ಉದ್ಯೋಗಾಕಾಂಕ್ಷಿಗಳೇ ಗಮನಿಸಿ; ರೈಲ್ವೆಯಲ್ಲಿ 22,000 ಹುದ್ದೆಗಳಿಗೆ ನೇಮಕ; ಕನ್ನಡದಲ್ಲೂ ಪರೀಕ್ಷೆ!
ಆರ್‌ಆರ್‌ಬಿ 2026 ರಲ್ಲಿ ಅಧಿಸೂಚನೆ ಹೊರಡಿಸಲು ಸಿದ್ದತೆ ನಡೆಸಿದ್ದು, ರೈಲ್ವೆ ಇಲಾಖೆ ಸೇರಬೇಕೆಂಬ ಕನಸನ್ನು ಹೊಂದಿರುವ ಲಕ್ಷಾಂತರ ಅಭ್ಯರ್ಥಿಗಳಿಗೆ ಇದರಿಂದ ಅನುಕೂಲವಾಗಲಿದೆ.
ಎಐ ಆಧಾರಿತ ಚಿತ್ರ
ರೈಲ್ವೆ ಸಚಿವಾಲಯವು 22,000 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲು ರೈಲ್ವೆ ನೇಮಕ ಮಂಡಳಿಗೆ ಅನುಮೋದನೆ ನೀಡಿದ್ದು, ಶೀಘ್ರವೇ ಆರ್‌ಆರ್‌ಬಿ ಬೃಹತ್ ನೇಮಕಾತಿಗೆ ಅಧಿಸೂಚನೆ ಹೊರಡಿಸಲಿದ್ದು, ಹೊಸ ವರ್ಷಕ್ಕೆ ಉದ್ಯೋಗಾಂಕ್ಷಿಗಳಿಗೆ ಸಿಹಿ ಸುದ್ದಿ ನೀಡಿದೆ. ಈ ಪರೀಕ್ಷೆಗಳು ಇಂಗ್ಲೀಷ್, ಹಿಂದಿ ಹಾಗೂ ಕನ್ನಡ ಸೇರಿದಂತೆ 12 ಪ್ರಾದೇಶಿಕ ಭಾಷೆಯಲ್ಲಿಯೂ ಪರೀಕ್ಷೆ ಬರೆಯಬಹುದಾಗಿದೆ.
ಆರ್‌ಆರ್‌ಬಿ 2026 ರಲ್ಲಿ ಅಧಿಸೂಚನೆ ಹೊರಡಿಸಲು ಸಿದ್ದತೆ ನಡೆಸಿದ್ದು, ರೈಲ್ವೆ ಇಲಾಖೆ ಸೇರಬೇಕೆಂಬ ಕನಸನ್ನು ಹೊಂದಿರುವ ಲಕ್ಷಾಂತರ ಅಭ್ಯರ್ಥಿಗಳಿಗೆ ಇದರಿಂದ ಅನುಕೂಲವಾಗಲಿದ್ದು, ರೈಲ್ವೆ ಮಂಡಳಿಯು ಡಿಸೆಂಬರ್ 12 ರಂದು ಎಲ್ಲಾ ರೈಲ್ವೆ ವಲಯಗಳಿಗೆ ಅನುಮೋದನೆ ಪತ್ರವನ್ನು ನೀಡಿದೆ.
ಯಾವ್ಯಾವ ಹುದ್ದೆಗಳಿಗೆ ಅನುಮೋದನೆ ?
ಈ ಬೃಹತ್ ನೇಮಕಾತಿ ಅಧಿಸೂಚನೆಯಲ್ಲಿ ಟ್ರ್ಯಾಕ್ ಮೇಂಟೇನರ್ ಗ್ರೇಡ್ -4, ಅಸಿಸ್ಟೆಂಟ್ ಪಾಯಿಂಟ್ಸ್‌ಮನ್ ಮತ್ತು ವಿವಿಧ ತಾಂತ್ರಿಕ ಸಹಾಯಕ ಹುದ್ದೆಗಳು ಸೇರಿದಂತೆ ಒಟ್ಟು 11 ವಿವಿಧ ವಿಭಾಗಗಳಲ್ಲಿ 22,000 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗುತ್ತದೆ.
ಅರ್ಹತೆ ಮತ್ತು ವಯೋಮಿತಿ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಅಥವಾ ಅದಕ್ಕೆ ಸಮಾನವಾದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. 10ನೇ ತರಗತಿ ಜೊತೆಗೆ NCVT ನೀಡಿದ ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಪ್ರಮಾಣಪತ್ರ (NAC) ಅಥವಾ ಮಾನ್ಯತೆ ಪಡೆದ ಸಂಸ್ಥೆಗಳಿಂದ 10ನೇ ತರಗತಿ ಜೊತೆಗೆ ಐಟಿಐ ಪೂರೈಸಿದವರು ಅರ್ಜಿ ಸಲ್ಲಿಸಬಹುದು. ಕನಿಷ್ಠ 18 ವರ್ಷ ವಯಸ್ಸು, ಗರಿಷ್ಠ 33 ವರ್ಷ ವಯೋಮಿತಿ ನಿಗದಿಪಡಿಸಿದ್ದು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಐದು ವರ್ಷ, ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಮೂರು ವರ್ಷ ವಯೋಮಿತಿ ಸಡಿಲಿಕೆ ಇದೆ.
ಕೇಂದ್ರ ರೈಲ್ವೆ, ಉತ್ತರ ರೈಲ್ವೆ, ಪಶ್ಚಿಮ ರೈಲ್ವೆ ಸೇರಿದಂತೆ ವಿವಿಧ ವಲಯಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಶೀಘ್ರವೇ ಅಧಿಸೂಚನೆ ಹೊರಡಿಸಲಾಗುವುದು ಎಂದು ಆರ್‌ಆರ್‌ಬಿ ತಿಳಿಸಿದೆ.
ವೈದ್ಯಕೀಯ ಮಾನದಂಡಗಳು
ಅಭ್ಯರ್ಥಿಗಳು ಕರ್ತವ್ಯಗಳನ್ನು ನಿರ್ವಹಿಸಲು ವೈದ್ಯಕೀಯವಾಗಿ ಸದೃಢರಾಗಿರಬೇಕು. ದೃಷ್ಟಿ ತೀಕ್ಷ್ಣತೆ ಹೊಂದಿರಬೇಕು (ಉದಾ: ಟ್ರ್ಯಾಕ್ ನಿರ್ವಹಣೆ ಮಾಡುವವರಿಗೆ ಹೆಚ್ಚಿನ ದೃಷ್ಟಿ ಮಾನದಂಡಗಳು ಬೇಕಾಗುತ್ತವೆ).
ಸಂಬಳ ಮತ್ತು ಪ್ರಯೋಜನಗಳು
ಆಯ್ಕೆಯಾದ ಅಭ್ಯರ್ಥಿಗಳಿಗೆ 7 ನೇ ವೇತನ ಆಯೋಗದ ಅಡಿಯಲ್ಲಿ ಮೂಲ ವೇತನ ತಿಂಗಳಿಗೆ 18,000 ರೂಪಾಯಿ ನಿಗದಿಪಡಿಸಲಾಗಿದ್ದು, ತಿಂಗಳಿಗೆ ಸುಮಾರು 25,000 ರಿಂದ 30,000 ವೇತನ ಪಡೆಯಬಹುದಾಗಿದೆ. ಮೂಲ ವೇತನದ ಹೊರತಾಗಿ, ರೈಲ್ವೆ ನೌಕರರ ಪ್ಯಾಕೇಜ್, ವರ್ಷಕ್ಕೆ ಎರಡು ಬಾರಿ ತುಟ್ಟಿ ಭತ್ಯೆ , ನಗರ ವರ್ಗ ಆಧರಿಸಿ ಮನೆ ಬಾಡಿಗೆ ಭತ್ಯೆ ಮತ್ತು ಸಾರಿಗೆ ಭತ್ಯೆ, ಕುಟುಂಬಕ್ಕೆ ವೈದ್ಯಕೀಯ ಸೌಲಭ್ಯಗಳು, ಪ್ರಯಾಣಕ್ಕಾಗಿ ರೈಲ್ವೆ ಪಾಸ್‌ಗಳು ಮತ್ತು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಅಡಿಯಲ್ಲಿ ಉದ್ಯೋಗ ಭದ್ರತೆ ಮತ್ತು ಇಲಾಖಾ ಬಡ್ತಿಗಳಿಗೂ ಅವಕಾಶಗಳಿವೆ.
ಆಯ್ಕೆ ಪ್ರಕ್ರಿಯೆಯ ವಿವರಣೆ
ಆರ್‌ಆರ್‌ಬಿ ಹಂತ 1 ಹುದ್ದೆಗಳಿಗೆ ಆಯ್ಕೆ ವಿಧಾನವು ಅಭ್ಯರ್ಥಿಯ ಜ್ಞಾನ ಮತ್ತು ದೈಹಿಕ ಸಾಮರ್ಥ್ಯವನ್ನು ಪರೀಕ್ಷಿಸಲಾಗುತ್ತದೆ. ಕಂಪ್ಯೂಟರ್ ಆಧಾರಿತ ಪರೀಕ್ಷೆಯಾಗಿದ್ದು, ಇದು ಆನ್‌ಲೈನ್ ವಸ್ತುನಿಷ್ಠ ರೀತಿಯ ಪರೀಕ್ಷೆಯಾಗಿದೆ. ಸಾಮಾನ್ಯವಾಗಿ ಸಾಮಾನ್ಯ ವಿಜ್ಞಾನ, ಗಣಿತ, ಸಾಮಾನ್ಯ ಬುದ್ಧಿಮತ್ತೆ ಮತ್ತು ತಾರ್ಕಿಕತೆ ಮತ್ತು ಸಾಮಾನ್ಯ ಅರಿವು ಹಾಗೂ ಪ್ರಚಲಿತ ವ್ಯವಹಾರಗಳನ್ನು ಒಳಗೊಂಡಿದ್ದು, 90 ನಿಮಿಷಗಳಲ್ಲಿ ಸಾಮಾನ್ಯವಾಗಿ 100 ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಪ್ರತಿ ಪ್ರಶ್ನೆಗೆ 1 ಅಂಕವಿದ್ದು, ಪ್ರತಿ ತಪ್ಪು ಉತ್ತರಕ್ಕೆ 0.25 ಋಣಾತ್ಮಕ ಅಂಕವಿರುತ್ತದೆ.
ದೈಹಿಕ ದಕ್ಷತೆ ಪರೀಕ್ಷೆ
ಪುರುಷ ಅಭ್ಯರ್ಥಿಗಳು 100 ಮೀಟರ್ ದೂರಕ್ಕೆ 2 ನಿಮಿಷಗಳಲ್ಲಿ 35 ಕೆಜಿ ತೂಕವನ್ನು ಸಾಗಿಸುವ ಸಾಮರ್ಥ್ಯ ಹೊಂದಿರಬೇಕು ಮತ್ತು 4 ನಿಮಿಷ 15 ಸೆಕೆಂಡುಗಳಲ್ಲಿ 1000 ಮೀಟರ್ ದೂರವನ್ನು ಒಂದೇ ಅವಕಾಶದಲ್ಲಿ ಓಡಬೇಕು.
ಮಹಿಳಾ ಅಭ್ಯರ್ಥಿಗಳು: 2 ನಿಮಿಷಗಳಲ್ಲಿ 20 ಕೆಜಿ ತೂಕವನ್ನು 100 ಮೀಟರ್ ದೂರಕ್ಕೆ ಒಂದೇ ಅವಕಾಶದಲ್ಲಿ ಸಾಗಿಸುವ ಸಾಮರ್ಥ್ಯ ಹೊಂದಿರಬೇಕು.