1949ರ ಅಯೋಧ್ಯೆ ಘಟನೆಯಲ್ಲಿ ನೆಹರೂ-ಪಟೇಲ್ ಪಾತ್ರ: ಇತಿಹಾಸ ತಿರುಚುವ ರಾಜನಾಥ್ ಸಿಂಗ್
ನಮ್ಮ ದೇಶದ ರಕ್ಷಣಾ ಮಂತ್ರಿಗಳು ನೆಹರೂ ಅವರನ್ನು ತುಷ್ಟೀಕರಣವಾದಿಯಂತೆ ಮತ್ತು ಪಟೇಲರನ್ನು ಹಿಂದುತ್ವದ ಪ್ರತಿಪಾದಕರು ಎಂಬಂತೆ ಮರುಚಿತ್ರೀಕರಿಸುವ ಪ್ರಯತ್ನ ನಡೆಸಿದ್ದಾರೆ.
ಬೋಧಕ ವೃತ್ತಿಯಿಂದ ಹೊರಗುಳಿದ ದಶಕಗಳ ಬಳಿಕ, ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕರೊಬ್ಬರು, 1960ರ ದಶಕದ ಉತ್ತರಾರ್ಧದಲ್ಲಿ ತಾವು ಮಾಸ್ಕೋ ವಿಶ್ವವಿದ್ಯಾಲಯದಲ್ಲಿದ್ದಾಗ ವಿದ್ಯಾರ್ಥಿಗಳ ನಡುವೆ ಹರಿದಾಡುತ್ತಿದ್ದ, ಸೋವಿಯತ್ ಯುಗದಲ್ಲಿ ನಿಷಿದ್ಧ ಪ್ರಕಾರಗಳಲ್ಲಿದ್ದ ಕೆಲವು ಹಾಸ್ಯಮಯ ಸಂಗತಿಗಳನ್ನು ಹಂಚಿಕೊಂಡಿದ್ದರು.
ಆ 'ಹಾಸ್ಯ'ವು ವಿದ್ಯಾರ್ಥಿ ನಿಲಯದಲ್ಲಿ ನಡೆದ ಒಂದು ಘಟನೆಯ ಮೇಲೆ ಕೇಂದ್ರೀಕೃತವಾಗಿತ್ತು. 1968ರ ಆಗಸ್ಟ್ ತಿಂಗಳಿನಲ್ಲಿ ಅಲ್ಲಿನ ನಿವಾಸಿಗಳು, ವಾರ್ಸಾ ಒಪ್ಪಂದಕ್ಕೆ ಒಳಪಟ್ಟ ದೇಶಗಳಾದ ಸೋವಿಯತ್ ಒಕ್ಕೂಟ, ಪೋಲೆಂಡ್, ಬಲ್ಗೇರಿಯಾ ಮತ್ತು ಹಂಗೇರಿಗಳಿಂದ ತಮ್ಮ ದೇಶದ ಮೇಲೆ ಜಂಟಿಯಾಗಿ ಆಕ್ರಮಣ ನಡೆದ ಕೆಲವೇ ವಾರಗಳ ನಂತರ, ತನ್ನ ಮನೆಯಿಂದ ಮರಳಿದ ಜೆಕೋಸ್ಲೋವಾಕಿಯಾದ ನಿವಾಸಿಯೊಬ್ಬ ಸಂಪೂರ್ಣ ಮೌನಕ್ಕೆ ಶರಣಾಗಿದ್ದನ್ನು ಅಥವಾ ವಾಸ್ತವವಾಗಿ ಯಾರೊಂದಿಗೂ ಮಾತನಾಡದೇ ಇದ್ದ ಬೆಳವಣಿಗೆಯನ್ನು ಗಮನಿಸಿದರು.
ಆಗ ಜೆಕೋಸ್ಲೋವಾಕಿಯಾದಲ್ಲಿ ಉದಾರೀಕರಣದತ್ತ ಸಾಗುತ್ತಿದ್ದ ಚಳವಳಿಯನ್ನು ಹತ್ತಿಕ್ಕಲು ಮತ್ತು ಆಕ್ರಮಣದ ನಂತರ ನಿಯಂತ್ರಣ ಸಾಧಿಸಿದ ಸರ್ವಾಧಿಕಾರಿ ಆಡಳಿತವನ್ನು ಬಲಪಡಿಸಲು ಅಂದಿನ ಆಕ್ರಮಣವನ್ನು ನಡೆಸಲಾಗಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ತಮ್ಮ ದೇಶದಲ್ಲಿ ಎಲ್ಲವೂ ಸರಿಯಾಗಿದೆಯೇ ಎಂದು ವಿದ್ಯಾರ್ಥಿ ನಿಲಯದ ಸಹವರ್ತಿಗಳು ಪ್ರಶ್ನಿಸಿದಾಗ, ಜೆಕ್ ವಿದ್ಯಾರ್ಥಿ ಎಲ್ಲವೂ ಸರಿಯಿದೆ ಎಂದು ಉತ್ತರ ನೀಡುತ್ತಾನೆ. ಯಾಕೆ ಯಾರೊಂದಿಗೂ ಮಾತನಾಡುತ್ತಿಲ್ಲ ಎಂದು ಇನ್ನಷ್ಟು ವಿಚಾರಣೆ ನಡೆಸಿದಾಗ, ಶೈಕ್ಷಣಿಕ ಸಂಸ್ಥೆಗಳಲ್ಲಿ ಜಾರಿಗೆ ತರಲಾಗುತ್ತಿರುವ ಹೊಸ ಪಠ್ಯಕ್ರಮಗಳೇ ತನ್ನ ಚಿಂತೆಗೆ ಕಾರಣ ಎಂದು ಆತ ಉತ್ತರ ನೀಡುತ್ತಾನೆ;
“ನಮ್ಮ ಇತಿಹಾಸವನ್ನೂ ಬದಲಾಯಿಸಲಾಗುತ್ತಿದೆ. ಹಿಂತಿರುಗಿದ ನಂತರ, ನಾನು ನಮ್ಮ ದೇಶದ ಹೊಸ ಇತಿಹಾಸವನ್ನೇ ಓದಬೇಕಾಗಬಹುದು!"
ಕೆಲವು ವರ್ಷಗಳ ಹಿಂದೆ, ಹೆಚ್ಚಿನ ಭಾರತೀಯರು ಈ 'ಹಾಸ್ಯ'ಕ್ಕೆ ಸಂಬಂಧ ಕಲ್ಪಿಸಲು ಸಾಧ್ಯವಾಗುತ್ತಿರಲಿಲ್ಲ, ಮತ್ತು ಈ ಕಥೆಯಲ್ಲಿ ನಗುವ ವಿಷಯವಾದರೂ ಏನಿದೆ ಎಂದು ಆಶ್ಚರ್ಯಪಟ್ಟಿರಬಹುದು.
ಇತಿಹಾಸವನ್ನು ತಿರುಚುವ ರೋಗ
ಕೆಲವು ದಿನಗಳ ಹಿಂದೆ, ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಬಾಬರಿ ಮಸೀದಿಗಾಗಿ ಸರ್ಕಾರಿ ಹಣವನ್ನು ಬಳಸಲು ಬಯಸಿದ್ದರು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಆಧಾರರಹಿತ ಆರೋಪದ ಮೂಲಕ ಭಾರತದ ಇತಿಹಾಸವನ್ನು ತಿರುಚುವ ರೋಗಕ್ಕೆ ಹೊಸ ಸೇರ್ಪಡೆ ಮಾಡಿದ್ದರು. ಈಗ ಇತಿಹಾಸವಾಗಿ ಮಾರ್ಪಟ್ಟಿರುವ ಈ ಕಥೆಯ ಪ್ರಕಾರ, ಈ ಯೋಜನೆಗೆ ಅಂದಿನ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ವಿರೋಧ ವ್ಯಕ್ತಪಡಿಸಿದ್ದರು.
ರಾಜನಾಥ್ ಅವರು ಇಂತಹ ಆಧಾರರಹಿತ ಸುಳ್ಳನ್ನು ಎರಡು ಕಾರಣಗಳಿಗಾಗಿ ನಿರೂಪಿಸಿದ್ದಾರೆ. ಒಂದು, ಇದು ಸ್ವತಂತ್ರ ಭಾರತದಲ್ಲಿ ತುಷ್ಠೀಕರಣಕ್ಕೆ ಮೊದಲು ಪ್ರಯತ್ನ ನಡೆಸಿದವರು ನೆಹರೂ ಎಂಬಂತೆ ಚಿತ್ರಿಸುತ್ತದೆ. ಇನ್ನೊಂದು, ಇದು ಪಟೇಲ್ ಅವರನ್ನು ಶೌರ್ಯವಂತ ಹಿಂದುತ್ವವಾದಿಯಾಗಿ, ಅಥವಾ ಬಿಜೆಪಿ ತನ್ನ ಸಿದ್ಧಾಂತವನ್ನು ಯಾರಿಂದ ಪಡೆಯುತ್ತದೆಯೋ ಅಂತಹ ವ್ಯಕ್ತಿಯನ್ನು ಬಿಂಬಿಸುತ್ತದೆ.
ರಾಜನಾಥ್ ಸಿಂಗ್ ಬಳಸಿದ ನಿಖರ ಪದಗಳು ಹೀಗಿವೆ: ಪಟೇಲ್ ಅವರು “ನೈಜ ಜಾತ್ಯತೀತವಾದಿ”ಯಾಗಿದ್ದು, ಅವರು ಯಾವತ್ತೂ "ಓಲೈಕೆ ರಾಜಕಾರಣ"ದಲ್ಲಿ ನಂಬಿಕೆ ಇಟ್ಟಿರಲಿಲ್ಲ. ಆದರೆ, ನೆಹರೂ ಅವರ ವಿಷಯಕ್ಕೆ ಬಂದರೆ, ಅವರು ಬಾಬರಿ ಮಸೀದಿಯನ್ನು "ಸರ್ಕಾರಿ ಖಜಾನೆಯ ಹಣವನ್ನು ಬಳಸಿ" ನಿರ್ಮಾಣ ಮಾಡುವ ಪ್ರಸ್ತಾಪ ಮಾಡಿದ್ದರು. ಆದರೆ ಪಟೇಲ್ ಅವರು "ಇದನ್ನು ವಿರೋಧಿಸಿ, ಈ ಉದ್ದೇಶಕ್ಕಾಗಿ ಸಾರ್ವಜನಿಕ ನಿಧಿಯ ದುರುಪಯೋಗವನ್ನು ತಡೆದರು,” ಎಂಬುದು ರಕ್ಷಣಾ ಸಚಿವರ ಹೇಳಿಕೆಯಾಗಿತ್ತು.
ಇತಿಹಾಸ ಜ್ಞಾನದ ಕೊರತೆ
ರಾಜನಾಥ್ ಸಿಂಗ್ ಅವರಿಗೂ ಇತಿಹಾಸ ಜ್ಞಾನದ ಕೊರತೆಯಿದೆ ಎಂಬುದು ಆರೋಪದಿಂದ ಸಾಬೀತಾಗುತ್ತದೆ. ಅಷ್ಟಕ್ಕೂ 1950ರಲ್ಲಿ ಮಸೀದಿಯನ್ನು ‘ನಿರ್ಮಿಸುವ’ ಅಗತ್ಯವೇ ಇರಲಿಲ್ಲ. ಯಾಕೆಂದರೆ ಅದನ್ನು ಆಗ ನೆಲಸಮಮಾಡಿರಲಿಲ್ಲ. 1992ರ ಡಿಸೆಂಬರ್ ತಿಂಗಳಲ್ಲಿ ಅದನ್ನು ದ್ವಂಸಗೊಳಿಸಲಾಗಿತ್ತು.
ಬಾಬ್ರಿ ಮಸೀದಿಯನ್ನು ನಿಜಕ್ಕೂ ದ್ವಂಸಮಾಡಿದ್ದು 1992ರ ಡಿಸೆಂಬರ್ ಆರರಂದು. ಆಗ ಪ್ರಧಾನಿಯಾಗಿದ್ದ ಪಿ.ವಿ.ನರಸಿಂಹ ರಾವ್ ಅವರು ಅದನ್ನು ಮರು ನಿರ್ಮಾಣ ಮಾಡುವ ಪಣ ತೊಡುತ್ತಾರೆ. ಅವರಿಂದ ಅದನ್ನು ಪೂರೈಸಲಾಗದೇ ಇದ್ದರೂ ಅಂತಹ ಪ್ರತಿಜ್ಞೆಯನ್ನಂತೂ ಅವರು ಮಾಡುತ್ತಾರೆ.
ಅವನ್ನೆಲ್ಲ ಮರೆಯಬಾರದು ಎಂಬ ಉದ್ದೇಶದಿಂದ ಬಿಜೆಪಿ ರಾವ್ ಭೂತವನ್ನು ಅಪ್ಪಿಕೊಂಡಿದೆ ಮತ್ತು ಅವರ ಬಗ್ಗೆ ಒಳ್ಳೆಯ ಅಥವಾ ದಯಾಪರವಾದ ಮಾತುಗಳನ್ನು ಆಡಿದೆ. ಆದರೆ ಕಾಂಗ್ರೆಸ್ ಪಕ್ಷ ಅವರ ಸ್ಮರಣೆಯನ್ನು ಮರೆತಿದೆ.
ರಾಜನಾಥ್ ಸಿಂಗ್ ಅವರು ಸುಳ್ಳು ಮಾಡಲು ಪ್ರಯತ್ನಿಸಿದ ಬಾಬರಿ ಮಸೀದಿಗೆ ಸಂಬಂಧಿಸಿದ ಘಟನೆಗಳ ‘ನೈಜ ಇತಿಹಾಸ’ವಾದರೂ ಏನು? ಆದರೆ ಅದೆಲ್ಲದಕ್ಕೂ ಮೊದಲು ಪ್ರಸಕ್ತ ಭಾರತದಲ್ಲಿ ರಾಜಕೀಯದ ದಿಕ್ಕು ಮತ್ತು ಅದರ ಚರ್ಚೆಯ ಸ್ವರೂಪವನ್ನೇ ಬದಲಿಸಿದ ಹಿನ್ನೆಲೆಯನ್ನು ನಾವು ಗಮನಿಸಬೇಕು.
ರಾಮಲಲ್ಲಾ ಸ್ಥಾಪನೆ ಹಿನ್ನೆಲೆ
ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಮಾಡಿದ, “500 ವರ್ಷಗಳ ತ್ಯಾಗ ಮತ್ತು ಶತಮಾನಗಳ ನೋವು” ಎಂಬ ವಿಶ್ಲೇಷಣೆಗೆ ಯಾವುದೇ ಪುರಾವೆಗಳು ಇಲ್ಲದೇ ಇರುವಾಗ 1949ರ ಡಿಸೆಂಬರ್ ತಿಂಗಳ 22-23ರ ಮಧ್ಯರಾತ್ರಿ ಸ್ಥಳೀಯ ಹಿಂದೂ ಪ್ರಾಬಲ್ಯವಾದಿ ಅಭಿರಾಮ್ ದಾಸ್ ಮತ್ತು ಇನ್ನೂ ಕೆಲವು ಅಷ್ಟೇನು ಪ್ರಮುಖರಲ್ಲದೆ ಕಾರ್ಯಕರ್ತರ ಜೊತೆ ಸೇರಿ ಬಾಬರಿ ಮಸೀದಿಯ ಮಧ್ಯಭಾಗದ ಗುಮ್ಮಟದ ಕೆಳಗೆ ರಾಮ ಲಲ್ಲಾ ಅಥವಾ ಬಾಲ ಶ್ರೀರಾಮನ ವಿಗ್ರಹವನ್ನು ರಹಸ್ಯವಾಗಿ ಸ್ಥಾಪಿಸಿದರು.
ಇಂತಹುದೊಂದು ಕೃತ್ಯದಿಂದ ಮಸೀದಿಗೆ ಯಾವುದೇ ರೀತಿಯಲ್ಲಿ ಭೌತಿಕವಾಗಿ ಹಾನಿಯಾಗಿಲ್ಲ ಎಂಬುದು ಗಮನಾರ್ಹ. ಆದರೂ ಇದರಿಂದಾಗಿ 43 ವರ್ಷಗಳ ಕಾಲ ಆ ಕಟ್ಟಡದ ಸ್ವರೂಪವನ್ನೇ ಬದಲಾಯಿಸಿತು. ಆ ಬಳಿಕ ಪೊಲೀಸರ ಮತ್ತು ಸಂಘ ಪರಿವಾರದ ಒಳಗಿನ ಬಿಜೆಪಿ ಹಾಗೂ ಅದರ ಅಂಗ ಸಂಸ್ಥೆಗಳ ಉನ್ನತ ನಾಯಕರ ಸಮ್ಮುಖದಲ್ಲಿ ಅದನ್ನು ಸಂಪೂರ್ಣ ನೆಲಸಮ ಮಾಡಲಾಯಿತು.
ಮರುದಿನ ಬೆಳಿಗ್ಗೆ ಘಟನೆಯ ಬಗ್ಗೆ ಸುದ್ದಿ ಹಬ್ಬಿತು. ಅವೆಲ್ಲವೂ ಸ್ಥಳೀಯ ಅಧಿಕಾರಿಗಳ ನೆರವಿನಿಂದ ಅಲ್ಲಿನ ಹಿಂದೂ ಕಟ್ಟಾಳುಗಳ ವ್ಯಾಪಕ ಜಾಲದಿಂದ ಯೋಜಿತವಾಗಿ ರೂಪಿಸಲಾದ ಸುದ್ದಿ. ತಕ್ಷಣ ಜನ ಸಾವಿರಾರು ಸಂಖ್ಯೆಯಲ್ಲಿ ಸೇರಲು ಆರಂಭಿಸಿದರು. ಆಗ ಮೊಳಗಿದ ಘೋಷಣೆ; “ರಾಮಲಲ್ಲಾ ಪ್ರಕಟ ಹೋಗಯೇ” (ಪವಿತ್ರ ದೇಗುಲದೊಳಗೆ ಬಾಲಶ್ರೀರಾಮ ಪ್ರತ್ಯಕ್ಷನಾಗಿದ್ದಾನೆ). ಅಯೋಧ್ಯೆ/ಫೈಜಾಬಾದ್ ಹಾಗೂ ಲಖನೌದಲ್ಲಿನ ಸ್ಥಳೀಯ ರಾಜಕೀಯ ನಾಯಕರ ಗುರಿ ಏನಾಗಿತ್ತೆಂದರೆ ಈ ಬೆಳವಣಿಗೆಗೆ ಶಾಶ್ವತ ರೂಪವನ್ನು ನೀಡುವುದು.
ಆ ತನಕ ತನ್ನದೇ ಆದ ಕೆಲವು ಮಿತಿಗಳೊಂದಿಗೆ ಮಸೀದಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಬಾಬರಿ ಮಸೀದಿಯ ಒಳಗೆ ಆ ರಾತ್ರಿ ಸಂಪೂರ್ಣ ಕಾನೂನು ಬಾಹಿರವಾಗಿ ಪ್ರವೇಶ ಮಾಡಿ, ಅದರ ಕಾರ್ಯವನ್ನು ನಿಲ್ಲಿಸುವುದು ಅವರ ಉದ್ದೇಶವಾಗಿತ್ತು.
ನೆಹರು-ಪಟೇಲ್ ಭಿನ್ನ ನಿಲುವು
ಘಟನೆ ನಡೆದ ನಂತರದ ವಾರಗಳಲ್ಲಿ ಅಂದಿನ ಪ್ರಧಾನಿ ನೆಹರು ಮತ್ತು ಗೃಹ ಸಚಿವ ಪಟೇಲ್ ಅವರು ಈ ವಿಚಾರದಲ್ಲಿ ಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದರು. ಇಬ್ಬರೂ ಕೂಡ ಸಾಮೂಹಿಕ ಕಾರ್ಯನಿರ್ವಹಣೆಯ ತತ್ವಗಳನ್ನು ನಂಬಿದವರಾಗಿದ್ದರು. ಅದರಿಂದಾಚೆಗೆ ಅಯೋಧ್ಯೆ ಬೆಳವಣಿಗೆಗಳ ವಿಚಾರದಲ್ಲಿ ಅವರು ವಿಭಿನ್ನ ನಿಲುವುಗಳನ್ನು ಹೊಂದಿದ್ದರು.
ಇನ್ನೊಂದು ಕಡೆ ರಾಜಕೀಯ ನಾಯಕರ ದೊಡ್ಡ ಗುಂಪೇ ಇತ್ತು. ಅವರಲ್ಲಿ ಕಾಂಗ್ರೆಸ್ ಮತ್ತು ಹಿಂದೂ ಮಹಾಸಭಾ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್.ಎಸ್.ಎಸ್)ದಂತಹ ಅವಳಿ ಶಕ್ತಿಗಳ ನಾಯಕರು ಸೇರಿದ್ದರು. ಜೊತೆಗೆ ಫೈಜಾಬಾದಿನ ಉಪ ಆಯುಕ್ತ ಹಾಗೂ ಜಿಲ್ಲಾಧಿಕಾರಿ ಕೆ.ಕೆ.ಕೆ ನಾಯರ್ ಅವರಂತಹ ಅಧಿಕಾರಿಗಳ ಗುಂಪು ಕೂಡ ಇತ್ತು.
ಎಲ್ಲಕ್ಕಿಂತ ಮುಖ್ಯವಾಗಿ ಆಗಿನ ಉತ್ತರ ಪ್ರದೇಶದ ಮುಖ್ಯಮಂತ್ರಿ ಗೋವಿಂದ್ ವಲ್ಲಭ ಪಂತ್ ಹಾಗೂ ಅವರ ಗೃಹ ಸಚಿವ ಲಾಲ್ ಬಹದ್ದೂರ್ ಶಾಸ್ತ್ರಿ ಒಳಗೊಂಡಂತೆ ಅನೇಕ ಮಂದಿ ಹಿರಿಯ ಕಾಂಗ್ರೆಸ್ ನಾಯಕರು ನೆಹರು ಮತ್ತು ಪಟೇಲ್ ಜೋಡಿಯ ವಿರುದ್ಧ ತಿರುಗಿ ಬಿದ್ದಿದ್ದರು.
ಐನೂರು ವರ್ಷಗಳಿಂದ ಅಸ್ತಿತ್ವದಲ್ಲಿದ್ದರೂ ಕೇವಲ ನೂರಕ್ಕೂ ಹೆಚ್ಚು ವರ್ಷಗಳ ವರೆಗೆ ವಿವಾದಿತ ಸ್ವರೂಪವನ್ನು ಪಡೆದಿರುವ ಒಂದು ಪುರಾತನ ಮಸೀದಿಯ ಒಳಗೆ ರಾಮ ಲಲ್ಲಾನ ವಿಗ್ರಹವನ್ನು ನಿಗೂಢವಾದ ರೀತಿಯಲ್ಲಿ ಸ್ಥಾಪಿಸಿದ ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಪಕ್ಷದಲ್ಲಿನ ಎರಡು ವಿಭಿನ್ನ ಗುಂಪುಗಳ ನಡುವೆ ಗಹನವಾದ ಚರ್ಚೆ ನಡೆಯಿತು.
ಇಂತಹುದೊಂದು ವಾದ-ವಿವಾದದ ಸರಣಿಯು ಕಾಂಗ್ರೆಸ್ ಮತ್ತು ಇತರ ಪಕ್ಷಗಳ ನಾಯಕರು ಹಾಗೂ ಅನೇಕ ಅಧಿಕಾರಿಗಳ ನಡುವಿನ ಚರ್ಚೆಗೆ ನಾಂದಿ ಹಾಡಿತು. ಈ ರೀತಿಯ ಚರ್ಚೆಗಳು ಡಿಸೆಂಬರ್ 22-23ರ ರಾತ್ರಿಯ ಘಟನೆ ನಡೆದ ಕೆಲವೇ ದಿನಗಳಲ್ಲಿ ಚಾಲ್ತಿಗೆ ಬಂದಿತು. ಆದರೆ ರಾಜನಾಥ್ ಸಿಂಗ್ ಅವರ ಆರೋಪವನ್ನು ಪುಷ್ಟೀಕರಿಸುವಂತಹ ಯಾವುದೇ ಉಲ್ಲೇಖಗಳು ಅಥವಾ ದಾಖಲೆಗಳು ಲಭ್ಯವಾಗುವುದಿಲ್ಲ.
ಪಂತ್ ಅವರಿಗೆ ನೆಹರೂ ಸಂದೇಶ
ಇದಾದ ಬಳಿಕ 1949ರ ಡಿಸೆಂಬರ್ 26ರಂದು, ನೆಹರೂ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಪಂತ್ ಅವರಿಗೆ ಒಂದು ತಂತಿ ಸಂದೇಶವನ್ನು ಕಳುಹಿಸಿದರು; “ಅಯೋಧ್ಯೆಯಲ್ಲಿನ ಬೆಳವಣಿಗೆಗಳಿಂದ ನಾನು ತಳಮಳಗೊಂಡಿದ್ದೇನೆ. ಈ ವಿಷಯದಲ್ಲಿ ನೀವು ವೈಯಕ್ತಿಕ ಆಸಕ್ತಿ ವಹಿಸುತ್ತೀರಿ ಎಂದು ಪ್ರಾಮಾಣಿಕವಾಗಿ ಆಶಿಸುತ್ತೇನೆ. ಅಲ್ಲಿ ಕೆಟ್ಟ ಪರಿಣಾಮ ಉಂಟುಮಾಡುವ ಅಪಾಯಕಾರಿ ಉದಾಹರಣೆಗೆ ನಾಂದಿ ಹಾಡಲಾಗುತ್ತಿದೆ,” ಎಂದು ಅವರು ಅದರಲ್ಲಿ ಹೇಳಿದ್ದರು.
ಮಹಾತ್ಮಾ ಗಾಂಧಿ ಅವರ ಹತ್ಯೆಯ ಬಳಿಕ ಪಟೇಲ್ ಅವರು ಆರ್.ಎಸ್.ಎಸ್. ಮತ್ತು ಹಿಂದೂ ಮಹಾಸಭಾದ ವಿಚಾರದಲ್ಲಿ ಅತ್ಯಂತ ಕಠಿಣ ಕ್ರಮಗಳನ್ನು ಕೈಗೊಂಡಿದ್ದರು ಎಂಬುದು ನಿಜ. ಆದರೆ ಪಟೇಲ್ ಅವರು ಪಂತ್ ಅವರಿಗೆ ನೀಡಿದ ಪ್ರೋತ್ಸಾಹ ಮತ್ತು ಅಯೋಧ್ಯೆ ಬೆಳವಣಿಗೆ ಕುರಿತಂತೆ ನೆಹರೂ ಜೊತೆಗೆ ಅವರ ನಾಜೂಕಿಲ್ಲದ ಭಿನ್ನಾಭಿಪ್ರಾಯವನ್ನು ಕಡೆಗಣಿಸುವುದು ಸರಿಯಲ್ಲ.
ನೆಹರು ಅವರು ವಿಗ್ರಹ ಸ್ಥಾಪನೆಯ ಬಗ್ಗೆ ತಮ್ಮ ಕಳವಳವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿ ತಂತಿ ಸಂದೇಶ ಕಳಿಸಿದರೆ ಪಟೇಲ್ ಅವರು ಮಾತ್ರ ಮುಖ್ಯಮಂತ್ರಿ ಪಂತ್ ಅವರ ಜೊತೆ ದೂರವಾಣಿ ಮಾತುಕತೆಗಷ್ಟೇ ತಮ್ಮನ್ನು ಸೀಮೀತಗೊಳಿಸಿದ್ದರು. ಆದರೆ ಪಂತ್ ಅವರ ಮೇಲೆ ಇನ್ನಷ್ಟು ಒತ್ತಡ ಹೇರುವ ಕ್ರಮವಾಗಿ ನೆಹರು ಅವರು ತಮ್ಮ ಹಸ್ತಾಕ್ಷರದಲ್ಲಿಯೇ ಇನ್ನೊಂದು ಟಿಪ್ಪಣಿಯನ್ನು ಕಳುಹಿಸುತ್ತಾರೆ.
ರಾಜಗೋಪಾಲಾಚಾರಿಗೆ ಪತ್ರ
ಇದಾದ ಬಳಿಕ 1950ರ ಜನವರಿ ಏಳರಂದು ಅವರು ಸಿ. ರಾಜಗೋಪಾಲಾಚಾರಿ ಅವರಿಗೆ ಔಪಚಾರಿಕವಾದ ಪತ್ರವನ್ನು ಬರೆದು ಅದರಲ್ಲಿ ತಮ್ಮ ಟಿಪ್ಪಣಿ ತಲುಪಿದ ನಂತರ ಪಂತ್ ನೆಹರು ಅವರಿಗೆ ಕರೆ ಮಾಡಿದ್ದರ ಪ್ರಸ್ತಾಪ ಮಾಡುತ್ತಾರೆ; “ಈ ಬಗ್ಗೆ ತುಂಬ ಚಿಂತಿತರಾಗಿದ್ದು ವಿಷಯವನ್ನು ವೈಯಕ್ತಿಕ ನೆಲೆಯಲ್ಲಿ ನೋಡುತ್ತಿರುವುದಾಗಿ ಹೇಳಿದ್ದಾರೆ. ಕ್ರಮ ಕೈಗೊಳ್ಳುವ ಉದ್ದೇಶ ಕೂಡ ಅವರದ್ದಾಗಿತ್ತು. ಆದರೆ ಮೊದಲಿಗೆ ಅಯೋಧ್ಯೆಯಲ್ಲಿರುವ ಜನರಿಗೆ ಪರಿಸ್ಥಿತಿಯನ್ನು ವಿವರಿಸಲು ಕೆಲವು ಹೆಸರಾಂತ ಹಿಂದೂಗಳು ಬೇಕು ಎಂದು ಅವರು ಬಯಸಿದ್ದರು.”
ಅಯೋಧ್ಯೆಯಲ್ಲಿನ ಪರಿಸ್ಥಿತಿಯನ್ನು ತಿಳಿಗೊಳಿಸಲು ಮತ್ತು ಬಾಬರಿ ಮಸೀದಿಯಿಂದ ರಾಮ ಲಲ್ಲಾ ವಿಗ್ರಹವನ್ನು ತೆಗೆಸುವ ಬಗ್ಗೆ ಅವರು ಅತೀವ ಕಾಳಜಿ ಹೊಂದಿದ್ದರೂ ಕೂಡ ಆಡಳಿತದ ಸಂಪುಟ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿದ್ದರು ಮತ್ತು ಈ ವಿಚಾರದಲ್ಲಿ ನಿರ್ಧಾರ ಕೈಗೊಳ್ಳಲು ಹಾಗೂ ಜೊತೆಗೆ ಆಂತರಿಕ ಭದ್ರತೆ ವಿಷಯದಲ್ಲಿ ಪಂತ್ ಅವರಿಗೆ ಸಲಹೆಗಳನ್ನು ನೀಡಲು ಪಟೇಲ್ ಅವರಿಗೆ ಅವಕಾಶ ನೀಡಿದ್ದರು. ಯಾಕೆಂದರೆ ಪಟೇಲ್ ಅವರು ಉಪ ಪ್ರಧಾನಿಯಾಗಿದ್ದರು ಮತ್ತು ಗೃಹ ಸಚಿವರೂ ಆಗಿದ್ದರು.
ಸೌಹಾರ್ದತೆ ಬಯಸಿದ್ದ ಪಟೇಲ್
ಅಯೋಧ್ಯೆಯಲ್ಲಿನ ಯಥಾಸ್ಥಿತಿಯನ್ನು ಬದಲಿಸಬಾರದು ಮತ್ತು ಬಾಬರಿ ಮಸೀದಿಗೆ ಬೀಗ ಹಾಕಿದ್ದರೂ ವಿಗ್ರಹ ಅಲ್ಲಿಯೇ ಇರಲು ಅವಕಾಶ ನೀಡಬೇಕು ಎಂಬ ಅಭಿಪ್ರಾಯ ಪಟೇಲ್ ಅವರಿಗೆ ಸಾಕಷ್ಟು ಮೊದಲಿಂದಲೂ ಇತ್ತು. ಇದು 1950ರ ಜನವರಿ 9ರಂದು ಬರೆದ ಅವರ ಪತ್ರದಲ್ಲಿ ಸ್ಪಷ್ಟವಾಗಿ ವ್ಯಕ್ತವಾಗುತ್ತದೆ.
ಎರಡೂ ಸಮುದಾಯಗಳ ನಡುವಿನ ಪರಸ್ಪರ ಸಹಿಷ್ಣುತೆ ಮತ್ತು ಸೌಹಾರ್ದ ಮನೋಭಾವದ ಮೂಲಕ ವಿಷಯವನ್ನು ಪರಿಹರಿಸಬೇಕು ಎಂದು ಪಟೇಲ್ ಅವರು ಪತ್ರದಲ್ಲಿ ಬರೆದಿದ್ದರು.
ಅಂದಿನ ಪರಿಸ್ಥಿತಿಯನ್ನು ಅವಲೋಕಿಸಿ ನೋಡುವುದಾದರೆ ಸೌಹಾರ್ದಯುತ ಇತ್ಯರ್ಥಕ್ಕೆ ಹೆಚ್ಚಿನ ಅವಕಾಶ ಇದ್ದಿರಲಿಲ್ಲ. ಯಾಕೆಂದರೆ ವಿಭಜನೆಯ ರಕ್ತಸಿಕ್ತ ಗಲಭೆಗಳು ನಡೆದ ಕೆಲವೇ ಸಮಯದಲ್ಲಿ8 ಫೈಜಾಬಾದ್-ಅಯೋಧ್ಯೆಯಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿತ್ತು. ಅಂತಹ ಸ್ಥಿತಿಯಲ್ಲಿ ದುಂಡಾವರ್ತಿ ನಡೆಸಿದವರ ವಿರುದ್ಧ ಸರ್ಕಾರ ಕಠಿಣ ನಿಲುವು ಅನುಸರಿಸದ ಹೊರತು ವಿಗ್ರಹವನ್ನು ತೆರವುಗೊಳಿಸಲು ಹಿಂದುಗಳು ಅವಕಾಶ ನೀಡುತ್ತಿರಲಿಲ್ಲ.
ಪಂತ್ ಅವರಿಗೆ ಪತ್ರ ಬರೆಯುವ ಮೂಲಕ ಪಟೇಲರು ಈ ವಿಷಯದ ಬಗ್ಗೆ ತಮ್ಮ ನಿಲುವನ್ನು ಹೆಚ್ಚು ಮುಕ್ತವಾಗಿ ವ್ಯಕ್ತಪಡಿಸಿದ್ದರು. ಅದರಲ್ಲಿ ಅವರು, “ಈ ನಡೆಯ (ದೇವರ ವಿಗ್ರಹ ಸ್ಥಾಪನೆ) ಹಿಂದೆ ತೀರಾ ಭಾವನಾತ್ಮಕ ಅಂಶವಿದೆ ಎಂಬುದರ ಅರಿವು ನನಗಿದೆ. ಅದೇ ವೇಳೆ ನಾವು ಮುಸ್ಲಿಂ ಸಮುದಾಯದ ಇಚ್ಛಾಪೂರ್ವಕ ಸಮ್ಮತಿಯನ್ನು ಪಡೆದುಕೊಂಡರೆ ಮಾತ್ರ ವಿಷಯವನ್ನು ಶಾಂತಿಯುತವಾಗಿ ಬಗೆಹರಿಸಲು ಸಾಧ್ಯ," ಎಂದು ಬರೆದರು. (ಇದು ಮೂಲಭೂತವಾಗಿ, ಡಿಸೆಂಬರ್ 22 ಕ್ಕೂ ಮೊದಲು ಇದ್ದ ಸ್ಥಿತಿಗೆ ಮಂದಿರವನ್ನು ಮರುಸ್ಥಾಪಿಸಬೇಕು ಎಂಬ ತಮ್ಮ ಬೇಡಿಕೆ ಕೊನೆಗೊಳಿಸಬೇಕು ಎಂಬ ವಾದವನ್ನು ಒಪ್ಪಿಕೊಳ್ಳುವುದನ್ನು ಬಿಟ್ಟು ಮುಸ್ಲಿಮರಿಗೆ ಬೇರೆ ದಾರಿ ಇರಲಿಲ್ಲ ಎಂಬುದನ್ನು ಸೂಚಿಸುತ್ತದೆ).
ಇನ್ನೊಂದು ಹಿಂಸಾಚಾರದ ಅಪಾಯ
ನೆಹರೂ ಅವರಿಗೆ ಈ ಬಗ್ಗೆ ಸಮಾಧಾನವಿರಲಿಲ್ಲ. ಆದರೆ ಅವರು ಹೆಚ್ಚಿನದೇನನ್ನೂ ಮಾಡಲಿಲ್ಲ. ಅಷ್ಟಕ್ಕೂ ಅವರಿಗೆ ಇನ್ನೂ ಅನೇಕ ಮಹತ್ವದ ಕಾರ್ಯಗಳಲ್ಲಿ ನಿರತರಾಗಬೇಕಾದ ಅಗತ್ಯವಿತ್ತು. ಯಾಕೆಂದರೆ ಕೇವಲ ಎರಡೇ ವಾರಗಳಲ್ಲಿ ಭಾರತವು ತನ್ನ ಸಂವಿಧಾನವನ್ನು ಅಳವಡಿಸಿಕೊಳ್ಳಬೇಕಾಗಿತ್ತು. ಅಷ್ಟು ಮಾತ್ರವಲ್ಲದೆ ವಿಭಜನೆಯ ಭಯಾನಕ ಗಲಭೆಗಳಿಂದ ದೇಶ ತತ್ತರಿಸಿ ಹೋಗಿತ್ತು. ಹಾಗಾಗಿ ಇನ್ನೊಂದು ಹಿಂಸಾಚಾರದ ಅಪಾಯವನ್ನು ಎದುರಿಸುವ ಪರಿಸ್ಥಿತಿಯಲ್ಲಿ ದೇಶ ಇರಲಿಲ್ಲ. ಯಾಕೆಂದರೆ ಆ ಹಿಂಸಾಚಾರವೂ ಕೂಡ ಮುಸ್ಲಿಮರ ವಿರುದ್ಧವೇ ನಿರ್ದೇಶಿಸಲ್ಪಟ್ಟಿತ್ತು.
ಮಸೀದಿಯನ್ನು ಅದರ ಮೂಲ ಸ್ವರೂಪಕ್ಕೆ ಮರುಸ್ಥಾಪಿಸಬೇಕೆಂಬುದು ನೆಹರೂ ಬಯಕೆಯಾಗಿತ್ತು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ, ಆದರೆ ಇದಕ್ಕಾಗಿ ಸರ್ಕಾರಿ ಹಣವನ್ನು ಖರ್ಚು ಮಾಡುವ ಅಗತ್ಯವಿರಲಿಲ್ಲ. ಪಟೇಲ್ ಅವರು ನೆಹರೂ ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದರು ಎಂಬುದು ನಿಜ. ಆದರೆ ಅದು ರಾಜನಾಥ್ ಹೇಳಿಕೊಂಡಿರುವ ಕಾರಣಕ್ಕಲ್ಲ.
ಧರ್ಮ ಆಧಾರಿತ ರಾಜಕೀಯದ ಹೋರಾಟ
ಜವಾಹರ್ ಲಾಲ್ ನೆಹರು ಮತ್ತು ಪಟೇಲ್ ನಡುವೆ ಅಭಿಪ್ರಾಯ ಭೇದಗಳಿದ್ದವು ಎಂಬುದನ್ನು ನಿರಾಕರಿಸಲು ಸಾಧ್ಯವಿಲ್ಲ. ಪಟೇಲ್ ಅವರು ಪ್ರಧಾನಿಯಾಗಿರದೇ ಇದ್ದಿರಬಹುದು. ಆದರೆ ಅವರು ನಿಶ್ಚಿತವಾಗಿ ಕಾಂಗ್ರೆಸ್ಸಿನ ಸಂಘಟನೆಯ ಮೇಲೆ ಪ್ರಾಬಲ್ಯವನ್ನು ಹೊಂದಿದ್ದರು. ಜೊತೆಗೆ ಪ್ರತಿಯೊಂದು ರಾಜ್ಯದಲ್ಲಿಯೂ ನಿಷ್ಠಾವಂತ ಬೆಂಬಲಿಗರ ಪಡೆಯನ್ನೇ ಪಡೆದಿದ್ದರು. ಗಾಂಧೀಜಿ ಹತ್ಯೆ ಬಳಿಕ ಹಿಂದೂ ಬಲಪಂಥೀಯರು ಸಂಪೂರ್ಣ ಅಪಖ್ಯಾತಿಯನ್ನು ಅಂಟಿಸಿಕೊಂಡಿದ್ದರಿಂದಾಗಿ ಈ ವಿಭಾಗವು ಹಿಂದುತ್ವದ ಭಾವನೆಗಳ ಮೇಲೆ ಆಳವಾದ ಸಹಾನುಭೂತಿಯನ್ನು ಹೊಂದಿತ್ತು.
ಬಾಬರಿ ಮಸೀದಿಯನ್ನು ಹೇಗಾದರೂ ಮಾಡಿ ಮರುಸ್ಥಾಪಿಸಬೇಕು ಎಂಬ ಇರಾದೆಯನ್ನು ನೆಹರು ಅವರು ಹೊಂದಿದ್ದರಾದರೂ ಧಾರ್ಮಿಕ ಅಸಹಿಷ್ಣುತೆ ಮತ್ತು ಧರ್ಮ ಆಧಾರಿತ ರಾಜಕೀಯ ವಿರುದ್ಧದ ಹೋರಾಟವನ್ನು ಗೆಲ್ಲುವ ದಾರಿಯಲ್ಲಿ ಕೆಲವು ಕದನಗಳನ್ನು ‘ಸೋಲಬೇಕಾಗುತ್ತದೆ’ ಎಂದು ಅವರ ಮನಸ್ಸು ತರ್ಕಿಸಿರಬಹುದು. ಅಯೋಧ್ಯೆಯಲ್ಲಿ ಘಟನೆ ಇದಕ್ಕೆ ಮೊದಲ ಉದಾಹರಣೆಯಾಗಿತ್ತು.
ರಾಜನಾಥ್ ಸಿಂಗ್ ಅವರು ಇತಿಹಾಸವನ್ನು ನಿಷ್ಪಕ್ಷಪಾತವಾಗಿ ನೋಡುವುದಿಲ್ಲ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಅದನ್ನು ಅವರು ತಮ್ಮ ಈಗಿನ ಹೋರಾಟಗಳಲ್ಲಿ ಬಳಸುವ ಅಸವಾಗಿ ಪರಿಗಣಿಸುತ್ತಾರೆ.
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ದ ಫೆಡರಲ್‌ನ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.