ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್, ಪತ್ನಿ ಬುಶ್ರಾಗೆ ಮತ್ತೆ 17 ವರ್ಷ ಜೈಲು
ಈ ಪ್ರಕರಣವು ಮೇ 2021 ರಲ್ಲಿ ಇಮ್ರಾನ್ ಖಾನ್ ದಂಪತಿಗೆ ಅಧಿಕೃತ ದುಬೈ ಪ್ರವಾಸದ ಸಮಯದಲ್ಲಿ ಸೌದಿ ಕ್ರೌನ್ ಪ್ರಿನ್ಸ್ ಉಡುಗೊರೆಯಾಗಿ ನೀಡಿದ್ದ ದುಬಾರಿ 'ಬುಲ್ಗರಿ' (Bulgari) ಆಭರಣ ಸೆಟ್‌ಗೆ ಸಂಬಂಧಿಸಿದ್ದಾಗಿದೆ.
ಪಾಕಿಸ್ತಾನದ ಮಾಜಿ ಪ್ರಧಾನಿ ಮತ್ತು ಪಾಕಿಸ್ತಾನ ತೆಹ್ರೀಕ್-ಎ-ಇನ್ಸಾಫ್ (PTI) ಸಂಸ್ಥಾಪಕ ಇಮ್ರಾನ್ ಖಾನ್ ಹಾಗೂ ಅವರ ಪತ್ನಿ ಬುಶ್ರಾ ಬಿಬಿಗೆ ತೋಶಾಖಾನಾ-2 ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ವಿಶೇಷ ನ್ಯಾಯಾಲಯವು ಶನಿವಾರ ಇಬ್ಬರಿಗೂ ತಲಾ 17 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಈ ಪ್ರಕರಣವು ಮೇ 2021 ರಲ್ಲಿ ಇಮ್ರಾನ್ ಖಾನ್ ದಂಪತಿಗೆ ಅಧಿಕೃತ ದುಬೈ ಪ್ರವಾಸದ ಸಮಯದಲ್ಲಿ ಸೌದಿ ಕ್ರೌನ್ ಪ್ರಿನ್ಸ್ ಉಡುಗೊರೆಯಾಗಿ ನೀಡಿದ್ದ ದುಬಾರಿ 'ಬುಲ್ಗರಿ' (Bulgari) ಆಭರಣ ಸೆಟ್‌ಗೆ ಸಂಬಂಧಿಸಿದ್ದಾಗಿದೆ. ಅಧಿಕಾರಿಗಳ ಪ್ರಕಾರ, ಈ ಆಭರಣವನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿಸಲಾಗಿತ್ತು ಎನ್ನಲಾಗಿತ್ತು
ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ನಡೆದ ವಿಚಾರಣೆಯ ಸಂದರ್ಭದಲ್ಲಿ ವಿಶೇಷ ನ್ಯಾಯಾಧೀಶರಾದ ಶಾಹರುಖ್ ಅರ್ಜುಮಂಡ್ ಈ ತೀರ್ಪನ್ನು ಪ್ರಕಟಿಸಿದರು. ಇಮ್ರಾನ್ ಖಾನ್ ಪ್ರಸ್ತುತ ಇದೇ ಜೈಲಿನಲ್ಲಿದ್ದಾರೆ.
ಶಿಕ್ಷೆಯ ವಿವರಗಳು:
• ಜೈಲು ಶಿಕ್ಷೆ: ನಂಬಿಕೆ ದ್ರೋಹದ ಆರೋಪದಡಿ (ಪಾಕಿಸ್ತಾನ ದಂಡ ಸಂಹಿತೆಯ ಸೆಕ್ಷನ್ 409) 10 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಏಳು ವರ್ಷಗಳ ಶಿಕ್ಷೆ ವಿಧಿಸಲಾಗಿದೆ.
• ದಂಡ: ನ್ಯಾಯಾಲಯವು ದಂಪತಿಗಳಿಗೆ ತಲಾ 16.4 ಮಿಲಿಯನ್ ರೂಪಾಯಿ(146ಕೋಟಿ ರೂ.) ದಂಡ ವಿಧಿಸಿದೆ.
• ನ್ಯಾಯಾಲಯದ ಟಿಪ್ಪಣಿ: "ಇಮ್ರಾನ್ ಅಹ್ಮದ್ ಖಾನ್ ನಿಯಾಜಿ ಅವರ ವಯಸ್ಸು ಮತ್ತು ಬುಶ್ರಾ ಬಿಬಿ ಮಹಿಳೆಯಾಗಿರುವುದನ್ನು ಪರಿಗಣಿಸಿ, ಶಿಕ್ಷೆಯ ಪ್ರಮಾಣದಲ್ಲಿ ಸ್ವಲ್ಪ ಮೃದು ಧೋರಣೆ ತಳೆಯಲಾಗಿದೆ," ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.
ಖಾನ್ ಮತ್ತು ಬಿಬಿ ಅವರ ಪರ ವಕೀಲರು ಈ ತೀರ್ಪನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ತಿಳಿಸಿದ್ದಾರೆ. ಕಳೆದ ಅಕ್ಟೋಬರ್‌ನಲ್ಲಿ ಇಮ್ರಾನ್ ಖಾನ್ ಈ ಆರೋಪಗಳನ್ನು ತಿರಸ್ಕರಿಸಿದ್ದರು ಮತ್ತು ಇವೆಲ್ಲವೂ ರಾಜಕೀಯ ಪ್ರೇರಿತ ಪಿತೂರಿ ಎಂದು ಕರೆದಿದ್ದರು.
ಪ್ರಕರಣದ ಹಿನ್ನೆಲೆ
ಈ ಪ್ರಕರಣವನ್ನು 2024ರ ಜುಲೈನಲ್ಲಿ ದಾಖಲಿಸಲಾಗಿತ್ತು.ಅಧಿಕೃತ ಪ್ರವಾಸದ ವೇಳೆ ಇಮ್ರಾನ್ ಖಾನ್ ಮತ್ತು ಅವರ ಪತ್ನಿಗೆ ನೀಡಲಾಗಿದ್ದ ದುಬಾರಿ ವಾಚ್‌ಗಳು, ವಜ್ರ ಮತ್ತು ಚಿನ್ನದ ಆಭರಣಗಳು ಸೇರಿದಂತೆ ಅಮೂಲ್ಯವಾದ ಉಡುಗೊರೆಗಳನ್ನು 'ತೋಷಾಖಾನಾ' (ಸರ್ಕಾರಿ ಉಡುಗೊರೆಗಳ ಭಂಡಾರ) ಕ್ಕೆ ಒಪ್ಪಿಸದೆ ಮಾರಾಟ ಮಾಡಿದ್ದಾರೆ ಎಂಬ ಆರೋಪಗಳ ಕೇಳಿ ಬಂದಿತ್ತು.
2024ರ ಅಕ್ಟೋಬರ್‌ನಲ್ಲಿ ಇಸ್ಲಾಮಾಬಾದ್ ಹೈಕೋರ್ಟ್ ಈ ಪ್ರಕರಣದಲ್ಲಿ ಇಮ್ರಾನ್ ಪತ್ನಿ ಬುಶ್ರಾ ಅವರಿಗೆ ಜಾಮೀನು ನೀಡಿತ್ತು ಮತ್ತು ಒಂದು ತಿಂಗಳ ನಂತರ ಇಮ್ರಾನ್ ಖಾನ್ ಅವರಿಗೂ ಇದೇ ಪ್ರಕರಣದಲ್ಲಿ ಜಾಮೀನು ಲಭಿಸಿತ್ತು. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಅವರ ಮೇಲೆ ಅಧಿಕೃತವಾಗಿ ದೋಷಾರೋಪಣೆ ಮಾಡಲಾಗಿತ್ತು.
ಈ ಮಧ್ಯೆ, ಅಡಿಯಾಲಾ ಜೈಲಿನಲ್ಲಿ ವಿಚಾರಣಾ ಪ್ರಕ್ರಿಯೆಯು ಮುಂದುವರಿದಿತ್ತು. ಈ ವರ್ಷದ ಆರಂಭದಲ್ಲಿ 'ಅಲ್-ಖಾದಿರ್ ಟ್ರಸ್ಟ್' ಪ್ರಕರಣದಲ್ಲಿ ಶಿಕ್ಷೆಗೊಳಗಾದ ನಂತರ ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಈಗಾಗಲೇ ಇದೇ ಜೈಲಿನಲ್ಲಿ ಬಂಧಿಯಾಗಿದ್ದಾರೆ. ಶಿಕ್ಷೆಗೊಳಗಾದ ಇಬ್ಬರೂ ಈ ತೀರ್ಪಿನ ವಿರುದ್ಧ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ.
ಇಮ್ರಾನ್ ಖಾನ್ ಈಗ ಎಲ್ಲಿದ್ದಾರೆ?
ಆಗಸ್ಟ್ 2023 ರಿಂದ ಜೈಲಿನಲ್ಲಿರುವ ಇಮ್ರಾನ್ ಖಾನ್, ಈಗಾಗಲೇ 190 ಮಿಲಿಯನ್ ಯುರೋ ಭ್ರಷ್ಟಾಚಾರ ಪ್ರಕರಣದಲ್ಲಿ 14 ವರ್ಷಗಳ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ಅಲ್ಲದೆ, ಮೇ 9, 2023 ರ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ಭಯೋತ್ಪಾದನಾ ನಿರೋಧಕ ಕಾಯ್ದೆಯಡಿ ವಿಚಾರಣೆಗಳನ್ನು ಎದುರಿಸುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ, ಜೈಲಿನಲ್ಲಿ ಇಮ್ರಾನ್ ಖಾನ್ ಅವರನ್ನು ನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆ ಜಾಗತಿಕವಾಗಿ ಟೀಕೆಗಳು ಕೇಳಿಬರುತ್ತಿವೆ. ವಿಶ್ವಸಂಸ್ಥೆಯು ಸಹ ಅವರನ್ನು ಏಕಾಂತ ವಾಸದಿಂದ ತಕ್ಷಣವೇ ಬಿಡುಗಡೆ ಮಾಡುವಂತೆ ಕರೆ ನೀಡಿದೆ. ಇಮ್ರಾನ್ ಖಾನ್ ಅವರ ಪುತ್ರರಾದ ಕಾಸಿಂ ಖಾನ್ ಮತ್ತು ಸುಲೈಮಾನ್ ಇಸಾ ಖಾನ್ ಅವರು ತಮ್ಮ ತಂದೆಯನ್ನು ಕಳೆದ ಎರಡು ವರ್ಷಗಳಿಂದ ಏಕಾಂತ ವಾಸದಲ್ಲಿ ಇರಿಸಲಾಗಿದೆ ಮತ್ತು ಅವರನ್ನು ಮತ್ತೆ ನೋಡಲು ಸಾಧ್ಯವಾಗುತ್ತದೆಯೋ ಇಲ್ಲವೋ ಎಂಬ ಭೀತಿಯಲ್ಲಿದ್ದೇವೆ ಎಂದು ಗಂಭೀರ ಆರೋಪ ಮಾಡಿದ್ದರು.