ಡಿಜಿಟಲ್ ಅರೆಸ್ಟ್ ಎಂಬ ಡೆಡ್ಲಿ ಜಾಲ: ಪೊಲೀಸರ ಭಯ ತೊಲಗದೆ ವಂಚಕರ ಪಂಗನಾಮ ತಪ್ಪದು

ವಂಚಕರ ಜಾಲಕ್ಕೆ ಬೀಳದಂತೆ ಸರ್ಕಾರವು ಜನರಿಗೆ ಎಚ್ಚರಿಕೆ ನೀಡುತ್ತಿದ್ದರೂ ಕೂಡ, ಡಿಜಿಟಲ್ ದಿಗ್ಬಂಧನಗಳು ಅವ್ಯಾಹತವಾಗಿ ನಡೆಯುತ್ತಲೇ ಇವೆ. ಇಂತಹ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿರುವುದು ಆತಂಕಕಾರಿ...

Update: 2025-12-23 03:30 GMT
ಈ ಡಿಜಿಟಲ್ ಅರೆಸ್ಟ್ ಬಲೆಗೆ ಬೀಳುತ್ತಿರುವ ಹೆಚ್ಚಿನ ಮಂದಿ ಸುಶಿಕ್ಷಿತರು. ಪೊಲೀಸರ ಬಗ್ಗೆ ಅವರಿಗಿರುವ ಅನಗತ್ಯವಾದ ಭಯ. ಜೊತೆಗೆ ಎಷ್ಟೇ ಸುಶಿಕ್ಷಿತರಾದರೂ ಈಗಿನ ತಲೆಮಾರು ಪತ್ರಿಕೆಗಳನ್ನೇ ಓದದಿರುವುದು. ಈ ಎಲ್ಲ ಕಾರಣಗಳಿಂದ ಇದು ವ್ಯಾಪಕವಾಗಿ ಬೇರುಬಿಟ್ಟಿದೆ.
Click the Play button to listen to article

ಬೆಳಿಗ್ಗೆ ಪತ್ರಿಕೆ ಕೈಗೆತ್ತಿಕೊಂಡರೆ ಸಾಕು, ಯಾರೋ ಒಬ್ಬರು ‘ಡಿಜಿಟಲ್ ಬಂಧನ’ಕ್ಕೆ ಒಳಗಾಗಿ, ಆ ಜಾಲದಿಂದ ತಪ್ಪಿಸಿಕೊಳ್ಳಲು ಲಕ್ಷಾಂತರ ಅಥವಾ ಕೋಟ್ಯಂತರ ರೂ. ಹಣ ಕಳೆದುಕೊಂಡ ಸುದ್ದಿಗಳು ಕಣ್ಣಿಗೆ ರಾಚುತ್ತಿರುತ್ತವೆ. ಇಂತಹ ಸುದ್ದಿಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗದ ಒಂದೇ ಒಂದು ದಿನವೂ ಇಲ್ಲವೆನಿಸುತ್ತದೆ. ವರದಿಯಾಗಿರುವ ಪ್ರಕರಣಗಳನ್ನು ಗಮನಿಸಿದರೆ, ಸಂತ್ರಸ್ತರಿಗೆ ಬುದ್ಧಿಬರುವುದು ತಮ್ಮ ಬೆಲೆಬಾಳುವ ಉಳಿತಾಯವನ್ನೆಲ್ಲಾ ಕಳೆದುಕೊಂಡ ನಂತರವೇ ಎಂಬುದು ವೇದ್ಯವಾಗುತ್ತದೆ.

ಡಿಜಿಟಲ್ ಬಂಧನ ಅಂದರೆ ಏನು ಎಂಬುದು ಇನ್ನೂ ಅರಿವಿಲ್ಲದವರಿಗಾಗಿ ಹೇಳುವುದಾದರೆ, ಇದು ಕಠಿಣ ತರಬೇತಿ ಪಡೆದ ಮತ್ತು ಚಾಣಾಕ್ಷ ವಂಚಕರ ಕೂಟ ನಡೆಸುವ ಒಂದು ನಕಲಿ ಬಂಧನ. ತಾವು ಯಾವುದೋ ದೊಡ್ಡ ವಂಚನೆ ಎಸಗಿದ್ದೇವೆ ಎಂದು ನಂಬುವಂತೆ ಮಾಡುವ ಈ ಖದೀಮರು ಸಂತ್ರಸ್ತರನ್ನು ಭಯಭೀತರನ್ನಾಗಿ ಮಾಡುತ್ತಾರೆ. ತಾವು ಪೊಲೀಸ್, ಸಿಬಿಐ, ಇಡಿ ಅಥವಾ ಇತರ ಕಾನೂನು ಜಾರಿ ಸಂಸ್ಥೆಗಳ ಅಧಿಕಾರಿಗಳೆಂದು ಹೇಳಿಕೊಳ್ಳುವ ಈ ವಂಚಕರು, ಸಹಾಯ ಮಾಡುವ ಭರವಸೆ ನೀಡಿ ಸಂತ್ರಸ್ತರನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳುತ್ತಾರೆ. ನಂತರ ಕ್ರಮೇಣ ಒತ್ತಡ ಹೇರುವ ಮೂಲಕ ಅವರ ಹಣವನ್ನು ಹಂತ ಹಂತವಾಗಿ ಲೂಟಿಮಾಡುತ್ತ ಬರಿದು ಮಾಡಿಬಿಡುತ್ತಾರೆ.

ಬೆಂಗಳೂರು ಉಪನ್ಯಾಸಕಿ ಪ್ರಕರಣ

ಬೆಂಗಳೂರಿನ ಉಪನ್ಯಾಸಕಿಯೊಬ್ಬರ ಪ್ರಕರಣವು ಈ ಡಿಜಿಟಲ್ ಬಂಧನ ಎಷ್ಟು ಡೆಡ್ಲಿ ಎನ್ನುವುದಕ್ಕೆ ತಾಜಾ ತಾಜಾ ಉದಾಹರಣೆ. ಈ ಪ್ರಕರಣದ ವರದಿಗಳ ಪ್ರಕಾರ, ಆಕೆ ಬರೋಬ್ಬರಿ ಆರು ತಿಂಗಳ ಕಾಲ ಡಿಜಿಟಲ್ ಬಂಧನದಲ್ಲಿದ್ದರು. ಈ ಅವಧಿಯಲ್ಲಿ ಅವರು ವಂಚಕರಿಗೆ ಹಣ ನೀಡಲು ತಮ್ಮ ಎರಡು ನಿವೇಶನಗಳು ಮತ್ತು ಒಂದು ಅಪಾರ್ಟ್ಮೆಂಟ್ ಮಾರಾಟ ಮಾಡಿದ್ದಾರೆ. ಅಷ್ಟು ಸಾಲದು ಎಂಬಂತೆ ಸಾಲವನ್ನೂ ಮಾಡಿದ್ದರು. ಒಟ್ಟಾರೆ ಅವರು ಪಾವತಿ ಮಾಡಿದ್ದು ಎರಡು ಕೋಟಿಗೂ ಅಧಿಕ. ವಂಚಕರು ಹಠಾತ್ ಕರೆ ಸ್ವೀಕರಿಸುವುದನ್ನು ನಿಲ್ಲಿಸಿದಾಗ, ತಾನು ಮೋಸ ಹೋಗಿರುವುದು ಆಕೆಯ ಅರಿವಿಗೆ ಬಂತು. ಆನಂತರವಷ್ಟೇ ಅವರು ದೂರು ದಾಖಲಿಸಲು ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿದರು.

ಈ ಪ್ರಕರಣದಲ್ಲಿಯೂ ಇತರ ಪ್ರಕರಣಗಳ ಮಾದರಿಯಲ್ಲಿಯೇ ವಂಚಕರು ಉಪನ್ಯಾಸಕಿಗೆ ಕರೆಮಾಡಿ, ಅವರ ಹೆಸರಿನಲ್ಲಿ ಬಂದಿರುವ ಕೊರಿಯರ್ ಪಾರ್ಸೆಲ್‌ನಲ್ಲಿ ಮಾದಕ ದ್ರವ್ಯಗಳಿವೆ ಮತ್ತು ಪೊಲೀಸರು ಶೀಘ್ರದಲ್ಲೇ ಅವರನ್ನು ಬಂಧಿಸಲು ಬರಲಿದ್ದಾರೆ ಎಂದು ಹೆದರಿಸಿದ್ದರು.

ಬೆಂಗಳೂರಿನ ಹಿರಿಯ ಐಟಿ ಉದ್ಯೋಗಿಯೊಬ್ಬರು ಇತ್ತೀಚೆಗೆ ಇಂತಹದ್ದೇ ಡಿಜಿಟಲ್ ಬಂಧನಕ್ಕೆ ಒಳಗಾಗಿ, ಆರು ತಿಂಗಳ ಅವಧಿಯಲ್ಲಿ 187 ಬ್ಯಾಂಕ್ ಖಾತೆ ವಹಿವಾಟುಗಳ ಮೂಲಕ ಭರೋಬ್ಬರಿ 31.83 ಕೋಟಿ ರೂಪಾಯಿ ವಂಚಕರಿಂದ ಪಂಗನಾಮ ಹಾಕಿಸಿಕೊಂಡಿದ್ದಾರೆ.

ಪೊಲೀಸರು ಜನರಿಗೆ ವಂಚಕರ ಬಗ್ಗೆ ಎಚ್ಚರಿಕೆ ನೀಡುತ್ತಿದ್ದರೂ ಮತ್ತು ಅವರ ತಂತ್ರಗಳಿಗೆ ಬಲಿಯಾಗದಂತೆ ಸತತ ಸಲಹೆ ನೀಡುತ್ತಿದ್ದರೂ ಡಿಜಿಟಲ್ ಬಂಧನಕ್ಕೆ ಕಡಿವಾಣ ಬಿದ್ದಿಲ್ಲ. ವಾಸ್ತವವಾಗಿ, ಅವುಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಲೇ ಇದೆ.

1,935 ಕೋಟಿ ರೂ. ವಂಚಕರ ಪಾಲು

ಕಳೆದ ಎರಡು ವರ್ಷಗಳ ಅಂಕಿ-ಅಂಶಗಳನ್ನು ಗಮನಿಸಿದರೆ ಭಾರತದಲ್ಲಿ ಡಿಜಿಟಲ್ ಬಂಧನ ಪ್ರಕರಣಗಳು ಸುಮಾರು ಮೂರು ಪಟ್ಟು ಹೆಚ್ಚಾಗಿವೆ. ಭಾರತದಲ್ಲಿ ಡಿಜಿಟಲ್ ಬಂಧನಗಳು 2022 ಮತ್ತು 2024ರ ನಡುವೆ ಮೂರು ಪಟ್ಟು ಹೆಚ್ಚಾಗಿವೆ ಎಂದು ಈ ವರ್ಷದ ಆರಂಭದಲ್ಲಿ ಸರ್ಕಾರವು ಸಂಸತ್ತಿನಲ್ಲಿ ಮಾಹಿತಿ ನೀಡಿತ್ತು.

ದತ್ತಾಂಶಗಳ ಪ್ರಕಾರ, 2022ರಲ್ಲಿ 39,925 ಇಂತಹ ಪ್ರಕರಣಗಳು ದಾಖಲಾಗಿದ್ದು, ಒಟ್ಟು 91.14 ಕೋಟಿ ರೂ. ಹಣವನ್ನು ಹೀಗೆ ದೋಚಲಾಗಿದೆ. ಆದರೆ 2024ರ ಹೊತ್ತಿಗೆ, ಈ ಪ್ರಕರಣಗಳ ಸಂಖ್ಯೆ ಸುಮಾರು ಮೂರು ಪಟ್ಟು ಹೆಚ್ಚಾಗಿ ಆ ಸಂಖ್ಯೆಯು 1,23,672ಕ್ಕೆ ತಲುಪಿದೆ. ಅಚ್ಚರಿಯ ಸಂಗತಿ ಎಂದರೆ ವಂಚನೆಗೆ ಒಳಗಾದ ಮೊತ್ತವೂ ಕೂಡ ಭರೋಬ್ಬರಿ 21 ಪಟ್ಟು ಅಧಿಕ. ಅಂದರೆ 1,935.51 ಕೋಟಿ ರೂಪಾಯಿಗೂ ಅಧಿಕ ಮೊತ್ತ ವಂಚಕರ ಪಾಲಾಗಿದೆ.

ಯಾವುದೇ ವ್ಯಕ್ತಿಯು ಇಂತಹ ಸಂದರ್ಭದಲ್ಲಿ ಮಾಡಬೇಕಾದ ತಾರ್ಕಿಕ ಕೆಲಸವೆಂದರೆ, ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ಏನು ನಡೆಯುತ್ತಿದೆ ಎಂಬುದನ್ನು ವಿಚಾರಿಸುವುದು. ಅಲ್ಲಿನ ಠಾಣಾಧಿಕಾರಿ ಅಥವಾ ಸಂಬಂಧಿತ ಅಧಿಕಾರಿ ಜೊತೆ ಮಾತನಾಡಿದರೆ, ಆ ಕರೆಯು ನಕಲಿ ಎಂಬುದು ತಕ್ಷಣವೇ ಅರಿವಿಗೆ ಬರುತ್ತದೆ.

ಸುಶಿಕ್ಷಿತರೇ ಇದರ ಬಲಿಪಶು

ಆದರೆ, ಜನರು ಹಾಗೆ ಮಾಡುವುದೇ ಇಲ್ಲ. ಇನ್ನೂ ಒಂದು ವಿಪರ್ಯಾಸದ ಸಂಗತಿ ಎಂದರೆ, ಈ ಡಿಜಿಟಲ್ ಬಂಧನಕ್ಕೆ ಒಳಗಾಗುವವರು ಬಹುತೇಕ ವಿದ್ಯಾವಂತರು, ಸುಶಿಕ್ಷಿತರು ಮತ್ತು ಬುದ್ಧಿಜೀವಿಗಳು, ಶಿಕ್ಷಕರು, ಉದ್ಯಮಿಗಳು, ಖಾಸಗಿ ವಲಯದ ನಿವೃತ್ತ ಅಧಿಕಾರಿಗಳು ಮತ್ತು ಪತ್ರಕರ್ತರು ಕೂಡ ಇದಕ್ಕೆ ಬಲಿಪಶುವಾಗುತ್ತಿದ್ದಾರೆ. ಇವರೆಲ್ಲರಿಗೂ ಇತ್ತೀಚಿನ ಸುದ್ದಿಗಳ ಅರಿವಿರುವುದಿಲ್ಲ ಎಂದು ನಂಬುವುದು ಕೂಡ ಕಷ್ಟ.

ಇನ್ನೂ ವಂಚನೆಗೆ ಒಳಗಾಗದ ವ್ಯಕ್ತಿಗೆ, 'ನಾನು ಎಂದಿಗೂ ಮೋಸ ಹೋಗುವುದಿಲ್ಲ' ಎಂದು ಕಲ್ಪಿಸಿಕೊಳ್ಳುವುದು ಅಥವಾ ಘೋಷಿಸುವುದು ಸುಲಭ. ಆದರೆ, ಈ ರೀತಿಯ ಡಿಜಿಟಲ್ ಬಂಧನಗಳು ಯಶಸ್ವಿಯಾಗುತ್ತಲೇ ಇರುವುದು ಇದಕ್ಕೆ ವಿರುದ್ಧವಾದ ಪುರಾವೆಗಳನ್ನು ನೀಡುತ್ತಿದೆ.

ಜನರು ವಂಚನೆಗೆ ಒಳಗಾಗಲು ಎರಡು ಪ್ರಮುಖ ಕಾರಣಗಳು ಯಾವುವು ಎಂಬುದರ ಅವಲೋಕನ ನಡೆಸೋಣ.

ಜನರನ್ನು ಸುಲಭವಾಗಿ ವಂಚಿಸಲು ಕನಿಷ್ಠ ಎರಡು ಪ್ರಮುಖ ಕಾರಣಗಳಿವೆ. ಒಂದು, ಅವರು ದಿನಪತ್ರಿಕೆಗಳನ್ನು ಓದುತ್ತಿಲ್ಲ ಅಥವಾ ಓದುವ ಹವ್ಯಾಸವನ್ನೇ ಬಿಟ್ಟುಬಿಟ್ಟಿದ್ದಾರೆ; ಹೀಗಾಗಿ ಅವರಿಗೆ ಪ್ರಚಲಿತ ವಿದ್ಯಮಾನಗಳ ಸರಿಯಾದ ಮಾಹಿತಿ ಇರುವುದಿಲ್ಲ. ಎರಡನೆಯ ಅಂಶವೆಂದರೆ, 'ಪೊಲೀಸ್' ಎಂಬ ಪದವನ್ನು ಕೇಳಿದ ಕೂಡಲೇ ಅವರ ಬೆನ್ನ ಸೆಳಕಿನಲ್ಲಿ ನಡುಕ ಉಂಟಾಗುತ್ತದೆ.

ಪೊಲೀಸ್ ವ್ಯವಸ್ಥೆಯಲ್ಲಿ ಇಲ್ಲದ ನಂಬಿಕೆ

ಭಾರತದಲ್ಲಿ, ಕಾರಣ ಯಾವುದೇ ಇರಲಿ ಪೊಲೀಸರ ಜೊತೆ ಸಂಬಂಧ ಬೆಳೆಸಲು ಯಾರೂ ಸುತಾರಾಂ ಇಷ್ಟಪಡುವುದಿಲ್ಲ. ಕಾಲಾನುಕಾಲದಿಂದಲೂ, ಪೊಲೀಸರು ಯಾವತ್ತೂ ಜನರನ್ನು ಭಯಭೀತರನ್ನಾಗಿ ಮಾಡುತ್ತಾರೆ ಮತ್ತು ಹಲವು ಸಂದರ್ಭಗಳಲ್ಲಿ ಅವರು ನಿಜಕ್ಕೂ ಹಾಗೆ ಮಾಡುತ್ತಾರೆ ಕೂಡ.

ರಸ್ತೆ ಅಪಘಾತಕ್ಕೆ ಒಳಗಾದ ಸಂತ್ರಸ್ತರಿಗೆ ಸಹಾಯ ಮಾಡಲು ಕೂಡ ಜನರು ಹಿಂಜರಿಯುವ ಉದಾಹರಣೆಗಳು ನಮ್ಮ ಮುಂದೆ ಸಾಕಷ್ಟಿರುತ್ತವೆ. ಯಾಕೆಂದರೆ ಪೊಲೀಸರು ವಿಚಾರಣೆ ನಡೆಸುವ ಸಂದರ್ಭದಲ್ಲಿ ಸಿಕ್ಕಿಹಾಕಿಕೊಳ್ಳುತ್ತೇವೆ ಎಂಬ ಆತಂಕ ಜನರಲ್ಲಿರುತ್ತದೆ. ಪರಿಸ್ಥಿತಿ ಹೀಗಿರುವಾಗ, ಯಾರಾದರೂ ನಿಮ್ಮ ಮೇಲೆ 'ಮಾದಕ ದ್ರವ್ಯ ಸಾಗಣೆ'ಯ ಆರೋಪ ಹೊರಿಸಿದಾಗ, ಆ ವ್ಯಕ್ತಿ ಗಾಬರಿಯಾಗುವುದು ಸಹಜ. ಬಂಧನಕ್ಕೆ ಒಳಗಾಗಿ ಜೈಲಿಗೆ ಹೋಗಬೇಕಾಗಬಹುದು ಎಂಬ ಆಲೋಚನೆಯೇ ಸಾಮಾನ್ಯ ಸಂತ್ರಸ್ತರಲ್ಲಿ ನಡುಕ ಹುಟ್ಟಿಸುತ್ತದೆ.

ಇದೆಲ್ಲವೂ ನಮ್ಮ ಕ್ರಿಮಿನಲ್ ನ್ಯಾಯಾಂಗ ವ್ಯವಸ್ಥೆಯ ಮೇಲಿರುವ ಭೀತಿ ಮತ್ತು ಅಪನಂಬಿಕೆಯನ್ನು ಸ್ಪಷ್ಟವಾಗಿ ಬಿಂಬಿಸುತ್ತದೆ. ಸಹಾಯ ಅಥವಾ ಪರಿಹಾರಕ್ಕಾಗಿ ಪೊಲೀಸರನ್ನು ಸಂಪರ್ಕಿಸಿದಾಗ, ಸಂತ್ರಸ್ತರಿಗೆ ನೆರವು ನೀಡಲು ಪೊಲೀಸರೇ ಹಣದ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪದ ನೂರಾರು ಪ್ರಕರಣಗಳು ಕೂಡ ವರದಿಯಾಗಿವೆ.

ರಕ್ಷಕರೇ ಪೀಡಕರಾದರೆ...

ಈ ವರ್ಷದ ಆರಂಭದಲ್ಲಿ ‘ದಿ ಪ್ರಿಂಟ್’ ಸುದ್ದಿ ಜಾಲತಾಣದಲ್ಲಿ ಸಂಸದ ಕಾರ್ತಿ ಚಿದಂಬರಂ ಅವರು ಬರೆದಿರುವಂತೆ—ಆಸ್ಪತ್ರೆಗಳು ಮತ್ತು ನ್ಯಾಯಾಲಯಗಳನ್ನು ಹೊರತುಪಡಿಸಿದರೆ, ರಕ್ಷಕರೇ ಪೀಡಕರಾಗಿ ಬದಲಾಗುವ ಸಾಧ್ಯತೆಯೇ ಪೊಲೀಸರಲ್ಲಿ ಕಂಡುಬರುತ್ತದೆ.

“ಈ ಹಿನ್ನೆಲೆಯಲ್ಲಿ, ಅಂತಹ ಸಂಸ್ಥೆಗಳೊಂದಿಗೆ ವ್ಯವಹರಿಸುವ ಕಷ್ಟದಾಯಕ ಸಂದರ್ಭಗಳಿಂದ ಪಾರಾಗುವುದು ಒಂದು ದೈವಿಕ ಆಶೀರ್ವಾದದಂತೆ ಭಾಸವಾಗಬಹುದು,” ಎಂದು ಅವರು ಹೇಳುತ್ತಾರೆ.

ಸಂತ್ರಸ್ತರಿಂದ ಹಣ ಸುಲಿಗೆ ಮಾಡುವುದು ಮತ್ತು ವ್ಯಕ್ತಿಯ ಅಸಹಾಯಕ ಸ್ಥಿತಿಯನ್ನು ಬಳಸಿಕೊಂಡು ಅಡ್ಡದಾರಿಯಲ್ಲಿ ಹಣ ಸಂಪಾದನೆ ಮಾಡುವ ಬಗ್ಗೆ ಪೊಲೀಸರ ವಿರುದ್ಧ ನಿರಂತರವಾಗಿ ವರದಿಗಳು ಪ್ರಕಟವಾಗುತ್ತಲೇ ಇರುತ್ತವೆ. ಎರಡು ತಿಂಗಳ ಹಿಂದೆ ಬೆಂಗಳೂರಿನಲ್ಲಿ, ವಲಸೆ ಕಾರ್ಮಿಕ ಮತ್ತು ಅವರ ಕುಟುಂಬದಿಂದ 75,000 ರೂ. ಸುಲಿಗೆ ಮಾಡಿದ್ದಾಗಿ ಸಹಾಯಕ ಸಬ್-ಇನ್ಸ್‌ಪೆಕ್ಟರ್ ಮತ್ತು ಪೆಟ್ರೋಲಿಂಗ್ ವಾಹನದ ಚಾಲಕನೊಬ್ಬ ಒಪ್ಪಿಕೊಂಡಿದ್ದನ್ನು ಇಲ್ಲಿ ಗಮನಿಸಬಹುದು.

ಕಸ್ಟಡಿಯಲ್ಲಿ ಚಿತ್ರಹಿಂಸೆ ಸರ್ವೇಸಾಮಾನ್ಯ

ಇಂತಹ ಘಟನೆಗಳು ಪೊಲೀಸ್ ಪಡೆಯ ಬಗ್ಗೆ ಜನರಲ್ಲಿರುವ ಸಾಮಾನ್ಯ ಕಲ್ಪನೆಗೆ ಹೊಂದಿಕೆಯಾಗುತ್ತದೆ. ಹಾಗಾಗಿ ಜನರು ಅವರಿಂದ ದೂರವೇ ಇರಲು ಬಯಸುವುದು ಸಹಜವೇ ಆಗಿದೆ. ಇದರ ಜೊತೆಗೆ, ಅಪರಾಧ ಶಂಕಿತರು ಪೊಲೀಸ್ ಕಸ್ಟಡಿಯಲ್ಲಿ ಇರುವಾಗಲೇ ಸಾವನ್ನಪ್ಪುತ್ತಿರುವ ಘಟನೆಗಳು ಪದೇಪದೇ ವರದಿಯಾಗುತ್ತಿರುತ್ತವೆ. ಇದನ್ನು ಎಂದಿಗೂ ಬಹಿರಂಗವಾಗಿ ಒಪ್ಪಿಕೊಳ್ಳದಿದ್ದರೂ, ಹೆಚ್ಚಿನ ಕಸ್ಟಡಿಯಲ್ಲಿ ಸಂಭವಿಸುವ ಸಾವುಗಳು ವಿಚಾರಣೆಯ ಸಮಯದಲ್ಲಿ ನೀಡಲಾಗುವ ಮೂರನೇ ದರ್ಜೆಯ ಹಿಂಸೆಯೇ ಕಾರಣ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿಯೇ ಆಗಿದೆ.

ಭಾರತೀಯ ಪೊಲೀಸರ ಈ ವರ್ಚಸ್ಸು ಈ ವರ್ಷದ ಫೆಬ್ರವರಿಯಲ್ಲಿ ಹಣ ವರ್ಗಾವಣೆ ಮತ್ತು ತೆರಿಗೆ ವಂಚನೆಯ ಆರೋಪ ಎದುರಿಸುತ್ತಿದ್ದ ಸಂಜಯ್ ಬಂಡಾರಿ ಎಂಬುವವರ ಹಸ್ತಾಂತರ ಪ್ರಕ್ರಿಯೆ ಸಂದರ್ಭದಲ್ಲಿ, ಲಂಡನ್ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯ ವೇಳೆ ಮತ್ತಷ್ಟು ಸ್ಪಷ್ಟವಾಯಿತು.

ಭಾರತದಲ್ಲಿ ಕಸ್ಟಡಿಯಲ್ಲಿ ಚಿತ್ರಹಿಂಸೆ ಸರ್ವೇಸಾಮಾನ್ಯವಾಗಿ ಹೋಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ಕೋರ್ಟ್, ಅವರನ್ನು ಭಾರತಕ್ಕೆ ಹಸ್ತಾಂತರಿಸಲು ನಿರಾಕರಿಸಿತು. ಆತನನ್ನು ಹಸ್ತಾಂತರಿಸುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂಬುದು ನ್ಯಾಯಾಲಯದ ಅಭಿಪ್ರಾಯವಾಗಿತ್ತು.

ಪೊಲೀಸರಿಗೆ ಯಾಕೆ ಶಿಕ್ಷೆಯಾಗುತ್ತಿಲ್ಲ?

ಸಾರ್ವಜನಿಕ ಹಿತಾಸಕ್ತಿ ಹೊಂದಿರುವ ಸಂಸ್ಥೆಗಳ ಒಕ್ಕೂಟವು ಪ್ರಕಟಿಸಿದ “ಭಾರತದಲ್ಲಿ ಪೊಲೀಸ್ ವರದಿಗಳ ಸ್ಥಿತಿಗತಿ 2025’ ಕುರಿತ ವರದಿಯು, ಚಿತ್ರಹಿಂಸೆ ವಿರುದ್ಧದ ರಾಷ್ಟ್ರೀಯ ಅಭಿಯಾನ ಕೈಗೊಂಡ 2020ರ ವರದಿಯನ್ನು ಉಲ್ಲೇಖಿಸಿದೆ. ಅದರ ಪ್ರಕಾರ, 2005 ರಿಂದ 2018ರ ವರೆಗಿನ 13 ವರ್ಷಗಳ ಅವಧಿಯಲ್ಲಿ ಪೊಲೀಸ್ ಕಸ್ಟಡಿಯಲ್ಲಿ ನಡೆದ 500 ಸಾವಿನ ಪ್ರಕರಣಗಳಲ್ಲಿ, 281 ಪ್ರಕರಣಗಳು ದಾಖಲಾಗಿ 54 ದೋಷಾರೋಪಪಟ್ಟಿ ಸಲ್ಲಿಕೆಯಾಗಿದ್ದರೂ ಒಬ್ಬನೇ ಒಬ್ಬ ಪೊಲೀಸ್ ಸಿಬ್ಬಂದಿಗೂ ಶಿಕ್ಷೆಯಾಗಿಲ್ಲ. ಪೊಲೀಸರ ಬಗ್ಗೆ ಜನರಿಗಿರುವ ಭಯವು ಕೇವಲ ಕಲ್ಪನೆಯಲ್ಲ, ಅದು ಅಂಕಿಅಂಶಗಳ ಆಧಾರಿತವಾದದ್ದು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಇದೇ ದೃಷ್ಟಿಕೋನವನ್ನು ಸೈಬರ್ ವಂಚಕರು ತಮ್ಮ ಲಾಭಕ್ಕಾಗಿ ಪೂರ್ಣಪ್ರಮಾಣದಲ್ಲಿ ಬಳಸಿಕೊಳ್ಳುತ್ತಿದ್ದಾರೆ.

ಇದಲ್ಲದೆ, ಇತ್ತೀಚಿನ ವರ್ಷಗಳಲ್ಲಿ 'ಅನನುಕೂಲ' ಸುದ್ದಿಗಳ ಪ್ರಕಟಣೆಗಾಗಿ ಪತ್ರಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸುತ್ತಿರುವುದು ಸಾಮಾನ್ಯವಾಗಿದೆ. ಹೀಗಾಗಿಯೇ, ಸಹೋದ್ಯೋಗಿ ಪತ್ರಕರ್ತರೊಬ್ಬರಿಗೆ ಡಿಜಿಟಲ್ ಬಂಧನದ ಬೆದರಿಕೆ ಕರೆ ಬಂದಾಗ ಅವರು ಬೆಚ್ಚಿಬಿದ್ದರು. ರಾಜಕೀಯ ಕ್ಷೇತ್ರದಲ್ಲಿ ಅತ್ಯುತ್ತಮ ಕೆಲಸಮಾಡಿ ಪಳಗಿದ್ದ ಇವರು, ಈ ವಂಚನೆಯ ಜಾಲಕ್ಕೆ ಸುಲಭವಾಗಿ ಬಲಿಯಾದರು. ಅದೃಷ್ಟವಶಾತ್, ಮತ್ತೊಬ್ಬ ಸಹೋದ್ಯೋಗಿಯ ಸಕಾಲಿಕ ಮಧ್ಯಸ್ಥಿಕೆಯಿಂದಾಗಿ ಅವರು ಯಾವುದೇ ಆರ್ಥಿಕ ನಷ್ಟವಿಲ್ಲದೆ ಪಾರಾಗಿದ್ದರು.

ವಂಚನೆ ಜಾಲದಿಂದ ಕೂದಲೆಳೆ ಅಂತರದಲ್ಲಿ ಪಾರಾದ ಆ ಪತ್ರಕರ್ತರು ನಂತರ ಹೇಳಿದ್ದೇನೆಂದರೆ—ಇತ್ತೀಚಿನ ದಿನಗಳಲ್ಲಿ ಪತ್ರಕರ್ತರನ್ನು ಕ್ಷುಲ್ಲಕ ಕಾರಣಗಳಿಗಾಗಿ ಬಂಧಿಸುತ್ತಿರುವ ಕಾರಣದಿಂದಾಗಿ, ತಾನು ಕೂಡ ಅದೇ ರೀತಿಯಲ್ಲಿ ಟಾರ್ಗೆಟ್ ಆಗಿದ್ದೇನೆ ಎಂದು ಅವರು ಭಾವಿಸಿದ್ದರು.

ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಇತರ ಅನೇಕ ಸಂತ್ರಸ್ತರಂತೆ ಅವರು ಕೂಡ ಪೊಲೀಸರ ಬಗ್ಗೆ ಮತ್ತು ನಾಗರಿಕರನ್ನು ಬಂಧಿಸುವಾಗ ಪೊಲೀಸರು ಬಳಸುವ ಸಂಶಯಾಸ್ಪದ ಪ್ರಕ್ರಿಯೆಗಳ ಬಗ್ಗೆ ಭಯಗೊಂಡಿದ್ದರು.

ಜನಸ್ನೇಹಿ ಆಗದ ಠಾಣೆಗಳು

ಭಾರತದಲ್ಲಿ, ಚರಿತ್ರೆಯ ಉದ್ದಕ್ಕೂ ಪೊಲೀಸರು ಮತ್ತು ಸಾಮಾನ್ಯ ಜನರು ಪರಸ್ಪರ ವಿರುದ್ಧ ಧ್ರುವಗಳಲ್ಲಿ ಗುರುತಿಸಿಕೊಂಡಿದ್ದಾರೆ. ಪೊಲೀಸ್ ಪಡೆಯನ್ನು ಜನಸ್ನೇಹಿಯನ್ನಾಗಿ ಮಾಡಲು ಮತ್ತು ಪೊಲೀಸ್ ಠಾಣೆಗಳನ್ನು ಜನರು ಸ್ವಾಗತಿಸುವಂತಹ ಸ್ಥಳಗಳನ್ನಾಗಿ ಮಾಡಲು ಅರೆಮನಸ್ಸಿನಿಂದ ಅನೇಕ ಪ್ರಯತ್ನಗಳು ನಡೆದಿದ್ದರೂ, ಅವುಗಳಲ್ಲಿ ಯಾವುದೂ ಯಶಸ್ವಿಯಾಗಿಲ್ಲ.

ವಿಶ್ಲೇಷಕರು ಹೇಳುವ ಮಾತಿನ ಪ್ರಕಾರ, ವಸಾಹತುಶಾಹಿ ಕಾಲದ 1861ರ ಕಾಯ್ದೆಯಡಿ ಪೊಲೀಸರಿಗೆ ಸಾಮಾನ್ಯ ನಾಗರಿಕರಿಗೆ ಜವಾಬ್ದಾರರಾಗಿರುವ ಬದಲು ಜನರನ್ನು ನಿಯಂತ್ರಿಸಲು ಮತ್ತು ದಮನ ಮಾಡಲು ಕಲಿಸಲಾಗಿತ್ತು. ಸ್ವಾತಂತ್ರ್ಯೋತ್ತರ ಭಾರತದ ಆಡಳಿತಗಾರರಿಗೂ ಇದು ಅನುಕೂಲಕರವಾಗಿ ಕಂಡುಬಂದಿದ್ದರಿಂದ, ಈ ಪದ್ಧತಿಯು ಇಂದಿಗೂ ಮುಂದುವರಿಯುತ್ತಿದೆ.

ಪೊಲೀಸ್ ವ್ಯವಸ್ಥೆಯನ್ನು ಹೊಣೆಗಾರರನ್ನಾಗಿ ಮಾಡಲು ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕೆಂದು ಸುಪ್ರೀಂಕೋರ್ಟ್ ನೀಡಿದ್ದ ಆದೇಶವು ನಿಷ್ಪ್ರಯೋಜಕವಾಗಿದೆ. ಕೆಲವು ಕಡೆ ಸಿಸಿಟಿವಿಗಳನ್ನು ಅಳವಡಿಸಿಯೇ ಇಲ್ಲ, ಅಳವಡಿಸಿದ್ದರೂ ಅವುಗಳಲ್ಲಿ ಕೆಲವು ಮಾತ್ರ ಕೆಲಸಮಾಡುವ ಸ್ಥಿತಿಯಲ್ಲಿವೆ.

ಪಾಲನೆಯಾಗದ ಸುಪ್ರೀಂ ಕೋರ್ಟ್ ಆದೇಶ

ಕಳೆದ ಸೆಪ್ಟೆಂಬರ್‌ನಲ್ಲಿ, ಸುಪ್ರೀಂಕೋರ್ಟ್ ಆದೇಶವನ್ನು ಜಾರಿಗೆ ತರಲು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. 2025ರ ಮೊದಲ ಎಂಟು ತಿಂಗಳಲ್ಲಿ ರಾಜಸ್ಥಾನದಲ್ಲಿ 11 ಜನ ಪೊಲೀಸ್ ಕಸ್ಟಡಿಯಲ್ಲಿ ಇದ್ದಾಗ ಸಾವನ್ನಪ್ಪಿದ್ದಾರೆ ಎಂಬ ಮಾಧ್ಯಮ ವರದಿಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಪ್ರಕರಣಗಳಲ್ಲಿ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಒದಗಿಸಿರಲಿಲ್ಲ.

ಸಿಸಿಟಿವಿ ಅಳವಡಿಸಬೇಕೆಂಬ ನ್ಯಾಯಾಲಯದ ಆದೇಶವು ಈಗಲಾದರೂ ಪಾಲನೆಯಾಗುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ. ಒಂದು ವೇಳೆ ಈ ಆದೇಶ ಜಾರಿಯಾಗದೇ ಇದ್ದರೂ ಅಚ್ಚರಿಪಡಬೇಕಾಗಿಲ್ಲ.

ಕೆಲವು ಪ್ರಕರಣಗಳಲ್ಲಿ ವಂಚನೆಗೆ ಒಳಗಾದ ಹಣವನ್ನು ಮರಳಿ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ, ಆದರೆ ಇದು ಕೆಲವೇ ಕೆಲವು ಅಪವಾದವಷ್ಟೇ ಹೊರತು ನಿಯಮವಲ್ಲ. ಬ್ಯಾಂಕ್ ಖಾತೆ ತೆರೆಯುವುದು, ಕೆವೈಸಿ ಮತ್ತು ಇತರ ವಿಷಯಗಳ ಬಗ್ಗೆ ಆರ್‌ಬಿಐ ಕಟ್ಟುನಿಟ್ಟಿನ ನಿಯಮಗಳನ್ನು ಹೊಂದಿದ್ದರೂ, ವಂಚಕರು 'ಮ್ಯೂಲ್ ಅಕೌಂಟ್' (Mule accounts) ಎಂದು ಕರೆಯಲಾಗುವ ಖಾತೆಗಳನ್ನು ಸುಲಭವಾಗಿ ತೆರೆಯುತ್ತಿದ್ದಾರೆ. ನಿಯಮಗಳು ಮತ್ತು ಕಾನೂನು ಕೇವಲ ಕಾಗದದ ಮೇಲಷ್ಟೇ ಉಳಿದಿವೆ. ಪ್ರಾಯೋಗಿಕವಾಗಿ ಹೇಳುವುದಾದರೆ, ಹೊರಗಿನ ಪರಿಸ್ಥಿತಿ ತೀರಾ ಅರಾಜಕತೆಯಿಂದ ಕೂಡಿದೆ ಎಂಬುದು ದಿಟ.

ಈ ವರ್ಷದ ಆರಂಭದಲ್ಲಿ, ಸಿಬಿಐ ಉತ್ತರ ಭಾರತದ ರಾಜ್ಯಗಳಾದ್ಯಂತ 42 ಸ್ಥಳಗಳ ಮೇಲೆ ದಾಳಿ ನಡೆಸಿದಾಗ, ನಾನಾ ಬ್ಯಾಂಕುಗಳ 700 ಶಾಖೆಗಳಲ್ಲಿ ಸುಮಾರು 8.5 ಲಕ್ಷ ಇಂತಹ ಮ್ಯೂಲ್ ಅಕೌಂಟ್‌ಗಳು ಪತ್ತೆಯಾಗಿವೆ. ಸಂತ್ರಸ್ತರಿಂದ ಲೂಟಿ ಮಾಡಿದ ಸೈಬರ್ ವಂಚನೆಯ ಹಣವನ್ನು ವರ್ಗಾಯಿಸಲು ಈ ಖಾತೆಗಳನ್ನು ಬಳಸುವುದರಿಂದ ಇವುಗಳನ್ನು 'ಮ್ಯೂಲ್ ಅಕೌಂಟ್' ಎಂದು ಕರೆಯಲಾಗುತ್ತದೆ.

'ಡಿಜಿಟಲ್ ಬಂಧನ' ಯಶಸ್ಸಿಗೆ ಕಾರಣ

ಅಪರಾಧ ನ್ಯಾಯಾಂಗ ವ್ಯವಸ್ಥೆಯ ದೌರ್ಬಲ್ಯಗಳು, ಬ್ಯಾಂಕಿಂಗ್ ವಲಯದ ಲೋಪದೋಷಗಳು ಮತ್ತು ಪರಿಣಾಮಕಾರಿಯಲ್ಲದ ಆಡಳಿತದ ಹೊರತಾಗಿಯೂ, ಒಂದು ವಿಷಯವನ್ನು ನೆನಪಿಡಬೇಕು: ಉದ್ದೇಶಿತ ಸಂತ್ರಸ್ತರು ವಂಚಕರಿಗೆ ಸಹಕರಿಸಿದರೆ ಮಾತ್ರ 'ಡಿಜಿಟಲ್ ಬಂಧನ' ಯಶಸ್ವಿಯಾಗಲು ಸಾಧ್ಯ.

ಬಹುತೇಕ ಸಂದರ್ಭಗಳಲ್ಲಿ, ಖಾತೆದಾರನನ್ನು ಹೊರತುಪಡಿಸಿ ಬೇರೆ ಯಾರೂ ದೊಡ್ಡ ಮೊತ್ತದ ಹಣವನ್ನು ವರ್ಗಾಯಿಸಲು ಸಾಧ್ಯವಿಲ್ಲ.

ಲಕ್ಷಾಂತರ ಅಥವಾ ಕೋಟಿಗಟ್ಟಳೆ ರೂಪಾಯಿ ಹಸ್ತಾಂತರಿಸುವಂತೆ ಕೇಳಿದಾಗಲೂ, ಸಂತ್ರಸ್ತನ ಮೆದುಳಿನಲ್ಲಿ ಯಾವುದೇ ಅಪಾಯದ ಮುನ್ಸೂಚನೆ ಮೂಡುವುದಿಲ್ಲ ಎಂಬುದು ಆತನ/ಆಕೆಯ ವಿಶೇಷ ಮನಸ್ಥಿತಿಗೆ ದ್ಯೋತಕ. ಇದರ ಬಗ್ಗೆ ವಿವರವಾದ ಮಾನಸಿಕ ಅಧ್ಯಯನದ ಅಗತ್ಯವಿದೆ.

ಸದ್ಯಕ್ಕಂತೂ ಟಿವಿ, ಮೊಬೈಲ್ ಫೋನ್ ಅಥವಾ ಇನ್ನಾವುದೇ ಮಾಧ್ಯಮಗಳ ಮೂಲಕ ಡಿಜಿಟಲ್ ಬಂಧನದ ಬಗ್ಗೆ ಎಷ್ಟೇ ಮಾಹಿತಿ ನೀಡಿದರೂ ಅದು ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡುತ್ತಿಲ್ಲ ಎಂಬುದು ಮಾತ್ರ ನಿಜ.

ನೀತಿ ನಿರೂಪಣೆ ವ್ಯವಸ್ಥೆಯಲ್ಲಿ ಸುಧಾರಣೆಯಾಗದ ಹೊರತು ಮತ್ತು ಪೊಲೀಸ್ ಪಡೆಯು ನಿಜವಾದ ಅರ್ಥದಲ್ಲಿ 'ಜನಸ್ನೇಹಿ'ಯಾಗಿ ಬದಲಾಗದ ಹೊರತು, ಈ ವಂಚನೆಗಳು ನಿರಾತಂಕವಾಗಿ ಮುಂದುವರಿಯುತ್ತಲೇ ಇರುತ್ತವೆ ಮತ್ತು ಇನ್ನೂಅನೇಕ ವ್ಯಕ್ತಿಗಳು ಇದರ ಜಾಲಕ್ಕೆ ಬಲಿಯಾಗುವುದು ತಪ್ಪುವುದಿಲ್ಲ.

 

Tags:    

Similar News