ಬ್ರಿಟನ್ನಿನ ಹೊಸ ವಲಸೆ ನೀತಿ: ವೀಸಾ ಅವಧಿ ಮುಗಿದ ಭಾರತೀಯರಿಗೂ ಕಾದಿದೆ ಕಂಟಕ
ಬ್ರಿಟನ್ನಿನ ಗೃಹ ಕಾರ್ಯದರ್ಶಿ ಶಬಾನಾ ಮಹಮೂದ್ ಅವರು ನವೆಂಬರ್ ತಿಂಗಳ ಕೊನೆಯ ಭಾಗದಲ್ಲಿ ಸಂಸತ್ತಿನಲ್ಲಿ ಮಂಡಿಸಿದ ವಲಸೆ ಪ್ರಸ್ತಾವನೆಗಳ ಬಗ್ಗೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು ವೀಸಾ ಅವಧಿ ಮುಗಿದೂ ಉಳಕೊಂಡಿರುವ ಭಾರತೀಯರನ್ನೂ ಹಿಂದಕ್ಕೆ ಕಳಿಸುವ ಸಾಧ್ಯತೆ ನಿಚ್ಚಳವಾಗಿದೆ.
ಪಾಕಿಸ್ತಾನ ಮೂಲದ ಬ್ರಿಟಿಷ್ ಗೃಹ ಕಾರ್ಯದರ್ಶಿ ಶಬಾನಾ ಮಹಮೂದ್ ಅವರು ಕಳೆದ ವಾರ ದೇಶದಲ್ಲಿ ಆಶ್ರಯ ಪಡೆಯುವ, ಕಾನೂನುಬಾಹಿರ ಮತ್ತು ಕಾನೂನುಬದ್ಧ ವಲಸಿಗರಿಗೆ ಸಂಬಂಧಿಸಿ ಮಂಡಿಸಿದ ಹೊಸ ಪ್ರಸ್ತಾವನೆಗಳಿಂದಾಗಿ ಇಡೀ ದೇಶದಲ್ಲಿ ಸಂಚಲನ ಉಂಟುಮಾಡಿದೆ. ಕಳೆದ 50 ವರ್ಷಗಳ ಇತಿಹಾಸದಲ್ಲಿ ಬ್ರಿಟನ್ ವಲಸಿಗರ ವಸಾಹತು ಮಾದರಿಯಲ್ಲಿ ಯೋಜಿಸಲಾದ ಅತಿ ದೊಡ್ಡ ಬದಲಾವಣೆ ಇದೆಂದು ಪರಿಗಣಿಸಲಾಗಿದೆ.
ಬ್ರಿಟನ್ ಸಂಸತ್ತಿನಲ್ಲಿ ಮಾಡಿದ ಅತ್ಯಂತ ಭಾವೋದ್ರಿಕ್ತ ಭಾಷಣದಲ್ಲಿ, ಬ್ರಿಟನ್-ನಲ್ಲಿ ಶಾಶ್ವತವಾಗಿ ನೆಲೆಸುವುದು ವಲಸಿಗರ ಪಾಲಿನ ಹಕ್ಕು ಎಂದು ಭಾವಿಸಬಾರದು ಬದಲಾಗಿ ಅವರು ಗಳಿಸಬೇಕಾದ ಸೌಲಭ್ಯ ಎಂದು ಪರಿಗಣಿಸಬೇಕು ಎಂದು ಮಹಮೂದ್ ಹೇಳಿದರು.
ಭಾರತೀಯ ವಲಸಿಗರ ಮೇಲೆ ಪ್ರಭಾವ
ಮಹಮೂದ್ ಅವರು ಮಂಡಿಸಿದ ಪ್ರಸ್ತಾವನೆಗಳೆಲ್ಲವನ್ನೂ ಸಂಸತ್ತು ಸ್ವೀಕರಿಸಿದ್ದೇ ಹೌದಾದರೆ (ಲೇಬರ್ ಪಾರ್ಟಿ ಭಾರಿ ಬಹುಮತವನ್ನು ಹೊಂದಿರುವುದರಿಂದ, ಅವು ಸ್ವೀಕೃತವಾಗುವ ಸಂಭವನೀಯತೆ ಹೆಚ್ಚಿದೆ), ಮತ್ತು ಅವು ಕಾನೂನಾಗಿ ಪರಿವರ್ತನೆಯಾದರೆ, ಪ್ರತಿ ವರ್ಷ ಬ್ರಿಟನ್-ನ್ನು ತಮ್ಮ ನೆಲೆಯನ್ನಾಗಿ ಮಾಡಿಕೊಳ್ಳಲು ಬಯಸುವ ಸಾವಿರಾರು ಮಂದಿ ಭಾರತೀಯ ವಲಸಿಗರ ಮೇಲೆ (ಕಾನೂನುಬದ್ಧ ಮತ್ತು ಕಾನೂನುಬಾಹಿರ) ನಿಶ್ಚಿತವಾಗಿಯೂ ಪರಿಣಾಮ ಬೀರಲಿದೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮಿರ್ಪುರ್ನಿಂದ ವಲಸೆ ಬಂದವರ ಪುತ್ರಿಯಾದ ಮಹಮೂದ್ ಅವರು, ನವೆಂಬರ್ 24 ರಂದು, ವ್ಯಾಪಕ ಬದಲಾವಣೆಗಳನ್ನು ಹೊಂದಿರುವ ಆಶ್ರಯ ನಿಯಮಗಳನ್ನು ಮಂಡಿಸಿದರು. ಈ ಬದಲಾವಣೆಗಳು ಅಕ್ರಮ ವಲಸೆಯನ್ನು ನಿಯಂತ್ರಿಸುವ ಮತ್ತು ನಿರಾಶ್ರಿತರು ಸಣ್ಣ ದೋಣಿಗಳ ಮೂಲಕ ಫ್ರಾನ್ಸ್ನಿಂದ ಅಪಾಯಕಾರಿ ಇಂಗ್ಲಿಷ್ ಕಾಲುವೆಯನ್ನು ದಾಟುವ ಸಾಹಸಕ್ಕೆ ಕಡಿವಾಣ ಹಾಕುವ ಸಾಧ್ಯತೆಗಳಿವೆ. ಡೆನ್ಮಾರ್ಕ್ನ ಕಠಿಣ ವ್ಯವಸ್ಥೆಯನ್ನು ಮಾದರಿಯಾಗಿಟ್ಟುಕೊಂಡು ರೂಪಿಸಲಾದ ಈ ಹೊಸ ನಿಯಮಗಳು, ದೇಶದಲ್ಲಿ ಆಶ್ರಯ ಪಡೆಯುವವರಿಗೆ ಕೇವಲ ತಾತ್ಕಾಲಿಕ ರಕ್ಷಣೆಯ ಸ್ಥಾನಮಾನವನ್ನು ನೀಡುತ್ತವೆ ಮತ್ತು ಬ್ರಿಟಿಷ್ ಕರಾವಳಿಗೆ ಅಕ್ರಮ ರೂಪದಲ್ಲಿ ಆಗಮಿಸುವವರಿಗೆ ಇಲ್ಲಿ ನೆಲೆಸಲು ಬೇಕಾದ ಮಾರ್ಗವನ್ನು ಇನ್ನಷ್ಟು ದೀರ್ಘಗೊಳಿಸುತ್ತವೆ.
ಹೊಸ ಆಶ್ರಯ ವ್ಯವಸ್ಥೆಯ ಈ ವ್ಯಾಪಕ ಸುಧಾರಣೆಯು ವಲಸಿಗರಿಗೆ ಬ್ರಿಟನ್-ನ್ನು ಆಕರ್ಷಕ ತಾಣವನ್ನಾಗಿ ಮಾಡಿರುವ ‘ಸೆಳೆಯುವ ಅಂಶಗಳನ್ನು’ ಕಿತ್ತುಹಾಕುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.
ವಲಸಿಗರಿಗಾಗಿ ಕೋಟ್ಯಂತರ ಪೌಂಡ್ ವೆಚ್ಚ
ಇದುವರೆಗೂ, ತಮ್ಮ ತಾಯ್ನಾಡಿನಲ್ಲಿ ಯುದ್ಧ, ಕಿರುಕುಳ ಮತ್ತು ಬರಗಾಲದ ಕಾರಣದಿಂದ ಆಶ್ರಯ ಕೋರುವ ನಿರಾಶ್ರಿತರಿಗೆ ಐದು ವರ್ಷಗಳ ನಂತರ ಬ್ರಿಟನ್ನಿನಲ್ಲಿ ಶಾಶ್ವತವಾಗಿ ನೆಲೆಸಲು ಸ್ವಯಂಚಾಲಿತ ಮಾರ್ಗವನ್ನು ಕಲ್ಪಿಸಲಾಗುತ್ತಿತ್ತು. ಇಲ್ಲಿಗೆ ಬಂದು ತಲುಪಿದ ಮೇಲೆ, ಅವರಿಗೆ ಸರ್ಕಾರದಿಂದ ಪಾವತಿಸಿದ ವಸತಿ ಸೌಕರ್ಯ, ಆಹಾರ ಮತ್ತು ಬಟ್ಟೆಗಾಗಿ ವಾರದ ಭತ್ಯೆ ಮತ್ತು ಉದ್ಯೋಗ ಹುಡುಕಲು ಸಹಾಯವನ್ನೂ ನೀಡಲಾಗುತ್ತಿತ್ತು.
ಕಳೆದ ಕೆಲವು ವರ್ಷಗಳ ಅವಧಿಯಲ್ಲಿ ಸಾಮಾಜಿಕ ವಸತಿ ಕೊರತೆಯ ಕಾರಣದಿಂದ ಆಶ್ರಯ ಕೋರುವವರು ಮತ್ತು ತಮ್ಮ ಮನವಿಗಳ ಬಗ್ಗೆ ನಿರ್ಧಾರಕ್ಕಾಗಿ ಕಾಯುತ್ತಿರುವ ಅಕ್ರಮ ವಲಸಿಗರನ್ನು ಹೋಟೆಲ್ಗಳಲ್ಲಿ ಇರಿಸಲಾಗಿದೆ. ಇದಕ್ಕಾಗಿ ಸರ್ಕಾರ ಸುರಿಯುತ್ತಿರುವುದು ಶತಕೋಟಿ ಪೌಂಡ್ಗಳಷ್ಟು ಹಣ. ಇದು ಸ್ಥಳೀಯ ಸಮುದಾಯಗಳಲ್ಲಿ ಕೋಪಕ್ಕೆ ಕಾರಣವಾಗಿದೆ.
ಹೊಸ ಪ್ರಸ್ತಾವನೆಗಳ ಪ್ರಕಾರ, ನಿರಾಶ್ರಿತರಿಗೆ ಕೇವಲ ಎರಡೂವರೆ ವರ್ಷಗಳ ಕಾಲ ಮಾತ್ರ ತಾತ್ಕಾಲಿಕ ಸ್ಥಾನಮಾನವನ್ನು ನೀಡಲಾಗುತ್ತದೆ. ಈ ಅವಧಿಯ ಬಳಿಕ ಅದನ್ನು ಮರುಪರಿಶೀಲನೆ ಮಾಡಲಾಗುತ್ತದೆ. ಆ ಹೊತ್ತಿಗೆ ಅವರ ತವರು ದೇಶದಲ್ಲಿ ಪರಿಸ್ಥಿತಿ ಸುಧಾರಿಸಿದ್ದರೆ, ಅವರನ್ನು ಅಲ್ಲಿಗೆ ವಾಪಸ್ ಕಳುಹಿಸಲಾಗುತ್ತದೆ ಮತ್ತು ಸುಧಾರಿಸದೇ ಇದ್ದಲ್ಲಿ, ಅವರಿಗೆ ಮತ್ತೆ ಎರಡೂವರೆ ವರ್ಷಗಳ ತಾತ್ಕಾಲಿಕ ಸ್ಥಾನಮಾನ ಕಲ್ಪಿಸಲಾಗುತ್ತದೆ. ಬ್ರಿಟನ್ ನಲ್ಲಿ 20 ವರ್ಷಗಳ ಕಾಲ ಕಳೆದ ಬಳಿಕವಷ್ಟೇ ಶಾಶ್ವತ ವ್ಯವಸ್ಥೆಯನ್ನು ಮಾಡಲಾಗುತ್ತದೆ.
ಇವೆಲ್ಲದರ ಮುಖ್ಯ ಉದ್ದೇಶ ಬ್ರಿಟನ್ ಅನ್ನು ನಿರಾಶ್ರಿತರ ಆಕರ್ಷಕ ತಾಣವಾಗಿಸುವುದನ್ನು ತಪ್ಪಿಸುವುದು. ಆ ಕಾರಣದಿಂದ ಈ ಸಮಗ್ರ ಸುಧಾರಣೆಯ ಪ್ರಸ್ತಾಪಮಾಡಲಾಗಿದೆ.
ಆರನೇ ಸ್ಥಾನದಲ್ಲಿ ಭಾರತೀಯರು
ವ್ಯಂಗ್ಯವೆಂದರೆ, ಬ್ರಿಟನ್ ನಲ್ಲಿ ಆಶ್ರಯ ಕೋರುತ್ತಿರುವವರಲ್ಲಿ ಭಾರತೀಯರು ಆರನೇ ಸ್ಥಾನದಲ್ಲಿದ್ದಾರೆ. ಅವರ ಮುಂದೆ ಕೇವಲ ಅಫ್ಘಾನಿಸ್ತಾನ, ಎರಿಟ್ರಿಯಾ, ಇರಾನ್, ಪಾಕಿಸ್ತಾನ ಮತ್ತು ಬಾಂಗ್ಲಾದೇಶದವರು ಮಾತ್ರ ಇದ್ದಾರೆ. ಜುಲೈ 2024 ರಿಂದ ಜೂನ್ 2025 ರವರೆಗಿನ ಒಂದು ವರ್ಷದ ಅವಧಿಯಲ್ಲಿ, ಒಟ್ಟು 5,475 ಭಾರತೀಯ ಪ್ರಜೆಗಳು ಆಶ್ರಯ ಕೋರಿದ್ದಾರೆ. ಇವರಲ್ಲಿ ಆಶ್ರಯ ಸಿಕ್ಕಿದ್ದು ಕೇವಲ 20 ಜನರಿಗೆ ಮಾತ್ರ. 2,691 ಜನರ ಅರ್ಜಿಗಳನ್ನು ಪರಿಗಣಿಸಲು ನಿರಾಕರಿಸಲಾಗಿದೆ.
ಉಳಿದವರು ಇನ್ನೂ ನಿರ್ಧಾರಕ್ಕಾಗಿ ಕಾಯುತ್ತಿದ್ದಾರೆ. ಆ 5,475 ಆಶ್ರಯ ಅರ್ಜಿದಾರರಲ್ಲಿ, 346 ಭಾರತೀಯರು ಚಿಕ್ಕ ದೋಣಿಗಳ ಮೂಲಕ ಅಕ್ರಮವಾಗಿ ಗಡಿ ದಾಟಿ ಬಂದವರು. ಉಳಿದವರು ವೀಸಾಗಳ ಮೇಲೆ, ಮುಖ್ಯವಾಗಿ ವಿದ್ಯಾರ್ಥಿ ವೀಸಾಗಳ ಮೇಲೆ, ಕಾನೂನುಬದ್ಧವಾಗಿ ಪ್ರವೇಶಿಸಿ, ಅವರ ವೀಸಾಗಳು ಮುಗಿದ ನಂತರ ಆಶ್ರಯ ಕೋರಿ ಅರ್ಜಿ ಸಲ್ಲಿಸಿದ್ದರು.
34 ವರ್ಷದ ಬ್ಯಾರಿಸ್ಟರ್ ಆಗಿರುವ ಮಹಮೂದ್ ಅವರು, ಯಾರ ಆಶ್ರಯ ಅರ್ಜಿಗಳು ತಿರಸ್ಕೃತಗೊಂಡಿವೆಯೋ ಅವರನ್ನು ತಕ್ಷಣವೇ ಗಡೀಪಾರು ಮಾಡುವ ಪ್ರಕ್ರಿಯೆ ಆರಂಭಿಸುವುದಾಗಿ ತಿಳಿಸಿದ್ದಾರೆ. ಅನೇಕ ಬಾರಿ ಮನವಿ ಮಾಡಬೇಕಾದ ಅನಿವಾರ್ಯತೆಯನ್ನು ಹೊಂದಿದ್ದ ಕಾನೂನಿನ ಕಾರಣದಿಂದಾಗಿ ಅವರ ಹಿಂದಿನ ಬ್ರಿಟಿಷ್ ಗೃಹ ಕಾರ್ಯದರ್ಶಿಗಳು ಇದನ್ನು ಮಾಡಲು ಸಾಧ್ಯವಾಗಿರಲಿಲ್ಲ. ಹೊಸ ನಿಯಮಗಳು ಕೇವಲ ಒಂದೇ ಮನವಿಗೆ ಅವಕಾಶ ನೀಡುತ್ತವೆ, ಮತ್ತು ಅದನ್ನು ಕೇವಲ ವಾರಗಳೊಳಗೆ ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ. ಈಗ ಅದಕ್ಕೆ ತಿಂಗಳು ಮತ್ತು ವರ್ಷಗಳೇ ಬೇಕಾಗುತ್ತಿತ್ತು.
ವೀಸಾ ಮುಗಿದೂ ಹೋಗದವರು
ವೀಸಾ ಅವಧಿ ಮುಗಿದ ಬಳಿಕವೂ ದೇಶದಲ್ಲಿ ಠಿಕಾಣಿ ಹೂಡಿರುವ ಅಕ್ರಮ ವಲಸಿಗರ ದೇಶಗಳ ಪಟ್ಟಿಯಲ್ಲಿಯೂ ಭಾರತೀಯರೇ ಅಗ್ರಸ್ಥಾನದಲ್ಲಿದ್ದಾರೆ. ಸ್ವತಃ ಭಾರತೀಯ ವಲಸಿಗರ ಮಗಳಾದ ಸುಯೆಲ್ಲಾ ಬ್ರಾವರ್‌ಮನ್ ಅವರು 2022ರಲ್ಲಿ ಗೃಹ ಕಾರ್ಯದರ್ಶಿ ಆಗಿದ್ದಾಗ ಈ ಬಗ್ಗೆ ಗಮನ ಸೆಳೆದಿದ್ದರು. ವೀಸಾ ಮುಗಿದ ಬಳಿಕವೂ ಉಳಿದುಕೊಂಡವರೆಂದರೆ ವಿದ್ಯಾರ್ಥಿ, ಉದ್ಯೋಗ, ವ್ಯಾಪಾರ, ಪ್ರವಾಸ ಅಥವಾ ಕುಟುಂಬ ಮತ್ತು ಸ್ನೇಹಿತರನ್ನು ಭೇಟಿ ಮಾಡುವಂತಹ ಕಾನೂನುಬದ್ಧ ವೀಸಾಗಳ ಮೇಲೆ ದೇಶಕ್ಕೆ ಬಂದಿರುವರು, ಆದರೆ ಬ್ರಿಟನ್-ನಲ್ಲಿ ನೆಲೆಸಲು ಒಂದಲ್ಲ ಒಂದು ಮಾರ್ಗ ಕಂಡುಕೊಳ್ಳುವ ಭರವಸೆಯಿಂದ ತಮ್ಮ ವೀಸಾ ಅವಧಿ ಮುಗಿಯುವ ಮೊದಲು ವಾಪಸ್ ಹೋಗದೇ ಇದ್ದವರು.
ಹೀಗೆ ಬಂದವರ ವೀಸಾ ಅವಧಿ ಮೀರಿದ ಬಳಿಕ ಅವರು ಅಕ್ರಮವಾಸಿಗಳಾಗುತ್ತಾರೆ. ನಂತರ ಅವರು ತಮ್ಮ ವೀಸಾಗಳನ್ನು ಬದಲಾಯಿಸಲು ಪ್ರಯತ್ನಿಸಿ, ಮನವಿ ಪ್ರಕ್ರಿಯೆ ಅವಕಾಶ ನೀಡುವಷ್ಟು ಕಾಲ ಉಳಿದುಕೊಳ್ಳಲು ಪ್ರಯತ್ನಿಸುತ್ತಾರೆ ಅಥವಾ ತಾವೇನು ಸಿಕ್ಕಿಬೀಳುವುದಿಲ್ಲ ಎಂಬ ಭರವಸೆಯೊಂದಿಗೆ 'ಕಪ್ಪು ಆರ್ಥಿಕತೆ'ಯಲ್ಲಿ ಕರಗಿಹೋಗಿ, ಸುಮ್ಮನೆ ಭೂಗತರಾಗಿ ಬಿಡುತ್ತಾರೆ.
ಅಂತಹ ಅಕ್ರಮ ವಲಸಿಗರನ್ನು ಗುರುತಿಸಲು ಮತ್ತು ವಶಕ್ಕೆ ತೆಗೆದುಕೊಳ್ಳಲು ಸರ್ಕಾರವು ಇನ್ನಷ್ಟು ಹೆಚ್ಚಿನ ದಾಳಿಗಳನ್ನು ನಡೆಸುವುದಾಗಿ ಮಹಮೂದ್ ಭರವಸೆ ನೀಡಿದ್ದಾರೆ. ಒಮ್ಮೆ ಇಂತಹ ವಲಸಿಗರು ಸಿಕ್ಕಿಬಿದ್ದ ನಂತರ, ಅವರಿಗೆ ಯಾವುದೇ ಮನವಿ ಸಲ್ಲಿಸಲು ಅವಕಾಶ ನೀಡದೆ, ಅವರ ತವರಿಗೆ ಗಡೀಪಾರು ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ.
ವಲಸಿಗರ ಸ್ವಾಗತಕ್ಕೆ ಭಾರತದ ಹಿಂಜರಿಕೆ
ಅಪರಾಧಿಗಳು, ಅಕ್ರಮ ವಲಸಿಗರು ಅಥವಾ ಆಶ್ರಯ ನಿರಾಕರಿಸಿದ ನಾಗರಿಕರನ್ನು ವಾಪಸ್ ಪಡೆಯಲು ನಿರಾಕರಿಸುವ ದೇಶಗಳಿಗೆ, ಆ ರಾಷ್ಟ್ರಗಳಿಂದ ಕಾನೂನುಬದ್ಧ ವೀಸಾಗಳನ್ನು ನಿಷೇಧಿಸುವ ಯೋಜನೆ ಕೂಡ ಮಹಮೂದ್ ಅವರದ್ದಾಗಿದೆ. ಈ ರೀತಿಯ ನಿಷೇಧವನ್ನು ಎದುರಿಸಲಿರುವ ಮೊದಲ ದೇಶಗಳಲ್ಲಿ ಅಂಗೋಲಾ, ನಮೀಬಿಯಾ ಮತ್ತು ಕಾಂಗೋ ಗಣರಾಜ್ಯ ಸೇರಿವೆ. ಮೇ 2021ರಲ್ಲಿ ವಲಸೆ ಮತ್ತು ಸಂಚಾರಿ ಸಹಭಾಗಿತ್ವದ (MMP) ಒಪ್ಪಂದಕ್ಕೆ ಸಹಿ ಹಾಕಿದ್ದರೂ, ತನ್ನ ಅಕ್ರಮವಾಸಿ ಪ್ರಜೆಗಳನ್ನು ವಾಪಸ್ ಕರೆಸಿಕೊಳ್ಳಲು ಹೆಚ್ಚು ಹಿಂಜರಿಯುವ ಇತರ ದೇಶಗಳಲ್ಲಿ ಭಾರತವೂ ಒಂದು ಎಂದು ಹೇಳಲಾಗಿದೆ.
ಎಂ.ಎಂ.ಪಿ ಒಪ್ಪಂದದ ಪ್ರಕಾರ, ಗಡೀಪಾರು ಮಾಡಿದವರನ್ನು ವಾಪಸ್ ಪಡೆಯುವುದಕ್ಕೆ ಪ್ರತಿಯಾಗಿ, ಬ್ರಿಟನ್ ವಾರ್ಷಿಕ 3,000 ಯುವ ಭಾರತೀಯ ವೃತ್ತಿಪರರಿಗಾಗಿ ಹೊಸ ವೀಸಾ ಮಾರ್ಗಗಳನ್ನು ಒದಗಿಸಲು ಒಪ್ಪಿಕೊಂಡಿತ್ತು. ಬ್ರಾವರ್‌ಮನ್ ಅವರು ಗಮನಸೆಳೆದಂತೆ, ಬ್ರಿಟನ್ ಭಾರತೀಯರಿಗೆ ವೀಸಾಗಳನ್ನು ನೀಡಿದೆ, ಆದರೆ ಭಾರತವು ಒಪ್ಪಂದದ ತನ್ನ ಭಾಗವನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ ಮತ್ತು ವಾಪಸ್ ಬರುವ ನಾಗರಿಕರನ್ನು ಸ್ವೀಕರಿಸಲು ಪ್ರತಿರೋಧ ವ್ಯಕ್ತಪಡಿಸಿದೆ. ಒಂದು ವೇಳೆ ಭಾರತ ಸಹಕರಿಸಲು ಆರಂಭಿಸದಿದ್ದರೆ, ಮುಂದಿನ ವರ್ಷದಲ್ಲಿ ಅದು ವೀಸಾ ನಿಷೇಧದ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡರೆ ಅಚ್ಚರಿಯೇನೂ ಇಲ್ಲ.
ಹದಿನಾಲ್ಕು ವರ್ಷಗಳ ಕಾಲ ಆಡಳಿತ ನಡೆಸಿದ ಕನ್ಸರ್ವೇಟಿವ್ ಪಕ್ಷ ವಲಸಿಗರ ಆಶ್ರಯ ವ್ಯವಸ್ಥೆಯನ್ನು ಸರಿಪಡಿಸಲು ವಿಫಲವಾಗಿದೆ. ಅದರ ಅವ್ಯವಸ್ಥೆಯನ್ನು ಸರಿಪಡಿಸಲು ಸಂಕಲ್ಪ ಮಾಡಿರುವುದಾಗಿ ಮಹಮೂದ್ ಹೇಳಿದ್ದಾರೆ.
ಅಕ್ರಮ ವಲಸಿಗರ ‘ಆಶ್ರಯ’ದ ವಿಚಾರದಲ್ಲಿ ಬದಲಾವಣೆ ಮಾಡುವ ಪ್ರಸ್ತಾಪದ ಆಘಾತದಿಂದ ದೇಶವು ಇನ್ನೂ ಚೇತರಿಸಿಕೊಳ್ಳುತ್ತಿರುವಾಗಲೇ, ಮಹಮೂದ್ ಅವರು ಇನ್ನೊಂದು ಪ್ರಮುಖ ಘೋಷಣೆಯನ್ನು ಮಾಡಿದ್ದಾರೆ. ಈ ಬಾರಿ ಬ್ರಿಟನ್-ನಲ್ಲಿ ನೆಲೆಸಲು ಬಯಸುವ ಕಾನೂನುಬದ್ಧ ವಲಸಿಗರ ಮೇಲೆ ಅವರು ತಮ್ಮ ಗಮನ ಕೇಂದ್ರೀಕರಿಸಿದ್ದಾರೆ.
ವಲಸೆ ಪ್ರಮಾಣದಲ್ಲಿ ಏರುಪೇರು
ಕನ್ಸರ್ವೇಟಿವ್ಗಳು ರೂಪಿಸಿರುವ ಕಾನೂನುಬದ್ಧ ವಲಸೆ ವ್ಯವಸ್ಥೆಯಿಂದಲೂ ಕೆಲವು ಅಂಶಗಳನ್ನೂ ಲೇಬರ್ ಸರ್ಕಾರ ಅಳವಡಿಸಿಕೊಂಡಿದೆ. ಜೂನ್ 2016ರಲ್ಲಿ ಬ್ರೆಕ್ಸಿಟ್ ಜನಾಭಿಪ್ರಾಯ ಸಂಗ್ರಹದ ಸಮಯದಲ್ಲಿ ವಾರ್ಷಿಕ ವಲಸೆ ಪ್ರಮಾಣವು ಅಧಿಕವಾಗಿತ್ತು ಮತ್ತು ಅದು ಮಿತಿಮೀರಿದ ಪ್ರಮಾಣ ಎಂದು ಪರಿಗಣಿಸಲಾಗಿತ್ತು. ಜನವರಿ 2021 ರಲ್ಲಿ ಬ್ರೆಕ್ಸಿಟ್ ನಿಯಮಗಳು ಜಾರಿಗೆ ಬಂದಾಗ, ವಲಸೆಯು ಪ್ರಮಾಣವು 7 ಲಕ್ಷಕ್ಕಿಂತ ಸ್ವಲ್ಪ ಕಡಿಮೆಯಾಗಿತ್ತು.
ಈ ನಡುವೆ ಯುರೋಪ್ನಿಂದ ಮುಕ್ತ ಸಂಚಾರವನ್ನು ನಿಲ್ಲಿಸಲಾಯಿತು. ಅದರ ಪರಿಣಾಮವಾಗಿ ಅನೇಕ ಮಂದಿ ಯುರೋಪಿಯನ್ನರು ತಮ್ಮ ದೇಶಗಳಿಗೆ ಮರಳಿದರು. ಆದರೆ, ವಲಸೆ ಕಡಿಮೆಯಾಗುವ ಬದಲು, 2023 ರಲ್ಲಿ ಕಾನೂನುಬದ್ಧ ವಲಸೆ ಪ್ರಮಾಣ ಸ್ಥಿರವಾಗಿ ಏರಿಕೆ ಕಂಡಿತು. ಇದು ‘ಬೋರಿಸ್ ವಲಸೆಯ ಅಲೆ’ ಎಂದು ಪ್ರಸಿದ್ಧವಾಯಿತು. ಬ್ರೆಕ್ಸಿಟ್ "ಸಾಧಿಸಿದ" ಕೀರ್ತಿಗೆ ಪಾತ್ರರಾದ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಹೆಸರನ್ನೇ ಇದಕ್ಕೆ ಇಡಲಾಯಿತು. ಇದರಿಂದಾಗಿ ಯುರೋಪಿಯನ್ನರಿದ್ದ ಜಾಗವನ್ನು ಪ್ರಪಂಚದ ಉಳಿದ ಭಾಗಗಳ ವಲಸಿಗ ತುಂಬಿಕೊಂಡರು.
ಇದರ ಪರಿಣಾಮವಾಗಿ ಭಾರತೀಯರಿಗೆ ನೀಡಿದ ವಲಸಿಗರ ವೀಸಾಗಳಲ್ಲಿ ಭಾರಿ ಹೆಚ್ಚಳ ಉಂಟಾಯಿತು. ಬೋರಿಸ್ ಮತ್ತು ಅವರ ನಂತರ ಪ್ರಧಾನಿಯಾದ ರಿಷಿ ಸುನಕ್ ಅವರು ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವ ಉತ್ಕಟ ಬಯಕೆ ಹೊಂದಿದ್ದರು. ಭಾರತ ಕೂಡ ತನ್ನ ಪ್ರಜೆಗಳಿಗೆ ಹೆಚ್ಚಿನ ವೀಸಾ ಬೇಡಿಕೆಯನ್ನೂ ಮುಂದಿಟ್ಟಿತ್ತು. ಹಾಗಾಗಿಯೇ ಇತರ ದೇಶಗಳಿಗಿಂತ ಭಾರತೀಯ ವಲಸಿಗರಿಗೇ ಹೆಚ್ಚು ಒಲವು ತೋರಿದರು. ಬೋರಿಸ್ ಅವರು ಭಾರತದ ಮೇಲೆ ಗಮನ ಕೇಂದ್ರೀಕರಿಸಲು ಮತ್ತೊಂದು ಕಾರಣವೂ ಇತ್ತು. ಲೇಬರ್ ಪಕ್ಷದಿಂದ ಅನೇಕ ಬ್ರಿಟಿಷ್-ಭಾರತೀಯ ಮತದಾರರನ್ನು ದೂರ ಮಾಡಿದ್ದರಿಂದ, ಐದು ವರ್ಷಗಳಲ್ಲಿ ಅನಿರ್ದಿಷ್ಟ ಕಾಲದವರೆಗೆ ಉಳಿಯುವ (ಐಎಲ್ಆರ್)ಅನುಮತಿ ಪಡೆಯುವ ಭಾರತೀಯ ವಲಸಿಗರು ಅಂತಿಮವಾಗಿ ಕನ್ಸರ್ವೇಟಿವ್ ಪಕ್ಷದ ಮತ ಬ್ಯಾಂಕ್ಗೆ ಸೇರುತ್ತಾರೆ ಎಂಬುದು ಅವರ ಭಾವನೆಯಾಗಿತ್ತು.
ಅನಿರ್ದಿಷ್ಟಾವಧಿ ಉಳಿಯುವ ಹಕ್ಕು
ಮಹಮೂದ್ ಅವರು ಮಂಡಿಸಿರುವ ಹೊಸ ಪ್ರಸ್ತಾವನೆಗಳು, ವಲಸಿಗರಿಗೆ ಬ್ರಿಟನ್-ನಲ್ಲಿ ಐದು ವರ್ಷಗಳ ವಾಸ್ತವ್ಯದ ನಂತರ ದೇಶದಲ್ಲಿ ನೆಲೆಸಲು ಇರುವ ಈಗಿರುವ ಸ್ವಯಂಚಾಲಿತ ಹಕ್ಕನ್ನು ರದ್ದುಗೊಳಿಸಿವೆ. ಬದಲಾಗಿ, 10 ವರ್ಷಗಳ ಅರ್ಹತಾ ಅವಧಿಯ ಮೂಲಭೂತ ನಿಯಮವನ್ನು ನಿಗದಿಪಡಿಸಲಾಗಿದೆ. ವಲಸಿಗರ ಉದ್ಯೋಗ, ಅವರ ಗಳಿಕೆ, ಅವರು ದೇಶಕ್ಕೆ ಪ್ರವೇಶಿಸಿದ ವಿಧಾನ, ಸಮಾಜಕ್ಕೆ ಅವರ ಕೊಡುಗೆ ಮತ್ತು ಉತ್ತಮ ಮಟ್ಟದಲ್ಲಿ ಇಂಗ್ಲಿಷ್ ಮಾತನಾಡುವ ಸಾಮರ್ಥ್ಯವನ್ನು ಅವಲಂಬಿಸಿ ಈ ಅವಧಿ ಹೆಚ್ಚಾಗಬಹುದು ಅಥವಾ ಕಡಿಮೆಯೂ ಆಗಬಹುದು. ಇಂತಹ ಕಟ್ಟುನಿಟ್ಟಿನ ಕ್ರಮದಿಂದಾಗಿ, ಕೆಲವು ವಲಸಿಗರು ತಮ್ಮ ILR (ಅನಿರ್ದಿಷ್ಟವಾಗಿ ಉಳಿಯುವ ಹಕ್ಕು) ಪಡೆಯಲು 30 ವರ್ಷಗಳ ವರೆಗೂ ಕಾಯಬೇಕಾಗಬಹುದು.
ಈ ಪ್ರಸ್ತಾವನೆಗಳಲ್ಲಿ ಇರುವ ಇನ್ನೊಂದು ಪ್ರಭಾವಶಾಲಿ ಅಂಶವೇನೆಂದರೆ, ವಲಸಿಗರು ಬ್ರಿಟಿಷ್ ಪೌರತ್ವವನ್ನು ಪಡೆದ ನಂತರವಷ್ಟೇ ಕಲ್ಯಾಣ ಸೌಲಭ್ಯಗಳನ್ನು ಪಡೆದುಕೊಳ್ಳಲು ಅವಕಾಶವಿರುತ್ತದೆ. ಬ್ರಿಟನ್-ನಲ್ಲಿ ಕನಿಷ್ಠ 13 ವರ್ಷಗಳ ಕಾಲ ವಾಸಿಸುವ ಮೊದಲು ಇದು ಸಾಧ್ಯವಿಲ್ಲ. ಇಲ್ಲಿಯವರೆಗೆ, ವಲಸಿಗರು ಐದು ವರ್ಷಗಳ ನಂತರ ತಮ್ಮ ILR ಪಡೆದ ಕೂಡಲೇ, ಅವರು ನಿರುದ್ಯೋಗ ಭತ್ಯೆಗಳು, ಸಾಮಾಜಿಕ ವಸತಿ ಮತ್ತು ಮೂಲಭೂತ ಸರ್ಕಾರಿ ಪಿಂಚಣಿಗಳನ್ನು ಕ್ಲೈಮ್ ಮಾಡಬಹುದಾಗಿತ್ತು. ಈ ನಿಯಮಗಳು ಹೊಸದಾಗಿ ಬಂದವರಿಗೆ ಮಾತ್ರವಲ್ಲದೆ, 2021 ರಿಂದ ಬ್ರಿಟನ್ನಿಗೆ ಬಂದಿರುವ 16 ಲಕ್ಷ ‘ಬೋರಿಸ್ ವೇವ್ ವಲಸಿಗರಿಗೂ’ ಪೂರ್ವಭಾವಿಯಾಗಿ ಅನ್ವಯವಾಗುತ್ತವೆ.
ಮಹಮೂದ್ ಅವರ ಈ ಪ್ರಸ್ತಾವನೆಗಳಿಗೆ ಬಲಪಂಥೀಯ ಪಕ್ಷಗಳಿಂದ ಮೆಚ್ಚುಗೆ ಮತ್ತು ಎಡಪಂಥೀಯರಿಂದ ಟೀಕೆ ವ್ಯಕ್ತವಾಗಿದೆ. ಆದರೆ ಮುಖ್ಯವಾಗಿ ಕಳೆದ ವಾರ ನಡೆಸಿದ ಕ್ಷಿಪ್ರ ಸಮೀಕ್ಷೆಯಿಂದ ಸಾರ್ವಜನಿಕ ಅಭಿಪ್ರಾಯವು ಕೂಡ ಮಹಮೂದ್ ಅವರ ಪರವಾಗಿದೆ ಎಂಬುದು ಸಾಬೀತಾಗಿದೆ.
ಇನ್ನೊಂದು ಗಮನಾರ್ಹ ಸಂಗತಿ ಎಂದರೆ 2021ರಿಂದ, ಬ್ರಿಟನ್ ತೊರೆದವರಿಗಿಂತ 26 ಲಕ್ಷಕ್ಕೂ ಹೆಚ್ಚು ಜನರು ದೇಶವನ್ನು ಪ್ರವೇಶಿಸಿದ್ದಾರೆ, ಅಂದರೆ ಬ್ರಿಟನ್-ನಲ್ಲಿರುವ ಪ್ರತಿ 30 ಜನರಲ್ಲಿ ಒಬ್ಬರು ಕಳೆದ ನಾಲ್ಕು ವರ್ಷಗಳಲ್ಲಿ ದೇಶದೊಳಕ್ಕೆ ಬಂದವರಾಗಿದ್ದಾರೆ. ಇದು ತೀವ್ರ ಬಲಪಂಥೀಯ ಪಕ್ಷಗಳಿಗೆ ವಲಸಿಗರ ವಿರುದ್ಧ, ವಿಶೇಷವಾಗಿ ದಕ್ಷಿಣ ಏಷ್ಯಾದ ವಲಸಿಗರ ವಿರುದ್ಧ ವಿಭಜನೆ ಮತ್ತು ದ್ವೇಷವನ್ನು ಪ್ರಚೋದಿಸಲು ಅವಕಾಶ ನೀಡಿದೆ. ಅಷ್ಟೇ ಕುತೂಹಲದ ಅಂಶವೆಂದರೆ, ದಕ್ಷಿಣ ಏಷ್ಯಾದ ಮೂಲದ ಗೃಹ ಕಾರ್ಯದರ್ಶಿಯೊಬ್ಬರು ಈ ಸಮಸ್ಯೆಗಳನ್ನು ಸರಿಪಡಿಸಲು ಪ್ರಯತ್ನ ನಡೆಸಿದ್ದಾರೆ.
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ದ ಫೆಡರಲ್‌ನ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.