ಕೋಮು ದ್ವೇಷ ಕಾರುವವರು ಈಗ ಗಪ್-ಚುಪ್: ಕಿಡಿಗೇಡಿಗಳ ಹೆಡೆಮುರಿ ಕಟ್ಟುತ್ತಿರುವ ಮಂಗಳೂರು ಪೊಲೀಸರು

ದ್ವೇಷ ಭಾಷಣದ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳು, ರಾಜಕೀಯ ಹತ್ಯೆಗಳಲ್ಲಿ ಆರೋಪಿಗಳ ಬಂಧನ ಮುಂತಾದ ಕ್ರಮಗಳು ಜಿಲ್ಲೆಯಲ್ಲಿ ತೀವ್ರಗಾಮಿ ಗುಂಪುಗಳು ಗಲಭೆ ಸೃಷ್ಟಿಸದಂತೆ ಕಡಿವಾಣ ಹಾಕಿದೆ..

Update: 2025-12-19 04:54 GMT
ಮಂಗಳೂರಿನ ಶಾಂತ ನೋಟ

ಮಂಗಳೂರು ಕೋಮುಸೂಕ್ಷ್ಮ ಪ್ರದೇಶ ಎಂಬ ಹಣೆಪಟ್ಟಿ ಕಟ್ಟಿಕೊಳ್ಳುವುದಕ್ಕೆ ಅಲ್ಲಿನ ಎರಡು ಪ್ರಮುಖ ಸಮುದಾಯಗಳ ನಡುವೆ ಆಳವಾಗಿ ಬೇರುಬಿಟ್ಟಿರುವ ದ್ವೇಷಕ್ಕಿಂತ ಹೆಚ್ಚಾಗಿ ಹಿಂದುತ್ವ ಮತ್ತು ಇಸ್ಲಾಮಿಕ್‌ ಗುಂಪುಗಳ ನಡುವಿನ ರಾಜಕೀಯ ಧ್ರುವೀಕರಣವೇ ಮುಖ್ಯ ಕಾರಣ.

ಧಾರ್ಮಿಕ ಹಿಂಸಾಚಾರಗಳಿಗೆ ಸಾಕ್ಷಿಯಾದ ಇತರ ನಗರಗಳಲ್ಲಿ ಸಾಮಾನ್ಯವಾಗಿ ಗುಂಪುಗಳು ಲೂಟಿ ಮಾಡುವುದು, ಬೆಂಕಿ ಹಚ್ಚುವುದು ಅಥವಾ ಕೊಲೆ ಮಾಡುವಂತಹ ಘಟನೆಗಳಲ್ಲಿ ನಿರತವಾಗುತ್ತವೆ. ಆದರೆ ಮಂಗಳೂರು ಅಥವಾ ಉಡುಪಿಯಲ್ಲಿ ಜನ ಹೀಗೆ ಪರಸ್ಪರ ಕಾದಾಡಿಲ್ಲ ಅಥವಾ ಸಂಘರ್ಷಕ್ಕೆ ಇಳಿದಿಲ್ಲ. ಇಲ್ಲಿನ ಮಾತು-ಕೃತಿಯಲ್ಲಿನ ಹಿಂಸಾಚಾರವು ಕೇವಲ ಕೋಮು ಸಿದ್ಧಾಂತವನ್ನು ಪ್ರತಿಪಾದಿಸುವ ಆರ್.ಎಸ್ಎಸ್-ಬಿಜೆಪಿ ಮತ್ತು ಮುಸ್ಲಿಂ ಪರವಾಗಿ ಧ್ವನಿ ಎತ್ತುವ ಎಸ್.ಡಿ.ಪಿ.ಐಯಂತಹ ಸಂಘಟನೆಗಳಿಗೆ ಮಾತ್ರ ಸೀಮಿತವಾಗಿದೆ.

ಕೆಲವು ಸಂದರ್ಭಗಳಲ್ಲಿ ವಿದ್ಯಾರ್ಥಿಗಳನ್ನು ಕೂಡ ಈ ವಿಚಾರಗಳಲ್ಲಿ ತೊಡಗಿಸಿಕೊಳ್ಳಲಾಗುತ್ತದೆ. ಇದಕ್ಕೆ ಉದಾಹರಣೆ ಎಂಬಂತೆ 2022ರಲ್ಲಿ ಉಡುಪಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸದಂತೆ ತಡೆದಿದ್ದನ್ನು ಗಮನಿಸಬಹುದು. ನಂತರ ಹಿಂದು ಸಂಘಟನೆಗಳು ಹಿಂದೂ ವಿದ್ಯಾರ್ಥಿಗಳಿಂದ ಕೇಸರಿ ಶಾಲು ಮತ್ತು ಪೇಟಗಳನ್ನು ಧರಿಸುವಂತೆ ಪ್ರಚೋದಿಸಿದಾಗ ಈ ವಿಷಯವು ದೊಡ್ಡ ವಿವಾದವಾಗಿ ಬೆಳೆಯಿತು. ಅಂತಿಮವಾಗಿ ಕಾಲೇಜುಗಳಲ್ಲಿ ಸಮವಸ್ತ್ರ ಧರಿಸುವುದನ್ನು ಕಡ್ಡಾಯಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಯಿತು. ಸರ್ಕಾರವು ಅದಕ್ಕೆ ಒಪ್ಪಿಗೆ ನೀಡುವ ಮೂಲಕ ಪರೋಕ್ಷವಾಗಿ ಹಿಜಾಬ್‌ ನಿಷೇಧವನ್ನು ಹೇರಿತು.

ಕೋಮುಸಂಘರ್ಷದ ಕಂದಕ

ಹಿಂದೂ ಮತ್ತು ಮುಸ್ಲಿಂ ವಿದ್ಯಾರ್ಥಿಗಳು ಪರಸ್ಪರ ಸ್ನೇಹಿತರಾಗದೇ ಇರುವಂತೆ ಅಥವಾ ಜೊತೆ ಜೊತೆಯಲ್ಲಿ ಸಂಭ್ರಮಿಸದಂತೆ ತಡೆಯುವುದು, ಹಬ್ಬಗಳ ಸಮಯದಲ್ಲಿ ದೇವಸ್ಥಾನದ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ವಿಧಿಸುವುದು, ಜಾನುವಾರು ವ್ಯಾಪಾರಿಗಳಿಗೆ ಕಿರುಕುಳ ನೀಡುವುದು ಮತ್ತು ಅವರ ಮೇಲೆ ಹಲ್ಲೆ ಮಾಡುವುದು, ಮಸೀದಿಗಳ ಮುಂದೆ ಉದ್ದೇಶಪೂರ್ವಕವಾಗಿ ಅತಿಯಾದ ಶಬ್ಧದೊಂದಿಗೆ ಹಬ್ಬಗಳನ್ನು ಆಚರಿಸುವುದು ಹಾಗೂ ಸೇಡಿನ ರಾಜಕೀಯದ ಕೊಲೆಗಳ ಮೂಲಕ ಕೋಮುಸಂಘರ್ಷದ ಕಂದಕಗಳನ್ನು ಸೃಷ್ಟಿಸಲಾಗುತ್ತಿತ್ತು ಅಥವಾ ಅವುಗಳನ್ನು ಮತ್ತಷ್ಟು ಬೆಳೆಸಲು ಪ್ರಚೋದನೆ ನೀಡಲಾಗುತ್ತಿತ್ತು.

ಈ ಗುಂಪುಗಳು ಸಾಮಾನ್ಯವಾಗಿ ರಿಕ್ಷಾಚಾಲಕರು, ಬಸ್ ಕಂಡಕ್ಟರ್-ಗಳು ಅಥವಾ ಗೂಡಂಗಡಿ ಮಾಲೀಕರು ನೀಡುವ ಮಾಹಿತಿಯ ಆಧಾರದಲ್ಲಿ ಕಾರ್ಯನಿರ್ವಹಿಸುತ್ತವೆ. ಜನರು, ಬಹುಮಟ್ಟಿಗೆ, ಮೌನ ಅನುಮೋದಕರಾಗಿರುತ್ತಾರೆ.

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಮೇ 2023 ರವರೆಗಿನ ಬಿಜೆಪಿಯ ಎರಡು ವರ್ಷಗಳ ಆಡಳಿತ ಅವಧಿಯಲ್ಲಿ ಕೋಮು ಗಲಭೆ ಅಬ್ಬರದಿಂದ ಕೂಡಿತ್ತು. ಮಂಗಳೂರು ನಗರ ಪೊಲೀಸ್ ಆಯುಕ್ತರ ಪ್ರಕಾರ, ಕಳೆದ 15 ವರ್ಷಗಳ ಅವಧಿಯಲ್ಲಿ 18 ಪ್ರತೀಕಾರದ ರಾಜಕೀಯ ಹತ್ಯೆಗಳು ನಡೆದಿದ್ದವು. ನಂತರ ಕಳೆದ ಮೂರು ವರ್ಷಗಳಿಂದ ಈ ಹತ್ಯೆಗಳಿಗೆ ವಿರಾಮ ಬಿದ್ದಿತ್ತು. ಆದರೆ, 2025ರ ಏಪ್ರಿಲ್ ಅಂತ್ಯದಲ್ಲಿ ನಡೆದ ಘಟನೆಯನ್ನು ಹೊರತುಪಡಿಸಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಹುತೇಕ ಕೋಮು ಶಾಂತಿ ನೆಲೆಸಿದೆ.

ಸೇಡಿನ ರಾಜಕೀಯ ಹತ್ಯೆಗಳು

ಸ್ಥಳೀಯ ಕ್ರಿಕೆಟ್ ಪಂದ್ಯ ನಡೆಯುತ್ತಿದ್ದಾಗ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗಿದ ಆರೋಪದ ಮೇರೆಗೆ (ನಂತರ ಅದು ಸುಳ್ಳು ಎಂದು ತಿಳಿದುಬಂತು), ನಗರದ ಹೊರವಲಯದಲ್ಲಿ ಅಶ್ರಫ್ ಎಂಬ ಕಾರ್ಮಿಕನನ್ನು ಗುಂಪೊಂದು ಹೊಡೆದು ಕೊಲೆಗೈದಿತು. ಕೆಲವು ದಿನಗಳ ನಂತರ, ಅಂದರೆ ಮೇ ಒಂದರಂದು, ಮಂಗಳೂರು ವಿಮಾನ ನಿಲ್ದಾಣದ ಬಳಿ ಐದು ಕ್ರಿಮಿನಲ್ ಪ್ರಕರಣಗಳಲ್ಲಿ ಶಾಮೀಲಾಗಿದ್ದ ಮತ್ತು 'ಹಿಂದುತ್ವದ ಯೋಧ' ಎಂದು ಕರೆಸಿಕೊಂಡಿದ್ದ ಗ್ಯಾಂಗ್‌ಸ್ಟರ್ ಸುಹಾಸ್ ಶೆಟ್ಟಿಯನ್ನು ಹತ್ಯೆಗೈಯಲಾಯಿತು. ಬಜರಂಗದಳದ ಸದಸ್ಯನಾಗಿದ್ದ ಈತ, ಮೂರು ವರ್ಷಗಳ ಹಿಂದೆ ನಡೆದಿದ್ದ ಮುಸ್ಲಿಂ ಯುವಕನ ಕೊಲೆ ಪ್ರಕರಣದ ಆರೋಪಿಯಾಗಿದ್ದು, ಆಗ ಜಾಮೀನಿನ ಮೇಲೆ ಹೊರಬಂದಿದ್ದ.

ನಂತರ ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಗೆ ಹಸ್ತಾಂತರಿಸಲಾಯಿತು. ಎಸ್‌ಡಿಪಿಐನ (SDPI) ಸಹವರ್ತಿ ಸಂಸ್ಥೆಯಾದ ಮತ್ತು ನಿಷೇಧಿತ ತೀವ್ರಗಾಮಿ ಮುಸ್ಲಿಂ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (PFI) ಸದಸ್ಯರು ಈ ಕೃತ್ಯದ ಹಿಂದೆ ಇದ್ದಾರೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು. ಇದಕ್ಕೆ ಪ್ರತೀಕಾರವಾಗಿ, ಮಸೀದಿಯೊಂದರ ಕಾರ್ಯದರ್ಶಿ (ಮತ್ತು ಮರಳು ಸಾಗಿಸುವ ಟ್ರಕ್ ಚಾಲಕನೂ ಆಗಿದ್ದ) ಅಬ್ದುಲ್ ರಹಿಮಾನ್ ಎಂಬುವವರನ್ನು ಬಜರಂಗದಳದ ಸದಸ್ಯರು ಎನ್ನಲಾದ ವ್ಯಕ್ತಿಗಳು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.

 ಪೊಲೀಸರು ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳುತ್ತಿರುವುದರಿಂದ ನಗರ ಮತ್ತು ಜಿಲ್ಲೆಯಲ್ಲಿ ಕೋಮು ಗಲಭೆಗಳಿಲ್ಲದೆ ಶಾಂತಿ ನೆಲೆಸಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು ವಿಶ್ಲೇಷಿಸುತ್ತಾರೆ.

ತಮ್ಮ ಸಮುದಾಯಕ್ಕೆ ರಕ್ಷಣೆ ನೀಡದಿದ್ದರೆ ರಾಜೀನಾಮೆ ನೀಡುವುದಾಗಿ ಕಾಂಗ್ರೆಸ್‌ನ ಅಲ್ಪಸಂಖ್ಯಾತ ಘಟಕದ ಮುಸ್ಲಿಂ ಸದಸ್ಯರು ಬೆದರಿಕೆ ಹಾಕಿದಾಗ, ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಕೋಮು ಘಟನೆಗಳನ್ನು ಹತ್ತಿಕ್ಕಲು ಸರ್ಕಾರವು ತಲಾ 78 ಪೊಲೀಸ್ ಸಿಬ್ಬಂದಿಯನ್ನು ಒಳಗೊಂಡ ಮೂರು ಘಟಕಗಳ ವಿಶೇಷ ಕಾರ್ಯ ಪಡೆಯನ್ನು ರಚಿಸಿತು. ಸರ್ಕಾರದ ಈ ನಡೆಯನ್ನು ‘ಅಲ್ಪಸಂಖ್ಯಾತರನ್ನು ಓಲೈಸುವ’ ಕ್ರಮ ಎಂದು ಬಿಜೆಪಿ ಬೊಬ್ಬೆ ಹಾಕಿತು.

ಸದ್ದಿಲ್ಲದ ಕಾರ್ಯಾಚರಣೆಗಳು

ಮೇ ತಿಂಗಳಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡವರು ಸುಧೀರ್ ಕುಮಾರ್ ರೆಡ್ಡಿ. ಎಸ್ಎಎಫ್ ಮುಖ್ಯಸ್ಥರೂ ಆಗಿರುವ ಅವರು ‘ದಿ ಫೆಡರಲ್’ ಜೊತೆ ಮಾತನಾಡಿ, ವಿಶೇಷ ಪಡೆಯು ಸದ್ದಿಲ್ಲದೆ ಪ್ರತಿಬಂಧಕಾ ಕಾರ್ಯ'ದಲ್ಲಿ ತೊಡಗಿದೆ ಎಂದು ತಿಳಿಸಿದ್ದಾರೆ. ಜುಲೈನಲ್ಲಿ ಅವರು ದಿ ಫೆಡರಲ್ ಜೊತೆ ಮಾತನಾಡುತ್ತಾ, ನಿರ್ದಿಷ್ಟ ಪ್ರದೇಶಗಳಲ್ಲಿ 'ಪೂರ್ಣ ಹಿಡಿತ' ಸಾಧಿಸುವ ಗುರಿಯೊಂದಿಗೆ ವಿಶೇಷ ಪಡೆಯ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದ್ದರು.

ಪ್ರಸ್ತುತ, ಈ ಪಡೆಯ ಸಿಬ್ಬಂದಿ ಆ ಭಾಗದ ಜನಪ್ರಿಯ ಭಾಷೆಯಾದ ತುಳುವಿನಲ್ಲಿ ತರಬೇತಿ ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದರು. ಸ್ವತಃ ರೆಡ್ಡಿ ಅವರು ಕೂಡ ಈ ಭಾಷೆಯಲ್ಲಿ ಪ್ರಾವೀಣ್ಯರಾಗಿದ್ದಾರೆ. ಸ್ಥಳೀಯ ಗುಪ್ತಚರ ಮಾಹಿತಿಯನ್ನು ಕಲೆಹಾಕುವ ಸಾಮರ್ಥ್ಯದ ಪರೀಕ್ಷೆಯಲ್ಲಿ ಪಡೆಯ ಅನೇಕ ಸಿಬ್ಬಂದಿ ಉತ್ತಮ ಕಾರ್ಯನಿರ್ವಹಣೆ ತೋರಿದ್ದಾರೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.



ಮಂಗಳೂರನ್ನು ಸ್ವಚ್ಛಗೊಳಿಸುತ್ತಿರುವ ಪೊಲೀಸರ ನಡೆ

• ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾಕಾರಿ ಪೋಸ್ಟ್‌ ಹಾಕುವವರ ವಿರುದ್ಧ ಪ್ರಕರಣ ದಾಖಲಿಸಿ ಬಂಧನ.

• ಧರ್ಮ ಅಥವಾ ಪಕ್ಷದ ಭೇದವಿಲ್ಲದೆ ರಾಜಕೀಯ ಕೊಲೆ ಪ್ರಕರಣಗಳನ್ನು ಭೇದಿಸಿದ ರೀತಿ.

• ಮುನ್ನೆಚ್ಚರಿಕೆ ಮತ್ತು ಸ್ಥಳೀಯ ಪೊಲೀಸ್ ವ್ಯವಸ್ಥೆಗಾಗಿ 'ವಿಶೇಷ ಕಾರ್ಯ ಪಡೆ' ನಿಯೋಜನೆ

• ವಿಶೇಷ ಕಾನೂನು ಸಮಿತಿಗಳ ಮೂಲಕ ಪ್ರಾಸಿಕ್ಯೂಶನ್ ಗೆ ಬಲ.

• ವಾರೆಂಟ್‌ಗಳ ಜಾರಿ ಮತ್ತು ನ್ಯಾಯಾಲಯದ ಆದೇಶಗಳ ಪಾಲನೆಯ ಮೇಲ್ವಿಚಾರಣೆಗೆ ಬಿಗಿ.

ನಗರ ಮತ್ತು ಜಿಲ್ಲೆಯಲ್ಲಿ ಈಗ ನೆಲೆಸಿರುವ ಕೋಮು ಶಾಂತಿಗೆ ಪೊಲೀಸರು ನಿಯಮಿತವಾಗಿ ಶ್ರದ್ಧೆಯಿಂದ ಕಾರ್ಯ ನಿರ್ವಹಿಸುತ್ತಿರುವುದೇ ಕಾರಣ ಎಂಬುದು ರೆಡ್ಡಿ ಅವರ ಅಭಿಪ್ರಾಯ. ಉದಾಹರಣೆಗೆ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾಕಾರಿ ಪೋಸ್ಟ್ಗಳನ್ನು ಹಾಕುವವರ ವಿರುದ್ಧ ತಕ್ಷಣ ಪ್ರಕರಣ ದಾಖಲಿಸಿ ಬಂಧಿಸಲಾಗುತ್ತಿದೆ. ಮೇ ತಿಂಗಳಿನಿಂದ ಈವರೆಗೆ ಅಂತಹ 46 ಜನರನ್ನು ಬಂಧಿಸಲಾಗಿದೆ. ಇವರಲ್ಲಿ 21 ಜನರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದ್ದು, ಉಳಿದವರನ್ನು ಇಂತಹ ಅಪರಾಧಗಳನ್ನು ಮರುಕಳಿಸದಂತೆ ಎಚ್ಚರಿಕೆ ನೀಡಿ ನ್ಯಾಯಾಲಯದ ಆದೇಶದ ಮೇರೆಗೆ ಬಿಡುಗಡೆ ಮಾಡಲಾಗಿದೆ. ಬಿಡುಗಡೆಯಾದವರು ಸಾಮಾನ್ಯವಾಗಿ ಮೊದಲ ಬಾರಿಗೆ ಇಂತಹ ತಪ್ಪು ಮಾಡಿದವರು ಎಂದು ಅವರು ವಿವರಿಸುತ್ತಾರೆ.

ಕಿಡಿಗೇಡಿಗಳಿಗೆ ತಕ್ಕ ಶಾಸ್ತಿ

ದ್ವೇಷ ಭಾಷಣ ಮಾಡುವವರ 'ಅನಾಮಧೇಯ ಮುಖವಾಡವನ್ನು’ ಸರಿಸುವುದೇ ಪೊಲೀಸರ ಮುಂದಿರುವ ದೊಡ್ಡ ಸವಾಲು ಎಂದು ಪೊಲೀಸ್ ಆಯುಕ್ತರು ಹೇಳುತ್ತಾರೆ. ಕಾನೂನು ಜಾರಿ ಮಾಡುವವರು ಇಂಥವರ ಜಾಡು ಬಿಟ್ಟುಬಿಟ್ಟರೆ ಅಥವಾ ಆಸಕ್ತಿ ಕಳೆದುಕೊಂಡಾಗ ಅವರಿಗೆ ಮತ್ತಷ್ಟು ಧೈರ್ಯ ಬರುತ್ತದೆ. ಆದರೆ ಯಾವಾಗ ಕಿಡಿಗೇಡಿಗಳನ್ನು ಬಂಧಿಸಲಾಗುವುದೋ ಮತ್ತು ಆ ವಿಷಯ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದಲ್ಲಿ ಪ್ರಚಾರ ಪಡೆಯುತ್ತದೆಯೋ, ಆಗ ಗಲಭೆ ಸೃಷ್ಟಿಸಲು ಹವಣಿಸುವವರು ತಮ್ಮ ನಿರ್ಧಾರವನ್ನು ಮರುಪರಿಶೀಲನೆ ಮಾಡುವಂತಾಗುತ್ತದೆ ಎಂದು ಅವರು ಹೇಳಿದರು.

ಪಕ್ಷ ಅಥವಾ ಧಾರ್ಮಿಕ ಸಂಬಂಧವನ್ನು ಲೆಕ್ಕಿಸದೆ, ರಾಜಕೀಯ ಕೊಲೆಗಳಲ್ಲಿ ಶಾಮೀಲಾದ ಎಲ್ಲಾ ಆರೋಪಿಗಳನ್ನು ಬಂಧಿಸುವಲ್ಲಿ ಆಗಿರುವ ಯಶಸ್ವಿ ಪ್ರಯತ್ನಗಳು ಅಪರಾಧಿಗಳಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿವೆ ಎಂದು ರೆಡ್ಡಿ ತಿಳಿಸಿದ್ದಾರೆ. ಎನ್ಐಎ ಪತ್ರಿಕಾ ಪ್ರಕಟಣೆಯ ಪ್ರಕಾರ, ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 11 ವ್ಯಕ್ತಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಇನ್ನು ಮಸೀದಿಯ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಕೊಲೆ ಪ್ರಕರಣದಲ್ಲಿ 14 ಜನರನ್ನು ಬಂಧಿಸಲಾಗಿದ್ದು, ಅವರ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆಯನ್ನು ಪ್ರಯೋಗಿಸಲಾಗಿದೆ.

ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ 2025ರ ಜುಲೈ ತಿಂಗಳಿನಲ್ಲಿ ಮಂಗಳೂರು ಮತ್ತು ಉಡುಪಿ ಜಿಲ್ಲೆಯ ಅನೇಕ ಭಾಗಗಳಲ್ಲಿ ಶಾಂತಿ ನೆಲೆಸುವ ಪ್ರಯತ್ನವಾಗಿ ಸೌಹಾರ್ದ ಸಂಚಾರ ಕಾರ್ಯಕ್ರಮವನ್ನು ನಡೆಸಿತು.

ಪೊಲೀಸರ ವಿರುದ್ಧ ಕೋಮು ಪಕ್ಷಪಾತದ ಆರೋಪ ಇರುವುದರಿಂದ ನಿಷ್ಪಕ್ಷಪಾತ ಧೋರಣೆ ಅತ್ಯಗತ್ಯವಾಗಿದೆ. ಆದರೆ ರೆಡ್ಡಿ ಅವರು ಈ ಆರೋಪವನ್ನು ನಿರಾಕರಿಸುತ್ತಾರೆ. ಬೊಮ್ಮಾಯಿ ಅವರ ಅಧಿಕಾರಾವಧಿಯಲ್ಲಿ, ರಾಜ್ಯದ ಎರಡು ಪೊಲೀಸ್ ಠಾಣೆಗಳ ಸಿಬ್ಬಂದಿ ಕೇಸರಿ ಬಟ್ಟೆ ಧರಿಸಿ ಫೋಟೋಗೆ ಫೋಸ್ ನೀಡಿದ್ದರು, ಇದನ್ನು ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರವಾಗಿ ಟೀಕಿಸಿದ್ದರು.

2017ರ ಎಸ್ಡಿಪಿಐ ಸದಸ್ಯನ ಕೊಲೆ ಮತ್ತು ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣದ ಆರೋಪಿ ಬಜರಂಗದಳದ ಮುಖಂಡ ಭರತ್ ಕುಮ್ದೆಲ್ನನ್ನು, ಮೈಸೂರಿನ KCOCA ನ್ಯಾಯಾಲಯವು ವಿಚಾರಣೆಗಾಗಿ ಮಂಗಳೂರು ನ್ಯಾಯಾಲಯಕ್ಕೆ ವಾಪಸ್ ಕಳುಹಿಸಿತ್ತು. ಆಗ, ಮುಸ್ಲಿಂ ಸಂಘಟನೆಗಳು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದವು. 90 ದಿನಗಳ ಕಾಲಮಿತಿಯೊಳಗೆ KCOCA ಅಡಿಯಲ್ಲಿ ದೋಷಾರೋಪ ಪಟ್ಟಿ ಸಲ್ಲಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಅಥವಾ ನಿರ್ಲಕ್ಷ್ಯ ತೋರಿದ್ದಾರೆ ಎಂದು ಅವು ದೂರಿದವು. ಈ ತಪ್ಪನ್ನು ಸರಿಪಡಿಸಲು ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ರೆಡ್ಡಿ ವಿವರಿಸಿದರು.

ವಕೀಲರ ವಿಶೇಷ ಸಮಿತಿ

ಹೆಚ್ಚುತ್ತಿರುವ ಕೋಮು ಪ್ರಕರಣಗಳನ್ನು ನಿರ್ವಹಿಸಲು, ಕರ್ನಾಟಕ ಹೈಕೋರ್ಟ್ನಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕವನ್ನು ಪ್ರತಿನಿಧಿಸಲು ಸರ್ಕಾರವು ಜುಲೈನಲ್ಲಿ ವಕೀಲರ ವಿಶೇಷ ಸಮಿತಿಯನ್ನು ರಚಿಸಿತು. ಎಲ್ಲಾ ಮೇಲ್ಮನವಿಗಳನ್ನು ಸಮರ್ಥವಾಗಿ ಎದುರಿಸಲು ಮತ್ತು ಆರೋಪಿಗಳಿಗೆ ಸುಲಭವಾಗಿ ಜಾಮೀನು ಸಿಗದಂತೆ ಖಚಿತಪಡಿಸುವುದು ಇದರ ಉದ್ದೇಶವಾಗಿದೆ.

ನಿರ್ಲಕ್ಷ್ಯ ಅಥವಾ ನಿರಾಸಕ್ತಿಯಿಂದ ಬಂಧನ ವಾರೆಂಟ್ಗಳು ಜಾರಿಯಾಗದೆ ಉಳಿಯಬಾರದು ಎನ್ನುವುದನ್ನು ಖಚಿತಪಡಿಸಿಕೊಳ್ಳಲು, ಪ್ರತಿದಿನ ಹೊರಡಿಸಲಾದ ವಾರೆಂಟ್ಗಳು, ಜಾರಿಯಾದ ಮತ್ತು ಬಾಕಿ ಇರುವ ವಾರೆಂಟ್ಗಳ ಬಗ್ಗೆ ವರದಿ ನೀಡಲು ತಂಡವೊಂದನ್ನು ರಚಿಸಲಾಗಿದೆ ಎಂದು ರೆಡ್ಡಿ ತಿಳಿಸಿದ್ದಾರೆ. ಅಪರಾಧಿಗಳು ಪದೇ ಪದೇ ನ್ಯಾಯಾಲಯಕ್ಕೆ ಅಲೆಯುವಂತೆ ಮಾಡುವುದರಿಂದ, ಅವರಿಗೆ ದುಷ್ಕೃತ್ಯಗಳಲ್ಲಿ ತೊಡಗಲು ಕಡಿಮೆ ಸಮಯ ಸಿಗುತ್ತದೆ. ಒಂದು ವೇಳೆ ಅವರು ನ್ಯಾಯಾಲಯಕ್ಕೆ ಹಾಜರಾಗಲು ವಿಫಲವಾದರೆ, ಅವರಿಗೆ ಜಾಮೀನು ಹಾಕಿದವರ ಆಸ್ತಿಯನ್ನು ಹರಾಜು ಮಾಡಲಾಗುತ್ತದೆ.

ಸೆಪ್ಟೆಂಬರ್ನಲ್ಲಿ, ಕೊಲೆ ಮತ್ತು ಇತರ ಅಪರಾಧಗಳ ಆರೋಪ ಹೊತ್ತಿದ್ದ ಮೂವರು ವ್ಯಕ್ತಿಗಳಿಗೆ ಶ್ಯೂರಿಟಿ ನೀಡಲು ನಕಲಿ ಆಧಾರ್ ಕಾರ್ಡ್ ಮತ್ತು ಆರ್ಟಿಸಿ ಎಂಬ ಭೂಹಕ್ಕು ದಾಖಲೆಯನ್ನು ಬಳಸಿದ್ದ ಸುಮಾರು ಆರು ಜನರನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಎರಡು ಜಿಲ್ಲೆಗಳ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯಗಳು ತಮಗೆ ಹಿಂದೂಗಳ ಸದ್ಭಾವನೆ ಅಥವಾ ಬೆಂಬಲದ ಅಗತ್ಯವಿದೆ ಎಂಬುದನ್ನು ಅರಿತುಕೊಂಡಿವೆ. ಈ ಎರಡು ಜಿಲ್ಲೆಗಳ ಕ್ಯಾಥೋಲಿಕ್ ಧರ್ಮಪ್ರಾಂತ್ಯಗಳು ಜನಸಂಪರ್ಕ ಘಟಕಗಳು ಮತ್ತು ಕಾರ್ಯಕ್ರಮಗಳನ್ನು ಹೊಂದಿವೆಯಾದರೂ, ಹಿಂದೂಗಳಿಂದ ಬಂದ ಪ್ರತಿಕ್ರಿಯೆ ಅಷ್ಟೇನೂ ಆಶಾದಾಯಕವಾಗಿಲ್ಲ.

ಕೋಮು ಭಾವನೆಗಳು ಆಳವಾಗಿ ಬೇರೂರಿವೆ ಎಂದು ಬಿಷಪ್ ಒಬ್ಬರು ಹೇಳಿದ್ದಾರೆ. ಇದಕ್ಕೆ ಪೂರಕವಾಗಿ ಅವರು ಕ್ಯಾಥೋಲಿಕ್ ಶಾಲೆಗಳಲ್ಲಿ ಕ್ಯಾಥೋಲಿಕ್ ಅಲ್ಲದ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಿರುವುದನ್ನು ಒಂದು ಮಾನದಂಡವಾಗಿ ಉಲ್ಲೇಖಿಸಿದ್ದಾರೆ. ಇತರ ಸಮುದಾಯಗಳು ತಮ್ಮದೇ ಆದ ಶಾಲೆಗಳನ್ನು ಸ್ಥಾಪಿಸುತ್ತಿರುವುದು ಮತ್ತು ಧಾರ್ಮಿಕ ಮತಾಂತರದ ಹೆಸರಿನಲ್ಲಿ ಸೃಷ್ಟಿಸಲಾಗಿರುವ ಅನಗತ್ಯ ಭೀತಿಯೇ ಇದಕ್ಕೆ ಕಾರಣ ಎಂಬುದು ಅವರ ಅಭಿಪ್ರಾಯ.

'ಸದ್ಭಾವನೆ ಹುಟ್ಟಿಸಲು ಪ್ರಯತ್ನ

ಮುಸ್ಲಿಂ ಸಮುದಾಯದ ಜನಸಂಪರ್ಕ ಪ್ರಯತ್ನಗಳು ಕ್ಯಾಥೋಲಿಕರು ಕೈಗೊಂಡ ಪ್ರಯತ್ನಗಳಷ್ಟು ವ್ಯವಸ್ಥಿತವಾಗಿಲ್ಲದೇ ಇದ್ದರೂ, ಇತ್ತೀಚಿನ ಒಂದು ಘಟನೆ ಗಮನ ಸೆಳೆಯುವಂತಿದೆ. ಜುಲೈ ಅಂತ್ಯದಲ್ಲಿ, ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘವು 'ಸೌಹಾರ್ದ ಸಂಚಾರ' ಅಥವಾ 'ಸದ್ಭಾವನಾ ಪ್ರವಾಸ'ದ ಅಂಗವಾಗಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ನಾನಾ ಕಡೆಗಳಲ್ಲಿ ಸಾರ್ವಜನಿಕ ಸಭೆಗಳನ್ನು ಆಯೋಜಿಸಿತ್ತು.

ಸಂಘದ ಪ್ರಧಾನ ಕಾರ್ಯದರ್ಶಿ ಮೌಲಾನಾ ಅಬೂಬಕರ್ ಸಿದ್ದಿಕ್ ಮೊಂಟೆಗೋಳಿ ಅವರು ಮಾತನಾಡಿ, ಸಹೋದರತ್ವದ ಸಂದೇಶವನ್ನು ಸಾರುವುದೇ ಈ ಪ್ರವಾಸದ ಮುಖ್ಯ ಉದ್ದೇಶ ಎಂದು ಹೇಳಿದ್ದಾರೆ.

ತಾವು ಬೆಳೆದು ದೊಡ್ಡವರಾಗುವಾಗ ಯಾವುದೇ ಕೋಮು ಭಾವನೆಗಳು ಇರಲಿಲ್ಲ, ಆದರೆ ಈಗ ರಾಜಕಾರಣಿಗಳು ಮತಗಳನ್ನು ಪಡೆಯಲು ಕೋಮು ಸಂಘರ್ಷಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಒಮ್ಮೆ ಕೋಮು ಗಲಭೆ ಅಥವಾ ಅಶಾಂತಿ ಉಂಟಾದರೆ, ಪರಿಸ್ಥಿತಿ ತಿಳಿಯಾದ ಮೇಲೆಯೂ ತೊಂದರೆಗೆ ಒಳಗಾದ ಜನರು ತಮ್ಮ ಹಳೆಯ ಸ್ಥಿತಿಗೆ ಮರಳಲು ಸಾಧ್ಯವಾಗುತ್ತಿಲ್ಲ ಎಂದು ಅವರು ವಿಷಾದದಿಂದ ನುಡಿದರು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯಗಳು ಸಾಂಪ್ರದಾಯಿಕವಾಗಿ ಪರಸ್ಪರ ಅಕ್ಕ-ಪಕ್ಕದಲ್ಲೇ ವಾಸಿಸುತ್ತಾ ಬಂದಿವೆ. ತಮ್ಮದೇ ಆದ ವಿಭಿನ್ನ ಸಾಂಸ್ಕೃತಿಕ ಅಸ್ಮಿತೆಗಳನ್ನು ಉಳಿಸಿಕೊಂಡೇ ಈ ಸಮುದಾಯಗಳು ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಮುಕ್ತವಾಗಿ ಬೆರೆಯುತ್ತಿರುವುದು ವಿಶೇಷ.

ಕೋಮು ಅಶಾಂತಿಯು ಆರ್ಥಿಕ ದುಷ್ಪರಿಣಾಮಗಳನ್ನು ಬೀರುತ್ತದೆ. ಸಮಾಜದಲ್ಲಿನ ಈ ವಿಭಜನೆಯಿಂದ ಲಾಭ ಪಡೆಯುವ ಏಕೈಕ ವ್ಯಕ್ತಿಗಳೆಂದರೆ ರಾಜಕೀಯ ಲಾಭಕೋರರು ಮಾತ್ರ. ಸಮಾಜದಲ್ಲಿ ಕೋಮು ಭಾವನೆಗಳ ಅಂತರಾಳದ ಹರಿವು ಇರುವುದನ್ನು ನಿರಾಕರಿಸಲು ಸಾಧ್ಯವಿಲ್ಲ, ಆದರೆ ಈಗಿನ ಆಡಳಿತವು ಅವು ಇದುವರೆಗೂ ಮಿತಿ ಮೀರಿ ಸ್ಫೋಟಗೊಳ್ಳದಂತೆ ತಡೆಹಿಡಿದಿದೆ.


Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ದ ಫೆಡರಲ್‌ನ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್‌' ಇಂಗ್ಲಿಷ್‌ ಜಾಲತಾಣದಲ್ಲಿ ಪ್ರಕಟವಾಗಿದೆ.

Tags:    

Similar News