ಪವರ್ ಪಾಲಿಟಿಕ್ಸ್ ಮುಂದೆ ಮಿಕ್ಕೆಲ್ಲವೂ ಮಿಥ್ಯೆ: ಅಧಿಕಾರ ಸೂತ್ರ ಹಿಡಿದ ಕಡು ವೈರಿಗಳ ಕಥೆ

ಅವರಿಬ್ಬರು ಒಂದು ಕಾಲದ ಕಡುವೈರಿಗಳು. ಸವೆದು ಹೋದ ಕಾಲದ ಹಾದಿಯಲ್ಲಿ ಸಿಕ್ಕ ತಿರುವುಗಳು ಹಲವು. ತತ್ವ-ಸಿದ್ಧಾಂತಕ್ಕಿಂತ, ರಾಜಕೀಯದ ದ್ವೇಷ-ಹಗೆತನಕ್ಕಿಂತ ವಿಜಯಕ್ಕಿರುವ ತೂಕ ದೊಡ್ಡದು. ಇದಕ್ಕೆ ಮೋದಿ ಮತ್ತು ನಿತೀಶ್ ಇದಕ್ಕೆ ಜ್ವಲಂತ ಸಾಕ್ಷಿ.

Update: 2025-11-20 14:50 GMT
ಪ್ರಧಾನಿ ನರೇಂದ್ರ ಮೋದಿ ಅಂತಿಮವಾಗಿ ತಮ್ಮ ಹಿಡಿತವನ್ನು ಸಾಧಿಸಿದ್ದಾರೆ. ನಿತೀಶ್ ಕುಮಾರ್ ನೇತೃತ್ವದ ಬಿಹಾರ ವಿಧಾನಸಭೆಯಲ್ಲಿ ಅವರ ಬಿಜೆಪಿಯೇ ಬಹುದೊಡ್ಡ ಪಕ್ಷ.
Click the Play button to listen to article

74 ವರ್ಷ ವಯಸ್ಸಿನ ನಿತೀಶ್ ಕುಮಾರ್ ಅವರು ದಾಖಲೆಯ 10ನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ನಡುವಿನ ಕಾಲಘಟ್ಟದಲ್ಲಿ ಅವರು ಧರಿಸಿರುವ ರಾಜಕೀಯದ ಟೋಪಿಗಳು ಅನೇಕ. ಹಾಗೆ ಮಾಡುವ ಮೂಲಕ ಅವರು ಅಕ್ಷರಶಃ ಹಾಗೂ ಸಾಂಕೇತಿಕವಾಗಿ, ಹಲವು ಬಗೆಯ ಚುನಾವಣಾ ಮತ್ತು ಸರ್ಕಾರದ ಪಾಲುದಾರರೊಂದಿಗೆ ಸಹಬಾಳ್ವೆ ನಡೆಸಿದ್ದಾರೆ ಎಂಬುದು ಸಾಮಾನ್ಯದ ಮಾತೇನೂ ಅಲ್ಲ.

ವಾಸ್ತವವಾಗಿ, ಸೈದ್ಧಾಂತಿಕ ನಿಲುವುಗಳಿಗೆ ಅಂಟಿಕೊಂಡು ಅದರಲ್ಲಿ ದೀರ್ಘಾವಧಿಯ ಪಾತ್ರವಹಿಸುವುದು ಅವರ ರಕ್ತಕ್ಕಂಟಿದ ಗುಣವಲ್ಲ. ಅದರ ಬದಲಿಗೆ, ಅವರು ವಾಸ್ತವ ರಾಜಕೀಯದ ಗುರಿಕಾರರು, ಫ್ರಾಂಚೈಸಿ ಆಟಗಾರರು ಎಷ್ಟು ಚುರುಕಾಗಿದ್ದಾರೆ ಎನ್ನುವ ಆಧಾರದಲ್ಲಿ ತಂಡಗಳನ್ನು ಬದಲಾಯಿಸುತ್ತಾ ಬಂದವರು.

ಆದಾಗ್ಯೂ, ಈ ಗುಣಲಕ್ಷಣವು, ಐದು ದಶಕಗಳ ಹಿಂದೆ ಒಬ್ಬ ಉದಯೋನ್ಮುಖ ಕಾರ್ಯಕರ್ತರಾಗಿ ಅವರು ಈ ಪ್ರಯಾಣ ಪ್ರಾರಂಭಿಸಿದಾಗ ಹೊಂದಿದ್ದ ನ್ಯಾಯಪರ ಸಮಾಜವಾದಿ ದೃಷ್ಟಿಕೋನಕ್ಕೆ ವಿರುದ್ಧವಾಗಿದೆ. ಆ ಕಾಲದ ಕೆಲವು ಶ್ರೇಷ್ಠ ಆಡಳಿತ-ವಿರೋಧಿ ನಾಯಕರ ಮುಂದೆ ಕುಬ್ಜರಾಗಿದ್ದಾರೆ ಎನ್ನುವುದಂತೂ ಸತ್ಯ.

ಆದರೆ, ಈ ಸಂದರ್ಭದಲ್ಲಿ ಇನ್ನಾವುದೇ ಸಂಗತಿಗಿಂತಲೂ ವಿಚಿತ್ರವಾಗಿ ಕಾಣಿಸುತ್ತಿರುವುದು ಏನೆಂದರೆ, ಅವರ ಅತ್ಯುತ್ತಮ ರಾಜಕೀಯ ವಿಡಂಬನೆಯ ಮಾತುಗಳು, ಅತ್ಯುಗ್ರವಾದ ಟೀಕೆ ಮತ್ತು ತಿರಸ್ಕಾರದ ಅಭಿವ್ಯಕ್ತಿಗಳು, ಸಾಮಾನ್ಯವಾಗಿ ಒಬ್ಬ ನಾಯಕನ ಕಡೆಗೆ ನಿರ್ದೇಶಿತವಾಗಿದ್ದವು. ಹಲವರ ಅಭಿಪ್ರಾಯದಂತೆ, ಆ ನಾಯಕನ ಬೆಂಬಲವಿಲ್ಲದೆ ಅವರು ಕೊನೆಯ ಬಾರಿಗೆ ಸರ್ಕಾರದ ಪ್ರವೇಶದ್ವಾರವನ್ನು ದಾಟಲು ಬಹುಶಃ ಸಾಧ್ಯವಾಗುತ್ತಿರಲಿಲ್ಲ - ಆ ನಾಯಕ ಮತ್ತಿನ್ಯಾರೂ ಅಲ್ಲ ನರೇಂದ್ರ ಮೋದಿ.

ಅಂದು ಆಡಿದ ಮಾತಿನ ಜಾಡು ಹಿಡಿದು..

"ಆ ವ್ಯಕ್ತಿಯ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ನನ್ನ ದೇಶಬಾಂಧವರ ಮನಸ್ಸಿನಲ್ಲಿ ಭಯ ಬಿತ್ತುವ ವ್ಯಕ್ತಿಯ ಮಹತ್ವಾಕಾಂಕ್ಷೆಗಳ ಬಲಿಪೀಠಕ್ಕೆ ನಾನು ನನ್ನ ತತ್ವ-ಸಿದ್ಧಾಂತಗಳನ್ನು ಬಲಿ ಕೊಡಲು ಸಿದ್ಧನಿಲ್ಲ..." ಎಂದು ನಿತೀಶ್ ಅವರು 2013ರ ಬಿರು ಬೇಸಿಗೆಯಲ್ಲಿ ಪಾಟ್ನಾದಲ್ಲಿ ದಿವಂಗತ ಪತ್ರಕರ್ತ ಮತ್ತು ಲೇಖಕ ಶಂಕರ್ಷಣ್ ಠಾಕೂರ್ ಅವರಿಗೆ ನೀಡಿದ ಸಂದರ್ಶನದಲ್ಲಿ ಘಂಟಾಘೋಷ ಮಾಡಿದ್ದರು.

ಅವರು ಅಂದು ಹೇಳಿದ “ಆ ವ್ಯಕ್ತಿ” ಬೇರೆ ಇನ್ಯಾರೂ ಅಲ್ಲ, ಸ್ವತಃ ಇವರ ಬಗ್ಗೆಯೂ ಅಷ್ಟೇನೂ ಇಷ್ಟವಿಲ್ಲದಿದ್ದ ನಾಯಕ - ಮೋದಿ.

2012ರ ಮಧ್ಯಭಾಗದಲ್ಲಿ ಗಯಾ ಬಳಿ ನಡೆದ ಬೃಹತ್ ಸಾರ್ವಜನಿಕ ಕಾರ್ಯಕ್ರಮದಲ್ಲಿ ನಿತೀಶ್ ಕುಮಾರ್ ಅವರು ಮೋದಿ ವಿರುದ್ಧ ಆಕ್ರೋಶ ವ್ಯಕ್ತವಾಗಲು ಕಾರಣವಾಗಿತ್ತು. ಆ ಕಾರ್ಯಕ್ರಮದಲ್ಲಿ ನಿತೀಶ್ ಅವರು ಮಾತನಾಡುತ್ತಿದ್ದ ವೇದಿಕೆಯ ಕೆಳಗೆ 'ನರೇಂದ್ರ ಮೋದಿ ಅವರ ಪೋಸ್ಟರ್ಗಳನ್ನು' ಅಂಟಿಸಲಾಗಿತ್ತು. ಅವರನ್ನು ಕೆರಳಿಸಲು ಅಷ್ಟು ಸಾಕಾಗಿತ್ತು. ಥಟ್ಟನೆ ಗೇಲಿ ಮಾಡುವ ರೀತಿಯಲ್ಲಿ ಒಂದು ಘೋಷಣೆಯೂ ಹೊರಬಿದ್ದಿತು; 'ದೇಶ್ ಕಾ ನೇತಾ ಕೈಸಾ ಹೋ? ನರೇಂದ್ರ ಮೋದಿ ಜೈಸಾ ಹೋ! (ರಾಷ್ಟ್ರದ ನಾಯಕ ಅಂದರೆ ಹೇಗಿರಬೇಕು? ನರೇಂದ್ರ ಮೋದಿ ಅವರ ಹಾಗಿರಬೇಕು!)'

ಕೋಪಾವಿಷ್ಟರಾಗಿದ್ದ ಮುಖ್ಯಮಂತ್ರಿಗಳ ಕೋಪಕ್ಕೆ ಇದು ಮತ್ತಷ್ಟು ತುಪ್ಪ ಸುರಿದಿತ್ತು. ಯಾಕೆಂದರೆ ಬಿಹಾರಕ್ಕೆ ಪ್ರವೇಶ ಮಾಡದಂತೆ ತಮ್ಮನ್ನು ತಡೆಯಲಾಗಿದ್ದರೂ, ತಮ್ಮ ಇತ್ಯರ್ಥಕ್ಕೆ ತಕ್ಕಂತೆ ಗಮನಾರ್ಹ ದೂರ ನಿಯಂತ್ರಣ ಸಾಧನಗಳು ಇವೆ ಎಂಬುದನ್ನು ಮೋದಿ ಪ್ರದರ್ಶಿಸಿದ್ದರು.

ನವೆಂಬರ್ 2005 ರಲ್ಲಿ, ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಆಯ್ಕೆಯಾದಾಗ, ಅವರು ಬಿಜೆಪಿಯ ಉನ್ನತ ನಾಯಕತ್ವಕ್ಕೆ ಸ್ಪಷ್ಟ ಮಾತುಗಳಲ್ಲಿ ತಿಳಿಸಿದ್ದರು: ಮೋದಿ ಅವರು ಬಿಹಾರದಿಂದ ದೂರ ಉಳಿಯುವ ರೀತಿಯಲ್ಲಿ ರಾಜ್ಯವನ್ನು ತಮ್ಮದೇ ಶೈಲಿಯಲ್ಲಿ ಮುನ್ನಡೆಸುವುದಾಗಿ ಹೇಳಿಕೊಂಡಿದ್ದರು.

ಅನಿವಾರ್ಯವಾಗದ ಮೋದಿ

ಇಷ್ಟು ಮಾತ್ರವಲ್ಲದೆ, ಸರ್ಕಾರಕ್ಕೆ ಇರುವುದು ಲೋಹಿಯವಾದಿ ಸಮಾಜವಾದ ಮತ್ತು ಜಾತ್ಯತೀತತೆಯ ಮಾರ್ಗದರ್ಶನ, ಜೊತೆಗೆ ಅಲ್ಪಸಂಖ್ಯಾತರ ರಕ್ಷಣೆ ಅದರ ಪ್ರಮುಖ ತತ್ವಗಳಲ್ಲಿ ಒಂದು ಎಂದು ಘೋಷಿಸಿದ್ದರು. ಮುಂದುವರಿದು, 2010ರ ವೇಳೆಗೆ ರಾಜ್ಯ ಚುನಾವಣೆಗೂ ಮೊದಲು, ಪ್ರಚಾರಕ್ಕಾಗಿ ಮೋದಿಯವರನ್ನು ಆಹ್ವಾನಿಸುತ್ತೀರಾ ಎಂದು ಕೇಳಿದ ಪತ್ರಕರ್ತರಿಗೆ ಉತ್ತರ ನೀಡಿದ ನಿತೀಶ್ ಕುಮಾರ್, "ಬಿಹಾರಕ್ಕೆ ಒಬ್ಬ ಮೋದಿ ಸಾಕು," ಎಂದು ತಮ್ಮ ದಿವಂಗತ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅವರನ್ನು ಉಲ್ಲೇಖಿಸಿದ್ದರು.

ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿಯ ಹಾಜರಾತಿಗಾಗಿ ತಾವು ಆಯೋಜಿಸಿದ್ದ ಔತಣಕೂಟವನ್ನು ನಿತೀಶ್ ಅವರು ರದ್ದುಗೊಳಿಸುವುದರೊಂದಿಗೆ ಚುನಾವಣೆಗಳಿಗೆ ಮುನ್ನುಡಿ ಬರೆಯಲಾಯಿತು. ಕಾರಣವೇನು? ನೆರೆ ಪರಿಹಾರಕ್ಕಾಗಿ ಬಿಹಾರ ಸಿಎಂ ನಿಧಿಗೆ ₹5 ಕೋಟಿ ದೇಣಿಗೆ ನೀಡಿದಕ್ಕಾಗಿ ಮೋದಿಯವರಿಗೆ ತುರ್ತಾಗಿ ಧನ್ಯವಾದ ಸಮರ್ಪಿಸಬೇಕಾಗಿತ್ತು.

ಆದಾಗ್ಯೂ, 2013ರಲ್ಲಿ ನಿತೀಶ್ ಅವರೊಂದಿಗಿನ ಆ ಸಂಭಾಷಣೆಯು ಠಾಕೂರ್ ಅವರ ಪತ್ರಿಕೆಯ ಯಾವುದೇ ವರದಿಗಳಲ್ಲಿ ಎಂದಿಗೂ ಪ್ರಕಟವಾಗಲಿಲ್ಲ, ಏಕೆಂದರೆ ಮುಖ್ಯಮಂತ್ರಿಗಳು ಆ ಸಂವಹನವು, ಕನಿಷ್ಠ ತಕ್ಷಣಕ್ಕೆ, 'ಆಫ್ ದಿ ರೆಕಾರ್ಡ್' ಆಗಿ ಉಳಿಯಬೇಕೆಂದು ಬಯಸಿದ್ದರು.

ಆದರೆ, ಈ ಸಂವಾದವು, 2015 ರಲ್ಲಿ ಅವರು ಬರೆದ 'ದಿ ಬ್ರದರ್ಸ್ ಬಿಹಾರಿ' ಎಂಬ ಪುಸ್ತಕದ ಒಂದು ಮಹತ್ವದ, ಚಿಕ್ಕ ವಿಭಾಗವಾಯಿತು. ಆ ಪುಸ್ತಕವು, ರಾಜ್ಯದ ರಾಜಕೀಯ ವಲಯ ಮತ್ತು ಮನಸ್ಸಿನ ಮೇಲೆ ಆರಂಭದಿಂದಲೂ ಪ್ರಭಾವ ಬೀರಿದ ಬಿಹಾರದ ಆ ಇಬ್ಬರು ನಿಗೂಢ ನಾಯಕರ ಕುರಿತಾಗಿತ್ತು.

ಲಾಲೂ-ನಿತೀಶ್ ಜೋಡಿಯ ಖದರ್

ಆದರೆ, ಈ ಸಂವಾದವು, 1990ರ ದಶಕದ ಆರಂಭದಿಂದಲೂ ರಾಜ್ಯದ ಜನರ ಮನಸ್ಸು ಮತ್ತು ರಾಜಕೀಯ ವಲಯದಲ್ಲಿ ಪ್ರಾಬಲ್ಯ ಸಾಧಿಸಿದ್ದ ಆ ಇಬ್ಬರು ನಿಗೂಢ ನಾಯಕರಾದ – ಲಾಲು ಪ್ರಸಾದ್ ಮತ್ತು ನಿತೀಶ್ ಕುಮಾರ್ – ಕುರಿತಾಗಿ ಅವರು 2015ರಲ್ಲಿ ಬರೆದ 'ದಿ ಬ್ರದರ್ಸ್ ಬಿಹಾರಿ' ಎಂಬ ಪುಸ್ತಕದ ಚಿಕ್ಕ ವಿಭಾಗವಾಗಿದ್ದರೂ ಅತ್ಯಂತ ಮಹತ್ವವನ್ನು ಪಡೆಯಿತು.

ಈ ಜೋಡಿಯು ಬೀದಿ ರಾಜಕಾರಣದಲ್ಲಿ (ಕಟ್ಟುನಿಟ್ಟಾಗಿ ಆಂದೋಲನ ಮತ್ತು ಆಡಳಿತ ವಿರೋಧಿ) ಕೈಜೋಡಿಸಿ ಪರಸ್ಪರ ತರಬೇತಿ ಪಡೆದರು. ಆದರೆ ನಂತರದ ಕಾಲಘಟ್ಟದಲ್ಲಿ, ಒಂದೇ ಪಕ್ಷದಲ್ಲಿದ್ದಾಗಲೂ ಮತ್ತು ತಮ್ಮ ಪ್ರತಿಸ್ಪರ್ಧಿ ಮಹತ್ವಾಕಾಂಕ್ಷೆಗಳಿಗಾಗಿ ಸ್ವತಂತ್ರ ಮಾರ್ಗಗಳನ್ನು ರೂಪಿಸಲು ಅವರು ಸ್ಥಾಪಿಸಿದ ರಾಜಕೀಯ ತಂಡಗಳಲ್ಲಿಯೂ ಬಹುತೇಕ ಒಬ್ಬರನ್ನೊಬ್ಬರು ವಿರೋಧಿಸುತ್ತಾ ಬಂದರು.

ನಿತೀಶ್ ಕುಮಾರ್ ಅವರು ಮೋದಿಯವರನ್ನು ನಿಂದಿಸಿದ ಆ ಭಾಗವು ಠಾಕೂರ್ ಅವರ ಪುಸ್ತಕದ ಒಂದು ನಿರ್ಣಾಯಕ ಭಾಗವಾಗಿತ್ತು, ಯಾಕೆಂದರೆ ಅದು ಮೋದಿಯವರ ಬಗ್ಗೆ ನಿತೀಶ್ಗಿದ್ದ ಅಸಹ್ಯದ ಮಟ್ಟವನ್ನು ಸಾಬೀತುಪಡಿಸಿತ್ತು. ಆಗಿನ್ನೂ ಮೋದಿಯವರ ಪಕ್ಷ, ಬಿಜೆಪಿಯ ಮಿತ್ರಪಕ್ಷ ಮತ್ತು ಒಕ್ಕೂಟದ ಪಾಲುದಾರ ಕೂಡ ಆಗಿದ್ದ ಒಬ್ಬ ನಾಯಕನ ಆ ಅಹಂಕಾರದ ಹೇಳಿಕೆಗೆ ಮೋದಿಯವರ ಪ್ರತಿಕ್ರಿಯೆಯನ್ನು ಠಾಕೂರ್ ಪಡೆದಿರಲಿಲ್ಲ.

ಆದಾಗ್ಯೂ, 2013ರಲ್ಲಿ ನಾನು ಬರೆದ ಗುಜರಾತ್ ಮುಖ್ಯಮಂತ್ರಿಯವರ ಜೀವನಚರಿತ್ರೆ, 'ನರೇಂದ್ರ ಮೋದಿ: ದಿ ಮ್ಯಾನ್, ದಿ ಟೈಮ್ಸ್' ನಲ್ಲಿ, 'ಮೋದಿ ವರ್ಸಸ್ ನಿತೀಶ್' ಪ್ರಸಂಗವನ್ನು ಪರೋಕ್ಷವಾಗಿ ನಿಭಾಯಿಸಲಾಯಿತು. ರಾಜಕೀಯ ಪಕ್ಷಗಳು ಮತ್ತು ಅವುಗಳ ನಾಯಕರು ಮೋದಿಯವರನ್ನು 'ಸ್ವೀಕರಿಸಲು' ಪ್ರಾರಂಭಿಸಿದ ಗತಿಯನ್ನು ಗಮನಿಸಿದರೆ, ಅವರ ಟೀಕಾಕಾರರನ್ನು “ಭವಿಷ್ಯದಲ್ಲಿ ರಾಜಕೀಯ ಭರವಸೆಗಳೊಂದಿಗೆ ಮೌನಗೊಳಿಸಲಾಗುತ್ತದೆ" ಎಂಬುದು ಸಾಕಷ್ಟು ಖಚಿತವಾಗಿತ್ತು ಎಂದು ನಾನು ವಾದಿಸಿದೆ.

ಆದರೆ ಮೋದಿಯವರ "ಅತ್ಯಂತ ದೊಡ್ಡ ಹಿನ್ನಡೆ" ಏನೆಂದರೆ ಯಾವುದೇ ಅಭಿಪ್ರಾಯವನ್ನು ತಮ್ಮ ಸ್ವಂತ ದೃಷ್ಟಿಕೋನವನ್ನು ಹೊರತುಪಡಿಸಿ ಬೇರೆ ಯಾವುದೇ ದೃಷ್ಟಿಕೋನದಿಂದ ನೋಡಲು ಸಾಧ್ಯವಾಗದೇ ಇರುವ ಅವರ ವೈಯಕ್ತಿಕ ಗುಣ.

ಮೇಲೆ ತಿಳಿಸಿದ, ಪತ್ರಕರ್ತ ಠಾಕೂರ್ ಅವರೊಂದಿಗೆ ನಡೆದ ಸಂಭಾಷಣೆಯ ಒಂದು ತಿಂಗಳ ನಂತರ, ನಿತೀಶ್ ಕುಮಾರ್ ಅವರು ಆಗಿನ 17 ವರ್ಷಗಳ ಹಳೆಯ ಬಿಜೆಪಿ ಜೊತೆಗಿನ ಮೈತ್ರಿಯನ್ನು ಕಡಿದು ಹಾಕಿದರು ಮತ್ತು ರಾಜ್ಯಪಾಲರ ಜೊತೆ ನಡೆಸಿದ ಸಭೆಯಲ್ಲಿ ತಮ್ಮ ಸರ್ಕಾರದಲ್ಲಿರುವ ಬಿಜೆಪಿಯ 11 ಸಚಿವರನ್ನು ವಜಾಗೊಳಿಸುವಂತೆ ಕೇಳಿಕೊಂಡರು.

ಗೋವಾದಲ್ಲಿ ನಡೆದ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮೋದಿ ಅವರನ್ನು ಚುನಾವಣಾ ಪ್ರಚಾರ ಸಮಿತಿಯ ಮುಖ್ಯಸ್ಥರಾಗಿ ನೇಮಕ ಮಾಡಿದ ನಂತರ, ಇದು ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ನಾಮನಿರ್ದೇಶನ ಮಾಡಲು ಕೇವಲ ಒಂದು ಮುನ್ನುಡಿ. ಇದರಲ್ಲಿ ಎಳ್ಳಷ್ಟೂ ಅನುಮಾನವಿಲ್ಲ ಎಂದು ಜೆಡಿ(ಯು) ಔಪಚಾರಿಕ ಹೇಳಿಕೆಯನ್ನು ಬಿಡುಗಡೆ ಮಾಡಿತು.

ಪವರ್ ಪಾಲಿಟಿಕ್ಸ್ ಜಿಗಿದಾಟ

ಈ ಪ್ರತ್ಯೇಕತೆಯಿಂದಾಗಿ ಪಕ್ಷಾಂತರಿಗಳ ಕಾಲಕ್ಕೆ ಮುನ್ನುಡಿ ಬರೆಯಿತು. ಈ ವಿಚಾರದಲ್ಲಿ ಒಬ್ಬ ನಿಷ್ಣಾತ ಕಲಾವಿದನಂತೆ, ನಿತೀಶ್ ಕುಮಾರ್ ಅವರು ತಮ್ಮ ಹಳೆಯ ಬದ್ಧ ವೈರಿಗಳಾದ ಮೋದಿ ಮತ್ತು ಅವರ 'ಕಮಾಂಡ್' ಅಡಿಯಲ್ಲಿರುವ ಬಿಜೆಪಿ, ಹಾಗೂ ರಾಷ್ಟ್ರೀಯ ಜನತಾ ದಳಗಳ ನಡುವೆ ಜಿಗಿದಾಡಿದರು. ರಾಷ್ಟ್ರೀಯ ಜನತಾ ದಳದಲ್ಲಿ ಆಡಳಿತದ ದಂಡವನ್ನು ತೇಜಸ್ವಿ ಯಾದವ್ ಅವರಿಗೆ ಭಾಗಶಃ ಹಸ್ತಾಂತರಿಸಿದ್ದರೂ, ಲಾಲು ಪ್ರಸಾದ್ ಇನ್ನೂ ಹಿಡಿತ ಸಾಧಿಸಿದ್ದರು.

ಮೋದಿ "ದೇಶಬಾಂಧವರ ಮನಸ್ಸಿನಲ್ಲಿ ಭಯ ಹುಟ್ಟಿಸುತ್ತಾರೆ" ಎಂದು ನಿತೀಶ್ ಆರೋಪ ಹೊರಿಸಿದ್ದು ಒಂದೆರಡು ಬಾರಿಯಲ್ಲ. ಮೋದಿ ಅವರು ತುಳಿಯುತ್ತಿದ್ದ ವಿಶಿಷ್ಟ ಮಾರ್ಗವು ಅದಕ್ಕೆ ಕಾರಣವಾಗಿತ್ತು. 2011ರಲ್ಲಿ, ಮೋದಿ ಅವರು ಬಿಜೆಪಿಯ ಪ್ರಧಾನಿ ಹುದ್ದೆಯ ಸ್ಪರ್ಧೆಗೆ ತಮ್ಮ ಪ್ರವೇಶವನ್ನು ಘೋಷಿಸಿದ 'ಸದ್ಭಾವನಾ ಅಭಿಯಾನದ' ಸಮಯದಲ್ಲಿ, ಅವರು ಮುಸ್ಲಿಂ ಸೂಫಿ ಸಂತರಿಂದ ನೀಡಲಾದ 'ಟೋಪಿ'ಯನ್ನು ಧರಿಸಲು ನಿರಾಕರಿಸಿದ್ದರು.

ತಿಲಕವೂ ಟೋಪಿಯೂ

ರಾಜ್ಯದ ಮುಸ್ಲಿಮರ ಯಥೋಚಿತ ಬೆಂಬಲದೊಂದಿಗೆ ಬಿಹಾರವನ್ನು ಆಳುತ್ತಿದ್ದವರು, ಬಿಜೆಪಿಯಿಂದ ದೂರ ಸರಿಯುವ ಮುನ್ನ ಮೋದಿಯವರನ್ನು ಲೇವಡಿ ಮಾಡಿದ್ದರು. "ಭಾರತದಂತಹ ವೈವಿಧ್ಯಮಯ ದೇಶವನ್ನು ನಡೆಸುವ ನಾಯಕ ಎಲ್ಲಾ ಸಮುದಾಯಗಳನ್ನು ಒಪ್ಪಿಕೊಳ್ಳಬೇಕು, ಸಾಂಕೇತಿಕವಾಗಿ ಹೇಳುವುದಾದರೆ ಟೋಪಿ ಮತ್ತು ತಿಲಕ ಎರಡನ್ನೂ ಧರಿಸಬೇಕು" ಎಂದು ಹೇಳಿದರು.

ಇದಕ್ಕೂ ಮೊದಲು, 2009ರ ಲೋಕಸಭೆ ಚುನಾವಣೆಗಳಿಗಾಗಿ, ತಮ್ಮ ಒಳಗೊಳ್ಳುವ ಇಮೇಜ್ಗೆ ಧಕ್ಕೆಯಾಗಬಹುದೆಂದು ಭಯಕ್ಕೆ ಬಿದ್ದು ನಿತೀಶ್ ಕುಮಾರ್ ಅವರು ಮೋದಿ ಬಿಹಾರದಲ್ಲಿ ಪ್ರಚಾರ ಮಾಡುವುದು ತಮಗೆ ಇಷ್ಟವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು.

ಮೋದಿ ಕೂಡ ತಿರುಗೇಟು ನೀಡಿದೇ ಸುಮ್ಮನೇ ಇರಲಿಲ್ಲ ಮತ್ತು ಲುಧಿಯಾನದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ನಡೆದ ವಿದ್ಯಮಾನ ಇದಕ್ಕೆ ಸಾಕ್ಷಿಯಾಗಿತ್ತು. ಅಂದು ಮೊದಲೇ ಯೋಜನೆ ರೂಪಿಸಿದ ರೀತಿಯಲ್ಲಿ, ಅವರ ಪರಮ ವೈರಿಯು ಜನಸಂದಣಿಯಿಂದ ಕಿಕ್ಕಿರಿದಿದ್ದ ವೇದಿಕೆ ಏರಿದ ತಕ್ಷಣವೇ ಮೋದಿ ಅವರು ನಾಲ್ಕು ಹೆಜ್ಜೆ ಮುಂದೆ ಸಾಗಿ ನಿತೀಶ್ ಕುಮಾರ್ ಅವರ ಕೈಯನ್ನು ದೃಢವಾಗಿ ಹಿಡಿದುಕೊಂಡರು. ಅಲ್ಲಿ ಆ ಸನ್ನಿವೇಶಕ್ಕಾಗಿಯೇ ಕಾಯುತ್ತಿದ್ದ ಛಾಯಾಗ್ರಾಹಕರ ಸಮ್ಮುಖದಲ್ಲಿ ನಿತೀಶ್ ಕೈಗಳನ್ನು ಏಕಾಏಕಿ ಮೇಲಕ್ಕೆತ್ತಿದರು. 2009ರಲ್ಲಿ 'ವೈರಲ್' ಎಂಬ ಪದವು ಸಾಮಾಜಿಕ ಮಾಧ್ಯಮದ ಶಬ್ದಕೋಶದ ಭಾಗವಾಗಿಲ್ಲದಿದ್ದರೂ, ಆ ಚಿತ್ರಕ್ಕೆ ಪೂರ್ವಾನ್ವಯ ಪರಿಣಾಮದೊಂದಿಗೆ ಈ ಪದವನ್ನು ಅನ್ವಯಿಸಬಹುದಾಗಿದೆ.

ವಿಪರ್ಯಾಸದ ಸಂಗತಿ ಎಂದರೆ, 2002ರ ಗುಜರಾತ್ ಗಲಭೆಗಳ ನಂತರ ನಿತೀಶ್ ಅವರ ಜಾತ್ಯತೀತ ನಿಲುವಿನ ಭಂಗಿ ಎಲ್ಲೂ ಕಾಣಿಸಲಿಲ್ಲ. ಅಂದಿನ ಎಬಿ ವಾಜಪೇಯಿ ಸರ್ಕಾರದಲ್ಲಿ ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವರಾಗಿದ್ದ ಮತ್ತು ತಮ್ಮದೇ ಆದ ಲೋಕ ಜನಶಕ್ತಿ ಪಕ್ಷವನ್ನು ನಡೆಸುತ್ತಿದ್ದ ರಾಮ್ ವಿಲಾಸ್ ಪಾಸ್ವಾನ್ ರಾಜೀನಾಮೆ ನೀಡಿದರೂ, ನಿತೀಶ್ ಅವರು ರೈಲ್ವೆ ಸಚಿವರಾಗಿ ಮುಂದುವರಿದರು.

ಅಧಿಕಾರವೊಂದೇ ಅಂತಿಮ ಸತ್ಯ

ಅದಕ್ಕೆ ಕಾರಣ ಸರಳವಾಗಿತ್ತು: ಮಾರ್ಚ್ 2000ರಲ್ಲಿ ವಿಭಜನೆಯ ಪೂರ್ವದ ಬಿಹಾರದ ಮುಖ್ಯಮಂತ್ರಿಯಾಗಿ ಏಳು ದಿನಗಳ ಸಂಕ್ಷಿಪ್ತ ಅವಧಿಯೊಂದಿಗೆ ತಮ್ಮ ರಾಜಕೀಯ ಹಸಿವನ್ನು ತೀರಿಸಿಕೊಂಡಿದ್ದ ನಿತೀಶ್ ಕುಮಾರ್, ಬಿಜೆಪಿಯೊಂದಿಗೆ ಪಾಲುದಾರಿಕೆ ಮುಂದುವರಿದರೆ ಮಾತ್ರ ತಮಗೆ ಹೆಚ್ಚು ಬೇಕಾಗಿದ್ದ ಸ್ಥಾನವನ್ನು ಪಡೆಯಲು ಸಾಧ್ಯ ಎಂಬುದು ಅವರಿಗೆ ಗೊತ್ತಿತ್ತು. ಅಂತಿಮವಾಗಿ ನವೆಂಬರ್ 2005ರಲ್ಲಿ ಆ ಹುದ್ದೆ ಭದ್ರವಾದಾಗ, ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ ಮುಂದುವರಿಯುವುದಕ್ಕೆ ಅವರು ಯಾವುದೇ ಆಕ್ಷೇಪ ವ್ಯಕ್ತಪಡಿಸಲಿಲ್ಲ.

ಹಾಗಾಗಿ, ನಿತೀಶ್ ಕುಮಾರ್ ಅವರ ಯಾವುದೇ ನಡೆ ಕೇವಲ ಅಧಿಕಾರವನ್ನು ಉಳಿಸಿಕೊಳ್ಳಲು ಮಾತ್ರ ಎಂಬುದು ಸ್ಪಷ್ಟವಾಗುತ್ತದೆ. ಜೂನ್ 2013ರಲ್ಲಿ ಬಿಜೆಪಿಯಿಂದ ದೂರವಾದ ನಂತರ, ಅವರು ಅಂತಿಮವಾಗಿ ಲಾಲು ಜೊತೆ ಕೈಜೋಡಿಸಿದರು. 2015ರ ಅಸೆಂಬ್ಲಿ ಚುನಾವಣೆ ನಡೆದಾಗ ಆರ್ಜೆಡಿ ಮತ್ತು ಕಾಂಗ್ರೆಸ್ ಜೊತೆ ಮಹಾಮೈತ್ರಿ ರಚಿಸಿದರು ಮತ್ತು ಅಧಿಕಾರಕ್ಕೆ ಮರಳಿದರು.

ಆದರೂ, ಎರಡು ವರ್ಷಗಳ ನಂತರ ಅವರು ಮತ್ತೆ ದೂರವಾದರು ಮತ್ತು ಅಂದಿನಿಂದ ಸಂಪೂರ್ಣ 'ಮೋದಿಮಯ'ವಾಗಿದ್ದ ಬಿಜೆಪಿ ಜೊತೆ ಮತ್ತೆ ಕೈ ಜೋಡಿಸಲು ಅವರಿಗೆ ಯಾವುದೇ ಹಿಂಜರಿಕೆ ಇರಲಿಲ್ಲ. ಆದರೆ ಅವರು 2022ರಲ್ಲಿ ಮತ್ತೆ ಬಿಜೆಪಿಯಿಂದ ಬೇರ್ಪಟ್ಟ ವಿದ್ಯಮಾನವನ್ನು ಕೂಡ ವಿಶೇಷವಾಗಿ ವಿವರಿಸಬೇಕಾಗಿಲ್ಲ. ಮಹಾಘಟಬಂಧನ್ ಜೊತೆ ಕೈಜೋಡಿಸಿದರು, ಯಾಕೆಂದರೆ ಅವರ ಮುಂದೆ ಪ್ರಧಾನಿಯಾಗುವ ದೊಡ್ಡ ಅವಕಾಶವಿತ್ತು.

ವಿರೋಧ ಪಕ್ಷದ ಚುನಾವಣಾ ಪ್ರಚಾರದ ಮುಖವಾಗಿ ನಿರೀಕ್ಷಿತ ನಾಮನಿರ್ದೇಶನ ಸಿಗದಿದ್ದಾಗ, ಅವರು ಮತ್ತೆ 2023ರ ಡಿಸೆಂಬರ್ನಲ್ಲಿ ಪಕ್ಷಾಂತರ ಮಾಡಿದರು ಮತ್ತು ಮೊದಲು ಲೋಕಸಭಾ ಚುನಾವಣೆಗಳಲ್ಲಿ ತಮ್ಮ ಪಕ್ಷಕ್ಕೆ 12 ಸ್ಥಾನಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು, ಮತ್ತು ಈಗ ದಾಖಲೆಯ ಅವಧಿಗೆ ಮತ್ತೆ ಅಧಿಕಾರಕ್ಕೆ ಮರಳಿದ್ದಾರೆ.

ಅವಕಾಶವಾದಿ ರಾಜಕಾರಣದ ಬೆನ್ನು ಹತ್ತಿ

ಹಾಗಂತ ಕೇವಲ ನಿತೀಶ್ ಕುಮಾರ್ ಮಾತ್ರ ಅವಕಾಶವಾದಿ, ಅಧಿಕಾರದೆಡೆಗೆ ಸಾಗುವಾಗ ಅಥವಾ ಅಧಿಕಾರವನ್ನು ಸಂಪೂರ್ಣ ಹಿಡಿತಕ್ಕೆ ಪಡೆಯುವಾಗ ತತ್ವ-ಸಿದ್ಧಾಂತಗಳು ಅಥವಾ ವೈಯಕ್ತಿಕ ನಂಬಿಕೆಗಳನ್ನು ಬದಿಗೊತ್ತಿದರು ಎಂದೇನೂ ಅಲ್ಲ.

2012ರಲ್ಲಿ, ನನ್ನ ಕೃತಿಗಾಗಿ ಮೋದಿಯವರನ್ನು ಸಂದರ್ಶಿಸುವಾಗ, ಬಿಜೆಪಿಯ ಕುಗ್ಗುತ್ತಿರುವ ಮಿತ್ರಪಕ್ಷಗಳ ಪಟ್ಟಿಯ ಬಗ್ಗೆ ನಾನು ಅವರನ್ನು ಪ್ರಶ್ನಿಸಿದ್ದೆ. ನಿತೀಶ್ ಕುಮಾರ್ ಅವರು ಮೈತ್ರಿಯಿಂದ ಹೊರನಡೆಯುವ ಬೆದರಿಕೆಗಳ ಹಿನ್ನೆಲೆಯಲ್ಲಿ ಈ ಪ್ರಶ್ನೆಯನ್ನು ಅವರಿಗೆ ಕೇಳಿದ್ದೆ. ಇದು ಸಂಭವಿಸಿದರೆ, ಬಿಜೆಪಿ ತನ್ನ ಅತ್ಯಂತ ಹಳೆಯ ಮಿತ್ರಪಕ್ಷಗಳಲ್ಲಿ ಒಂದನ್ನು ಕಳೆದುಕೊಳ್ಳುತ್ತಿತ್ತು.

ಮೋದಿ ಅವರನ್ನು ಮತ್ತಷ್ಟು ತೊಡಗಿಸಿಕೊಳ್ಳಲು, ಒಕ್ಕೂಟದ ಯುಗವು ಶಾಶ್ವತವಾಗಿ ಮುಂದುವರೆಯುವುದೇ ಎಂದು ನಾನು ಅವರನ್ನು ಕೇಳಿದ್ದೆ. ರಾಜಕೀಯದ ಈ ಹಂತವು ಕೊನೆಗೊಳ್ಳುತ್ತದೆ ಮತ್ತು ಮತದಾನವನ್ನು "ಕಡ್ಡಾಯಗೊಳಿಸಿದರೆ" ಈ ಪ್ರಕ್ರಿಯೆಯು ವೇಗ ಪಡೆದುಕೊಳ್ಳುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದರು. ಪ್ರತಿಯೊಬ್ಬ ನಾಗರಿಕನಿಗೂ ಮತದಾನವನ್ನು ಕಡ್ಡಾಯಗೊಳಿಸುವ ಮಸೂದೆಯ ಬಗ್ಗೆಯೂ ಮೋದಿ ಪ್ರಸ್ತಾಪ ಮಾಡಿದ್ದರು, ಅದು ಆಗಲೇ ಅವರ ಸರ್ಕಾರದಿಂದ ಅಂಗೀಕರಿಸಲ್ಪಟ್ಟಿತ್ತು ಮತ್ತು ರಾಜ್ಯಪಾಲರ ಒಪ್ಪಿಗೆಗಾಗಿ ಕಾಯುತ್ತಿತ್ತು.

2014ರಲ್ಲಿ, ಭಾರತದಲ್ಲಿ 1984ರ ನಂತರ ಇದೇ ಮೊದಲ ಬಾರಿಗೆ ಮೋದಿ ಬಿಜೆಪಿಯನ್ನು ಸ್ವತಂತ್ರ ಬಹುಮತದತ್ತ ಮುನ್ನಡೆಸಿದರು. 2019ರಲ್ಲಿ ಈ ಸಾಧನೆಯನ್ನು ಅವರು ಪುನರಾವರ್ತಿಸಿದರು. 2024ರಲ್ಲಿ ಬಿಜೆಪಿ ಬಹುಮತ ಗಳಿಸುವಲ್ಲಿ ವಿಫಲವಾಗಿರುವ ಕಾರಣ ಮತ್ತು ಬಿಹಾರ ಸೇರಿದಂತೆ ಹಲವು ರಾಜ್ಯಗಳಲ್ಲಿ ಮೈತ್ರಿಕೂಟಗಳು ಒಂದು ನಿಯಮವೇ ಆಗಿರುವುದರಿಂದ, ಮೋದಿಯವರ ಈ ಯೋಜನೆಯನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಈಗಾಗಲೇ ಪ್ರಸ್ತಾಪಿಸಲಾಗಿರುವ ಇತರ ಶಾಸಕಾಂಗ ಬದಲಾವಣೆಗಳ ಜೊತೆಗೆ ಕಡ್ಡಾಯ ಮತದಾನ ಕೂಡ ಜಾರಿಗೆ ತರಬಹುದಾದ ಅನೇಕ ಶಾಸಕಾಂಗ ಬದಲಾವಣೆಗಳಲ್ಲಿ ಒಂದಾಗಬಹುದೇ?

ಬದಲಾದ ನಿರಾಕರಣ ಭಾವ

ಅಂದಿನ ನಮ್ಮ ಆ ಸಂಭಾಷಣೆಯಲ್ಲಿ ಮೋದಿ ಅವರು ಒಕ್ಕೂಟದ ಪಾಲುದಾರರ ಬಗ್ಗೆ ಬಹಳ ನಿರಾಕರಣಭಾವವನ್ನು ಹೊಂದಿದ್ದರು; “ಮಿತ್ರಪಕ್ಷಗಳ ಸಂಖ್ಯೆಯು ಬಿಜೆಪಿಯ ಗೆಲ್ಲುವ ಸಾಮರ್ಥ್ಯವನ್ನು ಅವಲಂಬಿಸಿದೆ. ಬಿಜೆಪಿಯೊಂದಿಗೆ ಸಂಬಂಧ ಇಟ್ಟುಕೊಂಡರೆ ತಮ್ಮ ಅವಕಾಶಗಳು ಹೆಚ್ಚಾಗುತ್ತವೆ ಎಂದು ಮಿತ್ರಪಕ್ಷಗಳು ವಿಶ್ವಾಸ ಹೊಂದಿದರೆ, ಅವರು ಬಂದು ಬಿಜೆಪಿಯನ್ನು ಸೇರಿಕೊಳ್ಳುತ್ತಾರೆ,” ಎಂದಿದ್ದರು.

“ಆದರೆ ಬಿಜೆಪಿಯೇ ಒಂದು ಹೊರೆಯಾಗುತ್ತದೆ ಮತ್ತು ನಾವು ಏಕಾಂಗಿಯಾಗಿ ಕಣಕ್ಕಿಳಿದರೆ ಕೆಲವು ಸ್ಥಾನಗಳನ್ನು ಉಳಿಸಲು ಸಾಧ್ಯವಾಗುತ್ತದೆ ಎಂದು ಅವರು ಭಾವಿಸಿದರೆ, ಆಗ ಅವರು ಬಿಜೆಪಿಯೊಂದಿಗೆ ಕೈಜೋಡಿಸುವುದಿಲ್ಲ,” ಎಂದು ಅವರು ಸೇರಿಸಿದ್ದರು. ಇದು ಒಬ್ಬ ವಾಸ್ತವವಾದಿ ರಾಜಕಾರಣಿಯ ಮೂಲ ನಂಬಿಕೆಯಾಗಿತ್ತು, ಮತ್ತು ಇದರಲ್ಲಿ ತತ್ವಕ್ಕೆ ಯಾವುದೇ ಮಹತ್ವವಿರಲಿಲ್ಲ.

ಮೋದಿಯವರ ಗುಣಲಕ್ಷಣಗಳಲ್ಲಿ ಮುಖ್ಯವಾದ ಸಂಗತಿ ಏನೆಂದರೆ, ಅವರು ಯಾವುದೇ ಅವಮಾನವನ್ನು ಸಹಿಸುವುದಿಲ್ಲ ಮತ್ತು ಅಪಮಾನವನ್ನು ಎಂದಿಗೂ ಮರೆಯುವುದಿಲ್ಲ. ಒಂದು ಕಾಲವಿತ್ತು, ತಕ್ಕಡಿ ತಮ್ಮ ಕಡೆಗೆ ವಾಲಿದೆ ಎಂದು ನಿತೀಶ್ ಊಹಿಸಿದ್ದರಬಹುದು. ಆದರೆ ಬಿಜೆಪಿ ಅಲ್ಪಮಟ್ಟಿಗೆ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ನಂತರ, ಅವರು ನಿಜವಾಗಿಯೂ ಕಡಿಮೆ ರಾಜಕೀಯ ಪ್ರಭಾವವನ್ನು ಹೊಂದಿದ್ದಾರೆ ಎಂಬುದು ಅರ್ಥವಾಗುತ್ತದೆ.

ಜೆಡಿಯು ದೂರ ಸರಿದರೂ…

ಸಂಖ್ಯಾತ್ಮಕವಾಗಿ ಹೇಳುವುದಾದರೆ, ನಿತೀಶ್ ಇನ್ನು ಮುಂದೆ ರೊಚ್ಚಿಗೆದ್ದು ರಂಪಾಟ ಮಾಡುವ ಕಾಲ ಮುಗಿದಿದೆ. ಯಾಕೆಂದರೆ ಜೆಡಿ(ಯು) ದೂರವಾದರೂ ಸಹ, ಬಿಜೆಪಿ ಇತರ ಮಿತ್ರಪಕ್ಷಗಳ ಬೆಂಬಲದೊಂದಿಗೆ ಅಧಿಕಾರದಲ್ಲಿ ಉಳಿಯುತ್ತದೆ. ಪರಿಣಾಮವಾಗಿ, ಮೋದಿ ಅಂತಿಮವಾಗಿ ಈ ಆಟದಲ್ಲಿ ತಮ್ಮ ಕಾಯಿಯನ್ನು ಚಲಾಯಿಸಿದ್ದಾರೆ - ಅವರ ಪಕ್ಷವು ರಾಜ್ಯ ವಿಧಾನಸಭೆಯಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ: 'ಈ ಮೈತ್ರಿ' ಎನ್ನುವುದು ಇನ್ನು ಮುಂದೆ ಅವರ 'ದಯೆಯ' ಮೇಲೆ ಅಧಿಕಾರದಲ್ಲಿ ಮುಂದುವರಿಯುತ್ತದೆ. ನಿತೀಶ್ ಕುಮಾರ್ ಅವರಿಗೆ ಭವಿಷ್ಯದಲ್ಲಿ ಏನಿದೆ ಎಂಬುದನ್ನು ನೋಡಲು ನಾವು ಕಣ್ಣರಳಿಸಿ ಕಾಯಬೇಕಾಗಿದೆ.

ಒಬ್ಬ ಪ್ರವಾದಿಯಂತೆ, ಠಾಕೂರ್ ಅವರು ನಿತೀಶ್ ಮತ್ತು ಲಾಲು ಬಗ್ಗೆ ಹೀಗೆ ಬರೆದಿದ್ದಾರೆ: "ಶೀಘ್ರದಲ್ಲೇ ಒಂದು ದಿನ ಈ ವ್ಯಕ್ತಿಗಳು ಈ ಪುಟಗಳಿಂದ ಹೊರಗೆ ಜಾರಿ ಹೋಗುತ್ತಾರೆ ಮತ್ತು ಹೆಚ್ಚು ಶ್ರೇಷ್ಠರೂ ಅಥವಾ ಕಡಿಮೆ ಮಹತ್ವ ಪಡೆದವರೂ ಆಗುತ್ತಾರೆ. ಜೀವನದ ಕುರಿತು ಯಾವುದೇ ಅಂತಿಮ ಮಾತುಗಳನ್ನು ಹೇಳಲು ಸಾಧ್ಯವಿಲ್ಲ, ಅವು ದೀರ್ಘಲೋಪ ಚಿಹ್ನೆಗಳಲ್ಲಿ ಕೊನೆಗೊಳ್ಳುತ್ತವೆ, ಕೆಲವೊಮ್ಮೆ ಪ್ರಶ್ನಾರ್ಥಕ ಚಿಹ್ನೆಗಳ ಜೊತೆಗೆ ಸೇರ್ಪಡೆಯಾಗುತ್ತವೆ. ಈ ಸಂಪುಟದ ನಾಯಕರು ಇನ್ನೂ ಚಾಲ್ತಿಯಲ್ಲಿರುವ ಕೃತಿಗಳಾಗಿದ್ದು, ಕೊನೆಯ ಮಾತು ಬರೆದಾಗ, ಒಂದು ಜಾಡು ಅದಾಗಲೇ ನೆಗೆದಿರುತ್ತದೆ. ಹೇಳಲು ಇನ್ನೂ ಸಾಕಷ್ಟಿದೆ..."

ವಯಸ್ಸು ನಿಜವಾಗಿಯೂ ಅವರನ್ನು ಪ್ರತ್ಯೇಕಿಸದ ಕಾರಣ, ನಾನು ಮೋದಿಯವರ ಹೆಸರನ್ನು ಸೇರಿಸುವ ಮೂಲಕ ಅವರನ್ನು ಉತ್ತಮ ತ್ರಿಮೂರ್ತಿಗಳನ್ನಾಗಿ ಮಾಡಬಹುದು.

Tags:    

Similar News