ರಾಷ್ಟ್ರಪತಿ ಉಲ್ಲೇಖ: ನಿರಾಶೆ ತರಿಸಿದ ಸುಪ್ರೀಂ ಕೋರ್ಟ್ ಉತ್ತರ

ರಾಷ್ಟ್ರಪತಿ ಉಲ್ಲೇಖಕ್ಕೆ ನೀಡಿದ ಉತ್ತರದಲ್ಲಿರುವ ಏಕೈಕ ಸಮಾಧಾನದ ಸಂಗತಿ ಎಂದರೆ ಮಸೂದೆಗೆ ಒಪ್ಪಿಗೆ ನೀಡುವ ಅಥವಾ ತಡೆಹಿಡಿಯುವ ವಿಷಯದಲ್ಲಿ ದೀರ್ಘಕಾಲದ ನಿಷ್ಕ್ರಿಯತೆಯನ್ನು ಕೊನೆಗೊಳಿಸಲು ರಾಜ್ಯಪಾಲರು/ರಾಷ್ಟ್ರಪತಿ ಅವರನ್ನು ಕೇಳಿಕೊಳ್ಳಲು ನ್ಯಾಯಾಲಯವು ಇನ್ನೂ ಮಧ್ಯಪ್ರವೇಶ ಮಾಡಬಹುದು ಎಂದು ಹೇಳಿರುವುದು.

By :  TK Arun
Update: 2025-11-26 00:30 GMT
ರಾಷ್ಟ್ರಪತಿಯವರ ಉಲ್ಲೇಖದಲ್ಲಿ ಪ್ರಸ್ತಾಪಿಸಲಾದ ಹದಿನಾಲ್ಕು ಪ್ರಶ್ನೆಗಳಿಗೆ ಸಾಂವಿಧಾನಿಕ ಪೀಠ ನೀಡಿದ ಉತ್ತರವು ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಈಗಾಗಲೇ ತಾರುಮಾರಾಗಿರುವ ಅಧಿಕಾರದ ಸಮತೋಲನವನ್ನು ಕೇಂದ್ರದ ಪರವಾಗಿ ಮತ್ತಷ್ಟು ಬದಲಾಯಿಸುವಂತೆ ಮಾಡುತ್ತದೆ.
Click the Play button to listen to article

ರಾಷ್ಟ್ರಪತಿ ಉಲ್ಲೇಖಕ್ಕೆ ಸರ್ವೋಚ್ಚ ನ್ಯಾಯಾಲಯ ನೀಡಿದ ಉತ್ತರ ದೊಡ್ಡ ನಿರಾಶೆಯಾಗಿದೆ. ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು ತಮ್ಮ ಮುಂದೆ ಇರುವ ಮಸೂದೆಯ ಬಗ್ಗೆ ನಿರ್ಧಾರ ಕೈಗೊಳ್ಳಲು ನ್ಯಾಯಾಲಯವು ಕಾಲಮಿತಿಗಳನ್ನು ಸೂಚಿಸಬಹುದೇ ಮತ್ತು ರಾಜ್ಯಪಾಲರು ಹಾಗೂ ರಾಷ್ಟ್ರಪತಿಯವರ ನಡವಳಿಕೆಯು ನ್ಯಾಯಾಂಗದ ಪರಿಶೀಲನೆಗೆ ಒಳಪಡುವುದೇ ಎಂಬುದನ್ನು ಖಚಿತಪಡಿಸುವುದು ಸಂವಿಧಾನ ಪೀಠದ ಕಾರ್ಯವಾಗಿತ್ತು. ಐದು ಸದಸ್ಯರ ಸಂವಿಧಾನ ಪೀಠದ ಈ ಪ್ರತಿಕ್ರಿಯೆಯು, ತಮಿಳುನಾಡು ಸರ್ಕಾರವು ರಾಜ್ಯಪಾಲರ ವಿಳಂಬ ಮತ್ತು ಅವರ ಅನಿಯಂತ್ರಿತ ಅಧಿಕಾರದ ವಿರುದ್ಧ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿ, ನ್ಯಾಯಾಲಯದ ಈರ್ವರು ಸದಸ್ಯರ ಪೀಠವು ಏಪ್ರಿಲ್‌ನಲ್ಲಿ ನಿಗದಿಪಡಿಸಿದ್ದ ಕಾಲಮಿತಿಗಳನ್ನು ಅಸಿಂಧುಗೊಳಿಸಿದೆ. ಅಲ್ಲದೆ, ಇದು ರಾಜ್ಯಪಾಲರು ಮತ್ತು ರಾಷ್ಟ್ರಪತಿಯವರ ಅನಿಯಂತ್ರಿತ ಅಧಿಕಾರದ ವಿರುದ್ಧದ ನ್ಯಾಯಾಂಗ ಪರಿಹಾರದ ವ್ಯಾಪ್ತಿಯನ್ನು ತೀವ್ರವಾಗಿ ತಗ್ಗಿಸುವಂತೆ ಮಾಡಿದೆ.

ಸಂವಿಧಾನ ಪೀಠದ ಅಭಿಪ್ರಾಯದ ತಾಂತ್ರಿಕ ಸಿಂಧುತ್ವದ ವಿಶ್ಲೇಷಣೆ ಮಾಡುವುದು ಕಾನೂನು ದಿಗ್ಗಜರಿಗೆ ಬಿಟ್ಟ ವಿಷಯ. ಆದರೆ, ರಾಷ್ಟ್ರಪತಿ ಉಲ್ಲೇಖದಲ್ಲಿ ಪ್ರಸ್ತಾಪ ಮಾಡಲಾದ ಹದಿನಾಲ್ಕು ಪ್ರಶ್ನೆಗಳಿಗೆ ಸಂವಿಧಾನ ಪೀಠ ನೀಡಿದ ಉತ್ತರವು ಉಂಟುಮಾಡಬಹುದಾದ ರಾಜಕೀಯ ಪರಿಣಾಮವನ್ನು ತಪ್ಪಾಗಿ ಗ್ರಹಿಸಲು ಸಾಧ್ಯವಿಲ್ಲ. ಇದರ ಪರಿಣಾಮವೇನೆಂದರೆ, ಇದು ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಈಗಾಗಲೇ ತಾರುಮಾರಾಗಿರುವ ಅಧಿಕಾರದ ಸಮತೋಲನವನ್ನು ಕೇಂದ್ರದ ಪರವಾಗಿ ಮತ್ತಷ್ಟು ಬದಲಾಯಿಸುವಂತೆ ಮಾಡುತ್ತದೆ.

ಕಾನೂನು ಪರಿಹಾರ ಮೊಟಕು

ಕೇಂದ್ರದಲ್ಲಿರುವ ರಾಜಕೀಯ ವ್ಯವಸ್ಥೆಯು ರಾಜ್ಯಪಾಲರನ್ನು ತನ್ನ ಕೈಗೊಂಬೆಯನ್ನಾಗಿ ಮಾಡಿಕೊಂಡು ವಿರೋಧ ಪಕ್ಷವು ಅಧಿಕಾರದಲ್ಲಿರುವ ಸರ್ಕಾರಗಳ ವಿರುದ್ಧ ಪ್ರಯೋಗಿಸಲು ಇದು ಅನುಕೂಲವನ್ನು ಕಲ್ಪಿಸುತ್ತದೆ. ಇದರ ಫಲವಾಗಿ ರಾಜ್ಯ ಸರ್ಕಾರಗಳು ತಮ್ಮ ಶಾಸಕಾಂಗಗಳು ಅಂಗೀಕರಿಸಿದ ಮಸೂದೆಗಳಿಗೆ ರಾಜ್ಯಪಾಲರು ಅಥವಾ ರಾಷ್ಟ್ರಪತಿ ಸಮ್ಮತಿಯನ್ನು ನೀಡದೇ ಇರುವ ಕ್ರಮದ ವಿರುದ್ಧ ಕಾನೂನು ಪರಿಹಾರವನ್ನು ಪಡೆಯುವ ಅವಕಾಶವನ್ನು ಸಂವಿಧಾನ ಪೀಠವು ಕಿತ್ತುಕೊಂಡಂತಾಗಿದೆ.

ರಾಷ್ಟ್ರಪತಿ ಉಲ್ಲೇಖಕ್ಕೆ ನೀಡಿದ ಉತ್ತರದಲ್ಲಿರುವ ಏಕೈಕ ಸಮಾಧಾನದ ಸಂಗತಿ ಎಂದರೆ ಮಸೂದೆಗೆ ಒಪ್ಪಿಗೆ ನೀಡುವ ಅಥವಾ ತಡೆಹಿಡಿಯುವ ವಿಷಯದಲ್ಲಿ ದೀರ್ಘಕಾಲದ ನಿಷ್ಕ್ರಿಯತೆಯನ್ನು ಕೊನೆಗೊಳಿಸಲು ರಾಜ್ಯಪಾಲರು/ರಾಷ್ಟ್ರಪತಿ ಅವರನ್ನು ಕೇಳಿಕೊಳ್ಳಲು ನ್ಯಾಯಾಲಯವು ಇನ್ನೂ ಮಧ್ಯಪ್ರವೇಶ ಮಾಡಬಹುದು ಎಂದು ಹೇಳಿರುವುದು.

ನ್ಯಾಯಮೂರ್ತಿ ಜೆ.ಬಿ. ಪಾರ್ಡಿವಾಲಾ ಮತ್ತು ನ್ಯಾಯಮೂರ್ತಿ ಆರ್. ಮಹಾದೇವನ್ ಅವರು ಏಪ್ರಿಲ್ ತಿಂಗಳಿನಲ್ಲಿ ನೀಡಿದ ತೀರ್ಪಿನ ಸಾರಾಂಶವೇನೆಂದರೆ, ರಾಜ್ಯ ಶಾಸಕಾಂಗವು ಅಂಗೀಕರಿಸಿದ ಮಸೂದೆಯು ಕಾನೂನು ಸ್ವರೂಪವನ್ನು ಪಡೆಯಲು ರಾಜ್ಯಪಾಲರ ಅಥವಾ (ರಾಜ್ಯಪಾಲರು ಬಯಸಿದರೆ) ರಾಷ್ಟ್ರಪತಿಯವರ ಒಪ್ಪಿಗೆಯನ್ನು ನೀಡುವಲ್ಲಿ ಇರುವ ಅನಿಯಂತ್ರಿತ ಅಧಿಕಾರವನ್ನು ತೊಡೆದುಹಾಕುವುದು.

ರಾಜ್ಯಪಾಲ ಆರ್.ಎನ್. ರವಿ ಅವರ ಸಂಪೂರ್ಣ ಮತ್ತು ವಿವರಿಸಲು ಆಗದೆ ಇರುವ ನಿಷ್ಕ್ರಿಯ ನಡವಳಿಕೆಯ ವಿರುದ್ಧ ತಮಿಳು ನಾಡು ಸರ್ಕಾರವು ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗುವುದರೊಂದಿಗೆ ಈ ವಿಷಯಕ್ಕೆ ಚಾಲನೆ ದೊರೆತಿತ್ತು. ರಾಜ್ಯ ಶಾಸಕಾಂಗವು ಅಂಗೀಕರಿಸಿದ ಮತ್ತು ಅವರ ಒಪ್ಪಿಗೆಗಾಗಿ ಮಂಡಿಸಲಾದ ಮಸೂದೆಗಳ ಬಗ್ಗೆ ರಾಜ್ಯಪಾಲರು ವರ್ಷಗಳವರೆಗೆ ನಿಷ್ಕ್ರಿಯ ಧೋರಣೆಯನ್ನು ಮುಂದುವರೆಸಿದ್ದರು. ಇದು ಸಾಂವಿಧಾನಿಕ ಔಚಿತ್ಯ ಮತ್ತು ನಿಯಮಗಳ ಉಲ್ಲಂಘನೆಯಾಗಿತ್ತು.

ಸಾಂವಿಧಾನಿಕ ವ್ಯವಸ್ಥೆ ಅಡಿಯಲ್ಲಿ ಸಂವಿಧಾನದ ಏಳನೇ ಶೆಡ್ಯೂಲ್ನ ಪಟ್ಟಿ II ರಲ್ಲಿ ಇರುವ ರಾಜ್ಯದ ವಿಷಯಗಳ ಪಟ್ಟಿಯ ಪ್ರಕಾರ, ರಾಜ್ಯಗಳು ತಮ್ಮ ಶಾಸಕಾಂಗದ ಸಾಮರ್ಥ್ಯದ ವ್ಯಾಪ್ತಿಯಲ್ಲಿ ಬರುವ ವಿಷಯಗಳ ಮೇಲೆ ಕಾನೂನು ರೂಪಿಸಿದಾಗಲೂ ಆ ಮಸೂದೆಗಳು ಕಾನೂನು ಆಗುವ ಮೊದಲು ರಾಜ್ಯಪಾಲರ ಒಪ್ಪಿಗೆಯನ್ನು ಪಡೆಯಬೇಕಾಗುತ್ತದೆ.

ಮೂರು ಬಹುಮುಖ್ಯ ಆಯ್ಕೆಗಳು

ಶಾಸಕಾಂಗವು ಅಂಗೀಕರಿಸಿದ ಮಸೂದೆಯನ್ನು ರಾಜ್ಯಪಾಲರ ಒಪ್ಪಿಗೆಗಾಗಿ ಮಂಡಿಸಿದಾಗ, ಅವರ ಮುಂದೆ ಮೂರು ಆಯ್ಕೆಗಳಿರುತ್ತವೆ: ಅವರು ತಮ್ಮ ಒಪ್ಪಿಗೆಯನ್ನು ನೀಡಬಹುದು, ಅಥವಾ ಮರುಪರಿಶೀಲನೆಗಾಗಿ ತಮ್ಮ ಅಭಿಪ್ರಾಯಗಳೊಂದಿಗೆ ಅದನ್ನು ಮತ್ತೆ ಶಾಸಕಾಂಗಕ್ಕೆ ಹಿಂದಿರುಗಿಸಬಹುದು, ಅಥವಾ ಅದನ್ನು ರಾಷ್ಟ್ರಪತಿಯವರ ಪರಿಗಣನೆಗಾಗಿ ಕಳುಹಿಸಬಹುದು.

ತಮ್ಮ ಆಕ್ಷೇಪಣೆಗಳನ್ನು ಒಳಗೊಂಡಿರುವ ರಾಜ್ಯಪಾಲರ ಸಂದೇಶದೊಂದಿಗೆ ಮಸೂದೆಯನ್ನು ಸದನವು ಮರಳಿ ಪಡೆದಾಗ, ರಾಜ್ಯಪಾಲರು ವ್ಯಕ್ತಪಡಿಸಿರುವ ಕಳಕಳಿಗಳನ್ನು ಅಳವಡಿಸಿಕೊಂಡು ಅಥವಾ ಅಳವಡಿಸಿಕೊಳ್ಳದೆಯೇ ಆ ಮಸೂದೆಯನ್ನು ಮರು-ಅಳವಡಿಸಿಕೊಳ್ಳಬಹುದು ಮತ್ತು ಅದನ್ನು ರಾಜ್ಯಪಾಲರಿಗೆ ಮತ್ತೆ ಕಳುಹಿಸಬಹುದು. ಹಾಗೆ ಮಾಡಿದಾಗ ರಾಜ್ಯಪಾಲರು ಅದಕ್ಕೆ ಒಪ್ಪಿಗೆ ನೀಡಲು ನಿರಾಕರಿಸುವಂತಿಲ್ಲ.

ರಾಷ್ಟ್ರಪತಿಯವರು ತಮ್ಮ ಪರಿಗಣನೆಗಾಗಿ ರಾಜ್ಯದ ಮಸೂದೆಯನ್ನು ಸ್ವೀಕರಿಸಿದಾಗ, ಅವರು “ಮಸೂದೆಗೆ ಒಪ್ಪಿಗೆ ನೀಡುತ್ತೇನೆ ಅಥವಾ ಒಪ್ಪಿಗೆ ನೀಡುವುದಕ್ಕೆ ತಡೆಹಿಡಿಯುತ್ತೇನೆ ಎಂದು ಘೋಷಿಸಬೇಕು". ಅವರು ತಮ್ಮ ಆಕ್ಷೇಪಣೆ /ಸೂಚನೆಗಳನ್ನು ವಿವರಿಸುವ ಸಂದೇಶದೊಂದಿಗೆ ಮಸೂದೆಯನ್ನು ಶಾಸಕಾಂಗಕ್ಕೆ ಹಿಂದಿರುಗಿಸುವಂತೆ ರಾಜ್ಯಪಾಲರಿಗೆ ನಿರ್ದೇಶನ ನೀಡಬಹುದು.

ರಾಷ್ಟ್ರಪತಿಗೆ ಯಾವುದೇ ಬದ್ಧತೆಯಿಲ್ಲ

ಶಾಸಕಾಂಗವು ರಾಷ್ಟ್ರಪತಿಯವರಿಂದ ಹಿಂದಿರುಗಿಸಲಾದ ಮಸೂದೆಯನ್ನು ಪಡೆದ ಸಂದರ್ಭದಲ್ಲಿ ಮಾರ್ಪಾಡುಗಳೊಂದಿಗೆ ಅಥವಾ ಮಾರ್ಪಾಡುಗಳಿಲ್ಲದೇ ಆ ಮಸೂದೆಯನ್ನು ಮರು-ಅಳವಡಿಸಿಕೊಳ್ಳಲು ಮತ್ತು ಅದನ್ನು ರಾಷ್ಟ್ರಪತಿಯವರ ಪರಿಗಣನೆಗಾಗಿ ಮತ್ತೆ ಕಳುಹಿಸಲು ಆರು ತಿಂಗಳ ಕಾಲಾವಕಾಶವಿರುತ್ತದೆ. ಮರು-ಅಳವಡಿಸಲಾದ ಮಸೂದೆಗೆ ಒಪ್ಪಿಗೆ ನೀಡಲು ರಾಜ್ಯಪಾಲರು ಬದ್ಧರಾಗಿರುತ್ತಾರೆ ಆದರೆ ರಾಷ್ಟ್ರಪತಿಯವರು ಬದ್ಧರಾಗಿರುವುದಿಲ್ಲ.

ಹಾಗಂತ ರಾಜ್ಯಪಾಲರು ಅಥವಾ ರಾಷ್ಟ್ರಪತಿಯವರು ತಮ್ಮ ಸಾಂವಿಧಾನಿಕ ಕಚೇರಿಯ ಮುಂದೆ ಬಂದಿರುವ ಮಸೂದೆಯ ವಿಚಾರದಲ್ಲಿ ಅನಿರ್ದಿಷ್ಟವಾಗಿ ಯಾವುದೇ ಕ್ರಮ ಕೈಗೊಳ್ಳದೇ ವಿಳಂಬ ಮಾಡಬಹುದೇ? ರಾಜ್ಯಪಾಲರು “ಸಾಧ್ಯವಾದಷ್ಟು ಬೇಗ ಕ್ರಮ ತೆಗೆದುಕೊಳ್ಳಬೇಕು" ಎಂದು ಸಂವಿಧಾನವೇ ಹೇಳುತ್ತದೆ. ನ್ಯಾಯಮೂರ್ತಿಗಳಾದ ಪಾರ್ಡಿವಾಲಾ ಮತ್ತು ಮಹಾದೇವನ್ ಅವರು, ರಾಜ್ಯಪಾಲರು ಮಸೂದೆಗೆ ಒಪ್ಪಿಗೆ ನೀಡಲು ಅದನ್ನು ಅವರಿಗೆ ಮಂಡಿಸಿದ ನಂತರ ಅವರು ಕಾರ್ಯನಿರ್ವಹಿಸಲು ಕೆಲವು ಕಾಲಮಿತಿಗಳನ್ನು ರೂಪಿಸುವ ಮೂಲಕ, ಈ ಅಸ್ಪಷ್ಟವಾದ ನಿರ್ಬಂಧಕ್ಕೆ ಸ್ಪಷ್ಟ ಸ್ವರೂಪ ನೀಡಿದರು.

ಅಂತಹ ಕಾಲಮಿತಿಗಳು ಮತ್ತು ಒಪ್ಪಿಗೆ ನೀಡಲಾಗಿದೆ ಎಂದು ಭಾವಿಸುವುದು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ರಾಷ್ಟ್ರಪತಿ ಉಲ್ಲೇಖಕ್ಕೆ ಸಂವಿಧಾನ ಪೀಠದ ಪ್ರತಿಕ್ರಿಯೆ ಹೇಳುತ್ತದೆ. ಇದಲ್ಲದೆ, ಒಪ್ಪಿಗೆಯನ್ನು ತಡೆಹಿಡಿಯುವ ವಿಚಾರದಲ್ಲಿ ರಾಜ್ಯಪಾಲರು ಮತ್ತು ರಾಷ್ಟ್ರಪತಿಯವರ ನಿರ್ಧಾರಗಳು ನ್ಯಾಯಾಂಗದ ಪರಿಶೀಲನೆಗೆ ಒಳಪಡುವುದಿಲ್ಲ ಎಂದು ಅದು ಹೇಳುತ್ತದೆ. ಆದಾಗ್ಯೂ, ವಿಪರೀತ ವಿಳಂಬವಾದ ಸಂದರ್ಭದಲ್ಲಿ, ನ್ಯಾಯಾಲಯವು ನಿರ್ಧಾರ ತೆಗೆದುಕೊಳ್ಳುವಂತೆ ಕೇಳಲು ಸೀಮಿತ ಅವಕಾಶ ಹೊಂದಿದೆ ಎಂದೂ ಅದು ಹೇಳುತ್ತದೆ.

‘ರಾಷ್ಟ್ರಪತಿ ಉಲ್ಲೇಖ’ ಎಂದರೆ ಕಾನೂನು ಸ್ಪಷ್ಟತೆಗಾಗಿ ಕೇಳಲಾಗುವ ಒಂದು ಪ್ರಶ್ನೆ. ನೀಡಲಾದ ಉತ್ತರವು ಸುಪ್ರೀಂ ಕೋರ್ಟಿನ ಯಾವುದೇ ಹಿಂದಿನ ತೀರ್ಪಿಗೆ ವಿರುದ್ಧವಾದ ತೀರ್ಪಲ್ಲ. 2012ರಲ್ಲಿ 122 ಟೆಲಿಕಾಂ ಪರವಾನಗಿಗಳನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ತೀರ್ಪು, ಸ್ಪೆಕ್ಟ್ರಮ್ನ ಆಡಳಿತಾತ್ಮಕ ಹಂಚಿಕೆಯ ಆಧಾರದ ಮೇಲೆ ಪರವಾನಗಿಗಳ ಅಕ್ರಮವನ್ನು ಕಂಡುಕೊಂಡಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ನ್ಯಾಯಮೂರ್ತಿಗಳಾದ ಜಿ.ಎಸ್. ಸಿಂಗ್ ಮತ್ತು ಎ.ಕೆ. ಗಂಗೂಲಿ ಅವರ ಪೀಠವು ನೈಸರ್ಗಿಕ ಸಂಪನ್ಮೂಲಗಳನ್ನು ಹರಾಜಿನಂತಹ ಸ್ಪರ್ಧಾತ್ಮಕ ಕಾರ್ಯವಿಧಾನದ ಮೂಲಕ ಮಾತ್ರ ಹಂಚಬೇಕು ಎಂದು ಹೇಳಿತ್ತು.

ತದನಂತರದ ರಾಷ್ಟ್ರಪತಿ ಉಲ್ಲೇಖವು ನೈಸರ್ಗಿಕ ಸಂಪನ್ಮೂಲಗಳನ್ನು ಹೇಗೆ ಹಂಚಬೇಕು ಎಂಬುದರ ಮೇಲೆ ಕೇಂದ್ರೀಕರಿಸಿತ್ತು. ಇದಕ್ಕೆ ಸಂವಿಧಾನ ಪೀಠವು ನೀಡಿದ ಪ್ರತಿಕ್ರಿಯೆ ಏನೆಂದರೆ, ನೈಸರ್ಗಿಕ ಸಂಪನ್ಮೂಲಗಳನ್ನು ಸ್ಪರ್ಧಾತ್ಮಕ ಹರಾಜು ಪ್ರಕ್ರಿಯೆಯನ್ನು ಹೊರತುಪಡಿಸಿ, ಆಡಳಿತಾತ್ಮಕ ಹಂಚಿಕೆ ಸೇರಿದಂತೆ ನಾನಾ ವಿಧಾನಗಳ ಮೂಲಕ ಹಂಚಬಹುದು. ಆದರೂ, ಇದು ಈಗಾಗಲೇ ಕೈಗೊಂಡಿದ್ದ ಪರವಾನಗಿಗಳ ರದ್ದತಿಯನ್ನು ಸ್ವಯಂಚಾಲಿತವಾಗಿ ಹಿಮ್ಮುಖಗೊಳಿಸಲಿಲ್ಲ.

ಕೋರ್ಟ್ ಕಟ್ಟೆ ಹತ್ತುವ ಸಾಧ್ಯತೆ

ರಾಜ್ಯಪಾಲ ಆರ್.ಎನ್. ರವಿ ಅವರು ತಡೆಯಲು ಯತ್ನಿಸಿದ್ದ ಕಾನೂನುಗಳನ್ನು ರದ್ದುಗೊಳಿಸಲು, ರಾಷ್ಟ್ರಪತಿ ಉಲ್ಲೇಖಕ್ಕೆ ನೀಡಿದ ಪ್ರಸ್ತುತ ಪ್ರತಿಕ್ರಿಯೆಯನ್ನು ಆಧಾರವಾಗಿಟ್ಟುಕೊಂಡು, ನ್ಯಾಯಮೂರ್ತಿಗಳಾದ ಪಾರ್ಡಿವಾಲಾ ಮತ್ತು ಮಹಾದೇವನ್ ಅವರ ತೀರ್ಪನ್ನು ಹಿಮ್ಮೆಟ್ಟಿಸಲು ಯಾರಾದರೂ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ. ಇದು ನ್ಯಾಯಾಲಯಗಳಲ್ಲಿ ಈ ವಿಷಯವನ್ನು ಮುಕ್ತವಾಗಿ ತೆರೆದಿಡುವಂತೆ ಮಾಡುತ್ತದೆ ಮತ್ತು ರಾಜ್ಯ ಸರ್ಕಾರಗಳು ಹಾಗೂ ರಾಜಕೀಯ ಪಕ್ಷಗಳು ಪ್ರಸ್ತುತ ಇರುವ ರಾಜ್ಯಪಾಲರ ಅನಿಯಂತ್ರಿತ ಅಧಿಕಾರದ ಕಾನೂನು ಮಾನ್ಯತೆ ನೀಡುವ ತೀರ್ಪನ್ನು ಹಿಮ್ಮೆಟ್ಟಿಸಲು ದೊಡ್ಡ ಸಂವಿಧಾನ ಪೀಠಕ್ಕೆ ಮನವಿ ಮಾಡಬೇಕು. ಇದು, ಕೇಂದ್ರದಲ್ಲಿರುವ ಆಡಳಿತ ಪಕ್ಷವು ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ವಿರೋಧ ಪಕ್ಷಗಳ ವಿರುದ್ಧ ನಡೆಸುತ್ತಿರುವ ರಾಜಕೀಯ ಕುತಂತ್ರಗಳಿಗೆ ಮುಖವಾಡವಾಗಿ ಕಾರ್ಯನಿರ್ವಹಿಸುತ್ತಿದೆ.

ಆದಾಗ್ಯೂ, ಅಂತಿಮವಾಗಿ, ಇದು ಒಂದು ರಾಜ್ಯದ ಜನರು ತಮ್ಮದೇ ಆದ ಸಾಮಾಜಿಕ-ಆರ್ಥಿಕ ಮತ್ತು ಸಾಂಸ್ಕೃತಿಕ ಆದ್ಯತೆಗಳನ್ನು ರಾಜ್ಯ ಮಟ್ಟದ ಕಾನೂನುಗಳ ಮೂಲಕ ಸಾಧಿಸಲು ಇರುವ ಪ್ರಜಾಪ್ರಭುತ್ವದ ಹಕ್ಕುಗಳ ಮೇಲೆ ಮಾಡಲಾಗಿರುವ ರಾಜಕೀಯ ಸಮರವಾಗಿದೆ. ಇವುಗಳನ್ನು ಅತಿಯಾದ ಸೊಕ್ಕಿನಿಂದ ಆಡಳಿತ ನಡೆಸುವ ಕೇಂದ್ರದಿಂದ ವಿಫಲಗೊಳಿಸುವುದು ಅನುಚಿತವಾಗಿದೆ. ಕಾನೂನು ಮತ್ತು ನಿಯಮಗಳು ಪ್ರಜಾಪ್ರಭುತ್ವದ ಹಕ್ಕುಗಳಿಗೆ ಯಾವತ್ತೂ ಪೂರಕವಾಗಿರಬೇಕು ಎಂದು ಹೇಳುತ್ತದೆ. ಜೊತೆಗೆ ಅವುಗಳ ವ್ಯಾಖ್ಯಾನಗಳು ಈ ಹಕ್ಕುಗಳನ್ನು ಸಮರ್ಥಿಸಬೇಕು ಮತ್ತು ವಿಸ್ತರಿಸಬೇಕು. ನ್ಯಾಯಾಲಯದ ತೀರ್ಪುಗಳು ಹಕ್ಕುಗಳನ್ನು ಸಂಕುಚಿತಗೊಳಿಸುತ್ತ ಹೋದಾಗ ಕಾನೂನು ಅದಕ್ಕೆ ಸ್ಪಷ್ಟತೆಯನ್ನು ನೀಡಬೇಕು ಅಥವಾ ಬದಲಾಯಿಸಬೇಕು. ನಮ್ಮ ಹಕ್ಕುಗಳು ಯಾವತ್ತೂ ಕುಗ್ಗಬಾರದು.

1857ರಲ್ಲಿ, ಅಮೆರಿಕದ ಸುಪ್ರೀಂ ಕೋರ್ಟ್ ಕಪ್ಪು ವರ್ಣೀಯರನ್ನು ಪ್ರಜೆಗಳಾಗಿ ಪರಿಗಣಿಸಲಾಗದು, ಏಕೆಂದರೆ ಅವರು ಆಸ್ತಿಯಾಗಿದ್ದರು ಎಂದು ತೀರ್ಪು ನೀಡಿತು. ಡ್ರೆಡ್ ಸ್ಕಾಟ್ ತೀರ್ಪು ಎಂದೇ ಕುಖ್ಯಾತವಾದ ಇದು ಈ ಗುಲಾಮಗಿರಿಯನ್ನು ವಿರೋಧಿಸಿ ಕುದಿಯುತ್ತಿದ್ದ ಅಸಮಾಧಾನವನ್ನು ಇನ್ನಷ್ಟು ಹೆಚ್ಚಿಸಿತು ಮತ್ತು ಅಂತಿಮವಾಗಿ ಗುಲಾಮಗಿರಿಯನ್ನು ರದ್ದುಗೊಳಿಸಿದ ಅಂತರ್ಯುದ್ಧದ ಪ್ರಾರಂಭವನ್ನು ಮತ್ತಷ್ಟು ತ್ವರಿತಗೊಳಿಸಿತು. ಅಮೆರಿಕ ಸಂವಿಧಾನದ 14ನೇ ತಿದ್ದುಪಡಿಯ ಮೂಲಕ ಭಯಾನಕವಾಗಿದ್ದ ಡ್ರೆಡ್ ಸ್ಕಾಟ್ ತೀರ್ಪನ್ನು ಸರಿಪಡಿಸಿತು.

ಅತ್ಯಂತ ಕ್ರೂರವಾದ ನ್ಯಾಯಾಲಯದ ತೀರ್ಪುಗಳ ಮುಂದೆ ಹಕ್ಕುಗಳು ಹಿಮ್ಮೆಟ್ಟುವುದಿಲ್ಲ. ಹಕ್ಕುಗಳು ಮುನ್ನಡೆಯುತ್ತವೆ, ಕಾನೂನುಗಳು ಬದಲಾಗುತ್ತವೆ.

Tags:    

Similar News