ಬಾಂಗ್ಲಾದೇಶದ ಆಂತರಿಕ ಯುದ್ಧಕ್ಕೆ ಮುನ್ನುಡಿ ಬರೆಯಿತೇ ಹಸೀನಾ ಮರಣ ದಂಡನೆ ಶಿಕ್ಷೆ?
ಅತ್ತ ಪಾಕಿಸ್ತಾನದ ಜೊತೆ ಮತ್ತು ಅಲ್ಲಿನ ಇಸ್ಲಾಮಿ ಶಕ್ತಿಗಳ ಜತೆ ಬಹಿರಂಗವಾಗಿ ಸಖ್ಯ ಬೆಳೆಸಿರುವ ಯೂನುಸ್ ಮತ್ತು ಸಹಾಯಕರು ಶೇಖ್ ಹಸೀನಾ ಅವರ ಅವಾಮಿ ಲೀಗ್ ಶತಾಯಗತಾಯ ಮುಗಿಸಿಬಿಡಬೇಕು ಎಂದು ಹೊರಟಿದ್ದಾರೆ!
ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರಿಗೆ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿ ಸೋಮವಾರ ಮರಣದಂಡನೆ ವಿಧಿಸಿದೆ. ಇದು ಹಸೀನಾ ಅವರ ಅವಾಮಿ ಲೀಗ್ ಮತ್ತು ಪಾಕಿಸ್ತಾನ ಪರವಿರುವ ಜಮಾತ್-ಎ-ಇಸ್ಲಾಮಿಯಂತಹ ಇಸ್ಲಾಮಿಕ್ ಮೂಲಭೂತವಾದಿ ಗುಂಪುಗಳ ಬೆಂಬಲವನ್ನು ಹೊಂದಿರುವ ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರದ ನಡುವೆ ದೊಡ್ಡ ಸಂಘರ್ಷಕ್ಕೆ ವೇದಿಕೆ ಸಿದ್ಧಪಡಿಸಿದೆ ಎಂಬುದು ಮಾತ್ರ ನಿಶ್ಚಿತ.
ಗೈರುಹಾಜರಿ ವಿಚಾರಣೆಗಳು (in absentia trials) ಯಾವಾಗಲೂ ರಕ್ಷಣೆಗೆ ಸೀಮಿತ ಅವಕಾಶವನ್ನು ನೀಡುತ್ತವೆ, ಅದರಲ್ಲೂ ವಿಶೇಷವಾಗಿ ಆರೋಪಿಗೆ ತನ್ನದೇ ಆದ ರಕ್ಷಣಾ ತಂಡವನ್ನು ನೇಮಿಸಿಕೊಳ್ಳಲು ಅವಕಾಶ ನೀಡದಿದ್ದಾಗ. ಹಸೀನಾ ಅವರು ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿ (ICT)ಯಿಂದ ನೇಮಕಗೊಂಡ ಪ್ರತಿವಾದಿ ವಕೀಲರಿಂದಲೇ ತೃಪ್ತಿಪಡಬೇಕಾಯಿತು. ಆ ವಕೀಲರು ರಕ್ಷಣಾ ತಂತ್ರವನ್ನು ಎಚ್ಚರಿಕೆಯಿಂದ ನಿಭಾಯಿಸುವ ಸಲುವಾಗಿ ಒಂದಷ್ಟು ಕಾಲಾವಕಾಶವನ್ನು ಪಡೆಯಲು ವಿಚಾರಣೆಯನ್ನು ಮುಂದೂಡುವಂತೆ ಕೋರಲಿಲ್ಲ ಅಥವಾ ಆರೋಪಪಟ್ಟಿ ಸಲ್ಲಿಸಿದ ನಂತರದ ಐದು ವಾರಗಳ ವಿಚಾರಣೆಯಲ್ಲಿ ಒಂದೇ ಒಂದು ರಕ್ಷಣಾ ಸಾಕ್ಷಿಯನ್ನು ಕೂಡ ಹಾಜರುಪಡಿಸಲಿಲ್ಲ.
ತಮಗೆ ವಿಧಿಸಿರುವ ಮರಣ ದಂಡನೆಗೆ ಪ್ರತಿಕ್ರಿಯೆ ನೀಡಿರುವ ಶೇಖ್ ಹಸೀನಾ ತಮ್ಮ ಮೇಲಿನ ಆರೋಪಗಳನ್ನು ತಿರಸ್ಕರಿಸಿ, ಇದೊಂದು 'ಪಕ್ಷಪಾತದ, ಮೋಸದ ನ್ಯಾಯಮಂಡಳಿ' ಎಂದು ಹೇಳಿದ್ದಾರೆ.
ಈ ಎಲ್ಲ ಹಿನ್ನೆಲೆಯಲ್ಲಿ ನ್ಯಾಯಾಲಯದ ವಿಚಾರಣೆಯು ಸಂಪೂರ್ಣವಾಗಿ ಅನ್ಯಾಯದಿಂದ ಕೂಡಿದೆ ಎಂದು ಭಾವಿಸುತ್ತಿರುವವರು ಕೇವಲ ಹಸೀನಾ, ಅವರ ಕುಟುಂಬ ಅಥವಾ ಪಕ್ಷದ ನಿಷ್ಠಾವಂತರು ಮಾತ್ರವಲ್ಲ, ಬಾಂಗ್ಲಾದೇಶದಲ್ಲಿ ಈ ಲೇಖಕರು ಮಾತನಾಡಿದ ಹೆಚ್ಚಿನ ವಕೀಲರು, ಇದು "ಕಂಗಾರೂ ಕೋರ್ಟ್" ಆಗಿದ್ದು, ಇಲ್ಲಿ ಸೇಡು ತೀರಿಸಿಕೊಳ್ಳುವುದೇ ಮುಖ್ಯ ಗುರಿಯಾಗಿದೆಯೇ ಹೊರತು ನ್ಯಾಯವಲ್ಲ ಎಂದು ಹೇಳಿದ್ದಾರೆ.
ಅವಾಮಿ ಲೀಗ್ ಇಲ್ಲದ ಚುನಾವಣೆ
ಹಸೀನಾ ಅವರು ಎಲ್ಲಿಯ ವರೆಗೆ ಭಾರತದಲ್ಲಿ ಆಶ್ರಯ ಪಡೆದಿರುತ್ತಾರೋ ಅಲ್ಲಿಯ ವರೆಗೆ ಅವರಿಗೆ ನೀಡಲಾದ ಮರಣದಂಡನೆಯು ತಕ್ಷಣಕ್ಕೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಈ ತೀರ್ಪು ಅವಾಮಿ ಲೀಗ್ ಪಾಲಿಗೆ ಏನನ್ನು ಸೂಚಿಸುತ್ತದೆ? ಮುಂದಿನ ವರ್ಷದ ಫೆಬ್ರವರಿ ತಿಂಗಳ ಹೊತ್ತಿಗೆ ನಡೆಸುವ ಭರವಸೆ ನೀಡಲಾದ ಚುನಾವಣೆಗಳಲ್ಲಿ ಅವಾಮಿ ಲೀಗ್ ಪಕ್ಷದ ಮೇಲಿನ ನಿಷೇಧವನ್ನು ಹಿಂತೆಗೆದುಕೊಳ್ಳುವ ಅಥವಾ ಅದಕ್ಕೆ ಸ್ಪರ್ಧಿಸಲು ಅವಕಾಶ ನೀಡುವ ಯಾವುದೇ ಉದ್ದೇಶ ಯೂನುಸ್ ಆಡಳಿತಕ್ಕಿಲ್ಲ ಎಂಬುದರ ಸ್ಪಷ್ಟ ಸೂಚನೆ ಇದಾಗಿದೆ. ಅವಾಮಿ ಲೀಗ್ ಬಾಂಗ್ಲಾದೇಶದ ಸ್ವಾತಂತ್ರ್ಯ ಸಂಗ್ರಾಮವನ್ನು ಮುನ್ನಡೆಸಿದ ಪಕ್ಷ ಮತ್ತು ಸ್ವಾತಂತ್ರ್ಯಾ ನಂತರದ ಸುಮಾರು ಅರ್ಧದಷ್ಟು ವರ್ಷಗಳ ಕಾಲ ದೇಶದ ಆಡಳಿತ ಚುಕ್ಕಾಣಿ ಹಿಡಿದಿದೆ. ಯಾವುದೇ ಅವಾಮಿ ಲೀಗ್ ನಾಯಕರ ಮೇಲಿರುವ ಆರೋಪಗಳೇನೇ ಇರಲಿ, ಅವಾಮಿ ಲೀಗ್ ಇಲ್ಲದೆ ಬಾಂಗ್ಲಾದೇಶದಲ್ಲಿ ಸಮಗ್ರ ಅಥವಾ ಎಲ್ಲರನ್ನೂ ಒಳಗೊಳ್ಳುವ ಚುನಾವಣೆ ಎಂಬುದು ಕನಸಿನ ಮಾತು.
ಅವಾಮಿ ಲೀಗ್ ಎಂದಿಗೂ ಸಶಸ್ತ್ರ ಕ್ರಾಂತಿಯ ಪಕ್ಷವಾಗಿರಲಿಲ್ಲ; ಅದು ನಿರಂತರವಾಗಿ ಚುನಾವಣೆಗಳ ಮೂಲಕ ಅಧಿಕಾರವನ್ನು ಪಡೆಯುವ ಪ್ರಕ್ರಿಯೆಯಲ್ಲಿ ನಂಬಿಕೆ ಇಟ್ಟಿತ್ತು. 1970ರ ಪಾಕಿಸ್ತಾನ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ನಂತರವೂ ಅದಕ್ಕೆ ನ್ಯಾಯಯುತವಾದ ಅಧಿಕಾರ ನಿರಾಕರಿಸಲ್ಪಟ್ಟಾಗ ಮತ್ತು ಬಂಗಾಳಿ ಜನರು ಭೀಕರ ನರಮೇಧಕ್ಕೆ ಒಳಗಾದಾಗ ಮಾತ್ರ, ಆ ಪಕ್ಷವು ಸಶಸ್ತ್ರ ಹೋರಾಟವನ್ನು ಕೈಗೆತ್ತಿಕೊಳ್ಳಲು ನಿರ್ಬಂಧಕ್ಕೆ ಒಳಗಾಯಿತು.
1971ರಲ್ಲಿ ಪಾಕಿಸ್ತಾನದ ಸೇನಾ ಆಡಳಿತ ಮಾಡಿದ ರೀತಿಯಲ್ಲಿಯೇ ಯೂನುಸ್ ಮತ್ತು ಅವರ ಮೂಲಭೂತವಾದಿ ಇಸ್ಲಾಮಿಸ್ಟ್ ಬೆಂಬಲಿಗರು ಅವಾಮಿ ಲೀಗ್-ನ್ನು ಸಾಧ್ಯವಿರುವ ಎಲ್ಲ ರೀತಿಯಲ್ಲಿ ನಿರ್ಬಂಧಕ್ಕೆ ಒಳಪಡಿಸುತ್ತಿದ್ದಾರೆ. ಮೊದಲು, "ಅತ್ಯಂತ ಸೂಕ್ಷ್ಮವಾಗಿ ಹೆಣೆದ ಕಾರ್ಯತಂತ್ರ"ದ ಮೂಲಕ ಅದನ್ನು ಪದಚ್ಯುತಗೊಳಿಸಲಾಯಿತು ಎಂಬುದನ್ನು ಸ್ವತಃ ಯೂನಸ್ ಅವರೇ ಒಪ್ಪಿಕೊಳ್ಳುತ್ತಾರೆ. ಆನಂತರದ ಚುನಾವಣಾ ಅಧಿಕಾರವನ್ನು ಪಡೆಯಲು ರಾಜಕೀಯ ಅವಕಾಶವನ್ನು ನಿರಾಕರಿಸುವ ಮೂಲಕ ಒತ್ತಡ ಹೇರುವ ಪ್ರಯತ್ನಮಾಡುತ್ತಿದ್ದಾರೆ.
ಹಿಂಸಾಚಾರದ ಸಾಧ್ಯತೆ
ಒಂದು ವೇಳೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಅವಾಮಿ ಲೀಗ್ ಮೇಲೆ ನಿಷೇಧ ಹೇರಲ್ಪಟ್ಟರೆ ಹಿಂಸಾಚಾರದ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಹಸೀನಾ ಅವರ ಮಗ ಸಾಜೀಬ್ ವಾಜೆದ್ ಜಾಯ್ ಪ್ರಸ್ತಾಪ ಮಾಡಿರುವುದರಲ್ಲಿ ಆಶ್ಚರ್ಯವೇನಿಲ್ಲ. ಹಲವು ಬಾರಿ ಬಾಂಗ್ಲಾದೇಶದ ರಾಜಕೀಯದಲ್ಲಿನ ಫಲಿತಾಂಶಗಳು ಜನಪ್ರಿಯತೆಯ ಬೆಂಬಲದಲ್ಲಿ ಬೇರೂರಿರುವ ಬೀದಿ ಹೋರಾಟದ ಬಲದಿಂದಲೇ ನಿರ್ಧಾರವಾಗಿವೆ ಎಂಬುದನ್ನು ಗಮನಿಸಬೇಕು.
ಈಗ ಸಂದರ್ಭ ತಲೆಕೆಳಗಾಗಿದೆ. ಹಾಗಾಗಿ ಯೂನುಸ್ ಅವಾಮಿ ಲೀಗ್‌ನಿಂದ ಸಂಘಟಿತ ಹಾಗೂ ಸಾಮೂಹಿಕ ಪ್ರತಿಭಟನೆಗಳನ್ನು ಎದುರಿಸಬೇಕಾಗಬಹುದು. ಇವುಗಳನ್ನು ಹತ್ತಿಕ್ಕಲು, ಅವರು ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ ಮತ್ತು ಅವರ ಸಲಹೆಗಾರರಾದ ಆಸಿಫ್ ಮಹಮೂದ್ ಶೋಜಿಬ್ ಭುಯಿನ್ ಅವರಿಗೆ 'ರಾಷ್ಟ್ರೀಯ ಸಶಸ್ತ್ರ ಮೀಸಲು' ಎಂಬ ನೆಪದಲ್ಲಿ ಬೆಳೆಸಿದ ಇಸ್ಲಾಮಿಕ್ ಸೇನಾಪಡೆಯನ್ನು ನಿಯೋಜಿಸಲು ಅವಕಾಶ ನೀಡಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಕರ್ತವ್ಯಗಳಿಗಾಗಿ ಇರುವ ಪ್ರಮಾಣಿತ ಕಾರ್ಯವಿಧಾನಗಳ ಸ್ಪಷ್ಟ ಉಲ್ಲಂಘನೆ ಮಾಡುವ ಮೂಲಕ, ಸುಮಾರು 8,000 ಯೋಧರಿಗೆ ಪೊಲೀಸ್ ಸಮವಸ್ತ್ರ ಮತ್ತು ಗಲಭೆ ನಿಯಂತ್ರಣ ಸಾಧನಗಳನ್ನು ನೀಡಲಾಗಿದೆ.
ಅವಾಮಿ ಲೀಗ್ ಪ್ರತಿಭಟನಾಕಾರರು ಪೊಲೀಸ್ ಮತ್ತು ಈ ಸೇನಾಪಡೆಯಿಂದ ಸಶಸ್ತ್ರ ಕ್ರಮವನ್ನು ಎದುರಿಸುವ ಪರಿಸ್ಥಿತಿ ಬಂದರೆ, ಅವರು ಸಶಸ್ತ್ರ ಪ್ರತಿರೋಧಕ್ಕೆ ಮೊರೆಹೋಗುವ ಅನಿವಾರ್ಯತೆಗೆ ಒಳಗಾಗಬಹುದು. ಹಾಗೇನಾದರೂ ಆದರೆ ಅದಕ್ಕೆ ಯೂನುಸ್, ಮತ್ತು ಯೂನುಸ್ ಒಬ್ಬರೇ, ಜವಾಬ್ದಾರರಾಗಿರುತ್ತಾರೆ.
ಭಾರತಕ್ಕಿಲ್ಲದ ಜರೂರತ್ತು
ಇಂತಹ ಸಂಕೀರ್ಣತೆ ಪರಿಸ್ಥಿತಿಯನ್ನು ತಪ್ಪಿಸಲು ಭಾರತವು ಶೇಖ್ ಹಸೀನಾ ಅವರನ್ನು ಮರಳಿ ಬಾಂಗ್ಲಾ ದೇಶಕ್ಕೆ ಕಳುಹಿಸಬೇಕು ಎಂದು ಇಲ್ಲಿನ ಕೆಲವರು ವಾದಿಸಬಹುದು. ಆದರೆ ಪಾಕಿಸ್ತಾನದ ಜೊತೆಗಿನ ಬಾಂಧವ್ಯವನ್ನು ಖುಲ್ಲಂಖುಲ್ಲ ಪ್ರದರ್ಶಿಸುತ್ತಿರುವ ಯೂನುಸ್ ಮತ್ತು ಅವರ ಇಸ್ಲಾಮಿಸ್ಟ್ ಬೆಂಬಲಿಗರಿಗೆ ಅನುಕೂಲ ಮಾಡಿಕೊಡುವ ದರ್ದು ಭಾರತಕ್ಕಿಲ್ಲ. ಅದರಲ್ಲೂ ವಿಶೇಷವಾಗಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಸೇನೆಗಳ ನಡುವೆ ಸಂಬಂಧಗಳು ಕ್ಷಿಪ್ರವಾಗಿ ಸುಧಾರಿಸುತ್ತಿರುವುದು ಆತಂಕಕಾರಿಯಾಗಿದೆ, ಇಸ್ಲಾಮಾಬಾದ್‌ನಿಂದ ಸುಮಾರು ಒಂದು ಡಜನ್ ನಿಯೋಗಗಳು ಢಾಕಾಗೆ ಭೇಟಿ ನೀಡಿವೆ. ಭವಿಷ್ಯದ ಸಂಘರ್ಷದಲ್ಲಿ ಭಾರತಕ್ಕೆ "ಪೂರ್ವದಲ್ಲಿ ಆಘಾತ" ನೀಡುವ ಬೆದರಿಕೆಯನ್ನು ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್ ನೀಡಲು ಇದು ಧೈರ್ಯ ತುಂಬಿದೆ.
1971ಕ್ಕೂ ಮೊದಲಿನ ಪರಿಸ್ಥಿತಿಯನ್ನು ನೆನಪಿಸುವಂತೆ, ಮುನೀರ್ ಅವರು ಭಾರತದ ಮೇಲೆ ಎರಡು ಕಡೆಗಳಿಂದ ಪರೋಕ್ಷ ಯುದ್ಧವನ್ನು ಹೇರುವ ಸಾಧ್ಯತೆಯ ಸ್ಪಷ್ಟ ಹುಡುಕಾಟ ನಡೆಸುತ್ತಿದ್ದಾರೆ. ಜೊತೆಗೆ ಯೂನುಸ್ ಆಡಳಿತವೇ ಅವರ ಮುಖ್ಯ ಅಸ್ತ್ರವಾಗಿದೆ. ಭಾರತಕ್ಕೆ, ಬಾಂಗ್ಲಾದೇಶದಲ್ಲಿ ಯಾವುದೇ ಸುಲಭದ ಮಾರ್ಗಗಳಿಲ್ಲ. 1971ರ ವಿಮೋಚನಾ ಯುದ್ಧದ ಸಿದ್ಧಾಂತಕ್ಕೆ ಬದ್ಧವಾಗಿರುವ ವಿಮೋಚನಾಪರ ಶಕ್ತಿಗಳು ಭಾರತದ ಪಾಲಿಗೆ ಅತ್ಯಂತ ವಿಶ್ವಾಸಾರ್ಹ ಮಿತ್ರರಾಗಿದ್ದಾರೆ. ಅಧಿಕಾರದಲ್ಲಿದ್ದಾಗ ಹಿಫಾಜತ್-ಎ-ಇಸ್ಲಾಮ್‌ನಂತಹ ಇಸ್ಲಾಮಿಕ್ ಮೂಲಭೂತವಾದಿ ಗುಂಪುಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡ ಅವಾಮಿ ಲೀಗ್ ಒಳಗಿನ ಕೆಲವು ಸಂಶಯಾತ್ಮಕ ಅಂಶಗಳನ್ನು ತಿಳಿಗೊಳಿಸಿದರೂ, ಅವರಿಗೆ ಅಧಿಕಾರ ನೀಡಲು ಮಾರ್ಗಗಳನ್ನು ಕಂಡುಕೊಳ್ಳುವ ಅನಿವಾರ್ಯತೆ ಎದುರಾಗಿದೆ.
ಅಫ್ಘಾನಿಸ್ತಾನದಲ್ಲಿರುವಂತೆ, ಬಾಂಗ್ಲಾದೇಶದಲ್ಲಿಯೂ ಉಗ್ರವಾದಿ ಇಸ್ಲಾಂ ಅಲ್ಲದೆ, ಭಾಷೆ ಮತ್ತು ಸಂಸ್ಕೃತಿಯಲ್ಲಿ ಬೇರೂರಿರುವ ರಾಷ್ಟ್ರೀಯತೆಯು ಪಾಕಿಸ್ತಾನದ ಜಿಹಾದಿ ಕಾರ್ಯಸೂಚಿಯ ವಿರುದ್ಧ ಭಾರತಕ್ಕೆ ಉತ್ತಮ ರಕ್ಷಾಕವಚವನ್ನು ನೀಡುತ್ತದೆ. ಭಾರತಕ್ಕೆ ಪಶ್ಚಿಮದಲ್ಲಿ ಕೆಲಸ ಮಾಡಿದ ತಂತ್ರವು ಪೂರ್ವದಲ್ಲಿಯೂ ಕೆಲಸ ಮಾಡಬೇಕು, ಆದರೆ 1971ರಲ್ಲಿ ಆದಂತೆ ದೆಹಲಿಯು ತನ್ನ ಆದ್ಯತೆಗಳನ್ನು ಸರಿಯಾಗಿ ನಿಗದಿಪಡಿಸಿದರೆ ಮಾತ್ರ ಇದು ಸಾಧ್ಯ.