ಪ್ರಿಯಕರನ ಜೊತೆಗೂಡಿ ಪತಿಯ ಹತ್ಯೆ; ವುಡ್ ಗ್ರೈಂಡರ್‌ನಲ್ಲಿ ದೇಹವನ್ನು ಕತ್ತರಿಸಿದ ಹಂತಕರು
ಉತ್ತರ ಪ್ರದೇಶದ ಚಂದೌಸಿಯಲ್ಲಿ ಪತಿಯನ್ನು ಕೊಂದು ಶವವನ್ನು ಗ್ರೈಂಡರ್‌ನಲ್ಲಿ ತುಂಡರಿಸಿದ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನು ಬರ್ಬರವಾಗಿ ಹತ್ಯೆ ಮಾಡಿ, ಸಾಕ್ಷ್ಯ ನಾಶಪಡಿಸಲು ಶವವನ್ನು ವುಡ್ ಗ್ರೈಂಡರ್‌ನಲ್ಲಿ (ಮರ ಕತ್ತರಿಸುವ ಯಂತ್ರ) ತುಂಡರಿಸಿದ ಬೆಚ್ಚಿಬೀಳಿಸುವ ಘಟನೆ ಉತ್ತರ ಪ್ರದೇಶದ ಚಂದೌಸಿಯಲ್ಲಿ ನಡೆದಿದೆ. ಈ ಸಂಬಂಧ ಪತ್ನಿ ರೂಬಿ ಮತ್ತು ಆಕೆಯ ಪ್ರಿಯಕರ ಗೌರವ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯ ಹಿನ್ನೆಲೆ
ನವೆಂಬರ್ 18 ರಂದು ಚಂದೌಸಿಯ ಮೊಹಲ್ಲಾ ಚುನ್ನಿ ನಿವಾಸಿ ರೂಬಿ, ತನ್ನ ಪತಿ ರಾಹುಲ್ (38) ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಿದ್ದಳು. ಆದರೆ ಡಿಸೆಂಬರ್ 15 ರಂದು ಈದ್ಗಾ ಪ್ರದೇಶದ ಚರಂಡಿಯೊಂದರಲ್ಲಿ ತಲೆ, ಕೈ ಮತ್ತು ಕಾಲುಗಳಿಲ್ಲದ ವಿರೂಪಗೊಂಡ ಶವ ಪತ್ತೆಯಾದಾಗ ಪೊಲೀಸರಿಗೆ ಅನುಮಾನ ಶುರುವಾಯಿತು.
ತನಿಖೆಯಲ್ಲಿ ಬಯಲಾದ ಸತ್ಯ
ಪತ್ತೆಯಾದ ಶವದ ಮೇಲೆ 'ರಾಹುಲ್' ಎಂಬ ಹೆಸರು ಬರೆದಿರುವುದನ್ನು ಪೊಲೀಸರು ಗಮನಿಸಿದರು. ತಾಂತ್ರಿಕ ವಿಶ್ಲೇಷಣೆಯ ವೇಳೆ ರಾಹುಲ್ ಮೊಬೈಲ್ ಫೋನ್ ನವೆಂಬರ್ 18 ರಿಂದಲೇ ಸ್ವಿಚ್ ಆಫ್ ಆಗಿರುವುದು ಪತ್ತೆಯಾಯಿತು. ಪತ್ನಿ ರೂಬಿಯನ್ನು ವಿಚಾರಣೆಗೆ ಒಳಪಡಿಸಿದಾಗ, ಅಕ್ರಮ ಸಂಬಂಧದ ವಿಚಾರದಲ್ಲಿ ಪತಿ ತಮ್ಮನ್ನು ಹಿಡಿದಿದ್ದಕ್ಕೆ ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾಳೆ.
ಕೃತ್ಯದ ಭಯಾನಕತೆ
ಆರೋಪಿಗಳು ರಾಹುಲ್ ಮೇಲೆ ಕಬ್ಬಿಣದ ರಾಡ್ ಮತ್ತು ಒನಕೆಯಿಂದ ಹಲ್ಲೆ ನಡೆಸಿ ಸ್ಥಳದಲ್ಲೇ ಕೊಂದಿದ್ದರು. ನಂತರ ಮರ ಕತ್ತರಿಸುವ ಗ್ರೈಂಡರ್ ತಂದು ಶವವನ್ನು ಹಲವು ಭಾಗಗಳಾಗಿ ತುಂಡರಿಸಿದ್ದರು. ದೇಹದ ಒಂದು ಭಾಗವನ್ನು ಚರಂಡಿಗೆ ಎಸೆದಿದ್ದರೆ, ಉಳಿದ ಭಾಗಗಳನ್ನು ರಾಜ್‌ಘಾಟ್‌ನ ಗಂಗಾ ನದಿಗೆ ಎಸೆದಿದ್ದರು.
ಪೊಲೀಸರು ಹತ್ಯೆಗೆ ಬಳಸಿದ ಗ್ರೈಂಡರ್, ಕಬ್ಬಿಣದ ಸುತ್ತಿಗೆ ಮತ್ತು ಇತರ ಆಯುಧಗಳನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಶವದ ಡಿಎನ್ಎ (DNA) ಮಾದರಿಗಳನ್ನು ರಾಹುಲ್ ಮಕ್ಕಳೊಂದಿಗೆ ಹೋಲಿಕೆ ಮಾಡಿ ಪಕ್ಕಾ ವರದಿ ಪಡೆಯಲು ಪೊಲೀಸರು ಮುಂದಾಗಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ (BNS) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಜೈಲಿಗಟ್ಟಲಾಗಿದೆ.
ದೆಹಲಿಯಲ್ಲೂ ನಡೆದಿತ್ತು ಇಂತಹದ್ದೇ ಘಟನೆ
ದೆಹಲಿಯ ಪಾಂಡವ ನಗರದಲ್ಲಿ ಕಳೆದ ವರ್ಷ ನಡೆದ ಮುಸ್ಕಾನ್ ಪ್ರಕರಣವು ದೇಶವನ್ನೇ ಬೆಚ್ಚಿಬೀಳಿಸಿದೆ. ಅಕ್ರಅಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪತ್ನಿಯೇ ಬರ್ಬರವಾಗಿ ಹತ್ಯೆ ಮಾಡಿ, ನಂತರ ಆತನ ದೇಹವವನ್ನು ಕತ್ತರಿಸಿ ನೀಲಿ ಡ್ರಂನಲ್ಲಿ ತುಂಬಿ ಸಿಮೆಂಟ್ ಹಾಕಿ ಮುಚ್ಚಿದ್ದಳು. ಈ ಕೃತ್ಯಕ್ಕೆ ಆಕೆಯ ಪ್ರಿಯಕರನೂ ಸಾಥ್ ಕೊಟ್ಟಿದ್ದ.
ಪತಿಯನ್ನು ಕೊಂದ ನಂತರ ಸಾಕ್ಷ್ಯಗಳನ್ನು ಮರೆಮಾಚಲು ಮುಸ್ಕಾನ್ ಮತ್ತು ಆಕೆಯ ಪ್ರಿಯಕರ ಶವವನ್ನು ತುಂಡು ತುಂಡಾಗಿ ಕತ್ತರಿಸಿದ್ದರು. ಅಷ್ಟೇ ಅಲ್ಲದೆ, ವಾಸನೆ ಬರದಂತೆ ತಡೆಯಲು ಶವದ ಕೆಲವು ಭಾಗಗಳನ್ನು ಫ್ರಿಜ್‌ನಲ್ಲಿ ಸಂಗ್ರಹಿಸಿಟ್ಟಿದ್ದರು ಎನ್ನಲಾಗಿದೆ. ಪ್ರತಿದಿನ ರಾತ್ರಿ ಈ ದೇಹದ ಭಾಗಗಳನ್ನು ನಿರ್ಜನ ಪ್ರದೇಶಗಳಲ್ಲಿ ಎಸೆಯುತ್ತಿದ್ದರು.