ಗೋವಾ ನೈಟ್‌ ಕ್ಲಬ್‌ ದುರಂತ |ಮಾಲೀಕರು ಬಂಧನದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದು ಹೇಗೆ?
x

ಗೋವಾ ಅಗ್ನಿ ದುರಂತ 

ಗೋವಾ ನೈಟ್‌ ಕ್ಲಬ್‌ ದುರಂತ |ಮಾಲೀಕರು ಬಂಧನದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದು ಹೇಗೆ?

ಗೋವಾದ ಆರ್ಪೋರಾದಲ್ಲಿರುವ ತಮ್ಮ ನೈಟ್‌ಕ್ಲಬ್‌ನಲ್ಲಿ ಬೆಂಕಿ ಅವಘಡ ಸಂಭವಿಸಿ ಸಾವು-ನೋವು ವರದಿಯಾಗುತ್ತಿದ್ದಂತೆ ಕ್ಲಬ್‌ ಮಾಲೀಕರಾದ ಲೂತ್ರಾ ಬ್ರದರ್ಸ್‌ ಅವರು ದೆಹಲಿಯ ಮಾಡೆಲ್ ಟೌನ್‌ನಲ್ಲಿರುವ ತಮ್ಮ ಕಚೇರಿಗೆ ಕರೆ ಮಾಡಿ ಥೈಲ್ಯಾಂಡ್‌ಗೆ ವಿಮಾನದ ಟಿಕೆಟ್‌ ಕಾಯ್ದಿರಿಸುವಂತೆ ಸಿಬ್ಬಂದಿಗೆ ಸೂಚಿಸಿದ್ದರು.


Click the Play button to hear this message in audio format

ಗೋವಾದ ಜನಪ್ರಿಯ ನೈಟ್‌ ಕ್ಲಬ್‌ 'ಬಿರ್ಚ್ ಬೈ ರೋಮಿಯೋ ಲೇನ್'ನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 25 ಜನರು ಮೃತಪಟ್ಟ ಪ್ರಕರಣದ ತನಿಖೆ ಮುಂದುವರಿದಿದೆ. ಕ್ಲಬ್‌ ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಮತ್ತು ಅಜಯ್ ಗುಪ್ತಾ ಅವರು ಬಂಧನದಿಂದ ತಪ್ಪಿಸಿಕೊಳ್ಳಲು ಏನೆಲ್ಲಾ ಕಸರತ್ತು ನಡೆಸಿದರೆಂಬ ಸಂಗತಿ ಈಗ ಬಯಲಾಗಿದೆ.

ಲೂತ್ರಾ ಸಹೋದರರು ಥೈಲ್ಯಾಂಡ್‌ಗೆ ಪರಾರಿ

ಕ್ಲಬ್‌ನ ಮಾಲೀಕರಾದ ಲೂತ್ರಾ ಬ್ರದರ್ಸ್‌ ಗೋವಾದ ಆರ್ಪೋರಾದಲ್ಲಿರುವ ತಮ್ಮ ನೈಟ್‌ಕ್ಲಬ್‌ನಲ್ಲಿ ಬೆಂಕಿ ಅವಘಡ ಸಂಭವಿಸಿ ಸಾವು-ನೋವಿನ ಬಗ್ಗೆ ತಿಳಿಯುತ್ತಿದ್ದಂತೆ ದೆಹಲಿಯ ಮಾಡೆಲ್ ಟೌನ್‌ನಲ್ಲಿರುವ ತಮ್ಮ ಕಚೇರಿಗೆ ಕರೆ ಮಾಡಿ ಥೈಲ್ಯಾಂಡ್‌ಗೆ ವಿಮಾನ ಟಿಕೆಟ್‌ ಕಾಯ್ದಿರಿಸುವಂತೆ ಸಿಬ್ಬಂದಿಗೆ ಸೂಚಿಸಿದ್ದಾರೆ.

ಘಟನೆ ನಡೆದ ಸಂದರ್ಭದಲ್ಲಿ ಅವರು ಒಂದು ವಿವಾಹ ಸಮಾರಂಭದಲ್ಲಿ ಭಾಗಿಯಾಗಿದ್ದರು. ಅವರ ಸಹಾಯಕ ಭರತ್ ಕೋಹ್ಲಿಗೆ ತಮ್ಮ ಮುಖರ್ಜಿ ನಗರದ ನಿವಾಸಕ್ಕೆ ಕೆಲ ದಾಖಲೆಗಳನ್ನು ತಲುಪಿಸುವಂತೆ ಸೂಚಿಸಿದ್ದರು. ತಕ್ಷಣವೇ ಮದುವೆ ಸ್ಥಳದಿಂದ ಮನೆಗೆ ತೆರಳಿದ ಲೂತ್ರಾ ಸಹೋದರರು, ಕೆಲವೇ ಗಂಟೆಗಳಲ್ಲಿ ಇಂಡಿಗೋ ವಿಮಾನದಲ್ಲಿ ಫುಕೆಟ್‌ಗೆ ಹಾರಿದ್ದಾರೆ. ಅವರಲ್ಲಿ ಒಬ್ಬರಿಗೆ ದೀರ್ಘಾವಧಿಯ ಯುಕೆ ವೀಸಾ ಇದೆ ಎನ್ನಲಾಗಿದೆ. ಭಾರತದ ಕೋರಿಕೆಯ ಮೇರೆಗೆ ಇತ್ತೀಚೆಗೆ ಥೈಲ್ಯಾಂಡ್‌ನಲ್ಲಿ ಅವರನ್ನು ಬಂಧಿಸಲಾಗಿದೆ.

ಅಜಯ್ ಗುಪ್ತಾ ಆಸ್ಪತ್ರೆಯಲ್ಲಿ ಅಡಗಿಕೊಳ್ಳಲು ಯತ್ನ

ಮತ್ತೊಬ್ಬ ಪಾಲುದಾರ ಅಜಯ್ ಗುಪ್ತಾ, ಘಟನೆ ನಡೆದಾಗ ಗೋವಾದಲ್ಲಿಯೇ ಇದ್ದರು. ಕ್ಲಬ್ ವ್ಯವಸ್ಥಾಪಕ ಪ್ರಿಯಾಂಶು (ಈಗ ಬಂಧನದಲ್ಲಿದ್ದಾರೆ) ಕರೆ ಮಾಡಿ ಮಾಹಿತಿ ನೀಡಿದಾಗ ಎಚ್ಚರಗೊಂಡ ಗುಪ್ತಾ, ತಕ್ಷಣ ವಿಮಾನ ನಿಲ್ದಾಣಕ್ಕೆ ಹೋಗಿ ದೆಹಲಿ ವಿಮಾನ ಹತ್ತಿ ದೆಹಲಿಗೆ ತಲುಪಿದ್ದಾರೆ.

ಬಳಿಕ ಗುರುಗ್ರಾಮ್‌ನಲ್ಲಿರುವ ತಮ್ಮ ನಿವಾಸಕ್ಕೆ ಹೋಗಿ ಬಳಿಕ ತಮ್ಮ ಚಾಲಕನೊಂದಿಗೆ ಟೊಯೋಟಾ ಇನ್ನೋವಾದಲ್ಲಿ ಪ್ರಯಾಣ ಬೆಳೆದ್ದಾರೆ. ಬಂಧನದಿಂದ ತಪ್ಪಿಸಿಕೊಳ್ಳಲು ಮೊಬೈಲ್ ಸ್ವಿಚ್ ಆಫ್ ಮಾಡಿದ್ದರು. ಆದರೆ, ಚಾಲಕನ ಮೊಬೈಲ್ ಟ್ರ್ಯಾಕ್ ಮಾಡಿ ಪೊಲೀಸರು ದೆಹಲಿಯ ಲಜಪತ್ ನಗರದಲ್ಲಿರುವ ಇನ್‌ಸ್ಟಿಟ್ಯೂಟ್ ಆಫ್ ಬ್ರೈನ್ ಅಂಡ್ ಸ್ಪೈನ್ ಆಸ್ಪತ್ರೆಯಲ್ಲಿ ಪತ್ತೆ ಹಚ್ಚಿದ್ದಾರೆ.

ಆಸ್ಪತ್ರೆಯ ವ್ಯವಸ್ಥಾಪಕರೊಂದಿಗೆ ಸಂಪರ್ಕ ಹೊಂದಿದ್ದ ಗುಪ್ತಾ, ಅನಾರೋಗ್ಯದ ನೆಪವೊಡ್ಡಿ ಬಂಧನದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಆದರೆ, ಪೊಲೀಸರು ಅವರ ವಾದವನ್ನು ತಳ್ಳಿಹಾಕಿ ಅವರನ್ನು ವಶಕ್ಕೆ ತೆಗೆದುಕೊಂಡರು. ತನಿಖೆಯ ಸಮಯದಲ್ಲಿ, ಗುಪ್ತಾ ಅವರು ನಿಷ್ಕ್ರಿಯ ಪಾಲುದಾರ (silent partner) ಎಂದು ಹೇಳಿಕೊಂಡಿದ್ದರೂ ಕ್ಲಬ್‌ ಕಾರ್ಯಚಟುವಟಿಕೆಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದರು ಎಂದು ತಿಳಿದುಬಂದಿದೆ.

ಕ್ಲಬ್‌ನಲ್ಲಿ ಭದ್ರತಾ ನಿಯಮಗಳ ಉಲ್ಲಂಘನೆ

ದುರಂತಕ್ಕೆ ಪ್ರಮುಖ ಕಾರಣ ಬಹು ಸುರಕ್ಷತಾ ಲೋಪಗಳು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಕ್ಲಬ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಗ್ನಿಶಾಮಕಗಳು ಮತ್ತು ಅಲಾರಾಂ ವ್ಯವಸ್ಥೆಗಳ ಕೊರತೆ ಇತ್ತು. ಅಗ್ನಿಶಾಮಕ ವಾಹನಗಳು ಬರಲು ದಾರಿಯು ತುಂಬಾ ಕಿರಿದಾಗಿತ್ತು. ಅತಿ ಮುಖ್ಯವಾಗಿ, ಅಲ್ಲಿ ಯಾವುದೇ ತುರ್ತು ನಿರ್ಗಮನ ದ್ವಾರ ಇರಲಿಲ್ಲ. ಎಫ್‌ಐಆರ್ ಪ್ರಕಾರ, ಕ್ಲಬ್ ಅಗತ್ಯ ಅನುಮತಿ ಮತ್ತು ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸುತ್ತಿತ್ತು. ಅನೇಕ ಬಾರಿ ಎಚ್ಚರಿಕೆ ನೀಡಿದ್ದರೂ, ಕ್ಲಬ್‌ ಮಾಲೀಕರು ಸುರಕ್ಷತಾ ನ್ಯೂನತೆಗಳನ್ನು ಸರಿಪಡಿಸಲು ವಿಫಲರಾಗಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.

ಈ ಹಿಂದೆ ಮಾಜಿ ಐಪಿಎಸ್ ಅಧಿಕಾರಿಯ ಮಧ್ಯಸ್ಥಿಕೆಯಿಂದ 'ಬಿರ್ಚ್ ಬೈ ರೋಮಿಯೋ ಲೇನ್' ವಿರುದ್ಧದ ಪ್ರಕರಣವೊಂದು ಮುಚ್ಚಲ್ಪಟ್ಟಿತ್ತು ಎನ್ನಲಾಗಿದೆ. ಇದರಿಂದ ಮಾಲೀಕರು ಸುರಕ್ಷತಾ ನಿಯಮಗಳನ್ನು ನಿರ್ಲಕ್ಷಿಸಲು ಮತ್ತಷ್ಟು ಪ್ರೋತ್ಸಾಹಗೊಂಡಿದ್ದರು ಎಂಬ ಶಂಕೆ ವ್ಯಕ್ತವಾಗಿದೆ.

Read More
Next Story