ಬ್ಯ್ಲಾಕ್‌ಮೇಲ್ ಮಾಡಿ ರಷ್ಯಾ ಸೇನೆಗೆ ಸೇರ್ಪಡೆ; ಗುಜರಾತ್ ಯುವಕನ ಗೋಳಾಟ ಕೇಳೋರಿಲ್ಲ
ವಿದ್ಯಾರ್ಥಿ ವೀಸಾದ ಮೇಲೆ ವ್ಯಾಸಂಗಕ್ಕಾಗಿ ರಷ್ಯಾಕ್ಕೆ ಹೋಗಿದ್ದ ಗುಜರಾತ್‌ನ ಯುವಕನೊಬ್ಬನನ್ನು ಬಲವಂತವಾಗಿ ಅಲ್ಲಿನ ಸೇನೆಗೆ ಸೇರಿಸಲಾಗಿದ್ದು, ಸದ್ಯ ಆತನನ್ನು ಉಕ್ರೇನ್ ಸೇನೆ ಸೆರೆ ಹಿಡಿದಿದೆ.
ಶಿಕ್ಷಣ, ಉದ್ಯೋಗಕ್ಕೆಂದು ಬರುವ ಭಾರತೀಯ ಯುವಕರನ್ನು ಅನಧಿಕೃತವಾಗಿ ಬಲವಂತವಾಗಿ ರಷ್ಯಾ ತನ್ನ ಸೇನೆಗೆ ಸೇರಿಸಿಕೊಳ್ಳುತ್ತಿರುವ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಲೇ ಇರುತ್ತವೆ. ಇದೀಗ ಅಂತಹದ್ದೇ ಮತ್ತೊಂದು ಪ್ರಕರಣ ನಡೆದಿದೆ. ವಿದ್ಯಾರ್ಥಿ ವೀಸಾದ ಮೇಲೆ ವ್ಯಾಸಂಗಕ್ಕಾಗಿ ರಷ್ಯಾಕ್ಕೆ ಹೋಗಿದ್ದ ಗುಜರಾತ್‌ನ ಯುವಕನೊಬ್ಬನನ್ನು ಬಲವಂತವಾಗಿ ಅಲ್ಲಿನ ಸೇನೆಗೆ ಸೇರ್ಪಡೆಗೊಳಿಸಲಾಗಿದೆ. ಈ ಬಗ್ಗೆ ಸ್ವತಃ ಯುವಕನೇ ವಿಡಿಯೊ ಸಂದೇಶದ ಮೂಲಕ ಅಳಲು ತೋಡಿಕೊಂಡಿದ್ದಾರೆ. ಸುಳ್ಳು ಮಾದಕ ದ್ರವ್ಯ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬ್ಲ್ಯಾಕ್‌ಮೇಲ್ ಮಾಡಿ ತನ್ನನ್ನು ಬಲವಂತವಾಗಿ ರಷ್ಯಾ ಸೇನೆಗೆ ಸೇರಿಸಿಕೊಳ್ಳಲಾಗಿದೆ ಎಂದು ಆತ ಹೇಳಿದ್ದಾನೆ.
ಗುಜರಾತ್‌ನ ಮೊರ್ಬಿ ಮೂಲದ ವಿದ್ಯಾರ್ಥಿ ಸಾಹಿಲ್ ಮೊಹಮ್ಮದ್ ಹುಸೇನ್, ಉಕ್ರೇನ್ ಪಡೆಗಳಿಂದ ಸೆರೆಹಿಡಿಯಲ್ಪಟ್ಟ ನಂತರ ಅಲ್ಲಿಂದಲೇ ಈ ವಿಡಿಯೋ ಮನವಿ ಮಾಡಿದ್ದಾನೆ. ಉಕ್ರೇನ್ ಅಧಿಕಾರಿಗಳು ಹಂಚಿಕೊಂಡಿರುವ ಈ ವಿಡಿಯೋದಲ್ಲಿ, ಸಾಹಿಲ್ ತಾನು ಮನೆಗೆ ಮರಳಲು ಸಹಾಯ ಮಾಡುವಂತೆ ಭಾರತ ಸರ್ಕಾರವನ್ನು ಕೇಳಿಕೊಂಡಿದ್ದಾನೆ. ರಷ್ಯಾದಲ್ಲಿ ಓದುತ್ತಿದ್ದಾಗ ತಾನು ಕೊರಿಯರ್ ಸಂಸ್ಥೆಯೊಂದರಲ್ಲಿ ಅರೆಕಾಲಿಕ ಕೆಲಸ ಮಾಡುತ್ತಿದ್ದೆ ಎಂದು ಆತ ತಿಳಿಸಿದ್ದಾನೆ.
ವಿಡಿಯೊದಲ್ಲಿ ಏನಿದೆ?
ರಷ್ಯಾ ಪೊಲೀಸರು ತನ್ನ ಮೇಲೆ ಸುಳ್ಳು ಡ್ರಗ್ಸ್ ಪ್ರಕರಣ ದಾಖಲಿಸಿದ್ದಾರೆ ಮತ್ತು ರಷ್ಯಾ ಸೇನೆಯಲ್ಲಿ ಸೇವೆ ಸಲ್ಲಿಸಿದರೆ ಆ ಪ್ರಕರಣವನ್ನು ಕೈಬಿಡುವುದಾಗಿ ಭರವಸೆ ನೀಡಿದ್ದರು ಎಂದು ಆತ ಆರೋಪಿಸಿದ್ದಾನೆ. "ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇತ್ತೀಚೆಗೆ ಭಾರತಕ್ಕೆ ಬಂದಿದ್ದರು. ನಾನು ಸುರಕ್ಷಿತವಾಗಿ ಮನೆಗೆ ಮರಳಲು ಪುಟಿನ್ ಅವರೊಂದಿಗೆ ಮಾತನಾಡುವಂತೆ ನಾನು ಸರ್ಕಾರವನ್ನು ವಿನಂತಿಸುತ್ತೇನೆ," ಎಂದು ಆತ ಹೇಳಿದ್ದಾನೆ.
ಮತ್ತೊಂದು ವಿಡಿಯೋದಲ್ಲಿ, ಸುಳ್ಳು ಡ್ರಗ್ಸ್ ಪ್ರಕರಣದಿಂದ ಮುಕ್ತಿ ಪಡೆಯಲು ತಾನು ರಷ್ಯಾದ ಪ್ರಸ್ತಾಪವನ್ನು ಒಪ್ಪಿಕೊಂಡೆ ಎಂದು ಆತ ಹೇಳಿದ್ದಾನೆ. 15 ದಿನಗಳ ತರಬೇತಿಯ ನಂತರ ರಷ್ಯನ್ನರು ತನ್ನನ್ನು ಯುದ್ಧಭೂಮಿಗೆ ಕಳುಹಿಸಿದರು ಎಂದು ಆತ ತಿಳಿಸಿದ್ದಾನೆ. ಅಲ್ಲಿಗೆ ತಲುಪಿದ ತಕ್ಷಣ ತಾನು ಮಾಡಿದ ಮೊದಲ ಕೆಲಸವೆಂದರೆ ಉಕ್ರೇನ್ ಸೇನೆಗೆ ಶರಣಾಗುವುದು ಎಂದು ಹುಸೇನ್ ಹೇಳಿದ್ದಾನೆ. ಉಕ್ರೇನ್ ಪಡೆಗಳು ಈ ವಿಡಿಯೋಗಳನ್ನು ಗುಜರಾತ್‌ನಲ್ಲಿರುವ ಆತನ ತಾಯಿಗೆ ಕಳುಹಿಸಿದ್ದು, ಭಾರತೀಯರನ್ನು ವಂಚಿಸಿ ರಷ್ಯಾ ಸೇನೆಗೆ ಸೇರಿಸಿಕೊಳ್ಳುತ್ತಿರುವ ಬಗ್ಗೆ ಜಾಗೃತಿ ಮೂಡಿಸುವಂತೆ ಕೇಳಿಕೊಂಡಿವೆ.
ಕೋರ್ಟ್ ಮೆಟ್ಟಿಲೇರಿದ ಯುವಕನ ತಾಯಿ
ತನ್ನ ಮಗನ ಸುರಕ್ಷಿತ ವಾಪಸಾತಿಗಾಗಿ ಆತನ ತಾಯಿ ದೆಹಲಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಮುಂದಿನ ವಿಚಾರಣೆ ಫೆಬ್ರವರಿಯಲ್ಲಿ ನಡೆಯಲಿದೆ. "ನಾನು 2024 ರಲ್ಲಿ ವ್ಯಾಸಂಗಕ್ಕಾಗಿ ರಷ್ಯಾಕ್ಕೆ ಬಂದೆ. ಆದರೆ ಹಣಕಾಸಿನ ಮತ್ತು ವೀಸಾ ಸಮಸ್ಯೆಗಳಿಂದಾಗಿ, ಮಾದಕ ದ್ರವ್ಯ ಜಾಲದವರಾಗಿದ್ದ ಕೆಲವು ರಷ್ಯನ್ನರ ಸಂಪರ್ಕಕ್ಕೆ ಬಂದೆ. ನಾನು ಏನನ್ನೂ ಮಾಡಿಲ್ಲ. ಕನಿಷ್ಠ 700 ಜನರನ್ನು ರಷ್ಯಾ ಡ್ರಗ್ಸ್ ಆರೋಪದ ಮೇಲೆ ಜೈಲಿಗೆ ಹಾಕಿದೆ. ಆದರೆ ಜೈಲು ಅಧಿಕಾರಿಗಳು ರಷ್ಯಾ ಸೇನೆಗೆ ಸೇರಿದರೆ ಆರೋಪಗಳನ್ನು ಕೈಬಿಡುವ ಆಯ್ಕೆಯನ್ನು ಅವರಿಗೆ ನೀಡಿದರು” ಎಂದು ವಿದ್ಯಾರ್ಥಿ ವಿಡಿಯೋದಲ್ಲಿ ವಿವರಿಸಿದ್ದಾನೆ.
"ನಾನು ಅಸಹಾಯಕನಾಗಿದ್ದೇನೆ. ಏನಾಗುತ್ತದೋ ತಿಳಿಯುತ್ತಿಲ್ಲ. ಆದರೆ ರಷ್ಯಾಕ್ಕೆ ಬರುತ್ತಿರುವ ಯುವಕರಿಗೆ ನಾನೊಂದು ಸಂದೇಶ ನೀಡಲು ಬಯಸುತ್ತೇನೆ, 'ಜಾಗರೂಕರಾಗಿರಿ'. ಇಲ್ಲಿ ನಿಮ್ಮನ್ನು ಸುಳ್ಳು ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಸಬಲ್ಲ ಅನೇಕ ವಂಚಕರಿದ್ದಾರೆ," ಎಂದು ಆತ ಎಚ್ಚರಿಸಿದ್ದಾನೆ. "ಭಾರತ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ನಾನು ಮನವಿ ಮಾಡುತ್ತೇನೆ, ದಯವಿಟ್ಟು ಸಹಾಯ ಮಾಡಿ," ಎಂದು ಆತ ಕೇಳಿಕೊಂಡಿದ್ದಾನೆ.
ರಷ್ಯಾ ಸಶಸ್ತ್ರ ಪಡೆಗಳಿಗೆ ಸೇರಿರುವ ಭಾರತೀಯ ಪ್ರಜೆಗಳ ಬಿಡುಗಡೆಗೆ ಭಾರತವು ಸಕ್ರಿಯವಾಗಿ ಕೆಲಸ ಮಾಡುತ್ತಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಡಿಸೆಂಬರ್ 5 ರಂದು ತಿಳಿಸಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಭೇಟಿಯ ಕುರಿತಾದ ವಿಶೇಷ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಿಸ್ರಿ, ಪ್ರಧಾನಿ ಮೋದಿ ಅವರು ರಷ್ಯಾ ಅಧ್ಯಕ್ಷರೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ ಮತ್ತು ರಷ್ಯಾ ಸೇನೆಯಿಂದ ಭಾರತೀಯರನ್ನು ಶೀಘ್ರವಾಗಿ ಬಿಡುಗಡೆ ಮಾಡಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ ಎಂದು ಒತ್ತಿಹೇಳಿದ್ದಾರೆ.