ಎಚ್‌-1ಬಿ ವೀಸಾ ಶುಲ್ಕ 1 ಲಕ್ಷ ಡಾಲರ್‌ : ಟ್ರಂಪ್ ಆಡಳಿತದ ವಿರುದ್ಧ ತಿರುಗಿಬಿದ್ದ ಅಮೆರಿಕದ 19 ರಾಜ್ಯಗಳು

ಶುಕ್ರವಾರ (ಡಿಸೆಂಬರ್ 13) ನ್ಯೂಯಾರ್ಕ್ ಅಟಾರ್ನಿ ಜನರಲ್ ಲೆಟಿಟಿಯಾ ಜೇಮ್ಸ್ ಅವರ ನೇತೃತ್ವದಲ್ಲಿ, ಇತರ 18 ರಾಜ್ಯಗಳ ಅಟಾರ್ನಿ ಜನರಲ್‌ಗಳು ಮ್ಯಾಸಚೂಸೆಟ್ಸ್‌ನ ಯುಎಸ್ ಡಿಸ್ಟ್ರಿಕ್ಟ್ ಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ.

Update: 2025-12-13 10:06 GMT
Click the Play button to listen to article

ಹೊಸ ಎಚ್‌-1ಬಿ  ವೀಸಾ ಅರ್ಜಿಗಳಿಗೆ ಬರೋಬ್ಬರಿ 1 ಲಕ್ಷ ಡಾಲರ್ (ಸುಮಾರು 85 ಲಕ್ಷ ರೂ.) ಶುಲ್ಕ ವಿಧಿಸುವ ಟ್ರಂಪ್ ಆಡಳಿತದ ವಿವಾದಾತ್ಮಕ ನಿರ್ಧಾರದ ವಿರುದ್ಧ ಅಮೆರಿಕದ 19 ರಾಜ್ಯಗಳು ಸಮರ ಸಾರಿವೆ. ಈ ನಡೆ ‘ಕಾನೂನುಬಾಹಿರ’ ಮತ್ತು ಆರೋಗ್ಯ, ಶಿಕ್ಷಣ ಹಾಗೂ ತಂತ್ರಜ್ಞಾನದಂತಹ ಪ್ರಮುಖ ಕ್ಷೇತ್ರಗಳಿಗೆ ಮಾರಕವಾಗಲಿದೆ ಎಂದು ಆರೋಪಿಸಿ ಈ ರಾಜ್ಯಗಳು ನ್ಯಾಯಾಲಯದ ಮೆಟ್ಟಿಲೇರಿವೆ.

ಶುಕ್ರವಾರ (ಡಿಸೆಂಬರ್ 13) ನ್ಯೂಯಾರ್ಕ್ ಅಟಾರ್ನಿ ಜನರಲ್ ಲೆಟಿಟಿಯಾ ಜೇಮ್ಸ್ ಅವರ ನೇತೃತ್ವದಲ್ಲಿ, ಇತರ 18 ರಾಜ್ಯಗಳ ಅಟಾರ್ನಿ ಜನರಲ್‌ಗಳು ಮ್ಯಾಸಚೂಸೆಟ್ಸ್‌ನ ಯುಎಸ್ ಡಿಸ್ಟ್ರಿಕ್ಟ್ ಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ. ಯಾವುದೇ ಕಾನೂನುಬದ್ಧ ಅಧಿಕಾರ ಅಥವಾ ಸೂಕ್ತ ಪ್ರಕ್ರಿಯೆಗಳಿಲ್ಲದೆ ಏಕಾಏಕಿ ವೀಸಾ ಶುಲ್ಕದಲ್ಲಿ ಭಾರಿ ಏರಿಕೆ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಎಚ್‌-1ಬಿ ವೀಸಾ ಕಾರ್ಯಕ್ರಮವು ಅಮೆರಿಕದಲ್ಲಿ ತಾತ್ಕಾಲಿಕವಾಗಿ ಕೆಲಸ ಮಾಡಲು ವಿದೇಶಿ ಕೌಶಲ್ಯಯುತ ವೃತ್ತಿಪರರಿಗೆ ಅವಕಾಶ ನೀಡುತ್ತದೆ ಮತ್ತು ಇದನ್ನು ಭಾರತೀಯರು ಅತಿ ಹೆಚ್ಚು ಬಳಸುತ್ತಾರೆ ಎಂಬುದು ಗಮನಾರ್ಹ.

ಈ ದುಬಾರಿ ಶುಲ್ಕವು ಸರ್ಕಾರಿ ಮತ್ತು ಲಾಭರಹಿತ (Non-profit) ಉದ್ಯೋಗದಾತರಿಗೆ ಎಚ್‌-1ಬಿ ವೀಸಾ ಕಾರ್ಯಕ್ರಮವನ್ನು ಅಪ್ರಸ್ತುತವಾಗಿಸುತ್ತದೆ. ಆರೋಗ್ಯ, ಶಿಕ್ಷಣ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅಗತ್ಯ ಸೇವೆಗಳನ್ನು ಒದಗಿಸಲು ಎಚ್‌-1ಬಿ ಉದ್ಯೋಗಿಗಳನ್ನೇ ಅವಲಂಬಿಸಿರುವ ಸಂಸ್ಥೆಗಳಿಗೆ ಇದು ಮರ್ಮಾಘಾತ ನೀಡಲಿದೆ ಎಂದು ರಾಜ್ಯಗಳು ವಾದಿಸಿವೆ.

ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಂಚಕಾರ

ಈ ಕುರಿತು ಹೇಳಿಕೆ ನೀಡಿರುವ ಅಟಾರ್ನಿ ಜನರಲ್ ಲೆಟಿಟಿಯಾ ಜೇಮ್ಸ್, "ಎಚ್‌-1ಬಿ ವೀಸಾಗಳು ಪ್ರತಿಭಾವಂತ ವೈದ್ಯರು, ನರ್ಸ್‌ಗಳು, ಶಿಕ್ಷಕರು ಮತ್ತು ಇತರ ನುರಿತ ಕೆಲಸಗಾರರಿಗೆ ನಮ್ಮ ಸಮುದಾಯಗಳ ಸೇವೆ ಮಾಡಲು ಅವಕಾಶ ನೀಡುತ್ತವೆ. ಈ ಯೋಜನೆ ಹಾಳು ಮಾಡಲು ಆಡಳಿತ ನಡೆಸುತ್ತಿರುವ ಕಾನೂನುಬಾಹಿರ ಪ್ರಯತ್ನವು ನ್ಯೂಯಾರ್ಕ್ ನಾಗರಿಕರಿಗೆ ಆರೋಗ್ಯ ಸೇವೆ ಪಡೆಯುವುದನ್ನು ಕಠಿಣವಾಗಿಸುತ್ತದೆ, ಮಕ್ಕಳ ಶಿಕ್ಷಣಕ್ಕೆ ಅಡ್ಡಿಪಡಿಸುತ್ತದೆ ಮತ್ತು ನಮ್ಮ ಆರ್ಥಿಕತೆಗೆ ಹಾನಿ ಉಂಟುಮಾಡುತ್ತದೆ. ವಲಸೆ ಸಮುದಾಯಗಳನ್ನು ಗುರಿಯಾಗಿಸಿಕೊಂಡು ನಡೆಸುತ್ತಿರುವ ಈ ಗೊಂದಲ ಮತ್ತು ಕ್ರೌರ್ಯವನ್ನು ತಡೆಯಲು ನಾನು ಹೋರಾಟ ಮುಂದುವರಿಸುತ್ತೇನೆ," ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಸತ್ತಿನ ಅನುಮೋದನೆ ಅಥವಾ ಅಗತ್ಯವಿರುವ ನಿಯಮ-ರಚನೆ ಪ್ರಕ್ರಿಯೆಯಿಲ್ಲದೆ ಈ ಶುಲ್ಕವನ್ನು ವಿಧಿಸಲಾಗಿದ್ದು, ಇದು ಆಡಳಿತಾತ್ಮಕ ಪ್ರಕ್ರಿಯೆ ಕಾಯಿದೆ ಹಾಗೂ ವಲಸೆ ಮತ್ತು ರಾಷ್ಟ್ರೀಯತೆ ಕಾಯಿದೆಯನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಈ ಅರ್ಜಿಯಲ್ಲಿ ನ್ಯೂಯಾರ್ಕ್ ಜೊತೆಗೆ ಕ್ಯಾಲಿಫೋರ್ನಿಯಾ, ಅರಿಜೋನಾ, ಕೊಲೊರಾಡೋ, ಕನೆಕ್ಟಿಕಟ್, ಇಲಿನಾಯ್ಸ್, ಮಿಚಿಗನ್ ಸೇರಿದಂತೆ ಪ್ರಮುಖ ರಾಜ್ಯಗಳು ಕೈಜೋಡಿಸಿವೆ.

ಗ್ರಾಮೀಣ ಭಾಗಗಳಿಗೆ ತೀವ್ರ ಹೊಡೆತ ಕಾರ್ಮಿಕರ ಕೊರತೆಯನ್ನು ನೀಗಿಸಲು ಎಚ್‌-1ಬಿ ಮೂಲಕ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ತಮ್ಮ ಸಾಮರ್ಥ್ಯವನ್ನು ಈ ಹೊಸ ಶುಲ್ಕವು ಕಸಿದುಕೊಳ್ಳುತ್ತದೆ ಎಂದು ರಾಜ್ಯಗಳ ಒಕ್ಕೂಟ ವಾದಿಸಿದೆ. ವಿಶೇಷವಾಗಿ ಗ್ರಾಮೀಣ ಮತ್ತು ಹಿಂದುಳಿದ ಸಮುದಾಯಗಳಿಗೆ ಇದರ ಬಿಸಿ ತೀವ್ರವಾಗಿ ತಟ್ಟಲಿದೆ. ನ್ಯೂಯಾರ್ಕ್‌ನಲ್ಲಿ ವಲಸಿಗರು ಆರೋಗ್ಯ ಕಾರ್ಯಪಡೆಯ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಪಾಲನ್ನು ಹೊಂದಿದ್ದಾರೆ. ಸಾರ್ವಜನಿಕ ವಿಶ್ವವಿದ್ಯಾಲಯಗಳು ಮತ್ತು ಆಸ್ಪತ್ರೆಗಳು ಎಚ್‌-1ಬಿ ವೀಸಾದಡಿ ಕೆಲಸ ಮಾಡುವ ವೃತ್ತಿಪರರ ಮೇಲೆ ಹೆಚ್ಚು ಅವಲಂಬಿತವಾಗಿವೆ.

ನ್ಯೂಯಾರ್ಕ್‌ನ 16 ಗ್ರಾಮೀಣ ಕೌಂಟಿಗಳಲ್ಲಿ ಪ್ರತಿ 10,000 ನಿವಾಸಿಗಳಿಗೆ ಕೇವಲ ನಾಲ್ವರು ಪ್ರಾಥಮಿಕ ಆರೈಕೆ ವೈದ್ಯರಿದ್ದಾರೆ. ಅಲ್ಲದೆ, 2030ರ ವೇಳೆಗೆ 40,000 ನರ್ಸ್‌ಗಳ ಕೊರತೆ ಎದುರಾಗುವ ಆತಂಕವಿದೆ. ಇಂತಹ ಸಮಯದಲ್ಲಿ ಎಚ್‌-1ಬಿ ವೀಸಾ ಹೊಂದಿರುವವರ ಸಂಖ್ಯೆಯನ್ನು ಕಡಿಮೆ ಮಾಡುವುದು ಈ ಬಿಕ್ಕಟ್ಟನ್ನು ಇನ್ನಷ್ಟು ಉಲ್ಬಣಗೊಳಿಸಲಿದೆ ಎಂದು ದಾವೆಯಲ್ಲಿ ವಿವರಿಸಲಾಗಿದೆ.

ಭವಿಷ್ಯ ಕರಾಳ

ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್ ಅಂದಾಜಿನ ಪ್ರಕಾರ, 2036ರ ವೇಳೆಗೆ ದೇಶದಲ್ಲಿ 86,000 ವೈದ್ಯರ ಕೊರತೆ ಉಂಟಾಗಲಿದೆ. ಈ ಅಂತರವನ್ನು ತುಂಬಲು ಎಚ್‌-1ಬಿ ಕೆಲಸಗಾರರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಅಮೆರಿಕದಾದ್ಯಂತ ಕನಿಷ್ಠ 930 ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಎಚ್‌-1ಬಿ ವೀಸಾದಡಿ ಸಿಬ್ಬಂದಿಯನ್ನು ನೇಮಿಸಿಕೊಂಡಿವೆ.

ಕ್ಯಾಲಿಫೋರ್ನಿಯಾ ಅಟಾರ್ನಿ ಜನರಲ್ ರಾಬ್ ಬೊಂಟಾ ಅವರು, "1 ಲಕ್ಷ ಡಾಲರ್ ಶುಲ್ಕವು ಸಾರ್ವಜನಿಕ ಉದ್ಯೋಗದಾತರ ಮೇಲೆ ಅನಗತ್ಯ ಮತ್ತು ಕಾನೂನುಬಾಹಿರ ಆರ್ಥಿಕ ಹೊರೆಯನ್ನು ಸೃಷ್ಟಿಸುತ್ತದೆ. ಟ್ರಂಪ್ ಆಡಳಿತವು ತಮಗೆ ಇಷ್ಟಬಂದಂತೆ ವೆಚ್ಚವನ್ನು ಹೆಚ್ಚಿಸಬಹುದು ಎಂದು ಭಾವಿಸಿದೆ, ಆದರೆ ಕಾನೂನು ಅದಕ್ಕೆ ಒಪ್ಪುವುದಿಲ್ಲ," ಎಂದು ಎಚ್ಚರಿಸಿದ್ದಾರೆ.

Tags:    

Similar News