PM Modi calls for decade-long push to end colonial thinking
x
ಪ್ರಧಾನಿ ನರೇಂದ್ರ ಮೋದಿ

ಬಾಕಿ ಉಳಿದಿರುವುದು ಕೇವಲ ಹತ್ತೇ ವರ್ಷ… ಪ್ರಧಾನಿ ಮೋದಿ ಡೆಡ್‌ಲೈನ್‌ ಕೊಟ್ಟಿದ್ದೇಕೆ?

ಪ್ರಧಾನಿ ನರೇಂದ್ರ ಮೋದಿ ಇದೀಗ ಗುಲಾಮಗಿರಿ ಮತ್ತು ವಸಾಹತುಶಾಹಿ ಮನಸ್ಥಿತಿಯನ್ನು ಮುಂದಿನ ಹತ್ತು ವರ್ಷಗಳಲ್ಲಿ ಸಂಪೂರ್ಣವಾಗಿ ನಿರ್ಮೂಲನೆ ಮಾಡುವಂತೆ ಕರೆ ಕೊಟ್ಟಿದ್ದಾರೆ.


Click the Play button to hear this message in audio format

ಕೆಲವು ದಿನಗಳ ಹಿಂದೆಯಷ್ಟೇ ಮೆಕಾಲೆ ಶಿಕ್ಷಣ ನೀತಿಯನ್ನು ವಿರೋಧಿಸಿ, ಅದನ್ನು ಸಂಪೂರ್ಣವಾಗಿ ತೊಡೆದು ಹಾಕುವ ಬಗ್ಗೆ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಇದೀಗ ಗುಲಾಮಗಿರಿ ಮತ್ತು ವಸಾಹತುಶಾಹಿ ಮನಸ್ಥಿತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವಂತೆ ಕರೆ ಕೊಟ್ಟಿದ್ದಾರೆ. ಮುಂದಿನ ಹತ್ತು ವರ್ಷಗಳಲ್ಲಿ ಗುಲಾಮಗಿರಿ ಮತ್ತು ವಸಾಹತುಶಾಹಿ ಮನಸ್ಥಿತಿಯಿಂದ ದೇಶವನ್ನು ಸಂಪೂರ್ಣವಾಗಿ ಮುಕ್ತಗೊಳಿಸಬೇಕು. ಪ್ರತಿ ಕ್ಷೇತ್ರಗಳಲ್ಲೂ ಗುಲಾಮಗಿರಿ ಮನಸ್ಥಿತಿಯನ್ನು ಸಂಪೂರ್ಣವಾಗಿ ತೊಡೆದು ಹಾಕಿದರೆ ಮಾತ್ರ ಅಭಿವೃದ್ಧಿಯತ್ತ ಸಾಗಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮೆಕಾಲೆ ಶಿಕ್ಷಣ ನೀತಿ ತೊಡೆದು ಹಾಕುವುದು ಮತ್ತು ʼಹಿಂದೂ ಬೆಳವಣಿಗೆ ದರʼದ ಬಗ್ಗೆ ಹಸಿ-ಬಿಸಿ ಚರ್ಚೆಗಳು ನಡೆಯುತ್ತಿರುವ ನಡುವೆಯೇ ಮೋದಿ ತನ್ನ ಹೇಳಿಕೆಯನ್ನು ಪುನರುಚ್ಛರಿಸಿದ್ದಾರೆ. ಭಾರತವು ತನ್ನ ವಸಾಹತುಶಾಹಿ ಮನಸ್ಥಿತಿಯನ್ನು ತ್ಯಜಿಸಿ, ಹೆಚ್ಚಿನ ಬೆಳವಣಿಗೆ ಮತ್ತು ಕಡಿಮೆ ಹಣದುಬ್ಬರ ಹೊಂದಿರುವ ಆರ್ಥಿಕತೆಯಾಗಿ ಹೊರಹೊಮ್ಮುತ್ತಿದೆ ಎಂದು ಹೇಳಿದ್ದಾರೆ.

ಹಿಂದೂಸ್ತಾನ್‌ ಟೈಮ್ಸ್‌ ಲೀಡರ್‌ಶಿಪ್‌ ಶೃಂಗಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ, ಭಾರತವು ಶೇ. 2-3ರಷ್ಟು ಅಭಿವೃದ್ಧಿಯನ್ನು ಸಾಧಿಸುತ್ತಿದ್ದಾಗ ಅದನ್ನು ʼಹಿಂದೂ ಬೆಳವಣಿಗೆ ದರʼ ಎಂದು ಕರೆಯಲಾಗಿತ್ತು. ದೇಶದ ನಿಧಾನಗತಿ ಬೆಳವಣಿಗೆಗೆ ಹಿಂದೂ ಸಂಸ್ಕೃತಿ ಕಾರಣ ಎಂಬಂತೆ ಬಿಂಬಿಸಲಾಗಿತ್ತು. ಕೋಟ್ಯಂತರ ಜನರ ನಂಬಿಕೆ ಮತ್ತು ಶ್ರದ್ಧೆಯನ್ನು ದೇಶದ ಅಭಿವೃದ್ಧಿಯ ಜೊತೆ ಜೋಡಿಸುವ ಪ್ರಯತ್ನ ಗುಲಾಮಗಿರಿ ಮನಸ್ಥಿತಿಯ ಸಂಕೇತ ಎಂದು ಅವರು ಕಿಡಿಕಾರಿದರು.

ಇಂದಿನ ಕೆಲವು ಬುದ್ಧಿ ಜೀವಿಗಳು ಎಲ್ಲಾ ವಿಚಾರಗಳಲ್ಲಿ ಕೋಮುವಾದವನ್ನು ಕಾಣುತ್ತಾರೆ. ಹಿಂದೂ ಬೆಳವಣಿಗೆ ದರ ಎಂಬ ಪದ ಬಳಸುವಾಗ ಅವರಿಗೆ ಕೋಮುವಾದ ಕಾಣಿಸಲಿಲ್ಲವೇ? ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.

ದೇಶದ ಜನರ ಮನಸ್ಸಿನಲ್ಲಿ ಗುಲಾಮಗಿರಿಯ ಬೀಜ ಬಿತ್ತಿದ್ದ ಮೆಕಾಲೆ ಶಿಕ್ಷಣ ನೀತಿ ಜಾರಿಗೊಂಡು 2035ರಲ್ಲಿ 200 ವರ್ಷಗಳು ಪೂರೈಸುತ್ತಿದೆ. ಅದಕ್ಕೆ ಇನ್ನು ಬಾಕಿ ಉಳಿದಿರುವುದು ಕೇವಲ 10ವರ್ಷಗಳಷ್ಟೇ. ಈ ಹತ್ತು ವರ್ಷಗಳಲ್ಲಿ ನಾವೆಲ್ಲಾ ಜೊತೆಗೂಡಿ ಆ ಮನಸ್ಥಿತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕಾಗಿದೆ ಎಂದರು.

ಏನಿದು ಹಿಂದೂ ಬೆಳವಣಿಗೆ ದರ ವಿವಾದ?

ಪಂಚ ವಾರ್ಷಿಕ ಯೋಜನೆಗಳು ಅನುಷ್ಟಾನಗೊಳ್ಳುತ್ತಿದ್ದ 1950-1980ರ ಅವಧಿಯಲ್ಲಿ ವಾರ್ಷಿಕ ಬೆಳವಣಿಗೆ ದರ ಶೇ. 3.5ರ ಮಿತಿಯಲ್ಲೇ ಇತ್ತು. ಕೆಲವೊಮ್ಮೆ ಅಪವಾದಕ್ಕೊ ಎನ್ನುವಂತೆ ಶೇ.4ಕ್ಕೆ ಏರಿಕೆ ಆಗಿದ್ದೂ ಇದೆ. ಇದೇ ಅವಧಿಯಲ್ಲಿ ತಲಾ ಆದಾಯದ ಬೆಳವಣಿಗೆ ದರ ಶೇ. 1.3ಕ್ಕೆ ಸೀಮಿತಗೊಂಡಿತ್ತು. 1978ರಲ್ಲಿ ಈ ಆರ್ಥಿಕ ಹಿಂಜರಿತವನ್ನು ಯೋಜನಾ ಆಯೋಗದ ಸದಸ್ಯರಾಗಿದ್ದ ಆರ್ಥಿಕ ತಜ್ಞರಾಗಿದ್ದ ರಾಜಕೃಷ್ಣ 'ಹಿಂದೂ ಬೆಳವಣಿಗೆ ದರ' ಎಂದು ನಿರಾಸೆಯಿಂದ ಹಾಗೂ ತಮಾಷೆಯ ರೀತಿಯಲ್ಲಿ ಕರೆದಿದ್ದರು. ಬಡತನ ನಿವಾರಣೆಗೆ ಬೆಳವಣಿಗೆ ದರ ಹೆಚ್ಚಲೇಬೇಕೆಂದು ವಾದಿಸುತ್ತಿದ್ದ ಅವರು, ಹಿಂದೂ ಬೆಳವಣಿಗೆ ದರದ ಪರಿಕಲ್ಪನೆ ಹರಿಬಿಟಿದ್ದು, ವಿವಾದಕ್ಕೆ ದಾರಿಯಾಗಿತ್ತು.

ಹೆಚ್ಚು ಆರ್ಥಿಕ ಅಭಿವೃದ್ಧಿ-ಕಡಿಮೆ ಹಣದುಬ್ಬರ

ಭಾರತ ಹೆಚ್ಚು ಆರ್ಥಿಕ ಅಭಿವೃದ್ಧಿ-ಕಡಿಮೆ ಹಣದುಬ್ಬರವನ್ನು ಕಾಣುತ್ತಿದೆ. ಈ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ದೇಶದ ಶೇ. 8.2 ರಷ್ಟು ಬೆಳವಣಿಗೆ ಜಾಗತಿಕ ಆರ್ಥಿಕತೆಯಲ್ಲಿ ಭಾರತ ನಿರಂತರ ಪ್ರಗತಿ ಸಾಧಿಸುತ್ತಿದೆ ಎಂಬುದನ್ನು ತೋರಿಸುತ್ತಿದೆ ಎಂದರು.

ಇಡೀ ಪ್ರಪಂಚವೇ ಆರ್ಥಿಕ ಸಂಕಷ್ಟ ಎದುಸುತ್ತಿದ್ದಾಗ ಭಾರತ ಕೂಡ ಕೆಲವೊಮ್ಮೆ ಆರ್ಥಿಕ ಸಂಕಷ್ಟವನ್ನೂ ಎದುರಿಸಿತ್ತು. ಆರ್ಥಿಕ ಬಿಕ್ಕಟ್ಟು, ಸಾಂಕ್ರಮಿಕ ರೋಗ, ತಾಂತ್ರಿಕ ದೋಷಗಳು, ಯುದ್ಧ ಭೀತಿ ಹೀಗೆ ಹಲವು ಸವಾಲುಗಳನ್ನು ಪ್ರಪಂಚವೇ ಎದುರಿಸುವಂತಾಗಿತ್ತು. ಭಾರತದ ಮೇಲೂ ಇದರ ಪರಿಣಾಮ ಬೀರಿರುವುದು ಸುಳ್ಳಲ್ಲ. ಆದರೂ ಭಾರತ ಸಂಪೂರ್ಣ ಆತ್ಮವಿಶ್ವಾಸದ ಮೂಲಕ ಆ ಎಲ್ಲಾ ಸಮಸ್ಯೆಗಳನ್ನು ಮೆಟ್ಟಿ ನಿಂತಿತು ಎಂದು ತಿಳಿಸಿದರು.

Read More
Next Story