು ಹೊರಹಾಕುತ್ತಾರೆ ಎಂಬುದನ್ನು ತಿಳಿಯಲು, ಕಾಸ್ಮೋಪಾಲಿಟನ್ ಎಂದು ಹೇಳಲಾಗುವ ದೆಹಲಿ ಸೇರಿದಂತೆ, ಹಿಂದಿ ಮಾತನಾಡುವ ಪ್ರದೇಶದಲ್ಲಿ ವಾಸಮಾಡಿ ನೋಡಬೇಕಾಗುತ್ತದೆ. ಇದು ಕೇವಲ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನೊಂದಿಗೆ ಮಾತ್ರ ಸಂಬಂಧಿಸಿದ ಕಾಯಿಲೆಯಲ್ಲ; ಹಿಂದಿ ಹುಚ್ಚು ಅಭಿಮಾನಿಗಳು ದಶಕಗಳಿಂದಲೂ ಇದ್ದಾರೆ.

ಹಲವು ವರ್ಷಗಳ ಹಿಂದೆ, ದೆಹಲಿಯ ಸರ್ಕಾರಿ ಆಸ್ಪತ್ರೆಯೊಂದು ಅಲ್ಲಿನ ಮಲಯಾಳಂ ಮಾತನಾಡುವ ನರ್ಸ್‌ಗಳಿಗೆ ತಮ್ಮ ಮಾತೃಭಾಷೆಯ ಬದಲು ಹಿಂದಿಯಲ್ಲಿಯೇ ಮಾತನಾಡುವಂತೆ ಸೂಚಿಸುವ ಸುತ್ತೋಲೆ ಹೊರಡಿಸಿದಾಗ ದೊಡ್ಡ ಕೋಲಾಹಲ ಉಂಟಾಗಿತ್ತು.

ರಕ್ಷಣಾ ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದ ಮತ್ತು ಈಗ ನಿವೃತ್ತರಾಗಿರುವ ನಮ್ಮ ಕುಟುಂಬದ ಸ್ನೇಹಿತರೊಬ್ಬರಿಗೆ, ವಾಡಿಕೆಯಂತೆ ಆಚರಿಸುವ "ಹಿಂದಿ ಪಕ್ಷ"ದ ಸಮಯದಲ್ಲಿ ಹಿಂದಿಯಲ್ಲಿ ಸಹಿ ಮಾಡಲು ಹೇಳಿದಾಗ ಅವರು ಆಶ್ಚರ್ಯಚಕಿತರಾಗಿದ್ದರು.

ಆಗಾಗ್ಗೆ ಹಿಂದಿನ ಹಿಂದಿ ಮತ್ತು ಇಂಗ್ಲಿಷ್ ಬಳಸುತ್ತಿದ್ದ ಸ್ಥಳೀಯ ಬಿಲ್‌ಗಳು ಮತ್ತು ಫಾರ್ಮ್‌ಗಳು ಈಗ ಕೇವಲ ಹಿಂದಿಯಲ್ಲಿ ಮಾತ್ರ ಇರುವುದನ್ನು ನೋಡುತ್ತೇನೆ. ಸರ್ಕಾರಿ ಯೋಜನೆಗಳು ಮತ್ತು ಕಚೇರಿಗಳಿಗೆ ಹಿಂದಿ ಅಥವಾ ಹಿಂದಿ ಮತ್ತು ಸಂಸ್ಕೃತದ ಮಿಶ್ರಣದ ಹೆಸರನ್ನು ಇಡಲಾಗುತ್ತಿದೆ.

ಹಿಂದಿ ಪತ್ರಕ್ಕೆ ಮಲಯಾಳಂ ಉತ್ತರ

ಕೇಂದ್ರ ಸರ್ಕಾರವು ಹಿಂದಿಯನ್ನು ಏಕೈಕ ಅಧಿಕೃತ ಭಾಷೆಯನ್ನಾಗಿ ಮಾಡುವ ತಮ್ಮ ಉತ್ಸಾಹದ ಪ್ರಯತ್ನದಲ್ಲಿ, ಕೇರಳ ಸರ್ಕಾರಕ್ಕೆ ಹಿಂದಿಯಲ್ಲಿಯೇ ಒಂದು ದೊಡ್ಡ ಪತ್ರವನ್ನು ಕಳುಹಿಸಿತ್ತು. ಆದರೆ ಅದಕ್ಕೆ ಪ್ರತಿಯಾಗಿ ವಿವರವಾದ ಉತ್ತರವನ್ನು ಪಡೆದಿದ್ದು ಮಲಯಾಳಂ ಭಾಷೆಯಲ್ಲಿ.

ಮುರುಗನ್ ಅವರಂತಹ ರಾಜಕಾರಣಿಗಳು ಭಾಷಾ ವಿವಾದದಿಂದ ದೂರವಿದ್ದರೆ ಹಿಂದಿ ಮತ್ತು ತಮಿಳು ಎರಡಕ್ಕೂ ಉತ್ತಮ.. ಹಿಂದಿಯು ತನ್ನದೇ ಶಕ್ತಿಯ ಮೇಲೆ ನಿಧಾನ ಮತ್ತು ಸ್ಥಿರವಾಗಿ ಬೆಳೆಯುವ ಸಾಮರ್ಥ್ಯವನ್ನು ಹೊಂದಿದೆ. ಆದರೆ, ಎಲ್ಲಕ್ಕಿಂತ ಮುಖ್ಯವಾಗಿ, ತಮಿಳುನಾಡಿನಲ್ಲಿ ಹಿಂದಿ ಕಲಿಯಲು ಬಯಸುವ ಯಾರೇ ಆದರೂ ಅದನ್ನು ಖಂಡಿತವಾಗಿ ಕಲಿಯಬಹುದು. ಈ ವಿಷಯದಲ್ಲಿ ಸಚಿವ ಮುರುಗನ್ ಅವರ ಹೇಳಿಕೆಯು ದುರುದ್ದೇಶಪೂರಿತವಾಗಿ ತಪ್ಪೇ ಎಂದು ಹೇಳಬೇಕಾಗುತ್ತದೆ.

Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ದ ಫೆಡರಲ್‌ನ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ ದ ಫೆಡರಲ್‌ ಇಂಗ್ಲಿಷ್‌ ಜಾಲತಾಣದಲ್ಲಿ ಪ್ರಕಟವಾಗಿದೆ.

Tags:    

Similar News