ಸುಳ್ಳು ಧರ್ಮನಿಂದನೆಯಿಂದ ಹಿಂದೂ ವ್ಯಕ್ತಿ ಕೊಲೆ; ಲೇಖಕಿ ತಸ್ಲೀಮಾ ನಸ್ರೀನ್ ಆರೋಪ
ತಮ್ಮ ಮೇಲಾದ ಆರಂಭಿಕ ಹಲ್ಲೆಯ ನಂತರ, ದಿಪು ಚಂದ್ರ ದಾಸ್ ಆರೋಪವನ್ನು ನಿರಾಕರಿಸಿದ್ದರು. ಆದರೆ ಆಗಲೂ ಪೊಲೀಸರು ಸಹೋದ್ಯೋಗಿಯನ್ನು ಬಂಧಿಸಲು ಪ್ರಯತ್ನಿಸಲಿಲ್ಲ ಎಂದು ಆರೋಪಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ನಡೆದ ಕೊಲೆಯನ್ನು ಲೇಖಕಿ ತಸ್ಲೀಮಾ ನಸ್ರೀನ್ ಖಂಡಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಪ್ರವಾದಿ ಮುಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಹಿಂದೂ ಯುವಕನೊಬ್ಬನನ್ನು ಹತ್ಯೆ ಮಾಡಿರುವ ಬಗ್ಗೆ ಗಡಿಪಾರಾಗಿ ಭಾರತದಲ್ಲಿ ವಾಸ ಮಾಡುತ್ತಿರುವ ಲೇಖಕಿ ತಸ್ಲೀಮಾ ನಸ್ರೀನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯ ಮೂಲಕ ಶನಿವಾರ (ಡಿಸೆಂಬರ್ 20) ಪ್ರತಿಕ್ರಿಯಿಸಿದ ಅವರು, “ದೀಪು ಚಂದ್ರ ದಾಸ್ ವಿರುದ್ಧ ಸುಳ್ಳು ಆರೋಪ ಮಾಡಿದ್ದು, ಅವರ ಸಹೋದ್ಯೋಗಿಯಾದ ಮುಸ್ಲಿಂ ವ್ಯಕ್ತಿಯೆ” ಎಂದು ಹೇಳಿದ್ದಾರೆ. “ಆರಂಭಿಕ ಹಲ್ಲೆಯ ನಂತರವೂ ದೀಪು ಆರೋಪವನ್ನು ನಿರಾಕರಿಸಿದ್ದರೂ, ಪೊಲೀಸರು ಆರೋಪಿಯನ್ನು ಬಂಧಿಸಲು ಪ್ರಯತ್ನಿಸಲಿಲ್ಲ. ಅವರು ಉದ್ದೇಶಪೂರ್ವಕವಾಗಿ ದೀಪುವನ್ನು ಜನಸಮೂಹದ ಕೈಗೆ ಒಪ್ಪಿಸಿದರೋ ಅಥವಾ ಪೊಲೀಸರು ಜನಸಮೂಹವನ್ನು ತಡೆಯಲು ವಿಫಲರಾದರೋ ಎಂಬ ಪ್ರಶ್ನೆ ಉದ್ಭವಿಸುತ್ತಿದೆ,” ಎಂದು ನಸ್ರೀಸ್ ಆರೋಪಿಸಿದ್ದಾರೆ.
ದೀಪು ಚಂದ್ರ ದಾಸ್ ಮೈಮೆನ್ಸಿಂಗ್‌ನ ಭಾಲುಕಾದ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಬಡ ಹಿನ್ನೆಲೆಯ ಕಾರ್ಮಿಕರಾಗಿದ್ದ ದೀಪುವನ್ನು ಅವರ ಸಹೋದ್ಯೋಗಿಯೊಬ್ಬರು ವೈಯಕ್ತಿಕ ಅಸಮಾಧಾನದ ಹಿನ್ನೆಲೆಯಲ್ಲಿ ತೊಂದರೆಯಲ್ಲಿ ಸಿಲುಕಿ ಹಾಕಿಸಲು ಈ ಆರೋಪ ಹೊರಿಸಿದ್ದರು ಎಂದು ನಸ್ರೀನ್ ಹೇಳಿದ್ದಾರೆ. ದೀಪುವಿನ ಕಾರ್ಖಾನೆಯಲ್ಲಿರುವ ವ್ಯಕ್ತಿ ಸಂಚು ರೂಪಿಸಿ ಹೇಳಿಕೆ ನೀಡಿದ್ದ. ಹೀಗಾಗಿ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಉನ್ಮಾದಗೊಂಡ ಗುಂಪು ಪೊಲೀಸರ ವಶದಲ್ಲಿದ್ದ ಆತನನ್ನು ಎಳೆದುಕೊಂಡು ಹೋಗಿ ಹತ್ಯೆ ಮಾಡಿದೆ ಎಂದು ನಸ್ರೀನ ಬರೆದಿದ್ದಾರೆ.
ದೀಪು ಪೊಲೀಸರಿಗೆ ತಾನು ನಿರಪರಾಧಿ, ಧರ್ಮನಿಂದನೆ ಆರೋಪ ಸುಳ್ಳು ಎಂದು ಹೇಳಿದ್ದನೆಂಬ ಮಾಹಿತಿಯನ್ನೂ ಅವರು ಹಂಚಿಕೊಂಡಿದ್ದಾರೆ. “ಪೊಲೀಸರು ಕೂಡ ಸುಳ್ಳು ಆರೋಪವನ್ನು ಪ್ರಶ್ನಿಸಲೇ ಇಲ್ಲ. ಇದೇ ಪ್ರಕರಣದ ಗಂಭೀರ ಅಂಶ,” ಎಂದು ಅವರು ಹೇಳಿದ್ದಾರೆ.
ತಸ್ಲೀಮಾ ನಸ್ರೀನ ಪೊಲೀಸ್ ಪಾತ್ರದ ಮೇಲೂ ಪ್ರಶ್ನೆ ಎತ್ತಿದ್ದಾರೆ. “ಪೊಲೀಸರ ಜಿಹಾದಿ ಉತ್ಸಾಹದ ಪರಿಣಾಮವಾಗಿ ದೀಪುವನ್ನು ಮತಾಂಧರ ಕೈಗೆ ಒಪ್ಪಿಸಿದರೋ, ಅಥವಾ ಉಗ್ರ ಗುಂಪು ಪೊಲೀಸರ ಕೈಯಿಂದ ಅವರನ್ನು ಕಸಿದುಕೊಂಡರೋ?” ಎಂದು ಪ್ರಶ್ನಿಸಿದ್ದಾರೆ. ದೀಪುವನ್ನು ಕ್ರೂರವಾಗಿ ಹೊಡೆದು, ನೇಣು ಹಾಕಿ, ನಂತರ ಸುಟ್ಟುಹಾಕಲಾಗಿದೆ ಎಂಬ ಮಾಹಿತಿ ನೀಡುತ್ತ ಅವರು ಈ ಕೃತ್ಯವನ್ನು “ಜಿಹಾದಿ ಹಬ್ಬ” ಎಂದಿದ್ದಾರೆ.
ಅವರು ದೀಪುವಿನ ಕುಟುಂಬದ ಸಂಕಟದ ಕುರಿತೂ ವಿಷಾದ ವ್ಯಕ್ತಪಡಿಸಿದ್ದಾರೆ. “ಅಂಗವಿಕಲ ತಾಯಿ-ತಂದೆ, ಪತ್ನಿ ಮತ್ತು ಮಗುವಿಗೆ ದೀಪು ಒಬ್ಬನೇ ಆಧಾರವಾಗಿದ್ದರು. ಈಗ ಅವರ ಭವಿಷ್ಯ ಏನು? ಯಾರಾದರೂ ಅವರಿಗೆ ಸಹಾಯ ಮಾಡುತ್ತಾರೆಯೇ?” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಹಲವರ ಬಂಧನ
ಈ ಘಟನೆ ಬಾಂಗ್ಲಾದೇಶದ ಮೈಮೆನ್ಸಿಂಗ್ ಜಿಲ್ಲೆಯ ಭಾಲುಕಾದಲ್ಲಿ ನಡೆದಿದೆ. ಧರ್ಮನಿಂದನೆ ಆರೋಪದ ಹಿನ್ನೆಲೆಯಲ್ಲಿ ದೀಪು ದಾಸ್ (27) ಮೇಲೆ ಉನ್ಮಾದಗೊಂಡ ಜನರು ದಾಳಿ ನಡೆಸಿ ಕೊಂದು, ನಂತರ ಬೆಂಕಿ ಹಚ್ಚಿದ್ದರು ಎನ್ನಲಾಗಿದೆ.
ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನಸ್ ಶನಿವಾರ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡುತ್ತ, ಕ್ಷಿಪ್ರ ಕಾರ್ಯ ಬೆಟಾಲಿಯನ್ (RAB) ಘಟಕವು ಈ ಪ್ರಕರಣದಲ್ಲಿ ಏಳು ಶಂಕಿತರನ್ನು ಬಂಧಿಸಿದೆ ಎಂದು ತಿಳಿಸಿದ್ದಾರೆ. ಬಂಧಿತರಲ್ಲಿ ಮೊಹಮ್ಮದ್ ಲಿಮನ್ ಸರ್ಕಾರ್ (19), ಮೊಹಮ್ಮದ್ ತಾರೆಕ್ ಹೊಸೈನ್, ಮೊಹಮ್ಮದ್ ಮಣಿಕ್ ಮಿಯಾ, ಎರ್ಷದ್ ಅಲಿ (39), ನಿಜುಮ್ ಉದ್ದೀನ್ (20), ಅಲೋಮ್‌ಗಿರ್ ಹೊಸೈನ್ ಮತ್ತು ಮೊಹಮ್ಮದ್ ಮಿರಾಜ್ ಹೊಸೈನ್ ಅಕಾನ್ ಎಂಬವರು ಸೇರಿದ್ದಾರೆ.
ಯೂನಸ್ ನೇತೃತ್ವದ ಸರ್ಕಾರವು ಈ ಘಟನೆ ಖಂಡಿಸಿ, “ನವ ಬಾಂಗ್ಲಾದೇಶದಲ್ಲಿ ಗುಂಪು ಹಿಂಸಾಚಾರಕ್ಕೆ ಸ್ಥಾನವಿಲ್ಲ” ಎಂದು ಘೋಷಿಸಿದೆ.