ಜೋರ್ಡಾನ್ ತಲುಪಿದ ಪ್ರಧಾನಿ ಮೋದಿ: ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಒತ್ತು

Update: 2025-12-15 13:57 GMT
Click the Play button to listen to article

ಅರಬ್ ರಾಷ್ಟ್ರ ಜೋರ್ಡಾನ್ ಜೊತೆಗಿನ ದ್ವಿಪಕ್ಷೀಯ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ (ಡಿಸೆಂಬರ್ 15) ಎರಡು ದಿನಗಳ ಭೇಟಿಗಾಗಿ ಜೋರ್ಡಾನ್ ರಾಜಧಾನಿ ಅಮ್ಮನ್‌ಗೆ ಆಗಮಿಸಿದರು. ವಿಮಾನ ನಿಲ್ದಾಣದಲ್ಲಿ ಅವರನ್ನು ಜೋರ್ಡಾನ್ ಪ್ರಧಾನಿ ಜಾಫರ್ ಹಸನ್ ಆತ್ಮೀಯವಾಗಿ ಬರಮಾಡಿಕೊಂಡರು.

ಈ ಭೇಟಿಯು ಭಾರತ ಮತ್ತು ಜೋರ್ಡಾನ್ ನಡುವಿನ ರಾಜತಾಂತ್ರಿಕ ಸಂಬಂಧ ಸ್ಥಾಪನೆಯಾಗಿ 75 ವರ್ಷ ಪೂರೈಸುತ್ತಿರುವ ಮಹತ್ವದ ಸಂದರ್ಭದಲ್ಲಿ ನಡೆಯುತ್ತಿದೆ. ಇದು ಪ್ರಧಾನಿ ಮೋದಿಯವರ ನಾಲ್ಕು ದಿನಗಳ ಮೂರು ರಾಷ್ಟ್ರಗಳ ಪ್ರವಾಸದ ಮೊದಲ ಹಂತವಾಗಿದ್ದು, ನಂತರ ಅವರು ಇಥಿಯೋಪಿಯಾ ಮತ್ತು ಓಮನ್‌ಗೆ ತೆರಳಲಿದ್ದಾರೆ.

ಕಾರ್ಯಕ್ರಮಗಳ ವಿವರ

ಸೋಮವಾರದಂದು ಪ್ರಧಾನಿ ಮೋದಿ ಅವರು ಜೋರ್ಡಾನ್ ರಾಜ ಅಬ್ದುಲ್ಲಾ II ಬಿನ್ ಅಲ್ ಹುಸೇನ್ ಅವರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಲಿದ್ದು, ನಂತರ ನಿಯೋಗ ಮಟ್ಟದ ಮಾತುಕತೆಗಳು ನಡೆಯಲಿವೆ. ಮಂಗಳವಾರ, ಉಭಯ ನಾಯಕರು ಭಾರತ-ಜೋರ್ಡಾನ್ ವಾಣಿಜ್ಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದರಲ್ಲಿ ಎರಡೂ ದೇಶಗಳ ಪ್ರಮುಖ ಉದ್ಯಮಿಗಳು ಭಾಗವಹಿಸಲಿದ್ದಾರೆ.

ಇದೇ ವೇಳೆ, ಪ್ರಧಾನಿ ಮೋದಿ ಅಲ್ಲಿನ ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಲಿದ್ದಾರೆ. ಅಲ್ಲದೆ, ಹವಾಮಾನ ಅನುಮತಿಸಿದರೆ ಯುವರಾಜನೊಂದಿಗೆ ಭಾರತದೊಂದಿಗೆ ಐತಿಹಾಸಿಕ ವ್ಯಾಪಾರ ಸಂಬಂಧ ಹೊಂದಿರುವ ಪ್ರಾಚೀನ ನಗರ ಪೆಟ್ರಾಕ್ಕೆ ಭೇಟಿ ನೀಡುವ ಕಾರ್ಯಕ್ರಮವೂ ಇದೆ.

37 ವರ್ಷಗಳ ನಂತರ ಪೂರ್ಣ ಪ್ರಮಾಣದ ಭೇಟಿ

ವಿದೇಶಾಂಗ ಸಚಿವಾಲಯದ ಪ್ರಕಾರ, ಭಾರತದ ಪ್ರಧಾನಿಯೊಬ್ಬರು 37 ವರ್ಷಗಳ ನಂತರ ಜೋರ್ಡಾನ್‌ಗೆ ನೀಡುತ್ತಿರುವ ಪೂರ್ಣ ಪ್ರಮಾಣದ ದ್ವಿಪಕ್ಷೀಯ ಭೇಟಿ ಇದಾಗಿದೆ. 2018ರಲ್ಲಿ ಪ್ಯಾಲೆಸ್ತೀನ್‌ಗೆ ತೆರಳುವಾಗ ಮೋದಿ ಅವರು ಜೋರ್ಡಾನ್ ಮೂಲಕ ಹಾದುಹೋಗಿದ್ದರು.

ಭಾರತವು ಜೋರ್ಡಾನ್‌ನ ಮೂರನೇ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದ್ದು, ಉಭಯ ದೇಶಗಳ ನಡುವಿನ ವಾರ್ಷಿಕ ವ್ಯಾಪಾರ ಮೌಲ್ಯ 2.8 ಬಿಲಿಯನ್ ಡಾಲರ್ ಆಗಿದೆ. ಜೋರ್ಡಾನ್ ಭಾರತಕ್ಕೆ ರಸಗೊಬ್ಬರ, ಫಾಸ್ಫೇಟ್ ಮತ್ತು ಪೊಟ್ಯಾಷ್‌ನ ಪ್ರಮುಖ ಪೂರೈಕೆದಾರ ರಾಷ್ಟ್ರವಾಗಿದೆ. ಅಲ್ಲದೆ, ಜೋರ್ಡಾನ್‌ನಲ್ಲಿ ಜವಳಿ, ನಿರ್ಮಾಣ ಮತ್ತು ಉತ್ಪಾದನಾ ವಲಯಗಳಲ್ಲಿ ಸುಮಾರು 17,500ಕ್ಕೂ ಹೆಚ್ಚು ಭಾರತೀಯರು ಉದ್ಯೋಗದಲ್ಲಿದ್ದಾರೆ.

Tags:    

Similar News