ಬಾಂಗ್ಲಾದ ವಿರುದ್ಧ ಭುಗಿಲೆದ್ಧ ಆಕ್ರೋಶ; ರಾಯಭಾರ ಕಚೇರಿಗೆ ವಿಎಚ್‌ಪಿ, ಬಜರಂಗದಳ ಮುತ್ತಿಗೆ
ಬಾಂಗ್ಲಾದೇಶದಲ್ಲಿ ಹಿಂದೂ ವ್ಯಕ್ತಿ ದೀಪು ಚಂದ್ರ ದಾಸ್ ಅವರ ಬರ್ಬರ ಹತ್ಯೆಯನ್ನು ಖಂಡಿಸಿ ದೆಹಲಿಯಲ್ಲಿರುವ ಬಾಂಗ್ಲಾದೇಶ ಹೈಕಮಿಷನ್ ಮುಂದೆ ಬೃಹತ್ ಪ್ರತಿಭಟನೆ ನಡೆದಿದೆ.
ಬಾಂಗ್ಲಾದೇಶದ ಮೈಮೆನ್‌ಸಿಂಗ್‌ನಲ್ಲಿ ಹಿಂದೂ ವ್ಯಕ್ತಿ ದೀಪು ಚಂದ್ರ ದಾಸ್ ಅವರನ್ನು ಇಸ್ಲಾಮಿಸ್ಟ್ ಗುಂಪೊಂದು ಬರ್ಬರವಾಗಿ ಹತ್ಯೆ ಮಾಡಿದ ಘಟನೆಯನ್ನು ಖಂಡಿಸಿ, ನವದೆಹಲಿಯಲ್ಲಿರುವ ಬಾಂಗ್ಲಾದೇಶ ಹೈಕಮಿಷನ್ ಮುಂದೆ ಭಾರಿ ಪ್ರತಿಭಟನೆ ಭುಗಿಲೆದ್ದಿದೆ. ವಿಶ್ವ ಹಿಂದೂ ಪರಿಷತ್ (VHP) ಮತ್ತು ಬಜರಂಗದಳದ ನೇತೃತ್ವದಲ್ಲಿ ನೂರಾರು ಪ್ರತಿಭಟನಾಕಾರರು ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿ ಬೀದಿಗಿಳಿದಿದ್ದಾರೆ.
ಬ್ಯಾರಿಕೇಡ್‌ಗಳನ್ನು ನೂಕಿದ ಪ್ರತಿಭಟನಾಕಾರರು
ಪರಿಸ್ಥಿತಿಯ ಗಂಭೀರತೆಯನ್ನು ಅರಿತ ದೆಹಲಿ ಪೊಲೀಸರು ಹೈಕಮಿಷನ್ ಸುತ್ತಲೂ ಬಿಗಿ ಭದ್ರತೆ ಏರ್ಪಡಿಸಿದ್ದರು. ಮೂರು ಹಂತದ ಬ್ಯಾರಿಕೇಡ್‌ಗಳನ್ನು ಹಾಕಲಾಗಿದ್ದರೂ, ಆಕ್ರೋಶಗೊಂಡ ಪ್ರತಿಭಟನಾಕಾರರು ಎರಡು ಹಂತದ ಬ್ಯಾರಿಕೇಡ್‌ಗಳನ್ನು ದಾಟಿ ಮುನ್ನುಗ್ಗಲು ಯತ್ನಿಸಿದರು. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸ್ ಮತ್ತು ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ದೀಪು ದಾಸ್‌ಗೆ ನ್ಯಾಯ ಒದಗಿಸಬೇಕು ಮತ್ತು ಹಿಂದೂಗಳ ರಕ್ಷಣೆ ಮಾಡಬೇಕು ಎಂದು ಘೋಷಣೆಗಳನ್ನು ಕೂಗಲಾಯಿತು.
ಏನಿದು ದೀಪು ದಾಸ್ ಹತ್ಯೆ ಪ್ರಕರಣ?
25 ವರ್ಷದ ಗಾರ್ಮೆಂಟ್ ಕಾರ್ಖಾನೆ ಕಾರ್ಮಿಕ ದೀಪು ಚಂದ್ರ ದಾಸ್ ಅವರನ್ನು ಡಿಸೆಂಬರ್ 19 ರಂದು ಮೈಮೆನ್‌ಸಿಂಗ್‌ನ ಬಾಲುಕಾದಲ್ಲಿ ಧರ್ಮನಿಂದನೆಯ ಆರೋಪದ ಮೇಲೆ ಗುಂಪೊಂದು ಬರ್ಬರವಾಗಿ ಹೊಡೆದು ಕೊಂದಿತ್ತು. ಅಷ್ಟೇ ಅಲ್ಲದೆ, ಅವರ ದೇಹಕ್ಕೆ ಬೆಂಕಿ ಹಚ್ಚಿ ವಿಕೃತಿ ಮೆರೆಯಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶ ಪೊಲೀಸರು ಈವರೆಗೆ 12 ಜನರನ್ನು ಬಂಧಿಸಿದ್ದಾರೆ.
ಭಾರತದ ರಾಯಭಾರಿಗೆ ಬಾಂಗ್ಲಾ ಸಮನ್ಸ್
ಇತ್ತೀಚೆಗೆ ಭಾರತದಲ್ಲಿನ ತನ್ನ ರಾಯಭಾರ ಕಚೇರಿಗಳ ಮೇಲೆ ನಡೆದ ಪ್ರತಿಭಟನೆ ಮತ್ತು ದಾಳಿಗಳ ಬಗ್ಗೆ ಬಾಂಗ್ಲಾದೇಶ ಕಳವಳ ವ್ಯಕ್ತಪಡಿಸಿದೆ. ದೆಹಲಿ ಮತ್ತು ಸಿಲಿಗುರಿಯಲ್ಲಿ ನಡೆದ ಘಟನೆಗಳಿಗೆ ಸಂಬಂಧಿಸಿದಂತೆ ಬಾಂಗ್ಲಾದೇಶ ಸರ್ಕಾರವು ಭಾರತದ ಹೈಕಮಿಷನರ್ ಅವರಿಗೆ ಸಮನ್ಸ್ ನೀಡಿದೆ. ರಾಯಭಾರ ಕಚೇರಿಗಳ ರಕ್ಷಣೆ ಮಾಡುವುದು ಭಾರತದ ಜವಾಬ್ದಾರಿ ಎಂದು ಬಾಂಗ್ಲಾದೇಶ ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ವೀಸಾ ಸೇವೆ ಸ್ಥಗಿತ; ರಾಯಭಾರ ಕಚೇರಿ ಬಂದ್!
ಕಳೆದ ಕೆಲವು ದಿನಗಳಿಂದ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರ, ಗಲಭೆಯ ಬಿಸಿ ಭಾರತಕ್ಕೂ ತಟ್ಟಿದೆ. ಶೇಖ್ ಹಸೀನಾ ಪಲಾಯಣದ ಬಳಿಕ ಹದಗೆಟ್ಟಿದ್ದ ಭಾರತ-ಬಾಂಗ್ಲಾದೇಶದ ಸಂಬಂಧ ಇದೀಗ ಮತ್ತಷ್ಟು ಬಿಗಡಾಯಿಸಿದೆ. ಉಭಯ ರಾಷ್ಟ್ರಗಳ ನಡುವಿನ ಸಂಬಂಧವು ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ಈಗ ಬಾಂಗ್ಲಾದೇಶವು ದೆಹಲಿಯಲ್ಲಿರುವ ತನ್ನ ಹೈಕಮಿಷನ್ ಮತ್ತು ತ್ರಿಪುರಾದಲ್ಲಿರುವ ಮಿಷನ್‌ನಲ್ಲಿ ವೀಸಾ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.