ಸಿಡ್ನಿ ಬೊಂಡಿ ಬೀಚ್ ಶೂಟೌಟ್: ಅಪ್ಪ-ಮಗನಿಂದಲೇ ಭೀಕರ ಕೃತ್ಯ, ದಾಳಿಕೋರರು ಪಾಕಿಸ್ತಾನಿಯರು

ಸಿಬಿಎಸ್ ನ್ಯೂಸ್ (ವರದಿಯ ಪ್ರಕಾರ, ದಾಳಿಯಲ್ಲಿ ಭಾಗಿಯಾಗಿದ್ದ 24 ವರ್ಷದ ನವೀದ್ ಅಕ್ರಮ್ ಪಾಕಿಸ್ತಾನದ ಪ್ರಜೆ ಎಂದು ಅಮೆರಿಕದ ಗುಪ್ತಚರ ಅಧಿಕಾರಿಗಳು ಖಚಿತಪಡಿಸಿದ್ದಾರೆ.

Update: 2025-12-15 10:29 GMT
Click the Play button to listen to article

ಆಸ್ಟ್ರೇಲಿಯಾದ ಪ್ರಸಿದ್ಧ ಪ್ರವಾಸಿ ತಾಣವಾದ ಸಿಡ್ನಿಯ ಬೊಂಡಿ ಬೀಚ್‌ನಲ್ಲಿ ಭಾನುವಾರ (ಡಿಸೆಂಬರ್ 15) ನಡೆದ ಭೀಕರ ಗುಂಡಿನ ದಾಳಿಯಲ್ಲಿ 16 ಜನರನ್ನು ಬಲಿಪಡೆದ ಘಟನೆಯ ಹಿಂದಿನ ಕರಾಳ ಸತ್ಯ ಬಯಲಾಗಿದೆ. ಈ ಪೈಶಾಚಿಕ ಕೃತ್ಯ ಎಸಗಿದ ಇಬ್ಬರು ದುಷ್ಕರ್ಮಿಗಳು ಅಪ್ಪ ಮತ್ತು ಮಗ ಎಂದು ಗುರುತಿಸಲಾಗಿದ್ದು, ಅವರಲ್ಲಿ ಒಬ್ಬ ಪಾಕಿಸ್ತಾನದ ಪ್ರಜೆ ಎಂದು ತಿಳಿದುಬಂದಿದೆ.

ಸಿಬಿಎಸ್ ನ್ಯೂಸ್ (CBS News) ವರದಿಯ ಪ್ರಕಾರ, ದಾಳಿಯಲ್ಲಿ ಭಾಗಿಯಾಗಿದ್ದ 24 ವರ್ಷದ ನವೀದ್ ಅಕ್ರಮ್ ಪಾಕಿಸ್ತಾನದ ಪ್ರಜೆ ಎಂದು ಅಮೆರಿಕದ ಗುಪ್ತಚರ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರೋಪಿ

ನ್ಯೂ ಸೌತ್ ವೇಲ್ಸ್ ಪೊಲೀಸ್ ಕಮಿಷನರ್ ಮಲ್ ಲ್ಯಾನ್‌ಯಾನ್ ಅವರು ನೀಡಿರುವ ಮಾಹಿತಿಯಂತೆ, ಗುಂಡಿನ ಚಕಮಕಿಯಲ್ಲಿ 50 ವರ್ಷದ ತಂದೆ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾರೆ. ಗಾಯಗೊಂಡಿರುವ ಮಗ ನವೀದ್ ಅಕ್ರಮ್ ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತನ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡುವ ಸಾಧ್ಯತೆಯಿದೆ. ಪೊಲೀಸರು ಮೂರನೇ ಶಂಕಿತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂಬ ವದಂತಿಗಳಿದ್ದವು, ಆದರೆ ಕಮಿಷನರ್ ಲ್ಯಾನ್‌ಯಾನ್ ಅವರು, "ನಾವು ಬೇರೆ ಯಾವುದೇ ಆರೋಪಿಗಾಗಿ ಹುಡುಕುತ್ತಿಲ್ಲ," ಎಂದು ಸ್ಪಷ್ಟಪಡಿಸಿದ್ದಾರೆ.

ತಂದೆ ಲೈಸೆನ್ಸ್ಡ್ ಗನ್ ಹೊಂದಿದ್ದ!

ದಾಳಿ ನಡೆಸಿದ ತಂದೆಯ ಹೆಸರನ್ನು ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲವಾದರೂ, ಆತ ಪರವಾನಗಿ ಪಡೆದ ಬಂದೂಕು ಹೊಂದಿದ್ದ ಎಂದು ಗುರುತಿಸಲಾಗಿದೆ. ಕಳೆದ 10 ವರ್ಷಗಳಿಂದ ಆತ ಗನ್ ಲೈಸೆನ್ಸ್ ಹೊಂದಿದ್ದು, 'ಗನ್ ಕ್ಲಬ್' ಸದಸ್ಯನಾಗಿದ್ದ. ಘಟನಾ ಸ್ಥಳದಿಂದ ಆತನಿಗೆ ಸೇರಿದ ಆರು ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಷ್ಟೇ ಅಲ್ಲದೆ, ಶಂಕಿತರ ವಾಹನವೊಂದರಲ್ಲಿ ಸುಧಾರಿತ ಸ್ಫೋಟಕ ಸಾಧನಗಳು ಕೂಡ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಯಹೂದಿಗಳೇ ಟಾರ್ಗೆಟ್?

ಭಾನುವಾರ ಬೊಂಡಿ ಬೀಚ್‌ನಲ್ಲಿ ಯಹೂದಿಗಳ ಹಬ್ಬವಾದ 'ಹನುಕ್ಕಾ' ದ ಮೊದಲ ದಿನದ ಆಚರಣೆಗಾಗಿ 1,000ಕ್ಕೂ ಹೆಚ್ಚು ಜನರು ಸೇರಿದ್ದರು. ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು, "ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿಯೇ ಯಹೂದಿ ಸಮುದಾಯವನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಿದ್ದಾರೆ," ಎಂದು ಹೇಳಿದ್ದಾರೆ. ಈ ದಾಳಿಯಲ್ಲಿ 16 ಮಂದಿ ಸಾವನ್ನಪ್ಪಿದ್ದು, ಮೂವರು ಮಕ್ಕಳು ಮತ್ತು ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಕನಿಷ್ಠ 40 ಜನರು ಗಾಯಗೊಂಡಿದ್ದಾರೆ.

ಹಣ್ಣು ಮಾರುವವನ ಸಾಹಸಕ್ಕೆ ಟ್ರಂಪ್ ಮೆಚ್ಚುಗೆ

ಈ ಕರಾಳ ಘಟನೆಯ ನಡುವೆಯೂ ಒಬ್ಬ ಹಣ್ಣು ಮಾರುವವನ ಸಾಹಸ ಬೆಳಕಿಗೆ ಬಂದಿದೆ. 43 ವರ್ಷದ ಅಹ್ಮದ್ ಅಲ್ ಅಹ್ಮದ್ ಎಂಬುವವರು ದಾಳಿಕೋರನೊಬ್ಬನನ್ನು ಹಿಂಬದಿಯಿಂದ ಅಟ್ಟಿಸಿಕೊಂಡು ಹೋಗಿ, ಆತನನ್ನು ನೆಲಕ್ಕೆ ಕೆಡವಿ, ಆತನಲ್ಲಿದ್ದ ಬಂದೂಕನ್ನು ಕಸಿದುಕೊಂಡಿದ್ದಾರೆ. ಈ ಸಾಹಸದ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶ್ವೇತಭವನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, "ಅಹ್ಮದ್ ಅವರ ಸಮಯಪ್ರಜ್ಞೆ ಮತ್ತು ಧೈರ್ಯ ಅನೇಕರ ಪ್ರಾಣ ಉಳಿಸಿದೆ," ಎಂದು ಶ್ಲಾಘಿಸಿದ್ದಾರೆ. 

Tags:    

Similar News